‘ಬೇಲಿ ಸಾಲಿನ ಹೂಗಳು’ ಕೃತಿ ಪರಿಚಯ

ಕವಯತ್ರಿ ಶೃತಿಪ್ರಿಯ ಅವರ ಚೊಚ್ಚಲ ಕವನ ಸಂಕಲನ “ಬೇರು ಬಾಂಧವ್ಯ” ಕವಿತೆಯಲ್ಲಿ ಬೇರಿನ ಬಾಂಧವ್ಯದ ಕವನ ಸಂಕಲನದ ಕುರಿತು ಲೇಖಕರಾದ ಹೆಚ್.ಡಿ. ದಿವಾಕರ್ ಅರಸೀಕೆರೆ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ..

ಕೃತಿ: ಬೇಲಿ ಸಾಲಿನ ಹೂಗಳು 
ಪ್ರಕಾರ : ಕವನ ಸಂಕಲನ
ಲೇಖಕಿ: ಶೃತಿಪ್ರಿಯ (ಶೃತಿ ವಿನಯ್)
ಪ್ರಕಾಶನ: ಪುಷ್ಕರ ಪ್ರಿಂಟರ್ಸ್
ಬೆಲೆ: 150/-
ಖರೀದಿಗಾಗಿ :9481404806

ಕವಯತ್ರಿ ಶೃತಿಪ್ರಿಯ (ಶ್ರೀಮತಿ ಶೃತಿ ವಿನಯ್) ಅವರ ಚೊಚ್ಚಲ ಕವನ ಸಂಕಲನ “ಬೇಲಿ ಸಾಲಿನ ಹೂಗಳು” ಕೈ ಸೇರಿದಾಗ, ಮುಖಪುಟ ವಿನ್ಯಾಸದಲ್ಲಿಯೂ ಬೇಲಿಯ ಬಣ್ಣದ ಹೂಗಳನ್ನೇ ಕಂಡಾಗ ಇದರಲ್ಲಿ ಏನು ವಿಶೇಷತೆ ಎಂಬ ಕುತೂಹಲ ಮೂಡಿತು. ಕವಿತೆಗಳನ್ನು ಓದುತ್ತಾ ಹೋದಂತೆ ಬೇಲಿ ಹೂಗಳ ಮೌನ ಸಂದೇಶದ ಸಾರ್ಥಕತೆಯನ್ನು ಕವಯತ್ರಿ ತಮ್ಮ ಜಾಣ್ಮೆಯಿಂದ ಬರಹದ ಮೂಲಕ ತಿಳಿಸುವಲ್ಲಿ ಯಶಸ್ಸು ಕಂಡಿದ್ದಾರೆ ಎನಿಸಿತು.

ಸಾಹಿತಿಗಳಾದ ಪದ್ಮನಾಭ.ಡಿ ಅವರು ಪುಸ್ತಕದ ಮುನ್ನುಡಿಯಲ್ಲಿ ಕವನಗಳ ಬಗ್ಗೆ ಹೇಳುತ್ತಾ ಬಹುತೇಕ ಎಲ್ಲ ಕವಿತೆಗಳಲ್ಲಿ ಸುಮಧುರ ಭಾವ, ಲಯಬದ್ಧತೆ ಕಾಣಬಹುದೆಂದು ಉದಾಹರಣೆ ಸಹಿತ ವಿವರಿಸಿರುವುದು ಶ್ಲಾಘನೀಯ. ಬೆನ್ನುಡಿ ಬರೆದಿರುವ ರಾಜ್ ಆಚಾರ್ಯ ಅವರು ಲೇಖಕಿಯ ಪ್ರತಿಭೆ ಮತ್ತು ಕವಿತೆಗಳ ಮಹತ್ವವನ್ನು ತಿಳಿಸಿದ್ದಾರೆ.ಕವನ ಸಂಕಲನದ ಪುಟ ತಿರುಗಿಸಿದೊಡನೆ ಶ್ರೀ ಸದ್ಗುರು ಶ್ರೀಧರ ಸ್ವಾಮಿಗಳ ಪಾದಾರವಿಂದಕ್ಕೆ ಬೇಲಿ ಸಾಲಿನ ಹೂಗಳ ಭಕ್ತಿ ಸಮರ್ಪಣೆಯಾದರೆ, ತಮ್ಮ ತಂದೆ ತಾಯಿಗಳಿಗೆ ಬೇಲಿ ಸಾಲಿನ ಹೂಗಳನ್ನು ಅರ್ಪಣೆ ಮಾಡಿದ್ದಾರೆ.

ಕವಿತೆಗಳನ್ನು ನಾನು ಓದುತ್ತಾ ಹೋದಂತೆ ಮೊದಲ ಕವಿತೆ “ನನ್ನೊಳಗೆ ನೀ ನೆಲೆಸು ” ಇದರಲ್ಲಿ ತಮ್ಮ ಗುರುಗಳಲ್ಲಿ ನಿನ್ನ ನಾಮದ ಬಲವೊಂದಿದ್ದರೆ ಸಾಕು, ನನ್ನ ಮನದಲ್ಲಿ ಸದಾ ಭಕ್ತಿ ನೆಲೆಸುವಂತೆ ಕರುಣಿಸು ಎಂದು ಪ್ರಾರ್ಥಿಸಿದ್ದಾರೆ. ‘ಕನ್ನಡಮ್ಮನಿಗೆ ನಮನ’ ಕವಿತೆಯಲ್ಲಿ ಕನ್ನಡನಾಡಿನ ವರ್ಣನೆ, ಕವಿಗಳು ಹಾಗೂ ಕನ್ನಡ ಭಾಷೆಯ ಸೊಬಗನ್ನು ತಿಳಿಸುತ್ತಾ ಮತ್ತು ನಾಡಿನ ಮೇಲಿನ ಅಭಿಮಾನದಿಂದ ಕನ್ನಡಮ್ಮನಿಗೆ ನಮಿಸಿದ್ದಾರೆ. ‘ಬೇಲಿ ಸಾಲಿನ ಹೂಗಳು’ ಕವಿತೆಯು ಸೂರ್ಯನ ಉದಯಕ್ಕೆ ಸ್ವಾಗತ ಕೋರಿ, ಕಲ್ಲು ಮುಳ್ಳಿನ ಹಂದರದಲ್ಲಿ ಅರಳಿದೆ ಬೇಲಿ ಸಾಲಿನ ಹೂಗಳು ಅದಕ್ಕೆ ಮಣ್ಣಿನ ಮಮತೆಯೇ ಆಧಾರ ಹೂವಿಗೆ ಅವುಗಳ ಸರಳತೆಯೇ ಸಿಂಗಾರವಾಗಿದೆ. ಭರವಸೆ, ಛಲವಿದೆ. ಎಲ್ಲಾ ಋತುಗಳು ಬದಲಾಗದ ಭಾವವಿದೆ ಎಂಬುದನ್ನು ತುಂಬಾ ಸರಳವಾಗಿ ಕವಿತೆಯಲ್ಲಿ ತಿಳಿಸಿದ್ದಾರೆ.

“ನೀನೇ ಪದವಾಗು” ಕವಿತೆಯಲ್ಲಿ ತಮ್ಮ ಮನದ ಭಾವನೆಗೆ ನೀನೇ ಪದವಾಗಿ ಬಂದು ನನ್ನ ಬಾಳ ಪುಸ್ತಕದ ಖಾಲಿ ಪುಟಗಳನ್ನು ತುಂಬಿಬಿಡು. ಬಾಳು ಕಲಿಸಿದ ಪಾಠಗಳನ್ನು ನೆನಪಿಡು ಮುನ್ನುಡಿಗೆ ಎಂದು ತನ್ನ ಭಾವನೆಗೆ ಹೇಳಿರುವ ಪರಿ ತುಂಬಾ ಚೆನ್ನಾಗಿದೆ.

ಅಮ್ಮ ಕವಿತೆಯಲ್ಲಿ ಅಮ್ಮನಿಗೆ ಉಸಿರು ಹೆಸರು ನಿನ್ನಿಂದಲೇ ನಿನಗೆ ನನ್ನ ನಮನ ಎಂದು ಹೇಳುತ್ತಾ ಮತ್ತೆ ತಾಯಿಯ ಮಡಿಲಲ್ಲಿ ಕವಿಯತ್ರಿ ಮಲಗುವಾಸೆಯನ್ನು ವ್ಯಕ್ತ ಪಡಿಸುತ್ತಾರೆ.”ಮುಂಜಾವಿನ ಕನಸು” ಕವಿತೆಯಲ್ಲಿ ಲೇಖಕಿ ಕಂಡ ಕನಸು ನಿಜವಾಗುವುದೆಂಬ ನಂಬಿಕೆಯಿಂದ ಚಾತಕ ಪಕ್ಷಿಯಂತೆ ಕಾಯುತ್ತಿರುವೆ ಎಂದು ಇನಿಯನಿಗೆ ಹೇಳಿರುವ ರೀತಿ ಓದುಗರ ಮನ ಮುಟ್ಟುತ್ತದೆ.

“ನೀಡೊಂದು ಶೀರ್ಷಿಕೆ” ಕವಿತೆಯಲ್ಲಿ ಕಾವ್ಯಕನ್ನಿಕೆಯನ್ನೇ ನಿನಗಾಗಿ ಬರೆದ ಕವನಕ್ಕೆ ನೀಡೊಂದು ಶೀರ್ಷಿಕೆ ಎಂದು ಹೇಳುವ ಮಾತುಗಳು ಹೃದಯಸ್ಪರ್ಶಿಯಾಗಿದೆ. “ಒಲವ ಹೆಜ್ಜೆ” ಕವಿತೆಯಲ್ಲಿ ಒಲವ ಮಳೆ ಸುರಿಯುವ ಸೂಚನೆಗೆ ಬಾನಿಗೆ ಸಾವಿರ ಧನ್ಯವಾದ ಹೇಳುತ್ತಾ ಅವನ ಒಲವಧಾರೆಗೆ ಕಂಗಳಲ್ಲಿ ಲಜ್ಜೆಯದೆ ಸಂವಾದವೆಂದು ಹೇಳುವುದು ಅದ್ಭುತವಾಗಿದೆ.

“ಸುರಿದ ಸೋನೆ “ಕವಿತೆಯಲ್ಲಿ ಬರಡಾದ ಧರೆಗೆ ಸುರಿದ ಸೋನೆಯಿಂದಾದ ಸುಂದರ ವರ್ಣನೆಯಲ್ಲಿ ಕಾಣಬಹುದು. “ಕೋಪವೇಕೆ ನಲ್ಲೆ” ಕವಿತೆಯಲ್ಲಿ ನಲ್ಲನು ನಲ್ಲೆಯ ಕೋಪ ಬಿಡು ಎಂದು ತಿಳಿಸುತ್ತಾ ನಿನ್ನ ಒಲವಿಗೆ ಶರಣಾಗುವೆನು, ನೀನಿರದೆ ನನಗೆ ಯಾರಿಲ್ಲ ಎಂದು ಹೇಳುವ ಶೈಲಿ ವಿಭಿನ್ನವಾಗಿದೆ.

“ಉರಿ” ಕವಿತೆಯಲ್ಲಿ ಬಡತನದ ಕುಲುಮೆಯಲ್ಲಿ ಬೆಂದವರ ಬೇಗುದಿ; ಒಪ್ಪತ್ತು ಗಂಜಿಯಲ್ಲಿ ತೃಪ್ತ ಭಾವವೇ ನೆಮ್ಮದಿ ಧನ್ಯತೆಯಲ್ಲಿ ಬಾಳುವ ಸಂದೇಶವಿದೆ. “ಮನದಿ ಮಿಡಿದಿದೆ ಮೋಹನ ರಾಗ” ಕವಿತೆಯಲ್ಲಿ ರಾಧೆಯ ವಿರಹಭಾದೆಯನ್ನು ತಿಳಿಸುತ್ತಾ, ನೆನಪಿನ ಅಲೆಯಲ್ಲಿ ಕೃಷ್ಣನು ಬಂದಾಗ ಅವಳ ಮನದಲ್ಲಿ ಮಿಡಿದ ಮೋಹನ ರಾಗದ ಸಾಲುಗಳು ಆಪ್ತವೆನಿಸುತ್ತವೆ.

“ನಿನ್ನದೇ ಧ್ಯಾನದಲಿ” ಕವಿತೆಯಲ್ಲಿ ಲೇಖಕಿಯು ನಾನು ಎಲ್ಲೋ ಹೇಗೋ ಇದ್ದೆ, ಒಲವ ಭಾಷೆಯನ್ನು ನೀನು ಪರಿಚಯಿಸಿದಾಗ ಏನಾಯಿತು ಎಂಬುದನ್ನು ಒಲವಿನ  ಮೂಲಕವೇ ತಿಳಿಸಿದ್ದಾರೆ. “ಮುಂಬಾಗಿಲು” ಕವಿತೆಯ ಮೂಲಕ ಸತ್ಪಾತ್ರರಿಗೆ ತೆರೆದಿರಲಿ ಮನೆ-ಮನದ ಮುಂಬಾಗಿಲು ಅಪಾತ್ರರಿಗೆ ಮುಚ್ಚಿರಲಿ ಎಂದು ಮನೆ-ಮನದ ದ್ವಾರ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ.

“ಮಾತು ಮೌನದ ಸಖ್ಯ” ಕವಿತೆಯಲ್ಲಿ ಮಾತು ಮೌನವೆರಡು ಬಾಳಿನಲ್ಲಿ ಎಷ್ಟು ಮುಖ್ಯ ಅವುಗಳ ಮಹತ್ವವನ್ನು ತಿಳಿದು ನಡೆದರೆ ಮನಸ್ಸಿಗೆ ನೆಮ್ಮದಿ ಎಂಬ ಮಾತು ಸ್ಪಷ್ಟವಾಗಿದೆ. “ನಿನ್ನದೇ ನೆನಪಿನ ರಾಗ”ಕವಿತೆಯಲ್ಲಿ, ‘ದೂರ ಸನಿಹಗಳ ಹಂಗಿಲ್ಲದೆ ಹೃದಯ ಸಮಾಗಮ’ ಎಂಬ ಸಾಲು ಪ್ರೀತಿಗೆ ಅಂತರವಿಲ್ಲ ಎಂದು ತಿಳಿಸುವಲ್ಲಿ ಯಶಸ್ವಿಯಾಗಿದೆ. “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ” ಕವಿತೆಯಲ್ಲಿ ಹಾಗೆಯೇ ಬಣ್ಣದ ಮಾತಿಗೆ ಮರುಳಾಗಬೇಡಿ ಎಂದು ಎಚ್ಚರಿಕೆಯನ್ನು ಕವಯತ್ರಿ ನೀಡಿದ್ದಾರೆ.

“ಹಳಿ ಮ್ಯಾಗಿನ ರೈಲು” ಕವಿತೆಯು ಜಿ. ಪಿ. ರಾಜರತ್ನಂ ಅವರ ಬರವಣಿಗೆ ಶೈಲಿಯಲ್ಲಿದೆ. ರೈಲನ್ನು ಬದುಕಿಗೆ ಹೋಲಿಸಿದ್ದಾರೆ ಹಳಿ ತಪ್ಪದೆ ಜೀವನ ಸಾಗಬೇಕೆಂಬ ಸಂದೇಶವಿದೆ. “ಮೂರು ಮತ್ತೊಂದು” ಕವಿತೆಯಲ್ಲಿ ಮೂರು ಮಂಗಗಳ ಜೊತೆ ಮತ್ತೊಂದು ನೀತಿ ಇದೆ. ಅದೇನೆಂದರೆ ನಾಲ್ಕನೇ ಕಪಿಯ ಕೈಗೆ ಲೇಖಕಿ ಮೊಬೈಲ್ ಕೊಟ್ಟಿದ್ದಾರೆ. ಅಂದರೆ ಅದರಲ್ಲಿ ಒಳ್ಳೆಯದು ಕೆಟ್ಟದ್ದು ಎರಡು ಇರುತ್ತದೆ. ಯಾವುದು ಆಯ್ಕೆ ಮಾಡಿಕೊಳ್ಳುತ್ತೀರಾ ಅದು ನಿಮಗೆ ಬಿಟ್ಟಿದ್ದು ಎಂಬುದು ಅದರ ನೀತಿಯಾಗಿದೆ.

“ಪರಿವರ್ತನೆ ಜಗದ ನಿಯಮ” ಕವಿತೆಯಲ್ಲಿ ಜೀವನ ಚಕ್ರವನ್ನು ಪ್ರಕೃತಿಗೆ ಹೋಲಿಸಿ, ಋತು ಬದಲಾಗುವಂತೆ ಬಾಳಿನಲ್ಲಿ ಕಷ್ಟ ಸುಖಗಳು ಬರುವುದು ಸಹಜ ಎಂಬ ಹೋಲಿಕೆ ಕಾಣಬಹುದು. “ವಿದ್ಯಾಲಯ” ಕವಿತೆಯಲ್ಲಿ ನಾವು ಏನನ್ನು ವಿದ್ಯಾಲಯದಲ್ಲಿ ಕಲಿಯುತ್ತೇವೆ. ವಿದ್ಯಾಲಯದ ಸಾಲುಗಳ ಕೊಡುಗೆ ಏನು? ಎಂಬುದನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. “ನೀನಿಲ್ಲದ ಘಳಿಗೆಯಲ್ಲಿ” ಮನದ ತಳಮಳವನ್ನು ವಿರಹ ವೇದನೆಯಲ್ಲಿ ಕಾಯುತ್ತಾ ಬೇಗ ಬಂದುಬಿಡು ಎಂದು ಹೇಳುವ ಪರಿ ಸೊಗಸಾಗಿದೆ. “ಪುನರ್ಜನ್ಮ”ಕವಿತೆಯಲ್ಲಿ ಲೇಖಕಿಗೆ ಸತ್ಕಾರ್ಯವೆ ಮಾನವ ಧರ್ಮ. ಮಗುವ ಧರೆಗೆ ತಂದ ತಾಯಿಗದೇ ಪುನರ್ಜನ್ಮ. ಮತ್ತೆ ಕನ್ನಡಮ್ಮನ ಮಡಿಲಲ್ಲಿ ಜನಿಸುವ ಆಸೆ ಕವಿಯತ್ರಿ ವ್ಯಕ್ತಪಡಿಸುತ್ತಾರೆ.

“ನೀವು ತುಂಬಾ ಬದಲಾಗಿದ್ದೀರಿ” ಎಂಬ ಪ್ರಶ್ನೆಗೆ ಲೇಖಕಿಯು ಮಾನವನಿಗೆ ಬಾಲ್ಯ ಯೌವನ ವೃದ್ಧಾಪ್ಯ ಹೇಗೋ ಹಾಗೆ, ಹೌದು ನಾವು ಬದಲಾಗಿದ್ದೇವೆ ಕಾಲಕ್ಕೆ ತಕ್ಕಂತೆ ಎಂದು ಆತ್ಮವಿಶ್ವಾಸದಲ್ಲಿಯೇ ನುಡಿದಿದ್ದಾರೆ.

“ಪು ತಿ ನೋ” ಕವಿತೆಯಲ್ಲಿ ಲೇಖಕಿ ಪುಸ್ತಕವನ್ನು ಓದುತ್ತಾ ಪುಟ ತೆರೆದಾಗ ಬಾಳಕಥೆಯಲ್ಲಿ ಬಂದು ಹೋಗುವವರೆಷ್ಟೋ ಜನ, ಅವರವರ ಅನುಭವವೇ ಇಲ್ಲಿ ಪಠ್ಯ, ಭರವಸೆಗಳಿರಲಿ ಬರುವ ನಾಳೆ ಎಂಬ ಹಾಳೆಯಲ್ಲಿ ಎಂಬ ಸಂದೇಶವಿದೆ. “ಅಮೃತಮಂಥನ” ಕವಿತೆಯಲ್ಲಿ ಕ್ರೋಧ, ಮೋಹ ದೂರವಾದಾಗ ಸಹನೆ ವಿಶ್ವಾಸ ತಾನಾಗೆ ತೇಲಿ ಬರುತ್ತದೆ. ಸತ್ಯವು ಪ್ರಜ್ವಲಿಸಲಿ ಎಂಬುದು ಇವರ ಆಶಯ. “ಹುಡುಕಬೇಕಿದೆ ನನ್ನ ನಾನು” ಕವಿತೆಯಲ್ಲಿ ಲೇಖಕಿಯು ಕಳೆದುಕೊಂಡ ತನ್ನತನವನ್ನು ಎಲ್ಲೆಲ್ಲಿ ಹುಡುಕಬೇಕೆಂದು ಕಾವ್ಯಾತ್ಮಕವಾಗಿ ಹೇಳಿದ್ದಾರೆ.

ನಾನು ಶಬರಿಯಲ್ಲ ಕವಿತೆಯಲ್ಲಿ ಇನಿಯನಿಗಾಗಿ ಕ್ಷಣಕೊಮ್ಮೆ ಬಾಗಿಲಾಚೆ ದಿಟ್ಟಿಸಿ ನೋಡುವುದನ್ನು ಗೆಳತಿಗೆ ಹೇಳುವ ಶೈಲಿ ಸುಂದರವಾಗಿದೆ. “ಯಾರನ್ನು ದೂರಲಿ” ಕವಿತೆಯಲ್ಲಿ ವಿದಾಯದ ಶಿಕ್ಷೆ ಕಳೆದು ವಿರಸ ಕರಗಿ ಮತ್ತೆ ಪ್ರೀತಿಯ ಘಮಲು ಹರಡಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. “ಅಕ್ಷರ ಬೀಜವ ಬಿತ್ತೋಣ” ಇದು ಲಾವಣಿ ಶೈಲಿಯಲ್ಲಿದೆ. “ಅನಿರೀಕ್ಷಿತ” ಕವಿತೆಯಲ್ಲಿ ಬಾಳ ಪಥದಲ್ಲಿ ಆಕಸ್ಮಿಕ ತಿರುವಲ್ಲಿ ಸಾಗಿದರೂ ಸಾವಧಾನದಲ್ಲಿ ಸಾಗೋಣ ನಗುತ ಎಲ್ಲರೂ ಎಂದಿದ್ದಾರೆ. “ಬಲ್ಲಿರೇನು ನನ್ನ ಅಂತರಂಗವ” ಕವಿತೆಯಲ್ಲಿ ಚೆಲುವೆಯು ತನ್ನ ಸೌಂದರ್ಯವನ್ನು ವರ್ಣಿಸುತ್ತ ಕಣ್ಣಿನಲ್ಲಿರುವ ಕನಸು, ಮೌನದ ಮನಸ್ಸು, ಹೃದಯದಲ್ಲಿ ನಗುವ ಹಿಂದಿರುವ ನೋವನ್ನು ಅರಿತು ನನ್ನ ಅಂತರಂಗದ ಭಾವವನ್ನು ಅರಿತು ಸಿಗಬಹುದೇ ನನಗಾಗಿ ಮಿಡಿಯುವ ಜೀವ ಎಂಬ ತುಡಿತವಿದೆ.

“ಬೇರು ಬಾಂಧವ್ಯ” ಕವಿತೆಯಲ್ಲಿ ಬೇರಿನ ಬಾಂಧವ್ಯಕ್ಕೆ ಸಮನುಂಟೆ. ಇದಕ್ಕೆ ಬೆಲೆ ಕಟ್ಟಲಾಗದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. “ಒಲವೇ ನಲ್ಲ” ಕವಿತೆಯಲ್ಲಿ ನಲ್ಲನ ನೆನಪುಗಳು ಹೇಗೆ ಎಲ್ಲೆಡೆ ಕಾಡುತ್ತಿವೆ ಎಂಬ ಚಿತ್ರಣವಿದೆ.

“ಕಾಡುತಿದೆ ಹೀಗೆ” ಕವಿತೆಯಲ್ಲಿ ಕಹಿ ನೆನಪುಗಳು ನೊಂದ ಮನದ ತುತ್ತು; ನಗುನಗುತ ಸಾಗಬೇಕು ಎಲ್ಲಾ ನೆನಪುಗಳ ಹೊತ್ತು ಈ ರೀತಿಯ ಸಾಲುಗಳು ನಮ್ಮ ಹಳೆಯ ನೆನಪಿನತ್ತ ಮನಸ್ಸನ್ನು ಕೊಂಡೊಯ್ಯುವ ರೀತಿಯಲ್ಲಿ ತಿಳಿಸಿದ್ದಾರೆ. “ಮುಂಗಾರು ಮಳೆ” ಕವಿತೆಯಲ್ಲಿ ವಿರಸವು ಮರೆಯಾಗಿ; ವಿರಹವು ಕೊನೆಯಾಗಿ; ನೆಲಮುಗಿಲು ಒಂದಾಗುವ ಶುಭ ವೇಳೆ ಎಂಬ ಭಾವ ತುಂಬಿದ ಸಾಲುಗಳಿವೆ.

“ನಿರಾಳವಾಗು ಮನವೇ” ಕವಿತೆಯಲ್ಲಿ ಮನಸ್ಸಿಗೆ ನೀನು ಹೇಗೆ ನಿರಾಳವಾಗಿ ಇರಬೇಕೆಂದು ಹೇಳುವ ಪರಿ ತುಂಬಾ ಚೆನ್ನಾಗಿದೆ. “ಮನದ ಮತ್ಸರ” ಕವಿತೆಯು ಮಾನವೀಯ ಮೌಲ್ಯಗಳ ಮಹತ್ವವನ್ನು ತಿಳಿಸುವಲ್ಲಿ ಯಶಸ್ವಿಯಾಗಿದೆ.

“ಕೊನೆ ಮನೆ” ಮನಕ್ಕೆ ಕಚಗುಳಿಯಿಡುವಂತಹ ನವಿರಾದ ಕವಿತೆ. “ರಾಜರ್ಷಿ” ಕವಿತೆಯಲ್ಲಿ ಕೃಷ್ಣರಾಜ ಒಡೆಯರ ಅಭೂತಪೂರ್ವ ಸೇವೆ ಮತ್ತು ಅವರ ಕೊಡುಗೆಗಳನ್ನು ಸಂಪೂರ್ಣ ಪರಿಚಯಿಸಿದ್ದಾರೆ. “ನಮ್ಮ ಯೋಧ” ಕವಿತೆ ಯೋಧನ ತ್ಯಾಗ ಮತ್ತು ದೇಶಭಕ್ತಿಯನ್ನು ತಿಳಿಸುತ್ತದೆ.

“ಕಟ್ಟೋಣ ಹೊಸದೊಂದು ಕಾವ್ಯ ಲೋಕ” ಕವಿತೆಯಲ್ಲಿ ಕವಿ ಕಾವ್ಯ ರಚನೆಯ ವಿಷಯಗಳನ್ನು ಒಳಗೊಂಡಿದೆ. “ಮಧುರ ಕವಿತೆ ನೀನಾದೆ” ಕವಿತೆಯಲ್ಲಿ ಪ್ರತಿ ಅಕ್ಷರದಲ್ಲಿ ತುಂಬಿ ಪ್ರೇಮವನ್ನು ಬರೆಯುವ ಲೇಖನಿಯು ನಾನಾದೆ ನನ್ನ ಬಾಳಿನ ಖಾಲಿ ಪುಟಗಳನ್ನು ತುಂಬಿದ ಮಧುರ ಕವಿತೆ ನೀನಾದೆ ಎಂದಿದ್ದಾರೆ.

“ಹೂ ಮಳೆ” ಕವಿತೆಯಲ್ಲಿ ಮಳೆಯನ್ನು ಧರೆಗೆ ಕರೆಯುವ ರೀತಿ ಸೊಗಸಾಗಿದೆ. “ಸೆಳೆತ” ಕವಿತೆಯಲ್ಲಿ ಮನಸಿಗೆ ಅಂಕುಶ ಹಾಕುವ ರೀತಿಯನ್ನು ತಿಳಿಸಿ ಅನಗತ್ಯ ಸೆಳವಿಗೆ ಬಲಿಯಾಗದಿರುವಂತೆ ಕವಯತ್ರಿ ಎಚ್ಚರಿಸಿದ್ದಾರೆ.

“ಹೊಣೆ ಹೊತ್ತುಕೋ” ಕವಿತೆಯ ಸಾಲುಗಳು ಮನಮುಟ್ಟುತ್ತವೆ. “ಆತ್ಮಾವಲೋಕನ” ಕವಿತೆಯಲ್ಲಿ ಆಂತರ್ಯದ ಧ್ವನಿಗೆ ನೀಡಬೇಕು ಪ್ರಥಮ ಮನ್ನಣೆ ಸ್ವಂತಿಕೆಯಿಂದ ಸಾಧನೆಯ ತನಕ ಇರಲಿ ಸೈರಣೆ ಎಂದಿದ್ದಾರೆ. “ಇರುವೆಯ ದಾರಿ “ಕವಿತೆಯಲ್ಲಿ ಇರುವೆಯ ಶಿಸ್ತು ಮತ್ತು ಬದುಕಿನ ಚಿತ್ರಣವಿದೆ. “ಈ ಕಾಯ” ಕವಿತೆಯಲ್ಲಿ ಸಹನೆ ಬಹಳ ಮುಖ್ಯ ನೋವು ನಲಿವು ಸಹಜ. ದೇಹ ಸಾರ್ಥಕತೆ ಪಡೆಯಬೇಕೆಂದಿದ್ದಾರೆ. “ಕುಟುಂಬ” ಕವಿತೆಯಲ್ಲಿ ಕುಟುಂಬ ಸಾಮರಸ್ಯದಲ್ಲಿದೆ ಭಾರತೀಯರ ಸತ್ವ; ಅರಿಯುವ ‘ವಸುದೈವ ಕುಟುಂಬಕಂ’ ನುಡಿಯ ಮಹತ್ವ ಎಂಬ ಸಾಲುಗಳು ಅರ್ಥಪೂರ್ಣವಾಗಿದೆ. “ಮತ್ತೆ ಬೆಳಕಾಗಿ ಗುರು ಬಸವಣ್ಣ “ಕವಿತೆಯಲ್ಲಿ ಬಸವಣ್ಣನವರನ್ನು ಮತ್ತೆ ಬೆಳಕಾಗಿ ಭುವಿಯಲ್ಲಿ ಅವತರಿಸು ಗುರುವೇ ಎಂದು ಪ್ರಾರ್ಥಿಸಿದ್ದಾರೆ.

“ಬೆಳಕು” ಕವಿತೆಯಲ್ಲಿ ಬೆಳಕಿಗೆ ಕವಿಯತ್ರಿಯು ಬದುಕು ನಿನ್ನದು ಬೆಳಕು ನಿನ್ನದು ದಾರಿ ತೋರುವ ಹಣತೆಯು ದೀಪ ತಿಮಿರ ಓಡಿಸಿ ವಾಸ್ತವ ಜಗದ ಅರಿವಿಗೆ ಈ ಸಾಲುಗಳು ಮನಸ್ಸಿಗೆ ಬೆಳಕು ಬೀರುತ್ತದೆ.”ಅನಾವರಣ” ಕವಿತೆಯಲ್ಲಿ ವಾಸ್ತವದ ಅನಾವರಣವಿದೆ.

“ನೀರಿದ್ದರೆ ನಾವು” ಕವಿತೆಯಲ್ಲಿ ಅಮೂಲ್ಯವಾದ ನೀರಿನ ಮಹತ್ವವನ್ನು ತಿಳಿಸುತ್ತಾ ಕಾಡನ್ನು ರಕ್ಷಿಸಲು ಕವಯತ್ರಿ ಕರೆ ನೀಡಿದ್ದಾರೆ. “ಶಾಲೆಗೆ ಬಾ ಮಗುವೇ” ಕವಿತೆಯಲ್ಲಿ ಮಗುವನ್ನು ಶಾಲೆಗೆ ಬಾ ಮಗು ಕೋಪ ಬೇಡ ಎಂದು ಹೇಳುವ ಮಾತುಗಳೊಂದಿಗೆ ವಿದ್ಯೆಯ ಮಹತ್ವವನ್ನು ಸಹ ತಿಳಿಸಿದ್ದಾರೆ. ರೈತ ಮಹಿಳೆ ಕವಿತೆಯಲ್ಲಿ ರೈತ ಮಹಿಳೆಯ ಬದುಕ ಕಟ್ಟಿ ಕೊಟ್ಟಿದ್ದಾರೆ.

“ಒಲವಿನ ಬೀದಿಯಲಿ “ಕವಿತೆಯಲ್ಲಿ ಮಾರಾಟಕ್ಕಿದೆ ನನ್ನ ಹೃದಯವು ನಿನಗೆ ನೀನೆ ಖರೀದಿಸು ಎಂದು ಹೇಳುತ್ತಾ ಚೌಕಾಸಿ ಮಾಡಬೇಡ ಎಂದು ಸಹ ಹೇಳಿದ್ದಾರೆ. “ಚಿಂತೆಯನು ಬಿಡು” ಚಿಂತೆಯಿಂದ ಬದುಕು ಆತಂಕದಿಂದ ತುಂಬುತ್ತದೆ ಎಂಬ ಕಿವಿಮಾತನ್ನು ಆಡಿದ್ದಾರೆ.

“ಮುಂಗಾರು ಮಳೆ ಬಂತು” ಕವಿತೆಯಲ್ಲಿ ಮುಂಗಾರು ಮಳೆ ಬಂದಾಗ ರೈತರ ಸಂಭ್ರಮ ಹೇಗಿದೆ ಎಂದು ವರ್ಣಿಸಲಾಗಿದೆ. “ಶಬರಿ ಪ್ರಿಯ ರಾಮ” ಕವಿತೆಯಲ್ಲಿ ಶಬರಿಗೆ ರಾಮನ ಮೇಲಿದ್ದ ಅನನ್ಯ ಭಕ್ತಿಯನ್ನು ಕಾಣಬಹುದು. “ಏಕಾಂಗಿ” ಕವಿತೆಯಲ್ಲಿ ಬಾಳಪಯಣದ ಏಕಾಂಗಿ ಹೋರಾಟದಲ್ಲಿ ವಾಸ್ತವವನ್ನು ಅರಿತು ಸಾಗಬೇಕು. ನಮ್ಮ ಸಾಮರ್ಥ್ಯವನ್ನು ಜಗಕ್ಕೆ ತೋರಿಸಬೇಕು ಎಂಬ ಸಂದೇಶವಿದೆ.

“ಅರ್ಥವಾಗದ ಚಿತ್ರ” ಎಂಬ ವಿಶೇಷ ಕವಿತೆಯಲ್ಲಿ ಕಲಾವಿದನ ಕುಂಚಕ್ಕೆ ಏನು ಮೆತ್ತಿ ಕೊಂಡಿದೆ. ಕಂಗಳಿಂದ ಜಾರಿದ ಹನಿಗಳು ಯಾವ ಬಣ್ಣ ಪಡೆಯುತ್ತವೆ. ಇದಕ್ಕೆಲ್ಲ ಉತ್ತರ ಈ ಕವಿತೆ ಓದಿದರೆ ನಿಮಗೆ ಸಿಗುತ್ತದೆ.

“ನಂದಾದೀಪ” ಈ ಕವಿತೆಯಲ್ಲಿ ಮನಸ್ಸಿನ ಕತ್ತಲೆಯನ್ನು ತೊಲಗಿಸಲು ಭಕ್ತಿಯ ಬೆಳಕು ಸದಾ ಇರಲಿ ಎಂಬ ಆಶಯವಿದೆ. “ಕಾಯಕವ ನಂಬಿ ಕೆಟ್ಟವರಿಲ್ಲ” ಈ ಕವಿತೆಯಲ್ಲಿ ಈ ಜಗತ್ತಿನಲ್ಲಿ ಕಾಯಕವ ನಂಬಿ ಯಾರೂ ಸಹ ಕೆಟ್ಟವರಿಲ್ಲ. ಪ್ರತಿಫಲದ ಹಂಗಿಲ್ಲದ ಕಾರ್ಯವು ಸಾರ್ಥಕವಾಗಿ ಅದರಲ್ಲಿ ಆತ್ಮ ತೃಪ್ತಿ ಸಿಗುತ್ತದೆ ಎಂಬ ಸಂದೇಶ ಸಾರಿದೆ. “ನಸುನಗೆಯ ನವಭಾವ” “ಅನ್ಯತಾ ಶರಣಂ ನಾಸ್ತಿ” ಈ ಕವಿತೆಯಲ್ಲಿ ಸೃಷ್ಟಿ ರಹಸ್ಯವನ್ನು ತಿಳಿದವರು ದೇವನೊಬ್ಬನೇ ಎಲ್ಲಾ, ನಾನು ಹುಲು ಮಾನವ, ನಿನ್ನ ಕೃಪೆಯಿಂದ ಈ ಜನುಮ ಎಂದು ದೇವರಿಗೆ ತಿಳಿಸಿದ್ದಾರೆ. “ನಾದ ಗಂಗೆಯು ತೇಲಿ ಬರುತಿದೆ” ಕವಿತೆಯಲ್ಲಿ ಕಾವ್ಯದ ಮಳೆಯು ಧರೆಗಿಳಿಯುವ ರೀತಿ ಸೊಗಸಾಗಿದೆ. “ನಂಟು” ಕವಿತೆಯಲ್ಲಿ ಅಂಬುಧಿಯ ತಟಕ್ಕೆ ದೂರದ ಬೆಟ್ಟಕ್ಕೆ, ಅವನಿ ಮತ್ತು ಅಂಬರಕ್ಕೆ ಅಂತರವನ್ನು ಮೀರಿದ ಬೆಸೆದ ಬಾಂಧವ್ಯದ ನಂಟನ್ನು ತಿಳಿಸಿದ್ದಾರೆ.

“ಸೌಗಂಧಿಕಾ ಪುಷ್ಪ” ಕಥನ ಕಾವ್ಯ ಸೊಗಸಾಗಿದೆ ತುಂಬಾ ಚೆನ್ನಾಗಿದೆ. “ಕಡಲ ಮುತ್ತು” ಕವಿತೆಯಲ್ಲಿ ನಿನ್ನೊಲವೆಂಬ ಸ್ವಾತಿ ಮಳೆಯಲಿ ಮಿಂದು ಚಿಪ್ಪೊಡೆದು ಬಂದಂತೆ ಕಡಲ ಮುತ್ತು ಬೆಳದಿಂಗಳ ಸೊಬಗಲಿ ಹೊಳೆಯುತ್ತಿದೆ. “ಸೂತ್ರ ಹರಿದ ಪಟ” ಕವಿತೆಯಲ್ಲಿ ನಂಬಿಕೆಯ ದಾರವೆಸೆದು ಪಟಕ್ಕೆ ಸೇರಿಸಿ ವಿಹರಿಸಬೇಕು. ನಿಂತ ನೀರಲ್ಲ ಬಾಳು ಎಂಬ ಸಾರವಿದೆ.

“ಯಾರಾಕಿ?” ಕವಿತೆ ವಿಭಿನ್ನ ಶೈಲಿಯಿಂದ ಓದಿಸಿಕೊಂಡು ಹೋಗುತ್ತದೆ “ಗೋರಿ” ಕವಿತೆಯಲ್ಲಿ, ಇಲ್ಲಿ ನೆನಪಿಗಳಿಗಷ್ಟೇ ಯೋಗ; ನೆಪ ಹೇಳಿ ತೂರಿಕೊಳ್ಳುವ ಬೆಳಕಿಗಿಲ್ಲ ಜಾಗ ಹೀಗೆ ಪ್ರತಿಯೊಂದು ಸಾಲು ಬಹಳ ಅರ್ಥಪೂರ್ಣವಾಗಿದೆ. ಕೊನೆಯ ಪದ್ಯ “ಸಂಜೆಯೇ” ಈ ಕವಿತೆಯಲ್ಲಿ ಸಂಜೆಯ ಮುಗಿಲಿನ ಅಂದವನ್ನು ವರ್ಣಿಸಿದ್ದಾರೆ. ಕೊನೆಯ ಸಾಲಿನಲ್ಲಿ ಸಂಜೆಯೇ ಅನು ದಿನವೂ ನಸುಗೆಂಪಿನ ರಂಗನು ಹಚ್ಚಿ ಸಜ್ಜಾಗಿ ಯಾರನ್ನು ಹುಡುಕುತ್ತಿರುವೆ ಕದ್ದು ಮುಚ್ಚಿ ಎಂದು ಪ್ರಶ್ನಿಸುತ್ತಾರೆ ಕವಯತ್ರಿ.

ಹೀಗೆ ಲೇಖಕಿ ಶ್ರೀಮತಿ ಶೃತಿ ವಿನಯ್ (ಶೃತಿಪ್ರಿಯ) ಅವರು ಈ ಕವಿತಾ ಸಂಕಲನದಲ್ಲಿ 80 ಕವಿತೆಗಳನ್ನು ಬೇರೆ ಬೇರೆ ವಿಷಯಗಳಲ್ಲಿ ವಿಶಿಷ್ಟ ಸರಳ ಶೈಲಿಯಲ್ಲಿ ಬರೆದಿದ್ದಾರೆ. ಒಂದೊಂದು ಕವಿತೆಯೂ ಕೂಡ ಎಲ್ಲೂ ಬೇಸರವಾಗದಂತೆ ಒಂದೊಂದು ಸಂದೇಶವನ್ನು ನೀಡುತ್ತಿವೆ. ಕವಿತೆಗಳಲ್ಲಿ ಇವರ ಶ್ರಮ ಸಾರ್ಥಕತೆ ಕಂಡಿದೆ. ಶೃತಿವಿನಯ್ ಅವರ ಇನ್ನೂ ಅನೇಕ ಕೃತಿಗಳು ಪ್ರಕಟಗೊಂಡು ಓದುಗರ ಮೆಚ್ಚುಗೆ ಪಡೆಯಲೆಂದು ಹಾರೈಸುತ್ತೇನೆ. ‘ಬೇಲಿ ಸಾಲಿನ ಹೂಗಳು’ ಕೃತಿಗೆ ಅಭಿನಂದನೆ.


  • ಹೆಚ್.ಡಿ. ದಿವಾಕರ್ ಅರಸೀಕೆರೆ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading