ಭವಸಂಕಷ್ಟವನ್ನು ನೀಗಿಸುವ ಕರುಣಾ ಸಾಗರಿ ವರಮಹಾಲಕ್ಷ್ಮಿ

ಶ್ರಾವಣ ಶುದ್ಧ ಪಂಚಮಿ ಹಬ್ಬದ ತದನಂತರ ಬರುವ ಹಬ್ಬವೇ ಶ್ರೀ ವರಮಹಾಲಕ್ಷ್ಮಿಹಬ್ಬ. ನಿಷ್ಕಲ್ಮಶ ಮನದಿಂದ ಪ್ರಾರ್ಥಿಸಿದರೆ ಮನುಜನ ಭವಸಂಕಷ್ಟಗಳನ್ನು ನೀಗಿಸುವ ಕರುಣಾಸಾಗರಿ ಶ್ರೀಲಕ್ಷ್ಮಿ ಯ ಹಬ್ಬ. ಈ ಹಬ್ಬದ ವಿಶೇಷತೆಯ ಕುರಿತು ಲೇಖಕರಾದ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಅಖಿಲಾಂಡ ಕೋಟಿ ಬ್ರಹ್ಮಾಂಡದಿ, ಅಣುರೇಣು ತೃಣಕಾಷ್ಟದಿ ನೆಲೆಸಿಹ ದೈವ ಶಕ್ತಿಗೆ, ಭರತ ಭುವಿಯ ಮೇಲೆ ತುಸು ಅಧಿಕ ಒಲುಮೆ ಎನ್ನಬಹುದು. ಕಾರಣ ಭರತ ಭುವಿಯು, ಶ್ರದ್ಧಾ, ಭಕ್ತಿಯ ಪರಮ ಪಾವನ ತಾಣ, ಅದಕ್ಕೆ ಹಲವಾರು ದೇವತೆಗಳು, ಋಷಿಮುನಿಗಳು, ಯಕ್ಷ – ಗಂಧರ್ವ, ಕಿಂಪುರುಷರು ನಾನಾ ಅವತಾರಗಳಲ್ಲಿ ಜನ್ಮವೆತ್ತಿದ್ದಾರೆಂದರೆ ತಪ್ಪಾಗಲ್ಲ. ಇಂತಾ ಪುಣ್ಯ ದೇವಭೂಮಿಯಲ್ಲಿ, ಹುಟ್ಟಿರುವ ನಾವುಗಳು ಅದೃಷ್ಟವಂತರೆಂದರೆ, ಅತಿಶಯೋಕ್ತಿಯಾಗಲಾರದು.

ದೈವಾರಾಧನೆಗಾಗಿ ನಾವೆಲ್ಲ ಆಚರಿಸುವ ಹಬ್ಬ – ಹರಿದಿನಗಳಿಗೇನು ಕೊರತೆಯಿಲ್ಲ ಅದರಲ್ಲೂ ಶ್ರಾವಣ ಮಾಸವು, ಅನಾದಿ ಕಾಲದಿಂದಲೂ ಹಿಂದುಗಳಿಗೆ ಪರಮ ಪವಿತ್ರವಾದ ಮಾಸ. ಒಂದೂ ಪೂಜೆ ಸಹ ನಡೆಯದ ದೇವಾಲಯಗಳಲ್ಲಿ ಭಕ್ತಿಯ ಜೇಂಕಾರ ಮೊಳಗುವದು, ಭಜನೆಗಳ ಗಾನಲಹರಿ ಹರಿಯುವದು, ಹಿಂದೂ ಪಂಚಾಂಗದ ಪ್ರಕಾರ ಎಲ್ಲಾ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಅದು ನಾಗರ ಪಂಚಮಿ ಅಂದರೆ ತಪ್ಪಾಗಲಾರದು.

ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪುಡುವ ಈ ಹಬ್ಬದ ತದನಂತರ ಬರುವದೇ ಶ್ರೀ ವರಮಹಾಲಕ್ಷ್ಮಿಹಬ್ಬ. ಇದು ನಿಷ್ಕಲ್ಮಶ ಮನದಿಂದ ಪ್ರಾರ್ಥಿಸಿದರೆ ಮನುಜನ ಭವಸಂಕಷ್ಟಗಳನ್ನು ನೀಗಿಸುವ ಕರುಣಾಸಾಗರಿ ಶ್ರೀಲಕ್ಷ್ಮಿ ಯ ಹಬ್ಬವು.

ವರಮಹಾಲಕ್ಷ್ಮಿ ವ್ರತವು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಅಷ್ಟಲಕ್ಷ್ಮಿಯರ ಪೂಜೆಗೆ ಸಮಾನವಾದ ಈ ವ್ರತದಿಂದ ಸೌಭಾಗ್ಯ, ಆರೋಗ್ಯ ಮತ್ತು ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಚಾರುಮತಿ ಎಂಬಾಕೆಯ ಭಕ್ತಿಗೆ ಮೆಚ್ಚಿ ಸ್ವತಃ ಪರಮೇಶ್ವರನು ಪಾರ್ವತಿಗೆ ಈ ವ್ರತದ ಮಹತ್ವ ಮತ್ತು ಕಥೆಯನ್ನು ತಿಳಿಸಿದನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಐತಿಹಾಸಿಕ ಹಿನ್ನೆಲೆ

ಶ್ರಾವಣ ಮಾಸದಲ್ಲಿ ಬರುವ ಎರಡನೇ ಶುಕ್ರವಾರದಂದು ಆಚರಣೆ.ವರ + ಮಹಾಲಕ್ಷ್ಮಿ ಅಂದರೆ ವರಗಳನ್ನು ನೀಡುವ ದೇವತೆ. ಸಂಪತ್ತು, ಭೂಮಿ, ಶಿಕ್ಷಣ, ಪ್ರೀತಿ, ಕೀರ್ತಿ, ಶಾಂತಿ, ಸಂತೋಷ ಹಾಗೂ ಶಕ್ತಿ ಎಂಬ ಅಷ್ಟ ಶಕ್ತಿಗಳ ಆರಾಧನೆ.ಕಳಶ ಸ್ಥಾಪನೆ ಮಾಡಿ ವಿಶೇಷ ಸಿಹಿ ತಿಂಡಿ ಹಾಗೂ ಹಣ್ಣುಗಳನ್ನು ನೈವೇದ್ಯ ಮಾಡುವುದು ಸಂಪ್ರದಾಯ.

ಮಗಧ ದೇಶದ ಕುಂಡಿನಪುರದ ಚಾರುಮತಿ ಎಂಬ ಸಾಧ್ವಿ ಮಹಿಳೆಯು ತನ್ನ ಕುಟುಂಬದ ಸೇವೆ ಮತ್ತು ಗುರು ಹಿರಿಯರ ಭಕ್ತಿಯಲ್ಲಿ ನಿರತಳಾಗಿದ್ದಳು. ಕನಸಿನಲ್ಲಿ ಪ್ರತ್ಯಕ್ಷಳಾದ ಮಹಾಲಕ್ಷ್ಮಿಯು ಚಾರುಮತಿಗೆ ವರಮಹಾಲಕ್ಷ್ಮಿ ವ್ರತದ ವಿಧಾನವನ್ನು ವಿವರಿಸಿದಳು. ಆಕೆಯ ಭಕ್ತಿಗೆ ಮೆಚ್ಚಿ ಊರಿನ ಹೆಂಗಸರು ಸಹ ವ್ರತ ಆಚರಿಸಿದರು. ಇದರಿಂದ ಆ ಊರು ಸಂಪದ್ಭರಿತವಾಗಿ, ಬಂಗಾರದ ರಥಗಳು ಹಾಗೂ ಅಪಾರ ಸಂಪತ್ತು ಚಾರುಮತಿ ಮತ್ತು ಇತರರ ಮನೆಗೆ ಲಭಿಸಿತು ಎಂಬ ಪೌರಾಣಿಕ ಪವಾಡದ ಕಥೆಯಿದೆ.

ವರಮಹಾಲಕ್ಷ್ಮಿ ದೇವಿಯ ಜನನ

ಲಕ್ಷ್ಮಿಯ ಉಗಮದ ಹಿನ್ನೆಲೆಯನ್ನು ಪುರಾಣಗಳ ಪ್ರಕಾರ ವರಮಹಾಲಕ್ಷ್ಮಿಯು ಕ್ಷೀರಸಾಗರ ಮಥನದ ಸಮಯದಲ್ಲಿ ಜನಿಸಿದ ಮಹಾಲಕ್ಷ್ಮಿಯ ಕರುಣಾಮಯಿ ಸ್ವರೂಪವಾಗಿದ್ದು, ಭಕ್ತರಿಗೆ ವರಗಳನ್ನು ನೀಡಲು ಭೂಮಿಗೆ ಬಂದ ಹಿನ್ನೆಲೆಯನ್ನು ಹೊಂದಿದೆ.

ದುರ್ವಾಸ ಮುನಿಯ ಶಾಪದಿಂದಾಗಿ ಸ್ವರ್ಗವು ಶ್ರೀಹೀನವಾಗಿ, ದೇವತೆಗಳು ಐಶ್ವರ್ಯವನ್ನು ಕಳೆದುಕೊಂಡಾಗ ಅಸುರರ ಜೊತೆಗೂಡಿ ಕ್ಷೀರಸಾಗರ (ಹಾಲಿನ ಸಮುದ್ರ) ಮಥನವನ್ನು ಮಾಡುತ್ತಾರೆ. ಈ ಸಮುದ್ರ ಮಥನದ ಸಮಯದಲ್ಲಿ, ಜಗತ್ತಿಗೆ ಚೇತನ ಹಾಗೂ ಸಮೃದ್ಧಿಯನ್ನು ನೀಡಲು ಮಹಾಲಕ್ಷ್ಮಿಯು ಕಮಲದ ಹೂವಿನ ಮೇಲೆ ಕುಳಿತು ಪ್ರತ್ಯಕ್ಷಳಾಗುತ್ತಾಳೆ. ಸಮುದ್ರರಾಜನ ಪುತ್ರಿಯಾಗಿ ಜನ್ಮತಾಳಿದ ಆಕೆಯನ್ನು “ಕ್ಷೀರಸಮುದ್ರ ರಾಜ ತನಯೆ” ಎಂದು ಕರೆಯಲಾಗುತ್ತದೆ. ದೇವತೆಗಳು ಮತ್ತು ಋಷಿಮುನಿಗಳು ಆಕೆಯ ದಿವ್ಯ ರೂಪವನ್ನು ಸ್ತುತಿಸಿ, ಜಗತ್ತಿನ ಕಲ್ಯಾಣಕ್ಕಾಗಿ ವರಗಳನ್ನು ಕರುಣಿಸುವಂತೆ ಪ್ರಾರ್ಥಿಸುತ್ತಾರೆ. ಹೀಗೆ ಭಕ್ತರ ಸಂಕಷ್ಟಗಳನ್ನು ನೀಗಿ ‘ವರ’ (ಬಯಸಿದ ವರಗಳನ್ನು) ನೀಡುವ ಸ್ವರೂಪವೇ ವರಮಹಾಲಕ್ಷ್ಮಿಯಾಯಿತು.

ಸದ್ಧರ್ಮದ ಪಾಲನೆ, ಹಿರಿಯರ ಮೇಲೆ ಗೌರವ ಮತ್ತು ಸದಾಚಾರ ಇರುವಲ್ಲಿ ಲಕ್ಷ್ಮಿಯು ತಾನಾಗಿಯೇ ಒಲಿದು ಬರುತ್ತಾಳೆ ಎಂಬುದು ಈ ಪೌರಾಣಿಕ ಹಿನ್ನೆಲೆಯ ಮುಖ್ಯ ಸಂದೇಶವಾಗಿದೆ ಆದರಿಂದ ನಾವುಗಳೆಲ್ಲ ದ್ವೇಷ, ಅಸೂಹೆ, ಮದ-ಮತ್ಸರ ತ್ಯಜಿಸಿ, ಪ್ರೀತಿ, ಪ್ರೇಮ, ವಿಶ್ವಾಸದಿಂದ ಸಾಮರಸ್ಯೆದಿ ಮಾತೇ ವರಮಹಾಲಕ್ಷ್ಮಿಯ ಆರಾಧನೆ ಮಾಡಿ, ತಾಯಿಯ ಕೃಪೆಗೆ ಪಾತ್ರರಾಗೋಣ.


  • ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading