ಮಲೆನಾಡಿನ ಭಯಾನಕ ಹಕ್ಕಿ “ಜೇಂವ್‌ ಹಕ್ಕಿ”

ಅಪಶಕುನದ ಹಕ್ಕಿ ಎಂದು ಕರೆಯಲ್ಪಡುವ “ಜೇಂವ್‌ ಹಕ್ಕಿ” ಅದರ ಕರ್ಕಶ ಧ್ವನಿಗೆ ಹೆಸರು ವಾಸಿ. ರಾತ್ರಿ ವೇಳೆ ಮನೆಯ ಬಳಿ ಬಂದು ವಿಚಿತ್ರವಾಗಿ ಕಿರುಚಿದಂತೆ ಕೂಗಿದರೆ ಅದು ಸಾವು, ದುರಾದೃಷ್ಟ ಅಥವಾ ಆಪತ್ತಿನ ಸಂಕೇತ ಎಂದು ನಮ್ಮ ಭಾಗದಲ್ಲಿ ನಂಬುತ್ತಾರೆ. ಲೇಖನ್‌ ನಾಗರಾಜ್‌ ಅವರ ಈ ಲೇಖನವನ್ನು ಪೂರ್ತಿಯಾಗಿ ಓದಿ…

ಮಲೆನಾಡು ಎಂದರೆ ಹಸಿರಿನ ಗಿಡ ಮರ, ಅಡಿಕೆ, ಬಾಳೆ, ತೆಂಗು ತೋಟಗಳ ಸುಂದರ ನೋಟ ಎಂದು ಎಲ್ಲರಿಗೂ ಗೊತ್ತಿದೆ. ಇಂತಹ ಪ್ರಕೃತಿಯ ಮಡಿಲಲ್ಲಿ ಕಣ್ಣಿಗೆ ಕಂಡಿದ್ದು, ಕಾಣಿಸದ್ದು, ಕಂಡರೂ ಅರ್ಥವಾಗದ್ದು, ಅರ್ಥವಾದರೂ ಗುರುತಿಸಲಾಗದ, ಅಳಿದು ಉಳಿದಿರುವ ಜೀವ ಸಂಕುಲಗಳು ಅಪಾರ. ನನ್ನ ಹಿಂದಿನ ಒಂದು ಬರಹದಲ್ಲಿ ಗೂಬೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇನೆ. ಅದರ ಬಗ್ಗೆ ಇರುವ ನಂಬಿಕೆ, ಅಪನಂಬಿಕೆಗಳ ಬಗ್ಗೆ ತಿಳಿಸಿದ್ದೇನೆ. ಇಂದು ಅಂತಹದೇ ಒಂದು ಪಕ್ಷಿ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ.
ಆ ಪಕ್ಷಿ ಹೆಸರು “ಜೇಂವ್‌ ಹಕ್ಕಿ”  ನಮ್ಮ ಭಾಗದಲ್ಲಿ ಇದನ್ನೂ ಅಪಶಕುನದ ಹಕ್ಕಿ ಎಂದು ಕರೆಯುತ್ತಾರೆ. ಕಾರಣ ಅದರ ಕರ್ಕಶ ಧ್ವನಿ. ಬಾಯಾರಿಕೆಯಾದಾಗ ಗಂಟಲು ಒಣಗಿ ಕೂಗುವಂತೆ ಇರುತ್ತದೆ ಈ ಪಕ್ಷಿಯ ಧ್ವನಿ.  “ಟಿಟ್ಯೋಂವ್‌… ಟಿಟ್ಯೋಂವ್‌ ಅಥವಾ ಕ್ಯೂಯೋಂವ್‌ ಕ್ಯೂಯೋಂವ್‌” ಎಂದು ಕೇಳುವ ಶಬ್ಧ, ಜನರಲ್ಲಿ ಭಯಾನಕತೆಯನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ. ಇದು ಒಂದು ನಿಶಾಚರ ಜೀವಿ. ನಮ್ಮ ಜನಪದ ನಂಬಿಕೆಗಳು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾತ್ರಿ ವೇಳೆ ವಿಚಿತ್ರವಾಗಿ ಕೂಗುವ ಕೆಲವು ಪಕ್ಷಿಗಳನ್ನು ಅಪಶಕುನದ ಪಕ್ಷಿ ಅಥವಾ ಅಮಂಗಳದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಆದರೆ, ವಿಜ್ಞಾನ ಮತ್ತು ಪ್ರಕೃತಿ ನಿಯಮದ ಪ್ರಕಾರ ಇದಕ್ಕೆ ಸಂಪೂರ್ಣವಾಗಿ ಬೇರೆಯದೇ ಆದ ಕಾರಣಗಳಿರುತ್ತದೆ. ಸಾಮಾನ್ಯವಾಗಿ ಇಂತಹ ಅಪನಂಬಿಕೆಗೆ ಒಳಗಾಗುವ ಪ್ರಮುಖ ಪಕ್ಷಿಗಳು ಅಂದರೆ.
ಗೂಬೆ:
ರಾತ್ರಿ ವೇಳೆ ಗೂಬೆ ಮನೆಯ ಬಳಿ ಬಂದು ವಿಚಿತ್ರವಾಗಿ ಪ್ರಲಾಪಿಸಿದಂತೆ ಅಥವಾ ಕಿರುಚಿದಂತೆ ಕೂಗಿದರೆ ಅದು ಸಾವು, ದುರಾದೃಷ್ಟ ಅಥವಾ ಆಪತ್ತಿನ ಸಂಕೇತ ಎಂದು ನಮ್ಮ ಭಾಗದಲ್ಲಿ ನಂಬುತ್ತಾರೆ. ಮನುಷ್ಯರು ಚೀರಿದಂತೆ ವಿಚಿತ್ರವಾಗಿ ಕೂಗುತ್ತಾ ಹಾರುತ್ತದೆ. ಇದನ್ನು ಕೇಳಿದರೆ ಏನೋ ಅನಾಹುತವಾಗುತ್ತದೆ ಎಂಬ ಭಯ ಕೆಲವರಲ್ಲಿದೆ.

ವೈಜ್ಞಾನಿಕ ಸತ್ಯ:

ಗೂಬೆಗಳು ನಿಶಾಚರ ಜೀವಿಗಳು. ಅವುಗಳ ವಿಚಿತ್ರ ಧ್ವನಿ (Screech) ತಮ್ಮ ಸಂಗಾತಿಯನ್ನು ಕರೆಯಲು, ತಮ್ಮ ಪ್ರದೇಶವನ್ನು ರಕ್ಷಿಸಿಕೊಳ್ಳಲು ಅಥವಾ ಬೇಟೆಯಾಡುವಾಗ ಇತರ ಗೂಬೆಗಳಿಗೆ ಸಂಕೇತ ನೀಡಲು ಬಳಸುವ ಸ್ವಾಭಾವಿಕ ಧ್ವನಿಯಷ್ಟೇ ಆಗಿದೆ. ಗೂಬೆಯನ್ನು ಪ್ರಕೃತಿಯ “ನೈಟ್ ವಾಚ್‌ಮನ್” (ಕಾವಲುಗಾರ) ಎನ್ನಲಾಗುತ್ತದೆ. ಇವು ನೆಲದ ಮೇಲೆ ಮೊಟ್ಟೆಯಿಡುತ್ತವೆ. ರಾತ್ರಿ ವೇಳೆ ಹಾವು, ಬೆಕ್ಕು ಅಥವಾ ಯಾವುದೇ ಪ್ರಾಣಿ ಸಂಚರಿಸಿದರೂ ಇವು ತಕ್ಷಣ ಎಚ್ಚೆತ್ತು ಇಡೀ ಕಾಡಿಗೆ ಅಥವಾ ಪರಿಸರಕ್ಕೆ ಎಚ್ಚರಿಕೆಯ ಕರೆ (Alarm Call) ನೀಡಲು ಜೋರಾಗಿ ಕೂಗುತ್ತವೆ.

ಕಾಗೆ (Crow) – ರಾತ್ರಿ ವೇಳೆ ಕೂಗುವುದು:
ಕಾಗೆಗಳು ಕೇವಲ ಹಗಲಿನಲ್ಲಿ ಮಾತ್ರ ಕೂಗುತ್ತವೆ. ಒಂದು ವೇಳೆ ಮಧ್ಯರಾತ್ರಿ ಕಾಗೆ ಅಕಾಲಿಕವಾಗಿ ಕೂಗಿದರೆ ಅದು ಕೆಟ್ಟ ಸುದ್ದಿಯ ಮುನ್ಸೂಚನೆ ಎಂಬ ನಂಬಿಕೆಯಿದೆ.
ವೈಜ್ಞಾನಿಕ ಸತ್ಯ:

ಹೆಚ್ಚುತ್ತಿರುವ ಕೃತಕ ಬೆಳಕಿನ ಮಾಲಿನ್ಯದಿಂದಾಗಿ (Light Pollution) ಅಥವಾ ಹಾವಿನಂತಹ ಪರಭಕ್ಷಕಗಳು ಗೂಡಿನ ಮೇಲೆ ದಾಳಿ ಮಾಡಿದಾಗ ಕಾಗೆಗಳು ದಿಕ್ಕು ತಪ್ಪಿ ರಾತ್ರಿಯೂ ಕೂಗುತ್ತವೆ.

ಇದೆ ಗುಂಪಿಗೆ ಸೇರಿದ ಪಕ್ಷಿ ಜೇಂವ್‌ ಹಕ್ಕಿ. ಹೊನ್ನಾವರ, ಕರವಾವಳಿ ಜಿಲ್ಲೆಯ ಭಾಗದಲ್ಲಿ ಇದನ್ನು “ದರಿದ್ರ ಹಕ್ಕಿ” ಎಂದು ಕರೆಯುತ್ತಾರೆ. ನಮ್ಮ ಭಾಗದ ದಟ್ಟವಾದ ಕಾಡುಗಳು, ತೋಟಗಳು ಮತ್ತು ಪಶ್ಚಿಮ ಘಟ್ಟಗಳ ಪರಿಸರದಲ್ಲಿ ಈ ಹಕ್ಕಿ ಅತಿ ಹೆಚ್ಚು ಕಂಡುಬರುತ್ತದೆ. ಉತ್ತರ ಕನ್ನಡದ ಗ್ರಾಮೀಣ ಜನಪದದಲ್ಲಿ ಈ ಪಕ್ಷಿಯ ಬಗ್ಗೆ ಇರುವ ನಿಜವಾದ ಹಿನ್ನೆಲೆ ಈ ಹಕ್ಕಿ ಕತ್ತಲಾಗುತ್ತಿದ್ದಂತೆ ಕಾಡಿನ ಮರಗಳ ಮೇಲೆ ಕುಳಿತು ದೀರ್ಘವಾಗಿ ಇಳಿಯುವ ಧ್ವನಿಯಲ್ಲಿ “ಜೇಂವ್… ಜೇಂವ್” ಎಂದು ಗಾಳಿಯಲ್ಲಿ ಏನೋ ಘರ್ಷಣೆಯಾದಂತೆ ಶಬ್ದ ಮಾಡುತ್ತದೆ.

ಮಲೆನಾಡಿನ ಹಿರಿಯರು ಇದರ ಧ್ವನಿಯನ್ನು ಕೇಳಿ, “ಜೇಂವ್ ಹಕ್ಕಿ ಬಂದು ಜೇಂಕಾರ ಮಾಡುತ್ತಿದೆ, ಏನೋ ಅನಾಹುತವಾಗುತ್ತದೆ” ಎಂದು ಭಯಪಡುತ್ತಿದ್ದರು. ಇದು ನಿಜವಾಗಿ ಯಾವ ಹಕ್ಕಿ? ಎಂದು ಕಂಡವರು ಮಾತ್ರ ಅತಿ ಕಡಿಮೆ ಜನ ಅಂತಾನೆ ಹೇಳಬಹುದು. ನಾನು ಚಿಕ್ಕವನಿದ್ದಾಗ ಈ ಹಕ್ಕಿ ಕೂಗಿದಾಗ ಅದಕ್ಕೆ ಕೆಟ್ಟದಾಗಿ ಬೈದಿದದ್ದುಂಟು. ದೋಸೆ ಸೌಟನ್ನು ಒಲೆಯಲ್ಲಿಟ್ಟರೆ ಅದು ಕೂಗುವುದಿಲ್ಲ ಎನ್ನುವ ನಂಬಿಕೆ ಕೂಡ ಇದೆ. ಅದು ಕೂಗಿದ ಕಡೆಯಿಂದ ಕೆಟ್ಟ ಸುದ್ದಿ ಬರುತ್ತದೆ ಎಂದು ಹೇಳುತ್ತಾರೆ. ಎಷ್ಟೋ ಸಲ ಹಕ್ಕಿ ಕೂಗು ಕಮ್ಮಿ ಆದಾಗ ಒಲೆಯಲ್ಲಿಟ್ಟ ದೋಸೆ ಸೌಟು ತೆಗೆಯಲು ಹೋಗಿ ಕೈ ಸುಟ್ಟುಕೊಂಡವ್ರು ಸಹ ಇದಾರೆ. ನಾನು ಈ ಸಲ  ಊರಿಗೆ ಹೋದಾಗ ಇದರ ಕೂಗನ್ನು ಕೇಳಿದೆ. ಆಗಲೂ ನಮ್ಮ ಕಡೆ ಈ ಹಕ್ಕಿಗೆ ಥೂ ಎಂದು ಬೈಯ್ಯುವುದು ನಿಂತಿರಲಿಲ್ಲ. ಆವತ್ತೆ ನಂಗೆ ಈ ಪಕ್ಷಿ  ಬಗ್ಗೆ ಮಾಹಿತಿ ತಿಳಿಯಬೇಕೆಂದು ಕುತೂಹಲ ಶುರುವಾಯಿತು. ಒಮ್ಮೆ ನಾನು ಸ್ಕೂಲಿಗೆ ಹೋಗುವಾಗ ನಮ್ಮ ಊರಿನ ಹಿರಿಯವರೊಬ್ಬರು ಹೇಳಿದ ಮಾತು ನೆನಪಿಗೆ ಬಂತು.

ನಾನು ಕಾಡಿಗೆ ಬೇಟೆಯಾಡಲು ಹೋದಾಗ ಜೇಂವ್‌ ಹಕ್ಕಿಯನ್ನು ಕತ್ತಲೆಯಲ್ಲಿ ಗುರುತಿಸಲಾಗದೆ ಯಾವುದೋ ಬೇರೆ ಪಕ್ಷಿ ಎಂದು ಭಾವಿಸಿ ಗುಂಡಿಟ್ಟು ಕೊಂದಿದ್ದಾಗಿ ಹೇಳಿದ್ದರು. ಕೂಡಲೇ ಅವರನ್ನು ಸಂಪರ್ಕಿಸಿದೆ. ಗೂಗಲ್‌ನಲ್ಲಿ ಆ ಪಕ್ಷಿಯ ಚಿತ್ರವನ್ನು ಸರ್ಚ್‌ ಮಾಡಿ ತೋರಿಸದೆ. ಆಗ ಅವ್ರು ಇದೆ “ಜೇಂವ್‌ ಹಕ್ಕಿ” ಎಂದು ನಂಗೆ ನಿಖರವಾಗಿ ಹೇಳಿದರು. ಆಮೇಲೆ ಅದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲು ಶುರು ಮಾಡಿದೆ. ಆಗ ವಿಜ್ಞಾನ ಮತ್ತು ಪಕ್ಷಿಶಾಸ್ತ್ರದ ಪ್ರಕಾರ ಉತ್ತರ ಕನ್ನಡದಲ್ಲಿ ಜೇಂವ್ ಹಕ್ಕಿ ಎಂದು ಕರೆಯುವುದು ಪ್ರಮುಖವಾಗಿ “ಕಪ್ಪೆಬಾಯಿ ಹಕ್ಕಿ” ಗೆ ಎಂದು ಗೊತ್ತಾಯಿತು. ಇದು ಗೂಬೆಯ ಪ್ರಭೇದಕ್ಕೆ ಸೇರಿದ ಒಂದು ಪಕ್ಷಿ. ಇದರ ಕೂಗು ರಾತ್ರಿಯ ಹೊತ್ತು ತುಂಬಾ ಭಯಾನಕವಾಗಿ, ದೀರ್ಘವಾಗಿ ಎಳೆದಂತೆ ಕೇಳಿಸುತ್ತದೆ. ಇದು ಹೊನ್ನಾವರ, ಜೋಯಿಡಾ, ಶಿರಸಿ, ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಅಪರೂಪದ ಪಕ್ಷಿ. ಇದರ ಬಾಯಿ ಕಪ್ಪೆಯಂತೆ ಅಗಲವಾಗಿರುತ್ತದೆ. ಇದು ರಾತ್ರಿ ವೇಳೆ ಒಣಗಿದ ಮರದ ಮೇಲೆ ಕುಳಿತುಕೊಂಡು ವಿಚಿತ್ರವಾದ ಕಟು ಧ್ವನಿಯಲ್ಲಿ ಕೂಗುತ್ತದೆ.
ಈ ಹಕ್ಕಿಗಳು ಹಗಲಿನಲ್ಲಿ ಎಲ್ಲಿಯೂ ಕಾಣಿಸದೆ, ಮನುಷ್ಯರ ಕಣ್ಣಿಗೆ ಬೀಳದೆ ಕೇವಲ ದಟ್ಟ ಕತ್ತಲಾದ ಮೇಲಷ್ಟೇ ಸಂಚರಿಸುತ್ತವೆ. ಇದರ ಮನುಷ್ಯರ ತರಹದ ಧ್ವನಿ ಕೆಲವು ಬಾರಿ ಸಣ್ಣ ಮಗು ಅತ್ತಂತೆ ಕೇಳಿಸುವುದರಿಂದ, ಹಳೆಯ ಕಾಲದಲ್ಲಿ ಕತ್ತಲೆಯಲ್ಲಿ ಸಂಚರಿಸುವ ಜನರಲ್ಲಿ ಇದು ಭೀತಿ ಹುಟ್ಟಿಸುತ್ತಿತ್ತು. ಹಾಗಾಗಿ ಇದನ್ನು ಸಾವು ಅಥವಾ ದುರಾದೃಷ್ಟದ ಸಂಕೇತ ಎಂದು ಕರೆಯಲಾರಂಭಿಸಿದರು. ನಿಜಾ ಹೇಳಬೇಕೆಂದರೆ ಈ ಹಕ್ಕಿಗಳು ಅಡಿಕೆ ತೋಟಗಳು ಹಾಗೂ ಗದ್ದೆಗಳಿಗೆ ಆಶೀರ್ವಾದವಿದ್ದಂತೆ. ಇವು ರಾತ್ರಿ ವೇಳೆ ತೋಟವನ್ನು ಹಾಳುಮಾಡುವ ದೊಡ್ಡ ಹೆಗ್ಗಣಗಳು, ಇಲಿಗಳು, ಜೀರುಂಡೆಗಳು ಮತ್ತು ವಿಷಕಾರಿ ಕೀಟಗಳನ್ನು ಬೇಟೆಯಾಡಿ ತಿನ್ನುತ್ತವೆ. ಮನುಷ್ಯರಿಗೆ ಯಾವುದೇ ಹಾನಿ ಮಾಡದ, ಪರಿಸರವನ್ನು ಸಮತೋಲನದಲ್ಲಿಡುವ ಅತ್ಯಂತ ಮುಗ್ಧ ಜೀವಿಗಳಿವು.
ಹೊನ್ನಾವರದಂತಹ ಮಲೆನಾಡು-ಕರಾವಳಿ ಭಾಗದಲ್ಲಿ, ಹಿರಿಯರು ತಲತಲಾಂತರಗಳಿಂದ ಹೇಳಿಕೊಂಡು ಬಂದಿರುವ ಇಂತಹ ನಂಬಿಕೆಗಳು ನಮ್ಮ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದೆ. ಹಾಗಾಗಿ ಪಕ್ಷಿಯ ಧ್ವನಿ ಕೇಳಿದಾಗ ಆತಂಕವಾಗುವುದು ಸಹಜ. ಆದರೆ, ಪಕ್ಷಿಶಾಸ್ತ್ರಜ್ಞರ ಪ್ರಕಾರ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳು (ಮಳೆಗಾಲ ಮುಗಿದು ಚಳಿಗಾಲದ ಆರಂಭದ ಸಮಯ) ಈ ಪಕ್ಷಿಗಳ ಸಂವಹನದ ಅವಧಿಯಾಗಿರುತ್ತದೆ. ಈ ಹಕ್ಕಿ ತನ್ನ ಸಂಗಾತಿಯನ್ನು ಕರೆಯಲು ಅಥವಾ ತನ್ನ ಗೂಡನ್ನು ರಕ್ಷಿಸಿಕೊಳ್ಳಲು ಮಾಡಿದ ಸ್ವಾಭಾವಿಕ ಕೂಗಷ್ಟೇ. ಅದಕ್ಕೂ ನಮ್ಮ ಜೀವನದ ಘಟನೆಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಹಕ್ಕಿ ಕೂಗಿದ ನಂತರ ಎಲ್ಲೋ ಏನೋ ಕೆಟ್ಟದ್ದು ನಡೆದರೆ, ಜನ “ನೋಡು ಆ ಹಕ್ಕಿ ಕೂಗಿತ್ತಲ್ಲ, ಅದಕ್ಕೇ ಹೀಗಾಯ್ತು” ಎಂದು ಲಿಂಕ್ ಮಾಡುತ್ತಾರೆ. ಆದರೆ ಅದೇ ಹಕ್ಕಿ ಕೂಗಿದ ನಂತರ ನೂರಾರು ಒಳ್ಳೆಯ ಘಟನೆಗಳು ನಡೆದಾಗ ಯಾರೂ ಅದನ್ನು ಗಮನಿಸುವುದಿಲ್ಲ. ಕಾಕತಾಳೀಯವಷ್ಟೇ. ಧನಾತ್ಮಕವಾಗಿ ಯೋಚಿಸುವವರಗಿಂತ ಋಣಾತ್ಮಕವಾಗಿ ಯೋಚಿಸುವ ಜನರೇ ಹೆಚ್ಚು. ಇದು ಕೇವಲ ತನ್ನ ಹೊಟ್ಟೆಪಾಡಿಗಾಗಿ ಬೇಟೆಯಾಡಲು ಬಂದಿರುವ ಒಂದು ಮುಗ್ಧ ಜೀವಿ, ಪ್ರಕೃತಿಯ ದೃಷ್ಟಿಯಿಂದ. ಈ ಹಕ್ಕಿ ನಿಮ್ಮ ತೋಟದ ಇಲಿಗಳನ್ನು ಹಿಡಿಯಲು ಬಂದಿರುವ ದೇವದೂತ ಎಂದು ಭಾವಿಸಿ. ನಿಮ್ಮ ಮನಸ್ಸಿನ ಭಯವನ್ನು ಬಿಟ್ಟುಬಿಡಿ. ಪ್ರಕೃತಿಯ ಎಲ್ಲಾ ಜೀವಿಗಳೂ ಭಗವಂತನ ಸೃಷ್ಟಿಯೇ ಆಗಿರುವುದರಿಂದ ಅವು ನಮಗೆ ಎಂದಿಗೂ ಕೆಟ್ಟದ್ದನ್ನು ಮಾಡುವುದಿಲ್ಲ ಎಂದು ನಂಬಿರಿ.
“ಜೇಂವ್ ಹಕ್ಕಿ” ಎಂದು ಕರೆಯಲಾಗುವ ಪಕ್ಷಿಯ ನೈಜ ರೂಪದ ಫೋಟೋಗಳು ಇಲ್ಲಿವೆ ನೋಡಿ.
ಇವುಗಳನ್ನು ನೋಡಿದ ಮೇಲೆ ಇವು ಕೇವಲ ಮುಗ್ಧ ಪಕ್ಷಿಗಳೇ ಹೊರತು ಯಾವುದೇ ಅಪಶಕುನ ತರುವ ಜೀವಿಗಳಲ್ಲ ಎಂಬ ಅರಿವು ನಿಮಗಾಗುತ್ತದೆ. ಇದರ ಕಣ್ಣುಗಳು ಮತ್ತು ಮುಖದ ಮೇಲಿನ ಚುಕ್ಕೆಗಳ ವಿನ್ಯಾಸ ತುಂಬಾ ವಿಶಿಷ್ಟವಾಗಿರುತ್ತದೆ. ಇದರ ಬಾಯಿ ಕಪ್ಪೆಯಂತೆ ಅಗಲವಾಗಿರುವುದರಿಂದ ಇದಕ್ಕೆ “ಕಪ್ಪೆಬಾಯಿ ಹಕ್ಕಿ” ಎನ್ನಲಾಗುತ್ತದೆ. ನಮ್ಮ ಕಾಡುಗಳಲ್ಲಿ ಕಂಡುಬರುವ ಅಪರೂಪದ ಪಕ್ಷಿ ಇದು.
ಪಕ್ಷಿ ತಜ್ಞರ ಪ್ರಕಾರ, ರಾತ್ರಿ ವೇಳೆ ಪಕ್ಷಿಗಳು ಕೂಗಲು ವಲಸೆ ಹೋಗುವುದು, ಪ್ರಜನನ ಅವಧಿ (Mating Season), ಕತ್ತಲೆಯಲ್ಲಿ ಪರಭಕ್ಷಕಗಳಿಂದ ರಕ್ಷಣೆ ಪಡೆಯುವುದು ಮತ್ತು ತಮ್ಮ ತಮ್ಮ ಗುಂಪಿನೊಂದಿಗೆ ಸಂಪರ್ಕ ಸಾಧಿಸುವುದು ಪ್ರಮುಖ  ಕಾರಣಗಳೇ ಹೊರತು, ಅವು ಯಾವುದೇ ರೀತಿಯ ಅಪಶಕುನ ತರುವುದಿಲ್ಲ. ಅರಣ್ಯ ಭಾಗಗಳಲ್ಲಿ ಪ್ರಾದೇಶಿಕ ಭಾಷಾ ಸೊಗಡಿಗೆ ಅನುಗುಣವಾಗಿ ಪಕ್ಷಿಗಳಿಗೆ ವಿಶಿಷ್ಟ ಹೆಸರುಗಳಿರುತ್ತವೆ. ಜೇಂವ್‌ ಹಕ್ಕಿ ಎನ್ನುವುದು ಅದರ ಧ್ವನಿಯ ಆಧಾರದ ಮೇಲೆ ಬಂದಿರುವ ಹೆಸರಾಗಿದೆ. ರಾತ್ರಿ ವೇಳೆ ಇದು ಕೂಗುವಾಗ ಕತ್ತಲೆಯಲ್ಲಿ ನಿರಂತರವಾಗಿ ಜೇಂಕಾರ ಮಾಡಿದಂತೆ ಅಥವಾ ದೀರ್ಘವಾಗಿ ಇಳಿಯುವ ಧ್ವನಿಯಲ್ಲಿ “ಜೇಂವ್… ಜೇಂವ್…” ಅಥವಾ “ಚೇಂವ್…” ಎಂದು ವಿಚಿತ್ರವಾಗಿ ಪ್ರಲಾಪಿಸುತ್ತದೆ. ಇದೇ ಕಾರಣಕ್ಕೆ ಹಿರಿಯರು ಇದನ್ನು ಅಪಶಕುನದ ಹಕ್ಕಿ ಎಂದು ಕರೆದಿದ್ದಾರೆ. ಹಗಲಿನಲ್ಲಿ ದಟ್ಟವಾದ ಮರಗಳ ಪೊಟರೆಯಲ್ಲಿ, ಒಣಗಿದ ಎಲೆಯ ಮರೆಯಲ್ಲಿ ಕುಳಿತು ತಮ್ಮನ್ನು ರಕ್ಷಣೆ ಮಾಡಿಕೊಳ್ಳುತ್ತದೆ.
ಸಂಪೂರ್ಣ ಕತ್ತಲಾದಾಗ ಮಾತ್ರ ಬೇಟೆಗೆ ಹೊರಡುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ಪರಸ್ಪರ ಕತ್ತಲೆಯಲ್ಲಿ ಗುರುತಿಸಲು ಹಾಗೂ ತಮ್ಮ ಸಂಗಾತಿಯನ್ನು ಸಂಪರ್ಕಿಸಲು ಈ ರೀತಿ ವಿಚಿತ್ರವಾದ ದೀರ್ಘ ಧ್ವನಿಯನ್ನು ಹೊರಡಿಸುತ್ತವೆ.ಇದು ಪ್ರಕೃತಿಯ ಒಂದು ನಿರುಪದ್ರವಿ ಜೀವಿ ಅಷ್ಟೇ. ರೈತರ ಮಿತ್ರನಾಗಿ ಜಮೀನಿನಲ್ಲಿರುವ ಇಲಿ-ಹೆಗ್ಗಣಗಳನ್ನು ಬೇಟೆಯಾಡಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ.
ಮನುಷ್ಯರಿಗೆ ಯಾವುದೇ ಹಾನಿ ಮಾಡದ, ಪರಿಸರವನ್ನು ಸಮತೋಲನದಲ್ಲಿಡುವ ಅತ್ಯಂತ ಮುಗ್ಧ ಜೀವಿಗಳಿವು. ಮಲೆನಾಡಿನ ಗಡಿಭಾಗದ ತೋಟಗಳಿಗೆ ಇದು ತೀರಾ ಹತ್ತಿರದ ವಿಷಯ. ಹೊನ್ನಾವರ, ಗುಣವಂತೆ, ಮಂಕಿ ಅಥವಾ ಶರಾವತಿ ನದಿಯ ಹಿನ್ನೀರಿನ (Backwaters) ತೀರದ ಅಡಿಕೆ ತೋಟಗಳಲ್ಲಿ ಜೇಂವ್‌ ಹಕ್ಕಿಯ ಧ್ವನಿ ಹೆಚ್ಚಾಗಿ ಕೇಳಿಬರುತ್ತದೆ. ಇವುಗಳ ದೀರ್ಘವಾದ ಶಬ್ದ ಪ್ರಮುಖವಾಗಿ ಚಳಿಗಾಲದ ಆರಂಭದಿಂದ (ನವೆಂಬರ್-ಡಿಸೆಂಬರ್) ಹಿಡಿದು ಬೇಸಿಗೆಯವರೆಗೂ ತಡರಾತ್ರಿ ಅತಿ ಹೆಚ್ಚು ಕೇಳಿಬರುತ್ತದೆ.ಈ ಅವಧಿಯು ಗೂಬೆ ಹಾಗೂ ಕಪ್ಪೆಬಾಯಿ ಹಕ್ಕಿಗಳ ಪ್ರಜನನ ಕಾಲ (Mating Season) ಆಗಿರುತ್ತದೆ. ಕತ್ತಲಾದ ಮೇಲೆ ಗಂಡು ಮತ್ತು ಹೆಣ್ಣು ಹಕ್ಕಿಗಳು ಒಂದನ್ನೊಂದು ಹುಡುಕಲು ಈ ರೀತಿ ವಿಚಿತ್ರವಾಗಿ ರಾಗ ಎಳೆಯುತ್ತವೆ. ರಾತ್ರಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ವಯಸ್ಸಾದವರಿದ್ದರೆ, ಈ ಹಕ್ಕಿಯ ಕೂಗು ಕೇಳಿ ಹಳ್ಳಿಯ ಜನರಲ್ಲಿ ಆತಂಕ ಹೆಚ್ಚಾಗುತ್ತಿತ್ತು. ಇದು ಕೇವಲ ಒಂದು ಕಾಕತಾಳೀಯ ಮತ್ತು ಕತ್ತಲೆಯ ಭಯದಿಂದ ಹುಟ್ಟಿದ ನಂಬಿಕೆಯಷ್ಟೇ. ಆತಂಕ ಬೇಡ. ಇವುಗಳ ಮುಖ ಮತ್ತು ಕಣ್ಣುಗಳನ್ನು ನೋಡಿದಾಗ ಇವು ಕೇವಲ ಪ್ರಕೃತಿಯ ಸೃಷ್ಟಿಯ ಸುಂದರ ಜೀವಿಗಳು ಎಂದು ತಿಳಿಯುತ್ತದೆ. ಇವು ಮನುಷ್ಯರನ್ನು ಹೆದರಿಸಲು ಅಥವಾ ಕೆಟ್ಟ ಸುದ್ದಿ ನೀಡಲು ಕೂಗುವುದಿಲ್ಲ. ಕತ್ತಲೆಯಲ್ಲಿ ತಮ್ಮ ಜೋಡಿಯನ್ನು ಹುಡುಕಲು ಮತ್ತು ಸಂವಹನ ನಡೆಸಲು ಮಾತ್ರ ಈ ವಿಶಿಷ್ಟ ಧ್ವನಿಯನ್ನು ಬಳಸುತ್ತವೆ.ಆದ್ದರಿಂದ ನಿಮ್ಮ ಮನಸ್ಸಿನಲ್ಲಿದ್ದ “ಕೆಟ್ಟ ಸುದ್ದಿ”ಯ ಆತಂಕವನ್ನು ಸಂಪೂರ್ಣವಾಗಿ ಬಿಟ್ಟುಬಿಡಿ. ಈ ಪಕ್ಷಿ ಹಸಿರು ತೋಟಗಳ ರಕ್ಷಕನೇ ಹೊರತು ಶತ್ರುವಲ್ಲ. ನಿಸರ್ಗದ ದೃಷ್ಟಿಯಿಂದ ಈ ಹಕ್ಕಿ ಹೊನ್ನಾವರದ ಸಮೃದ್ಧ ಹಸಿರು ಪರಿಸರದ ಒಂದು ಸುಂದರ ಭಾಗವಾಗಿದೆ. ಅದನ್ನೂ ಬೈಯ್ಯುವದಕ್ಕಿಂತ ಗೌರವಿಸುವ  ಗುಣವನ್ನು ನಮ್ಮಲ್ಲಿ ಬೆಳೆಸಿಕೊಳ್ಳೋಣ.

ಫೋಟೋ ಕೃಪೆ: ಅರಣ್ಯ ಇಲಾಖೆ ಮತ್ತು ಜಾಲತಾಣ

 


  • ಲೇಖನ್‌ ನಾಗರಾಜ್‌ – ಶ್ರೀ ಗಂಧದಗುಡಿ ಧಾರವಾಹಿ ಚಿತ್ರಕಥೆ, ಸಂಭಾಷಣಾಕಾರರು,  ಹರಡಸೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading