ಅನುವಾದ ಮತ್ತು ಸ್ವತಂತ್ರ ಕೃತಿಗಳು ಸೇರಿದಂತೆ ಒಟ್ಟು 106 ಪುಸ್ತಕಗಳನ್ನು ಪ್ರಕಟಿಸಿದ ನಿವೃತ್ತ ಇಂಗ್ಲೀಷ್ ಉಪನ್ಯಾಸಕರು, ಲೇಖಕರೂ ಆದ ಡಾ.ಪಾರ್ವತಿ ಜಿ. ಐತಾಳ್ ಅವರ ಆತ್ಮಕಥನವಾದ “ಅಂತರಂಗದ ಸ್ವಗತ” ದ ಕುರಿತು ಸುಲೋಚನಾ ಪಚ್ಚಿನಡ್ಕ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಪೂರ್ತಿಯಾಗಿ ಓದಿ…
ಪುಸ್ತಕ : ಅಂತರಂಗದ ಸ್ವಗತ
ಲೇಖಕರು : ಡಾ.ಪಾರ್ವತಿ ಜಿ. ಐತಾಳ್
ಪ್ರಕಾಶನ : ಅಂಕಿತ ಪುಸ್ತಕ ಪ್ರಕಾಶನ
ಪ್ರಕಾರ : ಆತ್ಮಕಥನ
ಲೇಖಕಿ ಈ ಕೃತಿಯನ್ನು “ಅಂತರಂಗದ ಸ್ವಗತಗಳು” ಅಂತ ಚಂದದ ಹೆಸರಿಟ್ಟು ಕರೆದಿದ್ದಾರೆ. ನಮ್ಮಲ್ಲಿ ನಾವೇ ಹೇಳಬಹುದಾದ ಹೇಳದೇ ಉಳಿದಿರಬಹುದಾದ ಮಾತುಗಳೇ ಸ್ವಗತವಲ್ಲವೇ?

ಹೌದು…
ಇಲ್ಲಿರುವ ಸ್ವಗತ ಕೇವಲ ಲೇಖಕಿಯೊಬ್ಬರ ಸ್ವಗತ ಮಾತ್ರವಲ್ಲದೆ ನಮ್ಮ ಸ್ವಗತವೂ ಆಗಬಹುದು. ಒಟ್ಟು ನೂರಾ ಐವತ್ತೆಂಟು ಪುಟಗಳಿರುವ ಈ ಆತ್ಮಕಥನವನ್ನು ಲೇಖಕಿ ಬಾಲ್ಯದಿಂದ ಇಳಿವಯಸಿನವರೆಗಿನ ಅನುಭವಗಳನ್ನು ಐದು ಭಾಗಗಳಾಗಿ ಕಟ್ಟಿಕೊಟ್ಟಿದ್ದಾರೆ. ಅಂಕಿತ ಪುಸ್ತಕ ಪ್ರಕಾಶನವು ಈ ಕೃತಿಯನ್ನು 2025 ರಲ್ಲಿ ಪ್ರಕಟಿಸಿದೆ.
ಡಾ. ಪಾರ್ವತಿ ಮೇಡಂ ಅವರನ್ನು ಕಂಡಾಗ ಅವರ ಬದುಕು ಸುಖದ ಸುಪ್ಪತ್ತಿಗೆಯಲ್ಲಿ ಇರಬಹುದು ಅನ್ನುವ ಹಾಗೆ ಇದೆ.ಆದರೆ ಈ ಕೃತಿಯೊಳಗಿನ ವಿವರಗಳು ಬೇರೆಯೇ ಆದ ಅಚ್ಚರಿಯೆನಿಸುವ ಸಂಗತಿಯನ್ನು ನಿರೂಪಿಸುತ್ತಾ ಸಾಗುತ್ತಿದೆ ನೋಡಿ.
ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದಿಂದ, ವಿಟ್ಲ, ಮಂಗಳೂರು, ಮೂಲ್ಲಿ, ಕುಂದಾಪುರ ಹೀಗೆ ಕನ್ನಡ ಭಾಷೆ ವಿರಳವಾಗಿ ಮಾತನಾಡುವ ಊರಿನಿಂದ ಬಂದು ಕುಂದಗನ್ನಡದ ಊರಿನಲ್ಲಿ ನೆಲೆನಿಂತು ಇಂಗ್ಲೀಷ್ ಭಾಷೆಯನ್ನು ಬೋಧಿಸುವ ಮೂಲಕ ಕನ್ನಡ ಮತ್ತು ಆಂಗ್ಲ ಸಾಹಿತ್ಯದ ಭಾವವನ್ನು ಕಟ್ಟಿಕೊಟ್ಟು, ವಿದ್ಯಾರ್ಥಿ ಪರಂಪರೆಯ ನೆನಪಿನಲ್ಲುಳಿಯುವಂತೆ ಮಾಡಿದ್ದು ಪಾರ್ವತಿ ಮೇಡಂ ನ ಬದುಕಿನ ಸಾರ್ಥಕತೆಯೇ ಹೌದು.
1957ರಲ್ಲಿ ಜನಿಸಿದ ಲೇಖಕಿ ತಾನು ಹುಟ್ಟಿ ಬೆಳೆದ ಬಾಳಿಕೆ ಮನೆಯ ನೆನಪುಗಳಿಂದ ಹಿಡಿದು, ಅಲ್ಲಿನ ಪರಿಸರ,ಕೌಟುಂಬಿಕ ಬದುಕು, ವಿಘಟನೆಗೊಂಡ ಮನೆ, ತಂದೆ-ತಾಯಿ ಮತ್ತು ಅಕ್ಕ, ಅಣ್ಣಂದಿರ ಜೊತೆಗೆ ಕಳೆದ ನೆನಪುಗಳೆಲ್ಲವನ್ನೂ ಇಲ್ಲಿ ದಾಖಲಿಸುತ್ತಾ ಹೋಗುತ್ತಾರೆ. ಅಂತಿಮವಾಗಿ ಕೌಟುಂಬಿಕ ಬದುಕಿನೊಳಗೆ ಸಿಗುವ ಸುಖ ಸಂತೋಷಗಳು ಸಾಹಿತ್ಯದಿಂದ ಸಿಗುವ ಮನ್ನಣೆಗಳಿಗಿಂತ ಭಿನ್ನವಾದುದು ಎನ್ನುವ ವಾಸ್ತವತೆಯನ್ನು ತಮ್ಮ ಆತ್ಮಕಥನನದೊಳಗಿರಿಸಿದ್ದಾರೆ.ಇದು ಅವರ ನಂತರದ ತಲೆಮಾರಿನ ನಮಗೆ ಪಾಠವಾಗಿದೆಯೆನ್ನುವುದಕ್ಕೆ ಅಡ್ಡಿಯಿಲ್ಲ.
ಇಡೀ ಆತ್ಮಕಥನವನ್ನು ಗಮನಿಸುವಾಗ ಲೇಖಕಿ ಅದೆಷ್ಟು ಸಂದರ್ಭದಲ್ಲಿ ಒಂದು ಹಿಡಿ ಪ್ರೀತಿಗಾಗಿ ಹಂಬಲಿಸಿದ್ದರೆಂದು ಹೇಳುತ್ತಾ ತಮ್ಮ ಅಂತರಂಗದ ಆಸೆಗಳನ್ನಿಲ್ಲಿ ಹೇಳುತ್ತಾ ಸಾಗುತ್ತಾರೆ. ಕಿತ್ತು ತಿನ್ನುವ ಬಡತನವಲ್ಲದಿದ್ದರೂ ಬೇಕಾದ ಹಾಗೆ ಕೇಳಿದ ತಕ್ಷಣ ಕೊಟ್ಟು ಬಿಟ್ಟರೆ ಮಕ್ಕಳು ಹಾಳಾಗುತ್ತಾರೆ ಅನ್ನುವ ಅಪ್ಪನ ಮನೋಭಾವದಿಂದ ಶಾಲೆಗಳಲ್ಲಿ, ಸ್ನೇಹಿತ ವರ್ಗದ ಜೊತೆಗೆ ಅನುಭವಿಸಿದ ಮುಜುಗರಗಳನ್ನು ಹೇಳುವಾಗ ಅವರ ಸಂದಿಗ್ಧತೆಯ ಬಾಲ್ಯ ಕಣ್ಣೆದುರು ಕಟ್ಟಿದಂತಾಗುತ್ತದೆ.ಅಪ್ಪನ ಕಠಿಣತೆಯ ಎದುರು ನಡೆಯದ ಅಮ್ಮನ ಮಾತು, ಪ್ರೀತಿಯಿಂದ ಮಾತನಾಡಿಸದ ಅವರನ್ನು ಕಂಡಾಗ ಆಗುವ ಭಯ, ಕಂಚಿನ ಸಟ್ಟುಗ ಮುರಿದಾಗ ಭಯದಿಂದ ಹೇಳಿದ ಸತ್ಯದಂತಹ ಸುಳ್ಳು. ಅಕ್ಕ ಅಣ್ಣಂದಿರ ಮುದ್ದಿನ ತಂಗಿಯಾಗಿ ಕಳೆದ ಬಾಲ್ಯ ಮುಂದುವರಿದ ಯೌವ್ವನ, ಅದನ್ನೂ ಭಯ, ಆತಂಕದಿಂದಲೇ ಸ್ವೀಕರಿಸಿದ ಸಂದರ್ಭಗಳು, ಯೌವ್ವನವನ್ನು ಮುಚ್ಚಿಡುವ ಒಂದು ಸಂದಿಗ್ಧತೆ ಇವೆಲ್ಲವೂ ಮನಸಿಗೆ ಗಾಢವಾಗಿ ಕಾಡುತ್ತದೆ.

ಕಾಲೇಜಿನ ವಿದ್ಯಾಭ್ಯಾಸಕ್ಕಾಗಿ ಪರಿಸರ ಬದಲಾವಣೆಯಾದಾಗ ಆಗುವ ಸಂತೋಷದ ಜೊತೆಗಿನ ಭಯದ ತಲ್ಲಣಗಳು, ಗಣಿತ ಟೀಚರ್ ತಪ್ಪಿಲ್ಲದೆ ಇದ್ದಾಗಲೂ ಕೊಟ್ಟ ಏಟು ಮತ್ತು ಅವಮಾನಗಳನ್ನು ಮೀರಿಯೂ ಓದಿದ, ಗೆಳತಿಯರಿಂದ ತಿರಸ್ಕಾರಕ್ಕೆ ಒಳಗಾದರೂ ಸಹ ಬದುಕನ್ನು ಆಸಕ್ತಿ ಮತ್ತು ಛಲದಿಂದ ಸಾಗಿಸಿದ ಕುರಿತು ಕಡೆ ಬದುಕೆಷ್ಟು ಕಷ್ಟ ಅನ್ನುವುದೂ ಪಾರ್ವತಿ ಮೇಡಂ ನ ಅನುಭವಗಳಿಂದ ಅರಿವಾಗುತ್ತದೆ. ಅವರಿದನ್ನೆಲ್ಲ ಹೇಳುವಾಗ ನಡೆದು ಬಂದ ಹಾದಿ ಇಷ್ಟು ಕಠಿಣವಿತ್ತೇ ಅಂತ ಅನಿಸದೆ ಇರದು.
ಕಾಸರಗೋಡು ಕಾಲೇಜಿನಲ್ಲಿನ ಚುನಾವಣೆಯ ದಿನಗಳಂತೂ ನಮ್ಮ ಕಾಲೇಜಿನ ದಿನಗಳಿಗೂ ಅವರ ಕಾಲೇಜಿನ ದಿನಳಿಗೂ ಎಷ್ಟು. ವ್ಯತ್ಯಾಸವಿತ್ತಲ್ಲ ಅನಿಸಿದ್ದು ಸುಳ್ಳಲ್ಲ.
ಆ ಕಾಲದ ರಾಗಿಂಗ್, ಸಕಾರಣವಿಲ್ಲದೆ ನಡೆಯುವ ಮುಷ್ಕರಗಳು ನಾವೆಷ್ಟು ಆರಾಮಾಗಿ ಕಾಲೇಜುಗಳಿಗೆ ಹೋಗುವುದಕ್ಕೆ ಅನುಕೂಲವಾಗಿದೆ ಅನಿಸುತ್ತದೆ. ಭಾಷೆ ಬರದ ಊರಲ್ಲಿ ಭಾಷೆಯನ್ನು ತೊಡಕಾಗಿಸಿಕೊಳ್ಳದೆ ಬದುಕಿದ್ದು ಕೂಡಾ ಸಣ್ಣ ಮಾತೇನಲ್ಲ. ಅಪ್ಪನ ಬೖಗುಳ, ಸಿಟ್ಟಿನ ಜೊತೆಗೆ ಮನೆಯ ಸಮಸ್ಯೆಗಳೆಲ್ಲವೂ ಸೇರಿ ಹುಡುಗಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರೂ ಸಮಸ್ಯೆಯನ್ನೇ ಸಾಧನೆಯ ಮೆಟ್ಟಿಲನ್ನಾಗಿ ಮಾಡಿದ್ದು ಎಲ್ಲರಿಗೂ ಪ್ರೇರಣೆಯಾಗುವಂತಿದೆ. ಬಹುಶಃ ಲೇಖಕಿಗೆ ಅಣ್ಣ ಪೈವಳಿಕೆ ಶಾಲೆಯಿಂದ ತರುತ್ತಿದ್ದ ಕಾದಂಬರಿಗಳು ಓದುವ ಹುಚ್ಚನ್ನು ಹಿಡಿಸಿತೇನೋ? ಆ ಕಾಲದ ಹಾಡು, ರೇಡಿಯೋ ಗೀತೆಗಳೆಲ್ಲ ಬದುಕಿಗೆ ಚೇತೋಹಾರಿ ಆಗಿದ್ದವೆಂಬುದು ಅವರ ಅನುಭವ ಕಥನಗಳು ಹೇಳುತ್ತಿವೆ.
ಹಾಸ್ಟೆಲ್ ಜೀವನದಲ್ಲಾದ ಮಾನಸಿಕ ಸ್ಥಿತ್ಯಂತರಗಳು, ಗಿರಿಜಾಳ ಪ್ರೇಮಪ್ರಕರಣ, ಅದರಲ್ಲಿ ಆಕೆ ಗೆಲ್ಲುವಂತೆ ಆಕೆಯನ್ನು ಸಿದ್ಧಗೊಳಿಸಿದ್ದು ಗೆಳತಿಯಾಗಿ ಒಳ್ಳೆಯ ಕೆಲಸ. ಆದರೆ ಲೇಖಕಿಯ ಬದುಕಿಗಾಗುವಾಗ ಯಾರೂ ಇರಲಿಲ್ಲವೆನ್ನುವುದು ನಿಷ್ಠುರ ಸತ್ಯ.
ವೃತ್ತಿ ಬದುಕಿನ ಸಂದರ್ಭದ ಆರಂಭದಿಂದ ನಿವೃತ್ತಿಯವರೆಗಿನ ಅನುಭವಗಳು, ಅದರ ನಡುವೆ ಮದುವೆಯಾಗದೆ ಉಳಿದ ಕಾರಣಗಳು ಮದುವೆಗಾಗಿ ಪಡುವ ಪಡಿಪಾಟಲುಗಳು ನಿಜಕ್ಕೂ ಮರುಕ ಹುಟ್ಟಿಸುವಂಥವು. ವಿದ್ಯೆ, ಬುದ್ಧಿ, ಜ್ಞಾನ, ಉದ್ಯೋಗ- ಇವೆಲ್ಲ ಇದ್ದೂ ಸಹ ಸೌಂದರ್ಯವೆನ್ನುವುದು ವಾಸ್ತವದ ಮಾತಾದಾಗ ನ್ಯಾಯ ಕೊಡುವವರಾರು ಅನ್ನುವುದೇ ಪ್ರಶ್ನೆ. ಇಂತಹ ಸಂದಿಗ್ಧಗಳಲ್ಲೇ ಅದೆಷ್ಟು ಹೆಣ್ಣು ಮಕ್ಕಳು ಆ ಕಾಲಕ್ಕೆ ಮದುವೆಯಾಗದೆ ಹಾಗೆಯೇ ಉಳಿದರೋ ಏನೋ.
ಅಂತೂ ಕಂಕಣ ಭಾಗ್ಯ ಕೂಡಿ ಬಂದು ಮದುವೆಯಾಗಿ ದಾಂಪತ್ಯಜೀವನಕ್ಕೆ ಬಂದರೂ ಒಂದಲ್ಲ ಒಂದು ತೊಂದರೆಗಳು ಕಡೆಯವರೆಗೂ ಲೇಖಕಿಯ ಬೆನ್ನು ಬಿಟ್ಟಿಲ್ಲ. ಮೊದಲ ಅವಳಿ ಮಕ್ಕಳ ಸಾವು, ಎರಡನೆಯ ಮಗುವಿನ ಕಾಲು ಮುರಿಯುವ ಪ್ರಸಂಗ, ಮತ್ತೆ ಮುಂದಿನ ಹಂತದಲ್ಲಿ ತಾನೂ ಕಾಲು ಮುರಿದುಕೊಳ್ಳುವುದು….. ಹೀಗೆ ಏಳು ಬೀಳುಗಳ ಪರ್ವತವನ್ನು ದಾಟಿ ಮುಂದೆ ಬಂದರೂ ಪತಿಗೆರಗಿದ ಕಾಯಿಲೆ ಎಲ್ಲ ಸಂತೋಷಗಳನ್ನೂ ಕಿತ್ತುಕೊಳ್ಳುವ ಹಾಗೆ ಮಾಡಿದ್ದು ಲೇಖಕಿಯ ಪಾಲಿನ ದುರಂತವೇ ಆಗಿದೆ.
ಇಷ್ಟು ನೋವುಗಳ, ಸಮಸ್ಯೆಗಳ, ಗೊಂದಲಗಳ ನಡುವೆಯೂ ಬರವಣಿಗೆಯ ದಾರಿಯಲ್ಲಿ ರಾಜಿ ಮಾಡಿಕೊಳ್ಳದೆ ನೂರಾರು ಭಾಷಣ, ಕಾರ್ಯಕ್ರಮ, ಮಾತುಕತೆ, ಪುಸ್ತಕ ಅಂತ ತೊಡಗಿಸಿಕೊಂಡು ಬದುಕಿದ್ದು ಡಾ. ಪಾರ್ವತಿ ಮೇಡಂ ಅವರ ಬಹುದೊಡ್ಡ ಸಾಧನೆಯಾಗಿದೆ.
ಬಹುಶಃ ಹೆಣ್ಣಿಗೆ ಎಷ್ಟೆಲ್ಲವನ್ನು ಸಹಿಸಿಯೂ, ಒತ್ತಡಗಳನ್ನು ನಿಭಾಯಿಸಿಯೂ, ಗಂಟು ಗಂಟಾಗಿದ್ದ ಸಮಸ್ಯೆಗಳನ್ನು ಸಡಿಲಿಸಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಅನ್ನುವ ಪ್ರೇರಣಾತ್ಮಕ ಚಿಂತನೆ ಈ ಪುಸ್ತಕದಲ್ಲಿದೆ. ಇಂಥದೇ ಮನೆಯಲ್ಲಿ ಹುಟ್ಟಬೇಕು ಅಂತ ಯಾರೂ ಹೇಳಿ ಹುಟ್ಟುವುದಿಲ್ಲ. ಬಡತನದ ಬದುಕಿಗೂ ತಾವೇ ಹೊಣೆಯಾಗುವ, ಸೌಂದರ್ಯದ ವಿಚಾರಕ್ಕೂ ತೆಗಳುವ, ದೂಷಿಸುವ, ಚೆನ್ನಾಗಿ ಓದಿದರೂ ಹಂಗಿಸುವ, ಪ್ರೋತ್ಸಾಹಿಸದೆ ತೆಗಳುವ, ಸುಮ್ಮ ಸುಮ್ಮನೆ ಪೆಟ್ಟು ತಿನ್ನುವ, ಎಲ್ಲಕ್ಕಿಂತ ಹೆಚ್ಚು ಅವರಿವರಿಂದ ಅನಾದರಕ್ಕೆ ಗುರಿಯಾದ ಜೀವಗಳು ಒಳಗೊಳಗೆ ಸಂಕಟಪಡುವ ಸಂಗತಿ ಹೊರ ಪ್ರಪಂಚಕ್ಕೆ ತಿಳಿಯುವುದೇ ಇಲ್ಲ.
ಹಾಗಾಗಿ ಲೇಖಕಿಯ ದೀರ್ಘ ಕಾಲದ ಅನುಭವ ಇಲ್ಲಿ ಅಂತರಂಗದ ಸ್ವಗತವಾಗಿ ನಮ್ಮೆದುರು ತೆರೆದುಕೊಂಡಿದೆ.
- ಸುಲೋಚನಾ ಪಚ್ಚಿನಡ್ಕ – ಲೇಖಕರು, ಮಂಗಳೂರು.
