‘ಸ್ವರ ಸಾಮ್ರಾಜ್ಞಿ ಎಸ್.ಜಾನಕಿ’ ಕೃತಿ ಪರಿಚಯ

17 -20 ಭಾಷೆಗಳಲ್ಲಿ 48,000 ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿ ಜನರ ಮನಸ್ಸಿನಲ್ಲಿ ಸದಾ ಸ್ಥಾನ ಪಡೆದಿರುವ ವಿಖ್ಯಾತ ಗಾಯಕಿ ಎಸ್ ಜಾನಕಿ ಅವರ ಬದುಕಿನ ಸಂಪೂರ್ಣ ಚಿತ್ರಣವನ್ನು ‘ಸ್ವರ ಸಾಮ್ರಾಜ್ಞಿ ಎಸ್.ಜಾನಕಿ’ ಪುಸ್ತಕ ತೆರೆದಿಡುತ್ತದೆ. ಈ ಕೃತಿಯ ಕುರಿತು ಲೇಖಕರಾದ ಆಶ್ರಿತಾ ಕಿರಣ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಸ್ವರ ಸಾಮ್ರಾಜ್ಞಿ ಎಸ್.ಜಾನಕಿ
ಲೇಖಕರು : ಜ್ಯೋತಿ ಪ್ರಶಾಂತ್, ಅಮುಲ್ಯ.ಎಸ್.ಪ್ರಮೋದ್,      
                 ಸಚಿನ್ ನಾಯಕ್
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್ 
ಬೆಲೆ : 150/-
ಪುಟ : 96
ಪ್ರಕಟಣೆಯ ವರ್ಷ: 2026 
ಹುಟ್ಟೂರು-ಬದುಕು-ಸಂಗೀತ ಅಭ್ಯಾಸ- ವೃತ್ತಿಯ ಆರಂಭ-ನಿರಂತರ ಹಾಡುಗಾರಿಕೆ- ದೊರೆತ ಪ್ರಶಸ್ತಿ ಸನ್ಮಾನ-ಸಂಸಾರ-ಸ್ನೇಹ- ಸಂಬಂಧ-ಬಾಂಧವ್ಯ-ನಲಿವು-ನೋವು-ಅಂತಿಮ ದಿನಗಳನ್ನು ಎಳೆಎಳೆಯಾಗಿ ಹೇಳಿರುವ ಈ ಪುಸ್ತಕಕ್ಕೆ ಪ್ರತಿ ಲೇಖನದ ಜೊತೆಗಿರುವ ಫೋಟೋ ಹಾಗು ಲೇಖನದ ವಿಂಗಡನೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಬೇಕಾದ ವಿಷಯ ಸುಲಭವಾಗಿ ಸಿಗುವಂತೆ ಚೆಂದದ ಶೀರ್ಷಿಕೆ ಹಾಗು ಉಪಶೀರ್ಷಿಕೆಗಳು ಓದನ್ನು ಸರಳವಾಗಿಸುವ ಜೊತೆಗೆ ಕುತೂಹಲವನ್ನು ಮೂಡಿಸುತ್ತದೆ.

ಸುಂದರವಾದ ಪದಗಳಿಂದ ಪೋಣಿಸಿರುವ ವಾಕ್ಯಗಳನ್ನು ಹೊಂದಿರುವ ಕಾರಣ ಪ್ರತಿ ಲೇಖನದಲ್ಲಿ ಜಾನಕಿಯಮ್ಮನ ಜೀವನದ ಜೊತೆ ಪಯಣಿಸುವ ಅನುಭವ ನೀಡುತ್ತದೆ. ಅಲ್ಲಲ್ಲಿ ಕೆಲವು ವಿಷಯಗಳು ಪುನರಾವರ್ತನೆ ಎನಿಸಿದರು ಬಳಸಿರುವ ಪದಗಳು ಹಾಗು ವಾಕ್ಯಗಳು ಖುಷಿ ಕೊಡುತ್ತದೆ. ಲೇಖಕರಿಗಿರುವ ಭಾಷೆಯ ಮೇಲಿನ ಹಿಡಿತವನ್ನು, ಬಳಸುವ ಬಗೆಗಿರುವ ಜಾಣ್ಮೆಯನ್ನು ಹೇಳುತ್ತದೆ.

ಕೆಲವು ಹಾಡಿನ ಸಾಲುಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಬಳಸುವ ಮೂಲಕ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಬೇರೆ ಭಾಷೆಯ ಹಾಡಿನ ಸಾಲುಗಳ ಜೊತೆಗೆ ಅದರ ಅರ್ಥವನ್ನು ನೀಡಿರುವುದು ಓದಿಗೆ ಸಹಕಾರಿಯಾಗಿದೆ. ಕೆಲವು ಆಚ್ಚರಿ ಮೂಡಿಸುವ ವಿಷಯಗಳ ಜೊತೆಗೆ ಅನೇಕ ಸ್ವಾರಸ್ಯಕರ ವಿಷಯಗಳು ಇಲ್ಲಿವೆ.

 

ಅಸಮಾಧಾನ ಹೊರಹಾಕಲು ಧ್ವನಿ ಎತ್ತಿ ಗಲಾಟೆ ಮಾಡುವ ಬದಲು ತಮ್ಮ ಸಮಯಕ್ಕಾಗಿ ಕಾದು ತಮಗೆ ದೊರೆತ ಪ್ರಶಸ್ತಿಯನ್ನು ಧಿಕ್ಕರಿಸಿದ ಎಸ್ ಜಾನಕಿ ಅಮ್ಮನವರ ನಡೆ ತಾಳ್ಮೆಯ ಪಾಠವನ್ನು ಹೇಳಿದಂತಿದೆ. ಅವರು ತಮ್ಮ ಸ್ವರವನ್ನು ಕಾಪಾಡಿಕೊಳ್ಳಲು ಪಾಲಿಸುತ್ತಿದ್ದ ಕಟ್ಟುನಿಟ್ಟಿನ ಕ್ರಮ ಅವರ ಶಿಸ್ತು, ಸಮರ್ಪಣೆ, ದೃಢಸಂಕಲ್ಪ ಮಾದರಿಯಾಗಿದೆ.

ಆಕರ್ಷಕ ಮುಖಪುಟ ಹೊಂದಿರುವ ಮಹಾನ್ ಗಾಯಕಿಯ ಜೀವನ ಪಯಣವನ್ನು ಸವಿಸ್ತಾರವಾಗಿ ಹೇಳುವ ಈ ಪುಸ್ತಕ ಅಹಂಕಾರ ತೋರದೆ, ಐಶಾರಾಮಿಯಾಗಿ ಬದುಕದೆ, ಭರವಸೆಯ ನಗುವಿನೊಂದಿಗೆ ಜೀವನ ನಡೆಸುತ್ತಾ, ಸ್ನೇಹದಿಂದ, ಸೌಮ್ಯ ಸ್ವಭಾವದಿಂದ, ಪರಿಶ್ರಮದಿಂದ ಪ್ರಾಮಾಣಿಕವಾಗಿ ದುಡಿಯುತ್ತಾ, ಅತಿ ಆಸೆ ಪಡದೆ ಕಾಯಕವೇ ಕೈಲಾಸ ಎಂದು ಪಾಲಿಸಿದರೆ ಯಶಸ್ಸು ನಿಶ್ಚಿತ ಎನ್ನುವ ವಿಷಯವನ್ನು ಹೇಳಿಯೂ ಹೇಳಿದಂತಿದೆ.


  • ಆಶ್ರಿತಾ ಕಿರಣ್ – ಲೇಖಕರು, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading