ಅಂಕೋಲ ಮರವನ್ನು ಸಾಮಾನ್ಯವಾಗಿ ವಾತಶಾಮಕ, ಕಫಹರ ಮತ್ತು ಊತ ನಾಶಕ ಗುಣಗಳನ್ನು ಹೊಂದಿದ ಮರವೆಂದು ಪರಿಗಣಿಸಲಾಗಿದ್ದು, ಪಾರಂಪರಿಕ ವೈದ್ಯೆರಾದ ಸುಮನಾ ಮಳಲಗದ್ದೆ ಅವರು ಅಂಕೋಲ ಮರದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕನ್ನಡ ಹೆಸರುಗಳು: ಅಂಕೋಲ, ಅಂಕೋಲೆ
ಸಂಸ್ಕೃತ ಹೆಸರುಗಳು: ಅಂಕೋಲ, ಅಂಕೋಟ, ದೀರ್ಘಕೀಲಕ (ಕೆಲವು ನಿಘಂಟುಗಳಲ್ಲಿ ಉಲ್ಲೇಖ)
ಹಿಂದಿ: ಅಂಕೋಲ್ (Ankol)
ಇಂಗ್ಲಿಷ್ ಹೆಸರು: Sage-leaved Alangium
ಶಾಸ್ತ್ರೀಯ ಹೆಸರು: Alangium salvifolium (L.f.) Wang.
ಕುಟುಂಬ (Family): Cornaceae (ಕೆಲವು ಹಳೆಯ ವರ್ಗೀಕರಣಗಳಲ್ಲಿ Alangiaceae ಎಂದೂ ಉಲ್ಲೇಖಿಸಲಾಗಿದೆ)
ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಅಂಕೋಲವು ಬಹುಪಯೋಗಿ ಔಷಧೀಯ ವೃಕ್ಷವಾಗಿ ಪ್ರಸಿದ್ಧವಾಗಿದೆ. ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ವಿವಿಧ ಜನಪದ ಹಾಗೂ ಆಯುರ್ವೇದೀಯ ಉಪಯೋಗಗಳಲ್ಲಿ ಸ್ಥಾನ ಪಡೆದಿವೆ. ಹಳ್ಳಗಳ ಅಂಚುಗಳಲ್ಲಿ, ಕಾಡು ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಈ ಮರ ಕೇವಲ ನೆರಳು ನೀಡುವ ವೃಕ್ಷವಲ್ಲ; ದೇಹದ ಅನೇಕ ತೊಂದರೆಗಳಿಗೆ ಪ್ರಕೃತಿ ಕೊಟ್ಟ ಒಂದು ಔಷಧಿ ಭಂಡಾರವೂ ಹೌದು.

ಇದು ಮಧ್ಯಮ ಗಾತ್ರದ, ಕೆಲವು ವೇಳೆ ಮುಳ್ಳುಳ್ಳ ಮರವಾಗಿದ್ದು, ಒಣ ಪ್ರದೇಶಗಳಲ್ಲಿಯೂ ಸುಲಭವಾಗಿ ಬೆಳೆಯುತ್ತದೆ. ಅಂಕೋಲೆ ಒಂದು ಔಷಧೀಯ ಗುಣಗಳನ್ನು ಹೊಂದಿರುವ ಪೊದೆಸಸ್ಯ. ಅನುಕೂಲಕರ ಪರಿಸರದಲ್ಲಿ ಇದು ಸಣ್ಣ ಮರದ ರೂಪದಲ್ಲಿಯೂ ಬೆಳೆಯುತ್ತದೆ.
ಇದರಿಂದ ಮಾಡಿದ ಮೊಳೆಗಳನ್ನು ಪ್ರಧಾನ ಬಾಗಿಲಿಗೆ ಉಪಯೋಗಿಸಿದರೆ ಮನೆಗೆ ವಾಸ್ತು ದೋಷವನ್ನು ನಿವಾರಿಸುವುದು ಎಂಬ ವಾಡಿಕೆ ಇದೆ. ಇದರ ಎಲೆಗಳ ಮೇಲ್ಭಾಗ ಹಸಿರು ತಳಭಾಗ ಬೂದು ಬಣ್ಣದ್ದಾಗಿರುತ್ತದೆ. ಹೂವು ಹಳದಿ ಮಿಶ್ರಿತ ಹಸಿರು. ಹೂಬಿಡುವ ಸಮಯದಲ್ಲಿ ಸುತ್ತಲಿನ ಪರಿಸರ ಸುವಾಸನಾಬರಿತ ಆಹಾ.. ಕಾಯಿ ಎಳಸಾದಾಗ ಹಸಿರು, ಬಲಿತಂತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಪಶುರೋಗಗಳಿಗೆ ಸೋಪ್ಪು ಬೀಜ, ಬೇರು , ತೊಗಟೆಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.

ಔಷಧೀಯ ಗುಣಗಳು :
ಅಂಕೋಲ ಮರವನ್ನು ಸಾಮಾನ್ಯವಾಗಿ ವಾತಶಾಮಕ, ಕಫಹರ ಮತ್ತು ಊತ ನಾಶಕ ಗುಣಗಳನ್ನು ಹೊಂದಿದ ಮರವೆಂದು ಪರಿಗಣಿಸಲಾಗಿದೆ. ಇದರ ತೊಗಟೆ ಮತ್ತು ಬೇರು ಸಂಧಿವಾತ, ಸ್ನಾಯು ನೋವು, ಊತ ಮುಂತಾದ ತೊಂದರೆಗಳಲ್ಲಿ ಉಪಯುಕ್ತವೆಂದು ಜನಪದ ವೈದ್ಯರು ಬಳಸಿಕೊಂಡಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಇದರ ಎಲೆಗಳನ್ನು ನುಣ್ಣಗೆ ಅರೆದು ಊತ ಇರುವ ಭಾಗಗಳಿಗೆ ಲೇಪನವಾಗಿ ಬಳಸುವ ಪದ್ಧತಿಯೂ ಇದೆ. ಹಳೆಯ ಗಾಯಗಳು, ಚರ್ಮದ ಕೆಲವು ಸಮಸ್ಯೆಗಳು ಹಾಗೂ ಕೀಟ ಕಚ್ಚಿದ ನಂತರದ ಉರಿಯೂತ ತಗ್ಗಿಸಲು ಹೊರ ಲೇಪನ ರೂಪದಲ್ಲಿ ಬಳಸಲಾಗುತ್ತದೆ ಎಂಬ ಜನಪದ ಅನುಭವಗಳೂ ದೊರೆಯುತ್ತವೆ.
ಅಂಕೋಲ ಬೀಜದಿಂದ ಸಿದ್ಧಪಡಿಸುವ ಎಣ್ಣೆಯನ್ನು ಕೆಲವು ಪಾರಂಪರಿಕ ವೈದ್ಯರು ಸಂಧಿ ನೋವು, ನರಬಲ ಕುಂದಿರುವ ಸಂದರ್ಭಗಳಲ್ಲಿ ಮಸಾಜ್ ರೂಪದಲ್ಲಿ ಬಳಸುತ್ತಾರೆ.
ಅಂಕೋಲದ ಬೇರನ್ನು ನಿರ್ದಿಷ್ಟ ನಕ್ಷತ್ರ ಅಥವಾ ಮುಹೂರ್ತದಲ್ಲಿ ತೆಗೆದರೆ ವಿಶೇಷ ಶಕ್ತಿ ಬರುತ್ತದೆ ಎಂದು ಕೆಲವರು ನಂಬುತ್ತಾರೆ.
ಬೇರು ಅಥವಾ ಅದರ ತುಂಡುಗಳನ್ನು ತಾಯಿತದಲ್ಲಿ ಕಟ್ಟಿಕೊಳ್ಳುವುದು, ಮನೆಯಲ್ಲಿಡುವುದು ಮುಂತಾದ ಆಚರಣೆಗಳ ಉಲ್ಲೇಖಗಳು ಕೆಲವು ತಾಂತ್ರಿಕ ಗ್ರಂಥಗಳಲ್ಲಿ ಸಿಗುತ್ತವೆ.
ಕೆಲವು ವಾಮಮಾರ್ಗದ ತಂತ್ರಗಳಲ್ಲಿ ಅಂಕೋಲದ ಬೇರು ಬಳಕೆಯ ಬಗ್ಗೆ ಉಲ್ಲೇಖಗಳಿವೆ.
ಆದರೆ ಇವುಗಳಿಗೆ ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ಸಾಕ್ಷ್ಯಗಳು ಲಭ್ಯವಿಲ್ಲ. ಹೆಚ್ಚಿನ ಮಾಹಿತಿಗಳು ಜನಪದ ನಂಬಿಕೆಗಳು, ತಾಂತ್ರಿಕ ಸಂಪ್ರದಾಯಗಳು ಮತ್ತು ಪ್ರಾದೇಶಿಕ ಆಚರಣೆಗಳ ಆಧಾರದ ಮೇಲಿವೆ.
- ಬೇರನ್ನು ಎರಡನೇ ಬಾರಿ ಅಕ್ಕಿ ತೊಳೆದ ನೀರಿನಲ್ಲಿ ಅಥವಾ ಅನ್ನದ ಗಂಜಿಯಲ್ಲಾಗಲಿ ಅರೆದು ಜೇನುತುಪ್ಪ ಸೇರಿಸಿ ಕುಡಿದರೆ ಭೇದಿ ನಿಲ್ಲುತ್ತದೆ.
- ಬೇರಿನ ಕಷಾಯ ಅಥವಾ ಗಂಧವನ್ನು ತುಪ್ಪದೊಡನೆ ತಿಂದರೆ ನಾಯಿ ಕಡಿತದ ವಿಷ ಇಳಿಯುತ್ತದೆ. (ಈಗ ಇದಕ್ಕಾಗಿ ಹೊಕ್ಕಳಿನ ಸುತ್ತ ಇಂಜಕ್ಷನ್ ಇರುವುದರಿಂದ ಇದು ಪ್ರಚಲಿತ ಇಲ್ಲ)
- ಬೇರಿನ ತೊಗಟೆ ಮತ್ತು ಇತರೆ ಮೂಲಿಕೆ ಯಿಂದ ಎಣ್ಣೆ ಕೀಲು ನೋವು ನಿವಾರಕ.
- ಬೇರಿನ ತೊಗಟೆ ಗಂಧವನ್ನು ಅರ್ಧ ದಿಂದ ಒಂದು ಚಮಚದಷ್ಟು ಸೇವಿಸಿದರೆ ಜ್ವರ ನಿವಾರಣೆ ಆಗುತ್ತದೆ.
- ಅಂಕೊಲೆ ಹಣ್ಣುಗಳನ್ನು ಒಣಗಿಸಿ ಬೀಜ ಪುಡಿ ಮಾಡಿ ಸೂಕ್ತ ಮೂಲಿಕೆ ಸೇರಿಸಿ ತಯಾರಿಸಿದ ಲೇಹ್ಯ ವೀರ್ಯ ವೃದ್ಧಿಸುತ್ತದೆ.
- ಬೀಜವನ್ನು ಪುಡಿ ಮಾಡಿ ಜೇನುತುಪ್ಪ ಸೇರಿಸಿ ಸೇವಿಸಿದರೆ ಹಾವಿನ ವಿಷ ಗುಣವಾಗುತ್ತದೆ.
- ನನ್ನ ಥೈರಾಯ್ಡ್ ಮೆಡಿಸಿನ್ ನಲ್ಲಿ ಇರುವ ಗಿಡಮೂಲಿಕೆಗಳಲ್ಲಿ ಇದೂ ಒಂದು.
- ಎಮ್ಮೆ ಮಜ್ಜಿಗೆ ಯಲ್ಲಿ ಸಿಹಿಯಾಗುವಂತೆ ಕಬ್ಬಿನ ಬೆಲ್ಲ ಹಾಕಿ ಬೇರನ್ನು ತೈದು ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಕಫ ರಹಿತ ಕೆಮ್ಮಿನಲ್ಲಿ ಒಳ್ಳೆಯ ಮೆಡಿಸಿನ್.
- ಇದರ ಎಣ್ಣೆಯನ್ನು ಅಂಜನ ನೋಡಲು ಉಪಯೋಗಿಸುತ್ತಾರೆ.

ಬಹುಮುಖ್ಯ ವಾದ ಎಚ್ಚರಿಕೆ :
ಅಂಕೊಲೆ ಇದು ಉಗ್ರ ಗಂಧ ದಲ್ಲಿ ಒಂದು. ಬೇರು ಮತ್ತು ಕಾಂಡ ಬಹಳ ತೀಕ್ಷ್ಣವಾದ ಗಂಧ. ಮೊದಲು ವಮನ (ವಾಂತಿ) ಆಗುತ್ತೆ. ಸ್ವಲ್ಪ ಹೆಚ್ಚು ಸೇವನೆ ಆದಲ್ಲಿ ಲಿವರ್ ಮತ್ತು ಕಿಡ್ನಿ ಮತ್ತು ಹಾರ್ಟ್ ಕಾರ್ಯ ನಿಲ್ಲಿಸುವುದು.
ಸಾವು ಖಚಿತ... ಅನುಭವಿ ನಾಟಿ ವೈದ್ಯರ ಸಲಹೆ ಪಡೆದು ಸೇವಿಸಬೇಕು. ಆದರೆ ಗಿಡಮೂಲಿಕೆಗಳ ಪರಿಣಾಮವು ವ್ಯಕ್ತಿಯ ದೇಹಪ್ರಕೃತಿ, ಪ್ರಮಾಣ, ಸಂಯೋಜನೆ ಮತ್ತು ಉಪಯೋಗ ವಿಧಾನಗಳ ಮೇಲೆ ಅವಲಂಬಿತವಾಗಿರುವುದರಿಂದ, ಅನುಭವಿಗಳ ಮಾರ್ಗದರ್ಶನದಲ್ಲಿ ಬಳಸುವುದು ಸೂಕ್ತ. ಅಂಕೋಲ ಮರವು ಕೇವಲ ಔಷಧೀಯ ಮೌಲ್ಯ ಹೊಂದಿದ ವೃಕ್ಷವಲ್ಲ; ಭಾರತೀಯ ತಾತ್ವಿಕ ಸಾಹಿತ್ಯದಲ್ಲಿಯೂ ಇದಕ್ಕೆ ಸ್ಥಾನವಿದೆ.
ಕೊನೆ ಮಾತು
ಪ್ರಕೃತಿ ನಮಗೆ ನೀಡಿರುವ ಅನೇಕ ಅಮೂಲ್ಯ ಔಷಧೀಯ ಸಂಪತ್ತಿನಲ್ಲಿ ಅಂಕೋಲ ಮರವು ಒಂದು ಮಹತ್ವದ ವೃಕ್ಷ. ಆದರೆ ಯಾವುದೇ ಗಿಡಮೂಲಿಕೆಯನ್ನು ಕೇವಲ ಕೇಳಿದ ಮಾಹಿತಿಯ ಆಧಾರದಲ್ಲಿ ಅತಿಯಾಗಿ ಬಳಸದೆ, ದೇಹದ ಸ್ಥಿತಿ, ರೋಗಸ್ವಭಾವ ಹಾಗೂ ಸರಿಯಾದ ವಿಧಾನ ಅರಿತು ಬಳಸುವುದು ಜಾಣ್ಮೆ. ನಮ್ಮ ಹಿರಿಯರ ಅನುಭವ ಮತ್ತು ಆಧುನಿಕ ಅಧ್ಯಯನ ಎರಡನ್ನೂ ಸಮತೋಲನದಿಂದ ನೋಡುವುದು ಇಂದಿನ ಅಗತ್ಯವಾಗಿದೆ.
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯೆರು.
