‘ಕುಬೇರನ ಗರ್ವಭಂಗ’ ಸಣ್ಣಕತೆ

ಕುಬೇರನಿಗೆ ತನ್ನ ಸಂಪತ್ತನ್ನೆಲ್ಲ ಗಣಪತಿಗೆ ತೋರಿಸುವ ಆಸೆ ಹುಟ್ಟಿತು, ಒಂದು ದಿನ ಗಣಪತಿಗೆ ಊಟಕ್ಕೆ ಮನೆಗೆ ಕರೆದ, ಮುಂದೇನಾಯಿತು ಲೇಖಕರಾದ ಚೇತನ ಭಾರ್ಗವ ಅವರ ಗಣಪತಿ ಹಾಗೂ ಕುಬೇರನ ಕತೆಯನ್ನು ಪೂರ್ತಿಯಾಗಿ ಓದಿ…

ಕುಬೇರ ಅಷ್ಟ ದೇವತೆಗಲ್ಲೊಬ್ಬ ಸಂಪತ್ತು, ಐಶ್ವರ್ಯದ ಅಧಿಪತಿ. ಆತನ ಖಜಾನೆ ಅಪ್ರತಿಮವಾಗಿತ್ತು. ಹೀಗಿರಲಾಗಿ ಒಮ್ಮೆ ಕುಬೇರನಿಗೆ ತನ್ನ ಸಂಪತ್ತಿನ ಬಗ್ಗೆ ಗರ್ವವುಂಟಾಯಿತು. ಎಲ್ಲರೂ ಆತನ ಸಂಪತ್ತನ್ನು ಹೊಗಳುವವರೇ. ಆತನಿಗೆ ತನ್ನ ಸಂಪತ್ತನ್ನು ಗಣಪತಿಗೆ ತೋರಿಸಿ ಪ್ರದರ್ಶನ ಮಾಡಿ ಆ ಮೂಲಕ ತನ್ನ ಶ್ರೀಮಂತಿಕೆಯನ್ನು ಬಾಲ ಬ್ರಹ್ಮಚಾರಿಯಾದ ಕೈಲಾಸವಾಸಿಯಾದ ಗಣಪನಿಗೆ ತೋರಿಸುವ ಉಮೇದು ಮೂಡಿತು. ಅದರಂತೆ ಗಣಪನನ್ನು ಭೋಜನಕ್ಕೆ ಆಮಂತ್ರಿಸಿ ಆತಿಥ್ಯ ನೀಡಿ ತನ್ಮೂಲಕ ತನ್ನ ವೈಭವದ ಪ್ರದರ್ಶನಕ್ಕೆ ಸಿದ್ಧನಾದ.

ಗಣಪತಿಗೆ ಕುಬೇರನ ಅರಮನೆಯಿಂದ ಆಮಂತ್ರಣ ಹೋಯಿತು. ಈತನ ಉದ್ದೇಶದ ಅರಿವಿದ್ದ ಗಣಪ ಶಿವ ಪಾರ್ವತಿಯರ ಆಶೀರ್ವಾದ ಪಡೆದು ಕುಬೇರನ ಅರಮನೆಗೆ ನಡೆದ. ಕುಬೇರನ ಜೊತೆಗೆ ಲೋಕಾಭಿರಾಮವಾಗಿ ಮಾತಾಡುತ್ತ ತಾನು ಆತಿಥ್ಯ ಸ್ವೀಕರಿಸುವೆನೆಂದು ಆದರೆ ತಾನು ಸಾಕು ಎನ್ನುವರೆಗೂ ತನಗೆ ಭೋಜನ ಬಡಿಸುತ್ತಲೇ ಇರಬೇಕೆಂದು ಕುಬೇರನಿಗೆ ಹೇಳಿದ. ಕುಬೇರನಿಗೆ ಇದೇನೂ ದೊಡ್ಡ ಬೇಡಿಕೆ ಎಂದೆನಿಸಲಿಲ್ಲ.

ಕುಬೇರ ತನ್ನ ಅರಮನೆಯ ವಿಶಾಲ ಜಗಲಿಯ ಮೂಲಕ ಗಣಪನನ್ನು ಭೋಜನಶಾಲೆಗೆ ಕರೆದೊಯ್ದ. ತನ್ನ ಬಗೆ ಬಗೆಯಾ ರತ್ನ ಖಚಿತ ಮೊಗಸಾಲೆ ಸಿಂಹಾಸನಗಳು ವಜ್ರ ವೈಡೂರ್ಯ  ಆಭರಣ ಎಲ್ಲವೂ ಕಣ್ಣಿಗೆ ಬೀಳುವ ಹಾಗೆ ಮಾಡಿ ರತ್ನಖಚಿತ ಚಿನ್ನದ ಮಣೆಯ ಮೇಲೆ ಗಣಪನನ್ನು ಕುಳ್ಳಿರಿಸಿ ತನ್ನವರಿಗೆ ಬಡಿಸಲು ಹೇಳಿದ.

ಬಗೆ ಬಗೆಯ ಭಕ್ಷಗಳನ್ನು ತಿನಿಸುಗಳನ್ನು ಹಣ್ಣು ಹಂಪಲುಗಳನ್ನೂ ಗಣಪನಿಗೆ ಬಡಿಸಲಾಯಿತು. ಗಣಪ ಅದನ್ನು ಒಂದೇ ಏಟಿಗೆ ತಿಂದು ಮುಗಿಸಿದ. ಮತ್ತೆ ಮತ್ತೆ ಪಾಕಶಾಲೆಯಲ್ಲಿದ್ದ ಎಲ್ಲಾ ತಿನಿಸುಗಳನ್ನೂ ಒಬ್ಬೊಬ್ಬರೇ ತಂದು ಬಡಿಸಿದರು. ಗಣಪ ಒಂದೊಂದು ಭಕ್ಷ್ಯಗಳನ್ನು ತರುವ ಹಾಗೆಯೇ ತನ್ನ ಸೊಂಡಿಲಿನಿಂದ ಎಳೆದುಕೊಂಡು ತಿಂದು ಮುಗಿಸುತ್ತಿದ್ದ. ಕುಬೇರನ ಪಾಕಶಾಲೆಯಲ್ಲಿದ್ದ ಎಲ್ಲಾ ತಿನಿಸು ಖಾಲಿಯಾಯಿತು. ತನ್ನ ಹಸಿವು ಇನ್ನೂ ನೀಗಿಲ್ಲ ಎಂದ ಗಣಪ ತನ್ನ ಸೊಂಡಿಲನ್ನು ನೀಳವಾಗಿಸಿ ಹ್ಞೂಕರಿಸಿದ. ಪಾಕಶಾಲೆಯ ಪಾತ್ರೆ ಪರಡಿ, ಸೌಟು, ಮಣೆ ಹೀಗೆ ಒಂದೊಂದೇ ತೇಲಿಬಂದು ಗಣಪನ ಹೊಟ್ಟೆಗೆ ಆಹುತಿಯಾದವು. ಅಲ್ಲಿಗೆ ನಿಲ್ಲದ ಗಣಪ ತನ್ನ ಸೊಂಡಿಲಿನಿಂದ ಎಲ್ಲವನ್ನೂ ಹೀರುತ್ತಾ ಕುಬೇರನ ಖಜಾನೆ, ಸಿಂಹಾಸನ, ಐಶ್ವರ್ಯಗಳನ್ನೆಲ್ಲ ಭುಜಿಸಲು ಆರಂಭಿಸಿದ.

ಕುಬೇರನಿಗೆ ತನ್ನ ತಪ್ಪಿನ ಹಾಗೂ ಗಣಪನ ಶಕ್ತಿಯ ಅರಿವಾಯಿತು. ತನ್ನ ಅಹಂಕಾರವನ್ನು ಮನ್ನಿಸಬೇಕು. ತನ್ನ ಗರ್ವಕ್ಕೆ ತಕ್ಕ ಶಾಸ್ತಿ ಆಯಿತೆಂದು ಪಶ್ಚಾತ್ತಾಪ ಪಡುತ್ತಾ ಗಣಪನ ಕಾಲಿಗೆ ಬಿದ್ದ. ಗಣಪ ನಗುತ್ತ ಸಂಪತ್ತಿನ ಅಧಿದೇವತೆಯಾದ ನಿನಗೆ ಅಹಂಕಾರ ಸಲ್ಲದು. ಇನ್ನಾದರೂ ಈ ಗರ್ವ ತ್ಯಜಿಸಿ ಲೋಕದ ಹಿತಕ್ಕೆ ಗಮನ ಹರಿಸಬೇಕೆಂದು ಹಿತವಚನ ಹೇಳುತ್ತಾ ಅವನಿಗೆ ಹರಸಿ ಕೈಲಾಸಕ್ಕೆ ತೆರಳಿದ.


  • ಚೇತನ ಭಾರ್ಗವ – ಅರಮನೆ ತೋಟ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading