ಕೊರಿಯನ್ನರಲ್ಲಿ ಓದುವ ಅಭ್ಯಾಸ ಶುರು ಮಾಡಲು ಮತ್ತು ಬೆಳೆಸಲು ಎಪ್ರಿಲ್ – ಜೂನ್ ಮತ್ತು ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಓದುವ ಹಬ್ಬ ಆಚರಿಸುತ್ತಾರೆ, ಇದು ಇಲ್ಲಿನ ವಸಂತಕಾಲ ಮತ್ತು ಗ್ರೀಷ್ಮ ಋತುವಿನ ಕಾಲ, ಹೊರಾಂಗಣ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ್ದು, ಕೊರಿಯನ್‌ರ ಓದಿನ ಹಬ್ಬದ ಕುರಿತು ಕತೆಗಾರ್ತಿ ಗೀತಾ ಕುಂದಾಪುರ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇತ್ತೀಚೆಗೆ ಕೊರಿಯಾದ ʻಕೇ ಸಿರೀಸ್ʼ ಗುಂಗಿನಲ್ಲಿ ದಕ್ಷಿಣ ಕೊರಿಯಾಗೆ ಕಾಲಿಟ್ಟರೆ ನನ್ನನ್ನು ದಿಗ್ಭ್ರಮೆ ಗೊಳಿಸಿದ್ದು ಅಲ್ಲಿನ ʻರೀಡಿಂಗ್ ಫೆಸ್ಟಿವಲ್ʼ ಅಂದರೆ ʻಓದಿನ ಹಬ್ಬʼ. ಅಂತಹ ಹಬ್ಬದಲ್ಲಿ ವಯಸ್ಸಾದವರೇ ಕಾಣಿಸುತ್ತಾರೇನೋ ಎಂದುಕೊಂಡರೆ ಅದು ಸುಳ್ಳು; ಅಲ್ಲಿ ಕಂಡಿದ್ದು ಚಿಗುರು ಮೀಸೆಯ ಹುಡುಗರು, ಸ್ಟೈಲಿಶ್ ಕಾಲೇಜು ಹುಡುಗಿಯರು, ಮಗುವನ್ನೆತ್ತಿಕೊಂಡು ಬಂದ ಅಮ್ಮಂದಿರು. ವಿದೇಶಿಯರು ಕೊರಿಯಾದ ʻಕೇ ಪಾಪ್ ಸಿರೀಸ್ʼ ನೋಡುತ್ತಿದ್ದರೆ, ಕೊರಿಯನ್ನರು ಪುಸ್ತಕ ಹಿಡಿದು ಕುಳಿತಿದ್ದಾರಿಲ್ಲಿ!!
ಕೊರಿಯನ್ನರಲ್ಲಿ ಓದುವ ಅಭ್ಯಾಸ ಶುರು ಮಾಡಲು ಮತ್ತು ಬೆಳೆಸಲು ಎಪ್ರಿಲ್ – ಜೂನ್ ಮತ್ತು ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಓದುವ ಹಬ್ಬ ಆಚರಿಸುತ್ತಾರೆ, ಇದು ಇಲ್ಲಿನ ವಸಂತಕಾಲ ಮತ್ತು ಗ್ರೀಷ್ಮ ಋತುವಿನ ಕಾಲ, ಹೊರಾಂಗಣ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ್ದು. ವಾರಂತ್ಯದ ದಿನಗಳಾದ ಶುಕ್ರವಾರ, ಶನಿವಾರ ಮತ್ತು ಭಾನುವಾರದ ಸಂಜೆ ರಾಜಧಾನಿ ಸಿಯೋಲ್‌ನ ಪ್ರಮುಖ ಹೊರಾಂಗಣಗಳಲ್ಲಿ ಓದುವ ವ್ಯವಸ್ಥೆ ಮಾಡಿ ಓದಲು ಪ್ರೋತ್ಸಾಹಿಸುತ್ತಾರೆ. ಒಂದು ರೀತಿಯಲ್ಲಿ ಹಬ್ಬದ ವಾತಾವರಣ ನೋಡಬಹುದಿಲ್ಲಿ.

ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ 3 ಪ್ರಮುಖ ಲೈಬ್ರರಿಗಳಿವೆ, ʻನ್ಯಾಷನಲ್ ಲೈಬ್ರರಿ ಆಫ್ ಕೊರಿಯಾʼ, ʻಸ್ಟಾರ್ಫೀಲ್ಡ್ ಲೈಬ್ರರಿʼ, ʻಸಿಯೋಲ್ ಮೆಟ್ರೊಪೊಲಿಟಿನ್ ಲೈಬ್ರರಿʼ. ಓದುವ ಹಬ್ಬದ ವ್ಯವಸ್ಥೆ ಈ ಲೈಬ್ರರಿಯಗಳಾಗಿರುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಕೊರಿಯಾವು ದೇಶದ ಪ್ರಮುಖ ಲೈಬ್ರೆರಿ, ಇಲ್ಲಿ ಲಕ್ಷಗಟ್ಟಲೆ ದಾಖಲೆಗಳು, ವಿಭಿನ್ನ ಭಾಷೆಗಳ, ವಿಷಯಗಳ ಸಂಗ್ರಹಗಳಿವೆ. ಸಿಯೋಲ್‌ನ ಕೊಕ್ಸ್ ಮಾಲ್‌ನಲ್ಲಿರುವ ʻಸ್ಟಾರ್ ಫೀಲ್ಡ್ ಲೈಬ್ರೆರಿʼಯು ವಿಶ್ವದ ಅತ್ಯಂತ ಸುಂದರ ಲೈಬ್ರೆರಿ ಎಂದು ಗುರುತಿಸಲ್ಪಟ್ಟಿದೆ. 13 ಮೀಟರ್ ಎತ್ತರದ ಬುಕ್ ಶೆಲ್ಫ ಇಲ್ಲಿನ ಪ್ರಮುಖ ಆಕರ್ಷಣೆ. ಸಿಯೋಲ್ ಸಿಟಿ ಹಾಲ್ ಪಕ್ಕದಲ್ಲಿರುವ ಸಿಯೋಲ್ ಮೆಟ್ರೊಪೊಲಿಟಿನ್ ಲೈಬ್ರರಿಯಲ್ಲಿ ಸಾಕಷ್ಟು ವಿದೇಶಿ ಭಾಷೆಗಳ ಅದರಲ್ಲೂ ಇಂಗ್ಲೀಷ್ ಪುಸ್ತಕಗಳಿವೆ.
ಚಿಯೊಂಗ್ಗೀಚಿಯಾನ್ ಕಾಲುವೆಯ ಪಕ್ಕ, ಗಂಗ್ವಾಮುನ್ ಚೌಕ ಮತ್ತು ಸಿಯೋಲ್ ಪ್ಲಾಝಾ ಇವೇ ಪ್ರಮುಖ ಮೂರು ರೀಡಿಂಗ್ ಫೆಸ್ಟಿವಲ್‌ನ ಅಂಗಳ. ಚಿಯೊಂಗ್ಗೀಚಿಯಾನ್ ಕಾಲುವೆ ಪ್ರದೇಶವೇ ಚೆಂದ, ಕಾಲುವೆಯು ಸಿಯೋಲ್‌ನ ಮಧ್ಯೆಯೇ ಉದ್ದಕ್ಕೂ ಹರಿಯುತ್ತದೆ, ಇದಕ್ಕೆ ಮೆಟ್ಟಿಲುಗಳಿವೆ, ಇದರ ಗೋಡೆಗಳಲ್ಲಿಟ್ಟಿರುವ ಬಣ್ಣ ಬಣ್ಣದ ಹೂವಿನ ಗಿಡಗಳು ಜಾಗದ ಅಂದವನ್ನು ಹೆಚ್ಚಿಸಿವೆ. ಮೇ ತಿಂಗಳಲ್ಲೇ ಬುದ್ಧ ಪೂರ್ಣಿಮೆಯೂ ಇದ್ದು ಅದಕ್ಕಾಗಿ ಕಾಲುವೆಯ ಉದ್ದಕ್ಕೂ ಬಣ್ಣ ಬಣ್ಣದ ಗೂಡುದೀಪಗಳನ್ನು ತೂಗು ಬಿಟ್ಟಿರುತ್ತಾರೆ, ಇದರಿಂದಾಗಿ ಮೇ ತಿಂಗಳಲ್ಲಿ ನಡೆಯುವ ಓದಿನ ಹಬ್ಬವು ವಿಶೇಷ ಕಳೆಗಟ್ಟುತ್ತದೆ. ಪುಸ್ತಕ ಪ್ರೇಮಿಗಳು, ಓದುಗರೇ ಇಲ್ಲಿನ ವಿಶೇಷ ಅತಿಥಿ, ಅವರಿಗಾಗಿ ಮೆಟ್ಟಿಲಿನ ಮೇಲೆಯೇ ಬಣ್ಣ ಬಣ್ಣದ ಆಸನಗಳ ವ್ಯವಸ್ಥೆ, ಬುಕ್ ಶೆಲ್ಫ್, ದೀಪಗಳು, ಲೈವ್ ಮ್ಯೂಸಿಕ್ ಬ್ಯಾಂಡ್‌ನ ವಿಶೇಷ ವ್ಯವಸ್ಥೆ ಮಾಡಿರುತ್ತಾರೆ. ಇಂತಹ ಸುಂದರ ಜಾಗದಲ್ಲಿ, ಸಂಜೆಯ ಮಂದ ಮಾರುತದಲ್ಲಿ, ಪುಸ್ತಕದಲ್ಲಿ ಮುಖ ಹುದುಗಿಸಿ ಕೂತ ಪುಸ್ತಕ ಪ್ರೇಮಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಗಂಗ್ವಾಮುನ್ ಚೌಕವು ವಿಶಿಷ್ಟವಾದದ್ದು, ಇದು ಇತಿಹಾಸ ಮತ್ತು ಪ್ರಸ್ತುತವನ್ನು ಜೋಡಿಸುತ್ತದೆ. ಹೆದ್ದಾರಿಯ ನಡುವಿನಲ್ಲಿರುವ ಈ ಚೌಕದ ಶುರುವಿನಲ್ಲಿ ʻಜಿಯೊಂಗ್ಬೊಕ್ಗುಂಗ್ ಅರಮನೆʼ ಮತ್ತು ʻಬ್ಲೂ ಹೌಸ್ʼ ಇದೆ, ಕೊನೆಯಲ್ಲಿ ʻಅಡಮಿರಲ್ ಯಿ ಸನ್-ಸಿನ್ʼನ ಪ್ರತಿಮೆ ಇದೆ, ರಾಜ ʻಸೆಜೊಂಗ್ʼನ ಪ್ರತಿಮೆ ಮಧ್ಯದಲ್ಲಿದೆ. ಇದರ ಮಧ್ಯಭಾಗದಲ್ಲಿರುವ ಹುಲ್ಲು ಹಾಸೇ ರೀಡಿಂಗ್ ಫೆಸ್ಟಿವಲ್ ನಡೆಯುವ ಜಾಗ. ಬಣ್ಣ ಬಣ್ಣದ ಅಲೆಗಳ ಮಾದರಿಯಲ್ಲಿರುವ ಬಿನ್‌ಬ್ಯಾಗ್ ಆಸನಗಳು, ಪುಟ್ಟ ಟೇಬಲ್, ಪಕ್ಕದಲ್ಲಿ ಪುಸ್ತಕಗಳ ಶೆಲ್ಫ್, ಲೈವ್ ಮ್ಯೂಸಿಕ್, ಇಷ್ಟು ಸಾಕು.. ಎಲ್ಲರನ್ನೂ ಪುಸ್ತಕ ಪ್ರೇಮಿಗಳನ್ನಾಗಿಸಲು!!
ʻಸಿಯೋಲ್ ಪ್ಲಾಝಾʼದಲ್ಲಿ ನಡೆಯುವ ಹೊರಾಂಗಣ ಓದಿನ ಹಬ್ಬವೂ ಅತ್ಯಂತ ಜನಪ್ರಿಯ, ರಾತ್ರಿಯಲ್ಲೂ ದೀಪ ಉರಿಸಿಕೊಂಡು ಓದುತ್ತಾರಿಲ್ಲಿ.

ಮೇ ತಿಂಗಳಲ್ಲಿ ಸಿಯೋಲ್ಗೆ ಭೇಟಿ ಕೊಟ್ಟಾಗ ಚಿಯೊಂಗ್ಗೀಚಿಯಾನ್ ಕಾಲುವೆ ಪಕ್ಕದಲ್ಲಿ ಮತ್ತು ಗಂಗ್ವಾಮುನ್ ಚೌಕದಲ್ಲಿ ನಡೆದ ರೀಡಿಂಗ್ ಫೆಸ್ಟಿವಲ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಇಲ್ಲಿರುವ ಹೆಚ್ಚಿನ ಪುಸ್ತಕಗಳು ಕೊರಿಯ ಭಾಷೆಯಲ್ಲಿದ್ದರೂ, ಇಂಗ್ಲೀಷ್ ಪುಸ್ತಕಗಳೂ ಇವೆ.
ಜನರನ್ನು ಪುಸ್ತಕ ಪ್ರೇಮಿಗಳನ್ನಾಗಿಸುವ ಇಂತಹ ಹಬ್ಬಗಳು ಎಲ್ಲಾ ಕಡೆಯೂ ನಡೆಯಬೇಕು.
- ಗೀತಾ ಕುಂದಾಪುರ
