‘ಮತಪಟ್ಟಿ ಪರಿಷ್ಕರಣೆ’ ಕವನ

ಪ್ರತಿ ಗಣತಿದಾರರಿಗೂ ಮಾರ್ಗದರ್ಶಕರಿಗೂ ನಮ್ಮ ಹೃತ್ಪೂರ್ವಕ ವಂದನೆ ಅಭಿವಂದನೆ…ಕವಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು ಟಿ.ಪಿ.ಉಮೇಶ್ ಅವರ ಮತಪಟ್ಟಿ ಪರಿಷ್ಕರಣೆ ಮಹತ್ವದ ಕುರಿತು ರಚಿಸಿದ ಕವಿತೆಯನ್ನು ಪೂರ್ತಿಯಾಗಿ ಓದಿ…

ಮನೆಮನೆಗೆ ಬರುವ ಕಾಳಜಿಯ ಹೆಜ್ಜೆಗಳು
ಬಾಗಿಲು ತಟ್ಟುವ ಮಮತೆಯ ಹಸ್ತಗಳು
ಕೈಯಲ್ಲಿ ಅರ್ಜಿ ನಮೂನೆ ಮಾಹಿತಿಗಳ ಕಡತ
ಮನದಲ್ಲಿ ಒಂದೇ ದೃಢ ಸಂಕಲ್ಪ
ಪ್ರತಿ ಅರ್ಹನಿಗೂ ಮತದ ಹಕ್ಕು
ಪ್ರತಿ ಮತಕ್ಕೂ ಸರಿಯಾದ ಗುರುತು

ಮತದಾರರ ವಿಶೇಷ ಪರಿಷ್ಕರಣೆಗೆ ನಮಿಸಿ
ಹೊಸ ಸೇರ್ಪಡೆಗೆ ಮಾಹಿತಿಯನ್ನು ತಿಳಿಸಿ
ಮರಣ ಹೊಂದಿದವರನ್ನು ಪಟ್ಟಿಯಿಂದ ತೆಗಿಸಿ
ಎರಡು ಮೂರು ಕಡೆ ಇರುವವರನ್ನು ಅಳಿಸಿ
ನಮ್ಮ ದೇಶದ ಮತಪಟ್ಟಿ ಶುದ್ಧವಾಗಲಿದೆ
ಭಾರತದ ಪ್ರಜಾಪ್ರಭುತ್ವದ ನೆಲೆ ಶಕ್ತವಾಗಲಿದೆ

ಉರಿ ಬಿಸಿಲಿನ ಬೆವರಿಗೂ ಅಂಜದೆ
ಜಿಟಿಜಿಟಿ ಮಳೆಯ ಹನಿಗೂ ಹೆದರದೆ
ಬಿರುಗಾಳಿ ಚಳಿಗೂ ಅಳುಕದೆ
ಹಳ್ಳಿಗಳ ದಾರಿಯಲ್ಲಿ
ಕಾಡಂಚಿನ ಕಣಿವೆಯಲ್ಲಿ
ದೂರದೂರಿನ ಓಣಿಗಳಲ್ಲಿ
ಪಟ್ಟಣ ನಗರದ ಗಲ್ಲಿಗಳಲ್ಲಿ
ನಡೆಯುವ ದೇಶ ಕಟ್ಟುವ ಹೆಜ್ಜೆಗಳಿಗೆ
ಯಾರೂ ಚಪ್ಪಾಳೆ ತಟ್ಟದಿರಬಹುದು
ಆದರೂ ಅವರ ಪವಿತ್ರ ಕರ್ತವ್ಯ
ದೇಶದ ಭವಿಷ್ಯ ಬೆಳಗುತ್ತಿದೆ
ಭಾರತೀಯತೆಯ ಕಾಯುತ್ತಿದೆ
ಭಾರತದ ಅಭಿವೃದ್ಧಿಗೆ ಭಾಷ್ಯ ಬರೆಯುತ್ತಿದೆ

ಒಂದು ಮನೆಯಲ್ಲಿ
ಹೊಸ ಮತದಾರನ ನಗು
ಮತ್ತೊಂದು ಮನೆಯಲ್ಲಿ
ಕಳೆದುಹೋದ ಜೀವದ ನೆನಪು
ಅಲ್ಲೆಲ್ಲೋ ತಪ್ಪಾದ ವಿಳಾಸ
ಎಲ್ಲೋ ಬದಲಾಗಿರುವ ಮನೆ
ಎಲ್ಲೋ ಎರಡು ಪಟ್ಟಿಗಳಲ್ಲಿ
ಒಂದೇ ಹೆಸರಿನ ನೆರಳು
ಪ್ರತಿಯೊಂದನ್ನೂ ಪರಿಶೀಲಿಸಿ
ಸತ್ಯದ ದಾಖಲೆಯನ್ನಾಗಿಸುವ
ದೇಶದ ಮೌನ ಯೋಧರು
ನಮ್ಮ ಮತಗಟ್ಟೆಯ ಅಧಿಕಾರಿಗಳು

ಜನರ ನಾನಾ ಪ್ರಶ್ನೆಗಳಿಗೆ ನಗುಮುಖದಿ ಉತ್ತರ
ಅನುಮಾನಗಳಿಗೆಲ್ಲ ಸಂಯಮದಿ ಸಮಾಧಾನ
ತಪ್ಪು ಮಾಹಿತಿಗೆ ಬೇಸರಿಸದೆ ತಿದ್ದುಪಡಿ
ಮರೆತುಹೋದ ಹಕ್ಕಿಗೆ ವಿನಮ್ರತೆಯ ನೆನಪು
ಮತಪಟ್ಟಿ ಕಾಗದದ ಮೇಲಿನ ಅಕ್ಷರಗಳಲ್ಲ
ಪ್ರಜೆಯ ಹಕ್ಕುಗಳಿಗೆ ಆಜನ್ಮ ಸಾಕ್ಷಿ
ಮತ ರಕ್ಷಿಸುವ ಆರಕ್ಷಕರೆ ಮತಗಟ್ಟೆ ಅಧಿಕಾರಿಗಳು
ಭಾರತ ದೇಶದ ಸಂವಿಧಾನದ ರಕ್ಷಕರು

ಒಂದು ಹೊಸ ಹೆಸರು ಸೇರ್ಪಡೆಯಾದರೆ
ಒಂದು ಹೊಸ ಧ್ವನಿಗೆ ದಾರಿ
ಒಂದು ತಪ್ಪು ಹೆಸರು ತೆಗೆಯಲ್ಪಟ್ಟರೆ
ಪಟ್ಟಿಗೆ ಮತ್ತಷ್ಟು ಪಾರದರ್ಶಕತೆ
ಒಂದು ನಕಲು ಅಳಿಸಿದರೆ
ಮತದಾನದ ಪಾವಿತ್ರ್ಯಕ್ಕೆ ಬಲ
ಪ್ರತಿಯೊಂದು ತಿದ್ದುಪಡಿಯು ಪ್ರಜಾಪ್ರಭುತ್ವದ ಕನ್ನಡಿ
ಅಭಿವೃದ್ಧಿ ಭಾರತಕ್ಕೆ ಸಮೀಕ್ಷಕರದೆ ಮೊದಲ ಮುನ್ನುಡಿ

ಹಗಲು ಉತ್ಸಾಹದಿ ಮಾಹಿತಿ ಕೆಲಸ ಮುಗಿದರೂ
ಇರುಳು ದಾಖಲೀಕರಣದಿ ತೊಡಗುವ ಉಮ್ಮೇದು
ಮುಗಿಯುವುದಿಲ್ಲ ಅವರ ಪಯಣ
ಮತ್ತೆ ದಾಖಲೆಗಳ ಪರಿಶೀಲನೆ
ಮತ್ತೆ ನಿಖರ ಮಾಹಿತಿ ಸಂಗ್ರಹಣೆ
ಮತ್ತೆ ನೈಜ ಮತದಾರರ ರುಜುವಾತಿನ ಹೊಣೆ
ಜನರಿಗೆ ಕಾಣದಷ್ಟು ಕಷ್ಟಗಳು

ಯಾರಿಗು ಹೇಳದಷ್ಟು ಜವಾಬ್ದಾರಿಗಳು
ಗಣತಿದಾರರ ಬೆವರ ಹನಿಹನಿಗಳಲ್ಲಿ
ಮತದಾನದ ಭವಿಷ್ಯ ಮೊಳೆಯುತ್ತದೆ
ಅವರ ಪರಿಶ್ರಮದ ಪ್ರತಿಯೊಂದು ಹೆಜ್ಜೆಯಲ್ಲಿ
ಪ್ರಜಾಪ್ರಭುತ್ವದ ದಾರಿ ನಿರ್ಮಾಣವಾಗುತ್ತದೆ

ಮನೆಮನೆಗೆ ತಲುಪುವ ಆ ಹೆಜ್ಜೆಗಳು
ದೇಶದ ಹೃದಯ ತಲುಪುವ ಹೆಜ್ಜೆಗಳು
ಮತಪಟ್ಟಿ ಪರಿಷ್ಕರಿಸುವ ಆ ಕೈಗಳು
ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೈಗಳು

ನಮಿಸೋಣ ಸಮೀಕ್ಷಕರ ಸೇವಾ ಮನಸ್ಸಿಗೆ
ಅಭಿನಂದಿಸೋಣ ಅಪಾರ ಕರ್ತವ್ಯನಿಷ್ಠೆಗೆ
ಶುದ್ಧ ಮತಪಟ್ಟಿಗಾಗಿ ದುಡಿಯುವ
ಪ್ರತಿ ಗಣತಿದಾರರಿಗೂ ಮಾರ್ಗದರ್ಶಕರಿಗು
ನಮ್ಮ ಹೃತ್ಪೂರ್ವಕ ವಂದನೆ ಅಭಿವಂದನೆ

ದೇಶದ ಮತಪಟ್ಟಿ ಶುದ್ಧವಾಗಲಿದೆ
ಮತದ ಹಕ್ಕು ಸುರಕ್ಷಿತವಾಗಲಿದೆ
ಪ್ರಜಾಪ್ರಭುತ್ವವು ಸದೃಢವಾಗಲಿದೆ
ಭಾರತ ವಿಶ್ವದ ಸ್ಥಿರತೆಗೆ ಭರವಸೆಯಾಗಲಿದೆ


  • ಟಿ.ಪಿ.ಉಮೇಶ್ – ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು,  ಅಮೃತಾಪುರ ಹೊಳಲ್ಕೆರೆ ತಾ, ಚಿತ್ರದುರ್ಗ ಜಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading