‘ಅತಂತ್ರರು’ ಸಣ್ಣಕತೆ -ಶೋಭಾ ಮೂರ್ತಿ

ಮೈಥಿಲಿಗೆ ಹೃದಯದ ಬಡಿತವೇ ನಿಂತಂತಾಯಿತು. ಕಣ್ಣೆಲ್ಲ ಮಂಜಾಗಿ ಕೈಯಲ್ಲಿದ್ದ ಪೇಪರ್ ನೋಡಿದ ಹರೀಶ್, ಅವನು ಕೂಡ ಅದನ್ನು ಓದಿ ಕುಸಿದು ಕೂತ. ಕತೆಗಾರ್ತಿ ಶೋಭಾ ಮೂರ್ತಿ ಅವರ ‘ಅತಂತ್ರರು’ ಸಣ್ಣಕತೆಯನ್ನು ಪೂರ್ತಿಯಾಗಿ ಓದಿ…

ಯಶವಂತಪುರ ಬಳಿಯ ಪ್ಲಾಟಿನಂ ಸಿಟಿಯ ಒಂದು ಫ್ಲ್ಯಾಟ್ ಅದು. ಅವರದ್ದೆಂದರೆ, ಅದೇ…ಮೈಥಿಲಿ ಹರೀಶ್. ಹಾಗೆಂದು ಅದೇನೂ ಅವರ ಸ್ವಂತದ್ದಲ್ಲ. ದುಬಾರಿ ಬಾಡಿಗೆಯ ಹಕ್ಕಿಯ ಗೂಡಿನಂತಹ ಎರಡು ಬಿ ಎಚ್ ಕೆ ಫ್ಲ್ಯಾಟ್ ಅದು.

ಸಿದ್ದಾಪುರದಂಥ ಮಲೆನಾಡಿನ ಊರಿನಲ್ಲಿ ಅಡಿಕೆ ತೋಟದ ನಡುವಿನ ದಿಬ್ಬದ ಮೇಲಿರುವ ಹಿರೀಕರು ಬಾಳಿದ ದೊಡ್ಡ ಅಟ್ಟದ ಮನೆಯಲ್ಲಿ ಹುಟ್ಟಿ ಬೆಳೆದ ಮೈಥಿಲಿ, ತನ್ನ ಕೈಹಿಡಿಯಲು ಬಂದ ಹಳ್ಳಿಯಲ್ಲಿದ್ದು ಕೃಷಿಯನ್ನು ಅವಲಂಬಿಸಿದ್ದ ವರಗಳನ್ನು ತಾನೇ ನಿರಾಕರಿಸಿದ್ದಳು.

ಅವಳಿಗೋ ತನ್ನ ಸ್ನೇಹಿತೆಯರಂತೆ ನಗರವಾಸಿ ಎನ್ನಿಸಿಕೊಳ್ಳುವಾಸೆ. ಕನ್ಯಾರ್ಥಿಗಳಾಗಿ ಬಂದವರಲ್ಲಿ ಅವಳ ಆಯ್ಕೆ…ಹರೀಶ್ ಆಗಿದ್ದ. ಅವನಿಗೆ ಹೇಳಿಕೊಳ್ಳುವಂತಹ ಸ್ಥಿತಿವಂತ ಕೌಟುಂಬಿಕ ಹಿನ್ನೆಲೆ ಇಲ್ಕ. ಆದರೆ ಬೆಂಗಳೂರು ನಗರದಲ್ಲಿ ಒಂದು ವಿದೇಶೀ ಕಂಪನಿಯ ಉದ್ಯೋಗಿ ಅವನು. ತನ್ನ ಅಭಿಲಾಶೆ ಈಡೇರಿಸಿಕೊಳ್ಳಲು ಈ ವರನೇ ಸರಿ ಎನ್ನುವ ನಿರ್ಧಾರಕ್ಕೆ ಬಂದ ಮೈಥಿಲಿ, ” ಅಪ್ಪಯ್ಯ, ನಾನು ಒಪ್ಪಿದ್ದೇನೆ.” ಅಪ್ಪ “ಹರೀಶ್ ಬಗ್ಗೆ ಏನ್ ಅನ್ನಿಸ್ತದೆ ಕೂಸೇ?” ಪ್ರಶ್ನೆಗೆ ಕೂಡಲೇ ಉತ್ತರಿಸಿದ್ದಳು.

ಹರೀಶನನ್ನು ಮೈಥಿಲಿ ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದಾಗ ಮೊದಲು ವಿರೋಧಿಸಿದವನು ಅವಳ ಅಣ್ಣ ಕೇಶವ.

“ಆ ಮನೆಗೆ ಹೋಗಿ ಎಂತಾ ಮಾಡ್ತೀ? ಇರೋ ಗೇಣುದ್ದದ ಭೂಮಿಯಲ್ಲಿ ಬೆಳೆಯೋದು ಅವರಿಗೇ ಸಾಲೋದಿಲ್ಲ. ಹುಡುಗನಿಗೆ ಚಲೋ ನೌಕರಿ ಇರೋದು ಬಿಟ್ರೆ.ಮನೆಯವ್ರ ಸಪೋರ್ಟ್ ಅಂತೂ ಇರೋದಿಲ್ಲಾ. ನೋಡು ಎರಡು ದಿನ ವಿಚಾರ ಮಾಡು.” ತಂಗಿಯ ಭವಿಷ್ಯದ ಬಗ್ಗೆ ಕಳಕಳಿ ಇರುವ ಅಣ್ಣನ ಮಾತನ್ನು ಅತ್ತಿಗೆಯೂ ಅನುಮೋದಿಸಿದ್ದಳು. ಎರಡು ದಿಗಳ ನಂತರವೂ

“ಇಲ್ಲಣ್ಣಾ, ಮದ್ವೆ ಆಗೋದಂತಿದ್ರೆ…ಅವರನ್ನೇ.” ಕಡ್ಡಿ ತುಂಡುಮಾಡುವಂತೆ ಹೇಳಿ ಕೋಣೆಗೆ ನಡೆದಿದ್ದಳು.

ಫೋಟೋ ಕೃಪೆ : ಅಂತರ್ಜಾಲ

ಅದಾದ ನಂತರವೂ ಕೇಶವ ತಂಗಿಗಾಗಿ ವರಗಳ ಅನ್ವೇಷಣೆಯನ್ನು ಮುಂದುವರೆಸಿದ್ದ. ಆದರೆ ಇಂಜಿನಿಯರಿಂಗ್ ಓದಿ ನಗರದಲ್ಲಿ ಉದ್ಯೋಗಿಯಾಗಿರುವ ಹುಡುಗರು ತನ್ನ ಕೈಹಿಡಿಯುವವಳೂ ಇಂಜಿನಿಯರ್ ಆಗಿರಬೇಕು ಎನ್ನುತ್ತಿದ್ದರು. ಶೈಕ್ಷಣಿಕ ಸಮಾನತೆ ಇದ್ದರೆ ದಾಂಪತ್ಯದಲ್ಲಿ ಸಾಮರಸ್ಯವಿರುತ್ತದೆ ಎಂದು ತಿಳಿದು ಬಿಎಸ್‌ಸಿಗೆ ಓದನ್ನು ನಿಲ್ಲಿಸಿ ಹಾಯಾಗಿದ್ದ ಮೈಥಿಲಿ, ತಮ್ಮ ಅಂತಸ್ತಿಗೆ ಕಡಿಮೆ ಎನ್ನುವ ಮಾತನ್ನು ಆಡಿ ಕಳಿಸಿದ್ದರು.

ಕಡೆಗೂ ಮೈಥಿಲಿಯ ನಿರ್ಧಾರವೇ ಅಂತಿಮ ಎನ್ನುವಂತಾಗಿ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಒಂದು ಶುಭ ಘಳಿಗೆಯಲ್ಲಿ ಬಂಧು ಬಾಂಧವರ ಸಮಕ್ಷಮ.. ಮೈಥಿಲಿ ಹರೀಶರ ಮದುವೆ ಸಾಂಗೋಪವಾಗಿ ನಡೆದು, ಮೈಥಿಲಿ ಗಂಡನೊಂದಿಗೆ ಬೆಂಗಳೂರು ಸೇರಿದಳು.

ಬೆಂಗಳೂರಿಗೆ ಮೊದಲು ಒಂದೆರಡು ಬಾರಿ ಬಂದಿದ್ದಳಾದರೂ…ಆಳವಾಗಿ ನಗರವನ್ನು ಅರಿತವಳಲ್ಲ. ಬೆಂಗಳೂರಿನಲ್ಲಿ ಮನೆ ಎಂದಾಗ ಅವಳ ಮನಸ್ಸಿನಲ್ಲಿ ಇದ್ದ ಕಲ್ಪನೆಗೂ, ಈಗ ತಾನು ನೋಡುತ್ತಿರುವ ಫ್ಲ್ಯಾಟಿಗೂ ಸಂಬಂಧವೇ ಇಲ್ಲದಂತಿರುವುದನ್ನು ನೋಡಿ ನಿರಾಸೆಯಾದರೂ….’ಬಾಡಿಗೆದು ತಾನೇ? ಮುಂದೊಂದು ದಿನ ಸ್ವಂತ ಮನೆ ಕೊಂಡರಾಯ್ತು’ ಎಂದುಕೊಂಡಳು.

ಅವಳೆಂದುಕೊಂಡಂತೆ..ಹರೀಶನಿಗೆ ಲಕ್ಷದ ಸಂಬಳವಿದ್ದರೂ ಮನೆ ಬಾಡಿಗೆ, ಕರೆಂಟು, ನಿರ್ವಹಣೆ ವೆಚ್ಚ, ಮನೆ ಖರ್ಚು ಇತ್ಯಾದಿಗಳಿಗೇ ಮುಕ್ಕಾಲು ಭಾಗ ಖರ್ಚಾಗುತ್ತಿತ್ತು. ಇನ್ನು ಊರಿನಲ್ಲಿ ಓದುತ್ತಿರುವ ಅವನ ತಮ್ಮನಲ್ಲದೇ ಇಬ್ಬರು ತಂಗಿಯರ ಓದಿಗಾಗಿ, ಮದುವೆಗಾಗಿ, ಅನಾರೋಗ್ಯದ ತಂದೆಯ ಔಷಧಿ ಇತ್ಯಾದಿ ತಾಪತ್ರಯಗಳು….ಎಲ್ಲದರ ಭಾರವೂ ಹರೀಶನ ಮೇಲೆ.

ದುಂದುವೆಚ್ಚ ಮಾಡದ ಹರೀಶನಿಗೆ ಇರುವುದರಲ್ಲಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಇತ್ತು. ಮೈಥಿಲಿಯಿಂದಲೂ ಅದನ್ನೇ ನಿರೀಕ್ಷಿಸಿದ್ದ ಕೂಡ.

ಮಹಾನಗರದ ಪುಟ್ಟ ಮನೆಯಲ್ಲಿ ತಾವಿಬ್ಬರೇ. ಹರೀಶ್ ಆಫೀಸಿಗೆ ಹೋದಮೇಲೆ….ಸಂಜೆಯತನಕ ಮೈಥಿಲಿಗೆ ಸಮಯ ಕಳೆಯುವುದೇ ಕಷ್ಟ. ಎಲ್ಲ ಪ್ರಾಂತ್ಯದ ಜನರು ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿದ್ದರೂ ಒಬ್ಬರಿಗೊಬ್ಬರು ಅಪರಿಚಿತರು. ಊರಿನಲ್ಲಿ ಮನೆಯ ಬಾಗಿಲನ್ನು ಹಗಲಿನಲ್ಲಿ ಮುಚ್ಚಿದ್ದ ದಿನವನ್ನೇ ಕಂಡಿರದಿದ್ದ ಮೈಥಿಲಿ, ದಿನದ

ಇಪ್ಪತ್ನಾಲ್ಕು ಗಂಟೆ ಬಾಗಿಲನ್ನು ಮುಚ್ಚಿರಬೇಕೆಂಬ ನಗರ ಜೀವನದ ಮೊದಲ ಪಾಠ ಇಷ್ಟವಾಗದಿದ್ದರೂ ಅನುಸರಿಸಬೇಕಾದ ಅನಿವಾರ್ಯತೆಗೆ ಒಗ್ಗಿಕೊಂಡಳು.

ಹರೀಶನಿಗೆ ಮೈಥಿಲಿಗೆ ಒಬ್ಬಳೇ ಇದ್ದು ಬೇಸರವಾಗುವುದೆಂದು ಗೊತ್ತು. ವಾರಾಂತ್ಯದಲ್ಲಿ ಅವಳನ್ನು ನಗರದ ವಿವಿಧ ಸ್ಥಳಗಳಿಗೆ ಕರೆದೊಯ್ಯತೊಡಗಿದ. ಒಂದು ವಾರ ಲಾಲ್ ಬಾಗ್ ಮತ್ತೊಂದು ವಾರ ಯಾವುದಾದರೂ ಮಾಲ್‌ಗೆ ಹೋಗಿ, ಅಲ್ಲಿರುವ ಸಿನೆಮಾ ಮಂದಿರದಲ್ಲಿ ಯಾವುದಾದರೂ ಹೊಸ ಸಿನೆಮಾ ನೋಡಿ ರಾತ್ರಿಗೆ ಮನೆಗೆ ಬರುವುದು ರೂಢಿಯಾಯ್ತು.

ಬೆಂಗಳೂರಿನ ಸ್ಥಳಗಳನ್ನು ಬಹುವಾಗಿ ಮೆಚ್ಚಿಕೊಂಡರೂ ದಿನಗಳು ಕಳೆದಂತೆ ನಗರದ ಸಂಚಾರದಟ್ಟಣೆಯನ್ನು ಕಂಡು ಅವಳಲ್ಲಿ ಬೇಸರ ಮೂಡತೊಡಗಿತು. ಒಂದೊಂದು ಕಡೆಗೆ ಹೋಗಬೇಕಾದರೆ…ತಾಸುಗಟ್ಟಲೆ ರಸ್ತೆಯಲ್ಲಿಯೇ ಕಳೆಯಬೇಕಾದಾಗ… ಅವಳಿಗೆ ನಗರದ ಇನ್ನೊಂದು ಮುಖದ ದರ್ಶನವಾಗತೊಡಗಿತು.

ರಸ್ತೆ ಬದಿಯಲ್ಲಿ ಮಾರಾಟಮಾಡುವ ಮಲ್ಲಿಗೆ ಹೂವನ್ನು ಕಂಡಾಗೆಲ್ಲ…ಮೈಥಿಲಿಗೆ ತವರಿನ ಮನೆಯಂಗಳದ ಹಂದರದಲ್ಲಿ ಬಿಡುತ್ತಿದ್ದ ಮೊಗ್ಗುಗಳನ್ನು ಕಿತ್ತು ಬಾಳೆಯ ನಾರಿನಲ್ಲಿ ದಂಡೆ ಹೆಣೆದು ಮುಡಿಸಿ ದೃಷ್ಟಿ ನೀವಳಿಸುತ್ತಿದ್ದ ಅಮ್ಮನ ಮುಖವೇ ಕಾಣುತ್ತಿತ್ತು. ಅವಳಿಗೆ ಮಲ್ಲಿಗೆಯ ಮೇಲಿರುವ ಒಲವನ್ನು ಅರಿತಿದ್ದ ಹರೀಶ, ಹೊರಗೆ ಹೋದಾಗೆಲ್ಲ ಮಲ್ಲಿಗೆಯನ್ನು ಎಲ್ಲಿ ಕಂಡರೂ ಬೈಕ್‌ನ್ನು ನಿಲ್ಲಿಸಿಬಿಡುವ. ಅವನಿಗೂ ಮಲ್ಲಿಗೆ ಮುಡಿದವಳ ಕಣ್ಣ ಬೆಳಕನ್ನು ಕಾಣುವ ತವಕ. ಹೂವು ಮಾರುವವಳ ಹರಕು ಕನ್ನಡ ಅಥವಾ ತಮಿಳಿನ ಪದಗಳನ್ನು ಅರ್ಥ ಮಾಡಿಕೊಂಡು ಕೊಳ್ಳದೇ ಇರುವುದಿಲ್ಲ.

“ಅಲ್ಲಾರೀ, ಬೆಂಗ್ಳೂರು ಕರ್ನಾಟಕದ ರಾಜಧಾನಿ ಅಲ್ವಾ? ಇಲ್ಯಾಕೆ ಕಲಬೆರಕೆ ಕನ್ನಡ? ಅದು ಹೋಗ್ಲಿ….ಎಷ್ಟೋ ವ್ಯಾಪಾರಸ್ಥರಿಗೆ ಕನ್ನಡವೇ ಬರೋದಿಲ್ಲಾ!” ಮಾಲ್ ಆಗಲಿ, ತರಕಾರಿ ಮಾರುಕಟ್ಟೆಯಾಗಲಿ ಕನ್ನಡವೊಂದನ್ನು ಬಿಟ್ಟು ಬೇರೆಲ್ಲ ಭಾಷೆಯಲ್ಲಿ ವ್ಯವಹರಿಸುವ ವ್ಯಾಪಾರಿಗಳನ್ನು ಕಂಡು ಸೋಜಿಗದಿಂದ ಕೇಳಿದ್ದಳು.

“ಏನ್ಮಾಡ್ಲಿಕ್ಕಾಗ್ತದೆ ಮೈಥಿಲಿ, ದೊಡ್ಡ ಸಿಟಿ ಅಂದ್ಮೇಲೆ…ಸ್ಥಳೀಯರಿಗಿಂತ ಹೊರಗಿನವ್ರೇ ಹೆಚ್ಚಾಗಿರ್ತಾರೆ. ಅಷ್ಟೇಕೆ ..ನಾವಿರೋ ಅಪಾರ್ಟ್ಮೆಂಟ್‌ನಲ್ಲಿ ಎಷ್ಟು ಜನ ಕನ್ನಡ ಮಾತಾಡ್ತಾರೆ ನೀನೇ ಹೇಳು? ಅವ್ರ ಭಾಷೆ ನಮಗೆ ಬರದೇ ಇದ್ರೂ ಅದೇ ಭಾಷೇಲಿ ಮಾತಾಡ್ಲಿಕ್ಕೆ ತಿಣಕಾಡ್ತೇವೆ. ಅದಕ್ಕೇ ಅವ್ರಿಗೂ ಕನ್ನಡ ಕಲಿಯೋ ಅಗತ್ಯವೇ ಕಾಣೋದಿಲ್ಲ. ಪುಟ್ಟ ಭಾಷಣವೇ ಬಿಗಿದ ಹರೀಶ.”

ಅವಳಿಗೂ ಗಂಡನ ಮಾತು ನಿಜವೆನ್ನಿಸಿತು. ಊರಿನಲ್ಲಿ ಆಡುವ ಶುದ್ಧ ಕನ್ನಡದ ಮುಂದೆ ನಗರದ ಬೆರಕೆ ಕನ್ನಡವನ್ನು ಕೇಳಿದಾಗ ಉಕ್ಕೇರುವ ಸಿಟ್ಟನ್ನು ಕಷ್ಟಪಟ್ಟು ತಹಬದಿಗೆ ತಂದುಕೊಳ್ಳವಳು.

“ರೀ ಒಂದ್ಕೆಲ್ಸ ಮಾಡೋಣ, ಇನ್ಮೇಲೆ ನಾವಿಬ್ರೂ ಕರ್ನಾಟಕದ ಯಾವ ಮೂಲೆಗೆ ಹೋದ್ರೂ ಕನ್ನಡದಲ್ಲಿ ಮಾತ್ರ ಮಾತಾಡೋಣ.”

“ಅಪ್ಪಣೆ ಕನ್ನಡತಿ” ನಾಟಕೀಯವಾಗಿ ಕೈಜೋಡಿಸಿದ ಹರೀಶ್.

ಮನಸ್ಸನ್ನು ಹಗುರಗೊಳಿಸುವ ಘಳಿಗೆಗಳು ಇಬ್ಬರನ್ನು ಹತ್ತಿರವಾಗುವಂತೆ ಮಾಡಿದವು.

ಎಷ್ಟೇ ದಣಿದುಬಂದರೂ ಸ್ವಾಗತಿಸುವ ಮೈಥಿಲಿಯ ನಗುಮೊಗವು ಅವನ ದಣಿವನ್ನು ಮರೆಸಿಬಿಡುತ್ತಿತ್ತು.

ತಮ್ಮ ತಂಗಿಯರ ಜವಾಬ್ದಾರಿ, ತನಗಿರುವ ಹೊಣೆಗಾರಿಕೆಯನ್ನು ಹರೀಶ್ ಬಾಯಿಬಿಟ್ಟು ಹೇಳದಿದ್ದರೂ ಅವಳು ಚೆನ್ನಾಗಿ ಅರ್ಥಮಾಡಿಕೊಂಡಿದ್ದಳು. ದುಂದುವೆಚ್ಚವನ್ನು ಸಹಿಸದ ಅವನ ಇತಿಮಿತಿಗಳ ಒಳಗೆ ಬದುಕು ನಡೆಸಬೇಕು ಅದರಲ್ಲೂ ನಗರ ಜೀವನವೆಂದರೆ ಹಗ್ಗದಮೇಲಿನ ನಡಿಗೆ ಎನ್ನುವುದನ್ನು ಬಹು ಬೇಗನೇ ತಿಳಿದುಕೊಂಡಳು. ಎಷ್ಟೇ ಆದಾಯವಿದ್ದರೂ ಖರ್ಚು ಏರುತ್ತಾ ಹೋಗುವುದನ್ನು ಕಂಡು ಬೆರಗಾಗುತ್ತಿದ್ದಳು. ಹಿತ್ತಿಲಲ್ಲಿ ಸಾವಯವ ಗೊಬ್ಬರದಿಂದ ಬೆಳೆದು ತಿನ್ನುವ ತರಕಾರಿಗೆ ಇಲ್ಲಿ ನಾಲ್ಕುಪಟ್ಟು ಬೆಲೆ ತೆತ್ತು ಕೊಳ್ಳುವಾಗ ಮನಸ್ಸು ಹಳಹಳಿಸುತ್ತಿತ್ತು.

ಹರೀಶ್ ಅಂದು ಆಫೀಸಿಗೆ ಹೊರಟಿದ್ದ. ಅವನನ್ನು ಬೀಳ್ಕೊಟ್ಟು ಬಾಗಿಲನ್ನು ಭದ್ರಪಡಿಸಿ ತಿಂಡಿ ತಿನ್ನಲು ಹೋದರೆ ವಾಕರಿಕೆ ವರುವಂತಾಯಿತು. ಹರೀಶನ ಬರುವಿಕೆಯನ್ನು ಕಾಯುತ್ತಾ ಕುಳಿತವಳಿಗೆ ಇಂದೇಕೋ ಹಗಲು ದೀರ್ಘವಾಗಿದೆ ಎನಿಸಿತು. ಹರೀಶ್ ಬಂದಾಗ ನಗುಮೊಗದಲ್ಲಿದ್ದರೂ ಆಯಾಸಗೊಂಡವಳಂತೆ ಕಾಣುತ್ತಿದ್ದ ಅವಳನ್ನು ಮುದ್ದುಗರೆದು ಕೇಳಿದ.

ತಮ್ಮ‌ ಸಂಸಾರಕ್ಕೆ ಮೂರನೆಯ ಸದಸ್ಯನ ಆಗಮನ ಆಗುವ ಸೂಚನೆ ಕಂಡಾಗ ಅತೀವ ಸಂತಸಗೊಂಡ.

ಅಪಾರ್ಟ್ಮೆಂಟಿನ ಮಕ್ಕಳು ಶಾಲೆಗೆ ಹೋಗುವ ಗಡಿಬಿಡಿಯನ್ನು ಕಂಡ ಮೈಥಿಲಿ ಕೆಲವು ತಾಯಂದಿರನ್ನು ಮಾತಾಡಿಸಿದಾಗ ಅವರಿಂದ ಶಾಲೆಯ ದುಬಾರಿ ಶುಲ್ಕ, ಶಾಲಾವಾಹನದ ಶುಲ್ಕ ಎಲ್ಲವನ್ನು ಕೇಳಿ ಬೆಚ್ಚಿಬಿದ್ದಿದ್ದಳು.

ಈಗ ತಾನೂ ತಾಯಾಗಲಿರುವ ಸಂತಸವನ್ನು ಸಂಭ್ರಮಿಸುತ್ತಿರುವಾಗ, ತಮ್ಮ‌ಮಗುವು ಮುಂದೊಂದು ದಿನ ಶಾಲೆಗೆ ಹೋಗಬೇಕಾಗಿರುವುದನ್ನು ನೆನೆದು ಪುಟ್ಟ ಮಕ್ಕಳ ಶಿಕ್ಷಣಕ್ಕಾಗಿ ಲಕ್ಷ ಶುಲ್ಕ ವಿಧಿಸುವುದನ್ನು ನೆನೆದು ಭಯಪಟ್ಟಳು.

ಅದನ್ನೇ ಹರೀಶನಿಗೆ ಹೇಳಿದಾಗ… ಜೋರಾಗಿ ನಕ್ಕುಬಿಟ್ಟ.

ಅವಳ ಗಲ್ಲವನ್ನು ಹಿಂಡುತ್ತಾ…”ಆಗ್ಲೇ ಅಲ್ಲೀತನಕ ಯೋಚ್ನೆನಾ? ಹಾಗಾದ್ರೆ ಭಾಳ ಮುಂದಾಲೋಚನೆ ಇರೋವ್ಳು ನೀನು. ಒಂದ್ಕೆಲ್ಸ ಮಾಡೋಣ….ನಾವೂ ತೋಟದ ಕೆಲಸ ಮಾಡ್ಕೊಂಡು ಊರಲ್ಲಿದ್ಬಿಡೋಣ. ಅಲ್ಲಿ ಬೆಂಗ್ಳೂರಿನಲ್ಲಾಗೋ ಅರ್ಧ ಖರ್ಚೂ ಆಗಲ್ಲ ಏನಂತೀಯಾ?” ತುಂಟತನವಿದ್ದರೂ ಗಂಭೀರವಾಗಿ ಕೇಳಿದ.

“ಅದಕ್ಕೆ ಹೆದರ‌್ಕೊಂಡು ಊರೇ ಬಿಡೋದಾ? ನಮಗಿಂತ ಕಡಿಮೆ ಆದಾಯ ಇರೋವ್ರೇನು ಮಕ್ಕಳ್ನ ಓದಿಸ್ತಿಲ್ವಾ? ಅಂಥಾ ಸಂದರ್ಭ ಬಂದ್ರೆ ನಾನೂ ಕೆಲಸಕ್ಕೆ ಸೇರ‌್ಕೋತೇನೆ.” ನಿರ್ಧಾರದ ಸ್ವರದಲ್ಲೆಂದಳು.

ಆ ಸಂದರ್ಭವೂ ಬಂದೇಬಿಟ್ಟಿತು. ಮದುವೆಗೆ ಮುನ್ನ ಅವಳು ಎಂದೋ ಬರೆದಿದ್ದ ಬ್ಯಾಂಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದವಳಿಗೆ ಈಗ ಸಂದರ್ಶನಕ್ಕೆ ಕರೆ ಬಂದಿತ್ತು. ಒದಗಿಬಂದ ಅವಕಾಶವನ್ನು ಕೈಬಿಡುವುದು ಬೇಡವೆಂದು ನಿರ್ಧರಿಸಿ ಸಂದರ್ಶನವನ್ನು ಎದುರಿಸಿ ಉದ್ಯೋಗ ಗಳಿಸುವುದರಲ್ಲಿ ಯಶಸ್ವಿಯಾದಳು.

“ಇನ್ನೇನು, ನಾನೂ ಕೆಲಸಕ್ಕೆ ಹೋಗ್ತೇನೆ. ಇಬ್ಬರ ಇನ್‌ಕಮ್ ಸೇರ‌್ಸಿದ್ರೆ….ಮುಂದೆ ನಮ್ಮದೇ ಒಂದು ಮನೆ ಅಂತಾ ಒಂದು ಆಗಿಬಿಟ್ರೆ….” ಹೇಳುತ್ತಲೇ ಕನಸಿನ ಲೋಕಕ್ಕೆ ಜಾರಿದವಳನ್ನು..”ಈಗ ಮೊದ್ಲು ನಿನ್ನ ಹೊಟ್ಟೇಲಿರೋ ಪಾಪು ಬಗ್ಗೆ ಕನಸು ಕಾಣು ಮೈಥಿಲಿ, ಆಮೇಲೆ ಮನೆ.” ಹರೀಶ್ ಎಚ್ಚರಿಸಿದ್ದ

ಪೀಣ್ಯ ಶಾಖೆಗೆ ಅವಳನ್ನು ನಿಯೋಜಿಸಿದಾಗ…’ಮನೆಗೆ ಹತ್ತಿರವೇ ಆಯ್ತು’ ಎಂದು ಸಂತೋಷಗೊಂಡಳು.

ಮೈಥಿಲಿ ತನಗೆ ಒಂಭತ್ತನೆಯ ತಿಂಗಳು ಶುರುವಾಗುವ ತನಕ ಕೆಲಸ ಮಾಡಿ, ಆರು ತಿಂಗಳ ಮೆಟರ್ನಿಟಿ ಲೀವ್ ಪಡೆದು ಹೆರಿಗೆಗಾಗಿ ತವರಿಗೆ ಹೋದಳು. ಮುದ್ದಿನ ಮಗುವಿನ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಅವಳಿಗೆ ಮನೆಗೆ ಹತ್ತಿರವಿರುವ ಬ್ಯಾಂಕಿನಿಂದ ಬಹಳ ಅನುಕೂಲವಾಯಿತು.

ಈಗ ಅವರದು ನಾಲ್ಕು ಜನರ ಕುಟುಂಬ. ಬೆಳೆಯತೊಡಗಿದ ಪರಿವಾರಕ್ಕೆ ಖರ್ಚು ಹೆಚ್ಚು. ಮೈಥಿಲಿ ದಿನವೂ ಆಫೀಸಿಗೆ ಬಸ್ಸಿನಲ್ಲಿ ಹೋಗುತ್ತಿದ್ದಳು. ಎಲ್ಲರ ಒಟ್ಟಿಗೆ ಹೊರಗೆ ಹೋಗಬೇಕಾದಾಗ ಬಹಳ ಸಮಸ್ಯೆಯಾಗುವುದನ್ನು ಕಂಡು ಹರೀಶ್ ಕಾರನ್ನು ಖರೀದಿಸುವ ಯೋಚನೆ ಮಾಡಿದ.

ತಂಗಿಯರ ಮದುವೆಗಾಗಿ ಹಣವನ್ನು ಕೂಡಿಡುತ್ತಿದ್ದ‌ ಹಣದ ಮೊತ್ತ ಸಾಕಷ್ಟು ದೊಡ್ಡದೇ ಇತ್ತು. ಮೈಥಿಲಿಯೊಡನೆ ಚರ್ಚಿಸಿ ಆ ಹಣದಲ್ಲಿ ಹೆಚ್ಚಿನ ಡೌನ್ ಪೇಮೆಂಟ್ ಪಾವತಿಸಿ, ಕಡಿಮೆ ಮೊತ್ತದ ಸಾಲವನ್ನು ಪಡೆಯುವ ಯೋಜನೆ ರೂಪಿಸಿದ. ಕಾರಿನ ಸಾಲಕ್ಕೆ ಬಡ್ಡಿ ಕಟ್ಟುವುದಕ್ಕಿಂತ…ಅದೇ ಹಣವನ್ನು ಉಳಿತಾಯ ಖಾತೆಯಲ್ಲಿಡುವ ಅವನ ಉಪಾಯ ತುಂಬಾ ಚೆನ್ನಾಗಿದೆ ಎಂದು ಮೈಥಿಲಿಗೂ ಅನಿಸಿತು.

ದೀಪಾವಳಿಗೆ ಕುಟುಂಬದ ಹೊಸ ಸದಸ್ಯನಾಗಿ ಕಾರು ಸೇರ್ಪಡೆಯಾಯಿತು. ದಂಪತಿಗಳಲ್ಲಿ ಸಂತೋಷ ನೂರ್ಮಡಿಯಾಯಿತು.

ಫೋಟೋ ಕೃಪೆ : ಅಂತರ್ಜಾಲ

ಮುದ್ದು ಮಾತುಗಳಿಂದ ಮರುಳುಗೊಳಿಸುವ ಮೂರು ವರ್ಷದ ಮಗ ಶೌರ್ಯ ಈಗ ಶಾಲೆಗೆ ಹೋಗುವಂತಾದ. ಮೈಥಿಲಿಯೂ ಕೆಲಸಕ್ಕೆ ಸೇರಿ ನಾಲ್ಕು ವರ್ಷಗಳಾಗುತ್ತ ಬಂದಿತ್ತು. ಬದುಕು ಒಂದು ಹಂತಕ್ಕೆ ಬಂದು ಎಲ್ಲವೂ ಚೆನ್ನಾಗಿದೆ ಎನ್ನುವಾಗ ಇಬ್ಬರ ಮನಸ್ಸಿನಲ್ಲಿ ಹೊಸ ಯೋಚನೆಯೊಂದು ರೂಪುಗೊಳ್ಳತೊಡಗಿತು.

ಇಬ್ಬರೂ ಬೆಂಗಳೂರು ನಗರದಲ್ಲಿ ಉದ್ಯೋಗಿಗಳು. ಬೆಳೆಯುತ್ತಿರುವ ಸಂಸಾರದ ತಲೆಯಮೇಲೊಂದು ಸ್ವಂತ ಸೂರಿದ್ದರೆ…ವರ್ಷಕ್ಕೊಮ್ಮೆ ಏರಿಕೆಯಾಗುವ ಬಾಡಿಗೆಗೆ ಆದಾಯದ ದೊಡ್ಡ ಪಾಲು ಹೋಗುತ್ತಿದೆ. ಅದರ ಬದಲು ಅದೇ ಬಾಡಿಗೆಯನ್ನು ಮನೆಯ ಕಂತಿಗೆ ಕಟ್ಟಿದರೆ….ಬೆಂಗಳೂರಿನಲ್ಲೊಂದು ಸ್ವಂತ ಮನೆಯಾಗುತ್ತದೆ. ಓಹ್, ನಮ್ಮ ಮನೆ…ಅದೂ ಇಂತಹ ಮಹಾನಗರದಲ್ಲಿ! ಕನಸು ಸಾಕಾರವಾದರೆ ಅದೇ ಒಂದು ದೊಡ್ಡ ಸಾಧನೆ. ಕನಸನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ದಿನಗಟ್ಟಲೆ ಇಬ್ಬರೂ ಚರ್ಚಿಸಿದರು.

ಇದರ ನಡುವೆ ಸ್ನೇಹಿತರ ವಲಯದಲ್ಲಿ ಒಂದೆರಡು ಗೃಹಪ್ರವೇಶದ ಆಹ್ವಾನದ ಮೇರೆಗೆ ಹೋಗಿಬಂದದ್ದಾಯಿತು. ಅತಿಥೇಯರ ಮುಖದಲ್ಲಿ ಮೂಡಿರುತ್ತಿದ್ದ ಸ್ವಂತ ಮನೆ ಹೊಂದಿದ ಹೆಮ್ಮೆಯನ್ನು ಗುರುತಿಸಿದರು.

ಹಗಲು ರಾತ್ರಿ ಇದರ ಬಗ್ಗೆಯೇ ಚಿಂತಿಸಿದಳು ಮೈಥಿಲಿ. ಕಾರಿನ ಸಾಲದ ಕಂತು ಇನ್ನೇನು ತೀರುವುದರಲ್ಲಿತ್ತು. ನಿವೇಶನ ಖರೀದಿಗಾಗಿ ಇಬ್ಬರಲ್ಲಿ ಯಾರಿಗೆ ಬೇಗ ಸಾಲ ಸಿಗುವುದೋ ಅವರೇ ತೆಗೆದುಕೊಂಡರಾಯ್ತು ಎನ್ನುವ ತೀರ್ಮಾನಕ್ಕೆ ಬಂದರು.

ಈಗ ನಿವೇಶನ‌ ಖರೀದಿಸಿ ಮನೆ ಕಟ್ಟುವುದಾ ಅಥವಾ ಫ್ಲ್ಯಾಟ್‌ಕೊಳ್ಳುವುದಾ? ಗೊಂದಲಕ್ಕೆ ಬಿದ್ದು ಅದರಲ್ಲಿ ಒಂದು ವಾರ ಕಳೆದರು. ದಿನೇದಿನೇ ಗಗನಮುಖಿಯಾಗುತ್ತಿರುವ ಮಹಾನಗರದ ನಿವೇಶನದ ಬೆಲೆ ಅವರಿಬ್ಬರನ್ನು ಬೆಚ್ಚಿಬೀಳಿಸಿದವು. ಊರಿನ ತಮ್ಮ ಮನೆಯಂಗಳದ ಕಾಲುಭಾಗ ವಿಸ್ತೀರ್ಣದ ನಿವೇಶನವನ್ನು ಕಷ್ಟಪಟ್ಟು ಕೊಂಡರೂ ಅಲ್ಲಿ ಮನೆ ಕಟ್ಟಿಸಲು ಕನಿಷ್ಠ ಐದಾರು ತಿಂಗಳಾದರೂ ಬೇಕು. ಆ ಐದಾರು ತಿಂಗಳ ಸಮಯ ಯಾರಿಗಿದೆ? ಯಂತ್ರದಂತೆ ದುಡಿಯಬೇಕಾದ ನಮ್ಮಿಂದ ಆ ಕೆಲಸ ಸಾಧ್ಯವೇ? ಯೋಚಿಸಿಯೇ ತಲೆ ಬಿಸಿಯಾಯಿತು.

“ನಾವು ಫ್ಲ್ಯಾಟ್‌ನ್ನೇ ಕೊಳ್ಳೋಣ ಮೈಥಿಲಿ. ನಾವು ಕಾಲಕ್ಕೆ ತಕ್ಕಂತೆ ನಡೀಬೇಕಾಗ್ತದೆ. ಅಂಗಳ, ಹಿತ್ತಿಲು ಎಲ್ಲಾ ಇರೋ ಮನೆ ಬೆಂಗ್ಳೂರಿನಲ್ಲಿ ಸಾಧ್ಯವಾ? ಆ ಐಡಿಯಾ ನಮ್ ತಲೆಯಿಂದ ತೆಗೆದುಹಾಕೋಣ.” ಎಂದ ಹರೀಶನ ಮಾತಿಗೆ ‘ಹೂಂ’ ಎನ್ನದೇ ವಿಧಿ ಇರಲಿಲ್ಲ ಅವಳಿಗೆ.

ಮುಗಿಲಿಗೆ ಮುಖ ಮಾಡಿ ಪೈಪೋಟಿಯಲ್ಲೆನ್ನುವಂತೆ ಏಳುತ್ತಿರುವ ವಸತಿ ಸಂಕೀರ್ಣಗಳು ಬೆಂಗಳೂರಿನ ದಶದಿಕ್ಕುಗಳನ್ನು ವ್ಯಾಪಿಸಿಕೊಳ್ಳತೊಡಗಿದ್ದವು.

ಅವರಿಬ್ಬರ ವಾರಾಂತ್ಯವು ಮನೆ ನೋಡಲು ಮೀಸಲಾಯಿತು. ‘ನಿಮಗೆ ನಾವು ರಿಯಾಯತಿ ದರದಲ್ಲಿ ಮನೆಯನ್ನು ಕೊಡುತ್ತೇವೆ ಬನ್ನಿ’ ಎಂದು ಕೈಬೀಸಿ ಕರೆಯುವ ಆಕರ್ಷಕ ದೊಡ್ಡ ದೊಡ್ಡ ಹೋರ್ಡಿಂಗ್‌ಗಳು ನಗರದೆಲ್ಲೆಡೆ ರಾರಾಜಿಸುತ್ತಿದ್ದರೆ…ಮಧ್ಯಮ ವರ್ಗದವರಿಗೆ ಆಸೆಯಾಗದಿರಲು ಸಾಧ್ಯವೇ?

ನಗರದ ಪರಿಮಿತಿಯಲ್ಲಿರುವ ಮನೆಗಳ ಬೆಲೆಗಳನ್ನು ಕೇಳಿಯೇ ಹೌಹಾರುತ್ತಿದ್ದ ದಂಪತಿಗಳಿಗೆ ‘ದೂರವಾದರೂ ಚಿಂತೆಇಲ್ಲ, ಎಲ್ಲಿದ್ದರೇನು ಸ್ವಂತ ಮನೆ ಅನ್ನೋ ವಿಷ್ಯನೇ ದೊಡ್ಡದು’ ಎನ್ನುವ ತರ್ಕಕ್ಕೆ ಅಂಟಿಕೊಂಡರು.

ಅಳೆದು ಸುರಿದು…ಬಾಣಸವಾಡಿಯ ಬಳಿಯ ಒಂದು ಸಣ್ಣ ಬಡಾವಣೆಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ಕಟ್ಟಿರುವ ಹೊಚ್ಚಹೊಸ ಅಪಾರ್ಟ್ಮೆಂಟಿನ ಮೂರು ಕೋಣೆಗಳ ಫ್ಲ್ಯಾಟ್ ಕೊಳ್ಳುವುದೆನ್ನುವ ನಿರ್ಧಾರಕ್ಕೆ ಬಂದರು. ಕೊಳ್ಳುವ ಮುನ್ನ ಹಿರಿಯರ ಅನುಮತಿ ಮತ್ತು ಅಭಿಪ್ರಾಯಗಳಿಗೆ ಮನ್ನಣೆ ಕೊಡುವ ನಿಟ್ಟಿನಲ್ಲಿ…ಹರೀಶನ ಹೆತ್ತವರನ್ನು, ಮೈಥಿಲಿಯ ಅಣ್ಣ ಕೇಶವನನ್ನೂ ಕರೆಸಿ ತೋರಿಸಿದರು.

“ನೀವಿಬ್ರೂ ಜಾಣರಿದ್ದೀರಿ. ಕಾಗದಪತ್ರಗಳನ್ನು ಸರಿಯಾಗಿ ಪರಿಶೀಲಿಸಿ ಮುಂದುವರೀರಿ. ನಮಗಂತೂ ಈ ದೊಡ್ಡ ನಗರದ ವ್ಯವಹಾರವೆಲ್ಲ ಅರ್ಥ ಆಗೋದಿಲ್ಲ.” ಸಲಹೆ ಕೊಟ್ಟರವರು.

ಫ್ಲ್ಯಾಟಿನ ಕಾಗದಪತ್ರಗಳನ್ನು, ವಸತಿ ಸಮುಚ್ಛಯದ ಜಾಗದ ಪತ್ರಗಳನ್ನು ವಕೀಲರಿಂದ ಪರಿಶೀಲಿಸಲ್ಪಟ್ಟು…ಮೈಥಿಲಿಯ ಹೆಸರಿನಲ್ಲಿ ಅವಳು ಉದ್ಯೋಗಿಯಾಗಿರುವ ಬ್ಯಾಂಕಿನಲ್ಲಿ ಮನೆ ಸಾಲಕ್ಕಾಗಿ ಅರ್ಜಿ ಗುಜರಾಯಿಸಿದಳು.

ಬ್ಯಾಂಕಿನ‌ ಮ್ಯಾನೇಜರ್ ಬಹಳ ಒಳ್ಳೆಯ ಮನುಷ್ಯ. ಮೈಥಿಲಿಯ ಕಾರ್ಯಕ್ಷಮತೆಯನ್ನು ಬಹುವಾಗಿ ಮೆಚ್ಚಿಕೊಂಡವರು. ಅವಳು ಸಲ್ಲಿಸಿದ್ದ ಅರ್ಜಿ, ಕಾಗದಪತ್ರಗಳನ್ನು ಪರಿಶೀಲಿಸಿ, ಸ್ಥಳವೀಕ್ಷಣೆಯನ್ನು ಮಾಡಿ, ಮೇಲಧಿಕಾರಿಗಳಿಗೆ ಮಾಡಿದ ಶಿಫಾರಸ್ಸಿನಿಂದ ಸಾಲವು ಮಂಜೂರಾಯಿತು.

ಬಹು ದಿನಗಳ ಕನಸು ನನಸಾದ ಅಮೃತಘಳಿಗೆಯಲ್ಲಿ….ಬಂಧು, ಮಿತ್ರರನ್ನು ಆಹ್ವಾನಿಸಿ ಗೃಹಪ್ರವೇಶವನ್ನು ನೆರವೇರಿಸಿದರು. ಮೈಥಿಲಿಗಂತೂ ಆರನೇ ಮಹಡಿಯಲ್ಲಿರುವ ಮನೆ ಸ್ವರ್ಗಕ್ಕಿಂತ ಯಾವುದರಲ್ಲಿ ಕಡಿಮೆ? ಎನ್ನಿಸಿದ್ದು ನಿಜ.

ಹೊಸ ಮನೆಯಲ್ಲಿ ವಾಸಿಸತೊಡಗಿ ಎಂಟು ತಿಂಗಳಾದವು. ಅವಳ ವೇತನದ ಅರ್ಧ ಭಾಗ ಸಾಲದ ಕಂತಿಗೆ ಹೋಗತೊಡಗಿತ್ತು. ಅದಕ್ಕಾಗಿ ಅವಳು ತನ್ನ ಶಾಪಿಂಗ್ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಳು. ಬೇಕು ಬೇಡಗಳ ಪಟ್ಟಿ ಅತಿಚಿಕ್ಕದಾಗಿತ್ತು. ಒಂದನ್ನು ಪಡೆಯಲು ಬೇರೇನಾದರೂ ತ್ಯಾಗ ಮಾಡಬೇಕೆನ್ನುವ ತತ್ವವನ್ನು ಮನಸಾರೆ ಪಾಲಿಸತೊಡಗಿದ್ದಳು.

ಮನೆಯನ್ನು ಎಷ್ಟು ಶೃಂಗರಿಸಿದರೂ ಕಡಿಮೆ ಅವಳಿಗೆ. ತಾನು ಕಲಿತಿದ್ದ ಕುಶಲಕಲೆಗಳಿಗೆ ಮರುಜೀವ ಕೊಟ್ಟಳು. ಬಿಡುವಿನ ಸಮಯ ಎನ್ನುವುದಕ್ಕಿಂತ ಅದಕ್ಕಾಗಿ ಸಮಯವನ್ನು ಬಿಡುವು ಮಾಡಿಕೊಂಡು ವಾಲ್ ಹ್ಯಾಂಗಿಂಗ್, ಪೇಂಟಿಂಗ್, ಕೃತಕ ಹೂಗಳು….ಎಲ್ಲವನ್ನು ಮಾಡಿ ಮನೆಯನ್ನು ಅಲಂಕರಿಸಿದಳು.

ಹರೀಶನ ವಿನಂತಿಯ ಮೇರೆಗೆ ಕೃಷ್ಣರಾಜಪುರ ಶಾಖೆಗೆ ವರ್ಗಾಯಿಸಲ್ಪಟ್ಟು ಅವನಿಗೆ ಓಡಾಡಲು ಅನುಕೂಲವಾಯಿತು. ಮೈಥಿಲಿಗೆ ಬಡ್ತಿ ದೊರೆತು ಲಿಂಗರಾಜಪುರ ಶಾಖೆಗೆ ವರ್ಗವಾಯಿತು. ಬದುಕಿನಲ್ಲಿ ಅಂದುಕೊಳ್ಳದೇ ಎಲ್ಲವೂ ಅನುಕೂಲವಾಗಿ ನಡೆಯುತ್ತಿರುವಾಗ ಯಶಸ್ಸಿನ‌ ತುತ್ತತುದಿಯಲ್ಲಿದ್ದಂತೆ ಭಾಸವಾಯಿತು.

ಆದರೆ ಬೊಗಸೆಯಲ್ಲಿ ಮೊಗೆ ಮೊಗೆದು ಸುಖವನ್ನು ಕೊಟ್ಟ ವಿಧಿಗೇ ಏನೆನ್ನಿಸಿತೋ…ಒಂದು ದಿನ ಮೈಥಿಲಿಯ ಹೆಸರಿಗೆ ಬಂದ ನೋಟೀಸ್ ಬಂದಿತು.

ಆ ವಸತಿ ಸಂಕೀರ್ಣ ನಿರ್ಮಾಣಕ್ಕಾಗಿ ಬೆಂಗಳೂರು ನಗರದ ತ್ಯಾಜ್ಯವನ್ನು ಕೊಂಡೊಯ್ಯುವ ರಾಜಾ ಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು! ಬೆಂಗಳೂರು ಮಹಾನಗರ ಪ್ರಾಧಿಕಾರವು ಅದನ್ನು ಕೂಡಲೇ ತೆರವುಗೊಳಿಸಲು ವಸತಿ ಸಂಕೀರ್ಣದ ನಿವಾಸಿಗಳಿಗೆ ನೀಡಿದ ನೋಟೀಸ್ ಅದಾಗಿತ್ತು.

ಮೈಥಿಲಿಗೆ ಹೃದಯದ ಬಡಿತವೇ ನಿಂತಂತಾಯಿತು! ಒಳಗೆ ಶೇವ್ ಮಾಡುತ್ತಿದ್ದ ಹರೀಶನನ್ನು ಕರೆಯಲು ಬಾಯಿತೆರೆದರೆ ಸ್ವರವೇ ಬರುತ್ತಿಲ್ಲ. ಕಣ್ಣು ಕತ್ತಲೆಯಿಟ್ಟಂತಾಗಿ ಗೋಡೆ, ಅದರ ಮೇಲಿರುವಿದೆಲ್ಲ ಗಿರಗಿರನೇ ಸುತ್ತತೊಡಗಿತು.

ಬ್ಯಾಂಕಿನಲ್ಲಿ ತೆಗೆದುಕೊಂಡ ಸಾಲ, ಅದನ್ನು ತೀರಿಸಲು ಕಟ್ಟುತ್ತಿರುವ ದೊಡ್ಡ ಮೊತ್ತದ ಕಂತು, ಅತಂತ್ರವಾಗುವ ತಮ್ಮ ಸುಂದರ‌ ಕುಟುಂಬ, ತಮ್ಮ ಅಸುರಕ್ಷಿತ ಭವಿಷ್ಯ, ಭಗ್ನಗೊಂಡ ಕನಸು ….ಬೆಲ್ ಮಾಡಿದವರಾರೆಂದು ನೋಡಲು ಬಂದವನು ಕೆಳಗೆ ಬಿದ್ದ ಮೈಥಿಲಿಯನ್ನು ಕಂಡು ಧಾವಿಸಿದ. ಗಾಬರಿಯಿಂದ ಅವಳ ಕೆನ್ನೆ ತಟ್ಟಿ ಎಚ್ಚರಿಸಲು ಪ್ರಯತ್ನಿಸುತ್ತಿರುವಾಗ ಕೈಯಲ್ಲಿದ್ದ ನೋಟೀಸನ್ನು ಕಂಡು ಓದಿದವನಿಗೆ ಅಕ್ಷರಗಳು ಕಾಣಲಿಲ್ಲ.


  • ಶೋಭಾ ಮೂರ್ತಿ – ಕತೆಗಾರರು 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading