ಮನ್ನಿಸುವುದೇ ಮನುಷ್ಯನ ಅತಿದೊಡ್ಡ ಆಭರಣ ಈ ಜಗತ್ತಿನಲ್ಲಿ ಗೆಲ್ಲಲು ಎರಡೇ ದಾರಿ ಇದೆ. ಒಂದು ಕತ್ತಿಯಿಂದ, ಇನ್ನೊಂದು ಕ್ಷಮೆಯಿಂದ, ಕತ್ತಿ ದೇಹವನ್ನು ಗೆಲ್ಲಬಹುದು. ಆದರೆ ಕ್ಷಮೆ ಮಾತ್ರ ಮನಸ್ಸನ್ನು ಗೆಲ್ಲುತ್ತದೆ. ಅದಕ್ಕೆನೇ ನಮ್ಮ ಹಿರಿಯರು ಹೇಳಿದರು “ಕ್ಷಮಾ ವೀರಸ್ಯ ಭೂಷಣಂ” ಅಂದರೆ ಕ್ಷಮೆಯು ವೀರನಿಗೆ ಆಭರಣ. ಲೇಖಕರಾದ ಓಂಕಾರ ಪಾಟೀಲ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…

ಮಾನ್ಯ ಕವಿ ಡಿ.ವಿ. ಗುಂಡಪ್ಪನವರು ಬದುಕಿಗೆ ಬೇಕಾದ ಸರಳ ಸೂತ್ರ ಕೊಟ್ಟಿದ್ದಾರೆ.
ಕ್ಷಮೆ ದೋಷಿಗಳಲಿ ಕೆಚ್ಚಿದೆ ವಿಧಿಯ ಬಿರುಬಿನಲಿ |
ಸಮತೆ ನಿರ್ಮತ್ಸರತೆ ಸೋಲ್ಗೆಲುವುಗಳಲಿ||
ಶಮವ ನೀಂ ಗಳಿಸಲಿ ನಾಲ್ಕು ತಪಗಳೆ ಸಾಕು | ಭ್ರಮೆಯೋ ಮಿಕ್ಕೆಲ್ಲ ತಪ ||
ಅಂದರೆ ನೆಮ್ಮದಿಯ ಬದುಕಿಗೆ ನಾಲ್ಕು ತಪಸ್ಸು ಸಾಕು. ತಪ್ಪು ಮಾಡಿದವರನ್ನು ಕ್ಷಮಿಸುವುದು,ವಿಧಿ ಪರೀಕ್ಷಿಸಿದಾಗ ಧೈರ್ಯ, ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವುದು, ಯಾರ ಬಗ್ಗೆಯೂ ಹೊಟ್ಟೆಕಿಚ್ಚು ಇಲ್ಲದಿರುವುದು ಈ ನಾಲ್ಕರಲ್ಲಿ ಮೊದಲನೆಯದು, ಅಂದರೆ ಕ್ಷಮಾಗುಣವೇ ಉಳಿದ ಮೂರಕ್ಕೂ ತಾಯಿ. ತಪ್ಪು ಅರಿವಾಗಿ ಕ್ಷಮೆ ಕೇಳಿದವನನ್ನು ದೊಡ್ಡ ಮನಸ್ಸಿನಿಂದ ಮನ್ನಿಸುವುದೇ ನಿಜವಾದ ದೈವತ್ವ.
ಒಮ್ಮೆ ಗೌತಮ ಬುದ್ಧರು ಉಪದೇಶ ಮಾಡುತ್ತಿದ್ದರು. ಕೋಪಗೊಂಡ ವ್ಯಕ್ತಿಯೊಬ್ಬ ಬಂದು, ಸಭೆಯ ಎದುರೇ ಬುದ್ಧರನ್ನು ಅವಾಚ್ಯವಾಗಿ ಬೈದ. ಬುದ್ಧರು ಮಾತ್ರ ಮುಖದಲ್ಲಿ ನಗುವಿನೊಂದಿಗೆ ಸುಮ್ಮನೆ ಕುಳಿತರು. ಕೊನೆಗೆ ಆತ ಬುದ್ಧರ ಮುಖದ ಮೇಲೆ ಉಗುಳಿ ಹೊರಟುಹೋದ. ಮರುದಿನ ಆತನಿಗೆ ಅರಿವಾಯಿತು. ಓಡಿ ಬಂದು ಕಾಲಿಗೆ ಬಿದ್ದು “ಕ್ಷಮಿಸಿ ಸ್ವಾಮಿ” ಎಂದ.

ಬುದ್ಧರು ನಗುತ್ತಾ ಕೇಳಿದರು: “ಯಾರು ನೀನು? ಏನು ವಿಷಯ? ನನಗೆ ನೆನಪಿಲ್ಲ.” ಶಿಷ್ಯರು ಆಶ್ಚರ್ಯದಿಂದ “ಗುರುಗಳೇ ನಿನ್ನೆ ಇಷ್ಟೆಲ್ಲ ಮಾಡಿದ” ಎಂದು ಹೇಳಿದಾಗ, ಬುದ್ಧರು ಹೇಳಿದರು “ನಿನ್ನೆಯ ಬೆಂಕಿಯನ್ನು ಇವತ್ತು ನನ್ನ ಮನದಲ್ಲಿ ಹೊತ್ತುಕೊಂಡು ನನ್ನ ಶಾಂತಿಯನ್ನು ಯಾಕೆ ಸುಡಲಿ? ಆ ಘಟನೆ ನಿನ್ನೆಗೆ ಮುಗಿದುಹೋಯಿತು.” ಆ ಒಂದೇ ಮಾತಿಗೆ ಆ ಕೋಪಿಷ್ಠ ವ್ಯಕ್ತಿ ಬುದ್ಧರ ಪರಮ ಶಿಷ್ಯನಾದ.
ಅಂದರೆ ಅರ್ಥ ದ್ವೇಷವನ್ನು ಇಟ್ಟುಕೊಂಡರೆ ಅದು ಮೊದಲು ನಮ್ಮನ್ನೇ ಸುಡುತ್ತದೆ. ಬಿಟ್ಟುಕೊಟ್ಟರೆ ನಾವೂ ಹಗುರ, ಎದುರಿನವನೂ ಬದಲಾಗುತ್ತಾನೆ. ನಮ್ಮ ಸಂಸ್ಕೃತಿಯ ಅಡಿಪಾಯವೇ ಕ್ಷಮೆ ಮತ್ತು ಸಮಾನತೆ.
“ಇವನಾರವ ಇವನಾರವ ಎಂದೆನಿಸದಿರಯ್ಯ,
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ”
ಎಲ್ಲರೂ ನಮ್ಮವರು ಎಂದಾಗ ಕೋಪಕ್ಕೆ ಜಾಗ ಎಲ್ಲಿದೆ ಎನ್ನುವದನ್ನು ಶರಣರು ತಮ್ಮ ವಚನದ ಮೂಲಕ ಪ್ರತಿ ಪಾದಿಸಿದರು. ಬಸವಣ್ಣ”ಬೈದವರೆನ್ನ ಬಂಧುಗಳು” ಬೈದವರನ್ನೂ ಬಂಧುವೆಂದು ಕರೆದರು. : “ವಸುಧೈವ ಕುಟುಂಬಕಂ” ಇಡೀ ವಿಶ್ವವೇ ಒಂದು ಕುಟುಂಬ. “ಸರ್ವೇ ಜನಃ ಸುಖಿನೋ ಭವಂತು” ಎಲ್ಲರೂ ಸುಖಿಯಾಗಲಿ. ಅನ್ನುವ ಸಕಾರಾತ್ಮ ಆಲೋಚನೆಗಳಿಂದಲೇ ನಮ್ಮ ಸಮಾಜ ನೂರು ಶತಮಾನ ಕಳೆದರೂ ನಿಂತಿದೆ.ಕ್ಷಮೆ ದೌರ್ಬಲ್ಯವಲ್ಲ. ಅದು ಆತ್ಮಬಲದ ಪರಾಕಾಷ್ಠೆ.
ಬಸವಣ್ಣನ ಕಲ್ಯಾಣ : ಜಾತಿ-ಮತ ಮರೆತು ಎಲ್ಲರನ್ನೂ ಕ್ಷಮಿಸಿ ಅನುಭವ ಮಂಟಪ ಕಟ್ಟಿದರು.
ಅಬ್ರಹಾಂ ಲಿಂಕನ್ : ಅಂತರ್ಯುದ್ಧದ ನಂತರ ಶತ್ರು ರಾಜ್ಯವನ್ನೇ ಕ್ಷಮಿಸಿದರು. ಅಮೆರಿಕ ಒಂದಾಯಿತು.
ನೆಲ್ಸನ್ ಮಂಡೇಲಾ: ೨೭ ವರ್ಷ ಜೈಲಿನಲ್ಲಿಟ್ಟವರನ್ನೇ ಅಧ್ಯಕ್ಷರಾಗಿ ಅಪ್ಪಿಕೊಂಡರು. ಅದು ಇಡೀ ಜಗತ್ತಿಗೆ ಪಾಠ.
ಮಹಾತ್ಮ ಗಾಂಧಿ : ಹಿಂಸಿಸಿದವರ ಮೇಲೂ ಅಹಿಂಸೆಯನ್ನೇ ಪ್ರಯೋಗಿಸಿದರು.
ರಾಜಕೀಯವಾಗಿ ಎಷ್ಟೇ ನೋವಾದರೂ, ವೈಯಕ್ತಿಕ ನಿಂದನೆ ಆದರೂ ಕ್ಷಮಿಸುವ ಮನೋಭಾವವೇ ದೊಡ್ಡತನ. ದ್ವೇಷವನ್ನು ಮನದಲ್ಲಿ ಇಟ್ಟುಕೊಳ್ಳುವುದು ಎಂದರೆ ವಿಷದ ಲೋಟವನ್ನು ಕುಡಿದು “ಅವನು ಸಾಯಲಿ” ಎಂದು ಕಾಯುವುದು. ಒಡೆದ ಕುಟುಂಬ, ಕಳೆದುಹೋದ ಸ್ನೇಹ. ಮೊದಲು ನಷ್ಟ ನಮಗೇ.

ಕ್ಷಮೆ ಕೇಳಿದರೆ ಯಾರೂ ಚಿಕ್ಕವರಾಗುವುದಿಲ್ಲ.
ಕ್ಷಮಿಸಿದರೆ ಯಾರೂ ದುರ್ಬಲರಾಗುವುದಿಲ್ಲ.
ಕ್ಷಮೆ ಎಂಬುದು ಸಂಬಂಧಗಳನ್ನು ಬೆಸೆಯುವ ಅಂಟು. ಪ್ರೀತಿಯನ್ನು ಬೆಳೆಸುವ ನೀರು.
ಸುಳ್ಳು ಒಡೆಯುತ್ತದೆ, ಅಹಂಕಾರ ಹಾಳುಮಾಡುತ್ತದೆ, ಹಣ ಖರೀದಿಸಲು ಆಗುವುದಿಲ್ಲ. ಆದರೆ ಕ್ಷಮೆ ಮಾತ್ರ ಮುರಿದು ಬಿದ್ದ ಸಂಬಂಧವನ್ನು ಮತ್ತೆ ಜೋಡಿಸುತ್ತದೆ.
“ಕ್ಷಮಿಸು ಕ್ಷಮಿಸು, ಕ್ಷಮೆಯಿಂದಲೇ ಲೋಕ ಉದ್ಧಾರ” ಇದೇ ಶರಣರ ಸಂದೇಶ. ಇದೇ “ಕ್ಷಮೆ ವೀರಸ್ಯ ಭೂಷಣಂ” ನಿಜವಾದ ಅರ್ಥ.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.
