ಸೋತವನ ಅಪ್ಪಿತು ಪುಟ್ಟ ಗೆಲುವು, ಮೂಡಿತು ಬಾಳಲ್ಲಿ ಹೊಸ ನಲಿವು…ಕವಿ ನಾಗರಾಜ್ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಕಷ್ಟಗಳ ಮೇಲೊಂದು ಕಷ್ಟ
ನಷ್ಟದ ಜೊತೆಗೊಂದು ನಷ್ಟ
ಬದುಕಾಯಿತು ತುಂಬ ಸಂಕಷ್ಟ
ಎಲ್ಲರೂ ಹೇಳಿದರು ನತದೃಷ್ಟ
ಎಲ್ಲದಕ್ಕೂ ಮೌನವೇ ಉತ್ತರ
ಸುಳಿಯಲಿಲ್ಲ ಯಾರೂ ಹತ್ತಿರ
ಕಾದುಕೊಂಡರು ಒಂದಿಷ್ಟು ಅಂತರ
ಬದಲಾವಣೆ ಎಂದಿಗೂ ನಿರಂತರ
ಸೋಲು ಕಷ್ಟ ನಷ್ಟಕ್ಕೆ ಅಂಜಲಿಲ್ಲ
ಸೋತವನಿಗೆ ಸೋಲು ಹೆದರಿಸುವುದಿಲ್ಲ
ಪ್ರಯತ್ನ ಮಾಡುವುದು ನಿಲ್ಲಲಿಲ್ಲ
ಗೆಲುವಿನ ಬಯಕೆಗೆ ಕೊನೆಯೇ ಇಲ್ಲ
ಸೋತವನ ಅಪ್ಪಿತು ಪುಟ್ಟ ಗೆಲುವು
ಮೂಡಿತು ಬಾಳಲ್ಲಿ ಹೊಸ ನಲಿವು
ಸಿಕ್ಕಿತು ಜೀವನಕ್ಕೊಂದು ತಿರುವು
ಆಮೇಲಿಗದೆಲ್ಲವೂ ಇತಿಹಾಸವು
ಸೋಲನ್ನು ಬಯಸದು ಎಂದೂ ಮನ
ಗೆಲುವಿನ ಕೇಕೆಗೆ ಕಾಯುವುದು ಜೀವನ
ಗೆದ್ದೆತ್ತಿನ ಹಿಂದಿಂದಿಂದೆ ಸುಳಿಯುವರು
ಹಿಂದಿನದೆಲ್ಲ ಮರೆತು ಹೋಗುವರು
ಸೋತವನಿಗೆ ಮನದೊಳಿದೆ ಎಲ್ಲಾ ಸ್ಮರಣೆ
ಆದರೂ ತೋರುವನು ಎಲ್ಲರಿಗೂ ಕರುಣೆ
ಸೋಲು ಗೆಲುವು ಯಾರಿಗೂ ಶಾಶ್ವತವಲ್ಲ
ಶಿಸ್ತು ಬದ್ಧ ಪ್ರಯತ್ನಕ್ಕೆ ಕೈ ಹಿಡಿಯುವುದೆಲ್ಲ
ಬಾಳಿನಲಿ ಬರುವ ತಿರುವ ಅರಿತವರಿಲ್ಲ
ಎಲ್ಲವನ್ನೂ ಅರಿತವರಂತೆ ನಡೆದುಕೊಳ್ಳುವರೆಲ್ಲ
ಬದುಕಿನ ಮರ್ಮವನ್ನು ಬಲ್ಲವನೇ ಬಲ್ಲ
ಸೋತು ಗೆದ್ದವನಿಗೆ ಯಾವುದೇ ಚಿಂತೆಯಿಲ್ಲ
- ನಾಗರಾಜ್ ಜಿ. ಎನ್. ಬಾಡ, ಕುಮಟ
