ಅಂಗೈಯಲ್ಲಿ ಪ್ರಪಂಚ (ಭಾಗ- ೩೧)

ಬಫೆ ಸಿಸ್ಟಮ್ ನಿಂದ ಅನುಕೂಲಗಳಿವೆ, ಕೆಳಗೆ ಕುಳಿತುಕೊಳ್ಳಲಾಗದವರು ನಿಂತುಕೊಂಡು ಅಥವಾ ಬೇರೆಡೆ ಹೋಗಿ ಚೇರ್ ಮೇಲೆ ಕುಳಿತುಕೊಂಡು ತಿನ್ನಬಹುದು. ಯಾವುದೇ ಒಂದು ವ್ಯವಸ್ಥೆಯಿಂದ ಹೆಚ್ಚಿನ ಅನುಕೂಲ ಇದ್ದಾಗ ಅದನ್ನು ಸೂಕ್ತ ರೀತಿಯಲ್ಲಿ ಬಳಸುವುದೂ ಸಹ ನಮ್ಮ ಕೈಯ್ಯಲ್ಲೇ ಇರುತ್ತದೆ.ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ ಬಫೆ ಸಿಸ್ಟಮ್’ ತಪ್ಪದೆ ಮುಂದೆ ಓದಿ…

ಇತ್ತೀಚಿನ ದಿನಗಳಲ್ಲಿ ಬಫೆ ಸಿಸ್ಟಮ್ ಎನ್ನುವುದು ಹೆಚ್ಚು ಜನಪ್ರಿಯವಾಗಿದೆ ಎಂದರೆ ತಪ್ಪಲ್ಲ. ಅದಕ್ಕೆ ಅದರದೇ ಆದಂತಹ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ಕಡಿಮೆ ಸಿಬ್ಬಂದಿಯೊಂದಿಗೆ ಒಮ್ಮೆಲೇ ಹೆಚ್ಚು ಜನರಿಗೆ ಬಡಿಸುವ ವ್ಯವಸ್ಥೆ ಇದಾಗಿದ್ದು ಜಾಗದ ಹಾಗೂ ಸಮಯದ ಉಳಿತಾಯ ಆಗುತ್ತದೆ.

ಹೋಟೆಲ್ಗಳು, ರೆಸ್ಟೋರೆಂಟ್ಗಳಲ್ಲೂ ಈ ವ್ಯವಸ್ಥೆ ಇರುತ್ತದೆ. ಮದುವೆ ಮನೆ, ಆರತಕ್ಷತೆ (ರಿಸೆಪ್ಷನ್) ಸಾರ್ವಜನಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು, ಹುಟ್ಟುಹಬ್ಬ, ಬಸುರಿ ಬಯಕೆ, ನಾಮಕರಣ, ಸಂತೋಷ ಕೂಟಗಳು(ಕೆಲಸ ಸಿಕ್ಕಾಗ, ವಿವಾಹ ವಾರ್ಷಿಕೋತ್ಸವ, ಸ್ನೇಹಿತರು, ಸಂಬಂಧಿಕರು ಒಟ್ಟಿಗೆ ಸೇರಿದಾಗ, ಪ್ರಮೋಷನ್ ದೊರೆತಾಗ ಇತ್ಯಾದಿ) ಸಾಹಿತ್ಯ, ಸಂಗೀತ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ದೇವಸ್ಥಾನಗಳಲ್ಲಿ, ಜಾತ್ರೆಗಳಲ್ಲಿ ಹೀಗೆ ಎಲ್ಲೆಡೆಯೂ ಈ ಬಫೆ ಸಿಸ್ಟಮ್ ಎನ್ನುವುದು ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ ಎನ್ನಬಹುದು.

ಫೋಟೋ ಕೃಪೆ : ಅಂತರ್ಜಾಲ

ಶಿಸ್ತುಬದ್ಧವಾಗಿ ಜೋಡಿಸಿಟ್ಟ ಸ್ವಚ್ಛವಾದ ಪ್ಲೇಟ್ಗಳು, ತಟ್ಟೆಗಳು, ಟಿಶ್ಯೂ ಪೇಪರ್, ಸ್ಪೂನ್, ಫೋರ್ಕ್, ಹೆಚ್ಚಿಟ್ಟ ತರಕಾರಿಗಳು( ಈರುಳ್ಳಿ, ಕ್ಯಾರೆಟ್, ಸೌತೆಕಾಯಿ, ಇತ್ಯಾದಿ)
ಬಿಸಿಬಿಸಿ ಸೂಪ್ಗಳು, ಸ್ನ್ಯಾಕ್ಸ್ , ಪಾನಿಪುರಿ, ಮಸಾಲಪುರಿ, ಬಜ್ಜಿ, ಬೋಂಡಾ, ಎರಡು ಮೂರು ತರದ ಸ್ವೀಟ್ಗಳು, ಸಲಾಡ್ಗಳು, ದಕ್ಷಿಣ ಭಾರತ, ಉತ್ತರ ಭಾರತದ ಆಹಾರ ಪದಾರ್ಥಗಳು, ಐಸ್ ಕ್ರೀಮ್, ಇತ್ಯಾದಿ ಎಲ್ಲವೂ ಕಣ್ಣಿಗೆ ಕಾಣುವಂತೆ ಇರುತ್ತದೆ. ಕೆಲವೆಡೆ ಅಲ್ಲಲ್ಲಿ ಟೇಬಲ್, ಚೇರ್ಗಳನ್ನು ಹಾಕಿರುವುದರಿಂದ ನಿಂತುಕೊಂಡು ತಿನ್ನಲು ಸಾಧ್ಯವಾಗದವರಿಗೂ (ಉದಾಹರಣೆಗೆ ವಯೋವೃದ್ಧರು, ಮಕ್ಕಳು, ಗರ್ಭಿಣಿ ಸ್ತ್ರೀಯರು, ಚಿಕ್ಕ ಮಕ್ಕಳನ್ನು ಎತ್ತಿಕೊಂಡಿರುವವರಿಗೆ, ಕಾಲು ನೋವಿರುವವರಿಗೆ) ಇದು ಕಷ್ಟವೆನಿಸುವುದಿಲ್ಲ. ಇವುಗಳೆಲ್ಲ ಮದುವೆ, ಆರತಕ್ಷತೆ, ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಬಫೆ ಸಿಸ್ಟಮ್ ಗಳಲ್ಲಿ ಸಾಧಾರಣವಾಗಿ ಇರುವಂತಹ ವ್ಯವಸ್ಥೆಗಳು.

ಕೆಲವೆಡೆ ಆಯಾ ಕಾರ್ಯಕ್ರಮಕ್ಕೆ ತಕ್ಕಂತಹ ಊಟ, ತಿಂಡಿಯ ವ್ಯವಸ್ಥೆ ಇರುತ್ತದೆ. ಟಿಫನ್ಗಾದರೆ ಇಡ್ಲಿ, ಉಪ್ಪಿಟ್ಟು, ಶ್ಯಾವಿಗೆ ಬಾತ್, ಕಾಶಿ ಹಲ್ವ, ಕೇಸರಿಬಾತ್ ಇತ್ಯಾದಿ. ಸಂಜೆ ಶುರುವಾಗುವ ಕಾರ್ಯಕ್ರಮಗಳಾದರೆ ಅದಕ್ಕೆ ಮುಂಚೆ ಉಪ್ಪಿಟ್ಟು , ಬಜ್ಜಿ, ಏನಾದರೊಂದು ಸಿಹಿ ಈ ರೀತಿ ಸಿಂಪಲ್ಲಾಗಿ ಜೊತೆಗೆ ಕಾಫಿ/ ಟೀ. ಮಧ್ಯಾಹ್ನಕ್ಕೆ ಬಿಸಿಬೇಳೆ ಬಾತ್, ಮೊಸರನ್ನ, ಒಬ್ಬಟ್ಟು, ರೊಟ್ಟಿ, ಜಿಲೇಬಿ , ಉಪ್ಪಿನಕಾಯಿ ಈ ರೀತಿ ಏನಾದರೂ ನಾಲ್ಕೈದು ರೀತಿಯ ಆಹಾರ ಪದಾರ್ಥಗಳು ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ. ಇಲ್ಲಿ ಇಂಥದ್ದೇ ಎಂಬ ನಿಯಮವೇನಿಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ. ಇನ್ನು ಹೆಚ್ಚಿನ ಸ್ಥಳದ ಅಭಾವವಿದ್ದಲ್ಲಿ ಬೇರಡೆಯಿಂದ ಮಾಡಿ ತಂದು ಬಡಿಸುವುದಕ್ಕೂ ಈ ಬಫೆ ಸಿಸ್ಟಮ್ ಅನುಕೂಲವಾಗಿದೆ.

ಎಲ್ಲರಿಗೂ ತಿಳಿದಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಇದು ಹೆಚ್ಚು ಕಂಡು ಬರುತ್ತದೆ. ಚಿಕ್ಕ ಚಿಕ್ಕ ಗಾಡಿಯಲ್ಲಿ ತಿಂಡಿ ಮಾಡಿ ಮಾರುವವರಿಗೆ ಇದು ಹೆಚ್ಚು ಅನುಕೂಲ. ಅಂತೆಯೇ ಬೆಳಿಗ್ಗೆ ಮುಂಚೆಯೇ ಮನೆಬಿಟ್ಟು ಆಟೋ ಓಡಿಸುವವರಿಗೆ, ಕ್ಯಾಬ್, ಲಾರಿ ಡ್ರೈವರ್ಗಳಿಗೆ, ಪ್ರತಿದಿನ ತಿಂಡಿ ಊಟದ ಸಮಯಕ್ಕೆ ಮನೆಗೆ ಹೋಗಿ ಬರಲು ಸಾಧ್ಯವಾಗದವರಿಗೆ, ಬೇರೆಡೆಯಿಂದ ಬಂದು ರೂಮ್ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ/ಕೆಲಸಕ್ಕೆ ಹೋಗುವವರಿಗೆ, ಮನೆಯಲ್ಲಿ ಮಾಡಿಕೊಳ್ಳಲು ಆಗದವರಿಗೆ/ ಮಾಡಿಕೊಳ್ಳಲು ಬರದವರಿಗೆ ಈ ಸ್ಥಳಗಳಲ್ಲಿ ಕಡಿಮೆ ಬೆಲೆಗೆ ಶುಚಿ ರುಚಿಯೊಂದಿಗೆ ಆಗತಾನೇ ಮಾಡಿದ ಬಿಸಿಬಿಸಿಯಾದ ಇಡ್ಲಿ, ಚಿತ್ರಾನ್ನ, ಪೂರಿ, ಇತ್ಯಾದಿ ತಿಂಡಿಗಳು ಸಿಗುವುದರಿಂದ ಹೆಚ್ಚಿನ ಅನುಕೂಲವಾಗಿದೆ. ಡಸ್ಟ್ಬಿನ್ ಗಳು, ಕುಡಿಯುವ, ಕೈ ತೊಳೆಯುವ ನೀರಿನ ವ್ಯವಸ್ಥೆ, ಸಾರ್ವಜನಿಕರೊಂದಿಗೆ ಉತ್ತಮ ಸಂವಹನೆ, ಕಡಿಮೆ ಬೆಲೆಗೆ ಹೊಟ್ಟೆ ತುಂಬುವಷ್ಟು ಆಹಾರ ಇದೆಲ್ಲವೂ ಇಲ್ಲಿಯ ಮುಖ್ಯ ಅಂಶಗಳು. ಮಾಡುವವರಿಗೆ ಇದು ಹೊಟ್ಟೆ ಪಾಡಾದರೆ ಇದರಿಂದ ಎಷ್ಟೋ ಜನರಿಗೆ ಅನುಕೂಲವಾಗಿರುವುದಂತೂ ಸತ್ಯ. ಪ್ರತಿದಿನದ ಜಂಜಾಟದಲ್ಲಿ ಕೆಲಸದ ಮಧ್ಯದಲ್ಲಿ ತಿಂದು ಬೇಗ ಹೊರಡಬೇಕಾದವರಿಗೆ ಇಂತಹ ಸ್ಥಳಗಳಲ್ಲಿ ಹೆಚ್ಚಿನ ಸಮಯ ಕಾಯುವಂತಹ ಪರಿಸ್ಥಿತಿ ಎದುರಾಗುವುದಿಲ್ಲ.

ದೇವಸ್ಥಾನಗಳಲ್ಲಿ ಹಂಚುವ ಪ್ರಸಾದ ರೂಪದ ಪುಳಿಯೋಗರೆ, ಮೊಸರನ್ನ, ಕಡಲೆ ಹುಸ್ಲಿ ಎಲ್ಲವೂ ಸರತಿ ಸಾಲಿನಲ್ಲಿ ಹಾಕಿಸಿಕೊಂಡು ಅಲ್ಲೇ ಎಲ್ಲಾದರೂ ನಿಂತೋ/ಕೂತೋ ತಿಂದು, ಕೈ ತೊಳೆದು ಹೊರಡುವ ಪದ್ಧತಿಯಾಗಿದೆ. ಅಲ್ಲಿ ಹಂಚುವ ಸಿಬ್ಬಂದಿ ಒಬ್ಬರು ಅಥವಾ ಇಬ್ಬರಾದರೆ ಹಾಕಿಸಿಕೊಳ್ಳುವವರು ನೂರಾರು ಮಂದಿ. ಎಷ್ಟೋ ಜನ ಹರಕೆ ಹೇಳಿಕೊಂಡವರು ಮನೆಯಿಂದ ಮಾಡಿ ತೆಗೆದುಕೊಂಡು ಹೋಗಿ ದೇವಸ್ಥಾನಗಳಲ್ಲಿ ಬರುವ ಭಕ್ತಾದಿಗಳಿಗೆ ಬಡಿಸಿ ಬರುತ್ತಾರೆ. ಇದಕ್ಕೆ ಮುತ್ತುಗದ ಎಲೆಯೋ, ದೊನ್ನೆಯೋ, ಉಪಯೋಗಿಸಿ ಬಿಸಾಡುವಂತಹ ಪೇಪರ್ ಪ್ಲೇಟ್ಗಳು, ಜೊತೆಗೆ ನೀರು, ಕುಡಿಯಲು ಪೇಪರ್ ಕಪ್ ಗಳು ಇಷ್ಟಿದ್ದರೆ ಸಾಕು.

ಫೋಟೋ ಕೃಪೆ : ಅಂತರ್ಜಾಲ

ಸ್ನೇಹಿತರು, ಸಂಬಂಧಿಕರು ಸೇರಿ ಪಿಕ್ನಿಕ್, ಟ್ರಿಪ್ಗಳಿಗೆ ಹೋಗಬೇಕಾದಲ್ಲಿ ಅಥವಾ ಬೇರೆ ಬೇರೆ ಊರುಗಳಿಗೆ/ ಕಾರ್ಯಕ್ರಮಗಳಿಗೆ ಹೋಗಬೇಕಾದಂತಹ ಸಂದರ್ಭಗಳಲ್ಲಿ ಮನೆಯಿಂದ ಮಾಡಿಕೊಂಡೋ ಅಥವಾ ಬೇರೆಡೆಯಿಂದ ಕಟ್ಟಿಸಿಕೊಂಡೋ ಹೋಗಿ ಯಾವುದಾದರೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾದರೂ ಒಂದು ಕಡೆ ವಾಹನ ನಿಲ್ಲಿಸಿಕೊಂಡು ಒಂದಿಬ್ಬರು ಬಡಿಸಿ ಅಥವಾ ಅವರೇ ಹಾಕಿಕೊಂಡು ತಿನ್ನಬಹುದು. ಏಕೆಂದರೆ, ಅಂತಹ ಸ್ಥಳಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುವುದಿಲ್ಲ.

ಅನುಕೂಲಗಳು :

  • ಕೆಳಗೆ ಕುಳಿತುಕೊಳ್ಳಲಾಗದವರು ನಿಂತುಕೊಂಡು ಅಥವಾ ಬೇರೆಡೆ ಹೋಗಿ ಚೇರ್ ಮೇಲೆ ಕುಳಿತುಕೊಂಡು ತಿನ್ನಬಹುದು.
  • ಎಲ್ಲಾ ಆಹಾರ ಪದಾರ್ಥಗಳೂ ಕಣ್ಣಿಗೆ ಕಾಣುವಂತೆ ಇರುವುದರಿಂದ ಬೇಕಾದದ್ದನ್ನು, ಬೇಕಾದಷ್ಟು ಹಾಕಿಸಿಕೊಂಡು ತಿನ್ನಬಹುದು.
  • ಮೊದಲು ಊಟಕ್ಕೆ ಕುಳಿತವರ ಊಟ ಮುಗಿಯುವ ಮುಂಚೆ ಅವರ ಹಿಂದೆ ಹೋಗಿ ಕಾದು ನಿಲ್ಲುವ ಪರಿಸ್ಥಿತಿ ಬರುವುದಿಲ್ಲ.
  • ಕಡಿಮೆ ಬಡ್ಜೆಟ್ ನಲ್ಲಿ ಮಾಡುವವರಿಗೂ ಇದು ಹೆಚ್ಚು ಅನುಕೂಲ.
  • ಸಮಯದ ಉಳಿತಾಯ.
  • ಕಡಿಮೆ ಜಾಗದಲ್ಲಿ ಹೆಚ್ಚು ಸಂಖ್ಯೆಯ ಜನರು ಒಟ್ಟಿಗೇ ಆಹಾರ ಸೇವಿಸಬಹುದು.
  • ದೂರದಿಂದ ಕಾರ್ಯಕ್ರಮಗಳಿಗೆ ಬಂದವರಿಗೆ ರಾತ್ರಿ ಬೇಗ ಊಟ ಮುಗಿಸಿ ಹೊರಡಬಹುದು.
  • ತಮಗೆ ಬೇಕಾದವರೊಡನೆ, ಅಪರೂಪಕ್ಕೆ ಸಿಕ್ಕಿದವರೊಂದಿಗೆ ಮಾತನಾಡಿಕೊಂಡು ಆರಾಮಾಗಿ ಹರಟೆ ಹೊಡೆಯುತ್ತ ತಿನ್ನಬಹುದು.
  • ಬೇಕಾದದ್ದನ್ನು ಮಾತ್ರ ಹಾಕಿಸಿಕೊಳ್ಳುವುದರಿಂದ ಆಹಾರ ವೇಸ್ಟ್ ಆಗುವುದಿಲ್ಲ.

ಬಫೆ ಸಿಸ್ಟಮ್ ನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ತಿಂದು, ಕುಡಿದು, ಅಲ್ಲಲ್ಲೇ ನೀರಿನ ಬಾಟಲಿಗಳನ್ನು, ಪೇಪರ್ ಪ್ಲೇಟ್ಗಳನ್ನು, ಪೇಪರ್ ಲೋಟಗಳನ್ನು, ಉಳಿದ ಆಹಾರ ಪದಾರ್ಥಗಳನ್ನು , ಖಾಲಿಯಾದ ಪ್ಲಾಸ್ಟಿಕ್ ಕವರ್ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಹಾಗೆ ಮಾಡದೇ ಅದಕ್ಕೆಂದೇ ಇಟ್ಟಿರುವಂತಹ ಡಸ್ಟ್ಬಿನ್ ಗಳಲ್ಲಿ ಹಾಕುವುದು ಸೂಕ್ತ. ಡಸ್ಟ್ಬಿನ್ ವ್ಯವಸ್ಥೆ ಇಲ್ಲದಿದ್ದಲ್ಲಿ ತಾವೇ ಒಂದು ಕವರ್ನಲ್ಲಿ ಇಟ್ಟುಕೊಂಡು ಹೋಗಿ ಅದಕ್ಕೆಂದೇ ಇರುವ ಜಾಗದಲ್ಲಿ ಬಿಸಾಡುವುದು ಒಳ್ಳೆಯದು. ಏಕೆಂದರೆ, ಮುಗ್ಧ ಪ್ರಾಣಿಗಳು ಇದನ್ನು ತಿನ್ನಲು ಹೋಗಿ ನರಳಿ ಪ್ರಾಣ ಬಿಟ್ಟ ಉದಾಹರಣೆಗಳು ಬೇಕಾದಷ್ಟಿವೆ. ಸ್ವಚ್ಛತೆ ಇಲ್ಲದೇ ಆ ಪ್ರದೇಶಗಳಲ್ಲಿ ವಾಸನೆಯ ಜೊತೆಗೆ ಸೊಳ್ಳೆಗಳು ಜಾಸ್ತಿಯಾಗಿ ಖಾಯಿಲೆ ಹರಡುವ ಸಾಧ್ಯತೆಯೂ ಇದೆ. ವಾಹನ ಸವಾರರು ತಿಳಿಯದೇ ಅದರ ಮೇಲೆ ಗಾಡಿ ಓಡಿಸಿ ಸ್ಕಿಡ್ ಆಗಿ ಬೀಳುವ ಸಾಧ್ಯತೆಗಳೂ ಇದೆ. ಹಾಗಾಗಿ ಇದನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿಯೂ ಹೌದು.

ಯಾವುದೇ ಒಂದು ವ್ಯವಸ್ಥೆಯಿಂದ ಹೆಚ್ಚಿನ ಅನುಕೂಲ ಇದ್ದಾಗ ಅದನ್ನು ಸೂಕ್ತ ರೀತಿಯಲ್ಲಿ ಬಳಸುವುದೂ ಸಹ ನಮ್ಮ ಕೈಯ್ಯಲ್ಲೇ ಇರುತ್ತದೆ. ಈ ನಿಟ್ಟಿನಲ್ಲಿ ಮುಂದೆ ಸಾಗೋಣ ಎಂಬ ಆಶಯದೊಂದಿಗೆ.


  • ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading