ಅಮ್ಮ ಜಡೆ ಹೆಣೆದರೆ ಅದನ್ನು ಬಿಚ್ಚುತ್ತಿದ್ದುದು ಮಾರನೆಯ ದಿನ ಶಾಲೆಗೆ ಹೋಗಲು ತಲೆಬಾಚುವಾಗಲೇ. ಅಮ್ಮ ರಿಬ್ಬನ್ ಅನ್ನು ಮೇಲೆತ್ತಿ ಕಟ್ಟಲು ಹೋದಾಗ ರಿಬ್ಬನ್ನೇ ಕೈಗೆ ಬರುತ್ತಿತ್ತು. ತಕ್ಷಣ ಕಿಸಕ್ಕನೇ ನಕ್ಕು ಬೈಸಿಕೊಳ್ಳುತ್ತಿದ್ದೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ ಜಡೆ ಎಳೆಯೋ ಮುನ್ನ…’ ತಪ್ಪದೆ ಮುಂದೆ ಓದಿ…
ಜಡೆ ಎಳೆಸಿಕೊಂಡ, ಹೆಣೆಸಿಕೊಂಡ, ಹೆಣೆದ ಮೂರು ಅನುಭವವೂ ನನಗಿದೆ. ಮೊದಲನೆಯದು (ಎಳೆಸಿಕೊಂಡ ) ನೀವಂದುಕೊಂಡಂತೆ ಅಲ್ಲ ಮಾರಾಯ್ರೆ, ಅದನ್ನು ಮುಂದೆ ಹೇಳುವೆ (ಬರೆಯುವೆ ).
ಆಗೆಲ್ಲಾ ಪ್ರತಿದಿನ ಎರಡು ಜಡೆಯನ್ನು ಹೆಣೆದು ರಿಬ್ಬನ್ ನಿಂದ ಅದನ್ನು ಮೇಲಕ್ಕೆತ್ತಿ ಕಟ್ಟಿಕೊಂಡೇ ಶಾಲೆಗೆ ಹೋಗಬೇಕಿತ್ತು. ಮನೆಯ ಅಂಗಳದಲ್ಲಿ ಬೆಳಗಿನ ಎಳೆಬಿಸಿಲಿಗೆ ಚಾಪೆ ಹಾಸಿ ಅದರ ಮೇಲೆ ಕುಳಿತು ಅಮ್ಮನಿಂದ ಜಡೆಹೆಣೆಸಿಕೊಳ್ಳುತ್ತಿದ್ದೆ. ಬೆಳಿಗ್ಗೆ ಮತ್ತು ಸಂಜೆ ಓದುವುದು, ಬರೆಯುವುದನ್ನೂ ಸಹ ಅಂಗಳದಲ್ಲೇ ಚಾಪೆಯ ಮೇಲೆ ಕುಳಿತು ಮಾಡುವುದು ರೂಢಿ. ಮನೆಯ ಸುತ್ತಮುತ್ತ ಹಸಿರು ಕಾಡು, ಕೋಗಿಲೆಗಳ ಗಾನ, ಹಕ್ಕಿಗಳ ಚಿಲಿಪಿಲಿ ಎಲ್ಲವೂ ಮನಸ್ಸಿಗೆ ಬಹಳ ಆನಂದ ನೀಡುತ್ತಿತ್ತು. ಅಮ್ಮ ತಲೆಗೆ ಎಣ್ಣೆ ಹಚ್ಚಿ ಮಧ್ಯಕ್ಕೆ, ಕೆಲವೊಮ್ಮೆ ಎಡಬದಿಗೆ ಬೈತಲೆ ತೆಗೆದು ಎರಡು ಜಡೆ ಹೆಣೆದು ರಿಬ್ಬನ್ ನಿಂದ ಮೇಲೆತ್ತಿ ಕಟ್ಟುತ್ತಿದ್ದರು. ಆಗೆಲ್ಲಾ ಅಮ್ಮ, ತನ್ನ ಬಾಲ್ಯದ ದಿನಗಳ ಸವಿ ನೆನಪುಗಳನ್ನೋ , ಕಥೆಗಳನ್ನೋ ಹೇಳುತ್ತಿದ್ದರು. ಏಕೆಂದರೆ, ಹಳ್ಳಿಯ ಮನೆಯ ಕೆಲಸದ ಜೊತೆಗೆ ಅವರಿಗೆ ನಮ್ಮೊಂದಿಗೆ ಕುಳಿತು ಹರಟೆ ಹೊಡೆಯುವಷ್ಟು ಬೇರೆ ಸಮಯವೂ ಸಿಗುತ್ತಿರಲಿಲ್ಲ.
ಒಮ್ಮೆ ‘ಗಡ್ಡ ಎಳೆದವನಿಗೆ ಮಿಠಾಯಿ ‘ಎಂಬ ಪಾಠದ ನೆನಪನ್ನು ಮಾಡಿಕೊಂಡು ಅಮ್ಮ ಜಡೆ ಹೆಣೆದು ಮುಗಿಸಿದ ತಕ್ಷಣ ಪ್ರೀತಿಯಿಂದ ಅಮ್ಮನ ಗಲ್ಲವನ್ನು ಎಳೆದು, ‘ಗಡ್ಡ ಎಳೆದವನಿಗೆ ಮಿಠಾಯಿ ‘ ಎಂದಿದ್ದೆ. ಅಮ್ಮ ನಿಜವಾಗಲೂ ಅಜ್ಜನ ಮನೆಯಿಂದ ಕಳುಹಿಸಿದ್ದ ಕೇಸರಿ ಮಿಶ್ರಿತ ಕೆಂಪು ಬಣ್ಣದ ಮಿಠಾಯಿಯನ್ನು ನೀಡಿ ಬಾಯಿ ಸಿಹಿ ಮಾಡಿದ್ದಳು. ತಮ್ಮಂದಿರ ಮದುವೆಯೆಂದು ಅಮ್ಮ ಏನಾದರೂ ತವರಿಗೆ ಹೋದರೆ, ಅಪ್ಪ ಜಡೆ ಹೆಣೆಯುತ್ತಿದ್ದರು. ಅದೋ ಅಲ್ಲಲ್ಲೇ ‘ಚುಪ್ಪಚುಪ್ಪ’ (ಜಡೆ ಹೆಣೆದಲ್ಲಿಂದ ಸ್ವಲ್ಪ ಸ್ವಲ್ಪ ಕೂದಲು ಬಿಟ್ಟುಕೊಂಡು ಜಡೆಯಿಂದ ಆಚೆ ಬಂದಿರುವುದು) ಬಂದಿರುತ್ತಿತ್ತು. ಕೆಲವೊಮ್ಮೆ ರಿಬ್ಬನ್ ಅನ್ನು ಮೇಲೆತ್ತಿ ಕಟ್ಟಲು ಹೋದಾಗ ರಿಬ್ಬನ್ನೇ ಕೈಗೆ ಬರುತ್ತಿತ್ತು. ತಕ್ಷಣ ಕಿಸಕ್ಕನೇ ನಕ್ಕು ಬೈಸಿಕೊಳ್ಳುತ್ತಿದ್ದೆ. ಆಮೇಲೆ ನನಗೆ ತಿಳಿದಂತೆ ಜಡೆ ಹೆಣೆದುಕೊಂಡು ಶಾಲೆಗೆ ಹೋಗುತ್ತಿದ್ದೆ. ಅಮ್ಮ ಜಡೆ ಹೆಣೆದರೆ ಅದನ್ನು ಬಿಚ್ಚುತ್ತಿದ್ದುದು ಮಾರನೆಯ ದಿನ ಶಾಲೆಗೆ ಹೋಗಲು ತಲೆಬಾಚುವಾಗಲೇ. ಒಂಚೂರೂ ಕೆದರದೇ ಅಷ್ಟು ಚೆಂದ ಇರುತ್ತಿತ್ತು. ಇನ್ನು ಅಮ್ಮನ ತಿಂಗಳ ಮೂರು ದಿನದ ರಜೆಯಲ್ಲೂ ಜಡೆ ಹೆಣೆಯುವ ಪರಿಪಾಟಲು ಬೇಡ. ಮುಂದೆ ನಾನೇ ಜಡೆ ಹೆಣೆದುಕೊಳ್ಳುವಾಗ, ಜಡೆ ತುದಿಗೆ ರಿಬ್ಬನ್ನು ಗಂಟುಹಾಕಿ, ರಿಬ್ಬನ್ನನ್ನೇ ಸುಮ್ಮನೆ ಹೆಣೆದ ರೀತಿ ಮುಂದುವರೆಸಿ ಮತ್ತೆ ಅದಕ್ಕೆ ಗಂಟು ಹಾಕಿ ಆಮೇಲೆ ಮೇಲಕ್ಕೆತ್ತಿ ಕಟ್ಟಿಕೊಳ್ಳುತ್ತಿದ್ದೆ. ಹೇಗೂ ಬರೀ ರಿಬ್ಬನ್ನನ್ನು ಹೆಣೆದ ಭಾಗ ಅಡಿಯ ಭಾಗಕ್ಕೆ ಬರುತ್ತದೆ. ನಮ್ಮ ಜಡೆ ಇನ್ನೂ ಸ್ವಲ್ಪ ಉದ್ದ ಕಾಣಲಿ ಎಂಬುದು ನಮ್ಮ ಉದ್ದೇಶ. ಆಗ ಜೊತೆಗಿನವರೆಲ್ಲಾ ಒಮ್ಮೊಮ್ಮೆ ಹೀಗೇ ಮಾಡುತ್ತಿದ್ದುದು.
ಇನ್ನು ಅಜ್ಜನ ಮನೆಯಲ್ಲಿ ಅಜ್ಜನೇ ನನಗೆ ಜಡೆ ಹೆಣೆಯುತ್ತಿದ್ದುದು. ತಲೆಗೆ ಎಣ್ಣೆ ಹಚ್ಚಿ, ಮಧ್ಯೆ ಬೈತಲೆ ತೆಗೆದು ಒಂದು ಜಡೆ ಹೆಣೆಯುತ್ತಿದ್ದರು. ನಂತರ ಮುಡಿಯಲು ಯಾವುದಾದರೊಂದು ಹೂವು ಇದ್ದೇ ಇರುತ್ತಿತ್ತು. ಮಲ್ಲಿಗೆಯ ಕಾಲದಲ್ಲಂತೂ ತಟ್ಟೆ ತುಂಬಾ ಹೂವು. ಮೊಳಗಟ್ಟಲೆ ಹೂವು ಮುಡಿಯುತ್ತಿದ್ದ ಕಾಲವೂ ಇತ್ತು. ಆಗ ಅದೇ ಸಂಭ್ರಮ, ಖುಷಿ.
ಇನ್ನು ಜಡೆ ಎಳೆಸಿಕೊಂಡ ಕಥೆ. ಶಾಲೆಯಲ್ಲಿ ಒಬ್ಬಳು ಗೆಳತಿ ಇನ್ನೊಬ್ಬಳೊಂದಿಗೆ ಜಗಳವಾಡುವಾಗ ಅವಳ ಜಡೆ ಎಳೆದಿದ್ದಳು. ಆದರೂ ಅವಳು ನನಗೇನೂ ನೋವಾಗಲಿಲ್ಲ ಎಂದು ಫೋಸು ಕೊಟ್ಟಿದ್ದಳು. ಆಗ ಎಲ್ಲರೂ ಅವಳಿಗೆ ಜಡೆ ಎಳೆದರೆ ನೋವೇ ಆಗುವುದಿಲ್ಲವಂತೆ ಎನ್ನುತ್ತಾ ಮತ್ತೆ ಮತ್ತೆ ಜಡೆ ಎಳೆಯಲು ಪ್ರಾರಂಭಿಸಿದರು. ಆಗ ಇನ್ನೊಬ್ಬಳು ನನಗೂ ನೋವಾಗುವುದಿಲ್ಲ ಎಂದಳು. ಹೀಗೆ ಎಲ್ಲರೂ ನನಗೂ ನೋವಾಗುವುದಿಲ್ಲ , ನನಗೂ ನೋವಾಗುವುದಿಲ್ಲ ಎಂದು ಹೇಳುತ್ತಾ ಒಬ್ಬರ ಜಡೆ ಒಬ್ಬರು ಎಳೆದಾಗ ಕತ್ತು ಬಗ್ಗಿಸಿ ಅವರ ಹತ್ತಿರಕ್ಕೆ ಹೋಗುತ್ತಿದ್ದೆವೇ ಹೊರತು ಯಾರೂ ನೋವಾಯಿತೆಂದು ಒಪ್ಪಿಕೊಳ್ಳುತ್ತಿರಲಿಲ್ಲ. ನಿಜವಾಗಲೂ ನೋವಾಗಿ ಎಲ್ಲರ ಕಣ್ಣುಗಳಲ್ಲೂ ನೀರು ತುಂಬಿದ್ದರೂ ನೋವಾಗುತ್ತಿದೆಯೆನ್ನಲು ಏನೋ ಅವಮಾನ. ಜಟ್ಟಿ ಮಣ್ಣಿಗ್ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ ಎಂಬಂಥಾ ಕತೆ ನಮ್ಮದು.

ಫೋಟೋ ಕೃಪೆ : ಅಂತರ್ಜಾಲ
ನನ್ನ ಮಕ್ಕಳಿಗೆ ಜಡೆ ಹೆಣೆಯುವಾಗ ಬಹಳ ಖುಷಿಯಾಗುತ್ತಿತ್ತು. ಆದರೆ ಅವರಿಗೆ ಎಣ್ಣೆ ಹಚ್ಚಿ, ರಿಬ್ಬನ್ ಕಟ್ಟಿ ಇದಕ್ಕೆಲ್ಲಾ ಅವಕಾಶವಿರಲಿಲ್ಲ. ಬೈತಲೆ ತೆಗೆದು ಎರಡು ಜಡೆ ಹೆಣೆದು ದೃಷ್ಟಿ ತೆಗೆಯುತ್ತಿದ್ದೆ. ಇನ್ನೊಂದು ವಿಷಯ ನಿಮ್ಮೊಡನೆ ಹಂಚಿಕೊಳ್ಳಬೇಕೆಂಬ ಆಸೆ ಈ ಜಡೆ ಎಳೆಯುವುದರ ಬಗ್ಗೆ. ಅಕ್ಕನ ಜಡೆ ಎಳೆದು ತಮ್ಮ ತುಂಬಾ ಗೋಳು ಹೊಯ್ದುಕೊಳ್ಳುತ್ತಿದ್ದ. ಅವಳಿಗೆ ನೋವಾಗಿ ಕಷ್ಟಪಡುತ್ತಾ ಬಿಡೋ, ಬಿಡೋ, ಎಳೀಬೇಡ ಎನ್ನುತ್ತಿದ್ದಳು. ಆಗ ನೋಡುತ್ತಿದ್ದವರೊಬ್ಬರು ಅವಳಿಗೆ ನೀನೂ ಅವನ ಕೂದಲನ್ನು ಹಿಡಿದು ಜೋರಾಗಿ ಎಳಿ ಎಂದು ಹೇಳಿಕೊಟ್ಟರು. ಆಗ ಆ ಹುಡುಗಿ, ಇಲ್ಲ ಪಾಪ, ಅವನು ನನ್ನ ತಮ್ಮ, ನನಗಿಂತ ಚಿಕ್ಕವನು, ಅವನಿಗೆ ತಿಳಿಯುವುದಿಲ್ಲ ಎಂದಳು. ಇಲ್ಲಿ ನಾನು ಹೇಳಹೊರಟಿರುವುದು ಆ ಹುಡುಗಿಯ ಮನೆಯಲ್ಲಿ ಅವರ ಹಿರಿಯರು ಅವಳಿಗೆ ಕಲಿಸಿದ ಸಂಸ್ಕಾರ, ಪ್ರೀತಿ-ವಿಶ್ವಾಸ ಸಂಬಂಧದ ಅರ್ಥವನ್ನು. ಬೇರೆಯವರು ಏನಾದರೂ ಕೆಟ್ಟದ್ದನ್ನು ಹೇಳಿಕೊಟ್ಟರೂ ಅದರಂತೆ ಮಾಡದೇ ತಮ್ಮನನ್ನು ಪ್ರೀತಿಯಿಂದ ನೋಡಿದ ಆ ಹುಡುಗಿಯ ನಡತೆ ನನಗೆ ಬಹಳ ಮೆಚ್ಚುಗೆಯಾಯಿತು.
ಇನ್ನೊಂದ್ಸಲ ಚಿಕ್ಕ ಮಕ್ಕಳಿಬ್ರು ಜಗಳ ಆಡುವಾಗ ಒಬ್ಬರ ಕೂದಲನ್ನು ಇನ್ನೊಬ್ಬರು ಹಿಡ್ಕೊಂಡು ಎಳೀತಾ ಇದ್ರು. ಇಬ್ರಿಗೂ ನೋವಂತೂ ಆಗ್ತಿತ್ತು. ಆದ್ರೂ ಯಾರೂ ಬಿಡಕ್ ತಯಾರಿಲ್ಲ. ಬಿಡು, ಬಿಡು ಅಂದ್ರೆ, ನೀನ್ ಬಿಟ್ರೆ ನಾನ್ ಬಿಡ್ತೀನಿ ಅಂತ ಇಬ್ಬರದೂ ಕರಾರು. ಅಂತೂ ಇಂತೂ ಕೊನೇಗೊಂದ್ ಒಪ್ಪಂದಕ್ ಬಂದು ವನ್, ಟು, ತ್ರಿ ಹೇಳಿ ಇಬ್ಬರೂ ಒಟ್ಟಿಗೇ ಬಿಟ್ಟದ್ದಾಯಿತು. ನಂತರ ಗೊತ್ತಾಯ್ತು, ಇದು ಬೇಕೆಂದೇ ಅವರಿಬ್ಬರೂ ಆಗಾಗ ಆಡುತ್ತಿದ್ದ ಒಂದು ರೀತಿಯ ಮಕ್ಕಳಾಟ ಎಂದು.
ಪ್ರಾಥಮಿಕ ಶಾಲೆಯಲ್ಲಿ ಒಂದು ಹುಡುಗ, ಪಕ್ಕದಲ್ಲಿ ಕೂತಿದ್ದ ಹುಡುಗಿಯ ಪುಟ್ಟ ಜಡೆಯನ್ನು ಆಗಾಗ ಎಳೆಯುತ್ತಿದ್ದ. ಆ ಹುಡುಗಿ ಏ ಬಿಡೋ, ನೋವಾಗುತ್ತೆ ಅಂತ ಎಷ್ಟ್ ಹೇಳಿದ್ರೂ ಮತ್ತೆ ಮತ್ತೆ ಜಡೆ ಎಳೆದು ಖುಷಿಪಡುತ್ತಿದ್ದ. ಶಿಕ್ಷಕರು ಬಂದು, ಬಿಡು ಹಾಗೆಲ್ಲ ಎಳೀಬಾರ್ದು, ಅವ್ಳಿಗ್ ನೋವಾಗುತ್ತೆ ಅಂದ್ರು . ಮತ್ತೊಂದ್ಸಲ ಎಳ್ದು, ಎಳ್ಯಕ್ ಚೆನಾಗಿದೆ ಎಂದು ನಗುತ್ತಾ ಹೇಳಿದ ಆ ಹುಡುಗನ ಮುಗ್ಧತೆಗೆ ಏನು ಹೇಳಬೇಕೋ ತಿಳಿಯದೇ ಕೊನೆಗೆ ಇಬ್ಬರನ್ನೂ ಬೇರೆ ಬೇರೆ ಕಡೆ ಕೂರಿಸಿದ್ದಾಯಿತು.
ಮೂರು ಕಾಲಿನ ಜಡೆ (ಮಾಮೂಲಿ ಜಡೆ), ಒಂದು ಜಡೆ, ಎರಡು ಜಡೆ, ತಲೆ ತುಂಬಾ ಪುಟ್ಟ ಪುಟ್ಟ ಜಡೆಗಳು, ತಿರುಗಾಮುರುಗಾ ಜಡೆ, ಮೊಗ್ಗಿನ ಜಡೆ , ತುದಿಗೆ ಗೊಂಡೆ, ನಾಲ್ಕು ಕಾಲಿನ ಜಡೆ, ಫ್ರೆಂಚ್ ಪ್ಲೇಟ್, ಹೀಗೆ ತರಾವರಿ ಜಡೆಗಳು.

ಫೋಟೋ ಕೃಪೆ : ಅಂತರ್ಜಾಲ
ನೀರ್ಜಡೆ : ಇದು ಹಿಂದೆಲ್ಲಾ ತಲೆಗೆ ಸ್ನಾನ ಮಾಡಿದ ದಿನ ಹಾಕಿಕೊಳ್ಳುತ್ತಿದ್ದದ್ದು ರೂಢಿ. ಮಧ್ಯದಿಂದ ಸ್ವಲ್ಪ ಕೂದಲು, ಕಿವಿ ಹತ್ತಿರ ಎರಡು ಬದಿಯಿಂದ ಸ್ವಲ್ಪ ಕೂದಲು ತೆಗೆದು ಮೂರು ಕಾಲು ಮಾಡಿಕೊಂಡು ಮಧ್ಯಕ್ಕೆ ಚಿಕ್ಕದಾಗಿ ಹೆಣೆಯುತ್ತಿದ್ದ ಜಡೆ. ನಂತರ ಉಳಿದ ಕೂದಲನ್ನು ಸ್ವಲ್ಪ ಬಿಟ್ಟು ತುದಿಗೆ ಒಂದು ರಬ್ಬರ್ ಬೆಂಡನ್ನೋ , ರಿಬ್ಬನ್ನನ್ನೋ ಹಾಕಿ ಕಟ್ಟುತ್ತಿದ್ದರು. ಆಗೆಲ್ಲ ಎಲ್ಲರ ಮನೆಯಲ್ಲಿ ಹೇರ್ ಡ್ರೈಯರ್ ಇರಲಿಲ್ಲ. ಬೆಳಿಗ್ಗೆ ಮುಂಚೆ ಅಷ್ಟೊಂದು ಬಿಸಿಲೂ ಇರುತ್ತಿರಲಿಲ್ಲ. ಸ್ನಾನದ ಪಂಚೆಯಲ್ಲಿ (ಇದೊಂದು ಟವಲ್ ತರಾನೆ, ಚೆನ್ನಾಗಿ ನೀರನ್ನು ಹೀರಿಕೊಳ್ಳುತ್ತದೆ) ಚೆನ್ನಾಗಿ ಒರೆಸಿ ಅದನ್ನೇ ತಲೆಗೆ ಕಟ್ಟಿ, ಸ್ವಲ್ಪ ಹೊತ್ತಿನ ನಂತರ ಈ ರೀತಿ ನೀರ್ಜಡೆ ಹಾಕುತ್ತಿದ್ದರು. ಬಿಗಿಯಾಗಿ ಹೆಣೆಯದೆ ಸ್ವಲ್ಪ ಕೂದಲನ್ನು ಹಾಗೇ ಸಡಿಲವಾಗಿ ಬಿಟ್ಟಿರುತ್ತಿದ್ದುದರಿಂದ ಚೆನ್ನಾಗಿ ಒಣಗುತ್ತಿತ್ತು. ಆಗೆಲ್ಲ ಈಗಿನ ತರ ದಿನಬೆಳಗಾದರೆ ತಲೆಗೆ ಸ್ನಾನ ಮಾಡುತ್ತಿರಲಿಲ್ಲ. ವಾರದಲ್ಲಿ ಒಂದು, ಹೆಚ್ಚೆಂದರೆ ಎರಡು ದಿನ. ಅದರಲ್ಲೂ ಮಕ್ಕಳಿಗಂತೂ ಭಾನುವಾರ ಅಂದ್ರೆ ತಲೆಗೆ ಸ್ನಾನ ಅಂತಲೇ ಅರ್ಥ. ಏಕೆಂದರೆ, ಬೇರೆ ದಿನ ಶಾಲೆಗೆ ಎರಡು ಜಡೆ ಹೆಣೆದುಕೊಂಡೇ ಹೋಗಬೇಕಿತ್ತು. ಬೇಗ ಕೂದಲು ಒಣಗುತ್ತಿರಲಿಲ್ಲ, ಅಷ್ಟು ಸಮಯವೂ ಇರುತ್ತಿರಲಿಲ್ಲ.

ಫೋಟೋ ಕೃಪೆ : ಅಂತರ್ಜಾಲ
ಪರ್ಸ್ ಜಡೆ : ಇದನ್ನು ಅಮ್ಮ ಹಾಕುತ್ತಿದ್ದರು. ಮಧ್ಯ ಬೈತಲೆ ತೆಗೆದು ಬಲಬದಿಯಿಂದ ಚಿಕ್ಕದಾದ ಒಂದು ಜಡೆ ಹೆಣೆದು ಅದನ್ನು ಎಡಬದಿಗೆ ತಂದು ಅಲ್ಲಿಂದ ಪ್ರತಿಬಾರಿ ಹೆಣೆಯುವಾಗಲೂ ಸ್ವಲ್ಪ ಸ್ವಲ್ಪ ಕೂದಲನ್ನು ಸೇರಿಸುತ್ತಾ ಬರುತ್ತಿದ್ದರು. ಕೊನೆಗೆ ಅದು ಪರ್ಸಿನ ಆಕಾರಕ್ಕೆ (U ಶೇಪ್) ಬರುತ್ತಿತ್ತು. ಅದರ ತುದಿಗೆ ರಿಬ್ಬನ್ ಕಟ್ಟಿ ಹೆಣೆದು, ಬಲಬದಿಯಲ್ಲಿ ಮೊದಲು ಹೆಣೆದಿದ್ದ ಜಡೆಯ ಬುಡಕ್ಕೆ ಸೇರಿಸಿ ಕಟ್ಟುತ್ತಿದ್ದರು. ನಂತರ ಎಡಬಾಗದ ಜಡೆಗೂ ಇನ್ನೊಂದು ರಿಬ್ಬನ್ ಹಾಕಿ ಕಟ್ಟುತ್ತಿದ್ದರು. ಒಂದು ಕಡೆ ರಿಬ್ಬನ್ ಇದ್ದು ಇನ್ನೊಂದು ಕಡೆ ಹಾಗೇ ಬಿಟ್ಟರೆ ಚೆನ್ನಾಗಿರುವುದಿಲ್ಲವೆಂದು.
ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮೊಗ್ಗಿನ ಜಡೆ ಹಾಕುವುದು ರೂಢಿ. ಆಗೆಲ್ಲಾ ಹೆಣ್ಣು ಮಕ್ಕಳ ಸಂಭ್ರಮ ದುಪ್ಪಟ್ಟು. ಜಡೆಬಿಲ್ಲೆ, ಗೊಂಡೆ, ಮುತ್ತಿನ ಜಡೆ ( ಪೋಣಿಸಿದ ಮುತ್ತುಗಳ ಒಳಗೆ ಜಡೆ ಬರುವಂತೆ) , ಮಲ್ಲಿಗೆ, ಕನಕಾಂಬರ ಸುತ್ತಿದ ಜಡೆ, ಮೇಲೆ ತುರುಬು, ಅದಕ್ಕೂ ಸುತ್ತಿದ ಮಲ್ಲಿಗೆ ದಂಡೆ ಹೀಗೆ ನಾನಾ ವಿಧಗಳು. ಇದು ಹೆಣ್ಣಿಗೆ ತನ್ನ ಜೀವನದ ಖುಷಿಯ ಕ್ಷಣಗಳ ಸೆರೆಯಲ್ಲಿ ಸೇರುವಂಥದ್ದು.
ಹಿಂದೆಲ್ಲ ಉದ್ದದ ಎರಡು ಜಡೆ ಹಾಕಿಕೊಂಡು ಪುಸ್ತಕ ಎದೆಗವಚಿಕೊಂಡು ಹೋಗುವುದೇ ಒಂದು ರೀತಿಯ ಟ್ರೆಂಡ್ ಆಗಿತ್ತೆಂದರೆ ತಪ್ಪಲ್ಲ. ಸಿನಿಮಾದಲ್ಲಂತೂ ಜಡೆ ಎಳೆಯುವುದು, ಅದರ ತುದಿಯನ್ನು ಕೈ ಬೆರಳಿಗೆ ಸುತ್ತಿಕೊಂಡು ಆಟವಾಡುವುದು, ಜಗಳ ಮಾಡುವಾಗ ಮುಂದಿರುವ ಜಡೆಯನ್ನು ಬೀಸಿ ಎತ್ತಿ ಒಮ್ಮೆ ಹಿಂದಕ್ಕೆ ಎಸೆಯುವುದು ಇದೆಲ್ಲಾ ಮಹಿಳಾಮಣಿಗಳ ಗತ್ತಿನ ಪ್ರತೀಕವಾಗಿತ್ತು. ಅಲ್ವಾ ಮತ್ತೆ, ಅಷ್ಟಷ್ಟುದ್ದ ಜಡೆ ಇದ್ಮೇಲೆ ಇಷ್ಟಾದ್ರು ….
ಇನ್ನು ಯಾರನ್ನಾದ್ರು ಹಿಡೀಬೇಕೂಂತ ಓಡ್ತಿದ್ರೆ, ಅವ್ರು ಸಿಗ್ದೆದ್ರೂ ಅವ್ರ್ ಜಡೆ ಅಂತೂ ಸಿಗುತ್ತೆ. ಆಗ ಅವ್ರೂ ಸಿಕ್ದಂಗೆ ಅಂದ್ಕೊಂಡ್ರೆ ಅಲ್ಲೂ ಕೆಲವೊಮ್ಮೆ ಲೆಕ್ಕಾಚ…
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
-
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಅಂಗೈಯಲ್ಲಿ ಪ್ರಪಂಚ ‘ಕಾಡುವ ಶಾಪ’ (ಭಾಗ- ೨೬)
- ಅಂಗೈಯಲ್ಲಿ ಪ್ರಪಂಚ ‘ಇರಲಿ ನಿಮ್ಮ ಸ್ಪಂದನೆ’ (ಭಾಗ- ೨೭)
- ಅಂಗೈಯಲ್ಲಿ ಪ್ರಪಂಚ ‘ಬಾಲ್ಯ ಕಸಿಯುವ ಮುನ್ನ’’ (ಭಾಗ- ೨೮)
- ಅಂಗೈಯಲ್ಲಿ ಪ್ರಪಂಚ ‘ಆಯಮ್ಮನೆಂಬ ಅಮ್ಮ’ (ಭಾಗ- ೨೯)
- ಹಿಂದಿನ ಸಂಚಿಕೆಗಳು :
- ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.
