ಉದಯಕುಮಾರ್‌ಹಬ್ಬುರವರ ಕೃತಿ ಪರಿಚಯ

ಲೇಖಕರಾದ  ಉದಯಕುಮಾರ್‌ಹಬ್ಬು ಅವರ ನೆರೂದಾನ ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ಹತಾಶೆಯ ಹಾಡು ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ನೆರೂದಾನ ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ಹತಾಶೆಯ ಹಾಡು
ಕನ್ನಡಕ್ಕೆ : ಉದಯಕುಮಾರ್‌ಹಬ್ಬು

ನಾಲ್ಕು ದಶಕಗಳ ಹಿಂದೆ ನಾವು ಕನ್ನಡ ಎಂ.ಎ. ಮಾಡುತ್ತಿದ್ದಾಗ ನಮ್ಮ ಪಠ್ಯದ ಅಂಗವಾಗಿದ್ದ ನೆರೂದಾನ ಪದ್ಯಗಳ ಎರಡು ಸಾಲುಗಳು, ಈಗ‌ ಕೂಡಾ ನನ್ನ‌ ನೆನಪಾಗಿ‌ ಕಾಡುತ್ತಿವೆ. ಅವು ಕಮ್ ಅಂಡ್ ಸೀ ದಿ‌ ಬ್ಲಡ್‌ ಇನ್ ದಿ ಸ್ಟ್ರೀಟ್ಸ್ ಮತ್ತು ಲವ್ ಈಸ್ ಶಾರ್ಟ್ ಅಂಡ್ ಫರಗೆಟ್ಟಿಂಗ್ ಈಸ್ ಸೋ ಲಾಂಗ್ . ಮೊದಲ ಸಾಲು ಅವನು ಭಾಗವಾಗಿದ್ದ ಚಿಲಿದೇಶದ ರಾಜಕೀಯ ವಿಪ್ಲವದ ಪರಿಣಾಮ. ಎರಡನೆಯದು ಅವನ ಪ್ರೇಮ ವೈಫಲ್ಯದ ಪರಿಣಾಮ. ಇದರ ಸಾಕ್ಷಾತ್ಕಾರ ಆಗಿದ್ದು, ನನ್ನ ಗೆಳೆಯರಾದ‌ ಉದಯಕುಮಾರ್ ಹಬ್ಬು ಅವರ ಈ ಅನುವಾದವನ್ನು ಓದಿದಾಗಲೆ.

ಈಗಾಗಲೆ ನೆರೂದಾನ ಪದ್ಯಗಳನ್ನು ಕೆಲವರು ಕನ್ನಡಕ್ಕೆ ತಂದಿದ್ದರೂ, (ನಿಸಾರ್ ಅಹಮದ್ ಮತ್ತು ನನ್ನ ಮೇಷ್ಟು ಕಾಳೇಗೌಡ ನಾಗವಾರ ಹಾಗೂ ನಯನಾ ಕಶ್ಯಪ್ ) ಅವನ ಮೊದಲ ಸಂಕಲನವನ್ನು , ಇಡಿಯಾಗಿ ಅನುವಾದ ಮಾಡಿದವರು ಉದಯಕುಮಾರ್ ಹಬ್ಬು ಮಾತ್ರ ಎಂದು ಕಾಣುತ್ತದೆ. ಇದರಲ್ಲಿ ಮೇಲೆ ಉಲ್ಲೇಖಿಸಿದ ಮೊದಲ ಸಾಲಿನ ವಿಪ್ಲವ ಇಲ್ಲದಿದ್ದರೂ, ಅವನ ಮೊದಲ ಪ್ರೇಮ ಮತ್ತು ಅದರ ವೈಫಲ್ಯದಿಂದ ಮಡುಗಟ್ಟಿದ ವಿರಹ ಈ ಕವಿತೆಗಳಲ್ಲಿ ಹಾಸುಹೊಕ್ಕಾಗಿವೆ.

ಈ ಕವನ ಸಂಕಲನವನ್ನು ಅರಿಯಲು ಬಂದರನ್ನು, ಸಮುದ್ರವನ್ನು, ಅಲ್ಲಿನ ಅಲೆಗಳ ಅಲ್ಲೋಲಕಲ್ಲೋಲವನ್ನು , ಅದರ ಮೇಲೆ ಸಂಚರಿಸುವ ಹಡಗುಗಳನ್ನು , ಕಡಲಗಾಳಿಯನ್ನು,ಅವು ನಿಲ್ಲುವ ಲಂಗರನ್ನು ತಿಳಿಯುವುದು ಅಗತ್ಯ. ಡೈವರ್ , ಲೈಟ್ ಹೌಸ್( ದೀಪಸ್ಥಂಭ ಬಳಸಬಹುದಿತ್ತು, )(ಪೈಲಟ್ – ಕಡಲ ನಾವಿಕ ). ನಾನೊಂದು ತೀರ, ನೀನೊಂದು ತೀರ. ದೂರವಾಗಿರುವುದು ಮತ್ತು ಕಾಲ ಅವರ ಪ್ರೇಮವನ್ನು ಮುಳುಗಲು ಕಾರಣವಾಗಿವೆ. ಹಾಗಾಗಿ ಈಗ ಹತಾಶೆ ಮತ್ತು ನೆನಪುಗಳು ಮಾತ್ರ ಇಲ್ಲಿ ಉಳಿದುಕೊಂಡಿವೆ. ಏಕೆಂದರೆ ಇಲ್ಲಿ ಅವರ ಪ್ರೇಮ ಅಲೆಗಳಂತೆ .ಅವರಿಬ್ಬರೂ ಕೆಲಕಾಲ ಒಟ್ಟಿಗಿದ್ದರೂ, ಈಗ ದೂರ ದೂರ . ಆದರೆ ಒಟ್ಟಿಗಿದ್ದ ನೆನಪುಗಳು ಮತ್ತೆ ಮತ್ತೆ ಅಲೆಗಳಂತೆ ಬಂದು ಅವನನ್ನು ಮುತ್ತುತ್ತವೆ. ಅವುಗಳನ್ನು ಮೆಲುಕು ಹಾಕುವುದೆ ಈ ಕವನ ಸಂಕಲನದ ಕವನಗಳು.

ಮೊದಲ ಭಾಗದ ಕವನಗಳು ಒಟ್ಟಿಗಿದ್ದುದರ ಅನುಭವವನ್ನು ಸೆರೆಹಿಡಿದರೆ , ಎರಡನೆ ಭಾಗದ ಕವನಗಳು ಮತ್ತೆ ಒಂದಾಗಲು ಹಾತೊರೆವ,ಅಗಲಿಕೆ ಅನಿವಾರ್ಯವಾದಾಗ ಹುಟ್ಟಿದ ಹತಾಶೆಯ ಕವನಗಳು.

ಒಂದಾಗಿದ್ದಾಗಿನ ಕವನಗಳು, ಅವರ ನಡುವಿನ ಬೆಸುಗೆಯ ರತಿಚಿತ್ರಗಳು.ಶೇಕ್ಸಪಿಯರನ’ ಐ ಪ್ಲೋವಡ್ ಹರ್ ಅಂಡ್ ಶಿ ಕ್ರಾಪ್ಡ್ ‘ ಎಂಬುದನ್ನು ನೆನಪಿಗೆ ತರುವಷ್ಟು ಸಶಕ್ತವಾಗಿವೆ. ಹಾಗಾಗಿಯೆ ಇಲ್ಲಿ ಅವಳ ದೈಹಿಕ ಚಹರೆಗಳಿಗೆ, ಲೈಂಗಿಕ ಕ್ರಿಯೆಗೆ ಪ್ರಾಮುಖ್ಯತೆ ದೊರೆತಿದೆ.. ಅದನ್ನು ನೆರೂಡಾ‌ ಅವನ ಮೊದಲ ಕವನದಲ್ಲಿ( ಹೆಣ್ಣಿನ ದೇಹ – body of a woman) ‘ ರೈತನು ಭೂಮಿಯನ್ನು ಅಗೆಯುವ” ಆದಿಮ ಪ್ರತಿಮೆಯ ಮೂಲಕ, ಅವರಿಬ್ಬರ ಸಂಬಂಧವನ್ನು ವರ್ಣಿಸುತ್ತಾನೆ. ಅದನ್ನು ಕಾವ್ಯ ಪ್ರವೇಶದ ಬರಹದಲ್ಲಿ ,’ ಹೆಣ್ಣು ಇಲ್ಲಿ ಭೋಗವಸ್ತುವಾಗಿದ್ದಾಳೆ’. ಎಂದು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಹರೆಯದಲ್ಲಿ ಹೆಣ್ಣಿನ ದೈಹಿಕ ಆಕರ್ಷಣೆ ನೈಸರ್ಗಿಕ. ಇದನ್ನು ಅವರ ಮೊಲೆಯೆ ಸಾಕೆನೆಗೆ( your breast is enough) ಕವನದಲ್ಲಿ ನೋಡಬಹುದು. ಹರಿಹರನ ರಗಳೆಯೊಂದರಲ್ಲಿ ತನ್ನ ಪ್ರಿಯತಮೆಯೆ ಮೊಲೆಯೆ ಲಿಂಗವಾಗಿ ಕಾಣುವ ನಾಯಕನ ನೆನಪನ್ನು ತರುತ್ತದೆ. ಮೊಲೆಯನ್ನು ಬಸವನ ಹುಳು( snail) ವಿಗೆ ಹೋಲಿಸಿದ ಮೊದಲ ಕವಿ ನೆರೂಡಾ ಒಬ್ಬನೆ ಎಂದು ಕಾಣಿಸುತ್ತದೆ. ಉಳಿದ ಕವನಗಳು ಅವಳನ್ನು ಸೇರುವ ಅಗಲಿಕೆಯ , ಸೇರುವ ಕಾತುರತೆಯಿಂದ ಹುಟ್ಟಿದ ವಿರಹಗೀತೆಗಳು. ಆದ್ದರಿಂದಲೆ ಅವು ಸಮುದ್ರದ ಮೀನುಗಳು, ಬಲೆ,( ಬಲೆಯಲ್ಲಿ ಮೀನುಗಳು) ಬಂದರು, ಅಲೆಗಳ , ಹಡಗುಗಳ, ಲಂಗರಿನ( ಚುಂಬನಗಳು ಲಂಗರು ಹಾಕುತ್ತವೆ) ರೂಪಕಗಳನ್ನು ಬಳಸಿ ರಚಿತವಾಗಿವೆ. ಅವುಗಳಲ್ಲಿ ಮೇಲೆ ಉಲ್ಲೇಖಿಸಿದ: ಅಲ್ಪಕಾಲದ ಪ್ರೇಮದ ,ಅದನ್ನು ಮರೆಯುವುದಕ್ಕೆ ಅನಂತಕಾಲ‌.ಇದನ್ನು ಇವರು “ಪ್ರೀತಿ ಅಲ್ಪಕಾಲದ್ದು, ಆದರೆ ಮರೆಯಲು ಎಷ್ಟೊಂದು ದೀರ್ಘಕಾಲ”. ( love is short, forgetting is so long) ಎಂದು ಅನುವಾದ ಮಾಡಿದ್ದಾರೆ. ನೆನವರಿಕೆಯ ಕವನಗಳು , ಇನ್ನು ಸೇರುವುದೆ ಇಲ್ಲ ಎನ್ನುವುದು ಖಚಿತವಾದಾಗ‌, ಹುಟ್ಟಿದ ‘ಹತಾಶೆಯ ಹಾಡು‌’ ಇಲ್ಲಿ ಕೊನೆಯದಾಗಿ ಸೇರ್ಪಡೆಗೊಂಡಿದೆ.

ಸಾಧನೆ: ಇಂಗ್ಲಿಷ್ ಮೂಲದ ಕವನಗಳನ್ನು ಕೊಟ್ಟಿರುವುದರಿಂದ ,ಎರಡೂ ಭಾಷೆಗಳನ್ನು ಬಲ್ಲವರಿಗೆ, ಅವುಗಳನ್ನು ಒಟ್ಟಿಗೆ ಇಟ್ಟು ನೋಡಲು ಅನುವು ಮಾಡಿಕೊಟ್ಟಂತಾಗಿದೆ. ಈ ಮೂಲಕ ಇದು ತೌಲನಿಕ ಅಧ್ಯಯನಕ್ಕೆ ಅವಕಾಶ ಕೂಡ ಒದಗಿಸುತ್ತದೆ. ಇದು ಅನುವಾದ ಮಾಡಬಲ್ಲವರಿಗೆ ಹೊಸ ಸಾಧ್ಯತೆಗಳನ್ನು ಕೂಡಾ ತೆರೆದಂತಾಗಿದೆ.

ಮಿತಿಗಳು: ಕೆಲವು ಮೂಲ ಶಬ್ದಗಳನ್ನು ಲೈಟ್ ಹೌಸ್( ದೀಪಸ್ಥಂಭ) ಪೈಲಟ್( ಕಡಲ ನಾವಿಕ) ಇತ್ಯಾದಿ ಶಬ್ದಗಳನ್ನು ಹಾಗೆಯೆ ಉಳಿಸಿಕೊಂಡಿದ್ದಾರೆ. ಅದರಂತೆ ಎಳೆದುಕೊಂಡ/ ಎಲೆದುಕೊಂಡ ಆಗಿದ್ದು ಎಂಬ ಲಿಪಿ ಸ್ಖಾಲಿತ್ಯವು ಉಳಿದುಕೊಂಡಿದೆ.

ಮಹತ್ವ:
ಒಂದು ಭಾಷೆಯಿಂದ ನಮ್ಮ ಭಾಷೆಗೆ ಅನುವಾದ ಮಾಡುವುದೆಂದರೆ, ಒಂದು ಸಂಸ್ಕೃತಿಯನ್ನು ನಮ್ಮ ಸಂಸ್ಕೃತಿಗೆ ತಂದುಕೊಂಡಂತೆಯೇ ಸರಿ. ಇಂಗ್ಲಿಷ ಕಾವ್ಯವನ್ನು ಕನ್ನಡಕ್ಕೆ ಬರಮಾಡಿಕೊಂಡ , ನೂರು ವರ್ಷಗಳಿಗೂ ಮಿಕ್ಕ ಇತಿಹಾಸ ನಮಗೆ ಇದೆ. ಆ ಮೂಲಕ ನಿರಂತರವಾಗಿ ಒಂದು ಸಾಂಸ್ಕೃತಿಕ ಅನುಸಂಧಾನ ನಡೆಯುತ್ತಲೇ ಬಂದಿದೆ. ಇಂತಹ ಹಿನ್ನಲೆಯಲ್ಲಿ ನೂರು ವರ್ಷಗಳ ಹಿಂದೆ ಪ್ರಸಿದ್ದ ಸ್ಪ್ಯಾನಿಷ್ ಕವಿ ನೆರೂಡಾ, ತನ್ನ ಭಾಷೆಯಲ್ಲಿ ಪ್ರಕಟಿಸಿದ್ದ ಇವನ್ನು, ಅವುಗಳ ಇಂಗ್ಲಿಷ್ ಅವತರಣಿಕೆಯನ್ನು ಆಧರಿಸಿ ನನ್ನ ಗೆಳೆಯರಾದ ಉದಯಕುಮಾರ್ ಹಬ್ಬು ಕನ್ನಡಕ್ಕೆ ತಂದಿದ್ದಾರೆ. ಈ ಅನುವಾದದ ಸಾಂಸ್ಕೃತಿಕ ಅನುಸಂಧಾನದ ಮಹತ್ವವನ್ನು ಗೆಳೆಯರಾದ ಜನಾರ್ದನ ಭಟ್ ತಮ್ಮ ಬೆನ್ನುಡಿಯಲ್ಲಿ ಗುರುತಿಸಿದ್ದಾರೆ. ಇಬ್ಬರಿಗೂ ಅಭಿನಂದನೆಗಳು


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading