ಕನ್ನಡದ ಪ್ರಮುಖ ಕಾದಂಬರಿಕಾರ, ಅಂಕಣಗಾರ ಮತ್ತು ಕಥೆಗಾರರಾದ ಸಂತೋಷ್ ಕುಮಾರ್ ಮೆಹೆಂದಳೆ ಅವರ ಕದಂಬ ರಾಜವಂಶದ ಬಲಿಷ್ಠ ದೊರೆ ‘ಕಾಕುಸ್ಥ ವರ್ಮ’ ಕುರಿತು ಬರೆದ ಕೃತಿಯ ಬಗ್ಗೆ ಸಂಕ್ಷಿಪ್ತ ಪರಿಚಯ, ತಪ್ಪದೆ ಮುಂದೆ ಓದಿ…
ಪುಸ್ತಕ : “ಕಾಕುಸ್ಥ ವರ್ಮ”
ಲೇಖಕರು : ಸಂತೋಷಕುಮಾರ್ ಮೆಹಂದಳೆ
ಪ್ರಕಾಶನ :ಸಾಹಿತ್ಯ ಲೋಕ
ನನ್ನ ಉರುಮಿಯನ್ನು ಸಿದ್ಧಪಡಿಸಿ ಅಮಾತ್ಯರೇ ಎಂದುಬಿಟ್ಟಿದ್ದ ಆ ದೊರೆ. ಬಹುಶಃ ಭಾರತದ ಇತಿಹಾಸದಲ್ಲಿ ಅವನಷ್ಟು ತಾಂತ್ರಿಕವಾಗಿ ಉರುಮಿಯನ್ನು ಬೀಸಿದ ಮತ್ತೊಬ್ಬ ದೊರೆ ಬರಲೇ ಇಲ್ಲ. ಅದೂ ಮರಾಠಾ ಸಾಮ್ರಾಜ್ಯ ಬರುವವರೆಗೂ ಭಾರತದ ಇತಿಹಾಸದಲ್ಲಿ ಅವನಷ್ಟು ಅವ್ಯಾಹತವಾಗಿ ಉರುಮಿಯನ್ನು ಬೀಸಿ ಬೀಸಿ ಶತ್ರುಗಳನ್ನು ಸೈನಿಕರನ್ನು ಬಲಿ ಹಾಕಿದಷ್ಟು ಇನ್ಯಾರೂ ಹಾಕಲೇ ಇಲ್ಲ. ಅದರಲ್ಲೂ ಅವನ ಉರುಮಿಯ ಉದ್ದವೇ ಎಂಟು ಅಡಿಗೂ ಮಿಗಿಲು- ಎರಡು ಅಲಗುಗಳು. ಗರಗಸದಂತೆ ಅದರ ಹಲ್ಲುಗಳನ್ನು ಸೂಕ್ಷ್ಮವಾಗಿ ಹೆರೆಯಲಾಗಿರುತ್ತಿತ್ತು.
ಬೀಸುವ ಕೋನ ಮತ್ತು ವೇಗ ತಪ್ಪಿ ಹಿಂದಕ್ಕೆ ಚಿಮ್ಮಿದರೆ ಬಳಸಿದ ಸ್ವತಃ ಅರಸನೇ ಬಲಿಯಾಗುವಷ್ಟು ಅಪಾಯಕಾರಿ ಆಯುಧ ಅದು. ಆದರೂ ಅವನು ಅದನ್ನು ಬಳಸುತ್ತಿದ್ದ. ಸ್ವತಃ ಕುದುರೆಯಿಂದ ನೆಲಕ್ಕಿಳಿದು ಎದುರಾಳಿಯ ಮೇಲೆ ಲಂಭಿಸಿ ಆಕ್ರಮಣ ಮಾಡುತ್ತಿದ್ದ. ಬೀಸುತ್ತಿದ್ದ ಹೊಡೆತಕ್ಕೆ ಏಕಕಾಲಕ್ಕೆ ಕೈ ಕಾಲು ತಲೆಗಳು ಅಗಲವಾಗಿ ಹರಡಿಕೊಳ್ಳುತ್ತಿದ್ದರೆ, ಎದುರಾಳಿಯ ಮೇಲೆ ಆಕ್ರಮಿಸುವ ಅವನ ತಂತ್ರಗಾರಿಕೆಗೆ ಮೊದಲೆರಡು ದಿನಗಳಲ್ಲೆ ಯುದ್ಧ ಮುಗಿದು ಹೋಗುತ್ತಿತ್ತು.

ಕೊಟ್ಟ ಕೊನೆಯ ಹೋರಾಟ ಇದು ಎಂದು ಬಿಟ್ಟಿದ್ದ ಆ ದೊರೆ. ಪಲ್ಲವರ ಎರಡನೆ ಸಿಂಹವರ್ಮನ್ ಇತಿಹಾಸದಲ್ಲಿ ಆ ಯುದ್ಧದ ತರುವಾಯ ಎಲ್ಲೂ ದಾಖಲಾಗಲೇ ಇಲ್ಲ. ಅದೇ ಕೊನೆಯ ಯುದ್ಧ ವಾಗಿದ್ದು. ಯಾವ ಇತಿಹಾಸದಲ್ಲೂ ಬಳಸದ ವರ್ತುಳ ವ್ಯೂಹ ರಚಿಸಿ ಕಾಕುಸ್ಥವರ್ಮನನ್ನು ಸದೆಬಡೆಯಲು ಯೋಜಿಸಲಾದ ಈ ಕಥಾನಕ ಯಾಕೆ ಈವರೆಗೂ ಬರೆಯಲೇ ಇಲ್ಲ..? ಯಾರಿಗೂ ಬೇಡವಾದ ಕದಂಬರ ಈ ಇತಿಹಾಸ ಹೊಸ ಬೆಳಕಿಗೆ ನಿಮ್ಮ ಓದಿಗೆ.
ಗುಪ್ತರ ಪ್ರತಿನಿಧಿಯಾಗಿ ದೌತ್ಯಕ್ಕೆ ಸ್ವತಃ ಸರಸ್ವತಿ ಪುತ್ರ ಕಾಳಿದಾಸ ಅವನ ಆಸ್ಥಾನಕ್ಕೆ ಬಂದು ಹೋದ. ಭರತವರ್ಷದ ಪ್ರಮುಖ ರಾಜಮನೆತನದೊಂದಿಗೆ ಸಂಬಂಧ ಬೆಳೆಸಿದ್ದ ದೊರೆ, ತನ್ನ ಬೊಕ್ಕಸಕ್ಕೆ ಹರಿದು ಬರುತ್ತಿದ್ದ ಸಂಪತ್ತನ್ನು ಎಣಿಸಿ ಲೆಕ್ಕವಿಡಲೇ ಒಂದು ಊರನ್ನು ಸೃಷ್ಠಿ ಮಾಡಿದ್ದ ಇತಿಹಾಸದ ಅತ್ಯಂತ ಶ್ರೀಮಂತ ದೊರೆ ಅವನು.
ಅತ್ಯಂದ ಉದ್ದದ ಸಾರ್ಥಗಳನ್ನು ಕೈಗೊಂಡು ದಂಡಯಾತ್ರೆ ಮಾಡಿ ಬಂದಿದ್ದ ಅವನು. ಅವನನ್ನು ನೋಡಲೇ ಎರಡು ಸಪ್ತಾಹದಿಂದ ಜನ ಕಾಯ್ದು ನಿಲ್ಲುತ್ತಿದ್ದರು.
ಅವನ ಹೆಸರು
“ಕಾಕುಸ್ಥ ವರ್ಮ”
ಕದಂಬರ ಮಯೂರ ವರ್ಮನ ನಂತರ ಬಂದ ಮೊದಲ ಮತ್ತು ಕೊನೆಯ ಅತ್ಯಂತ ಬಲಾಢ್ಯ ದೊರೆ. ಕನ್ನಡ ಮತ್ತು ಯಾವುದೇ ಇತಿಹಾಸದಲ್ಲೆ ಮೊದಲ ಬಾರಿಗೆ ಈ ಕಾದಂಬರಿ – ಐತಿಹಾಸಿಕ ಸತ್ಯ ವಾಸ್ತವಗಳ ದಾಖಲೆ ಬದ್ದ ಕಥಾನಕ ನಿರೀಕ್ಷಿಸಿ.
- ಸಂತೋಷಕುಮಾರ್ ಮೆಹಂದಳೆ
