ಅಂಗೈಯಲ್ಲಿ ಪ್ರಪಂಚ (ಭಾಗ- ೩೬)

ಅನೈತಿಕ ಸಂಬಂಧಗಳು ಗಂಡ – ಹೆಂಡತಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸುತ್ತದೆ.  ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಸಂಬಂಧಗಳಲ್ಲಿ ಬಿರುಕು’ ತಪ್ಪದೆ ಮುಂದೆ ಓದಿ…

ಇದಂತೂ ಎಲ್ಲಾ ಕಡೆ ಇದ್ದದ್ದೇ. ಯಾವುದಾದರೂ ಒಂದು ಸಂದರ್ಭದಲ್ಲಿ, ಯಾವ ಸಂಬಂಧದಲ್ಲಾದರೂ ಸರಿ, ತನ್ನಿರವನ್ನು ತೋರಿಸಿಯೇ ಬಿಡುತ್ತದೆ. ಕೆಲವೊಮ್ಮೆ ಸಂಬಂಧಗಳ ಗಟ್ಟಿತನದಲ್ಲಿ ತನಗೆ ಜಾಗವಿಲ್ಲವೆಂದು ಅರಿತು ಹಿಂದೆ ಸರಿದದ್ದೂ ಉಂಟು. ಇನ್ನು ಕೆಲವೊಮ್ಮೆ ತೇಪೆ ಹಾಕಿದಾಗ ಸ್ವಲ್ಪ ಸಮಯ ತೆಪ್ಪಗಿದ್ದು ಸಮಯ ಸಿಕ್ಕಾಗಲೆಲ್ಲಾ ತನ್ನ ಕರಾಮತ್ತು ತೋರಿಸಿದ್ದೂ ಇದೆ. ಸಂಬಂಧಗಳನ್ನೇ ಇನ್ನಿಲ್ಲದಂತೆ ಮುರಿದು, ತೊರೆದು ಹೋಗಿಸಿದ್ದು ಇದರ ದೊಡ್ಡ ಗೆಲುವು. ಯಾವ್ದ್ರ ಬಗ್ಗೆ ಹೇಳ್ತಿದೀನಿ ಅಂದ್ಕೊಂಡ್ರಾ.. ಅದೇ ರೀ ಬಿರುಕು.

ಒಂದ್ಸಲ ಇದು ಎಂಟ್ರಿ ಆಯ್ತು ಅಂದ್ರೆ ಅಷ್ಟೇ , ಸರ್ವನಾಶ ಅಂತಾನೇ ಅರ್ಥ. ಒಮ್ಮೊಮ್ಮೆ ಇದರ ಸುಳಿವು ಮೊದಲೇ ಸಿಗುತ್ತದೆ. ಇನ್ನು ಕೆಲವೊಮ್ಮೆ ಯಾವುದೇ ಸುಳಿವು, ಸೂಚನೆ ಕೊಡ್ದೆ ಗೊತ್ತಾಗ್ದೆ ಇದ್ದಕ್ಕಿದ್ದಂತೆ ಬರೋದು ಇದರ ಗುಣ. ಯಾರಿಂದ, ಯಾರ ರೂಪದಲ್ಲಿ , ಸಮಯ, ಸಂದರ್ಭ ಇಲ್ಲದೇ ಯಾವಾಗ ಬೇಕಾದರೂ ಬಂದು ಸಂಬಂಧಗಳ ಮಧ್ಯದಲ್ಲಿ ನುಸುಳಿ ಬಿಡುತ್ತದೆ. ನಂತರ ಕುಂಬಳ ಕಾಯಿ ಕಥೆ ತರ ತನ್ನದೇ ಆದ ಜಾಗ ಮಾಡಿಕೊಂಡು ಬಿಡುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಕಾರಣ

  • ಮೂಗು ತೂರಿಸುವಿಕೆ : ಗಂಡ-ಹೆಂಡತಿ ಮಧ್ಯದಲ್ಲಿ , ಅತ್ತೆ-ಮಾವ, ಅಕ್ಕ-ತಂಗಿಯರು, ತವರು ಮನೆಯವರ ಮೂಗು ತೂರಿಸುವಿಕೆ ಹೆಚ್ಚಿನ ಸಂಸಾರದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ.
  • ಅಧಿಕಾರ : ಎಲ್ಲಾ ತಾವು ಹೇಳಿದಂತೇ ನಡೆಯಬೇಕು ಎಂಬ ಮನೆಯಲ್ಲಿನ ಹಿರಿಯರ ಅಧಿಕಾರದ ಧೋರಣೆಯಿಂದ ಮಕ್ಕಳು, ಸೊಸೆ, ಮೊಮ್ಮಕ್ಕಳೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡುತ್ತದೆ( ದಿನನಿತ್ಯ ತರಕಾರಿ ತರುವುದಾದರೂ ತಾವೇ ತರಬೇಕು, ತಾವು ಕಷ್ಟಪಟ್ಟು ಮಾಡಿಟ್ಟ ಮನೆ, ವಿದ್ಯಾಭ್ಯಾಸ ಕೊಡಿಸಿದ್ದೇವೆಂಬ ಮಾತು)
  • ಭೇದಭಾವ : ಮಕ್ಕಳಲ್ಲಿ, ಸೊಸೆಯರಲ್ಲಿ ಮಾಡುವ ಭೇದ ಭಾವ, ಸೊಸೆಯಂದಿರ ತವರಿನವರು ಬಂದಾಗ ತೋರಿಸುವ ನಿರ್ಲಕ್ಷ್ಯ, ನಿಕೃಷ್ಟ ಮನೋಭಾವನೆ (ತಮ್ಮ ಹೆತ್ತವರಿಗೆ ಅವಮಾನವಾದರೆ ಯಾವ ಹೆಣ್ಣೂ ಸಹಿಸುವುದಿಲ್ಲ).
  • ಅನುಮಾನ : ಗಂಡ-ಹೆಂಡತಿ ಮಧ್ಯದಲ್ಲಿ ಅನುಮಾನದ ಹುತ್ತ ಒಮ್ಮೆ ಬೆಳೆದರೆ ಅದನ್ನು ಕೆಡುವುದು ಬಹಳ ಕಷ್ಟ. ಆಗಲೂ ಇಬ್ಬರ ಮಧ್ಯದ ಸಂಬಂಧದಲ್ಲಿ ಬಿರುಕು ಮೂಡುತ್ತದೆ.
  • ಅನೈತಿಕ ಸಂಬಂಧ : ಗಂಡ – ಹೆಂಡತಿ ಇಬ್ಬರಲ್ಲಿ ಒಬ್ಬರು ಅನೈತಿಕವಾದ ಸಂಬಂಧ ಹೊಂದಿದ್ದರೆ ಆಗ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ತುಚ್ಛವಾದ ಮಾತುಗಳು, ಹೀಯಾಳಿಸುವಿಕೆ, ಕಡೆಗಣಿಸುವಿಕೆ, ಎಲ್ಲರೆದುರು ಅನವಶ್ಯಕವಾಗಿ ಮಾಡುವ ಅವಮಾನ, ಕೊಡದ ಸ್ಥಾನಮಾನಗಳು.
  • ಆಸ್ತಿ : ಒಡಹುಟ್ಟಿದವರ ಸಂಬಂಧದಲ್ಲಿ ಬಿರುಕು ಮೂಡಲು ಇದು ಮುಖ್ಯ ಕಾರಣ. ಇದು ಅನೇಕ ಅನಾಹುತಗಳಿಗೆ ಕಾರಣವಾಗಿದೆ ಎಂದರೆ ತಪ್ಪಲ್ಲ.
  • ಲೆಕ್ಕಾಚಾರ : ಪ್ರತಿಯೊಂದಕ್ಕೂ ಲೆಕ್ಕಾಚಾರ ಹಾಕಿದರೆ ಎಲ್ಲರಿಗೂ ಹಿಂಸೆ. ಒಂದೊಂದಕ್ಕೂ ಮನಸ್ಸು ಹಿಡಿಮಾಡಿಕೊಂಡು ಹಣ ಕೇಳಬೇಕಾದ ಪರಿಸ್ಥಿತಿ. ಹಾಗಾಗಿ ದುಡಿಯುವಂತಾದ ತಕ್ಷಣ ಅಲ್ಲಿಂದ ಹೊರ ನಡೆಯುವವರು ಅನೇಕರು.ವರದಕ್ಷಿಣೆ, ಮಕ್ಕಳಾಗಲಿಲ್ಲ, ಹೆಣ್ಣು ಹೆತ್ತರು ಎಂಬ ಕಾರಣಕ್ಕೆ.
  • ಮಕ್ಕಳ ಹಠದ ಸ್ವಭಾವ, ದುಡಿಯುವಂತಾದ ಮೇಲೆ ನಮಗೆ ಬೇಕಾದಂತೆ ನಾವಿರುತ್ತೇವೆ ಎಂಬ ಮನಸ್ಥಿತಿ, ನೀಡದ ಗೌರವ, ಅಸಭ್ಯ ವರ್ತನೆ, ಕೆಟ್ಟ ಚಾಳಿಗಳು.
  • ಹಣದ ವ್ಯವಹಾರ: ಸಂಬಂಧಗಳಲ್ಲಿ ಮಾಡುವ ಸಾಲ, ಕಷ್ಟವೆಂದು ತೆಗೆದುಕೊಂಡ ಹಣ ಹಿಂದಿರುಗಿಸದೇ ಇದ್ದಾಗ.
  • ಮನೆಗೆ ಬಂದ ಸೊಸೆಯಂದಿರು ಹೊಂದಿಕೊಳ್ಳದೇ ಎಲ್ಲವುದಕ್ಕೂ ತವರಿನೊಂದಿಗೆ ಹೋಲಿಸಿ ಮಾತನಾಡುವುದು, ಅಹಂಕಾರ, ಹಿರಿಯರಿಗೆ ನೀಡದ ಗೌರವ, ಇತ್ಯಾದಿ.

ಪರಿಹಾರ

  • ಮನೆಯಲ್ಲಿ ಎಲ್ಲರನ್ನೂ ಒಂದೇ ಸಮನಾಗಿ ಕಾಣಬೇಕು. ಐದು ಬೆರಳು ಒಂದೇ ಸಮ ಇರುವುದಿಲ್ಲ. ಹಾಗೇ ಮನೆಯಲ್ಲಿನ ಜನರೂ ಸಹ. ತಮ್ಮ ಮನೆಯಲ್ಲಿ ಹುಟ್ಟಿದವರು, ಹೊರಗಡೆಯಿಂದ ಬಂದು ಈ ಮನೆಗೆ ಸೇರಿದವರು, ಎಲ್ಲರದೂ ಒಂದೊಂದು ರೀತಿಯ ಸ್ವಭಾವ, ಆಸೆ ,ಆಕಾಂಕ್ಷೆಗಳು. ಮನೆಯ ಹಿರಿಯರು ಎಲ್ಲರ ಕಷ್ಟ-ಸುಖ ಅರಿತು ಅವರ ಅವಶ್ಯಕತೆಗಳಿಗನುಗುಣವಾಗಿ ನಡೆದುಕೊಳ್ಳಬೇಕು.
  • ತವರು ಮನೆಯಲ್ಲಿ ಬಂದು ತಂದೆ-ತಾಯಿ, ಅಣ್ಣ-ತಮ್ಮಂದಿರ ಮಧ್ಯೆ, ಅವರ ಸಂಸಾರದಲ್ಲಿ ಮನೆಯ ಹೆಣ್ಣು ಮಕ್ಕಳು ಮೂಗು ತೂರಿಸುವುದು ಮಾಡಬಾರದು. ತವರಿನಲ್ಲಿ ಬಂದು ಸಂಬಂಧಗಳ ಮಧ್ಯೆ ಹುಳಿ ಹಿಂಡಿ ತಮ್ಮ ಅಧಿಕಾರ ತೋರಿಸುವ ಉಸಾಬರಿಗೆ ಹೋಗದೇ ಪ್ರೀತಿ, ವಿಶ್ವಾಸ, ಸಂಬಂಧಗಳಿಗೆ ಬೆಲೆ ಕೊಟ್ಟರೆ ಎಲ್ಲರೂ ಸುಖವಾಗಿರುತ್ತಾರೆ.
  • ಹಿರಿಯರು, ಮಕ್ಕಳಿಗೆ ನಾವೆಲ್ಲಾ ಮಾಡಿಟ್ಟಿದ್ದೇವೆ. ಹಾಗಾಗಿ ನಾವು ಹೇಳಿದಂತೇ ಕೇಳಬೇಕೆಂಬ ಕಟ್ಟಳೆಗಳನ್ನು ಹೇರದೇ ಪ್ರೀತಿ, ವಿಶ್ವಾಸದಿಂದ ಮನೆಯವರ ಮನಸ್ಸು ಗೆಲ್ಲಬೇಕು. ಏಕೆಂದರೆ, ಅವರೂ ಸಹ ಅವರ ಹಿರಿಯರಿಂದ ಒಂದಷ್ಟನ್ನಾದರೂ ಪಡೆದುಕೊಂಡೇ ಬಂದಿರುತ್ತಾರೆ. ಅದು ಆಸ್ತಿ-ಪಾಸ್ತಿ ಅಲ್ಲದಿದ್ದರೂ ಪ್ರೀತಿ, ಮಮತೆ, ಭಾವನಾತ್ಮಕವಾಗಂತೂ ಒಬ್ಬರಿಂದ ಒಬ್ಬರಿಗೆ ತಲೆತಲಾಂತರದಿಂದಲೂ ಬೆಸೆದುಕೊಂಡಿರುವಂಥದ್ದೇ.
  • ಮನೆಯೆಂದರೆ ಅಧಿಕಾರ, ದರ್ಪ ತೋರಿಸುವುದಲ್ಲ. ಪ್ರೀತಿ-ವಿಶ್ವಾಸ, ಆಸೆ-ಆಕಾಂಕ್ಷೆಗಳನ್ನು ಅರಿತು ಸರಿ ಇದ್ದರೆ ಅದಕ್ಕೆ ಬೇಕಾದ ಅನುಕೂಲ, ಪ್ರೋತ್ಸಾಹ ನೀಡುವುದು. ಇಲ್ಲದಿದ್ದರೆ ಇದು ತಪ್ಪು ಎಂದು ತಿದ್ದಿ, ಬುದ್ಧಿ ಹೇಳಿ ಸರಿ ದಾರಿಯಲ್ಲಿ ನಡೆಸುವುದೂ ಸಹ ಹಿರಿಯರೆನಿಸಿಕೊಂಡವರ ಕರ್ತವ್ಯ.
  • ಹಿರಿಯರು ತಾವು ಇದ್ದಾಗಲೇ ಆಸ್ತಿ ಹಂಚಿಕೆ ಮಾಡಿದರೆ ನಂತರದ ದಿನಗಳಲ್ಲಿ ಮಕ್ಕಳು ಹೊಡೆದಾಡುವ ಪರಿಸ್ಥಿತಿ ಬರುವುದಿಲ್ಲ. ಇಲ್ಲದಿದ್ದರೆ, ಮೊದಲಿನಿಂದಲೂ ಮನೆಯಲ್ಲಿ ಒಳ್ಳೆಯ ವಾತಾವರಣ, ಒಬ್ಬರಿಗೆ ಇನ್ನೊಬ್ಬರು ಸ್ಪಂದಿಸುವ ಗುಣ ಇದ್ದರೆ ಸಂಬಂಧಗಳ ಮಧ್ಯೆ ಬಿರುಕು ಉಂಟಾಗುವುದಿಲ್ಲ.
  • ಮನೆಯಲ್ಲಿ ಯಾರೇ ಆಗಲಿ ನಾನು ಎಂಬ ಅಹಂಕಾರವನ್ನು ಬದಿಗಿಟ್ಟು ಎಲ್ಲರೊಳಗೊಂದಾಗಿ ಬದುಕಿದರೆ ಆ ಮನೆಯೇ ಸ್ವರ್ಗ. ಆಗ ಯಾರು ಯಾರನ್ನು, ಏನು ಕೇಳದಿದ್ದರೂ ಆ ಮನೆಯಲ್ಲಿ ಎಲ್ಲವೂ ತಾನಾಗೇ ಸಿಗುತ್ತದೆ.
  • ಚೆನ್ನಾಗಿದ್ದಾರಲ್ಲ ಎಂದು ಹೊಟ್ಟೆಕಿಚ್ಚು ಪಡುವ ಮಂದಿ ಮನೆಯವರ ಮಧ್ಯ ಇಲ್ಲಸಲ್ಲದ್ದು ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾರೆ. ಹಾಗಾಗಿ ಯಾರೇನೇ ಹೇಳಿದರೂ, ನೇರವಾಗಿ ಸಂಬಂಧಪಟ್ಟವರನ್ನು ಕೇಳಿ ವಿಷಯ ಏನೆಂದು ತಿಳಿದುಕೊಂಡು ಮತ್ತೊಮ್ಮೆ, ಮಗದೊಮ್ಮೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದು ಒಳಿತು. ಏಕೆಂದರೆ, ಹೇಳಿಕೆ ಮಾತುಗಳಿಂದ ತಮ್ಮ ಬಂಗಾರದಂಥ ಸಂಸಾರವನ್ನು ಹಾಳು ಮಾಡಿಕೊಂಡವರು ಬೇಕಾದಷ್ಟು ಮಂದಿ. ಆಮೇಲೆ ಅದನ್ನು ಸರಿ ಮಾಡಲಾರದಷ್ಟು, ಹಿಂತಿರುಗಿ ಪಡೆದುಕೊಳ್ಳಲಾರದಷ್ಟು ಇದರಿಂದ ನೊಂದವರ ಮನಸ್ಸು ಮುರಿದು ಹೋಗಿರುತ್ತದೆ.
  • ಗಂಡು, ಹೆಣ್ಣೆಂಬ ಭೇದ ಮಾಡದೇ ಸರಿಸಮಾನವಾಗಿ ಕಾಣಬೇಕು. ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ದೂರ ತಳ್ಳದೇ ಅವರ ನೋವನ್ನು ಅರಿತು ಅದಕ್ಕೆ ಬೇಕಾದ ಸಾಂತ್ವನ,
    ಸಮಸ್ಯೆಯಿದ್ದರೆ ಪರಿಹಾರ, ಪರ್ಯಾಯ ಆಲೋಚನೆ ಮಾಡಬೇಕು.
  • ಸಂಬಂಧಗಳಲ್ಲಿ ಹಣದ ವ್ಯವಹಾರ ಮಾಡದಿರುವುದೇ ಒಳ್ಳೆಯದು. ಒಂದು ವೇಳೆ ಮಾಡಿದರೂ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು.
  • ಮನೆಗೆ ಬಂದ ಸೊಸೆಯಂದಿರು ತವರಿನಲ್ಲಿ ಹೇಗಿದ್ದರೂ ಮದುವೆಯಾದ ನಂತರ ಅಲ್ಲಿಯ ವಾತಾವರಣಕ್ಕೆ ಆದಷ್ಟು ಹೊಂದಿಕೊಂಡು ಹೋಗಲು ಪ್ರಯತ್ನಿಸಬೇಕು. ಇದಕ್ಕೆ ಎಲ್ಲರ ಸಹಕಾರ, ಸಮಯಾವಕಾಶ ಎಲ್ಲವೂ ಬೇಕಾಗುತ್ತದೆ.
  • ವರದಕ್ಷಿಣೆ ಎಂದು ಪೀಡಿಸದೆ ಸ್ವತಃ ದುಡಿದು ತನ್ನ ನಂಬಿ ಬಂದವರನ್ನು ಸಲಹುವುದು ಜವಾಬ್ದಾರಿ, ಕರ್ತವ್ಯದ ಜೊತೆಗೆ ಗೌರವವೂ ಹೌದು.

ಇನ್ನು ಮನೆಯಲ್ಲಿರುವವರೂ ಅಷ್ಟೇ. ಇಟ್ಟ ಭರವಸೆ, ನಂಬಿಕೆಗಳಿಗೆ ದ್ರೋಹವೆಸಗದೆ ಪ್ರಾಮಾಣಿಕವಾಗಿ ತನ್ನ ಮನೆ, ಸಂಸಾರ, ಕುಟುಂಬ ಎಂದು ಬದುಕಿದರೆ ಬಿರುಕು ಎನ್ನುವ ಪದಕ್ಕೆ ಸಂಬಂಧಗಳ ಮಧ್ಯೆ ನುಸುಳಲು ಉಗುರಿನಷ್ಟು ಜಾಗವೂ ಇರುವುದಿಲ್ಲ. ಇಲ್ಲಿ ಮನೆಯವರ ಇಷ್ಟ, ಕಷ್ಟ ಅರಿತು ಅದಕ್ಕೆ ತಕ್ಕಂತೆ ಸ್ಪಂದಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಈ ಜನ್ಮದಲ್ಲಿ ಬೆಸೆದ ಸಂಬಂಧಗಳೊಂದಿಗೆ ಆದಷ್ಟು ಹೊಂದಿಕೊಂಡು ಅದನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಮ್ಮ ಕಡೆಯಿಂದಂತೂ ಆಗಲಿ ಎಂಬ ಆಶಯದೊಂದಿಗೆ.


  • ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.

One thought on “ಅಂಗೈಯಲ್ಲಿ ಪ್ರಪಂಚ (ಭಾಗ- ೩೬)”

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading