ಢೋಂಗೀ ‘ಮಹಾರಾಜ್’ ಮತ್ತು ಕರ್ಸನ್ ದಾಸ್ ಮುಲ್ಜಿ ಸಿನಿಮಾದ ಕುರಿತು ಲೇಖಕರಾದ ಡಾ ಗಿರಿಜಾ ಶಾಸ್ತ್ರಿ ಅವರು ಹಂಚಿಕೊಂಡಿದ್ದಾರೆ,ತಪ್ಪದೆ ಮುಂದೆ ಓದಿ…
೨೧ ನೆಯ ಶತಮಾನದ ಕಾಲುಭಾಗ ಕಳೆದಿರುವ ಈ ಹೊತ್ತಿನಲ್ಲಿ ಮಹಿಳೆಯರ ಸ್ಥಾನಮಾನ ಈ ಮಟ್ಟಕ್ಕೆ ವಿಕಾಸ ಹೊಂದಲು, ಭಾರತೀಯ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಹುಟ್ಟಿಕೊಂಡ ಸಮಾಜ ಸುಧಾರಕರ ಪರಿಶ್ರಮ, ತ್ಯಾಗ ಬಲಿದಾನಗಳೇ ಕಾರಣ. ಈ ನೆಲೆಯಲ್ಲಿ ಅವರ ಯೋಗದಾನ ಬಹಳವಿದೆ. ಅಂತಹವರಲ್ಲಿ ಗುಜರಾತಿನಲ್ಲಿ ಹುಟ್ಟಿದ ಮೇಧಾವಿ, ಪತ್ರಕರ್ತ, ರಾಜಕೀಯ ಮುತ್ಸಿದ್ದಿ, ಸಮಾಜ ಸುಧಾರಕ , ನ್ಯಾಷನಲ್ ಕಾಂಗ್ರೆಸ್ ಸ್ಥಾಪಿಸಲು ಅಡಿಪಾಯಹಾಕಿದವರಲ್ಲಿ ಒಬ್ಬನಾದ ‘ಕರ್ಸನ್ ದಾಸ್ ಮುಲ್ಜಿ (‘1832-1871)
( ಕೃಷ್ಣದಾಸ್ ಪದದ ಅಪಭ್ರಂಶವಿರಬಹುದು) ಎಂಬವವರೂ ಒಬ್ಬರು. ಆದರೆ ಕರ್ಸನ್ ದಾಸ್ ಗೆ ಯಾವಾಗಲೂ ತಾನು ‘ದಾಸ’ ನಾಗುವುದರ ಬಗ್ಗೆಯೇ ಪ್ರತಿರೋಧ!
ಮುಂಬಯಿ ಎಲ್ಫಿನ್ ಸ್ಟನ್ ಕಾಲೇಜಿನ ಮೂಲಕ ದಾದಾಭಾಯಿ ನವರೋಜಿಯವರ ಸಂಪರ್ಕಕ್ಕೆ ಬಂದ ಕರ್ಸನ್ , ಅವರನ್ನು ತಮ್ಮ ಗರುವೆಂದೇ ಬಗೆದರು ನವರೋಜಿ ಕರ್ಸನ್ ಅವರನ್ನು ರೂಪಿಸಿದರು. ಇವರ ಬಗ್ಗೆ ನಾನಂತೂ ಇದುವರೆಗೂ ಕೇಳಿರಲಿಲ್ಲ. ಇದಕ್ಕೆ ನೆಟ್ ಫ್ಲಿಕ್ಸ್ ನ ‘ ಮಹಾರಾಜ್’ ಚಿತ್ರಕ್ಕೆ ನಾನು ಋಣಿಯಾಗಲೇಬೇಕು.

ಫೋಟೋ ಕೃಪೆ : ಅಂತರ್ಜಾಲ
ದೇವದೂತನೆಂದು ( ಮಹಾರಾಜ್!) ತನ್ನನ್ನು ತಾನೇ ಘೋಷಿಸಿಕೊಂಡ ಜ(ಯ)ದುನಾಥ ಎಂಬ ಒಬ್ಬ ಢೋಂಗೀ ದೇವಮಾನವ, ಸಹಜವಾಗಿಯೇ ಸಮಾಜಿಕವಾಗಿ ಪ್ರಭಾವೀ ವ್ಯಕ್ತಿ. ಅವನ ಪಾಶವೀ ಮುಖವನ್ನು ಬಯಲಾಗಿಸಿದ,ಜೊತಗೆ ಧಾರ್ಮಿಕ ಮೌಢ್ಯ ಹಾಗೂ ಭ್ರಷ್ಟತೆಯ ವಿರುದ್ಧ ಬಂಡೆದ್ದು ಯಶಸ್ವಿಯಾದ ಕರ್ಸನ್ ದಾಸ್ ನ ಸಾಹಸದ ನೈಜಕತೆಯೇ ಈ ಸಿನಿಮಾದ ವಸ್ತು.
ಸಮಾಜ ಸುಧಾರಣೆಗಳ ಪಿತಾಮಹನೆಂದು ಗುರುತಿಸಲಾದ ರಾಜಾರಾಮ್ ಮೋಹನ ರಾಯನ (1772-1833)ಕಾಲಾನಂತರದಲ್ಲಿ ಬಂದ ಮೊದಲ ತಲೆಮಾರಿನ ಸುಧಾರಕರಲ್ಲಿ ಇವನನ್ನು ( 1832-1871) ಗುರುತಿಸಬಹುದು. ಸಾಮಾಜಿಕ ಸುಧಾರಣೆ ಇನ್ನೂ ಮೊಳಕೆಯೊಡೆಯುತ್ತಿರುವ ಆ ಹಂತದಲ್ಲೇ ತೀವ್ರತರದ ಹೋರಾಟ ಕರ್ಸನ್ ಗೆ ಸಾಧ್ಯವಾದದ್ದು ಆಶ್ಚರ್ಯಕರ.
ಜದುನಾಥನೆಂಬ ಸ್ವಾಮಿ ಧರ್ಮದ ಹೆಸರಿನಲ್ಲಿ ಭಕ್ತಿಯ ಹೆಸರಿನಲ್ಲಿ ಅಮಾಯಕರಾದ ಹೆಣ್ಣುಮಕ್ಕಳನ್ನು ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದುದರ ವಿರುದ್ಧ ಕರ್ಸನ್ ದಾಸ್ ಧ್ವನಿ ಎತ್ತುತ್ತಾನೆ. ಸಂಪ್ರದಾಯದ ಮೌಢ್ಯಕ್ಕೆ ಸಿಲುಕಿದ ಗುಜರಾತೀ ಸಮಾಜ, ಜದುನಾಥನನ್ನು ಒಬ್ಬ ದೇವರ ದೂತನೆಂದೇ ನಂಬಿರುತ್ತದೆ. (ದೇವರ)ಚರಣ ಸೇವೆ (ಗಂಡನೊಡನೆ ಮೊದಲ ರಾತ್ರಿ ಕಳೆಯುವ ಮೊದಲು ಜದುನಾಥನಿಗೆ ಅರ್ಪಿಸಿಕೊಳ್ಳುವ ಪದ್ಧತಿ) ಎಂಬ ನೆಪದಲ್ಲಿ ತನ್ನ ಕಣ್ಣಿಗೆ ಬಿದ್ದ ಹೆಣ್ಣುಮಕ್ಕಳನ್ನೆಲ್ಲಾ ಜದುನಾಥ ತನ್ನ ಇರುಳ ಸೇವೆಗೆ ಕರೆಸಿಕೊಳ್ಳುತ್ತಾನೆ. ಈ ಸೇವೆಯನ್ನು ಹಣಕೊಟ್ಟು ನೋಡಲು ಹಣವಂತ ಜನ ತಯಾರಿರುತ್ತಾರೆ! ಅವನ ಕೃಪಾಕಟಾಕ್ಷಕ್ಕೆ ಒಳಗಾದ ಅಂತಹ ಹೆಣ್ಣುಮಕ್ಕಳು ಬಹಳ ಅದೃಷ್ಟಶಾಲಿಗಳೆಂದೂ, ಅಂತಹವರಿಗೆಲ್ಲ ಮೋಕ್ಷಪ್ರಾಪ್ತಿಯಾಗುವುದೆಂದು ಜನ ನಂಬಿರುತ್ತಾರೆ / ನಂಬಿಸಿರುತ್ತಾನೆ. ಹೆಣ್ಣುಮಕ್ಕಳೂ ನಂಬಿ ಅವನ ಬಳಿಗೆ ಹೋಗುತ್ತಾರೆ.
ಕರ್ಸನ್ ದಾಸನೊಂದಿಗೆ ಮದುವೆ ನಿಶ್ಚಯವಾದ ಕಿಶೋರಿ ಎನ್ನುವ ಹುಡುಗಿಯೂ ಹೀಗೆ ಬಲಿಯಾದಾಗ ಅವನು ಬಂಡೇಳುತ್ತಾನೆ. ಅವಳನ್ನು ಮದುವೆಯಾಗಲು ತಿರಸ್ಕರಿಸಿದಾಗ ಅವಳು ಬಾವಿಗೆ ಬಿದ್ದು ಸಾಯುತ್ತಾಳೆ. ಈ ಸಂದರ್ಭದಲ್ಲಿ ನವರೋಜಿಯವರು ಸಮಾಜಸುಧಾರಣೆಯ ಮೂರು ಮುಖ್ಯ ಅಂಶಗಳನ್ನು ತಿಳಿಯಪಡಿಸುತ್ತಾರೆ. ದಯಪಾಲಿಸುತ್ತಾರೆ. ಅವು ಮೊದಲು ತಪ್ಪಿತಸ್ಥರಿಗೆ ಅವರ ತಪ್ಪಿನ ಬಗೆಗೆ ಅರಿವನ್ನುಂಟು ಮಾಡಿಸುವುದು (ರಿಲೈಸೇಷನ್), ಎರಡನೆಯದು ಆ ತಪ್ಪನ್ನು ಸುಧಾರಿಸಿಕೊಳ್ಳಲು ಅವಕಾಶ ಮಾಡಿಕೊಡುವುದು, (ರಿಫಾರ್ಮೇಷನ್) ಮೂರನೆಯದು ಹಾಗೆ ಸುಧಾರಣೆಯಾದ ಅವರನ್ನು ಮತ್ತೆ ಸಮಾಜದಲ್ಲಿ ಸೇರಿಸಿಕೊಳ್ಳುವುದು. (ರಿಹ್ಯಾಬಿಲಿಟೇಷನ್) “ನೀನು ತಪ್ಪಿನ ಅರಿವನ್ನೇನೋ ಮಾಡಿಸಿದೆ. ಆದರೆ ಅದನ್ನು ಸುಧಾರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಸುಧಾರಣೆ ನಿನ್ನಿಂದಲೇ ಶುರುವಾಗಬೇಕಿತ್ತು ಕರ್ಸನ್” ಎಂದು ಹೇಳುತ್ತಾರೆ. ಅಲ್ಲದೇ ಸಾಮಾಜಿಕ ಬದಲಾವಣೆಗೆ ಪತ್ರಿಕೆಯ ಮಹ್ವದ ಕುರಿತು ಮನದಟ್ಟು ಮಾಡಿಸುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ
ದಾದಾಭಾಯಿ ನವರೋಜಿ ಹೀಗೆ ಮನದಟ್ಟು ಮಾಡಿಸಿದಮೇಲೆ ಅವನ ಹೋರಾಟದ ದಿಕ್ಕು ಮತ್ತು ಸ್ವರೂಪ ಸ್ಪಷ್ಟವಾಗುತ್ತದೆ. ಕಿಶೋರಿಯ ಆತ್ಮಹತ್ಯೆ ಅವನ ಹೋರಾಟವನ್ನು ಪ್ರಭಾವಿಸಿದರೆ, ಅವನ ಪತ್ರಿಕಾವ್ಯವಸಾಯದಲ್ಲಿ ಕರಡು ತಿದ್ದುವ ಸಹಾಯಕಿಯಾಗಿ ಬಂದ ವಿರಾಜ್ ಎಂಬ ಹುಡುಗಿ ಅವನ ಹೋರಾಟ ತೀವ್ರಗತಿಯಲ್ಲಿ ಸಾಗಲು ಒತ್ತಾಸೆ ನೀಡುತ್ತಾಳೆ.
ಅವಳೂ ಕೂಡ ಬಾಲ್ಯದಲ್ಲೇ ಜುದುನಾಥ ಬೀಸಿದ ಬಲೆಗೆ ಪಕ್ಕಾಗಿದ್ದರೂ ಅಲ್ಲಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿರುತ್ತಾಳೆ. ಆದರೆ ಇಂತಹ ಕೃತ್ಯವನ್ನು ಬಯಲಿಗೆಳೆಯಲು ವಿದ್ವಾಂಸನಾದ ಕರ್ಸನ್ ದಾಸ್ ಲೇಖನಗಳನ್ನು ಬರೆದಾಗ , ಅದರ ಪರಿಣಾಮದ ತೀವ್ರತೆಯ ಅರಿವಿದ್ದ ಸ್ವತಃ ದಾದಾಭಾಯಿ ನವರೋಜಿಯವರೇ ತಮ್ಮ ಪತ್ರಿಕೆಯಲ್ಲಿ (Rast goftar) ಆ ಲೇಖನವನ್ನು ಪ್ರಕಟಿಸಲು ಹಿಂಜರಿಯುತ್ತಾರೆ. ಅದಕ್ಕಾಗಿ ತನ್ನದೇ ಆದ ‘ಸತ್ಯಪ್ರಕಾಶ’ ಎನ್ನುವ ಪತ್ರಿಕೆಯನ್ನು ಪ್ರಾರಂಭಿಸುತ್ತಾನೆ. ಅವುಗಳ ಪ್ರತಿಗಳನ್ನು ಜದುನಾಥರ ಭಕ್ತರು ಸುಟ್ಟುಹಾಕುತ್ತಾರೆ. ಕರ್ಸನ್ ದಾಸನ ವಿರುದ್ಧ ಮುಂಬಯಿ ಕೋರ್ಟಿನಲ್ಲಿ ಮಾನನಷ್ಠ ಮೊಕದ್ದಮೆಯನ್ನು ಜದುನಾಥ ಹೂಡುತ್ತಾನೆ. ಆದರೆ ಅದರಲ್ಲಿ ಅವನು ಯಶಸ್ವಿಯಾಗುವುದಿಲ್ಲ. ಕರ್ಸನ್ ಕೋರ್ಟಿನಲ್ಲಿ ಮಾಡುವ ಪ್ರಭಾವೀ ಭಾಷಣವನ್ನು ಕೇಳಿದ ಸಂತ್ರಸ್ತ ಹೆಣ್ಣುಮಕ್ಕಳೆಲ್ಲಾ ಒಬ್ಬಬ್ಬರಾಗಿ ಜದುನಾಥನ ವಿರುದ್ಧ ಸಾಕ್ಷಿ ಹೇಳಲು ಮುಂದು ಬರುತ್ತಾರೆ. ಜದುನಾಥ ಸೋಲು ಅನುಭವಿಸುತ್ತಾನೆ. ಆನಂತರ ಅವನ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಕೋರ್ಟ್ ಜಾರಿಗೊಳಿಸುತ್ತದೆ. ಈ ಸುಧಾರಣಾ ಚಳವಳಿಯನ್ನು ಪ್ರಭಾವಿಸುವಲ್ಲಿ, ಪ್ರೇರೇಪಿಸುವಲ್ಲಿ ಅದನ್ನು ತೀವ್ರಗತಿಗೆ ಕೊಂಡೊಯ್ಯುವಲ್ಲಿ ಮಹಿಳೆಯರೇ ಮುಖ್ಯಪಾತ್ರವಹಿಸಿರುವುದು ಬಹಳ ಮಹತ್ವದ ಸಂಗತಿಯಾಗಿದೆ.
ಇಡೀ ಸಮಾಜವನ್ನು ಎದುರುಹಾಕಿಕೊಂಡು ಹೋರಾಡುವುದು ಸುಲಭವಲ್ಲ. ಇದಕ್ಕಾಗಿ ಅವನನ್ನು ಜಾತಿಯಿಂದ ಹೊರಹಾಕಲಾಗುತ್ತದೆ. ಆದರೆ ಅವನು ಹೀಗೆ ಜಾತಿಭ್ರಷ್ಟನಾಗುವುಕ್ಕೆ ಕಾರಣ ಇಂಗ್ಲೇಂಡಿಗೆ ಹೋಗುವುದರ ಮೂಲಕ ಸಮುದ್ರ ದಾಟಿದ್ದು, ಎಂದು ವಿಕೀಪೀಡಿಯಾ ಹೇಳುತ್ತದೆ. ಸಿನಿಮಾದಲ್ಲಿ ಪರಿಣಾಮ ರಮಣೀಯತೆಗಾಗಿ ಬಹುಶಃ ಈ ಮಸಾಲಾ ಸೇರಿಸಿರಬಹುದು.
ಇಪ್ಪತ್ತೊಂದನೆ ಶತಮಾನದ ಈ ಆಧುನಿಕ ಸಂದರ್ಭದಲ್ಲೂ ಅನೇಕ ‘ದೇವದೂತರು’ ಹುಟ್ಟಿಕೊಂಡು, ರಾಜಕೀಯ ಶಕ್ತಿಗಳ ಬಲದಿಂದ ಅನೇಕ ಹೆಣ್ಣುಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಕೋರ್ಟು ಬೇಲ್ ದಯಪಾಲಿಸುತ್ತಿದೆ. ಶಿಕ್ಷೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ಧಾರ್ಮಿಕ ಸಂಸ್ಥೆಗೆ ಇಡೀ ಸಮಾಜವನ್ನು ತನ್ನ ಕಪಿಮುಷ್ಠಿಯಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಶಕ್ತಿ ಇದೆ. ನಮ್ಮನ್ನು ಆಳುತ್ತಿರುವವರು ನಿಜವಾಗಿ ಧರ್ಮಗುರುಗಳು, ಅವರನ್ನು ಪೋಷಿಸುತ್ತಿರುವ ಬಂಡವಾಳಶಾಹಿಗಳು ಮತ್ತು ಧರ್ಮವನ್ನೇ ಬಂಡವಾಳಮಾಡಿಕೊಂಡಿರುವ ರಾಜಕೀಯ ಶಕ್ತಿಗಳು ! ರಕ್ಷಿಸಬೇಕಾದವರೇ ಭಕ್ಷಕರಾಗುತ್ತಿದ್ದಾರೆ. ಹರ ಕೊಲ್ಲಲ್ ಪರ ಕಾಯ್ವನೇ?
ಇಂದಿಗೂ ಈ ಸಮಸ್ಯೆ ದಹಿಸುತ್ತಿರುವಾಗ, ಹತ್ತೊಂಬತ್ತನೇ ಶತಮಾನದಲ್ಲಿ ಕರ್ಸನ್ ದಾಸ್ ಗೆ ಲಭಿಸಿದ ಜಯವು ಅಚ್ಚರಿ ಉಂಟುಮಾಡುತ್ತದೆ. ಆ ಕಾಲವೇ ಚೆನ್ನಾಗಿತ್ತೇನೋ? ಪ್ರಾಮಾಣಿಕ ಹೋರಾಟಕ್ಕೆ ಜಯ ಸಿಗುತ್ತಿತ್ತೇನೋ? ಈಗ ನಾವು ಹತ್ತೊಂಬತ್ತನೇ ಶತಮಾನಕ್ಕಿಂತಲೂ ಇನ್ನೂ ಹಿಂದೆ ಸರಿಯುತ್ತಿದ್ದೇವೇನೋ? ಎನಿಸುತ್ತದೆ.
೨೦೨೪ ರಲ್ಲಿ ಈ ಚಿತ್ರದ ಪ್ರದರ್ಶನಕ್ಕೆ ಅನೇಕ ಸಂಪ್ರದಾಯಸ್ಥರು ಅಡ್ಡಿಪಡಿಸಿದ್ದರೂ ಅದನ್ನು ತಿರಸ್ಕರಿಸಿ ಪ್ರದರ್ಶನಕ್ಕೆ ಗುಜರಾತ್ ಹೈಕೋರ್ಟು ಅನುವು ಮಾಡಿಕೊಟ್ಟದ್ದು ಮಹತ್ವದ ಸಂಗತಿ. ಕರ್ಸನ್ ಆಗಿ ಅಮೀರ್ ಖಾನ್ ಮಗ ಜುನೇದ್ ಖಾನನದು ಬಹಳ ಪ್ರಬುದ್ಧ ಅಭಿನಯ. ಸಾಮಾಜಿಕ ಕಳಕಳಿ ಇರುವವರೆಲ್ಲ ನೋಡಲೇಬೇಕಾದ ಚಿತ್ರ.
- ಡಾ ಗಿರಿಜಾ ಶಾಸ್ತ್ರಿ – ಹಿರಿಯ ಲೇಖಕರು, ಕವಿಗಳು, ಬೆಂಗಳೂರು.
