ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಾವಿನಿರ್ಮಡಿ ಸಿಕ್ಕಳು…

ವಿಮಾನದಲ್ಲಿ ಚಂದ್ರಶೇಖರ್, ಅವನ ಹೆಂಡತಿ ಶಾರದ ಮತ್ತು ಮಗಳು ಚಿನ್ಮಯಿ ಬೆಂಗಳೂರಿನಿಂದ ಬೋಸ್ಟನ್ ನಗರದ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಪ್ರಯಾಣಿಸುತ್ತಿದ್ದರು. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದಬೇಕೆಂಬ ತನ್ನ ಬಹುದಿನದ ಕನಸು ನನಸಾಗುತ್ತಿರುವ ಸಂತೋಷದಲ್ಲಿ ಚಿನ್ಮಯಿ ಇದ್ದಳು. ಮುಂದೇನಾಯಿತು ಕತೆಗಾರ ಪ್ರೊ. ಪ್ರಸನ್ನ ಸಂತೇಕಡೂರು ಅವರ ‘ಸಾವಿನಿರ್ಮಡಿ’ ಕತೆಯನ್ನು ಪೂರ್ತಿಯಾಗಿ ಓದಿ…

ಸಾವಿನಿರ್ಮಡಿ!
ಸಾವಿನಿರ್ಮಡಿ!

ಇದೇನು ಅರ್ಥವಿಲ್ಲದ ವಿಚಿತ್ರ ಹೆಸರು! ಭೂಮಿಯಲ್ಲಿ ಈ ರೀತಿ ಹೆಸರುಗಳು ಇವೆಯೇ? ಎಂದು ನಿಮಗೆ ಆಶ್ಚರ್ಯವಾಗಬಹುದು.

ಈ ಸಾವಿನಿರ್ಮಡಿ ಯಾರು? ಎಂದು ನೀವು ಕೇಳಬಹುದು. ಆ ಹೆಸರಿನ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು? ಎಂದು ನೀವು ಪ್ರಶ್ನಿಸಬಹುದು. ಈ ಭೂಮಿಯಲ್ಲಿ ಕೋಟ್ಯಾಂತರ ಜನರಿದ್ದಾರೆ. ಅವರಲ್ಲಿ ಇವಳು ಒಬ್ಬಳು ಎಂದು ಅನಿಸಬಹುದು ನಿಮಗೆ.

ಅವಳೇನು ದೊಡ್ಡ ವ್ಯಕ್ತಿಯೇ? ನೆನಪಿನಲ್ಲಿಟ್ಟುಕೊಳ್ಳುವಷ್ಟು ದೊಡ್ಡ ಸಾಧಕಿಯೇ? ಯಾವುದೋ ನಾಡಿನ ರಾಜಕುಮಾರಿಯೇ? ರಾಣಿಯೇ? ಯಾವುದೋ ದೇಶದ ಪ್ರಧಾನಮಂತ್ರಿಯೇ?
ರಾಷ್ಟ್ರಾಧ್ಯಕ್ಷೆಯೇ? ಪ್ರಖ್ಯಾತ ಕ್ರೀಡಾಪಟ್ಟುವೆ? ಅಥವಾ ದೊಡ್ಡ ಜ್ಞಾನಿಯೇ? ವಿಜ್ಞಾನಿಯೇ? ಅವಳ ತಂದೆ ತಾಯಿಗಳು ಯಾರು? ಎಂದು ನಿಮ್ಮ ಮನಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಬಹುದು.

ಅನುರೂಪ ಸೌಂದರ್ಯ ರಾಶಿಯಾಗಿದ್ದ ಅವಳು ಸರ್ವಶಾಸ್ತ್ರಗಳನ್ನು ಅರೆದು ಕುಡಿದಿದ್ದಳು ಎಂದು ಹೇಳುತ್ತಾರೆ! ಇಂಗ್ಲೀಷ್ ಭಾಷೆಯಲ್ಲಿ “ಬ್ಯೂಟಿ ವಿಥ್ ಬ್ರೈನ್ಸ್” ಎಂಬ ಒಂದು ನುಡಿಗಟ್ಟಿದೆ. ಅದನ್ನು ಸಾವಿನಿರ್ಮಡಿಯನ್ನು ನೋಡಿಯೇ ಮಾಡಿರಬಹುದು ಎಂದು ತುಂಬಾ ಅನಿಸುತ್ತೆ. ಹಾಗಾದರೆ ಯಾರು ಈ ಜ್ಞಾನರತ್ನ? ಜಗದೇಕಸುಂದರಿ? ಅದು ಹೇಗೆ ಸಾಧ್ಯ? ಸೌಂದರ್ಯ ಮತ್ತು ಜ್ಞಾನ ಎರಡು ಒಂದೇ ಕಡೆ ಇರಲು ಸಾಧ್ಯವೇ? ಹೌದು, ಅದು ಸಾಧ್ಯ. ಕನ್ನಡಿಗರೂ ಮಾತ್ರವಲ್ಲ. ಇಡೀ ಜಗತ್ತೇ ಅವಳ ಬಗ್ಗೆ ಹೆಮ್ಮೆ ಪಡಬೇಕು. ಅವಳ ಬದುಕು ಇತಿಹಾಸದ ಪುಟದಲ್ಲಿ ಸೇರಬೇಕು.

ಅವಳಿಂದ ಹಲವಾರು ಹೆಣ್ಣು ಮಕ್ಕಳು ಜ್ಞಾನ ಮತ್ತು ಸಾಧನೆಯ ಹಾದಿಯಲ್ಲಿ ಸಾಗಿದ್ದಾರೆ. ಅವಳ ಬದುಕು ಹಲವಾರು ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ. ಇಂದಿಗೂ ಅವಳು ನೂರಾರು ಹೆಣ್ಣು ಮಕ್ಕಳಿಗೆ ದೊಡ್ಡ ಪ್ರೇರಣಾಶಕ್ತಿಯಾಗಿದ್ದಾಳೆ.

ಇತಿಹಾಡ್ ಏರ್ ವೆಸ್ ನ ಬೋಯಿಂಗ್ ವಿಮಾನ ತನ್ನ ಕನಸಿನ ಹಾದಿಯಲ್ಲಿ ಯು.ಎ.ಇ. ಯ ಅಬುಧಾಬಿ ವಿಮಾನ ನಿಲ್ದಾಣದಿಂದ ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಮ್ಯಾಸಚೂಸೆಟ್ಸ್ ಸಂಸ್ಥಾನದ ಬೋಸ್ಟನ್ ನಗರದ ಲೋಗನ್ ವಿಮಾನ ನಿಲ್ದಾಣಕ್ಕೆ ಸುಮಾರು ೨೯೦ ಪ್ರಯಾಣಿಕರನ್ನ ಹೊತ್ತು ಆಕಾಶದಲ್ಲಿ ಶಾಂತವಾಗಿ ರೆಕ್ಕೆಬಿಚ್ಚಿ ಹಾರುತ್ತಿರುವ ಹಕ್ಕಿಯ ಹಾಗೆ ಸಾಗುತ್ತಿತ್ತು. ಹಲವಾರು ಪ್ರಯಾಣಿಕರು ಸುಖನಿದ್ರೆಯಲ್ಲಿದ್ದರು. ಗಗನಸಖಿಯರು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುತ್ತಿದ್ದರು. ಆ ಪ್ರಯಾಣಿಕರ ಮಧ್ಯದಲ್ಲಿ ಚಂದ್ರಶೇಖರ್, ಅವನ ಹೆಂಡತಿ ಶಾರದ ಮತ್ತು ಮಗಳು ಚಿನ್ಮಯಿ ಬೆಂಗಳೂರಿನಿಂದ ಬೋಸ್ಟನ್ ನಗರದ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಪ್ರಯಾಣಿಸುತ್ತಿದ್ದರು. ಅದು ಅವರೆಲ್ಲರ ಮೊದಲ ವಿಮಾನ ಪಯಣ. ಶಾರದಾಳಿಗೆ ಅಮೇರಿಕಾ ದೇಶದ ಮೊದಲ ಪಯಣದ ಸಂತೋಷ ಒಂದು ಕಡೆಯಾದರೆ ತಮ್ಮ ಒಬ್ಬಳೇ ಮಗಳನ್ನು ಕಾಣದ ದೇಶದ ಕಾಣದ ಜಾಗದಲ್ಲಿ ಓದಲು ಬಿಟ್ಟು ಬರಬೇಕಲ್ಲ ಎಂಬ ಭಯ ಇನ್ನೊಂದು ಕಡೆ. ಅದೇ ಮಿಶ್ರ ಭಾವದಲ್ಲಿ ಅವಳು ನಿದ್ರಿಸುತ್ತಿದ್ದಳು. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದಬೇಕೆಂಬ ತನ್ನ ಬಹುದಿನದ ಕನಸು ನನಸಾಗುತ್ತಿರುವ ಸಂತೋಷದಲ್ಲಿ ಚಿನ್ಮಯಿ ತನ್ನ ಚಿಕ್ಕ ಲ್ಯಾಪ್ ಟಾಪಲ್ಲಿ ಯಾವುದೋ ಸಿನಿಮಾ ನೋಡುತ್ತಿದ್ದಳು. ಚಂದ್ರಶೇಖರ್ ಮಾತ್ರ ಸ್ವಲ್ಪ ಹೊತ್ತು ಸ್ಥಿತಪ್ರಜ್ಞನಾಗಿ ಮೊಬೈಲ್ ನೋಡುತ್ತ ಕುಳಿತು ಆಮೇಲೆ ಏನೋ ಜ್ಞಾಪಕ ಬಂದದ್ದರಿಂದ ಹಾಗೇ ಕುಳಿತು ತನ್ನ ಬದುಕಿನ ಘಟನೆಗಳನ್ನು ಸಿಂಹಾವಲೋಕನ ಮಾಡುತ್ತಿದ್ದ.

ಅವನ ಮನಸ್ಸಿನಲ್ಲಿ ಪ್ರಾಚೀನ ನಳಂದ ವಿಶ್ವವಿದ್ಯಾನಿಲಯದಲ್ಲಿ ಅವನು ಸದಾ ಓಡಾಡುತ್ತಿರುವ ಹಾಗೆ ಕನಸು ಬೀಳುತ್ತಿರುತ್ತದೆ. ಅಲ್ಲಿ ಅವನ ಮಗಳು ಅಧ್ಯಯನ ಮಾಡುತ್ತಿರುವ ಹಾಗೆ, ಅಲ್ಲಿನ ಘಟಿಕೋತ್ಸವದಲ್ಲಿ ಇವನು ಮತ್ತು ಇವನ ಹೆಂಡತಿ ಶಾರದಾ ಭಾಗವಹಿಸುತ್ತಿರುವ ಹಾಗೆ ವಿಚಿತ್ರ ಕನಸು ಕಾಣುತ್ತಾನೆ. ಇದು ಅವನ ಭ್ರಮೆಯೋ, ಅಥವಾ ಮಗಳ ಶಿಕ್ಷಣದ ಬಗ್ಗೆ ಜವಾಬ್ದಾರಿಯುತ ತಂದೆಯಾಗಿ ಹೆಚ್ಚು ಯೋಚಿಸುತ್ತಿರುವುದರಿಂದ ಆ ರೀತಿ ಮೂಡುವ ಕನಸುಗಳೋ ಅಥವಾ ಯಾವೊದೋ ಎಂದೋ ಕೇಳಿರುವ ಕತೆಯ ನೆನಪೋ ಆ ರೀತಿ ಅವನ ಸ್ಮೃತಿಪಟಲದಲ್ಲಿ ಮೂಡಿಬರುತ್ತಿದೆಯೋ ಅವನಿಗೆ ತಿಳಿಯುತ್ತಿಲ್ಲ. ಎಲ್ಲಿ ನೋಡಿದರೂ ಬೌದ್ಧ ಭಿಕ್ಷುಗಳು, ಬಿಕ್ಕುಣಿಗಳು, ಆಚಾರ್ಯರುಗಳು, ವಿದೇಶಿ ವಿದ್ಯಾರ್ಥಿಗಳು, ಯೋಗಿನಿಯರು, ಸನ್ಯಾಸಿಗಳು ಆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಓಡಾಡುತ್ತಿರುವದನ್ನು ಅವನು ಕಾಣುತ್ತಿದ್ದ. ಅದು ಅವನ ಭ್ರಮೆಯೋ ವಾಸ್ತವವೋ ತಿಳಿಯದಾಗಿತ್ತು.

ದಾವಣಗೆರೆಯ ಮಧ್ಯಮ ವರ್ಗದ ವ್ಯಾಪಾರಿಗಳ ಕುಟುಂಬದಲ್ಲಿ ಹುಟ್ಟಿದ ಚಂದ್ರಶೇಖರ್ ಓದಿನಲ್ಲಿ ಚುರುಕಾಗಿದ್ದರಿಂದ ಜೊತೆಗೆ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿಯಿದ್ದದ್ದರಿಂದ ಶಿವಮೊಗ್ಗ ಸಮೀಪ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಯದಲ್ಲಿ ಇಂಗ್ಲೀಷ್ ಎಂ.ಎ. ಮಾಡಿ ಬೆಂಗಳೂರಿನ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದ. ಅವನ ಹೆಂಡತಿ ಶಾರದಾ ಚಿಕ್ಕಮಗಳೂರಿನವಳು. ಅವಳ ತಂದೆ ತಾಯಿ ಕಾಫಿ ಎಸ್ಟೇಟ್, ಹತ್ತು ಎಕರೆ ಅಡಿಕೆ ತೋಟ ಹೊಂದಿದ್ದರು, ಅವರು ಆಗರ್ಭ ಶ್ರೀಮಂತರಾಗಿದ್ದರು. ಶಾರದಾ ಕೂಡ ಚಂದ್ರಶೇಖರ್ ಜೊತೆಗೆ ಸಹಪಾಠಿಯಾಗಿ ಕುವೆಂಪು ವಿಶ್ವವಿದ್ಯಾನಿಯದಲ್ಲಿ ಇಂಗ್ಲೀಷ್ ಎಂ.ಎ. ಮಾಡಿದ್ದಳು. ಯಾವುದೋ ಅಮೃತ ಘಳಿಗೆಯಲ್ಲಿ ಭದ್ರಾ ನದಿತೀರದಲ್ಲಿ ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿ ತುಂಗಾ ನದಿ ತೀರದ ಶಿವಮೊಗ್ಗದಲ್ಲಿ ಇಬ್ಬರೂ ಹಲವಾರು ಸಿನಿಮಾ ನೋಡಿ ಪ್ರೇಮ ವಿವಾಹವಾಗಿದ್ದರು, ಅದಕ್ಕೆ ಇಬ್ಬರ ಮನೆಯವರು ಒಪ್ಪಿ ಸಂತೋಷದಿಂದ ಆಶೀರ್ವಾದಿಸಿದ್ದರು.

ಶಾರಾದಾಳ ಕಸಿನ್ಸ್ ಹಲವಾರು ಬಾರಿ ಅವಳನ್ನ ವಿದೇಶ ಪ್ರವಾಸಕ್ಕೆ ಕರೆದರೂ ಅವಳು ಕಾರಣಾಂತರಗಳಿಂದ ಯಾವ ಪ್ರವಾಸಕ್ಕೂ ಹೋಗಿರಲಿಲ್ಲ. ಚಂದ್ರಶೇಖರ್ ಗೂ ತನ್ನ ಕಂಪನಿಯಿಂದ ಹಲವಾರು ಬಾರಿ ವಿದೇಶ ಪ್ರಯಾಣದ ಅವಕಾಶ ಸಿಕ್ಕರೂ ಅವನು ಕೂಡ ಹೋಗಿರಲಿಲ್ಲ. ತಾನಾಯಿತು, ತನ್ನ ಸಾಹಿತ್ಯ ಪುಸ್ತಕಗಳಾಯಿತು ಎಂಬಂತೆ ಸದಾಕಾಲ ಯಾವುದಾದರೂ ಪುಸ್ತಕಗಳನ್ನು ಓದುತ್ತ, ಗೆಳೆಯರ ಹತ್ತಿರ ಆ ಪುಸ್ತಕಗಳ ಬಗ್ಗೆ ಚರ್ಚಿಸುತ್ತ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಕಾಲ ಕಳೆದಿದ್ದ. ಮನೆಯಲ್ಲಿ ಶಾರದಾ ತುಂಬಾ ಚೆನ್ನಾಗಿ ಒಳ್ಳೆಯ ಗೃಹಿಣಿಯಾಗಿ ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರಿಂದ ಚಂದ್ರಶೇಖರ್ ಗೆ ಮಗಳು ಇಷ್ಟು ಬೇಗ ದೊಡ್ಡವಳಾಗಿ ದೂರದ ಕನಸಿನ ದೇಶಕ್ಕೆ ಓದಲು ಹೋಗುತ್ತೇನೆ ಅಂದಾಗಲೇ ಅವನು ವಾಸ್ತವ ಪ್ರಪಂಚಕ್ಕೆ ಬಂದದ್ದು ಎಂದು ಹೇಳಬಹುದು. ಮಗಳನ್ನ ತುಂಬಾ ಪ್ರೀತಿಯಿಂದ ಬೆಳೆಸಿ, ಅವಳ ಯಾವುದೇ ಆಸೆ, ಆಕಾಂಕ್ಷೆಗಳಿಗೆ ಇಲ್ಲವೆನ್ನದೆ ತುಂಬಾ ಮುದ್ದಿನಿಂದ ಸಾಕಿದ್ದ.

ಮಗಳು ಚಿನ್ಮಯಿ ಇಷ್ಟು ಬೇಗ ಬೆಳೆದು ಬಿಟ್ಟಳೇ? ಎಂದು ಹಾರುತ್ತಿರುವ ವಿಮಾನದಲ್ಲಿ ಕುಳಿತು ಚಂದ್ರಶೇಖರ್ ಅಚ್ಚರಿಯ ಜೊತೆ ಅವಳ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದ. ಮೊನ್ನೆ ಮೊನ್ನೆ ಪುಟ್ಟ ಹೆಜ್ಜೆಯಿಡುತ್ತ ಓಡಾಡಿಕೊಂಡಿದ್ದ ಚಿನ್ಮಯಿ ಅದು ಯಾವ ಮಾಯದಲ್ಲಿ ಬೇಗ ಬೇಗ ಬೆಳೆದುಬಿಟ್ಟಳು ಎಂದು ತನ್ನನ್ನೇ ಪ್ರಶ್ನಿಸಿಕೊಂಡ. ಸಾಹಿತ್ಯಾಭಿಮಾನಿಯಾಗಿದ್ದ ಅವನು ತಮ್ಮ ಮದುವೆಯಾದ ಮೇಲೆ ಗಂಡು ಮಗುವಿಗಾಗಿ ತುಂಬಾ ಹಂಬಲಿಸಿದ್ದ. ಗಂಡು ಮಗುವಾದರೇ ಕುವೆಂಪು ಅವರು ಕೆ.ಪಿ. ಪೂರ್ಣ ಚಂದ್ರ ತೇಜಸ್ವಿಯವರನ್ನು ಬೆಳೆಸಿದ ಹಾಗೆ, ಬೇಂದ್ರೆಯವರು ವಾಮನ ಬೇಂದ್ರೆಯವರನ್ನು ಬೆಳೆಸಿದ ಹಾಗೆ, ಡಿವಿಜಿಯವರು ಬಿ.ಜಿ.ಎಲ್. ಸ್ವಾಮಿಯವರನ್ನು ಬೆಳೆಸಿದ ಹಾಗೆ ಗೌರೀಶ ಕಾಯ್ಕಿಣಿಯವರು ಜಯಂತ್ ಕಾಯ್ಕಿಣಿಯವರನ್ನು ಬೆಳೆಸಿದ ಹಾಗೆ ನಾನು ನನ್ನ ಮಗನನ್ನು ತುಂಬಾ ಎತ್ತರಕ್ಕೆ ಬೆಳೆಸಬಹುದು ಎಂದು ಯೋಚಿಸಿದ್ದ. ಅದಕ್ಕಾಗಿ ತನ್ನ ಮನೆ ದೇವರು ಕುರುವತ್ತಿ ಬಸವೇಶ್ವರನಲ್ಲಿ ಹರಕೆ ಹೊತ್ತಿದ್ದ. ಆದರೆ, “ತಾನೊಂದು ಬಗೆದಡೆ ದೈವವೊಂದು ಬಗೆವುದು” ಎಂಬಂತೆ ಅವನಿಗೆ ಹೆಣ್ಣು ಮಗುವಾಗಿತ್ತು. ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದ ಶಾರದಾಳನ್ನು ಬೆಂಗಳೂರಿನ ಪ್ರತಿಷ್ಠಿತ ಹೆರಿಗೆ ಆಸ್ಪತ್ರೆಗೆ ಸೇರಿಸಿ ಹುಟ್ಟಲಿರುವ ಮಗುವಿನ ಲಿಂಗ ಯಾವುದಿರಬಹುದೆಂದು ತೀವ್ರ ಕುತೂಹಲದಿಂದ ತಿಳಿಯಲೋಸ್ಕರವೇ ಆಪರೇಷನ್ ಥೇಟರ್ ಮುಂದೆಯೇ ಒಂದು ದಿನವೆಲ್ಲಾ ನಿಂತಿದ್ದ ಚಂದ್ರಶೇಖರ್ ಗೆ ಹೆಣ್ಣು ಮಗು ಎಂದು ತಿಳಿದಾಗ ಮುಖ ಸಪ್ಪಗಾಗಿ ಒಂದು ವಾರವೆಲ್ಲಾ ಆ ಬೇಸರದಲ್ಲಿಯೇ ಇದ್ದ. ಆದರೆ ಶಾರದಾ ಮಾತ್ರ ಹೆಣ್ಣು ಮಗುವಾಗಿದ್ದಕ್ಕೆ ತುಂಬಾ ಸಂತೋಷದಿಂದ ಲವಲವಿಕೆಯಿಂದ ಇದ್ದಳು. ಮಗು ತುಂಬಾ ಮುದ್ದಾಗಿದೆ ಎಂದು ಎರಡು ಕಡೆಯ ಸಂಬಂಧಿಗಳು ಮಗುವಿನ ಸೌಂದರ್ಯ, ಅದರ ಮುದ್ದಾದ ಮುಖವನ್ನ ನೋಡಿ ತುಂಬಾ ಹೊಗಳುತ್ತಿದ್ದರು.

“ಅ, ಅಕ್ಷರದಿಂದ ಹೆಸರಿಡಬೇಕು ಎಂದು ಜ್ಯೋತಿಷಿಗಳು ಹೇಳಿದ್ದಾರೆ” ಎಂದು ಶಾರದಾಳ ಅಪ್ಪ ಅಮ್ಮ ಚಿಕ್ಕಮಗಳೂರಿನಿಂದ ನಕ್ಷತ್ರ, ರಾಶಿ ಎಲ್ಲವನ್ನು ಕೇಳಿಕೊಂಡು ಬೆಂಗಳೂರಿಗೆ ಬಂದಿದ್ದರು. ಆದರೆ, ಚಿನ್ಮಯಿ ಎಂದು ಹೆಸರಿಡಲು ಒಂದು ಘಟನೆ ಕಾರಣವಾಗಿತ್ತು.


  • ಪ್ರೊ. ಪ್ರಸನ್ನ ಸಂತೇಕಡೂರು – ವಿಜ್ಞಾನಿ, ಲೇಖಕರು, ಮೈಸೂರು

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading