ಬಾರವ್ವ ಕಾಗಕ್ಕ ಬಾರವ್ವ ಗುಬ್ಬಕ್ಕ, ಉಣವಲ್ಲ ನೋಡಿರೆ ನನ್ನ ಕಂದ…ಕವಿ ರವಿನಾಗ್ ತಾಳ್ಯ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಕಾಗಕ್ಕ ನೀನೆಲ್ಲೆ ಗುಬ್ಬಕ್ಕ ನೀನೆಲ್ಲೆ
ಎಲ್ಲಿ ಹೇಳಿರೆ ನಿಮ್ಮ ಬಳಗವು
ಕೇಳವಲ್ಲದೇಕೆ ನಿಮ್ಮ ಕಲರವವು
ಅಳಿದೋಯ್ತೆ ಜಂಗಮವಾಣಿಗೆ ನಿಮ್ಮ ಕುಲವು
ಬಾರವ್ವ ಕಾಗಕ್ಕ ಬಾರವ್ವ ಗುಬ್ಬಕ್ಕ
ಉಣವಲ್ಲ ನೋಡಿರೆ ನನ್ನ ಕಂದ
ಸ್ವರ ಉಲಿದು ಕುಣಿದಾಡಿರೆ ಬಳಿ ಬಂದು
ಮೈಮರೆತು ಉಣುವನು ನನ್ನ ಕಂದ
ಗೌರಕ್ಕನ ಮಗಳೆ ಮುದ್ದು ಬುಳ್ಳವ್ವ ಬಾರವ್ವ
ಜಿಗಿ ಜಿಗಿದು ನೆಗೆ ನೆಗೆದು ನಮ್ಮ ಕೇರಿಯಾಗೆ
ನಿನ್ನ ನೋಡಿ ಮೈಮರೆತು ಮುದದಿಂದ
ತುತ್ತೊಂದು ಹೆಚ್ಚಿಗೆ ಉಂಡಾನು ನನ್ನ ಕಂದ
ಚಂದದ ಚಂದಯ್ಯ ನನ್ನ ಕಂದನ ಮಾವಯ್ಯ
ಉಣದೆ ಮಲಗುವ ನೀ ಬರದೆ ನಿನ್ನ ಅಳಿಮಯ್ಯ
ಮೋಡವ ಸರಿಸಿ ಬೆಳ್ಳಕ್ಕಿ ಜೊತೆಗೂಡಿ ಬಾರಯ್ಯ
ತುತ್ತಿಟ್ಟು ಮುತ್ತಿಟ್ಟು ಮುದ್ದಾಡಿ ಮಲಗಿಸಿ ಹೋಗಯ್ಯ
ಲಾಲಿಯ ಹಾಡುವೆ ಉಂಡು ಮಲಗೋ ಕಂದ
ಮುಕ್ತನಾಗು ಜಂಗಮವಾಣಿ ಚಟದಿಂದ
ಆಟ ಪಾಠದಿ ಮನಸಿಡು ಹುರುಪಿಂದ
ಪ್ರಕೃತಿಗೆ ಶಿರಬಾಗಿ ಬದುಕು ಭಾರತ ಕಂದ
ಲಾಲಿ ಲಾಲಿ ಜೋ ಜೋ ಲಾಲಿ
ಬಾಲ ಗೋಪಾಲನಿಗೆ ಚಂದಪ್ಪನ ಲಾಲಿ
ಲಾಲಿ ಲಾಲಿ ಜೋ ಜೋ ಲಾಲಿ
ಮುದ್ದು ಮಾದಪ್ಪನಿಗೆ ಭೂತಾಯಿ ಲಾಲಿ
- ರವಿನಾಗ್ ತಾಳ್ಯ
