ನನ್ನ ಗೋಡೆಗೆ ಮೊಳೆ ಹೊಡೆದಾಗ ಆಗುವ ನೋವು, ಮೌನದ ಕಂಬನಿಗಷ್ಟೇ ಸೀಮಿತ. ಏಕೆಂದರೆ, ಆ ಶಬ್ಧಕ್ಕೆ ನನ್ನ ಧ್ವನಿ ಉಡುಗಿ ಹೋಗುತ್ತದೆ. ನೀವೊಂದಿಷ್ಟು ಕೃತಕ ಅಲಂಕಾರದಿಂದ ಚೆಂದಗಾಣಿಸಿಕೊಳ್ಳಬಹುದು. ಆದರೆ, ನನಗದು ನನ್ನ ಗಾಯಕ್ಕೊಂದು ಬಣ್ಣದ ಬ್ಯಾಂಡೇಜ್ ಕಟ್ಟಿದಂತೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ನಾನ್ರೀ…ನಿಮ್ ಮನೆ’ ತಪ್ಪದೆ ಮುಂದೆ ಓದಿ…
ನಮ್ಮಿಬ್ಬರದು ಒಂಥರಾ ಜೋಡಿ ಪಯಣ. ಏಕೆಂದರೆ, ನಿಮ್ಮ ಜೊತೆ ಜೊತೆಗೇ ನನ್ನ ಏಳಿಗೆ, ಅವನತಿ ಎಲ್ಲಾ. ನನ್ನನ್ನು ಸ್ವಂತ ಮಾಡಿಕೊಳ್ಳುವುದರ ಜೊತೆಗೆ ಬಾಡಿಗೆಗೆ, ಭೋಗ್ಯಕ್ಕೆ ಕೊಡುವವರೂ ಇದ್ದಾರೆ. ಅದರಲ್ಲಿ ಹಲವರು ಉತ್ತಮ ಬಾಂಧವ್ಯ ಹೊಂದಿದ್ದರೆ, ಇನ್ನು ಹಲವರದ್ದು ದಿನಬೆಳಗಾದರೆ ಒಬ್ಬರಿಗೊಬ್ಬರಿಗೆ ಜಟಾಪಟಿ. ಹಾಗಾಗಿ ಹಲವರು ದಶಕಗಳ ಕಾಲ ಇರುವವರಾದರೆ ಇನ್ನು ಕೆಲವರು ಕೆಲವು ತಿಂಗಳುಗಳಿಗೇ ಬಿಟ್ಟು ಹೋಗುವವರು. ಇದರ ಮಧ್ಯೆ ಬಿಡಿಸಲು ಪಾಡುಪಡಬೇಕಾದ ಗತಿಯೂ ನನ್ನೊಡೆಯನಿಗೆ ಬರುವುದಿದೆ. ನನ್ನಲ್ಲಿರುವ ಗೋಡೆ, ನೆಲ, ನಲ್ಲಿಗಳನ್ನೆಲ್ಲ ಹಾಳುಗೆಡವಿ ಹೋಗುವವರೂ ಇದ್ದಾರೆ.
ಗಂಡ-ಹೆಂಡತಿಯ ಪಿಸುಮಾತು, ಸರಸ-ಸಲ್ಲಾಪ, ಬಸುರಿಯ ಬಯಕೆಯ ಭಾವನೆಗಳಿಂದ ಹಿಡಿದು, ಆರತಿ, ಬಾಣಂತನ, ನಾಮಕರಣ, ಮುದ್ದುಮಕ್ಕಳ ತೊದಲು ನುಡಿಗಳು, ನಗು-ಅಳು, ಆಟ-ಪಾಠ, ಓದು-ಬರಹ, ಮುಂಜಿ, ಮದುವೆ, ಹೊಡೆದಾಟ, ಬಡಿದಾಟ, ಕಣ್ಣೀರು, ಕರುಣೆ, ನಿವೃತ್ತಿಯಲ್ಲಿನ ತಳಮಳ, ಗಲಾಟೆ-ಗದ್ದಲ, ನೀರವ ಮೌನ, ಕತ್ತಲು-ಬೆಳಕು, ವಯಸ್ಸಾದವರ ನರಳಾಟ, ಒಬ್ಬರನ್ನು ಕಳೆದುಕೊಂಡು ಇನ್ನೊಬ್ಬರು ಉಳಿದಾಗ ಅವರ ಕೆದಕುವ ನೆನಪುಗಳನ್ನು ಮೆಲುಕು ಹಾಕುವಾಗಿನ ಕ್ಷಣ, ದುಃಖ, ಕಣ್ಣೀರು, ಅಸಹಾಯಕತೆ, ಕೊರಗು, ಏಕತಾನತೆಯ ನಿಟ್ಟುಸಿರು, ಯಾರಾದರೂ ಬರಲೆಂದು ಕಾಯುತ್ತಿರುವ ಕಾತುರದ ಕ್ಷಣಗಳು, ಬಂದಾಗಿನ ಸಂಭ್ರಮ, ಸಡಗರ, ಹಬ್ಬಗಳ ಆಚರಣೆ, ಸಿಹಿಯೂಟ, ದಿನನಿತ್ಯದ ಬದುಕಿನ ದೇವರ ಪೂಜೆ, ಪುನಸ್ಕಾರ, ಆಚಾರ-ವಿಚಾರ, ಆಧುನಿಕತೆಯ ಭರಾಟೆ, ಅಡುಗೆ, ವಿಶ್ರಾಂತಿ, ಜಗಳ, ಕೆಟ್ಟದ್ದು-ಒಳ್ಳೆಯದು, ಸಾವು-ನೋವು, ಜಂಜಾಟ, ಸಮಸ್ಯೆಗಳಲ್ಲಿನ ಪರಿತಾಪ, ಪರಿಹಾರದಲ್ಲಿನ ಸಂತೃಪ್ತಿ, ಕೆಲಸ ದೊರೆತಾಗ, ಮದುವೆಯಾಗಿ ನನ್ನನ್ನು ಬಿಟ್ಟು ನನ್ನ ಬಂಧುಗಳಲ್ಲಿಗೆ (ಬೇರೆ ಮನೆಗೆ) ಹೋಗುವಾಗಿನ ಸಂಕಟ, ಕಣ್ಣೀರು, ಇನ್ನು ಕೆಲವರಿಗೆ ಸಂತೋಷ ಹೀಗೆ ಎಲ್ಲವುದಕ್ಕೂ ನಾನು ಮಾತ್ರ ಸಾಕ್ಷಿ. ಏಕೆಂದರೆ, ನಿಮ್ಮೆಲ್ಲರನ್ನು ನನ್ನಷ್ಟು ತಿಳಿದವರು ಯಾರೂ ಇಲ್ಲ. ಇರಲು ಸಾಧ್ಯವೂ ಇಲ್ಲ.

ಫೋಟೋ ಕೃಪೆ : google
ಸೋಗೆಯ ಮಾಡಿನ ಗುಡಿಸಲು, ಟೆಂಟ್ಗಳು, ಟಾರ್ಪಲ್, ಶೀಟ್ ಮುಂತಾದವುಗಳಿಂದ ತಾತ್ಕಾಲಿಕವಾಗಿ ಹಾಕಿಕೊಳ್ಳುವ ಶೆಡ್ಗಳು, ಬಿದಿರು, ಮಣ್ಣಿನ ತಡಿಕೆಯ ಗೋಡೆ, ಸಗಣಿ ಸಾರಿಸುವ ಮಣ್ಣಿನ ನೆಲದಿಂದ ಹಿಡಿದು ಹುಲ್ಲು, ಹೆಂಚು, ಟಾರ್ಸಿಯ ಮೇಲ್ಛಾವಣಿ, ಸಿಮೆಂಟು, ಇಟ್ಟಿಗೆಯ ಭದ್ರವಾದ ಗೋಡೆ, ಸಿಮೆಂಟು, ಟೈಲ್ಸ್ , ಗ್ರಾನೈಟ್ನ ಥಳಥಳ ಹೊಳೆಯುವ ನೆಲದವರೆಗೆ ನನ್ನ ಪಯಣ. ಟಾಯ್ಲೆಟ್, ಬಾತ್ರೂಮ್ ಒಟ್ಟಿಗೆ ಇರುವ ಒಂದು ರೂಮಿನಿಂದ ಹಿಡಿದು ಒಂದು ರೂಮು, ಹಾಲು, ಅಡುಗೆಮನೆ, ಎರಡು, ಮೂರು, ನಾಲ್ಕು ಬೆಡ್ ರೂಮ್ಗಳು, ಅಟ್ಯಾಚ್ಡ್ ಬಾಥ್ ರೂಮ್ ಟಾಯ್ಲೆಟ್ಗಳು, ಸ್ಟೇರ್ ಕೇಸ್, ಮಹಡಿ ಮನೆಗಳು, ವಿಲ್ಲಾಗಳು, ಅನೇಕ ಮನೆಗಳನ್ನು ಒಂದೇ ಕಟ್ಟಡದಲ್ಲಿ ಹೊಂದಿರುವ ಅಪಾರ್ಟ್ಮೆಂಟ್ಗಳು ಅಬ್ಬಾ! ನನಗೇ ಆಶ್ಚರ್ಯವಾಗುವಂತೆ ಗಗನಚುಂಬಿ ಕಟ್ಟಡಗಳು, ದಿನದಿನಕ್ಕೂ ಅತೀ ವೇಗವಾಗಿ ಆಗುತ್ತಿರುವ ನನ್ನ ಬೆಳವಣಿಗೆಗೆ ಒಂದು ಕಡೆ ಹೆಮ್ಮೆ, ಖುಷಿಯಾದರೆ ಬೆಳೆಸುವಲ್ಲಿ ಆಗುವ ಅಪೌಷ್ಟಿಕತೆ
(ಕುಂದು-ಕೊರತೆಗಳು) ಒಮ್ಮೆಲೇ ಎಲ್ಲವನ್ನೂ ಒಟ್ಟಿಗೇ ಆಹುತಿ ತೆಗೆದುಕೊಳ್ಳುವಾಗಿನ ನನ್ನ ಅಸಹಾಯಕತೆ ಶತ್ರುವಿಗೂ ಬೇಡ ಅಂತಾರಲ್ಲ ಹಾಗೆ. ನನ್ನನ್ನು ಕಟ್ಟುವಾಗಲೇ ಕೆಲವೊಮ್ಮೆ ನಾನು ನೀಡುವ ಎಚ್ಚರಿಕೆಯನ್ನು ಪರಿಗಣಿಸದೇ ತಮ್ಮ ಕೆಲಸವಾಗಿ ಒಂದಿಷ್ಟು ಹಣ ಸೇರಿದರಾಯ್ತು ಎನ್ನುವ ಮನಸ್ಥಿತಿಯವರಿಗೆ ತಾವು ಶಿಕ್ಷೆ ಅನುಭವಿಸದಾಗಲೇ ಬುದ್ಧಿ ಬರುವುದೇನೋ. ಆದರೆ ಪಾಪ, ಏನೂ ಅರಿಯದ ಮಕ್ಕಳು, ಮರಿಗಳು, ಒಂದಷ್ಟು ಜೀವಗಳು ಮಾಡಿರುವ ತಪ್ಪಾದರೂ ಏನು? ಅವರ, ಅವರ ಕುಟುಂಬದವರ ಸಂಕಟ, ದುಃಖ ಎಷ್ಟೆಂದರೆ ನನ್ನನ್ನೇ ಮುಳುಗಿಸುವಷ್ಟು. ಮೊದಲೇ ಬಿದ್ದಿರುವ ನಾನು ನನ್ನಡಿಯಲ್ಲಿರುವವರನ್ನಾದರೂ ಹೇಗೆ ಎತ್ತಲಿ?.
ನನ್ನ ಗೋಡೆಗೆ ಮೊಳೆ ಹೊಡೆದಾಗ ಆಗುವ ನೋವು, ಮೌನದ ಕಂಬನಿಗಷ್ಟೇ ಸೀಮಿತ. ಏಕೆಂದರೆ, ಆ ಶಬ್ಧಕ್ಕೆ ನನ್ನ ಧ್ವನಿ ಉಡುಗಿ ಹೋಗುತ್ತದೆ. ನನ್ನ ಗೋಡೆಯನ್ನು ಕೊರೆಯುವಾಗ ನನ್ನ ಆರ್ತನಾದ ಎಷ್ಟೆಂದರೆ, ಅದರ ಆಳ ನನಗೆ ಮಾತ್ರ ಗೊತ್ತು. ಬೇರೆಯವರಿಗೆ ಅದು ಕಿರಿಕಿರಿ. ಒಮ್ಮೆ ಚೆಂದವಾಗಿ ನನ್ನನ್ನು ರೂಪಿಸಿದ ಮೇಲೆ ಮತ್ತೆ ಮತ್ತೆ ನನ್ನ ನೆಲಕ್ಕೆ, ಗೋಡೆಗಳಿಗೆ ಮಾಡುವ ಹೊಡೆತ, ಬಡಿತ, ಕೊರೆತಗಳು ಕಾಯಿಲೆ ಇಲ್ಲದವರಿಗೆ ಬಲವಂತವಾಗಿ ಇನ್ನೂ ಆರೋಗ್ಯವಾಗಿರು ಎಂದು ಕಹಿ ಔಷಧಿ ಕುಡಿಸಿದಂತೆ ಸೋತು ಹೋಗುತ್ತೇನೆ. ಅದರ ಮೇಲೆ ನೀವೊಂದಿಷ್ಟು ಕೃತಕ ಅಲಂಕಾರದಿಂದ ಚೆಂದಗಾಣಿಸಿಕೊಳ್ಳಬಹುದು. ಆದರೆ, ನನಗದು ನನ್ನ ಗಾಯಕ್ಕೊಂದು ಬಣ್ಣದ ಬ್ಯಾಂಡೇಜ್ ಕಟ್ಟಿದಂತೆ.
ಮಳೆಯಿಂದಲೋ ಅಥವಾ ನನಗೂ ವಯಸ್ಸಾಗಿ ಅಲ್ಲಲ್ಲಿ ನನ್ನ ಭಾಗಗಳಿಗೆ ತೊಂದರೆಯಾದರೂ ಕೆಲವೊಬ್ಬರು ಅದನ್ನು ತಿರುಗಿ ಕೂಡಾ ನೋಡುವುದಿಲ್ಲ. ದಿನದಿನಕ್ಕೂ ನನಗಾದ ಗಾಯ ದೊಡ್ಡದಾಗುತ್ತಲೇ ಹೋಗುತ್ತದೆ. ಅವರ ಆರ್ಥಿಕ ಪರಿಸ್ಥಿತಿಯೋ, ನನ್ನ ಅವಶ್ಯಕತೆ ಮುಗಿದಿದೆ ಎಂಬ ನಿರ್ಲಕ್ಷ್ಯವೋ ಒಟ್ಟಿನಲ್ಲಿ ಬೇಕಾದ ಮುಲಾಮಂತೂ ಸಿಗದೇ ನರಳುತ್ತೇನೆ. ಒಮ್ಮೊಮ್ಮೆ ಹಾಗೇ ಕಾಲವಾಗುತ್ತೇನೆ. ಹೇಳ ಹೆಸರಿಲ್ಲದಂತೆ ಕಾಲದೊಳಗೆ ಲೀನವಾಗುತ್ತೇನೆ.
ನನ್ನ ಬೆಲೆಯೂ ಹಾಗೇ. ಜನಸಾಮಾನ್ಯರಿಗೆ ನಾನು ಕೈಗೆಟಕುವುದು ಕಷ್ಟ ಎಂಬುದನ್ನು ನನ್ನ ಬೆಲೆಯೇರಿಸಿ ನೀವೇ ತೀರ್ಮಾನಿಸಿ ಬಿಟ್ಟಿದ್ದೀರಿ. ಹಿಂದೆಲ್ಲಾ ಹಾಗಿರಲಿಲ್ಲ. ಎಲ್ಲರಿಗೂ ಗುಡಿಸಲು ಕಟ್ಟಲಾದರೂ ಒಂದಷ್ಟು ಜಾಗ ಇರುತ್ತಿತ್ತು. ಜನಸಂಖ್ಯೆಯ ಹೆಚ್ಚಳದಿಂದ ಅದೆಲ್ಲಾ ಭಾಗಭಾಗವಾಗಿ ಈಗ ಮನೆಯ ಮೇಲೆ ಮನೆ ಕಟ್ಟುವಂಥಾ ಪರಿಸ್ಥಿತಿ. ಆಧುನಿಕತೆಗೆ ತೆರೆದುಕೊಂಡಂತೆ ನನ್ನ ವಿನ್ಯಾಸದಲ್ಲೂ ಊಹಿಸಲಾರದ ಮಟ್ಟದ ಬದಲಾವಣೆಯಾಗಿದ್ದರಿಂದ ಬೆಲೆಯೂ ಅದಕ್ಕೆ ತಕ್ಕಂತೆ ಹಲವು ಲಕ್ಷಗಳಿಂದ ಕೋಟಿಗಳವರೆಗೆ. ನನ್ನಿಂದ, ನನ್ನ ನಿರ್ಮಾಣದಿಂದ ಎಷ್ಟೋ ಜನರ ಬದುಕಿಗೆ ದಾರಿಯಾಗಿದ್ದೇನೆ. ಅದನ್ನು ಕಲಿಸುವ ವಿಶ್ವವಿದ್ಯಾಲಯಗಳಿಗೆ ಪಠ್ಯದ ವಸ್ತುವಾಗಿದ್ದೇನೆ. ಶಿಕ್ಷಕರಿಗೆ, ಶಿಕ್ಷಣಸಂಸ್ಥೆ ನಡೆಸುವವರಿಗೆ, ಸಂಬಂಧಿಸಿದವರಿಗೆ ಜೀವನೋಪಾಯವಾಗಿದ್ದೇನೆ. ಕೂಲಿ ಕಾರ್ಮಿಕರಿಗೆ, ಗಾರೆ ಕೆಲಸದವರಿಗೆ, ಮೇಸ್ತ್ರಿಗಳಿಗೆ, ಕಂಟ್ರಾಕ್ಟರ್ಗಳಿಗೆ ಎಲ್ಲರಿಗೂ ನಾನು ದುಡಿಮೆಯ ದಾರಿಯಾಗಿದ್ದೇನೆ. ಅವರ ಸಂಸಾರಗಳಿಗೆ ಬೆಳಕಾಗಿದ್ದೇನೆ.

ಫೋಟೋ ಕೃಪೆ : google
ನನಗಾಗಿ ಒಡಹುಟ್ಟಿದವರಲ್ಲಿ, ತಂದೆ-ತಾಯಿಯ ಜೊತೆ ಜಗಳ, ಹೊಡೆದಾಟ, ಬಡಿದಾಟ, ಕೊಲೆ ಎಲ್ಲವೂ ನಡೆಯುತ್ತದೆ. ನನಗಾಗಿ ಕೋರ್ಟು-ಕಛೇರಿ ಅಲೆದು ಗೆದ್ದೆವೆಂದು ಬೀಗುವವರು, ಸೋಲೊಪ್ಪಲು ಸಾಧ್ಯವಾಗದೇ ಹತಾಶರಾಗಿ ನಲುಗುವವರೂ ಇದ್ದಾರೆ. ಅನ್ಯಾಯದಿಂದ ನನ್ನನ್ನು ದಕ್ಕಿಸಿಕೊಳ್ಳಲು ಹೋಗಿ ಅವಮಾನ ಅನುಭವಿಸಿದವರು, ನ್ಯಾಯದಿಂದ ಹೋರಾಡಿ ಪಡೆದುಕೊಂಡವರು, ತಲೆತಲಾಂತರದಿಂದ ಮುಂದಿನ ಪೀಳಿಗೆಗೆ ನನ್ನನ್ನು ಪಡೆದುಕೊಂಡು ಕಾಪಾಡಿಕೊಂಡವರು, ನನ್ನನ್ನು ಮಾರಿದವರು, ಹರಾಜು ಹಾಕಿದವರು, ಒಡೆದು ಹಾಕಿದವರು, ನನಗೋಸ್ಕರ ಜಗಳವಾಡಿ ಸಂಬಂಧ ಕಳೆದುಕೊಂಡವರು, ಒಂದು ಕಾಲದಲ್ಲಿ ಒಡೆಯನ ಗತ್ತಿನಿಂದಲೇ ನನ್ನನ್ನು ಗುರುತಿಸುತ್ತಿದ್ದವರು ಇಂದು ಅವರ ಮಕ್ಕಳು, ಮೊಮ್ಮಕ್ಕಳಿಗೆ ಬೇಡವಾಗಿ ನನ್ನನ್ನು ಪಾಳು ಬೀಳುವಂತೆ ಮಾಡಿದವರು ಯಾರೊಬ್ಬರೂ ನನ್ನ ಬಗ್ಗೆ ಎಂದೂ ಯೋಚಿಸಲೇ ಇಲ್ಲ. ಅವರ ದೃಷ್ಟಿಯಲ್ಲಿ ನಾನೊಂದು ನಿರ್ಜೀವ ವಸ್ತು ಅಷ್ಟೇ. ಇನ್ನು ದಾನ, ಬಹುಮಾನ, ಸಾಲ, ಬಳುವಳಿಯ ರೂಪದಲ್ಲಿ ನನ್ನನ್ನು ನೀಡುವವರು ಅನೇಕರಾದರೆ ಕಷ್ಟಪಟ್ಟು ದುಡಿದು ಜೊತೆಗೆ ಸ್ವಲ್ಪ ಸಾಲ ಮಾಡಿ ಅನೇಕರು ನನ್ನನ್ನು ತಮ್ಮವರಾಗಿಸಿಕೊಂಡು ಜೀವನದ ಕನಸನ್ನು ನನಸಾಗಿಸಿಕೊಂಡು ನೆಮ್ಮದಿಯಾಗಿದ್ದಾರೆ.
ಅಸಹಾಯಕತೆಯೋ, ಅವಮಾನವೋ ಮಾಡಿಕೊಳ್ಳುವ ಅನಾಹುತ, ಗೀಸರ್, ಗ್ಯಾಸ್ ಸಿಲಿಂಡರ್, ಸೀಮೆ ಎಣ್ಣೆ ಸ್ಟೋವ್, ಕುಕ್ಕರ್ ಬ್ಲಾಸ್ಟ್ , ವರದಕ್ಷಿಣೆ ಕಿರುಕುಳ ಇನ್ನು ಮುಂತಾದವುಗಳಿಗೆ ನಾನು ಮೂಕ ಪ್ರೇಕ್ಷಕ. ನನ್ನೊಳಗಿದ್ದೂ ತಲೆಯ ಮೇಲೆ ಸೋರುವ ಮಳೆ ನೀರು, ಹೊಡೆಯುವ ಗಾಳಿಯ ಇರುಸಲು ನನ್ನ ಬಡತನದ ಪ್ರತೀಕವಾದರೆ ಮಳೆ ಬಂದರೆ ನನ್ನೊಳಗೆ ನುಗ್ಗುವ ಕೊಳಚೆ ನೀರು ನಿಮ್ಮ ದುರಾಸೆಯ ಪರಮಾವಧಿ. ಹಾಗೆಯೇ ದಿನನಿತ್ಯ ಮಾಡುವ ಸ್ವಚ್ಛತೆ ನನಗೆ ಹೊಸ ಹುರುಪು. ಶುಭ ಸಮಾರಂಭಗಳಲ್ಲಿ ತರುವ ಜವಳಿಯ ಜೊತೆಗೆ ನನಗೂ ಹೊಡೆಯುವ ಸುಣ್ಣ ಬಣ್ಣ ನನ್ನ ಮೊಗದಲ್ಲೂ ನಗು ತರಿಸಿ ನಿಮ್ಮ ಖುಷಿಯಲ್ಲಿ ನಾನೂ ಭಾಗವಹಿಸುವಂತೆ ಮಾಡುತ್ತದೆ.
ಇನ್ನು ನನ್ನ ಹುಟ್ಟು, ಬೆಳವಣಿಗೆ, ಅಂದಿನಿಂದ ಇಂದಿನವರೆಗೆ ನಿಮ್ಮೆಲ್ಲರ ಜೊತೆಗಿನ ಅನುಭವ ಸಾಗರದಂತೆ. ಭವಿಷ್ಯ, ಅದರೊಂದಿಗಿನ ರೋಚಕತೆ ಎಲ್ಲವೂ ನನ್ನಲ್ಲೂ ಕುತೂಹಲದ ಜೊತೆಗೆ ಸ್ವಲ್ಪ ಮಟ್ಟಿನ ಭಯವನ್ನೂ ಹುಟ್ಟಿಸುತ್ತದೆ. ಏಕೆಂದರೆ, ಭಾವುಕನಾಗಿ ಎಲ್ಲವನ್ನೂ ನನ್ನೊಳಗೇ ಅನುಭವಿಸುತ್ತಿದ್ದವನಿಗೆ ಇತ್ತೀಚೆಗೆ ಬರೀ ಖಾಲಿ ಖಾಲಿ ಎನಿಸುವಂಥ ಭಾವ. ನಿಮ್ಮೆಲ್ಲರಲ್ಲಿ ಒಂದು ಸ್ಪಂದನೆ, ಮಾತುಕತೆ, ಹರಟೆ, ನಗು ಎಲ್ಲವೂ ಕಡಿಮೆಯಾಗುತ್ತಿದೆ. ಯಾಂತ್ರಿಕತೆಯ ಬದುಕಲ್ಲಿ ನಿಮಗೇ ಅರಿಯದಂತೆ ನೀವೂ ನಿರ್ಭಾವುಕರಾಗುತ್ತಿರುವುದರಿಂದ ಅನಿವಾರ್ಯವಾಗಿ ನಾನೂ ನನ್ನ ಭಾವನೆಗಳಿಗೆ ಕಡಿವಾಣ ಹಾಕಿಕೊಂಡು ಮುಂದೊಮ್ಮೆ ನಾನೂ ಸುಮ್ಮನೆ ಜಡ ವಸ್ತುವಿನಂತೆ ಮಲಗಿರುವ ಕಾಲ ಬರಬಹುದೇನೋ ಎಂದು.
ಹೊರಗಡೆಯೇ ಹೆಚ್ಚು ಸಮಯ ಕಳೆದರೂ ನನ್ನಲ್ಲಿಗೆ ಬರುವ ಸಮಯವಾದ ತಕ್ಷಣ ಎಲ್ಲರ ಮನಸ್ಸು ಚಡಪಡಿಸಲು ಪ್ರಾರಂಭವಾಗುತ್ತದೆ. ನನ್ನಲ್ಲಿಗೆ ಬಂದು ಊಟ, ವಿಶ್ರಾಂತಿ ಪಡೆದರೆ ಅದರ ತೃಪ್ತಿಯೇ ಬೇರೆ. ಎಲ್ಲರಿಗೂ ಆಶ್ರಯ ನೀಡುವ ನನಗೆ, ನನ್ನ ಹುಟ್ಟಿಗೆ ನಿಜವಾದ ಅರ್ಥ ಬರುವುದೇ ಆಗ.
ಹಾ, ಇನ್ನೊಂದು ಖುಷಿಯ ವಿಷಯ. ಏನೇ ಇದ್ದರೂ ಪ್ರತಿಯೊಬ್ಬರದೂ ಒಂದೇ ಮಾತು. ಎಲ್ಲಿಗೆ ಹೋದರೂ ಎಷ್ಟೊತ್ತಿಗೆ ನಮ್ಮ ಮನೆಗೆ ಬರುತ್ತೇವೋ ಅನ್ನಿಸಿಬಿಟ್ಟಿರುತ್ತದೆ ಎಂದು. ಇದಕ್ಕಿಂತ ನನಗಿನ್ನೇನು ಬೇಕು ಅಲ್ಲವೇ….?
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಮಂಗಳ ಎಂ ನಾಡಿಗ್
