ನಿಷ್ಟುರ ನಡೆ – ಸ್ಪಷ್ಟ ನಿಲುವುಗಳ ತ್ಯಾಗರಾಜ್, ತಮ್ಮ ಸೃಷ್ಟಿಯ ಬಹುತೇಕ ಪಾತ್ರಗಳನ್ನು ಏಕೆ ಸಾವಿನಲ್ಲಿ ಪರ್ಯವಸನಗೊಳಿಸುತ್ತಾರೆಂಬುದೇ ಸೋಜಿಗ. ಪತ್ರಕರ್ತರಾದ ರಾಘವನ್ ಚಕ್ರವರ್ತಿ ಅವರು ಟಿ ಕೆ ತ್ಯಾಗರಾಜ್ ಅವರ ‘ಭಾವಭಿತ್ತಿಯ ಚಿತ್ರಗಳು’ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಾಹಿತ್ಯ-ರಾಜಕೀಯಗಳ ಬಗ್ಗೆ ಸ್ಪಷ್ಟ ಜ್ಞಾನವಿಲ್ಲದ ೮೦ರ ದಶಕದ ಹೈಸ್ಕೂಲ್ ದಿನಗಳಲ್ಲಿ, ಓದುತ್ತಿದುದು ’ಪ್ರಜಾವಾಣಿ’, ಮತ್ತು ಶುಕ್ರವಾರದಂದು ’ಕನ್ನಡಪ್ರಭ’. ವಾರಕ್ಕೊಮ್ಮೆ ’ಸುಧಾ’. ೮೧ರ ಆಸುಪಾಸಿನಲ್ಲಿ ಬೆಂಗಳೂರಿಗೊಮ್ಮೆ ಬಂದಿದ್ದಾಗ ಅಕಸ್ಮಾತ್ ಆಗಿ ಸಿಕ್ಕಿದ್ದು ’ಲಂಕೇಶ್ ಪತ್ರಿಕೆ’. ಕಣ್ಣಾಡಿಸುತ್ತಿದ್ದಾಗ ಬಂದ ಪ್ರತಿಕ್ರಿಯೆ ’ಚಿಕ್ ಮಕ್ಳೆಲ್ಲಾ ಅದನ್ ಓದ್ ಬಾರ್ದು ’. ಇಂತಹ ಪ್ರತಿಕ್ರಿಯೆಗಳೇ ’ಪತ್ರಿಕೆ’ಯ ಬಗ್ಗೆ ಹೆಚ್ಚು ಕುತೂಹಲ ಹೆಚ್ಚಿಸಿದವು. ’ಛೇ..ಛೇ’ ಮೊದಲು ಓದುತ್ತಿದ್ದ ನನ್ನಿಷ್ಟದ ಕಾಲಮ್. ಕುಚೋದ್ಯ ಸ್ರವಿಸುವ ಆ ತರದ ಬರಹಗಳು ಇಂದಿಗೂ ಇಷ್ಟ.
ಕ್ರಮೇಣ ಗಮನ ಬೇರೆ ಲೇಖಕರ, ಅಂಕಣಗಳ ಕಡೆ ಹರಿಯಲಾರಂಭಿಸಿತು. ಸ್ವಲ್ಪ-ಸ್ವಲ್ಪವಾಗಿ ಪುಂಡಲೀಕ ಶೇಟ್, ತ್ಯಾಗರಾಜ್, ದ್ವಾರಕನಾಥ್ ಬರಹಗಳು ಇಷ್ಟವಾಗತೊಡಗಿದವು.
೮೦-೮೧ರ ಆ ಕಾಲದಲ್ಲಿ ತಮ್ಮ ನೇರ,ಸ್ಪಷ್ಟ ಬರಹಗಳಿಂದ ತ್ಯಾಗರಾಜ್ ನನಗರಿವಿಲ್ಲದಂತೆಯೇ ಆತ್ಮೀಯರಾಗಿಬಿಟ್ಟರು. ತ್ಯಾಗರಾಜ್ ಬರಹ ಕಾಣದ ಸಂಚಿಕೆಗಳು ಬೋರ್ ಎನಿಸುತ್ತಿದ್ದವು. ವಿಷಯದ ಆಳಕ್ಕೆ ಇಳಿದು, ಪದರ-ಪದರವಾಗಿ ಎಚ್ಚರ ಪೂರ್ವಕ ನಿಖರತೆಯಿಂದ ನೈಜತೆಯ ಅನಾವರಣಮಾಡುತ್ತಿದ್ದ ಅವರ ವರದಿಗಳ ಶೈಲಿಯೇ ಬಹಳ ವಿಭಿನ್ನವಾಗಿರುತ್ತಿತ್ತು.
ಅವರ ಬರಹ ಓದಲಾರಂಭಿಸಿದ ಸುಮಾರು ೩೫ ವರ್ಷಗಳ ನಂತರ ಮೊದಲಬಾರಿ ಅವರ ಭೇಟಿಯಾಯ್ತು. ಅಷ್ಟರಲ್ಲಾಗಲೇ ಅವರು ಫೇಸ್‍ಬುಕ್ ನಲ್ಲಿ ’ಗೆಳೆಯ’ರಾಗಿಬಿಟ್ಟಿದ್ದರು. ಸಾಹಿತ್ಯಪರಿಷತ್ ನ ಸಭಾಂಗಣದಲ್ಲಿ ಅವರ ಮೊದಲ ಕಥಾಸಂಕಲನ ’ಭಾವಭಿತ್ತಿಯ ಚಿತ್ರಗಳು’ ಬಿಡುಗಡೆಯ ಸಮಾರಂಭ. ಸಭಾಂಗಣ ಕಿಕ್ಕಿರಿದಿತ್ತು. ದೂರದ ವಿಜಯಪುರ, ದಾವಣಗೆರೆ, ಬಳ್ಳಾರಿ ಕಡೆಯಿಂದ ಅವರ ಕಡು ಅಭಿಮಾನಿಗಳು ಬಂದಿದ್ದ ನೆನಪು.

ಕಾಲೇಜು ದಿನಗಳಲ್ಲಿ ತ್ಯಾಗರಾಜ್ ರನ್ನು ’ದ್ವೇಷಿ’ಸುತ್ತಲೇ ಅವರ ವರದಿಗಳಿಗಾಗಿ ಕಾತರಿಸುತ್ತಿದ್ದ ಹಲವರಿದ್ದರು. ’ಕುವೆಂಪು ಗೆ ದೇಜಗೌ ಇದ್ದಂತೆ ಲಂಕೇಶ್ ಗೆ ತ್ಯಾಗರಾಜ್ ಅಂತ ಒಬ್ಬ ಇದ್ದಾನೆ’ ಎಂದು ನಮ್ಮ ಬಸವನಗುಡಿಯ ಕಾಲೇಜಿನಲ್ಲೇ ಯಾರೋ ಉದಯೋನ್ಮುಖ ಬುದ್ಧಿಜೀವಿಗಳು , ’ಸೀಸನ್ಡ್ ಪ್ರಗತಿಪರರು ಗುಲ್ಲೆಬ್ಬಿಸಿದ್ದರು. ಈ ಹೋಲಿಕೆಯನ್ನು ಖಂಡ-ತುಂಡವಾಗಿ ಅಲ್ಲಗೆಳೆಯಲಾಗುತ್ತಿತ್ತು. ಬಂಡಾಯ ಸಾಹಿತಿಗಳೊಂದಿಗೆ ಗುರುತಿಸಿಕೊಳ್ಳಲು ಹವಣಿಸುತ್ತಿದ್ದ, ಲಂಕೇಶ್ ಬಗ್ಗೆ ಭಯ-ಭಕ್ತಿ ಯಿದ್ದ ಕೆಲವು ಕನ್ನಡ ವಿದ್ಯಾರ್ಥಿಗಳಂತೂ ’ತ್ಯಾಗರಾಜ್ ಲಂಕೇಶ್ ಸ್ಟೂಡೆಂಟ್ ತರಾ.. ಅಷ್ಟ್ ತಿಳ್ಕೋಳೀ..” ಎಂದು ಲಂಕೇಶ್-ತ್ಯಾಗರಾಜ್ ಪರವಹಿಸುತ್ತಿದ್ದರು.
ಮೊನ್ನೆ ಜೂನ್ ೨೮, ಅವರ ಜನ್ಮದಿನ. ಜನ್ಮದಿನದ ಹಾರ್ದಿಕ (ತಡ) ಶುಭಾಶಯಗಳೊಂದಿಗೆ, ದಶಕದ ಹಿಂದೆ ಅವರ ಕಥಾಸಂಕಲನ ಕುರಿತಾದ ಈ ಬರಹ ಹಂಚಿಕೊಳ್ಳುತ್ತಿದ್ದೇನೆ. ತ್ಯಾಗರಾಜ್ ಮೊದಲಿನಂತೆ ಕಾರ್ಯಶೀಲರಾಗಲಿ.
“ಕಂಡು ಕೇಳಿದ ಘಟನೆಗಳ ನಡುವೆ ನನ್ನೊಳಗಿನ ನಾನು ವಿಮರ್ಶೆಯ ಕುಲುಮೆಯಲ್ಲಿ ಬೇಯುವ ಪ್ರಕ್ರಿಯೆ ಕತೆಗಳಾಗಿ ಮೈತಳೆದಿವೆ.” ೫೬ರ ಹರೆಯದಲ್ಲಿ ಪ್ರಕಟಿಸಿರುವ ತಮ್ಮ ಮೊದಲನೆಯ ಕಥಾಸಂಕಲನದಲ್ಲಿ ತ್ಯಾಗರಾಜ್ ಬರೆದಿರುವ ’ಮೊದಲ ಮಾತಿ’ನ ಈ ಸಾಲುಗಳೇ ಅವರ ಇಡೀ ಕಥಾಗುಚ್ಛದ ತಾತ್ಪರ್ಯವಾಗಿ ನಿಲ್ಲುತ್ತದೆ. ತ್ಯಾಗರಾಜ್ ಸಂಪ್ರದಾಯ ವಿರೋಧಿಯಾಗಿರುವುದರಿಂದ ಸಾಂಪ್ರದಾಯಿಕ ಶೈಲಿಯ ಕತೆಗಳಾವುದೂ ಇಲ್ಲಿ ಇಲ್ಲ .
ಲಂಕೇಶ್ ರೊಂದಿನ ದಶಕಗಳ ಶಿಷ್ಯವೃತ್ತಿ, ಅಪಾರ ಓದು, ಸಾಹಿತ್ಯ-ರಾಜಕೀಯ ವಲಯದ ಹಲವಾರು ವ್ಯಕ್ತಿಗಳ ಒಡನಾಟ, ಕರ್ನಾಟಕದ ರಾಜಕಾರಣದಲ್ಲಾದ ಪಲ್ಲಟಗಳ ಸಮೀಪ ನೋಟ..ಇದೆಲ್ಲದರ ಮಿಳಿತವಾದ ಅನುಭವ ತ್ಯಾಗರಾಜ್ ಬರಹಗಳಲ್ಲಿ ಹೆಪ್ಪುಗಟ್ಟಿದೆ. ಅದರಲ್ಲೂ ಲಂಕೇಶರ ಪ್ರಭಾವ ದಟ್ಟವಾಗಿ ಕಂಡರೂ, ಶೈಲಿ ತ್ಯಾಗರಾಜ್ ದೇ ಆಗಿರುವದು ಈ ಕಥಾಸಂಕಲನದ ವೈಶಿಷ್ಟ್ಯ. ಹೀಗಾಗಿ ಇಲ್ಲಿ ಬರುವ ವರಂಕಿಲ ರಾಧಾಕೃಷ್ಣ, ಎಲ್ಲೇಗೌಡ, ದಿವ್ಯಾತ್ಮ, ಇವರೆಲ್ಲಾ ನಾವು ಕಂಡು ಕೇಳಿರುವ ’ಯಾರನ್ನಾ’ದರೂ ಹೋಲುತ್ತಾರೆ.
“ಕಾರ್ಯರೂಪಕ್ಕೆ ಬಾರದ ಸತ್ತ ಭಾವನೆಗಳಿಂದಾಗಿ ಈವರೆಗಿನ ಸಾವಿನ ನಂಬಿಕೆಗಳ ಲೆಕ್ಕಾಚಾರಕ್ಕೆ ನಿಲುಕದ ರೀತಿಯಲ್ಲಿ” ವಿದಾಯ ಹೇಳುವ ವರಂಕಿಲರ ದ್ವಂದ್ವ ಅನಂತಮೂರ್ತಿಯವರು ಅನುಭವಿಸುತ್ತಿದ್ದ ದ್ವಂದ್ವಕ್ಕೆ ಸರಿಸಮೀಪವಾಗಿದೆ. ಯಾವುದೇ ಬಾಬಾ, ಸ್ವಾಮೀಜಿಗಳನ್ನು ಕಂಡಾಗ ’ಮೈಲಿಗೆಯಾದಂತೆ ಮೈಲು ದೂರ’ ಉಳಿಯುವ ವರಂಕಿಲರು, ’ಗಾಲೀಚ ಗಾವಣ’ಸ್ವಾಮೀಜಿ ಯವರ ವಿಚಾರದಲ್ಲಿ ಮಾತ್ರ ವಿಸ್ಮೃತಿಗೊಳಗಾದವರಂತೆ ಆಡುವುದು, ಸ್ವಾಮಿಗಳ ಮಾತಿನ ಮಾಯೆಯಲ್ಲಿ ಅನಪೇಕ್ಷಿತವಾಗಿ ವಿಹರಿಸುವುದು…’ನಾನು ಯೊಜನೆಯ ಪರ.ಸರ್ಕಾರದ ಪರವಲ್ಲ’ ಎಂದು ವಾದಿಸುವುದು..ಈ ಮಾತಿಗೆ ಪುಷ್ಟಿ ಕೊಡುತ್ತದೆ.
’ಉದ್ಭವ’ದ ರಾಘಣ್ಣ, ಮೂರ್ತಿರಾಯರ ’ಅಷಾಡಭೂತಿ’ ಗಳನ್ನು ನೀವಾಳಿಸಿ ಎಸೆಯಬಲ್ಲ ಗ್ರಾಮಸಿಂಹ ‘ಡಾ.ದೊರಕಪ್ಪನವರ್’ ಧೂರ್ತತೆ, ವಂಚನೆಗಳ ರೂಪಕವಾಗಿದ್ದಾನೆ. ತನ್ಮೂಲಕ ಸಮಾಜಕ್ಕೆ ಒಂದು ಎಚ್ಚರಿಕೆಯೂ ಆಗಿದ್ದಾನೆ. ತಾವು ನಂಬಿದ ಆದರ್ಶ-ಮೌಲ್ಯಗಳೇ ಕೊನೆಯಲ್ಲಿ ಪ್ರಶ್ನಾರ್ಥಕವಾಗಿ ಕಾಡಿ ಶಾಂತಿ-ನೆಮ್ಮದಿ ಕಳೆದುಕೊಳ್ಳುವ ಸ್ವಾಮಿ ಸರ್ ವಿಷಾದ ಉಂಟುಮಾಡುತ್ತಾರೆ. ’ಕರಿಯಪ್ಪನ ಆರ್ತಧ್ಯಾನದ ಪರಿಣಾಮವು’ ನಲ್ಲಿ ತ್ಯಾಗರಾಜ್ ರ ವೀರಾವೇಶ ಗಮನಾರ್ಹವಾಗಿದೆ. ಶ್ರಮಿಕವರ್ಗದ ಬಗೆಗಿನ ಅವರ ಕಳಕಳಿ ಇಡೀ ಕಥೆಯ ಜೀವಾಳ. ಎಂತಹ ಪ್ರಬಲ-ಪ್ರಭಾವೀವರ್ಗದವನಾದರೂ, ಶ್ರಮಿಕರ ಹಂಗಿಗೆ ಒಳಪಡಲೇಬೇಕಾದ ಸಹಜ ಅನಿವಾರ್ಯತೆಯನ್ನು ತ್ಯಾಗರಾಜ್ ಮನಕ್ಕೆ ನಾಟುವಂತೆ ಕಟ್ಟಿಕೊಡುತ್ತಾರೆ. ತನ್ನ ತಪ್ಪುಗಳ ಅರಿವಾದ ಮೇಲೆಯೂ ಅದನ್ನು ತಿದ್ದಿಕೊಳ್ಳದೇ ಸಾವಿಗೊಳಗಾಗುವ ದಿವ್ಯಾತ್ಮನ ಮನೋವಿಶ್ಲೇಷಣೆಯನ್ನು ಓದಿಯೇ ತೀರಬೇಕು.

ನಿಷ್ಟುರ ನಡೆ-ಸ್ಪಷ್ಟ ನಿಲುವುಗಳ ತ್ಯಾಗರಾಜ್, ತಮ್ಮ ಸೃಷ್ಟಿಯ ಬಹುತೇಕ ಪಾತ್ರಗಳನ್ನು ಏಕೆ ಸಾವಿನಲ್ಲಿ ಪರ್ಯವಸನಗೊಳಿಸುತ್ತಾರೆಂಬುದೇ ಸೋಜಿಗ. ಸೂಕ್ಷ್ಮವಾಗಿ ಗಮನಿಸಿದಾಗ ’ಸಾವು’ ಇಲ್ಲಿ ಪ್ರಾಯಶ್ಚಿತ್ತವಾಗಿ ಕಾಣುತ್ತದೆ. ಪರಿಸರವಾದಿ ಎಲ್ಲೇಗೌಡನೇ ಇಲ್ಲಿ ಹೆಚ್ಚು ಸಂಯಮಿಯಾಗಿ ಕಾಣುತ್ತಾನೆ. ತನ್ನ ನಿಜವಾದ ಮುಖದ ಅರಿವು ಅವನಿಗಾಗುತ್ತದೆ. ವರಂಕಿಲ, ಎಲ್ಲೇಗೌಡ, ದಿವ್ಯಾತ್ಮ ತಮ್ಮ ಆತ್ಮಸಾಕ್ಷಿಗೆ ಸ್ಪಂದಿಸುವ ವಿಭಿನ್ನ ನಿಲುವು-ಕ್ರಿಯೆಗಳಿಂದಾಗಿ ಇಡೀ ಕಥಾಸಂಕಲನದ ಜೀವಸತ್ವವಾಗಿದ್ದಾರೆ. ವಿಮರ್ಶಕ ಶಿವರಾಮು ಕಾಡನಕುಪ್ಪೆ ತಮ್ಮ ಸೊಗಸಾದ ಮುನ್ನುಡಿಯಲ್ಲಿ ಹೇಳಿರುವಂತೆ “ತ್ಯಾಗರಾಜ್ ಕತೆಗಳ ಹಿನ್ನೆಲೆಯಾಗಿ ದಟ್ಟ ಜೀವದ್ರವ್ಯ”ವೇ ಇಲ್ಲಿ ಕೆಲಸ ಮಾಡಿದೆ.
ರಾಜಕೀಯ-ಹೆಗಡೆ-ದೇಗೌ-ಪಟೇಲ್-ರೇವಜೀತು-ಬಾಟ್ಲಿಂಗ್ ಕಾಲಘಟ್ಟದ ತ್ಯಾಗರಾಜ್ ರನ್ನು ಇಲ್ಲಿ ಊಹಿಸಿಕೊಳ್ಳುವುದೂ ಕಷ್ಟವೆನಿಸುತ್ತದೆ. ೮೦-೯೦ ರ ದಶಕದಲ್ಲಿ ಪುಂಡಲೀಕ ಶೇಟ್, ಕುಷ್ಟಗಿ, ಸ್ವಾಮಿಆನಂದ, ರoತಹ ಅಸಾಂಪ್ರದಾಯಿಕ ಪತ್ರಕರ್ತರೊಂದಿಗೆ ’ಲಂಕೇಶ್ ಪತ್ರಿಕೆ’ಗೆ ಒಂಥರಾ ’ಸ್ಟಾರ್’ಗಿರಿ ತಂದುಕೊಟ್ಟ ತ್ಯಾಗರಾಜ್, ತಮ್ಮಲ್ಲಿನ ಪತ್ರಕರ್ತನ ಕೋಟಲೆ, ಒತ್ತಡ, ಸಮಯಾಭಾವಗಳನ್ನೆಲ್ಲಾ ಬದಿಗಿಟ್ಟು ಸುಮಾರು ದಶಕಗಳಿಂದ ಬರೆದ ಕತೆಗಳನ್ನು ’ಭಾವಭಿತ್ತಿಯ’ ಚಿತ್ರಗಳಾಗಿ ನಮ್ಮ ಮುಂದಿಟ್ಟಿದ್ದಾರೆ. ಕನ್ನಡ ಕಥಾಸಕ್ತರಿಗೆ ವಿಭಿನ್ನ ಚೌಕಟ್ಟಿನೊಳಗಿನ ಸಮಾಜಮುಖಿ ಕತೆಗಳ ಅಪರೂಪದ ಸಂಕಲನವೊಂದು ದೊರಕಿದೆ.
ಮೊನ್ನೆ ಪುಸ್ತಕ ಬಿಡುಗಡೆ ಸಮಾರಂಭದಂದು ಹಲವು ದಶಕಗಳಿಂದ ಬಲ್ಲ ತ್ಯಾಗರಾಜ್ ರನ್ನು ಮೊದಲಬಾರಿ ’ನೋಡಿ’ದಾಗ ನಮ್ಮ ಸ್ಕೂಲ್-ಕಾಲೇಜ್ ದಿನಗಳ ನೆನಪಾದವು. ಹೆಚ್ಚು ಮಾತನಾಡಲಾಗಲಿಲ್ಲ.. ಪುಸ್ತಕಕ್ಕೆ ಹಸ್ತಾಕ್ಷರ ಹಾಕಿಕೊಟ್ಟು ’ನಿಮ್ಮ ಅಭಿಪ್ರಾಯ ಖಂಡಿತ ತಿಳಿಸಿ’ ಎಂದರು. ಮೊನ್ನೆ ಮಿಂಚಂಚೆ ಕಳಿಸಿ ಮತ್ತೊಮ್ಮೆ ಜ್ಞಾಪಿಸಿ, ನಾನೊಬ್ಬ ವಿಮರ್ಶಕನೇನೋ ಎಂಬ ಭ್ರಮೆ ಉಂಟುಮಾಡಿದರು. ತ್ಯಾಗರಾಜ್ ಪ್ರೀತಿಗೆ ಋಣಿ.
- ರಾಘವನ್ ಚಕ್ರವರ್ತಿ
