ಇದ್ದಕ್ಕಿದ್ದಂತೆ ಕಿಟ್ಟಿ ಮನೆಗೆ ಬಂದ. ನನಗಂತೂ ಸಾಕಷ್ಟು ಖುಷಿಯಾಯಿತು. ಚಿಕ್ಪುಟ್ಟುವನ್ನು ಎತ್ತಿಕೊಂಡು ಕಿಟ್ಟಿಗೆ ಪರಿಚಯಿಸಿದೆ. ಮತ್ತೊಂದು ಬೆಕ್ಕನ್ನು ನೋಡಿದ ಚಿಕ್ಪುಟ್ಟ ತನ್ನ ಖುಷಿಯನ್ನು ವ್ಯಕ್ತಪಡಿಸಿದ. ಅಂಕಣಕಾರ್ತಿ ಕೆ.ಸಿ. ರತ್ನಶ್ರೀ ಶ್ರೀಧರ್ ಅವರ ಹಂಚಿಕೊಂಡಿದ್ದಾರೆ. ತಪ್ಪದೆ ಓದಿ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…
ಕಳೆದು ಹೋಗಿದ್ದ ದೊಡ್ಪುಟ್ಟ ಮತ್ತೆ ಮನೆ ಸೇರಿದ್ದು ನಮಗೆಲ್ಲಾ ತುಂಬಾ ಸಮಾಧಾನವಾಗಿತ್ತು. ಕೂತಿರಲಿ, ಇಲ್ಲ ಮಲಗಿರಲಿ ಚಿಕ್ಪುಟ್ಟು ದೊಡ್ಪುಟ್ಟನ ಬಳಿಗೆ ಹೋಗಿ ಮೆಲ್ಲಗೆ ಅವನನ್ನು ಮುಟ್ಟಿ ತಟ್ಟಿ ಆಟಕ್ಕೆ ಕರೆಯುತ್ತಿದ್ದ. ಆದರೆ ದೊಡ್ಪುಟ್ಟು ಇವನೊಂದಿಗೆ ಆಟಕ್ಕೆ ಬರುತ್ತಿರಲಿಲ್ಲ. ಬಹುಶಃ ಅದಿನ್ನೂ ಚಿಕ್ಕಮರಿ ಎಂಬ ಭಾವನೆ ಇದ್ದಿರಬಹುದು. ಆದರೆ, ಎಂದೂ ಕಿತ್ತಾಡುತ್ತಿರಲಿಲ್ಲ ಅಥವಾ ಹೆದರಿಸುತ್ತಿರಲಿಲ್ಲ. ಹೀಗೇ ಸುಮಾರು ಒಂದು ತಿಂಗಳವರೆಗೆ ಬಂದು – ಹೋಗಿ ಮಾಡುತ್ತಿದ್ದ ದೊಡ್ಪುಟ್ಟು ಮತ್ತೆ ಕಾಣೆಯಾದ.
ಇನ್ನೊಂದು ದಿನ ಇದ್ದಕ್ಕಿದ್ದಂತೆ ಕಿಟ್ಟಿ ಮನೆಗೆ ಬಂದ. ನನಗಂತೂ ಹಿಡಿಸಲಾರದ ಖುಷಿಯಾಯಿತು. ಚಿಕ್ಪುಟ್ಟುವನ್ನು ಎತ್ತಿಕೊಂಡು ಕಿಟ್ಟಿಗೆ ಪರಿಚಯಿಸಿದೆ. ಮತ್ತೊಂದು ಬೆಕ್ಕನ್ನು ನೋಡಿದ ಚಿಕ್ಪುಟ್ಟ ತನ್ನ ಖುಷಿಯನ್ನು ವ್ಯಕ್ತಪಡಿಸಿದ. ಯಾಕೋ ಕಿಟ್ಟಿ ಮಾತ್ರ ನಿರ್ಭಾವುಕನಂತೆ ವರ್ತಿಸಿದ. ಕಿಟ್ಟಿ ಕೂಡ ಚಿಕ್ಪುಟ್ಟನನ್ನು ಗದರಿಸುವುದಾಗಲಿ ಕಚ್ಚುವುದಾಗಲಿ ಎಂದೂ ಮಾಡಲಿಲ್ಲ. ಒಂದಷ್ಟು ದಿನ ಕಿಟ್ಟು ಕೂಡ ಬಂದು-ಹೋಗಿ ಮಾಡುತ್ತಿದ್ದವನು ಮತ್ತೆ ಕಣ್ಮರೆಯಾದ.
ಅದೊಂದು ದಿನ ನಮ್ಮ ಮನೆಯ ಮುಂದಿನ ಮೋರಿ ಒಳಗಿಂದ ಸಣ್ಣ ಬೆಕ್ಕಿನ ಮರಿ ಅಳುವ ಸದ್ದು ಕೇಳುತ್ತಿತ್ತು. ಹೋಗಿ ನೋಡಿದರೆ ಎಲ್ಲೂ ಏನೂ ಕಾಣುತ್ತಿರಲಿಲ್ಲ. ಹೀಗೇ ನಾಲ್ಕೈದು ದಿನದಿಂದ ಕೇಳುತ್ತಿದ್ದ ಸದ್ದಿನ ಜಾಡು ಹಿಡಿದು ಹೊರಟಾಗ ಸುಮಾರು ಒಂದೂವರೆ ತಿಂಗಳ ಪ್ರಾಯದ ಜಿಂಜರ್ ಬೆಕ್ಕಿನ ಮರಿ ಕಾಣಿಸಿತು. ಒಂದು ಬಟ್ಟಲಿನಲ್ಲಿ ಅದಕ್ಕೆ ಕಾಣುವಂತೆ ಹಾಲನ್ನು ಇಟ್ಟು ಕರೆದೆ. ಹೊರ ಬಂದು ಹಾಲು ಕುಡಿಯಿತು. ಎತ್ತಿ ಮುದ್ದಿಸಿ ತಂದು ನಮ್ಮ ಪೋರ್ಟಿಕೋದಲ್ಲಿ ಬಿಟ್ಟೆ. ಅಲ್ಲಿದ್ದ ತೆರೆದ ಚಪ್ಪಲಿ ಕಪಾಟಿನ ಒಳಗೆ ಹೋಗಿ ಮಲಗಿತು. ಅಂದಿನಿಂದ ಇದೇ ಅದರ ಮನೆಯಾಯಿತು.

ಫೋಟೋ ಕೃಪೆ : ಅಂತರ್ಜಾಲ
ಊಟ ಕೊಟ್ಟಾಗ ತಿನ್ನೋದು, ಎತ್ತಿ ಮುದ್ದಾಡಿದರೆ ಮುದ್ದಿಸಿಕೊಳ್ಳೋದು. ನಿದ್ದೆ ಬಂದಾಗ ಚಪ್ಪಲಿ ಕಪಾಟಿನಲ್ಲಿ ಮಲಗೋದು. ಎಚ್ಚರವಾದಾಗ ನಮ್ಮ ಕಾಂಪೌಂಡ್ ಒಳಗೇ ಆಡಿಕೊಂಡಿರೋದು. ಗ್ರಿಲ್ ಹಿಡಿದು ಮೇಲೆ ಹತ್ತೋದು-ಇಳಿಯೋದು, ಗಿಡದ ಎಲೆಯೋ, ಒಂದು ಕಲ್ಲನ್ನೋ ಹಿಡಿದುಕೊಂಡು ಗಂಟೆಗಟ್ಟಲೆ ಆಡೋದು. ಅದರ ಆಟ ನೋಡಲು ಬಲು ಚಂದ.
ಅದರ ಅಮ್ಮನಾಗಲಿ ಅಥವಾ ಅದರ ಒಡ ಹುಟ್ಟಿದ ಮರಿಗಳಾಗಲಿ ಯಾವುವೂ ಎಂದೂ ಕಾಣಿಸಲಿಲ್ಲ. ಅನಾಥ ಮರಿಯಾಗಿದ್ದ ಅದಕ್ಕೊಂದು ನೆಲೆ ಸಿಕ್ಕು ಇಲ್ಲಿಯೇ ಬೆಳೆಯಿತು. ಅದು ಹೆಣ್ಣು ಬೆಕ್ಕಾದ್ದರಿಂದ ಅದಕ್ಕೆ ಅಮ್ಮು ಎಂದು ಹೆಸರಿಟ್ಟೆವು. ದೊಡ್ಡದಾಗಿ ಬೆಳೆದಂತೆ ಅಮ್ಮು ಹಗಲು ಹೊತ್ತಿನಲ್ಲಿ ಊರು ಸುತ್ತಿದರೂ ರಾತ್ರಿ ಇಲ್ಲಿಗೇ ಬಂದು ನಾವು ಹಾಕಿದ ಊಟ ತಿಂದು ಚಪ್ಪಲಿ ಕಪಟಿನಲ್ಲಿ ಮಲಗುತ್ತಿದ್ದಳು.
ಈ ಮಧ್ಯೆ ಕಿಟ್ಟು-ಪುಟ್ಟು ಆಗಾಗ ಪ್ರತ್ಯೇಕವಾಗಿ ಮನೆಗೆ ಬಂದು ಹೋಗುತ್ತಿದ್ದವು. ಒಮ್ಮೆ ಕಿಟ್ಟು ಮನೆಗೆ ಬಂದಿದ್ದಾಗ ದೊಡ್ಪುಟ್ಟು ಕೂಡ ಬಂದ. ಎರಡು ಬೆಕ್ಕುಗಳು ಮುಖಾಮುಖಿಯಾಗುತ್ತಿದ್ದಂತೆ ಒಂದನ್ನೊಂದು ನೋಡಿ, ಬೆದರಿಕೊಂಡು “ಶ್ಶ್.. ಶ್ಶ್”… ಎಂದು ಪರಸ್ಪರ ಹೆದರಿಸುತ್ತಾ ಬಾಲ, ಕೂದಲು ನಿಮಿರಿಸಿಕೊಂಡು ಅತ್ತಿತ್ತ ಓಡಲಾರಂಭಿಸಿದವು. ಅಷ್ಟೊಂದು ಅನ್ಯೂನ್ಯತೆಯಿಂದಿದ್ದ ಅಣ್ಣ-ತಮ್ಮ ಬೆಕ್ಕುಗಳು ಪರಸ್ಪರ ಹೆದರಿಕೊಂಡಿದ್ದು ನೋಡಿ ನನಗೆ ಆಚ್ಚರಿ ಆಯಿತು. ಚಿಕ್ಪುಟ್ಟನಂತೂ ಈ ದೃಶ್ಯವನ್ನು ದೂರ ನಿಂತು ಪಿಳಿಪಿಳಿ ನೋಡುತ್ತಿದ್ದ. ಈ ಘಟನೆಯ ನಂತರ ಕಿಟ್ಟು-ಪುಟ್ಟು ಪರಸ್ಪರ ಒಟ್ಟಾಗಿದ್ದುದನ್ನು ನಾವು ನೋಡಲಿಲ್ಲ.
ನಂತರದ ದಿನಗಳಲ್ಲಿ ದೊಡ್ಪುಟ್ಟು ಎರಡು-ಮೂರು ದಿನಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ಅದೊಂದು ದಿನ ಮಧ್ಯಾಹ್ನ ದೊಡ್ಪುಟ್ಟು ಮನೆಯ ಹಿಂಭಾಗದ ಕಾಂಪೌಂಡ್ ಗೋಡೆಯ ಮೇಲೆ ಕುಳಿತು ಕರೆದ. ಮನೆಯ ಸುತ್ತಾ ಗ್ರಿಲ್ ಇರುವ ಕಾರಣ ಹಿತ್ತಲಿನಿಂದ ಒಳಗೆ ಬರಲು ಸಾಧ್ಯವಿರಲಿಲ್ಲ. ಹಾಗಾಗಿ ಹಿತ್ತಲ ಬಾಗಿಲು ತೆಗೆದು ಅವನನ್ನು ಮಾತನಾಡಿಸಿದ ನಾನು, “ಬಾ ಪುಟ್ಟು” ಎಂದು ಕರೆದು ಹೊರಬಂದು ಮುಂಬಾಗಿಲು ತೆಗೆದೆ. ಒಂದೆರಡು ನಿಮಿಷ ಕಾದರೂ ದೊಡ್ಪುಟ್ಟು ಒಳಗೆ ಬರಲಿಲ್ಲ.. ಒಮ್ಮೆಲೆ ಕಿರ್ರೆಂದು ಕಿರುಚಿದ ಸದ್ದು ಕೇಳಿ ಮತ್ತೆ ಹಿತ್ತಲ ಬಾಗಿಲಿಗೆ ಓಡಿದೆ.
ನಮ್ಮ ಹಿತ್ತಲಿನಾಚೆಯ ಖಾಲಿ ಸೈಟಿನಲ್ಲಿ ಬೆಳೆದಿದ್ದ ಕಳೆ ಗಿಡಗಳ ಪೊದೆಗಳ ಪಕ್ಕದಲ್ಲಿ ಎರಡು ಗಡವ ನಾಯಿಗಳು ನಮ್ಮ ದೊಡ್ಪುಟ್ಟನ ಮೇಲೆ ದಾಳಿ ಮಾಡಿದ ಭೀಕರ ದೃಶ್ಯವನ್ನು ಕಂಡು ಕಿರುಚಾಡಿದೆ. ಆ ಜಾಗಕ್ಕೆ ನಾನು ತಲುಪಬೇಕೆಂದರೆ ನಾಲ್ಕೈದು ಮನೆಗಳನ್ನು ದಾಟಿ ಹಿಂದಿನ ರಸ್ತೆಯ ಮೂಲಕ ಅಲ್ಲಿಗೆ ಹೋಗಲು ಮೂರ್ನಾಲ್ಕು ನಿಮಿಷಗಳು ಬೇಕು. ಅಲ್ಲಿಯವರೆಗೂ ಪುಟ್ಟನ ಗತಿ ಏನೆಂದು ಯೋಚಿಸಿದ ನಾನು ತಕ್ಷಣವೇ ನಮ್ಮ ಟೆರೆಸ್ ಗೆ ಓಡಿದೆ.

ಫೋಟೋ ಕೃಪೆ : ಅಂತರ್ಜಾಲ
ನಮ್ಮ ಟೆರೇಸ್ ಮೇಲೆ ಕೈಗೆ ಸಿಕ್ಕ ಇಟ್ಟಿಗೆ ಚೂರು ಕಲ್ಲುಗಳನ್ನು ತೆಗೆದು ಮೇಲಿನಿಂದಲೇ ನಾಯಿಗಳತ್ತ ಎಸೆಯುತ್ತಾ ಜೋರಾಗಿ ಕೂಗಾಡಿದೆ. ಎರಡು ನಾಯಿಗಳೂ ಬಾಯಲ್ಲಿ ಕಚ್ಚಿ ಹಿಡಿದಿದ್ದ ದೊಡ್ಪುಟ್ಟನನ್ನು ಬಿಟ್ಟು ಓಡಿದವು. ದೊಡ್ಪುಟ್ಟು ದೊಪ್ಪನೆ ನೆಲದ ಮೇಲೆ ಬಿದ್ದು, ಟೆರೆಸ್ ಮೇಲಿರುವ ನನ್ನತ್ತ ನೆಟ್ಟಗಣ್ಣಿನಿಂದ ನೋಡಿದ. ಆ ದೃಶ್ಯ ನಾನೆಂದಿಗೂ ಮರೆಯಲಾರೆ. “ಅಯ್ಯೋ ಪುಟ್ಟು, ಹೋಗಿಬಿಟ್ಟೆಯಾ ಕಂದ” ಎಂದು ಅಳುತ್ತಾ, ಕೆಳಗಿಳಿದು ಬಂದೆ. ಈ ಗಲಾಟೆ ಕೇಳಿ ಹೆದರಿಕೊಂಡಿದ್ದ ಚಿಕ್ಪುಟ್ಟುವನ್ನು ರೂಮಿನಲ್ಲಿ ಕೂಡಿ ಹಾಕಿ, ದೊಡ್ಪುಟ್ಟುವನ್ನು ಎತ್ತಿ ತರಲು ಕೈಗೆ ಸಿಕ್ಕಿದ ಪ್ಲಾಸ್ಟಿಕ್ ಬುಟ್ಟಿ, ಜೊತೆಗೊಂದು ಚೀಲವನ್ನು ಹಿಡಿದು ಮನೆ ಬಾಗಿಲು ಮುಚ್ಚಿ ಹಿಂಬದಿಯ ರೋಡಿಗೆ ಓಡಿದೆ.
ನಮ್ಮ ದೊಡ್ಪುಟ್ಟು ಬಹಳ ಮೆತ್ತೆ ಎಂದು ತಿಳಿದಿದ್ದ ನನಗೆ, ಅವನು ನಿಜಕ್ಕೂ ಬಹಳ ಧೈರ್ಯವಂತ ಮತ್ತು ಗಟ್ಟಿ ಜೀವ ಎಂಬುದನ್ನು ಆ ದಿನ ಸಾಬೀತುಪಡಿಸುವಂತೆ ಎರಡು ನಾಯಿಗಳ ದಾಳಿಗೆ ಒಳಗಾಗಿಯೂ ಅವನು ಆಶ್ಚರ್ಯಕರವಾಗಿ ಬದುಕಿ ಉಳಿದಿದ್ದ. ದೊಡ್ಪುಟ್ಟು ಜೀವಂತ ಇದ್ದದ್ದು ಕಂಡು ಸಮಾಧಾನಗುಂಡೆ. ಮೈಯೆಲ್ಲಾ ನೆನೆದು ತೊಪ್ಪೆಯಾಗಿ ಭಯದಿಂದ ಹೆದರಿ ನಡುಗುತ್ತಿದ್ದ ದೊಡ್ಪುಟ್ಟು ನನ್ನ ಕೈಗೆ ಸಿಗದಂತೆ ಪೊದೆಯತ್ತ ಸರಿದಿದ್ದ. ನಾಯಿಗಳು ಕಚ್ಚಿದ್ದ ಹೊಟ್ಟೆ ಮತ್ತು ತೊಡೆಯ ಮಧ್ಯ ಭಾಗದಲ್ಲಿ ರಕ್ತ ಸುರಿಯುತ್ತಿದ್ದರೂ ತೆವಳಿಕೊಂಡು ಅಲ್ಲಿದ್ದ ಕಲ್ಲಿನ ಮೇಲೆ ಹತ್ತಿ ಮರದ ಕೊಂಬೆ ಏರಿದ.
ಪೊದೆಯನ್ನು ದಾಟಿ ನಾನು ಆ ಜಾಗದತ್ತ ಹೋಗಲು ಸಾಧ್ಯವಾಗದೇ ಅಸಹಾಯಕಳಾಗಿ ದೊಡ್ಪುಟ್ಟುವನ್ನು ಕರೆಯುತ್ತಾ ನಿಂತೆ. ಅವನನ್ನು ತಕ್ಷಣ ವೈದ್ಯರಲ್ಲಿಗೆ ಕರೆದೊಯ್ಯುವ ಕಾತುರ ನನಗೆ. ಆದರೆ ಅವನು ಮರ ಬಿಟ್ಟು ಇಳಿಯಲೇ ಇಲ್ಲ. ಸುಮಾರು ಅರ್ಧ ಗಂಟೆ ಕಾಲ ಅಲ್ಲೇ ನಿಂತು ಕರೆದೆ. ಹೆದರಿಕೊಂಡಿದ್ದ ದೊಡ್ಪುಟ್ಟು ಮರ ಬಿಟ್ಟು ಇಳಿಯಲಿಲ್ಲ. ನಿರ್ವಾಹವಿಲ್ಲದೆ ಕೊನೆಗೆ ಮನೆಗೆ ಬಂದೆ. ನಮ್ಮ ಹಿತ್ತಲಿನಿಂದ ಆ ಮರದ ಮೇಲಿರುವ ದೊಡ್ಪುಟ್ಟು ಕಾಣಿಸುತ್ತಿದ್ದ. ಸಂಜೆಯ ಹೊತ್ತಿಗೆ ಅವನು ಮರದ ಮೇಲೆಲ್ಲೂ ಕಾಣಿಸಲಿಲ್ಲ. ಮನೆಗೂ ಬರಲಿಲ್ಲ. ಇಳಿದು ಇಲ್ಲಿಗೆ ಹೋದನೋ ಗೊತ್ತಾಗಲಿಲ್ಲ.
ಇಡೀ ರಾತ್ರಿ ಅದೇ ಕೊರಗಲ್ಲಿ ನಾನು ನಿದ್ದೆ ಕೂಡ ಮಾಡಲಿಲ್ಲ. ಆ ನಾಯಿಗಳು ನಡೆಸಿದ ಭೀಕರ ದಾಳಿ ಪದೇ ಪದೇ ಕಣ್ಮುಂದೆ ಸುಳಿದಂತಾಗುತ್ತಿತ್ತು. ಒಂದೇ ಸಮಾಧಾನ ಎಂದರೆ, ದೊಡ್ಪುಟ್ಟು ಬದುಕಿದ ಎನ್ನುವುದು. ಆದರೆ ಅಷ್ಟೊಂದು ಗಾಯವಾಗಿದ್ದ ಅವನ ಪರಿಸ್ಥಿತಿ ಹೇಗಿದೆಯೋ ಎಂದು ಚಡಪಡಿಸಿದೆ. ಮಾರನೇ ದಿನ ಬೆಳಿಗ್ಗೆ ಖಾಲಿ ಸೈಟಿನ ಬಳಿ ನಾನು ಮತ್ತು ನನ್ನ ಪತಿ ಇಬ್ಬರೂ ಹುಡುಕಾಡಿದೆವು. ಆದರೆ ಎಲ್ಲಿಯೂ ದೊಡ್ಪುಟ್ಟನ ಸುಳಿವು ಸಿಗಲೇ ಇಲ್ಲ. ನನಗೆ ಅಳು ಒತ್ತರಿಸಿ ಬಂದು, ಆ ನಾಯಿಗಳ ಮೇಲೆ ಇನ್ನಿಲ್ಲದ ಕೋಪ ಬಂತು.
ಆ ಎರಡು ಗಡವ ನಾಯಿಗಳು ಬೇರೆ ಯಾವುದೋ ಏರಿಯಾದಿಂದ ನಮ್ಮ ಬೀದಿಗೆ ಬಂದು 15 ದಿನಗಳಲ್ಲಿ ಅದಾಗಲೇ ನಮ್ಮ ಬೀದಿಯ ನಾಲ್ಕೈದು ಬೀದಿ ಬೆಕ್ಕಿನ ಮಾರಣಹೋಮ ನಡೆಸಿದ್ದವು. ಆ ನಾಯಿಗಳನ್ನು ಕೊಂದುಬಿಡುವಷ್ಟು ಕೋಪ ಉಕ್ಕಿ ಬರುತ್ತಿತ್ತು. ನಮ್ಮ ಬೀದಿಯ ಯಾವ ನಾಯಿಯೂ ಬೆಕ್ಕನ್ನು ಹಿಡಿಯುವುದಾಗಲಿ, ಹೆದರಿಸುವುದಾಗಲಿ ಮಾಡುತ್ತಿರಲಿಲ್ಲ. ಆದರೆ ಈ ಅಪರಿಚಿತ ಗಡವ ನಾಯಿಗಳಿಂದಾಗಿ ಬೆಕ್ಕುಗಳಿಗೆ ಉಳಿಗಾಲ ಇಲ್ಲದಂತಾಗಿತ್ತು.

ಫೋಟೋ ಕೃಪೆ : ಅಂತರ್ಜಾಲ
ಈ ನಾಯಿಗಳ ದಾಳಿಗೆ ಒಳಗಾದ ದೊಡ್ಬುಟ್ಟು ಮಾರನೇ ದಿನ ರಾತ್ರಿ ನಡೆಯಲಾರದೆ ತೆವಳಿಕೊಂಡು ಮನೆಗೆ ಬಂದ. ಮೈ ಮೇಲಿನ ಗಾಯದಿಂದ ಕೀವು ರಸಿಯಾಡುತ್ತಿತ್ತು. ಅಷ್ಟು ಹೊತ್ತಿಗೆ ವೈದ್ಯರೂ ಸಿಗುವುದಿಲ್ಲ. ಏನು ಮಾಡುವುದೆಂದು ಅರಿಯದಾದೆ. ಮನೆಯಲ್ಲಿ ಚಿಕ್ಪುಟ್ಟ ಬೇರೆ ಇದ್ದಾನೆ, ಅವನನ್ನು ಇವನೊಟ್ಟಿಗೆ ಬಿಡುವಂತಿಲ್ಲಾ. ದೊಡ್ಪುಟ್ಟುಗೆ ಗಾಯದಿಂದ ಸೋಂಕಾಗಿರಬಹುದು. ಚಿಕ್ಪುಟ್ಟನದು ಸ್ವಲ್ಪ ಸೂಕ್ಷ್ಮ ಪ್ರಕೃತಿ. ಅವನಿಗೂ ಸೋಂಕು ತಗುಲೀತು ಎಂದು ಯೋಚಿಸಿ ದೊಡ್ಪುಟುವನ್ನು ಗ್ರಿಲ್ಲಿನ ಒಳಗಿರುವ ಹಿತ್ತಲಿನ ಪ್ಯಾಸೇಜ್ ನಲ್ಲಿ ಬಿಟ್ಟೆ. ಗಾಯಕ್ಕೆ ಬೀಟಾಡೈನ್ ಪೌಡರ್ ಸುರಿದೆ.
ಮಾರನೇ ದಿನ, ಬೆಳಿಗ್ಗೆಯೇ ದೊಡ್ಪುಟ್ಟುವನ್ನು ನಮ್ಮ ಮಗನ ಸ್ನೇಹಿತನ ಸಹಾಯದಿಂದ ವೈದ್ಯರಲ್ಲಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆ. ಎರಡು ದಿನಕ್ಕೊಂದರಂತೆ ಮೂರು ಇಂಜೆಕ್ಷನ್ ಕೊಟ್ಟರು. ಹೊಟ್ಟೆಯ ಬಳಿ ಆಳವಾದ ಗಾಯವಾಗಿ ಒಳಗಿನ ಮಾಂಸ ಕಂಡ ಕಿತ್ತು ಬಂದು ಒಂದಿಂಚಿನಷ್ಟು ತೂತು ಬಿದ್ದಿತ್ತು. ಈ ಗಾಯ ವಾಸಿಯಾಗಲು ಎರಡರಿಂದ ಮೂರು ವಾರಗಳಾದರೂ ಬೇಕು ಎಂದರು ವೈದ್ಯರು. ಅಷ್ಟರವರೆಗೂ ಅವನನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು ನನಗೆ ಬಹಳವೇ ಕಷ್ಟವಿನಿಸಿತು.
ಅವನು ಆಚೆ ಹೋಗಲು ಕೇಳಿ ಗಲಾಟೆ ಮಾಡುತ್ತಿದ್ದ. ಹೊರಗೆ ಹೋದರೆ ಮತ್ತೆಲ್ಲಿ ನಾಯಿಯ ದಾಳಿಗೆ ತುತ್ತಾಗುತ್ತಾನೋ ಎಂಬ ಭಯ ನನ್ನನ್ನು ಕಾಡುತ್ತಿತ್ತು. ಗಾಯ ಮತ್ತೆ ಮತ್ತೆ ರಸಿಯಾಡುತ್ತಲೇ ಇತ್ತು. ಮನೆಯ ಒಳಗೆ ದೊಡ್ಡಪುಟ್ಟನನ್ನು ಬಿಡುವಂತಿಲ್ಲ, ಚಿಕ್ಪುಟ್ಟವನ್ನು ಹಿತ್ತಲಿಗೆ ಕಳಿಸುವಂತಿಲ್ಲ. ಕೆಲವೊಮ್ಮೆ ಹೊರಗೆ ಬಿಡುವವರೆಗೂ ಹಠ ಹಿಡಿದು ಜೋರಾಗಿ ಕೂಗಾಡಿದಾಗ ಹೊರಗೆ ಕಳಿಸುತ್ತಿದ್ದೆ. ಹಾಗೂ ಹೀಗೂ ಮೂರು ವಾರಗಳಲ್ಲಿ ದೊಡ್ಪುಟ್ಟನ ಗಾಯ ತಕ್ಕಮಟ್ಟಿಗೆ ವಾಸಿಯಾಯಿತು.
ಮುಂದುವರೆಯುವುದು
ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೨)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೩)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೪)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೫)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೬)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೭)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೮)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೯)
- ಕೆ ಸಿ ರತ್ನಶ್ರೀ ಶ್ರೀಧರ್
