ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೯)

ನಮ್ಮ ಮನೆಗೆ ಬಂದ ಮೊದಲ ಬೆಕ್ಕು ಚಿನ್ನು ಕಾಣೆಯಾದ ನಂತರ ಮನೆಯಲ್ಲಿ ಮೌನ ಆವರಿಸಿತು. ಮೂವರಲ್ಲೂ ಅವನದೇ ಕನವರಿಕೆ. ಚಿನ್ನು ಕುರಿತು ಅಂಕಣಕಾರ್ತಿ ಕೆ.ಸಿ. ರತ್ನಶ್ರೀ ಶ್ರೀಧರ್ ಅವರ ಹಂಚಿಕೊಂಡಿದ್ದಾರೆ. ತಪ್ಪದೆ ಓದಿ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…

ನಮ್ಮ ಮಗನಂತೂ ಚಿನ್ನು ಅಂಗಿ, ಅವನು ಆಡುತ್ತಿದ್ದ ಗೊಂಬೆಯನ್ನು ತನ್ನ ಹಾಸಿಗೆಯ ಮೇಲಿಟ್ಟುಕೊಂಡೇ ಮಲಗುತ್ತಿದ್ದ. (ಈಗಲೂ ಚಿನ್ನುನ ಅಂಗಿಯನ್ನು ಜೋಪಾನವಾಗಿಟ್ಟುಕೊಂಡಿದ್ದಾನೆ) ನಾವು ಹೊರಗೆ ಹೋದಾಗಲೆಲ್ಲಾ ಎಲ್ಲಾದರೂ ಚಿನ್ನು ಕಾಣಬಹುದೇನೋ ಎಂದು ಅಪ್ರಯತ್ನಪೂರ್ವಕವಾಗಿ ನಮ್ಮ ಕಣ್ಣುಗಳು ಅವನನ್ನೇ ಹುಡುಕುತ್ತಿದ್ದವು.

ಅವನು ಮತ್ತೆ ತಿರುಗಿ ಮನೆಗೆ ಬರಬಹುದೆಂದು ಪ್ರತಿದಿನವೂ ಕಾಯುತ್ತಿದ್ದೆವು. ಎಲ್ಲಿಯಾದರೂ ಜಿಂಜರ್ ಬೆಕ್ಕು ಕಂಡಾಗಲೆಲ್ಲ ನಮ್ಮ ಚಿನ್ನು ಇರಬಹುದೇನೋ ಎಂಬ ಆಸೆಯಿಂದ ಹತ್ತಿರ ಹೋಗಿ ನೋಡಿ, ಅವನಲ್ಲ ಎಂಬ ನಿರಾಸೆಯಿಂದ ಹಿಂದಿರುಗುತ್ತಿದ್ದೆವು. ಈ ಮೊದಲು ಅವನು ಒಂದು ದಿನವೂ ಮೂರು ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಆಚೆ ಹೋದವನಲ್ಲ. ಹತ್ತಿರ ಹತ್ತಿರ ಒಂದು ತಿಂಗಳಾಗುತ್ತಾ ಬಂದರೂ ಅವನ ಸುಳಿವು ಸಿಗಲೇ ಇಲ್ಲ. ನಮ್ಮ ಮನದ ಕೊರಗು ಕಡಿಮೆಯಾಗಲೇ ಇಲ್ಲ.

ಆ ವೇಳೆಗೆ ನಾವು ಚಿನ್ನುವನ್ನು ತಂದಿದ್ದ ನಮ್ಮ ಸ್ನೇಹಿತರ ಮನೆಯಲ್ಲಿ ಅವರ ಬೆಕ್ಕು ಮತ್ತೆ ಮರಿ ಹಾಕಿತ್ತು. ಆ ಮರಿಗಳನ್ನು ಯಾರಿಗಾದರೂ ಕೊಡಲು ಅವರೂ ಹುಡುಕಾಡುತ್ತಿದ್ದರು. ಒಂದು ದಿನ ನನ್ನ ಪತಿ ಮತ್ತು ಮಗ ಎಲ್ಲಿಗೋ ಹೋಗಿ ಬರುವ ದಾರಿಯಲ್ಲಿ ಅವರ ಮನೆಗೆ ಹೋದಾಗ, ಒಂದು ತಿಂಗಳ ಪುಟ್ಟ ಬೆಕ್ಕಿನ ಮರಿಗಳನ್ನು ನೋಡಿ ಆಸೆಯಿಂದ ಎರಡು ಮರಿಗಳನ್ನು ಮನೆಗೆ ಎತ್ತಿಕೊಂಡು ಬಂದರು. ನನಗಂತೂ ಆ ಮರಿಗಳನ್ನು ನೋಡಿ ಅದೆಷ್ಟು ಸಂತೋಷವಾಯಿತೆಂದರೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.

ಹೀಗೆ ನಮ್ಮ ಮನೆಗೆ ಕಿಟ್ಟು ಪುಟ್ಟುವಿನ ಆಗಮನವಾಯಿತು. ಎರಡು ಮರಿಗಳೂ (ಅಣ್ಣ-ತಮ್ಮ) ಒಂದೇ ಬಣ್ಣ, ಒಂದೇ ರೂಪ ಇದ್ದುದರಿಂದ ನಮಗೆ ಅವುಗಳನ್ನು ಗುರುತಿಸುವುದು ಕಷ್ಟಸಾಧ್ಯವಾಗಿತ್ತು. ಹಾಗಾಗಿ ಒಂದು ಮರಿಯ ಹಣೆಯ ಮೇಲೊಂದು ಗುರುತಿಗಾಗಿ ಕಾಡಿಗೆಯ ಬೊಟ್ಟು ಇಟ್ಟಿದ್ದೆ. ಆ ಮರಿಯನ್ನು ಪುಟ್ಟ ಎಂದು, ಇನ್ನೊಂದನ್ನು ಕಿಟ್ಟು ಎಂದು ಗುರುತಿಸುತ್ತಿದ್ದೆವು. ಪುಟ್ಟುವಿನ ಧ್ವನಿ ಸಿಹಿ ಜೇನು ಸುರಿದಂತೆ ಬಹಳ ಮಧುರವಾಗಿತ್ತು. ಕಿಟ್ಟುವಿನ ಧ್ವನಿ ಸ್ವಲ್ಪ ಒರಟು ಗಂಡುದನಿ. ನಮಗೆ ಅವುಗಳ ಧ್ವನಿಯಿಂದ ಕಿಟ್ಟು ಪುಟ್ಟುವನ್ನು ಗುರುತಿಸಲು ಸುಲಭವಾಯಿತು.

ಅವುಗಳಿಗೆ ಮಾತ್ರ ಸುಮಾರು ಒಂದು ತಿಂಗಳವರೆಗೂ ತಮ್ಮ ಹೆಸರು ಗೊಂದಲಮಯವಾಗಿಯೇ ಇತ್ತು. ಕಿಟ್ಟು ಅಥವಾ ಪುಟ್ಟು ಎರಡರಲ್ಲಿ ಒಂದನ್ನು ಕರೆದರೆ ಎರಡೂ ಮರಿಗಳು ಓಗೊಡುತ್ತಿದ್ದವು. ನಂತರದ ದಿನಗಳಲ್ಲಿ ತಮ್ಮ ಹೆಸರುಗಳನ್ನು ಬಹಳ ಚೆನ್ನಾಗಿ ಗುರುತಿಟ್ಟುಕೊಂಡು ಯಾರನ್ನು ಕರೆಯುವೆವೋ ಅದು ಓಗುಡುತ್ತಿತ್ತು.

ಅವುಗಳ ಮಲ ಮೂತ್ರ ವಿಸರ್ಜನೆಗೆ ಮನೆಯ ಶೌಚಾಲಯವನ್ನೇ ಬಳಸುವ ಅಭ್ಯಾಸ ಮಾಡಿಸಿದೆ. ತುಂಬಾ ಚಿಕ್ಕ ಮರಿಗಳಾದ್ದರಿಂದ ಅವುಗಳನ್ನು ಮನೆಯ ಹೊರಗೆ ಎಲ್ಲೂ ಕಳಿಸುತ್ತಿರಲಿಲ್ಲ. ಅವು ಶೌಚಾಲಯ ಬಳಸುವುದನ್ನು ತುಂಬಾ ಬೇಗ ಕಲಿತುಕೊಂಡವು. ಅವು ಮುಗಿಸಿ ಬಂದ ಕೂಡಲೇ ನೀರು ಹಾಕಿ ಸ್ವಚ್ಛ ಮಾಡುವ ಕೆಲಸ ಮಾತ್ರ ನಮ್ಮದು. ಕಿಟ್ಟುವಾಗಲಿ, ಪುಟ್ಟುವಾಗಲಿ ಒಂದು ದಿನವೂ ಶೌಚಾಲಯ ಬಿಟ್ಟು ಮನೆಯ ಬೇರೆಡೆ ಮಲ ಮೂತ್ರ ವಿಸರ್ಜನೆ ಮಾಡುತ್ತಿರಲಿಲ್ಲ.

ಎರಡು ಮರಿಗಳು ಒಟ್ಟಿಗೆ ಬೆಳೆದಿದ್ದರಿಂದ ಸದಾ ಒಟ್ಟಿಗೆ ಇರುತ್ತಿದ್ದವು. ಒಟ್ಟಿಗೇ ಊಟ, ಆಟ, ನಿದ್ದೆ ಎಲ್ಲವೂ. ಒಂದು ಕ್ಷಣವೂ ಒಂದನ್ನೊಂದು ಬಿಟ್ಟಿರುತ್ತಿರಲಿಲ್ಲ. ಅದರಲ್ಲಿ ಕಿಟ್ಟು ಮರಿ ಧೈರ್ಯಶಾಲಿ. ಪುಟ್ಟುವಿನದು ಸ್ವಲ್ಪ ಪುಕ್ಕಲು ಸ್ವಭಾವ. ಕಿಟ್ಟು ತನ್ನ ತಮ್ಮ ಪುಟ್ಟುವಿನ ಬಗ್ಗೆ ಅಮ್ಮನಂತೆ ಕಾಳಜಿ ಮಾಡುತ್ತಿದ್ದ. ಗೋಡೆಯ ಒಂದು ಮೂಲೆಯಲ್ಲಿ ಸುತ್ತಿಟ್ಟಿರುತ್ತಿದ್ದ ಕಾರ್ಪೆಟ್ ಸುರುಳಿಯ ಮೇಲೆ ಹತ್ತಿದ ಪುಟ್ಟು, ಕೆಳಗೆ ಇಳಿಯಲಾಗದೆ ಕೂಗಿದರೆ ಸಾಕು ತಕ್ಷಣ ಕಿಟ್ಟು ತಾನೂ ಸರಸರಿನೆ ಮೇಲೇರುತ್ತಿದ್ದ. ಕೊನೆಗೆ ಇಬ್ಬರನ್ನು ಇಳಿಸಲು ನಾನೇ ಬರಬೇಕಿತ್ತು.

ತಿನ್ನುವಾಗಲೂ ಅಷ್ಟೇ. ಪುಟ್ಟುವಿಗೇ ಆದ್ಯತೆ ನೀಡುತ್ತಿದ್ದ ಕಿಟ್ಟು. ಬೇರೆ ಬೇರೆಯಾಗಿ ಎರಡು ಬಟ್ಟಲಿಗೆ ಊಟ ಹಾಕಿಟ್ಟರೆ, ಪುಟ್ಟು ತನ್ನ ಬಟ್ಟಲಲ್ಲಿ ಚೂರು ತಿಂದು ಕಿಟ್ಟುವಿನ ಬಟ್ಟಲಿಗೆ ಬಾಯಿ ಹಾಕುತ್ತಿದ್ದ. ತಕ್ಷಣ ಕಿಟ್ಟು ತಾನು ತಿನ್ನುವುದನ್ನು ನಿಲ್ಲಿಸಿ, ತಮ್ಮನಿಗೆ ತನ್ನ ಬಟ್ಟಲಿನಲ್ಲಿ ತಿನ್ನಲು ಅನುವು ಮಾಡಿಕೊಟ್ಟು ತಾನು ಹಿಂದೆ ಸರಿದು ನಿಲ್ಲುತ್ತಿದ್ದ ತ್ಯಾಗರಾಜನವನು. ಇದನ್ನು ನೋಡಿದ ನಾನು ಪುಟ್ಟನಿಗೆ ಬೈದು, “ನಿನ್ನ ಬಟ್ಟಲಿನಲ್ಲಿ ನೀನು ತಿನ್ನು” ಎಂದು ಅವನನ್ನು ಎತ್ತಿ ಅವನ ಬಟ್ಟಲ ಬಳಿ ಬಿಟ್ಟ ಮೇಲೆ ಕಿಟ್ಟು ತನ್ನ ಬಟ್ಟಲಿನಲ್ಲಿ ತಿನ್ನುತ್ತಿದ್ದ.

ಹತ್ತನ್ನೆರಡು ದಿನಕ್ಕೊಮ್ಮೆ ಸ್ನಾನ ಮಾಡಿಸುತ್ತಿದ್ದೆ. ಕಿಟ್ಟು ಪುಟ್ಟು ಇಬ್ಬರಿಗೂ ಸ್ನಾನ ಇಷ್ಟವಾಗುತ್ತಿರಲಿಲ್ಲ. ಸ್ನಾನ ಮಾಡಿಸುವ ಸೂಚನೆ ಸಿಕ್ಕರೆ ಸಾಕು ಸೋಫಾ ಕೆಳಗೆ ಅವಿತುಕೊಳ್ಳುತ್ತಿದ್ದವು. ಪುಟ್ಟುವಿಗೆ ಮೊದಲು ಸ್ನಾನಕ್ಕೆ ಕರೆದೊಯ್ದರೆ, ಬಚ್ಚಲು ಮನೆಯ ಮುಚ್ಚಿದ ಬಾಗಿಲ ಬಳಿ ಕುಳಿತು ಕಿಟ್ಟು ತಮ್ಮನಿಗಾಗಿ ಚಡಪಡಿಸುತ್ತಿದ್ದ. ಹಾಗಾಗಿ, ಕಿಟ್ಟುವಿಗೇ ಮೊದಲು ಸ್ನಾನ ಮಾಡಿಸಿ ಒರೆಸಿದ ನಂತರ ಪುಟ್ಟುವಿಗೆ ಸ್ನಾನ ಮಾಡಿಸಿ ಒರೆಸುತ್ತಿದ್ದೆ. ಆಮೇಲೆ ಕಿಟಕಿಯಿಂದ ಬರುವ ಬಿಸಿಲಿಗೆ ಕುಳಿತು ಮೈ ನೆಕ್ಕಿಕೊಳ್ಳುತ್ತಿದ್ದವು.

ಚಿನ್ನಾಟ ಆಡುವಾಗಲಂತೂ ಪರಸ್ಪರ ಒಂದನ್ನೊಂದು ಹಿಡಿದುಕೊಂಡು ದಬ ದಬ ದಬ ಹಿಂಗಾಲಿನಿಂದ ಒದೆಯುತ್ತ ನೆಲದ ಮೇಲೆ, ಸೋಫಾ ಮೇಲೆ, ಮೆಟ್ಟಿಲ ಮೇಲೆಲ್ಲಾ ಹೊರಳಾಡುತ್ತಾ ಕುಣಿದಾಡಿ, ನೆಗೆದಾಡಿ ಸುಖಿಸುತ್ತಿದ್ದವು. ಅವುಗಳ ಚಿನ್ನಾಟ ನೋಡುವುದೇ ಕಣ್ಣಿಗೆ ಹಬ್ಬ. ಆದರೆ, ಅವುಗಳ ಚಿನ್ನಾಟದ ಸಮಯದಲ್ಲಿ ಅಡ್ಡ ಸಿಕ್ಕ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗುವುದು ಖಚಿತ. ಸೋಫಾ ಮೇಲಿನ ಕವರ್ ಎಳೆದು ಬಿಸಾಡುತ್ತಿದ್ದವು. ಸುಸ್ತಾಗುವವರೆಗೂ ಆಟ ಆಡಿದ ಮೇಲೆ ಒಂದನ್ನೊಂದು ತಬ್ಬಿಕೊಂಡು ಸೋಫಾ ಮೇಲೆ ಮಲಗಿಬಿಡುತ್ತಿದ್ದವು. (ಅವುಗಳ ಚಿನ್ನಾಟ ಅವು ಸಂಪೂರ್ಣ ಬೆಳೆದು ದೊಡ್ಡವಾದ ಮೇಲೂ ಹಾಗೆ ಮುಂದುವರೆದಿತ್ತು).

ಮೂರು ತಿಂಗಳ ನಂತರ ಕಿಟ್ಟು-ಪುಟ್ಟುವಿಗೆ ಮನೆಯ ಹೊರಗಿನ ಸುತ್ತಲ ಜಾಗದಲ್ಲಿ ಸ್ವಲ್ಪ ಹೊತ್ತು ಓಡಾಡಲು ಬಿಡುತ್ತಿದ್ದೆವು. ನಂತರ ಕಾಂಪೌಂಡ್ ದಾಟಿ ಆಚೀಚೆ ಓಡಾಡುವುದನ್ನು ಅಭ್ಯಾಸ ಮಾಡಿಕೊಂಡವು. ಹಾಗೆಯೇ ಮನೆಯ ಒಳಗಿನ ಶೌಚಾಲಯ ಬಳಸುವುದನ್ನು ನಿಲ್ಲಿಸಿ ಹೊರಗೆ ಹೋದಾಗಲೇ ಮುಗಿಸಿಕೊಂಡು ಬರುತ್ತಿದ್ದವು. ಸ್ವಲ್ಪ ದೊಡ್ಡವಾದ ನಂತರ ಕಿಟ್ಟು-ಪುಟ್ಟು ಮನೆಯಾಚೆ ಪ್ರತ್ಯೇಕವಾಗಿಯೂ ಓಡಾಡುವುದನ್ನು ರೂಡಿಸಿಕೊಂಡವು. ಕೆಲವೊಮ್ಮೆ ಕಿಟ್ಟು ಮನೆಯಲ್ಲಿ ಮಲಗಿದ್ದಾಗ ಪುಟ್ಟು ಮನೆಯಾಚೆ ಹೋಗಿರುತ್ತಿದ್ದ. ಪುಟ್ಟು ಮನೆಯಲ್ಲಿದ್ದಾಗ ಕಿಟ್ಟು ಆಚೆ ತಿರುಗಾಡಲು ಹೋಗಿರುತ್ತಿದ್ದ. ಒಂದೆರಡು ಗಂಟೆಗಳ ನಂತರ ಊಟ ನಿದ್ದೆಗೆ ಮನೆಗೆ ಬರುತ್ತಿದ್ದವು. ಕಾಲಕಾಲಕ್ಕೆ ಕಿಟ್ಟು-ಪುಟ್ಟುವನ್ನು ಒಟ್ಟಿಗೇ ವೈದ್ಯರ ಬಳಿ ಕರೆದೊಯ್ದು ಅವುಗಳಿಗೆ ಕೊಡಿಸಬೇಕಿದ್ದ ಇಂಜೆಕ್ಷನ್, ಔಷಧಿ ಕೊಡಿಸುತಿದ್ದೆವು.

ಮನೆಯಲ್ಲಿ ನಾವು ಮೂವರಿಗೂ ಕಿಟ್ಟು-ಪುಟ್ಟು ಇಬ್ಬರೂ ಅಚ್ಚುಮೆಚ್ಚು. ಅವುಗಳೂ ಅಷ್ಟೇ ಮೂವರ ಬಳಿಯೂ ಕರೆದಾಗ ಬಂದು ಮುದ್ದು ಮಾಡಿಸಿಕೊಳ್ಳುತ್ತಿದ್ದವು. ನಾವು ಮಲಗಿದ್ದಾಗ ನಮ್ಮ ಕಾಲ ಬಳಿ ಮಲಗುತ್ತಿದ್ದವು. ಟಿವಿ ನೋಡುತ್ತಾ ಕುಳಿತಾಗ ಅವುಗಳು ಬಂದು ನಮ್ಮ ತೊಡೆ ಮೇಲೆ ಮಲಗುತ್ತಿದ್ದವು. ಕೆಲವೊಮ್ಮೆ ಕಿಟ್ಟು ಟಿ ವಿ ಯಲ್ಲಿ ಕ್ರಿಕೆಟ್ ಬರುವಾಗ ತದೇಕಚಿತ್ತನಾಗಿ ಟಿ ವಿ ಪಕ್ಕ ಕುಳಿತು ಟಿವಿಯೊಳಗೆ ಕಾಣುವ ಬಾಲು ಹಿಡಿಯಲು ಪ್ರಯತ್ನಿಸುತ್ತಿದ್ದ. ಪುಟ್ಟು ಮಾತ್ರ ಅಪ್ಪಿತಪ್ಪಿಯೂ ಟಿ ವಿ ಅಥವಾ ಕನ್ನಡಿ ನೋಡುತ್ತಿರಲಿಲ್ಲ.

ಅವುಗಳಿಗೆ ನಮ್ಮ ಮಾತು ಬಹಳ ಚೆನ್ನಾಗಿ ಅರ್ಥ ಆಗ್ತಾ ಇತ್ತು. ಊಟ ಹಾಕುವುದು ಸ್ವಲ್ಪ ತಡವಾದರೂ ಕಿಟ್ಟು-ಪುಟ್ಟು ಎರಡು ಸೇರಿ ತೋಡಿ ರಾಗ ಶುರು ಮಾಡಿ ಬಿಡುತ್ತಿದ್ದವು. ಅವುಗಳ ಅಳು ಕೇಳಿಸಿಕೊಳ್ಳಲಾರದೆ ತಕ್ಷಣ ಊಟ ಹಾಕಬೇಕು. ಊಟ ಮಾಡಿದ ನಂತರ ಸಂತೃಪ್ತಿಯಿಂದ ಮೈಯೆಲ್ಲಾ ನೆಕ್ಕಿಕೊಳ್ಳುತ್ತಿದ್ದವು. ಮನೆಯ ಊಟದ ಜೊತೆಗೆ ಬೆಳಿಗ್ಗೆ ಸಾಯಂಕಾಲ ಸ್ವಲ್ಪ ಪೆಡಿಗ್ರಿ ಮಾದರಿಯ ಕ್ಯಾಟ್ ಫುಡ್ ಕೊಡುತ್ತಿದ್ದೆವು. ಸಣ್ಣ ಸಣ್ಣ ಬಿಸ್ಕೆಟ್ ನಂತಿರುವ ಕ್ಯಾಟ್ ಫುಡನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಿದ್ದವು.

ಒಮ್ಮೆ ಅಂಗಡಿಯಿಂದ ತಂದಿದ್ದ ಒಂದೊಂದು ಕೆ.ಜಿ. ಯ ಎರಡು ಫುಡ್ ಪ್ಯಾಕೆಟ್ಟಲಿ ಒಂದನ್ನು ಓಪನ್ ಮಾಡಿ ಡಬ್ಬಿಗೆ ಹಾಕಿಟ್ಟುಕೊಂಡು ಇನ್ನೊಂದು ಪಾಕೆಟ್ ಅನ್ನು ಮಂಚದ ಅಡಿಯಲ್ಲಿ ಇಟ್ಟಿದ್ದೆ. ಅದು ಯಾವುದೋ ಮಾಯದಲ್ಲಿ ಕಿಟ್ಟಿ ಮಂಚದ ಅಡಿಯಲ್ಲಿರುವ ಪಾಕೆಟ್ ಅನ್ನು ಹಲ್ಲಿನಲ್ಲಿ ಕಚ್ಚಿ ಓಪನ್ ಮಾಡಿಕೊಂಡು ಕದ್ದು ತಿನ್ನಲು ಶುರುವಿಟ್ಟು ಕೊಂಡಿದ್ದ. ಮೂರ್ನಾಲ್ಕು ದಿನ ಇದೇ ಕೆಲಸ ಮಾಡಿದ್ದ. ಒಂದು ದಿನ ಮಂಚದ ಅಡಿಯಲ್ಲಿ ಕುಳಿತು ಮೆಲ್ಲಗೆ ಬಿಸ್ಕೆಟ್ ಮುಕ್ಕುತ್ತಿರುವಾಗ ನನ್ನ ಕೈಗೆ ಸಿಕ್ಕಿ ಬಿದ್ದ. ನಾನು ಅವನನ್ನು ನೋಡಿದ ಕೂಡಲೇ ಆಚೆ ಓಡಿದ ನಮ್ಮ ಕಳ್ಳ ಕಿಟ್ಟಿ.

ಮುಂದುವರೆಯುವುದು…

ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :


  • ಕೆ ಸಿ ರತ್ನಶ್ರೀ ಶ್ರೀಧರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading