ನಾನು ವಿಪರೀತ ಮಳೆಗೆ ಬಲಿಯಾಗಿ ನೆಗಡಿಯಿಂದ ಶಾಲೆಯಲ್ಲಿ ಪಾಠ ಮಾಡಲಾಗದೆ, ಒಂದು ವಾರ ರಜೆ ಪೆಡೆದಿದ್ದೆ. ನೆಗಡಿ ಹೇಗೆ ಬಂತೆಂದರೆ ಅದೊಂದು ದಿನ ಶಾಲೆ ಮುಗಿಸಿಕೊಂಡು ಬರುವಷ್ಟರಲ್ಲಿ ಮಳೆಯಲ್ಲಿ ತೊಯ್ದು ಇಡಿ ಮೈ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಆಗುವಂತೆ ಆಗಿತ್ತು. ಶಿಕ್ಷಕರಾದ ಶಂಕರಾನಂದ ಹೆಬ್ಬಾಳ ಅವರು ಶೀತೋಪಾಖ್ಯಾನ ಕುರಿತು ಹಂಚಿಕೊಂಡ ಲೇಖನವನ್ನು ತಪ್ಪದೆ ಮುಂದೆ ಓದಿ…
ನೆಗಡಿ ಸಾಮಾನ್ಯವಾಗಿ ಬರುವ ಕಾಯಿಲೆ. ಬಂದರೆ ತಿಂಗಳಗಳ ಕಾಲ ಹೋಗದೆ ಶರೀರದಲ್ಲಿ ಖಾಸಾ ಗೆಳೆಯನಂತೆ ಜಾಂಡಾ ಊರುತ್ತದೆ. ನೆಗ್ಲೆಕ್ಟ ಮಾಡಿದರೆ ಬೇಗನೆ ವಾಸಿಯಾಗದೆ ಉಳಿದುಬಿಡುತ್ತದೆ. ಮಳೆಗಾಲದಲ್ಲಿ ಜಾಸ್ತಿ ತೋಯಿಸಿಕೊಂಡು ಬಂದರೆ ಹಾಗೂ ನೀರಿನಲ್ಲಿ ನೆನೆದರೆ ಶೀತವಾಗುವ ಸಂಭವ ಜಾಸ್ತಿಯಿರುವ ಕಾರಣ ತಾಯಂದಿರು ಮಕ್ಕಳಿಗೆ ಶೀತವಾಗುತ್ತದೆ ಬಾರೋ ಎಂದು ಮಗುವಿಗೆ ಪದೆ ಪದೆ ಹೇಳುವಲ್ಲಿ ಮಾತೃವಿನ ಆಜ್ಞೆಯನ್ನು ಪಾಲಿಸದೆ ಶೀತಕ್ಕೆ ಬಲಿಯಾದದ್ದು ನೆನಪಿಗೆ ಬರುತ್ತದೆ.
ಈ ನೆಗಡಿಗೆ ಕಾರಣ ರೇನೋವೈರಸ್, ಕೋರೋನಾವೈರಸ್, ಅಡೆನೊವೈರಸ್,ಎಂಟೆನಾ ವೈರಸ್ ಹೀಗೆ ವೈರಸನ ಇನ್ಪೆಕ್ಷನದಿಂದ ನೆಗಡಿ ಬರುತ್ತದೆ. ಇದಕ್ಕಾಗಿ ಯಾವುದೆ ಚಿಕಿತ್ಸೆಗಳಿರದೆ ಆ್ಯಂಟಿಬಯಾಟಿಕ ಹಾಗೂ ನೋವುನಿವಾರಕ ಮಾತ್ರೆಗಳನು ಕೊಟ್ಟು ಕಡಿಮೆ ಮಾಡಬಹುದು. ಈ ನೆಗಡಿ ಮಳೆಗಾಲದಲ್ಲಿ ಅತಿಹೆಚ್ಚು ಕಂಡುಬರುತ್ತದೆ.
ನಾನು ಶಹಬಾದನಲ್ಲಿ ನೌಕರಿ ಮಾಡುವ ಸಂದರ್ಭದಲ್ಲಿ ಒಮ್ಮೆ ನನಗೂ ನೆಗಡಿಯಾಗಿತ್ತು. ಶ್ರಾವಣದಲ್ಲಿ ವಿಪರೀತ ಮಳೆಯಿಂದ ನೆಗಡಿಗೆ ನಾನು ಬಲಿಯಾಗಿ ಪಾಠಕ್ಕೆ ತಿಲಾಂಜಲಿ ಇತ್ತು ಒಂದು ವಾರ ರಜೆ ಪೆಡೆದಿದ್ದೆ. ನೆಗಡಿ ಹೇಗೆ ಬಂತೆಂದರೆ ಅದೊಂದು ದಿನ ಶಾಲೆ ಮುಗಿಸಿಕೊಂಡು ಬರುವಷ್ಟರಲ್ಲಿ ಮಳೆಯಲ್ಲಿ ತೊಯ್ದು ಇಡಿ ಮೈ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಆಗುವಂತೆ ಆಗಿತ್ತು. ನಂತರ ಬಟ್ಟೆ ಬದಲಿಸಿ ಮರುದಿನ ಆಸ್ಪತ್ರೆಗೆ ಹೋದೆ. ಚೀಟಿ ಮಾಡಿಸಿ ಕುಳಿತೆ ಕಂಪೌಂಡರ ಬಂದು ಸರ್ ಜೀ “ಡಾಕ್ಟರ್ ಸಾಬ್ , ಬುಲಾವ್ ಅಂದರ್ ಆ ಜಾವೋ ಸಾಬ್, ಎಂದ ನನಗೋ ಯಾವ ದೇಶದಲ್ಲಿದ್ದೀನಿ ಎಂದು ದಿಕ್ಕು ತಪ್ಪಿತು. ನಾನೋ ಪಕ್ಕಾ ಕನ್ನಡಿಗ ಅದರಲ್ಲೂ ಕನ್ನಡ ಮಾಸ್ತರ ಏನು ಮಾಡಬೇಕೆಂದು ಗೊತ್ತಾಗದೆ ಡಾಕ್ಟರ್ ಎದುರು ಕುಳಿತೆ, ಡಾಕ್ಟರ್ ಬೋಲೋ ಜಿ “ಆಪಕೂ ಕ್ಯಾ ಹುವಾ…ಎಂದ ನಾನು ಕಕ್ಕಾಬಿಕ್ಕಿಯಾಗಿ ನನಗ ನೆಗಡಿ ಬಂದದ ರೀ ಎಂದೆ ಆತನಿಗೆ ಗೊತ್ತಾಗಲಿಲ್ಲ. ಅದೇ ಕ್ಷಣದಲ್ಲಿ ಜೋರಾಗಿ ಆ……..ಕ್ಷಿ…..ಸೀನಿದೆ ಪಕ್ಕದಲ್ಲಿದ್ದ ಕಂಪೌಂಡರ್ ಗೊತ್ತಾಗಿ ಸಾಬ್ ಏ ಆದಮಿ ಕೋ ಸರ್ದಿ ಆ ರಹಾ ಹೈ ಎಂದ, ಟೀಕ ಹೈ ,ಎಂದು ಒಂದೆರಡು ಗೋಲಿ ಬರೆದು ಕೊಟ್ಟ ಗೋಲಿ ಎಂದರೆ ಆಡುವ ಗೋಲಿಯಲ್ಲ ಗುಳಿಗೆಗಳಿಗೆ ಆ ಊರಿನಲ್ಲಿ ಗೋಲಿ ಎನ್ನುವುದು ವಾಡಿಕೆ. ಚೀಟಿಯಲ್ಲಿ ನೋಡಿ “ಸುಬಹ ಏಕ , ದೋಹಪರ್ ಏಕ್ , ರಾತ್ ಕೋ ಏಕ್ ಗೋಲಿ ಲೇಲೋ” ಎಂದು ಹೇಳಿ ಕಳಿಸಿದ ಹೇಗೋ ಹಣಕ್ಕೊಟ್ಟು ಅಲ್ಲಿಂದ ಮತ್ತ ಬರತೇನರಿ ಸರ್ ಎಂದು ಹೊರಬಂದೆ.

ಫೋಟೋ ಕೃಪೆ : ಅಂತರ್ಜಾಲ
ಸೀನಿ ಸೀನಿ ನನ್ನ ಮೂಗು ಒಂದು ರೀತಿ ಮೆತ್ತಗಿನ ಬೇಸನ ಉಂಡೆತರ ಆಗಿತ್ತು.ಆಗ ಒಂದು ನಾನೆ ಬರೆದ ಒಂದು ಹಾಡು “ಸೋರತೈತಿ ನನ್ನ ಮೂಗ,ಕೆಂಪಗಾಗಿ ಅದರ ಜಾಗ ತಿಂಗಳತನಕ ಕಾಡುವ ರೋಗ,ಕಡಿಮೆಯಾಗೋದಿಲ್ಲ ಬೇಗ” ಎಂದು ಗುನುಗುತಿರುವಾಗಲೆ ಮನೆಯೆ ನಡುಗುವಂತೆ ಹೈ…ಹೈ ಎನ್ನುತ್ತ ಓಡುವ ಕುದುರೆಯಂತೆ ಮತ್ತೊಂದು ಸೀನು ಬಂತು…ನನ್ನ ಸೀನಿಗೆ ಓಣಿಯಲ್ಲಿ ಭೂಕಂಪವೆ ಆಯಿತೇನೋ ಎನ್ನುವಂತೆ ಸೀನು ಜೋರಾಗಿ ಬಂದಿತ್ತು. ಎಲ್ಲರೂ ಗಾಬರಿಯಾಗಿ ಏನಾಯಿತು ಎಂದು ಹೊರಬಂದು ನೋಡಿ ” ಯಾಕ್ರಿ ಮಾಸ್ತರಗ ಏನಾಗೇತಿ ಅಂದಾಗ ನಮ್ಮಾಕಿ ನೆಗಡಿ ಬಂದದರೀ ಕಡಿಮೀನ ಆಗುವಲ್ದು “ಅಂದುಆ ಚಾಪ್ಟರ್ ಕ್ಲೋಸ್ ಮಾಡಿದ್ಲು. ನಂತರ ಲೆಕ್ಕವಿಲ್ಲದಷ್ಟು ಸೀನುಗಳು ಬರುತ್ತಲೆ ಇದ್ದವು, ಬಹುಶ ಬರೆದರೆ ಶ್ರೀನಿವಾಸನ ಸಹಸ್ರನಾಮದ ಬದಲು ಸೀನಿನ ಸಹಸ್ರನಾಮವೇ ಆಗಬಹುದಿತ್ತೇನೋ ಎನ್ನುವಷ್ಟು ಉಂಟಾಗಿತ್ತು. “ಸಾಕಪ್ಪಾ ಈ ಸೀನಿನ ಸಹವಾಸ ಕಾಪಾಡೋ ಶ್ರೀನಿವಾಸ ” ಸಾಕೆಂದು ಮನೆಗೆ ಬಂದು ಶುಂಠಿ ಚಹಾ ಕುಡಿದು ಸ್ವಲ್ಪ ವಿಶ್ರಾಂತಿ ಪಡೆದೆ. ಮರುದಿನ ಮುಖಕ್ಕೆ ಸ್ಕಾರ್ಪ ಸುತ್ತಿಕೊಂಡು ಹೋದಾಗ ಢಾಕುನ ತರ ನೋಡುತಿದ್ದರು. ಮಕ್ಕಳೆಲ್ಲ ಯಾರೋ ಮಕ್ಕಳ ಕಳ್ಳ ಬಂದಾನಂತ ರಂಪಾಟ ಮಾಡಿದ್ರು.ಅಮ್ಯಾಲೆ ಗೊತ್ತಾತು ನಾನು ಅವರ ಕನ್ನಡ ಮಾಸ್ತರಂತ. ಆ ಮ್ಯಾಲ ಒಳಾಗ ಹೋಗಿ ನಾನ್ರಿ ಕನ್ನಡ ಸರ್ ಅಂದಾಗ ಅವ್ರು, ಯಾಕ್ರಿ ಹಿಂಗ್ಯಾಕ ಬಂದೀರಿ ಅಂದ್ರು ಸರ್ ನೆಗಡಿ ಸಲಾಗಿ ಇನ ನಾಕದಿನ ರಜಾ ಕೊಡ್ರಿ ಅಂದಾಗ ಕೊನಿಗಿ ಹೆಡಮಾಸ್ತರವರ ಕೃಪಾದಿಂದ ಮತ್ತ ನಾಕದಿನ ರಜಾಸಿಕ್ತು. ಒಟ್ಟ ನೆಗಡಿ ಫಜೀತಿ ಫಜೀತಿ ಮಾಡೇತಿ.
ನಮ್ಮಜ್ಜಿ ಕಾಲದ ಗಾದೆಮಾತು “ನೆಗಡಿಯಂತ ಜಡ್ಡಲ್ಲ ಬುಗುಡಿಯಂತ ಕಡ್ಡೆಲ್ಲ” ಯಾವುದಾದರೂ ಆಭರಣ ಮಾಡಿಸಿದರೆ ಆ ಆಭರಣ ಕಿವಿಯ ಬುಗುಡಿಕಡ್ಡಿಗೆ ಹೋಲಿಕೆ ಮಾಡಲು ಅಸಾಧ್ಯ,ಆದರೆ ಬೇಕಾದ ಕಾಯಿಲೆಗಳು ಬಂದರೂ ಅದು ನೆಗಡಿಯಷ್ಟು ಕಿರಿಕಿರಿಮಾಡಲು ಸಾಧ್ಯವಿಲ್ಲ, ಇಡಿ ಮೂಗು ಕೆಂಪಗಾಗಿ ಒಂದೆ ಸವನೆ ಮೂಗಿನಿಂದ ಸಿಂಬಳ ಧಾರಾಕಾರವಾಗಿ ಇಳಿಯುತಿರುತ್ತದೆ. ಆದರೆ ಅದು ಬಂದಾಗುವುದು ತಿಂಗಳುಗಟ್ಟಲೆ ಬೇಕು.ಆ ಸೋರಿದ ಜಾಗ ನಿರಂತರ ಸಿಂಬಳ ಸೋರಿ ಪಾಚಿಕಟ್ಟಿದಂತೆ ಆಗಿರುವಂತೆ ಮತ್ತಿಷ್ಟು ನೋವನ್ನುಂಟು ಮಾಡುತ್ತದೆ. ಮೂಗನ್ನೆ ಕಿತ್ತು ತಗೆದುಬಿಡಲೆ ಎನ್ನುವಷ್ಟರ ಮಟ್ಟಿಗೆ ಸಾಕಾಗಿರುತ್ತದೆ. ಯಾಕಾದರೂ ನೆಗಡಿ ಬರುತ್ತದೆ, ಅಥವಾ ನನಗೆ ಹೀಗಾಗುತ್ತದೆಯೋ ಎನ್ನುವಂತೆ ಮಾಡಿದೆ.ಏನೆ ಆಗಲಿ ನೆಗಡಿಗೆ ನೆಗಡಿಯೆ ಸಾಟಿ.
ತೆನಾಲಿರಾಮ ವಿಕಟಕವಿಯಾಗುವುದಕ್ಕಿಂತ ಮುಂಚೆ ಒಮ್ಮೆ ಕಾಳಿದೇವಿಯ ದೇವಸ್ಥಾನದಲ್ಲಿ ತಂಗಿದ್ದ. ಅಲ್ಲಿ ಸುಮಾರು ಜನ ಬೇಟೆಯನ್ನಾಡಿ ಆ ದೇವಿಗೆ ಕುರಿಯನ್ನು ಬಲಿಕೊಡಲು ಮುಂದಾದಾಗ ತೆನಾಲಿರಾಮ ಅದನ್ನು ಖಂಡಿಸಿ,ಮೂಕ ಪ್ರಾಣಿಯ ಜೀವ ಉಳಿಸಿದ್ದ. ಅದೇ ದಿನ ರಾತ್ರಿ ದೇವಿ ಪ್ರತ್ಯಕ್ಷವಾಗಿ ದೇವಿಯು ತನ್ನ ಉಗ್ರರೂಪ ತೋರಿದಾಗ ತೆನಾಲಿರಾಮನಿಗೆ ಭಯವಾಗುವ ಬದಲು ನಗುಬಂತು,ದೇವಿ ಕೇಳಿದಳು ” ವತ್ಸಾ,ಎಲ್ಲರೂ ನನ್ನ ರೂಪ ನೋಡಿ ಹೆದರಿದರೆ ನೀನು ನಗುತ್ತಿರುವೆ, ಕಾರಣವೇನು? ಎಂದಾಗ ತೆನಾಲಿರಾಮ “ತಾಯಿ, ನಮಗೆ ಒಂದು ತಲೆಯಿಂದಲೆ ನೆಗಡಿ ಬಂದರೆ ತಡೆದುಕೊಳ್ಳಾಗುವುದಿಲ್ಲ ಅಂತಹದರಲ್ಲಿ ನಿನಗೆ ಎಷ್ಟೊಂದು ತಲೆಗಳು ಯಾವ ಕೈಯಿಂದ ಯಾವ ಮೂಗನ್ನು ಒರೆಸಿಕೊಳ್ಳುವೆ ” ಎಂದು ನೆನೆದು ನಗುಬಂತು. ಆಗ ದೇವಿಗೆ ಸಿಟ್ಟಿನ ಬದಲು ನಗುಬಂತು ದೇವರ ಮೇಲೆ ಹಾಸ್ಯವನ್ನು ಸೃಷ್ಟಿಸಿದ ನಗೆಗಾರ ನೀನು ಎಂದು ಒಂದು ಕೈಯಲ್ಲಿ ಹಾಲನ್ನು ಇನ್ನೊಂದು ಕೈಯಲ್ಲಿ ಅಮೃತವನ್ನು ಹಿಡಿದು ಯಾವುದು ಬೇಕೆಂದಾಗ ಎರಡನ್ನು ಪಡೆದುಕೊಂಡು ಎರಡು ಒಂದರಲ್ಲಿ ಕಲೆಸಿ ಕುಡಿದುಬಿಟ್ಟ ಅಂದಿನಿಂದ ವಿಕಟಕವಿಯಾದದ್ದು ಇದೆ ನೆಗಡಿಯಿಂದಲೆ ಎನ್ನುವುದು ವಿಶೇಷ.
ನೆಗಡಿ ಬಂತೆಂದರೆ 38.5 ಡಿಗ್ರಿ ಜ್ವರದೊಂದಿಗೆ ಕೆಮ್ಮು ಹಾಗೂ ಮೈಕೈ ಬೇನೆಯೊಂದಿಗೆ ಆರಂಭವಾಗುತ್ತದೆ. ಗಂಟಲಿನಲ್ಲಿ ಕಿರಿಕಿರಿ ಮತ್ತು ಪದೆಪದೆ ಮೂಗುಕಟ್ಟುವಿಕೆಯಿಂದಾಗಿ ನೆಗಡಿಯಿಂದ ಮೂಗಿನ ಸ್ಥಿತಿ ಅಧೋಗತಿಗೆ ಇಳಿಯುತ್ತಿದೆ.
ಯಾವ ಮಾತ್ರೆಯಿಂದಲೂ ಬೇಗ ಕಡಿಮೆಯಾಗದೆ ಗೋಳಿಡುವ ಸ್ಥಿತಿ ಎದುರಾಗುತ್ತದೆ. ಟಿ ವಿ ಚಾನಲ್ಲನಲ್ಲಿ ಮೆಡಿಕಲ್ ಶಾಪನಲ್ಲಿ ಕೆಲಸ ಮಾಡುವ ಒಬ್ಬ ವ್ಯೆಕ್ತಿಗೆ ವಿಪರೀತ ನೆಗಡಿ,ಕೆಮ್ಮು ಉಂಟಾಗಿ ಕೂಡಲೆ ವಿಕ್ಸ ಆ್ಯಕ್ಷನ್ 500 ಗುಳಿಗೆ ನುಂಗಿದಾಗ ಆಗ ನೆಗಡಿ ಮಟಮಾಯವಾಗುವ ದೃಶ್ಯ ನಿಜಕ್ಕೂ ನಗು ತರಿಸುತ್ತದೆ.
ನೆಗಡಿಯನ್ನು ವಾಸಿಮಾಡುವ ಮನೆಮದ್ದುಗಳೆಂದರೆ ಮೊದಲು ಕಟ್ಟಿದ ಮೂಗಿನಿಂದ ಪರಿಹಾರ ಮಾಡಲು ಮೊದಲಿಗೆ ತಲೆಮೇಲೆ ಟವಲ್ಲನು ಹಾಕಿಕೊಂಡು ಬಿಸಿನಿರೀನ ಪಾತ್ರೆಯಲಿ ಬರುವ ಹೊಗೆಯನ್ನು ತಗೆದುಕೊಂಡರೆ ಸ್ವಲ್ಪ ನಿರಾಳವಾಗುತ್ತದೆ, ಶುಂಠಿ ಕಷಾಯ ಸೇವನೆಯಿಂದ ಗಂಟಲಿಗೆ ವಿಮುಕ್ತಿ ದೊರಕುತ್ತದೆ. ಅರಿಶೀನದ ಹಾಲನ್ನು ಸೇವಿಸುವುದು
ಇದರಿಂದ ನೆಗಡಿಗೆ ಉಪಶಮನ ಸಿಗುತ್ತದೆ. ಉಗುರು ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸುವುದು ಗಂಟಲನು ಸರಳವಾಗಿಸುತ್ತದೆ.
ಕಾಯ್ಕಿಣಿಯವರು ಬರೆದ ಮುಂಗಾರು ಮಳೆ ಚಿತ್ರದ ಹಾಡು “ಇಳಿದು ಇಳಿದು ಬಂತು ಮೂಗ್ನಲ್ಲಿ ತುಂಬಿ ಬಂತು ಬೇಡ ಅಂದ್ರೂ ಜೋರಲಿ ಇಳಿತು ನೀನೆ ಸಿಂಬಳ ನೀನೆ ಸಿಂಬಳ” ಆಹಾ ಎಂದು ನೆಗಡಿ ಆದರೆ ಈ ರೀತಿ ಹಾಡು ಕೂಡಿಸುತ್ತಿದ್ದರೇನು ಅಷ್ಟು ಪವಾಡವನ್ನೆ ಸೃಷ್ಟಿಸುತ್ತದೆ. ಇನ್ನು ಸಂಗೀತಗಾರರಿಗೆ ಏನಾದರೂ ನೆಗಡಿ ಬಂದರೆ ಸ್ವರಾಭ್ಯಾಸ ಮಾಡುತ್ತ ಏನೇನೂ ಹಾಡಲಾಗುವದಿಲ್ಲ ಅಷ್ಟು ಸಂದಿಗ್ದ ಪರಿಸ್ಥಿತಿ ತಂದಿಡುತ್ತದೆ.
ನಮಗೆ ಇಷ್ಟು ಕಾಡುವ ಈ ನೆಗಡಿ ಮಕ್ಕಳ ವಿಷಯದಲ್ಲಿ ಸ್ವಲ್ಪ ಅಸಡ್ಡೆ ಮಾಡಿದರೆ ಬೇಗ ಕಡಿಮೆಯಾಗದೆ ದೀರ್ಘಕಾಲ ಕಾಡುತ್ತದೆ. ಒಮ್ಮೆ ನಮ್ಮ ಪಕ್ಕದ ಮನೆಯ ಆಂಟಿಯ ಮೂರು ವರ್ಷದ ಹಾಗೂಓಣಿಯ ಇತರ ಮಕ್ಕಳಿಗೆ ನೆಗಡಿಯಾಗಿ ಮೂಗು ಸೋರುತಿತ್ತು. ನಾನು ಕಾಲೇಜು ಮುಗಿಸಿಕೊಂಡು ಬರುವಾಗ ನಮ್ಮ ಮನೆ ಮುಂದೆ ಆಟದಲ್ಲಿ ನಿರತರಾದ ಮಕ್ಕಳು ಮೂಗಿನಿಂದ ಇಳಿವ ಸಿಂಬಳವನ್ನು ಲೆಕ್ಕಿಸದೆ ಆಟದಲ್ಲಿ ಮಗ್ನರಾಗಿದ್ದರು. ನಾನು ತಮಾಷೆಗೆ ” ಲೇ ಮುಗನ್ಯಾಂದು ತುಪ್ಪ ಕೆಳಾಗ ಬಿಳತೇತಲೆ ಅಂದಾಗ” ಬಿದ್ರ ನಡಿತೇತಾಳರೀ ಸರಾ ಎಂದು ಮರುತ್ತರ ಕೊಟ್ಟಿದ್ದು, ಇನ್ನೊಂದು ಮಗುವಿನ ಮೂಗಿನಲ್ಲಿ ಸಿಂಬಳ ಇಣುಕಿ ಇಣುಕಿ ನೋಡಿ ಬಲೂನಿನಂತೆ ಉಬ್ಬಿ ಒಳಗೆ ಹೊರಗೆ ಹೋಗುತ್ತಿದ್ದದ್ದು ನೋಡಿ ಮೂಗನ್ಯಾಗ ಲೈಟ ಹತ್ತಕತ್ತತ್ತಲೇ ಅಪ್ಪಿ ಅಂದಾಗ ಆ ಚಾಲಾಕ ಹುಡುಗ ನಿಮ್ಮನ್ಯಾಗ ಲೈಟ ಇರಲಾರ್ದಾಗ ಹಚ್ಚಕೋರಿ ಎಂದು ಓಡಿಬಿಟ್ಟ ಭೂಪ, ಆ ದೃಶ್ಯ ನೆನೆದು ನನಗೆ ಈಗಲೂ ನಗು ಬರುತ್ತಿದೆ.
ಒಟ್ಟಿನಲ್ಲಿ ನೆಗಡಿ ಬಂತೆಂದರೆ ಬೆನ್ನಿಗೆ ಬಿದ್ದ ಭೂತದಂತೆ ಅದು ಬಿಡೋದಿಲ್ಲ ಬದಲಾಗಿ ನಾವೆ ಬಿಡಿಸಿಕೊಳ್ಳಬೇಕು. ಒಳ್ಳೆಯ ವೈದ್ಯರನ್ನು ಸಂಪರ್ಕ ಮಾಡಿ ಆದಷ್ಟು ಬೇಗನೆ ವಾಸಿಕೊಂಡು
ಆರೋಗ್ಯ ಚೆನ್ನಾಗಿ ನೋಡಿಕೊಂಡು ಶೀತೋಪಾಖ್ಯಾನವನ್ನು ಮುಗಿಸೋಣ.
- ಶಂಕರಾನಂದ ಹೆಬ್ಬಾಳ
