ಮುನಿಸು ಚಿಗುರಿ ಬೆಳೆದು ಕೆಂಡವಾದಾವು…ಕವಿ ಶಾರದಾ ಶ್ರಾವಣಸಿಂಗ್ ರಜಪೂತ ಅವರ ಲೇಖನಿಯಲ್ಲಿರುವ ಕವನವನ್ನು ತಪ್ಪದೆ ಮುಂದೆ ಓದಿ…
ಮುನಿಸು ತರಬೇಡ ಮನದಿ ಮನವೇ
ಮನಸು ಮುರಿದು ಕನಸ ಕಳೆದಾವು
ಭಾವಗಳು ತಣ್ಣಗಾಗಿ ರಂಗು ಅಳಿಸ್ಯಾವು
ಕರುಳೊಳಗಿನ ಶಕ್ತಿ ಕಳೆದು ಹೋದಾವು
ಮುನಿಸು ಚಿಗುರಿ ಬೆಳೆದು ಕೆಂಡವಾದಾವು
ಮದಮತ್ಸರ ದ್ವೇಷ ಅಲ್ಲಿ ಮೆರೆದಾವು
ಮಮತೆ ಮಸುಕಾಗಿ ಬಾಂಧವ್ಯ ಅಳಿಸ್ಯಾವು
ಬದುಕಿನುದ್ದಕ್ಕೂ ಜೀವಸೆಲೆ ಬತ್ತಿ ಹೋದಾವು
ಮನದೊಳಗಿನ ಮುನಿಸು ಭಿನ್ನತೆ ಬಿತ್ಯಾವು
ಬಿತ್ತಿದಬೆಳೆ ವಿಷದ ಧಾನ್ಯ ಬೆಳೆದಾವು
ಬಿತ್ತಿದವನೇ ಉಣಬೇಕೆಂಬ ನೀತಿ ತಿಳಿಸ್ಯಾವು
ಮುನಿಸು ಅಂಗಾರ ತಾಳ್ಮೆ ಬಂಗಾರ ಅರ್ಥೈಸ್ಯಾವು
ಅಂತರಂಗದ ಮುನಿಸು ಹುಸಿಯಾಗಿ ನಂದಲಿ
ಜೀವನದಿ ಅದು ‘ಭಾವ’ಕೆ ಜೇನಾಗಲಿ
ಸಂಜೆಯ ಮುನಿಸು ಮುಂಜಾನೆ ಮಂಜಾಗಲಿ
ಮುನಿಸರಳಿ ಹೃದಯ ಮಿಡಿತಕೆ ಸ್ಫೂರ್ತಿ ನೀಡಲಿ
- ಶಾರದಾ ಶ್ರಾವಣಸಿಂಗ್ ರಜಪೂತ – ಶಿಕ್ಷಕರು, ಕವಿಗಳು.
