‘ಅಪಾರ್ಥಗಳ ಆಚೆ’ ಕವನ

ರಕ್ತ ಒಂದೇ ಆದರೂ ನರನಾಡಿಗಳಲ್ಲಿ ಹರಿಯುತ್ತಿರುವುದು ಈಗ ನಿಶ್ಶಬ್ದವಷ್ಟೇ … ಕವಿ ರಾಜಾಬಾಬು ಕಂಚರ್ಲ ಅವರ ತೆಲುಗು ಅನುವಾದಿತ ಕವಿ ಧನಪಾಲ‌ ನಾಗರಾಜಪ್ಪ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ತೆಲುಗು ಮೂಲ : ರಾಜಾಬಾಬು ಕಂಚರ್ಲ


ನಾವಾಡದ ಮಾತುಗಳಿಗೆ
ನೀವು ಶಿಕ್ಷೆ ವಿಧಿಸಿದಿರಿ
ಮನಸ್ಸಲ್ಲಿಲ್ಲದ ಭಾವಗಳಿಗೆ
ನಮ್ಮನ್ನು ದೋಷಿಗಳಾಗಿಸಿದಿರಿ
ಏನೋ ಹೇಳಿದೆವೆಂದು ಭಾವಿಸಿದಿರಿ

ಆದರೆ…
ನಾವು ಹೇಳಬೇಕೆಂದಿದ್ದದ್ದು
“ಹೇಗಿದ್ದೀರಿ?” ಎಂಬ
ಒಂದು ಮಾತಷ್ಟೇ
ರಕ್ತ ಒಂದೇ ಆದರೂ
ನರನಾಡಿಗಳಲ್ಲಿ ಹರಿಯುತ್ತಿರುವುದು ಈಗ
ನಿಶ್ಶಬ್ದವಷ್ಟೇ

ಒಂದು ಕಾಲದಲ್ಲಿ
ಒಂದೇ ತಟ್ಟೆಯಲ್ಲಿ
ಅನ್ನ ಹಂಚಿಕೊಂಡಿದ್ದ ಕೈಗಳು
ಇಂದು ಒಬ್ಬರ ನೆರಳು
ಇನ್ನೊಬ್ಬರಿಗೆ ಸೋಕುತ್ತಿಲ್ಲ

ಬಾಲ್ಯದ ನಮ್ಮ ನಲಿದಾಟಗಳು
ಮನೆಯ ಗೋಡೆಗಳ ಮೇಲೆ
ಇನ್ನೂ ಪ್ರತಿಧ್ವನಿಸುತ್ತಲೇ ಇವೆ
ಆದರೆ…
ನಮ್ಮ ಹುಸಿ ದೊಡ್ಡಸ್ಥಿಕೆ

ಆ ನಲಿದಾಟಗಳಿಗೆ ಬೀಗ ಜಡಿದಿದೆ
ಸಂಬಂಧಗಳನ್ನು ಮುರಿಯುವುದು ದ್ವೇಷವಲ್ಲ
ಗಾಳಿಮಾತುಗಳನ್ನು ಕೇಳಿ ಕೆರಳುವುದು
ಪ್ರೀತಿಯನ್ನು ಸೋಲಿಸುವುದು ವೈರತ್ವವಲ್ಲ
ಅಪಾರ್ಥವನ್ನೇ ನಿಜವೆಂದು ನಂಬುವುದು

ಒಂದು ಸಲ…
ಮನಸ್ಸಿನ ಮುಂದೆ ನಿಂತು
ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳೋಣ
ನಿಜವಾಗಿಯೂ ಇಷ್ಟು ದೂರಾಗಬೇಕಾದಷ್ಟು
ದೊಡ್ಡ ತಪ್ಪಾಗಿದೆಯಾ?
ಅಥವಾ…
ಯಾರೋ ಹೇಳಿದ ಮಾತುಗಳನ್ನು
ನಮ್ಮ ರಕ್ತಕ್ಕಿಂತಲೂ ಹೆಚ್ಚು
ನಂಬಿಬಿಟ್ಟೆವಾ?
ಜೀವನ ತುಂಬಾ ಚಿಕ್ಕದು…

ಇಂದು ಇರುವವರು ನಾಳೆ ಇಲ್ಲವಾಗಬಹುದು
ಕಡೆಯದಾಗಿ ಒಮ್ಮೆ ನೋಡಬೇಕೆಂದುಕೊಂಡಾಗ
ನೋಡಲು ಆ ವ್ಯಕ್ತಿಯೇ ಇಲ್ಲದಿದ್ದರೆ
ಕಡೆಯದಾಗಿ ಒಮ್ಮೆ ಮಾತಾಡಬೇಕೆಂದುಕೊಂಡಾಗ
ಮಾತಾಡಲು ಆ ವ್ಯಕ್ತಿಯೇ ಇಲ್ಲದಿದ್ದರೆ
ಆಗ ಉಳಿಯುವುದು

ಬರೀ ಪಶ್ಚಾತ್ತಾಪವೇ
ಅದಕ್ಕೇ…
ಅಹಂಕಾರ, ಅಪಾರ್ಥಗಳನ್ನು ಬಿಟ್ಟು
ಆತ್ಮೀಯತೆ, ಆತ್ಮಬಂಧವನ್ನು
ಗೆಲ್ಲಿಸೋಣ

ರಕ್ತ ದೇಹವನ್ನಷ್ಟೇ ಬದುಕಿಸುವುದು
ರಕ್ತಸಂಬಂಧಿಗಳ ನಡುವಿನ ಪ್ರೀತಿ
ಆ ಕುಟುಂಬಗಳ ನಡುವಿನ ಸಂಬಂಧಗಳನ್ನು ಬದುಕಿಸುವುದು
ಸಂಬಂಧಗಳೆಂದೂ ಮುರಿದುಹೋಗುವುದಿಲ್ಲ
ಮನಸ್ಸುಗಳೇ ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತವೆ

ಆ ಬಾಗಿಲುಗಳನ್ನು ತೆರೆಯಲು ಇಷ್ಟು ಪ್ರೀತಿಯೇ ಸಾಕು


  • ಕನ್ನಡಾನುವಾದ : ಧನಪಾಲ ನಾಗರಾಜಪ್ಪ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading