‘ನೆನಪಿನ ಅಂಬಾರಿ’ ಸಣ್ಣಕತೆ

ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾದ ಸ್ಪಂದನಾಳಿಗೆ ಹಳೆ ನೆನಪುಗಳು ಮಧುರವಾದವು. ಸ್ಪಂದನಾ ಮತ್ತು ಸುಜಯ್ ಪ್ರೇಮಕಥೆಯ ಅಂತ್ಯ ಹೇಗಿತ್ತು ತಪ್ಪದೆ ಓದಿ ಯುವ ಕತೆಗಾರ ಸೋಮೇಶ್ ಕಣದೂರ್ ಅವರು ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಸ್ಪಂದನ ಹಾಗೂ ಸುಜಯ್ ಬೆಂಗಳೂರಿನಲ್ಲಿ ಒಂದೇ ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅದೇನೋ ಮೊದಲು ಇಬ್ಬರ ಸ್ನೇಹ ಜಗಳದಿಂದ ಶುರುವಾಗಿ ನಂತರ ಸ್ನೇಹ ಪ್ರೇಮವಾಗಿ ಅಂಕುರಿಸಿತು.

ಸ್ಪಂದನ ಬಡ ಕುಟುಂಬದ ಹೆಣ್ಣು ಮಗಳು. ಆದರೆ ಸುಜಯ್ ಶ್ರೀಮಂತರ ಮನೆ ಹುಡುಗ. ಅವರಿಬ್ಬರ ಪ್ರೀತಿಯಲ್ಲಿ ಕಪಟವಿರಲಿಲ್ಲ. ಪ್ರೀತಿಗೆ ಒಂದು ವರ್ಷ ತುಂಬುವಷ್ಟರಲ್ಲಿ ಸ್ಪಂದನ ಮನೆಯಲ್ಲಿ ಮಗಳ ಮದುವೆ ಪ್ರಸ್ತಾಪ ಮಾಡತೊಡಗಿದರು. ಮಗಳಿಗೆ ತಿಳಿಯದಂತೆ ಸಂಬಂಧಿಯಲ್ಲೇ ಶ್ರೀಮಂತ ಮನೆತನದ ಹುಡುಗನ್ನು ನೋಡಿದರು. ಮಗಳಿಗೆ ಹುಡುಗನ ಫೋಟೋ ಕಳುಹಿಸಿ ಈ ಹುಡುಗನನ್ನೇ ಮದುವೆಯಾಗಬೇಕೆಂದು ಒತ್ತಾಯಿಸಿದರು. ಅದು ಸ್ಪಂದನಳಿಗೆ ನೀರಿಲ್ಲದ ಭಾವಿಯೊಳಗೆ ಉಸಿರುಗಟ್ಟಿಸಿದ ಅನುಭವ ನೀಡಿತು. ತಕ್ಷಣ ಸುಜಯ್ ಗೆ ವಿಷಯ ತಿಳಿಸಿದಳು. ಅವನಿಗೆ ಸಹಿಸಿಕೊಳ್ಳಲಾಗದಂತ ಪರಿಸ್ಥಿತಿ, ಆದರೂ ಧೃತಿಗೆಡಲಿಲ್ಲ. ಶ್ರೀಕೃಷ್ಣನನ್ನು ನೆನೆದು ಏನಾದ್ರು ದಾರಿ ತೋರಿಸು ಎಂದು ಪ್ರಾರ್ಥಿಸಿದ.

ತನ್ನ ಮನೆಯವರಿಗೆ ವಿಷಯ ತಿಳಿಸಿದ. ಅವನ ಅಪ್ಪ ಹಾಗೂ ಅಮ್ಮ ಮಗನ ಪ್ರೀತಿಗೆ ಧೈರ್ಯ ಹೇಳಿದರು. ಅಪ್ಪ ಅಮ್ಮನ ಮಾತು ಅವನಿಗೆ  ಹೋದ ಜೀವ ಮತ್ತೆ ಬಂದಂತಾಯಿತು. ಮಗನ ಆಸೆಯಂತೆ ಸುಜಯ್ ನ ಅಪ್ಪ ಸ್ಪಂದನ ಮನೆಯವರಿಗೆ ಕರೆ ಮಾಡಿ, ನಿಮ್ಮ ಮಗಳನ್ನು ನಮ್ಮ ಮಗನಿಗೆ ಧಾರೆಯೆರೆದು ಕೊಡಿ ಎಂದು ಕೇಳಿದರು.  ಅದಕ್ಕವರು ಜಾತಿ -ಮತ- ಕುಟುಂಬ ಪದ್ಧತಿ ಎಂಬ ಕಾರಣ ಹೇಳಿ ಆಗೋದಿಲ್ಲ ಎಂದರು. ಅವಳಣ್ಣ ವಿಷಯ ಕೇಳಿ ಕೆಂಡಾಮಂಡಲನಾದ. ಅವಳನ್ನು ಬೆಂಗಳೂರಿನಲ್ಲಿ ಕೆಲಸ ಬಿಡಿಸಿ, ಊರಿಗೆ ಕರೆದು ಕೊಂಡು ಹೋಗಲು ಯೋಚಿಸಿದ.

ಇತ್ತಕಡೆ ಸುಜಯ್ ಅಪ್ಪ ಇರುವ ಒಬ್ಬ ಮಗ ಮಂಕಾಗಿದ್ದು ನೋಡಿ ‘ನೀನೊಬ್ಬನೇ ಮಗ ನನಗೆ, ನಿನ್ನ ಸ್ಥಿತಿ ನೋಡ್ಲಿಕಾಗ್ತಿಲ್ಲ. ನಿನ್ನ ಎಲ್ಲಿ ಕಳೆದುಕೊಳ್ಳುತ್ತೆನೋ ಎಂಬ ಭಯ ಕಾಡುತ್ತಿದೆ. ನೀವಿಬ್ರು ಒಪ್ಪೋದಾದ್ರೆ ನಾವಿಬ್ರು ಎಲ್ಲ ಜವಾಬ್ದಾರಿ ತಗೊಂಡು ಮದುವೆ ಮಾಡುವೆವು’… ಎಂದರು. ಸುಜಯ್ ನಿಗೆ ಅಪ್ಪನ ಮಾತು ಮನಸ್ಸಿಗೆ ಸಮಾಧಾನ ನೀಡಿತು, ಈ ವಿಷಯವನ್ನು ಸ್ಪಂದನಳಿಗೂ ಹೇಳಿದ. ನಂತರ ಸುಜಯ್ ನ ಅಪ್ಪ ಸ್ಪಂದನಳನ್ನು ಒಪ್ಪಿಸಿ ತುಂಬಾನೇ ಗೌಪ್ಯವಾಗಿ ಮದುವೆ ಸೀರೆ, ಆಭರಣ ಖರೀದಿ ಮಾಡಿ ಮದುವೆ ಪತ್ರಿಕೆ ಚಾಪಿಸಿ ಒಂದೊಳ್ಳೆ ಮುಹೂರ್ತ ನೋಡಿ ದೇವಸ್ಥಾನದಲ್ಲಿ ಸೀಮಿತ ಬಂಧು ಮಿತ್ರರ ಸಮ್ಮುಖದಲ್ಲಿ ಮದುವೆ ಮಾಡಿ ಮುಗಿಸಿದರು. ಮದುವೆಯ ನೋಂದಣಿ ಪತ್ರವೂ ಆಯಿತು.

ಈ ವಿಷಯ ಸ್ಪಂದನ ಮನೆಯವರಿಗೆ ತಿಳಿಯಿತು.  ಆಗ ಎಲ್ಲರ ಮನೆಯಲ್ಲೂ ಧಿಕ್ಕರಿಸುವಂತೆ ಸಣ್ಣ ಮಾತು, ಜಗಳ ನಡೆದವು. ಅವಳಣ್ಣ ತನ್ನ ಸ್ನೇಹಿತರೊಂದಿಗೆ ವರನ ಮನೆಗೆ ಬಂದು ತಂಗಿಯನ್ನು ಜೊತೆಯಲ್ಲಿ ಕರೆದೋಯ್ಯಲು ತೀರ್ಮಾನಿಸಿದ.  ಏನಾದರು ಮಾಡಿ ತಂಗಿಯನ್ನು ಕರೆದೊಯ್ದು ಬೇರೆಯವರೊಂದಿಗೆ ಮತ್ತೆ ಮದುವೆ ಮಾಡುವ ಸಂಚನ್ನು ರೂಪಿಸಿದ್ದ. ಆದರೆ ಅವನಿಗೆ ನೀರಾಶೆ ಕಾದಿತ್ತು. ಅವನ ದಬ್ಬಾಳಿಕೆಯನ್ನು ಲೆಕ್ಕಿಸದೆ ಮದುವೆಯ ಫೋಟೋ ಹಾಗೂ ಮದುವೆ ನೋಂದಾವಣೆ ಪತ್ರ ವನ್ನು ಅವನ ಮುಂದಿಟ್ಟರು. ತಂಗಿಯ ಜೊತೆಗೆ ಜಗಳವಾಡಿ ಹಿಡಿ ಶಾಪ ಹಾಕುತ್ತ ಹಿಂದಿರುಗಿದ.

ಆರು ತಿಂಗಳ ನಂತರ ಮತ್ತೆ ಎರಡು ಕುಟುಂಬವೂ ಎಲ್ಲ ಮರೆತು ಒಂದಾಯಿತು. ಈಗ ಮದುವೆಯಾಗಿ ಹದಿನೈದು ವರ್ಷ ಕಳೆಯಿತು. ಆದರೆ ಹಳೆಯ ನೆನಪುಗಳು ಮಾಸದೆ ಹಳೆಯ ನೆನಪಿನೊಂದಿಗೆ ಜೀವಿಸುತ್ತಾ ಸ್ಪಂದನ ಸಂತೋಷವಾಗಿದ್ದಾಳೆ. ಕೈ ಹಿಡಿದ ಜೀವವು ಕೈ ಕೊಡದಂತೆ ನಿಷ್ಕಲ್ಮಶ ಪ್ರೀತಿಗೆ ಸಾವಿಲ್ಲವೆಂದು ಸುಜಯ್ ಎದೆಗಪ್ಪಿ ಅನುದಿನವು ಸಂಭ್ರಮಿಸುವಳು.


  •  ಸೋಮೇಶ್ ಕಣದೂರ್ – ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading