ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧೪)

 

ಚಿಕ್ಪುಟ್ಟುಗೆ ದಿನವೂ ಶೌಚಾಲಯ ಬಳಸುವುದು ಚೆನ್ನಾಗಿ ತಿಳಿದಿತ್ತು, ಕೆಲವೊಮ್ಮೆ ವಾರಕ್ಕೊಮ್ಮೆ ಬೇಕಂತಲೇ ನಡುಮನೆಯ ಮೂಲೆಯಲ್ಲಿ ಕಕ್ಕ ಮಾಡಿ, ಟೀಪಾಯ್ ಕೆಳಗಿರುತ್ತಿದ್ದ ನ್ಯೂಸ್ ಪೇಪರ್ ತಂದು ನೀಟಾಗಿ ಮುಚ್ಚಿಡುತ್ತಿದ್ದ. ನ್ಯೂಸ್ ಪೇಪರ್ ಅವನಿಗೆ ಸಿಗದಂತೆ ಕಪಾಟಿನೊಳಗಿಡಲು ಶುರು ಮಾಡಿದ ಮೇಲೆ ಕಾಲೊರೆಸುವ ಫುಟ್ ರಗ್ ಎತ್ತಿ ತಂದು ನೀಟಾಗಿ ಮುಚ್ಚಿಡಲು ಶುರು ಮಾಡಿದ. ಮುಂದೇನಾಯಿತು ಅಂಕಣಕಾರ್ತಿ ಕೆ.ಸಿ.ರತ್ನಶ್ರೀ ಶ್ರೀಧರ್ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣವನ್ನು ತಪ್ಪದೆ ಮುಂದೆ ಓದಿ …

ಹಿಂದಿನ ಸಂಚಿಕೆಯಲ್ಲಿ ನಮ್ಮ ಮನೆಗೆ ಬಿದ್ದ ಬೆಂಕಿ ಅವಘಡದಲ್ಲಿ ಪಾರಾಗಿ ಬಂದ ನಮ್ಮ ಚಿಕ್ಪುಟ್ಟನ ವಿಷಯವನ್ನು ಬರೆದಿದ್ದೆ. ನಮ್ಮ ಚಿಕ್ಪುಟ್ಟುವಿಗೆ ಯಾವುದೇ ತೊಂದರೆ ಆಗಿಲ್ಲ ಎಂಬ ಸಮಾಧಾನದ ಮುಂದೆ ನಮ್ಮ ಮನೆ ಸುಟ್ಟಿದ್ದು ಗೌಣವೆನಿಸಿತ್ತು. ಮನೆಯೊಳಗೆ ತುಂಬಿಕೊಂಡ ಹೊಗೆಯಿಂದಾಗಿ ನಮ್ಮ ಬಿಳಿ ಬಣ್ಣದ ಚಿಕ್ಪುಟ್ಟು, ಮಸಿ ಬಣ್ಣದವನಾಗಿ ಬದಲಾಗಿದ್ದ.

ಹೆದರಿಕೊಂಡಿದ್ದ ಅವನನ್ನು ಸಮಾಧಾನಗೊಳಿಸಿ, ನಮ್ಮ ಸೆಲ್ಲಾರ್ ನಲ್ಲಿರುವ ಕಾರ್ ಶೆಡ್ ನಲ್ಲಿ ಬಿಟ್ಟು ಬಾಗಿಲು ಮುಚ್ಚಿದೆವು. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ರಿಪೋರ್ಟ್ ಬರೆದುಕೊಂಡು ಹೊರಟ ಹೋದ ಮೇಲೆ ನಮ್ಮ ನೆರೆಹೊರೆಯವರೆಲ್ಲ (ಅವರೆಲ್ಲಾ ನಮ್ಮ ಆಪ್ತ ಸ್ನೇಹಿತರಾಗಿದ್ದರು) ಸೇರಿ, ನಾವು ಎಷ್ಟೇ ಬೇಡವೆಂದರೂ ಕೇಳದೇ ಸುಟ್ಟು ಹೋದ ವಸ್ತುಗಳನ್ನು ಹೊರಹಾಕಿ, ಆದಷ್ಟು ತಾವೇ ಮನೆಯನ್ನು ಶುಚಿಗೊಳಿಸಿದರು. ಮನೆಯಾಚೆ ಹಾಕಿದ ಅರೆಬರೆ ಸುಟ್ಟ ಮತ್ತು ಮಸಿಹಿಡಿದ ವಸ್ತುಗಳನ್ನು ಗುಜರಿಯವರಿಗೆ ಉಚಿತವಾಗಿ ಕೊಟ್ಟೆವು.

ರೂಮಿನಲ್ಲಿ ಬೆಂಕಿ ಬಿದ್ದಾಗ, ಅಡುಗೆ ಮನೆ ಬಾಗಿಲು ಮುಚ್ಚಿದ್ದರಿಂದ ಅದೊಂದನ್ನು ಬಿಟ್ಟು ಉಳಿದ ಮನೆಯೆಲ್ಲಾ ಹೊಗೆಯಿಂದ ಕಪ್ಪಾಗಿತ್ತು. ಮನೆಯಿಡೀ ಸುಟ್ಟ ಹೊಗೆಯ ಕಮಟು ವಾಸನೆ ಹರಡಿತ್ತು. ಇಡೀ ಮನೆಯ ಛಾವಣಿ ಮತ್ತು ಗೋಡೆಗಳನ್ನು ಕೆರೆದು, ತೊಳೆದು ಹೊಸದಾಗಿ ಬಣ್ಣ ಹಚ್ಚಬೇಕಿತ್ತು. ಬೆಡ್ ರೂಮಿನ ಎಲೆಕ್ಟ್ರಿಕ್ ವೈರಿಂಗ್ ಮಾಡಿಸಬೇಕಿತ್ತು. ಕಪಾಟು (ವಾರ್ಡ್ರೋಬ್) ಗಳನ್ನು ಮತ್ತು ಟಾಯ್ಲೆಟ್ ಬಾಗಿಲುಗಳನ್ನು ಬದಲಿಸಬೇಕಿತ್ತು. ಮನೆಯ ವಸ್ತುಗಳನ್ನೆಲ್ಲ ತೆರವುಗೊಳಿಸಬೇಕಿತ್ತು. ಹೀಗಾಗಿ ಅಂದೇ ಪೈಂಟರ್, ಕಾರ್ಪೆಂಟರ್ ಮತ್ತು ಎಲೆಕ್ಟ್ರಿಷಿಯನ್ ಅವರನ್ನು ಮನೆಗೆ ಕರೆಸಿ ಮಾತನಾಡಿದೆವು.

ಫೋಟೋ ಕೃಪೆ : ಅಂತರ್ಜಾಲ

ತುರ್ತಾಗಿ ಇಷ್ಟೆಲ್ಲಾ ಕೆಲಸಗಳಾಗಬೇಕಿತ್ತು. ಹಾಗಾಗಿ, ಸದ್ಯಕ್ಕೆ ನಮ್ಮದೇ ಏರಿಯಾದಲ್ಲಿ ಒಂದು ತಿಂಗಳ ಮಟ್ಟಿಗೆ ಮನೆಯೊಂದನ್ನು ಬಾಡಿಗೆಗೆ ಪಡೆಯಲು ನೋಡಿದೆವು. ಆದರೆ ತಕ್ಷಣಕ್ಕೆ ಯಾವ ಮನೆಯೂ ಸಿಗಲಿಲ್ಲ. ಸರಿ, ಮಾಡುವುದಿಲ್ಲೇನು? ಮನೆಯಲ್ಲಿದ್ದುಕೊಂಡೇ ಕೆಲಸ ಮಾಡಿಸೋಣ ಎಂದು ಸಜ್ಜಾದೆವು.

ಮನೆಯ ಎಲ್ಲ ಪೀಠೋಪಕರಣಗಳನ್ನು ಮತ್ತು ಇತರೆ ವಸ್ತುಗಳನ್ನೂ ದೊಡ್ಡದಾಗಿದ್ದ ನಮ್ಮ ಕಾರ್ ಶೆಡ್ಡಿಗೆ ವರ್ಗಾಯಿಸಿದೆವು. ಇದೆಲ್ಲದರ ಮಧ್ಯೆ ನಮಗೆ ದೊಡ್ಡ ತಲೆನೋವಾಗಿದ್ದು ನಮ್ಮ ಚಿಕ್ಪುಟ್ಟುವನ್ನು ಹೊರಗೆ ಹೋಗದಂತೆ ಕಾಯುವುದು ಬಹಳ ಕಷ್ಟವಾಯಿತು. ಎಲ್ಲರನ್ನೂ ಪ್ರೀತಿಸುವ ಮುಗ್ಧ ಚಿಕ್ಪುಟ್ಟು ಹೊರಗೆ ಹೋದಾಗ ಎಲ್ಲಿ ನಾಯಿಗಳ ದಾಳಿಗೆ ಒಳಗಾಗುವನೋ ಎನ್ನುವ ಆತಂಕ ಸದಾ ಕಾಡುತ್ತಿತ್ತು. ಮೊದಲಿನಂತೆ ಈಗ ಬಾಗಿಲು ಹಾಕಿಕೊಂಡು ಒಳಗಿರಲು ಸಾಧ್ಯವಿಲ್ಲ.

ಹಾಗಾಗಿ, ಅನಿವಾರ್ಯವಾಗಿ ಚಿಕ್ಪುಟ್ಟುವನ್ನು ಕಾರ್ ಶೆಡ್ಡಿನಲ್ಲಿ ಕೂಡಿ ಹಾಕಲು ಶುರು ಮಾಡಿದೆ. ಮೊದಲಿಗೆ, ಮೇಲಿನ ಬೆಡ್ ರೂಮನ್ನು ರೆಡಿ ಮಾಡಿಸಿಕೊಂಡ ನಂತರ ಮೇಲಿನ ರೂಮ್ನಲ್ಲೇ ಅವನನ್ನು ಬಿಡುತ್ತಿದ್ದೆ. ಆದರೆ, ಆ ನಮ್ಮ ಕಳ್ಳ ಚಿಕ್ಪುಟ್ಟು ರೂಮಿನ ಕಿಟಕಿ (ಬೋಲ್ಟ್ ಹಾಕುವುದನ್ನು ನಾನು ಮರೆತಿದ್ದರೆ) ಸ್ವಲ್ಪ ಸರಿಸಿಕೊಂಡು ಅಲ್ಲಿಂದ ಹಾರಿ ಆಚೆ ಹೋಗ್ಬಿಡುತ್ತಿದ್ದ. ಮತ್ತೆ ಅವನನ್ನು ಹುಡುಕಿ ತರುವುದು ಪ್ರಯಾಸದ ಕೆಲಸವಾಗಿತ್ತು.

ಐದಾರು ಬಾರಿ ಅವನು ಹೀಗೆ ತಪ್ಪಿಸಿಕೊಂಡು ಆಚೆ ಹೋಗಲು ಶುರು ಮಾಡಿದ ನಂತರ, ನಿರ್ವಾಹವಿಲ್ಲದೆ ಹಗಲು ಹೊತ್ತಿನಲ್ಲಿ ಮನೆಯೊಳಗೆ ಅವನನ್ನು ಕಟ್ಟಿ ಹಾಕುತ್ತಿದ್ದೆ. ಅಂತೂ, 15 ದಿನದಲ್ಲಿ ಮನೆಯ ಪೇಂಟಿಂಗ್, ಕಾರ್ಪೆಂಟಿಂಗ್ ಮತ್ತು ವೈರಿಂಗ್ ಕೆಲಸಗಳು ಮುಗಿದು ಕೆಲಸದವರು ಮನೆಯಿಂದ ಹೊರಟಾಗ ನಾವು ನಿರಾಳರಾದೆವು. ಚಿಕ್ಪುಟ್ಟು ಮತ್ತೆ ಮೊದಲಿನಂತೆ ಮನೆ ತುಂಬಾ ಓಡಾಡಲು ಶುರು ಮಾಡಿದ. ಕಾರ್ ಶೆಡ್ ನಲ್ಲಿದ್ದ ವಸ್ತುಗಳನ್ನೆಲ್ಲ ತಂದು ಮತ್ತೆ ಜೋಡಿಸಿಕೊಳ್ಳಲು ಇನ್ನೆರಡು ವಾರಗಳೇ ಬೇಕಾದವು.

ನಮ್ಮ ಚಿಕ್ಪುಟ್ಟು ಎಷ್ಟು ಮುಗ್ಧನಾಗಿದ್ದನೋ, ಅಷ್ಟೇ ತರಲೆ ಕೂಡ ಮಾಡುತ್ತಿದ್ದ. ಬೇಕಂತಲೇ ಆಗಾಗ ತರಲೆ ಮಾಡಿ ನನ್ನಿಂದ ಬೈಸಿಕೊಳ್ಳುತ್ತಿದ್ದ. ದಿನವೂ ಶೌಚಾಲಯ ಬಳಸುವ ವಿಧಾನ ಚೆನ್ನಾಗಿ ತಿಳಿದಿದ್ದ ಅವನು, ಕೆಲವೊಮ್ಮೆ ಮೂರ್ನಾಲ್ಕು ವಾರಕ್ಕೊಮ್ಮೆ ಬೇಕಂತಲೇ ನಡುಮನೆಯ ಮೂಲೆಯಲ್ಲಿ ಕಕ್ಕ ಮಾಡಿ, ಟೀಪಾಯ್ ಕೆಳಗಿರುತ್ತಿದ್ದ ನ್ಯೂಸ್ ಪೇಪರ್ ತಂದು ನೀಟಾಗಿ ಮುಚ್ಚಿಡುತ್ತಿದ್ದ. ನ್ಯೂಸ್ ಪೇಪರ್ ಅವನಿಗೆ ಸಿಗದಂತೆ ಕಪಾಟಿನೊಳಗಿಡಲು ಶುರು ಮಾಡಿದ ಮೇಲೆ ಕಾಲೊರೆಸುವ ಫುಟ್ ರಗ್ ಎತ್ತಿ ತಂದು ನೀಟಾಗಿ ಮುಚ್ಚಿಡಲು ಶುರು ಮಾಡಿದ.

ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬಂತೆ ನನ್ನನ್ನು ನೋಡಿದೊಡನೆ ತನ್ನ ಕಿವಿಯನ್ನು ಹಿಂದಕ್ಕೆ ಮಾಡಿಕೊಂಡು, ಬಾಲ ನೇರಮಾಡಿಕೊಂಡು ಓಡಿ ಹೋಗಿ ಬಚ್ಚಿಟ್ಟುಕೊಳ್ಳುತ್ತಿದ್ದ. ಅವನ ಆ ವರ್ತನೆಯಿಂದಲೇ ನನಗೆ ಅವನೇನೋ ತಪ್ಪು ಮಾಡಿದ್ದಾನೆಂಬುದು ನನಗೆ ಅರ್ಥವಾಗುತ್ತಿತ್ತು.

ಕೊನೆಗೆ, ಅವನನ್ನು ಹಿಡಿದು ತಂದು ಅವನು ಮಾಡಿರುವುದನ್ನು ತೋರಿಸಿ ಬೆನ್ನ ಮೇಲೆ ಮೆತ್ತಗೆ ಎರಡು ಏಟು ಕೊಡುತ್ತಿದ್ದೆ. ಒಂದರ್ಧ ಗಂಟೆ ಸುಮ್ಮನೆ ಕೊರುತಿದ್ದ. ನಂತರ, ಏಟು ತಿಂದದ್ದು ಮರೆತು ನನ್ನ ಬಳಿ ಓಡಿ ಬರುತ್ತಿದ್ದ.

ಫೋಟೋ ಕೃಪೆ : ಅಂತರ್ಜಾಲ

ಹಾಗೆಯೇ, ಚಿಕ್ಪುಟ್ಟುವಿಗೆ ಎಂದಾದರೂ ಬಹಳ ಅಪರೂಪಕ್ಕೆ ಒಮ್ಮೆ ಕದ್ದು ತಿನ್ನುವ ಚಟ ಬರುತ್ತಿತ್ತು. ರಾತ್ರಿ ನಾವುಗಳು ಊಟ ಮಾಡಿ ಟಿ.ವಿ. ನೋಡುತ್ತಾ ಕುಳಿತಾಗ, ಅಡುಗೆ ಮನೆ ಕಡೆಗೆ ನಮ್ಮ ಗಮನವಿಲ್ಲ ಎನ್ನುವುದನ್ನು ಖಾತರಿಪಡಿಸಿಕೊಂಡು ಮೆಲ್ಲಗೆ ಕಳ್ಳ ಹೆಜ್ಜೆ ಹಾಕುತ್ತ ಅಡುಗೆ ಮನೆಗೆ ಹೋಗುತ್ತಿದ್ದ. ನಾವು ಏನಾದರೂ ಅದೇ ಸಮಯಕ್ಕೆ ಅಡುಗೆ ಮನೆಗೆ ಬಂದರೆ, ತನಗೇನೂ ಗೊತ್ತಿಲ್ಲ ಎನ್ನುವಂತೆ ನಾಟಕವಾಡುತ್ತಾ ಸುಮ್ಮನೆ ಆಚೆ ಬರುತ್ತಿದ್ದ.

ಒಂದು ವೇಳೆ ಅವನು ಅಡುಗೆ ಮನೆಗೆ ಹೋದಾಗ ನಾವು ನೋಡಿಲ್ಲವೆಂದರೆ, ಅಡುಗೆ ಕಟ್ಟೆ ಏರಿ, ಏನಾದರೂ ತಿನ್ನಲು ಸಿಗುತ್ತಾ ಎಂದು ಹುಡುಕತ್ತಿದ್ದ. ನಮ್ಮ ಕಾಲ ಸಪ್ಪಳ ಗಮನಿಸಿ ಚಕ್ಕನೆ ಜಿಗಿದು ಕೆಳಗಿಳಿದು ಏನೂ ಗೊತ್ತಿಲ್ಲದವನಂತೆ ಜಾಗ ಖಾಲಿ ಮಾಡುತ್ತಿದ್ದನಾದರೂ ಅವನ ಬಾಡಿ ಲಾಂಗ್ವೇಜ್ ಆತನ ಕಳ್ಳತನವನ್ನು ಬಿಚ್ಚಿಡುತ್ತಿತ್ತು. ಅವನ ಈ ವರ್ತನೆ ನಮಗಂತೂ ತಮಾಷೆಯಂತೆನಿಸುತ್ತಿತ್ತು. ಆಗ ಅವನ ತರಲೆ ಕಂಡು ಖುಷಿಯಿಂದ ಅವನನ್ನು ಎತ್ತಿ ಮುದ್ದಿಸುತ್ತಿದ್ದೆವು.

ಎಂ ಎಸ್ ಮಾಡುತ್ತಿದ್ದ ನಮ್ಮ ಮಗ ಮೂರು ವಾರಗಳ ರಜೆಗೆ ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬಂದಿದ್ದ. ಅವನು ವಾಪಾಸ್ ಹೊರಡಲು ಇನ್ನೆರಡು ದಿನಗಳಿದ್ದವಷ್ಟೇ. ಅಂದು ರಾತ್ರಿ ಊಟ ಮಾಡಿ, ನನ್ನ ಪತಿ ಲ್ಯಾಪ್ಟಾಪ್ ನಲ್ಲಿ ಕಾಲೇಜಿನ ಕೆಲಸ ಮಾಡ್ತಾ ಇದ್ದರು. ಅವರ ಪಕ್ಕದ ಚೇರ್ ನಲ್ಲಿ ಚಿಕ್ಪುಟ್ಟು ಮಲಗಿದ್ದ. ಆ ಸಮಯದಲ್ಲಿ ನಾನು ಅಡುಗೆ ಮನೆಯಲ್ಲಿದ್ದೆ. ನಮ್ಮ ಮಗ ತನ್ನ ಬೈಕನ್ನು ಕಾರ್ ಶೆಡ್ ಒಳಗಿಡಲು ಮನೆಯ ಬಾಗಿಲು ಓರೆ ಮಾಡಿ ಆಚೆ ಹೋಗಿದ್ದನ್ನು ನೋಡಿಕೊಂಡ ಚಿಕ್ಪುಟ್ಟು ಮೆಲ್ಲಗೆ ಎದ್ದು ಆಚೆ ಓಡಿದ್ದಾನೆ.

ಮನೆಯ ಒಳಗೆ ಬಂದ ನಮ್ಮ ಮಗ ಚಿಕ್ಪುಟ್ಟು ಎಲ್ಲಿ ಎಂದ. ‘ಇಲ್ಲೇ ಮಲಗಿದ್ದನಲ್ಲ’ ಎಂದು ನಾವೆಲ್ಲರೂ ಹುಡುಕಾಡಿದರೂ ಮನೆಯಲ್ಲಿ ಅವನ ಸುಳಿವಿಲ್ಲ. ಅವನು ಹೊರಗೆ ಹೋಗಿದ್ದಾನೆಂದು ನಮಗೆ ಖಾತ್ರಿಯಾಯಿತು. ಆಗ ರಾತ್ರಿ ಹತ್ತು ಗಂಟೆಯ ಸಮಯವಾಗಿದ್ದರೂ ನಾನು ಮತ್ತು ಮಗ ಟಾರ್ಚ್ ಹಿಡಿದು ಎಲ್ಲಾ ಕಡೆ ಹುಡುಕಾಡತೊಡಗಿದೆವು. ಸುಮಾರು ಅರ್ಧ ಗಂಟೆಯವರೆಗೂ ಹುಡುಕಾಡಿ ಅವನು ಸಿಗದೇ ಮನೆಗೆ ವಾಪಸ್ಸಾದೆವು.

ನಾವು ಮನೆ ಒಳಗೆ ಬಂದು ಐದು ನಿಮಿಷದಲ್ಲಿ ನಮ್ಮ ಹಿತ್ತಲಿನ ಪಕ್ಕದ ಖಾಲಿ ಸೈಟಿನಲ್ಲಿ ಕಿರ್ರೆಂದು ಚಿಕ್ಪುಟ್ಟು ಕಿರುಚಿದ ಸದ್ದು ಕೇಳಿದ ತಕ್ಷಣ ನನ್ನ ಪತಿ ಮತ್ತು ಮಗ ಟಾರ್ಚ್ ಹಿಡಿದು ಅಲ್ಲಿಗೆ ಓಡಿದರು. ಇವರು ಅಲ್ಲಿಗೆ ಹೋಗುವ ಹೊತ್ತಿಗೆ ನಾಯಿಗಳೆರಡು ಅಲ್ಲಿಂದ ಓಡಿದವು. ಅಗಲವಾಗಿ ಕಣ್ಣು ತೆರೆದುಕೊಂಡು ನೆಲದಲ್ಲಿ ಬಿದ್ದಿದ್ದ ಚಿಕ್ಪುಟ್ಟನನ್ನು ಎತ್ತುಕೊಂಡು ಮನೆಗೆ ಓಡಿ ಬಂದು ಅವನ ಕೈಕಾಲು, ಎದೆ ಉಜ್ಜಿ ನೋಡಿದ್ರು. ಆಗಲೇ ಅವನ ಉಸಿರು ನಿಂತಿತ್ತು. ಅವನನ್ನು ಎತ್ತಿಕೊಂಡು ಮೂವರೂ ಅತ್ತೆವು. ಅಂದಿಗೇ ಅವನ ಭೌತಿಕ ಇರುವು ಇಲ್ಲವಾಯಿತು. ಆದರೆ, ನಮ್ಮ ಮನದಲ್ಲಿ ಎಂದಿಗೂ ಅವನು ಶಾಶ್ವತವಾಗಿದ್ದಾನೆ.

ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :


  • ಕೆ.ಸಿ. ರತ್ನಶ್ರೀ ಶ್ರೀಧರ್ – ಚೆನ್ನೈ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading