ನಿನ್ನ ನೆರಳನ್ನು ಕದಲಿಸಲು ಆಗುತ್ತಿಲ್ಲ!

ನೀ ಕೊಟ್ಟ ಹೂವು ಒಣಗಿ ಹೋಯಿತು, ಪರಿಮಳ ಮಾತ್ರ ಇನ್ನೂ ನನ್ನ ಕೋಣೆಯಲ್ಲಿ ನಿನ್ನ ಪ್ರೀತಿಗೆ ಸಾಕ್ಷಿಯಾಗಿದೆ…ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕವಿ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ನಿನ್ನ ಮೌನಕ್ಕೆ
ಅರ್ಥ ಹುಡುಕುತ್ತಾ ಹುಡುಕುತ್ತಾ
ನನ್ನ ಚಿಂತನೆ ಕನಸು ಮಾತುಗಳೆಲ್ಲ
ಅನಾಥವಾದವು!

ನೀ ಬಂದು ಹೋದ ದಾರಿಯ ಮೇಲೆ
ಹೆಜ್ಜೆ ಗುರುತುಗಳಿರಲಿಲ್ಲ!
ಆದರೂ ಪ್ರತಿದಿನವು ಅದೇ ದಾರಿಯಲ್ಲಿ
ನೀ ಬರುವ ನಿರೀಕ್ಷೆಯಲ್ಲೆ ತಿರುಗುತ್ತಿದ್ದೇನೆ!

ನಿನ್ನ ಹೆಸರನ್ನು
ತುಟಿಗಳ ಅಂಚಿನಿಂದ ಅಳಿಸಿಬಿಟ್ಟೆ!
ಮನಸ್ಸಿನ ಗೋಡೆಯ ಮೇಲಿದ್ದ
ನಿನ್ನ ನೆರಳನ್ನು ಕದಲಿಸಲು ಆಗುತ್ತಿಲ್ಲ!

ನೀ ಕೊಟ್ಟ ಹೂವು ಒಣಗಿ ಹೋಯಿತು
ಪರಿಮಳ ಮಾತ್ರ
ಇನ್ನೂ ನನ್ನ ಕೋಣೆಯಲ್ಲಿ
ನಿನ್ನ ಪ್ರೀತಿಗೆ ಸಾಕ್ಷಿಯಾಗಿದೆ!

ನನ್ನ ಕಣ್ಣೀರಿಗೆ
ಕಾರಣ ಕೇಳಿದವರು ಹಲವರು!
ನಿನ್ನ ಹೆಸರನ್ನು ಹೇಳದೆ ಉಳಿದದ್ದು ಮಾತ್ರ
ನನ್ನ ಜೀವನದ ಪರಮ ಸುಖವಾಗಿದೆ!

ನಿನ್ನ ನೆನಪುಗಳಿಗೆ
ಬಾಗಿಲು ಹಾಕಿ ಮಲಗಿದ್ದೆ
ಕಿಟಕಿಯಿಂದ ತೂರಿಬಂದ ಗಾಳಿ
ಮತ್ತೆ ನಿನ್ನ ಹಾಡನ್ನೇ ಗುನುಗುತ್ತಿದೆ!

ನೀ ಹೋಗುವಾಗ
ಏನನ್ನೂ ತೆಗೆದುಕೊಂಡು ಹೋಗಲಿಲ್ಲ
ಆದರೂ ನನ್ನೊಳಗಿನ
ಬಹಳಷ್ಟು ಖಾಲಿಯಾಯಿತು ಒಲವೇ!

ನಿನ್ನೊಂದಿಗೆ ಮಾತನಾಡಲು
ಸಾವಿರ ಮಾತುಗಳಿದ್ದವು
ನೀ ಎದುರಾದಾಗ
ಮೌನವೇ ಮಾತುಗಳೆಲ್ಲವನ್ನು ನುಂಗಿ ಹಾಕಿತು!

ನಿನ್ನ ತಪ್ಪುಗಳನ್ನು
ಬೆರಳು ಮಡಿಸಿ ಎಣಿಸುತ್ತಿದ್ದೆ
ಕೊನೆಯಲ್ಲಿ ನನ್ನ ಮೌನವನ್ನೇ
ಅತಿ ದೊಡ್ಡ ತಪ್ಪೆಂದು ಕಂಡುಕೊಂಡೆ!

ನಿನ್ನ ತಿರಸ್ಕಾರದ ಮಾತನ್ನು
ನಾನು ವರ್ಷಗಳ ಕಾಲ
ಎದೆಯಲ್ಲಿ ಕಾಪಾಡಿಕೊಂಡೆ
ನಿನಗೇನೋ ಅದೊಂದು ಕೇವಲ ಮಾತು!
ನನಗೆ ಅದು ಬದುಕಿನ ಭರವಸೆಯಾಗಿತ್ತು!

ನನ್ನ ಮನೆ ತಾರಸಿಗೆ
ಚಂದ್ರ ಪ್ರತಿರಾತ್ರಿ ಬರುತ್ತಾನೆ
ನೀ ಮಾತ್ರ ಬರಲಿಲ್ಲ
ಬಹುಶಃ ಚಂದ್ರನಿಗೆ
ನನ್ನ ಕಾಯುವಿಕೆಗೆ ಕರುಣೆ ಬಂದಿರಬೇಕು!

ನಿನ್ನನ್ನು ಮರೆತಿದ್ದೇನೆ
ಎಂದು ಸುಳ್ಳು ಹೇಳಿದೆ!
ಮನಸ್ಸು ನಕ್ಕಿತು
ಸುಳ್ಳು ಹೇಳುವುದನ್ನೂ
ನನ್ನಿಂದಲೇ ಕಲಿತೆಯಲ್ಲ ಎಂದು!

ನಿನ್ನ ನೆನಪೆಂಬುದು
ಹಳೆಯ ಗಾಯವಲ್ಲ!
ಪ್ರತಿದಿನವೂ
ಹೃದಯದ ಹೊಸ ಬಡಿತದ ಜೊತೆಗೆ
ಮತ್ತೆ ಮತ್ತೆ ಹುಟ್ಟುವ ಮಾಯದ ನೋವು!

ನೀ ತಿರುಗಿ ನಕ್ಕ ಆ ಬಗೆ
ಅದನ್ನೇ ನಾನು ಜೀವನಪೂರ್ತಿ
ತಪ್ಪಾಗಿ ಓದಿಕೊಂಡೆ
ಪ್ರೀತಿಯೆಂದು!

ನಮ್ಮ ನಡುವೆ ಇದ್ದದ್ದು ಇಷ್ಟೇ
ನೀ ಇರದಂತೆ ಇದ್ದು ಹೋಗಲೊಂದು ಕಾರಣ!
ನಾನು ಉರುಳದಂತೆ ಉಳಿಯಲು
ಸಾಯದ ಸಾವಿರ ನೆನಪುಗಳ ಸಂಕಥನ!


  • ಟಿ.ಪಿ.ಉಮೇಶ್ – ರಾಜ್ಯ ಹಾಗೂ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಕವಿಗಳು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading