ಅಂಗೈಯಲ್ಲಿ ಪ್ರಪಂಚ (ಭಾಗ- ೩೮)

ಆಸ್ಪತ್ರೆಗೆ ಬಾಯಿ ಇದ್ದಿದ್ದರೇ ತನ್ನ ಭಾವನೆಯನ್ನು ಹೇಗೆ ವ್ಯಕ್ತ ಪಡಿಸುತ್ತಿತ್ತು ಎನ್ನುವುದು ಈ ಅಂಕಣದಲ್ಲಿ ಓದಬಹುದು. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ನಾನು ಆಸ್ಪತ್ರೆ’ ತಪ್ಪದೆ ಮುಂದೆ ಓದಿ…

ಅಪಘಾತದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವನಿಗೆ ತುರ್ತು ಚಿಕಿತ್ಸೆ ನೀಡಿ ಜೀವಕ್ಕೇನೂ ಅಪಾಯವಿಲ್ಲ ಎಂದು ನನ್ನಲ್ಲಿರುವ ವೈದ್ಯರು ಹೇಳಿದಾಗ, ತಮಗಾಗಿ ಜೀವ ತೇಯ್ದ ತಂದೆಯನ್ನು ಉಳಿಸಿಕೊಂಡ ಮಕ್ಕಳ ಕಣ್ಣಲ್ಲಿ ಸಾರ್ಥಕತೆಯ ಭಾವವಿದ್ದರೆ, ತಾಳಿಯನ್ನು ಕಣ್ಗೊತ್ತಿಕೊಂಡ ಅವಳ ಕಣ್ಣಲ್ಲಿ ನೂರೆಂಟು ಭಾವಗಳ ಸಮ್ಮಿಶ್ರಣ.

ಮೊದಮೊದಲು ಸರ್ಕಾರದ ಸ್ವತ್ತಾಗಿದ್ದ ನಾನು ಈಗ ಅನೇಕರ ಒಡೆತನದಲ್ಲಿದ್ದೇನೆ. ನಾಲ್ಕಾರು ಕೋಣೆಗಳನ್ನು ಮಾತ್ರ ಹೊಂದಿದ್ದ ನಾನೀಗ ನಾಲ್ಕಾರು ಅಂತಸ್ತುಗಳಿಗೆ ವಿಸ್ತಾರಗೊಂಡಿದ್ದೇನೆ. ವೈದ್ಯರು, ಕಾಂಪೌಂಡರ್ ಮಾತ್ರ ಇರುತ್ತಿದ್ದ ನನ್ನಲ್ಲಿ ಈಗ ನೂರಾರು ಜನರು ಸದಾ ಸೇವೆ ಮಾಡಲು ಸಿದ್ಧರಾಗಿರುವುದು ನನಗೊಂದು ಹೆಮ್ಮೆಯ ವಿಷಯ. ಯಾರು ಬಂದರೂ ಯಾರು ಹೋದರೂ ನನಗೇನೂ ಬೇಸರವಿಲ್ಲ. ಏಕೆಂದರೆ ಇದು ನಿರಂತರ ಎಂಬ ಅರಿವು ನನಗಿದೆ. ನನ್ನಲ್ಲಿಗೆ ಬರಲಿ ಎಂದು ನಾನು ಆಸೆಪಡುವುದೂ ಇಲ್ಲ. ಹಾಗೊಂದು ಆಸೆ ಇದ್ದರೆ ಅದು ಗರ್ಭಿಣಿ ಸ್ತ್ರೀಯರ ಬಗ್ಗೆ ಮಾತ್ರ. ಯಾಕೆ ಗೊತ್ತಾ..? ಪುಟ್ಟ ಮಕ್ಕಳನ್ನು ನಾನೇ ಮೊದಲು ನೋಡಬಹುದಲ್ಲ. ಅವರ ಮೊದಲ ಉಸಿರ ಸ್ಪರ್ಶಕ್ಕೆ ನನಗೂ ರೋಮಾಂಚನವಾಗುತ್ತದೆ. ಅವರ ಮೊದಲ ಅಳುವಿಗೆ ನಾನೂ ಖುಷಿಯಿಂದ ನಗುತ್ತೇನೆ. ಕೆಲವು ಮಕ್ಕಳು ಹುಟ್ಟಿದಾಗ ಅಳದಿದ್ದರೆ, ಅವರನ್ನು ಅಳಿಸಲು ಡಾಕ್ಟರ್, ನರ್ಸ್ ಮಾಡುವ ಹರಸಾಹಸಕ್ಕೆ ನಾನೂ ಗಾಬರಿಯಾಗಿದ್ದೇನೆ. ಮಗು ನೋಡಿದ ಆ ತಾಯ ಕಣ್ಣಲ್ಲಿಯ ಆನಂದ ನನಗೆ ಬಿಟ್ಟರೆ ಇನ್ಯಾರಿಗೆ ತಿಳಿಯಲು ಸಾಧ್ಯ?.

 ಫೋಟೋ ಕೃಪೆ : ಅಂತರ್ಜಾಲ

ಮೊದಲೆಲ್ಲಾ ನೆಗಡಿ, ಕೆಮ್ಮು, ಜ್ವರದಂಥಾ ಸಣ್ಣಪುಟ್ಟ ಕಾಯಿಲೆಗಳಿಗೆ ಮಾತ್ರ ಜನರು ನನ್ನಲ್ಲಿಗೆ ಬರುತ್ತಿದ್ದರು. ಆದರೆ ಈಗ ಅಬ್ಬಾ, ಅದೆಂತೆಂಥಾ ಕಾಯಿಲೆಗಳು! ದಿನಕ್ಕೊಂದೊಂದು ಹೊಸ ರೂಪ ತಳೆದು ಜನರಿಗೆ ನೀಡುವ ಕಷ್ಟ ನೋಡಿ ನನಗೂ ಬೇಸರವಾಗುತ್ತದೆ. ಜೊತೆಗೆ ಏನೇ ಬಂದರೂ ಯಾವುದಕ್ಕೂ ಎದೆಗುಂದದೇ, ಎಲ್ಲವುದಕ್ಕೂ ಚಿಕಿತ್ಸೆ ಕಂಡುಹಿಡಿದು ನೀಡುವ ನಮ್ಮ ವೈದ್ಯರುಗಳನ್ನು ನೋಡಿದಾಗ ಹೆಮ್ಮೆಯೂ ಆಗುತ್ತದೆ. ಬಹಳ ಸಮಾಧಾನದಿಂದ ರೋಗಿಗಳ ಸಮಸ್ಯೆ ಕೇಳಿ ಮಾತಿನಲ್ಲೇ ಅವರ ಅರ್ಧ ಕಾಯಿಲೆ ವಾಸಿ ಮಾಡುವ ವೈದ್ಯರನ್ನು ನೋಡಿದ್ದೇನೆ. ಅಗತ್ಯದ ಚಿಕಿತ್ಸೆ ನೀಡಿ ಅವರಲ್ಲಿ ಧೈರ್ಯ ತುಂಬಿ ಅವರನ್ನು ಹೊಸ ಮನುಷ್ಯರನ್ನಾಗಿ ಮಾಡಿದ ವೈದ್ಯರನ್ನೂ ನೋಡಿದ್ದೇನೆ. ನಿಗದಿತ ಸಮಯಕ್ಕೆ ಸರಿಯಾಗಿ ತಮ್ಮ ಕರ್ತವ್ಯವನ್ನು ಮಾಡುವ ಪ್ರಾಮಾಣಿಕರನ್ನೂ, ಎಂತಹ ಕಾಯಿಲೆಯಾದರೂ ಮುಟ್ಟಿ ನೋಡಲು ಅಸಹ್ಯಪಡದೇ ರೋಗಿಯ ಸನಿಹ ಹೋಗಿ ಚಿಕಿತ್ಸೆ ನೀಡಿದವರನ್ನೂ ನೋಡಿದ್ದೇನೆ. ಹಾ, ಇದೆಲ್ಲಾ ಅವರ ಕರ್ತವ್ಯ ಎನ್ನುತ್ತೀರಾ. ಖಂಡಿತಾ ನಿಜ , ಅದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಇಲ್ಲಿ ಕರ್ತವ್ಯಕ್ಕಿಂತ ರೋಗಿಯ ಮನಸ್ಥಿತಿಯನ್ನು ಅರಿತು ಅವರ ಭಾವನೆಗಳಿಗೆ ಸ್ಪಂದಿಸುವ ವೈದ್ಯರ ಗುಣಕ್ಕೆ ನಾನು ಹೆಚ್ಚು ಒತ್ತು ಕೊಡುತ್ತಿರುವುದು. ಅದಕ್ಕೇ ಅಂತಹ ವೈದ್ಯರನ್ನು ಅವರ ಕೈಗುಣ ಚೆನ್ನಾಗಿದೆಯೆಂದು, ನಾಲ್ಕೈದು ದಶಕಗಳಾದರೂ ಕೆಲವರು ಅವರನ್ನೇ ಹುಡುಕಿಕೊಂಡು ಬರುತ್ತಾರೆ. ಇದು ಅವರ ಕುಟುಂಬದ ಮುಂದಿನ ಪೀಳಿಗೆಗೂ ಸಹ ಅನ್ವಯಿಸುತ್ತದೆ .

ಕಣ್ಣೀರಿಡುತ್ತಲೋ, ಗಾಬರಿಯಿಂದಲೋ ಬಂದ ರೋಗಿ ನನ್ನಲ್ಲಿದ್ದು ಚಿಕಿತ್ಸೆ ಪಡೆದು ನಗುನಗುತ್ತಾ ಮನೆಗೆ ಹೋಗುವಾಗ ಸಂತೋಷದ ಕಣ್ಣೀರಿನೊಂದಿಗೇ ಹರಸುತ್ತೇನೆ. ದುಡ್ಡಿಲ್ಲದವರ ಬವಣೆಗೆ ಮೂಕ ಪ್ರೇಕ್ಷಕನಾಗಿದ್ದೇನೆ. ಯೌವ್ವನದ ಹುಚ್ಚಿನಲ್ಲಿ ಮೋಸ ಹೋಗಿಯೋ, ಸಾಲದ ಸುಳಿಯಲ್ಲಿ ಸಿಕ್ಕೋ ಜೀವ ಕಳೆದುಕೊಂಡವರ ಮನೆಯವರು ಕಂಗೆಟ್ಟು ಕುಳಿತದ್ದು ನೋಡಿ ಹತಾಶೆಗೊಂಡಿದ್ದೇನೆ. ಏಕೆಂದರೆ ನನ್ನಲ್ಲಿಗೆ ಬರುವವರೆಲ್ಲ ಒಂದು ಭರವಸೆ ಇಟ್ಟುಕೊಂಡೇ ಬಂದಿರುತ್ತಾರೆ.

ಇನ್ನು ಕೆಲವು ವೈದ್ಯರು ಮಾಡುವ ತಪ್ಪುಗಳಿಗೆ ನಾನು ತಲೆತಗ್ಗಿಸಿದ್ದೇನೆ. ತೆಗೆದುಕೊಳ್ಳುವ ಲಂಚ, ತಪ್ಪಾದ ಆಪರೇಷನ್, ಸಿಡುಕುವ ಗುಣ, ಕೈಕೆಳಗಿನವರ ಮೇಲೆ ನಡೆಸುವ ದಬ್ಬಾಳಿಕೆ ಎಲ್ಲವುದನ್ನೂ ತಡೆಯಬೇಕೆನ್ನಿಸುತ್ತದೆ. ನನ್ನ ಇತಿಹಾಸದಲ್ಲೇ ನಾನು ಹೆಚ್ಚು ನರಳಿದ್ದೆಂದರೆ, ಅದು ಕೊರೋನ ಸಮಯದಲ್ಲಿ. ಆಗ ರೋಗಿಗಳು ಗುಣಮುಖರಾಗಿ ಮನೆ ಕಡೆ ಹೆಜ್ಜೆ ಹಾಕಿದ್ದೂ ಇದೆ. ಇನ್ನು ಕೆಲವು ಘಟನೆಗಳಿಂದ ನನಗೆ ಕಳಂಕ ಬಂದದ್ದೂ ಇದೆ. ಆ ಸಮಯದಲ್ಲಿ ನನಗೆ ಬಳಿದ ಮಸಿಯನ್ನು ಒರೆಸಿಕೊಳ್ಳಲಾಗದ ಅಸಹಾಯಕ ನಾನು. ಏಕೆ ಗೊತ್ತೇ…? ಗೋಡೆಗೆ ಕಿವಿಯಿದೆ ಎನ್ನುತ್ತಾರೆ. ಹಾಗೆ ನನ್ನ ಆಧಾರ ಸ್ತಂಭಗಳಲ್ಲಿ ಒಂದಾದ ಗೋಡೆಯ ಮೂಲಕ ನಾನು ಕೇಳಿಸಿಕೊಳ್ಳಬಹುದಷ್ಟೇ. ಆದರೆ ಕೂಗಿ ಹೇಳಲು ಆಗುವುದಿಲ್ಲವಲ್ಲ. ಒಂದು ವೇಳೆ ಆಗಿದ್ದಿದ್ದರೆ ಅದೆಲ್ಲಕ್ಕೂ ಮುಖ್ಯ ಸಾಕ್ಷಿ ನಾನೇ ಆಗಿರುತ್ತಿದ್ದೆ ಎಂಬುದರಲ್ಲಿ ಎರಡು ಮಾತಿಲ್ಲ.

ನನ್ನಲ್ಲಿರುವ ಕುರ್ಚಿ, ಟೇಬಲ್ಲು, ಬೆಡ್, ಹಾಸಿಗೆ, ದಿಂಬು ಹೀಗೆ ಎಲ್ಲವೂ ಒಂದೊಂದು ಕಥೆ ಹೇಳುತ್ತವೆ. ಜೊತೆಗೆ ಇವೆಲ್ಲವೂ ಇಲ್ಲಿ ಎಲ್ಲರ ಭಾವನೆಗಳನ್ನು ಹಿಡಿದಿಡುವ ಸಾಧನಗಳೇ. ಪ್ರತಿ ನಿಮಿಷದ ಮನುಷ್ಯನ ಒಡನಾಟದಿಂದ ಅವುಗಳೂ ನೊಂದಿವೆ, ಬೆಂದಿವೆ, ನಕ್ಕಿವೆ, ಅತ್ತಿವೆ. ಆದರೆ ನನ್ನನ್ನು ಬಿಟ್ಟು ಇನ್ಯಾರಿಗೂ ಅದರ ಬಗ್ಗೆ ಅರಿವಿಲ್ಲ. ಎಷ್ಟೋ ಬಾರಿ ನನ್ನ ಗೋಡೆಗೆ ಒರಗಿ ನಿಂತು ಮಾತನಾಡುವವರನ್ನು , ಆಸರೆಗೆಂದು ನನ್ನ ಗೋಡೆಯನ್ನು ಹಿಡಿದು ಓಡಾಡುವವರನ್ನು ನನ್ನ ಸ್ಪರ್ಶದಿಂದಲೇ ಸಮಾಧಾನಿಸಿದ್ದೇನೆ. ಅವರೆಲ್ಲರ ಮಾತುಗಳಿಗೆ ಮರುಗಿದ್ದೇನೆ, ಕೊರಗಿದ್ದೇನೆ. ಅವರ ಪರ್ಸಿನಲ್ಲೋ, ಕತ್ತಿನ ಸರದಲ್ಲೋ ಇರುವ ದೇವರ ಚಿತ್ರ ಅಥವಾ ವಿಗ್ರಹವನ್ನು ಕಣ್ಗೊತ್ತಿಕೊಂಡು, ಮನದಲ್ಲೇ ನಮಿಸಿ ಅವರು ಮಾಡುವ ಪ್ರಾರ್ಥನೆ ನನ್ನೊಳಗೂ ಆವಿರ್ಭವಿಸಿರುವುದು ಸುಳ್ಳಲ್ಲ. ಮನೆಯವರೋ, ಸಂಬಂಧಿಕರೋ ಪ್ರಸಾದವೆಂದು ರೋಗಿಗೆ ತಂದು ಹಚ್ಚುವ ಕುಂಕುಮ, ವಿಭೂತಿಯು ರೋಗಿಯ ಮುಖದಲ್ಲಿ ಪ್ರಸನ್ನತೆಯ ಭಾವ ತರಿಸಿದ್ದೂ ಸುಳ್ಳಲ್ಲ.

ಫೋಟೋ ಕೃಪೆ : ಅಂತರ್ಜಾಲ

ಸರ್ಕಾರದವರು, ಧಾರ್ಮಿಕ ಸಂಘ-ಸಂಸ್ಥೆಗಳು, ದತ್ತಿ ನಿಧಿಗಳು ಮತ್ತು ಸ್ವಯಂ ಸೇವಕರ ಗುಂಪುಗಳು ಇನ್ನೂ ಅನೇಕರು ನನ್ನ ಹುಟ್ಟಿಗೆ ಹಾಗೂ ಬೆಳವಣಿಗೆಗೆ ಕಾರಣ. ನನ್ನಲ್ಲಿರುವ ವಿವಿಧ ವಿಭಾಗಗಳೆಂದರೆ, ತೀವ್ರ ನಿಗಾ ಘಟಕ – ಉದಾಹರಣೆ: ತುರ್ತು ಚಿಕಿತ್ಸೆ ವಿಭಾಗ ಅಥವಾ ಅಪಘಾತದ ಕೇಂದ್ರ, ಸುಟ್ಟ ಪ್ರಕರಣಗಳ ಘಟಕ, ಶಸ್ತ್ರಚಿಕಿತ್ಸೆ, ವಿಭಾಗ. ಇಲ್ಲಿ ತಕ್ಷಣದ ಚಿಕಿತ್ಸೆ ನೀಡಬೇಕಾಗುವುದರಿಂದ ಇದರಲ್ಲಿ ವಿವಿಧ ವಿಭಾಗದ ವಿಶೇಷ ತಜ್ಞರ ಗುಂಪು ಇರುತ್ತದೆ. ಹೃದ್ರೋಗ ವಿಭಾಗ, ನರರೋಗ ವಿಭಾಗ, ಕ್ಯಾನ್ಸರ್ ಕೇಂದ್ರ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮಕ್ಕಳ ವಿಭಾಗ, ಹೊರ ರೋಗಿಗಳ ವಿಭಾಗ, ದಂತ ರೋಗ ವಿಭಾಗ, ಚರ್ಮರೋಗದ ವಿಭಾಗ, ಮಾನಸಿಕ ಕಾಯಿಲೆಗಳ ವಿಭಾಗ, ಪುನರ್ವಸತಿ ಸೇವಾ ಕೇಂದ್ರಗಳು ಮತ್ತು ದೈಹಿಕ ಕಾಯಿಲೆಗಳ ಚಿಕಿತ್ಸಾ ವಿಭಾಗ ಹೀಗೆ ಇನ್ನೂ ಹತ್ತು ಹಲವು. ನನ್ನಲ್ಲಿ ವೈದ್ಯಕೀಯ ಸೇವೆಗಳಿಗೆ ಪೂರಕವಾಗಿ ಔಷಧಾಲಯಗಳು, ರೋಗಪತ್ತೆ ವಿಭಾಗ, ವಿಕಿರಣ ವಿಭಾಗ, ವೈದ್ಯಕೀಯ ದಾಖಲೆಗಳ ವಿಭಾಗ, ರೋಗಿಗಳ ಬಿಡುಗಡೆ ಕುರಿತ ವಿವರಗಳ ವಿಭಾಗಗಳೂ ಇವೆ. ಹೀಗೆ ನಾನು ಅನೇಕ ವಿವಿಧ ವಿಭಾಗಗಳನ್ನು ಹೊಂದಿರುವುದರಿಂದ ಬರುವ ರೋಗಿಗಳಿಗೆ ಸಮಯದ ಉಳಿತಾಯವಾಗುತ್ತದೆ. ದೂರದ ಊರುಗಳಿಂದಲೂ ರೋಗಿಗಳು ನನ್ನನ್ನು ಹುಡುಕಿಕೊಂಡು ಬರುವುದರಿಂದ ಇಡೀ ದಿನ ಕಾಯಬೇಕಾದ ಅವಶ್ಯಕತೆಯಿರುವುದಿಲ್ಲ. ತಕ್ಷಣ ಅಥವಾ ಅಲ್ಪ ಅವಧಿಯಲ್ಲಿ ಅವರ ಸಮಸ್ಯೆಗೆ ಪರಿಹಾರವೋ, ಚಿಕಿತ್ಸೆಯೋ ಖಂಡಿತಾ ದೊರೆಯುತ್ತದೆ. ಉತ್ತಮ ಬಣ್ಣ, ಗಾಳಿ, ಬೆಳಕು ಒಳ್ಳೆಯ ವಾತಾವರಣದಿಂದ ನಾನು ರೋಗಿಗಳ ಮನಸ್ಸಿಗೆ ಮುದ ನೀಡಿದ್ದೇನೆ. ಕಡಿಮೆ ಹಣದ ಕೊಠಡಿಗಳು, ಹೆಚ್ಚಿನ ಅನುಕೂಲದ ಜೊತೆಗೆ ಜಾಸ್ತಿ ಹಣದ ಕೊಠಡಿಗಳು ಹೀಗೆ ಎಲ್ಲಾ ತರದ ಅನುಕೂಲಗಳು ಸಹ ನನ್ನಲ್ಲಿವೆ.

ನನಗೆ ಇಷ್ಟವಾದ ನನ್ನ ಭಾಗವೆಂದರೆ ಹೆರಿಗೆ ಕೋಣೆ. ಹಾಗೇ ನನಗೆ ಇಷ್ಟವಾಗದ ನನ್ನ ಭಾಗವೆಂದರೆ ಕೊನೇ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಕೋಣೆ ಹಾಗೂ ಶವಾಗಾರ. ಇಲ್ಲಿ ಮಾತ್ರ ನಾನು ಸೋತು ಹೋಗಿದ್ದೇನೆ. ಶವಾಗಾರದ ಮುಂದೆ ಸಂಬಂಧಿಕರು ಎದೆಬಡಿದುಕೊಂಡು ಅಳುವ ದೃಶ್ಯ, ಮೌನವಾಗೇ ಮರಕ್ಕೋ, ಕಾಂಪೌಂಡಿಗೋ ಒರಗಿ ಸರಿಸುವ ಕಣ್ಣೀರು, ಬಿಡುವ ನಿಟ್ಟುಸಿರು ಎಲ್ಲಕ್ಕೂ ಮೌನವಾಗಿ ಕರಗಿ ಹೋಗಿದ್ದೇನೆ. ಸರ್ಕಾರದ ಒಡೆತನದಲ್ಲಿರುವ ನನ್ನಲ್ಲಿ ಅನಾಥ ಶವಗಳನ್ನು ವೈದ್ಯಕೀಯ ಸಿಬ್ಬಂದಿಯವರೇ ಸಂಸ್ಕಾರ ಮಾಡಿದ ಉದಾಹರಣೆಗಳೂ ಇವೆ. ಹಾಗೆಯೇ ಅನಾಥ ಶವಗಳನ್ನು ಕಲಿಕೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನಾಟಮಿ(Anatomy) ವಿಭಾಗಕ್ಕೆ ದಾನ ನೀಡಿದ್ದಾರೆ. ಹಾ, ಹಾಗೇ ಇನ್ನೊಂದು ಮಾತು ತಿಳಿದಿರಲಿ, ಹುಟ್ಟು-ಸಾವಿನ ಪಕ್ಕಾ ಲೆಕ್ಕವಿರುವುದೂ ನನ್ನಲ್ಲೇ. ಬರೀ ಮಾಲ್ಗಳು, ಕ್ಲಬ್ಗಳು, ಖುಷಿ ಕೊಡುವ ಜಾಗಗಳ ಮಧ್ಯೆ ಕಷ್ಟಕ್ಕಾಗುವ ನಾನೂ ಇದ್ದೇನೆಂಬುದೇ ನನಗೆ ಸಮಾಧಾನ.

ಪ್ರತಿದಿನ ವೈದ್ಯರಿಗೋಸ್ಕರ ಕಾಯುವ ರೋಗಿಗಳು, ಗಾಬರಿಯಾದ ಅವರ ಮುಖಭಾವ, ಅವರ ನರಳುವಿಕೆ , ಕಣ್ಣೀರು ಎಲ್ಲವೂ ನನ್ನ ಪ್ರತಿನಿತ್ಯದ ಭಾಗ. ಅವರ ಮನೆಯವರ ಕಡೆಗೂ ಸರಿಯಾಗಿ ಗಮನ ಕೊಡಲಾಗದೇ ಇಲ್ಲಿ ಬಂದು ದಾದಿಯರು ಮಾಡುವ ನಗುಮೊಗದ ಸೇವೆಗೆ ಶರಣಾಗಿದ್ದೇನೆ. ಎಂಥಾ ದೊಡ್ಡ ಕಾಯಿಲೆ ಬಂದರೂ ಅದನ್ನು ಧೈರ್ಯದಿಂದ ಎದುರಿಸುವ ಕೆಲವು ರೋಗಿಗಳ ಆತ್ಮವಿಶ್ವಾಸಕ್ಕೆ ನಾನು ಮೆಚ್ಚಿದ್ದೇನೆ. ಹಾಗೆಯೇ ವ್ಯಕ್ತಿಯ ಕೊನೇ ಉಸಿರಿಗೆ ನಿಟ್ಟುಸಿರು ಬಿಟ್ಟಿದ್ದೇನೆ. ಎಲ್ಲಾ ಮುಗಿದ ಮೇಲೆ ಇದನ್ನು ಬಿಟ್ಟು ನಾನಾದರೂ ಇನ್ನೇನು ಮಾಡಲು ಸಾಧ್ಯ?.


  • ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.

One thought on “ಅಂಗೈಯಲ್ಲಿ ಪ್ರಪಂಚ (ಭಾಗ- ೩೮)”

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading