ನಿನ್ನ ಹಣೆ ಕೆನ್ನೆ ಗಲ್ಲದ ಮೇಲೆ ಪ್ರತಿ ಗೆರೆಗೂ ಒಂದೊಂದು ಜೀವನ ಕಥೆಯಿದೆ…ಕವಿ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಅಲ್ಲಲ್ಲಿ ಬೆಳ್ಳಿಯ ಹನಿಗಳು
ನಿನ್ನ ತಲೆಗೂದಲಲ್ಲಿ ಮಿಂಚುತ್ತಿವೆ!
ಬೆಳದಿಂಗಳೇ ಬಂದು ರಾತ್ರಿಯ ನೆನಪೊಂದನ್ನು
ಅಲ್ಲಿ ಬಿಟ್ಟು ಹೋದಂತೆ!
ಕತ್ತಲೆಯ ಆಕಾಶದಲ್ಲಿ ಚಂದ್ರನು ಹಾಕಿದ
ಬೆಳಕಿನ ಸಹಿಯಂತೆ!
ಈ ವಯಸ್ಸೆಂಬುದೂ ನಿನ್ನ ಮೇಲೆ
ಬಹಳಷ್ಟು ಸುಂದರವಾಗಿ ಶೋಭಿಸುತ್ತಿದೆ!
ನಿನ್ನ ಹಣೆ ಕೆನ್ನೆ ಗಲ್ಲದ ಮೇಲಿನ
ಸಣ್ಣ ಸಣ್ಣ ಗೆರೆಗಳೆಲ್ಲ
ಕಾಲ ಬರೆದ ಕವಿತೆಯ ಸಾಲುಗಳು!
ಪ್ರತಿ ಗೆರೆಗೂ ಒಂದೊಂದು ಜೀವನ ಕಥೆ!
ಪ್ರತಿ ನಗುವಿಗೂ ಒಂದೊಂದು ಋತು!
ನಿನ್ನ ಮುಖವೆಂದರೆ
ಕಾಲವೇ ಬರೆದ ಅಮೋಘ ವರ್ಣಚಿತ್ರ!
ಕಣ್ಣುಗಳ ಸುತ್ತ ಮೂಡಿರುವ ಆ ಮೌನದ ನೆರಳು
ದಣಿವಲ್ಲವೆನಿಸುತ್ತದೆ ನಿನಗೆ!
ಬಹಳ ದೂರ ನಡೆದು ಆಯಾಸಗೊಂಡಾಗ
ದಾರಿಯ ಕೊನೆಯಲ್ಲಿ ಸಿಕ್ಕ
ಸಂಜೆಯ ಸೂರ್ಯಕಿರಣದಂತೆ!
ಇನ್ನಷ್ಟು ಮೋಹಕವಾಗಿ ನಿನ್ನ ಸುಂದರಗೊಳಿಸಿದೆ!
ನೀನು ನಗುವಾಗ ಮನೆಯಂಗಳದಲ್ಲಿ
ಮಳೆ ಬಿದ್ದ ನಂತರ
ಮಣ್ಣಿನಿಂದ ಏಳುವ ಪರಿಮಳ!
ವರ್ಷಗಳು ಕಳೆದರೂ ಮನಸ್ಸು ಮಾತ್ರ
ತನ್ನ ಮೊದಲ ಮಳೆಯನ್ನೇ ನೆನೆಯುವಂತೆ!
ಬಹಳಷ್ಟು ಮಳೆ ಬಿಸಿಲು ನಗು ನೋವುಗಳನ್ನು
ದಾಟಿ ಬಂದ ಪರಿಪಕ್ವವಾದ ಹೊಳಪು!
ಈಗೀಗ ಕೊಂಚ ದುಂಡು ದುಂಡಾಗಿದ್ದೀಯಲ್ಲ
ಅದೇನು ನಿನಗೆ ಭಾರವಲ್ಲ!
ಜೀವನ ನಿನ್ನೊಳಗೆ ಸಂಗ್ರಹಿಸಿಟ್ಟಿರುವ
ಸಂತೋಷಗಳ ಸಿಹಿಯಾದ ಪ್ರತಿಬಿಂಬ!
ಹಣ್ಣುಗಳಿಂದ ಬಾಗಿದ ಮಾವಿನ ಕೊಂಬೆಯಂತೆ
ನಿನ್ನ ತುಂಬುತನವೂ
ಅದ್ಭುತವಾಗಿ ಕಂಗೊಳಿಸುತ್ತಿದೆ!
ಒಮ್ಮೆ ಗಾಳಿಗೆ ತೂಗುತ್ತಿದ್ದ
ಚಿಗುರಿನ ಕೊಂಬೆಯಾಗಿದ್ದ ನೀನು!
ಈಗ ನೆರಳು ಕೊಡುವ
ದಟ್ಟವಾದ ಮರದಂತಾಗಿದ್ದೀಯ!
ನಿನ್ನ ಬಳಿಯಲ್ಲಿರುವುದೇ ನೆಮ್ಮದಿಯ ಸಮೃದ್ಧಿ!
ನಿನ್ನ ನಡಿಗೆಯಲ್ಲೀಗ ಯೌವನದ ಆತುರವಿಲ್ಲ!
ನದಿಯೊಂದು ಸಮುದ್ರ ಸೇರುವ ಮುನ್ನ
ತೋರುವ ಗಾಂಭೀರ್ಯವಿದೆ!
ನಿನ್ನ ಹೆಜ್ಜೆಗಳಲ್ಲಿ
ಅನುಭವದ ಸಂಗೀತವಿದೆ!
ನಿನ್ನ ನೋಟದ ಮೌನದಲ್ಲಿ
ಸಾವಿರ ಅರ್ಥಗಳ ಮಾತುಗಳಿವೆ!
ಗುಲ್ಮೋಹರು ಬೇಸಿಗೆಯಲ್ಲೇ
ತನ್ನೆಲ್ಲ ಬಣ್ಣವನ್ನು ತೆರೆದು ಚೆಲ್ಲಿ
ಭೂಮಿ ಆಕಾಶವನ್ನೇ ಕೆಂಪಾಗಿಸುವಂತೆ
ನೀನು ವರ್ಷಗಳು ಕಳೆದಂತೆ ವಯಸ್ಸೂ ಹೆಚ್ಚಿದಂತೆ
ಬಣ್ಣಗಳ ಗೊಂಚಲಾಗುತ್ತಿದ್ದೀಯ!
ಬಣ್ಣಗಳೆ ಮಾಸದ ಪ್ರಕೃತಿಯಾಗುತ್ತಿದ್ದೀಯ!
ನಿನ್ನ ಯೌವ್ವನವು
ಹೂವಿನ ಸೌಂದರ್ಯವಾಗಿದ್ದರೆ!
ವಯಸ್ಸೆಂಬುದು ಹಣ್ಣಿನ ಸಿಹಿ!
ನಿನ್ನ ಮೇಲೆ ಹಾದುಹೋದ ಪ್ರತಿ ಸಂವತ್ಸರವು
ಒಂದೊಂದು ಹೊಸ ಆಭರಣದಂತೆ ಕಾಣುತ್ತದೆ!
ಕಾಲ ನಿನ್ನಿಂದ ಏನನ್ನೂ ಕಸಿದುಕೊಂಡಿಲ್ಲವೆ!
ನಿನ್ನ ಸೌಂದರ್ಯಕ್ಕೆ
ಮತ್ತಷ್ಟು ಸೌಂದರ್ಯವನ್ನೇ ಸೇರಿಸಿ
ನಿನ್ನ ಸೌಂದರ್ಯವನ್ನೆ ಕಾಯುತ್ತಿದೆ!
- ಟಿ.ಪಿ.ಉಮೇಶ್ – ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಅಮೃತಾಪುರ, ಹೊಳಲ್ಕೆರೆ.
