ಹಿರಿಯರಾದ ಶ್ರೀನಿವಾಸ.ಕೃ.ದೇಸಾಯಿ ಇನ್ನಿಲ್ಲ

ಶ್ರೀನಿವಾಸ ದೇಸಾಯಿಯವರನ್ನು ಮಂಡ್ಯದಲ್ಲಿ ನಡೆದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷವಾಗಿ ಸನ್ಮಾನಿಸಲಾಗಿತ್ತು. ಇದನ್ನು ಹೊರತು ಪಡಿಸಿದರೆ ಬೇರೆ ಯಾವ ಪುರಸ್ಕಾರಗಳೂ ಅವರಿಗೆ ದೊರೆತಿರಲಿಲ್ಲ. ಶ್ರೀನಿವಾಸ ದೇಸಾಯಿ ಅವರಿಗೆ ಅಕ್ಷರ ನಮನಗಳು….

ನಾನು ಬಹಳ ಗೌರವಿಸುತ್ತಿದ್ದ, ನನ್ನ ಅರಿವನ್ನು ಗಮನಾರ್ಹವಾಗಿ ವಿಸ್ತರಿಸುತ್ತಿದ್ದ ಬರಹಗಾರ ಶ್ರೀನಿವಾಸ.ಕೃ.ದೇಸಾಯಿ ನಿನ್ನೆ (9 ಮೇ 2006) ನಮ್ಮನ್ನು ಅಗಲಿದ್ದಾರೆ ಎಂದು ಅವರ ಮಗ ಕೃಷ್ಣಾಜಿ ತಿಳಿಸಿದಾಗ ಹೃದಯ ಭಾರವಾಯಿತು. ಅವರ ನಿರಂತರ ಮುದ ನೀಡುತ್ತಿದ್ದ ಬರಹಗಳು, ಜ್ಞಾನವನ್ನು ವಿಸ್ತರಿಸುತ್ತಿದ್ದ ವಿಡಿಯೋಗಳು, ಅಂತ:ಕರಣ ತುಂಬಿದ ದೂರವಾಣಿ ಕರೆಗಳು ಇನ್ನಿರುವದಿಲ್ಲ ಎನ್ನುವುದೇ ದೊಡ್ಡ ಶೂನ್ಯವನ್ನು ನಿರ್ಮಿಸಿದೆ.

ಹಿರಿಯರಾದ ಶ್ರೀನಿವಾಸ .ಕೃ.ದೇಸಾಯಿಯವರ ಪರಿಚಯ ನನಗೆ ಆಗಿದ್ದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. ಕೃಷ್ಣರಾಜ ಸಾಗರವನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಕಟ್ಟಿಲ್ಲವೆಂಬ ವಾದ ಪ್ರಬಲವಾಗಿ ಕೇಳಿ ಬರುತ್ತಿದ್ದ ಕಾಲದಲ್ಲಿ ಅದನ್ನು ಕಟ್ಟಿದ್ದು ಸರ್.ಎಂ.ವೀಯವರೇ ಎಂಬ ಚಾರಿತ್ರಿಕ ದಾಖಲೆಗಳನ್ನು ಹೊಂದಿದ ಕೃತಿಯನ್ನು ಅವರು ರಚಿಸಿದ್ದರು. ಅದು ಪ್ರಕಟಣೆಗಾಗಿ ಬಾಪ್ಕೋ ಪ್ರಕಾಶನದ(ಬೆಂಗಳೂರು ಮುದ್ರಣಾಲಯ) ಬಳಿ ಬಂದಿತ್ತು. ಅವರು ಪರಿಶೀಲನೆಗಾಗಿ ನನಗೆ ಕಳುಹಿಸಿದರು. ನನಗೆ ಶ್ರೀನಿವಾಸ ದೇಸಾಯಿಯವರ ಅಧ್ಯಯನದ ವ್ಯಾಪ್ತಿ ಕಂಡು ಬೆರಗಾಯಿತು. ಇಲ್ಲಿಂದ ಮುಂದೆ ಅವರ ಜೊತೆಗಿನ ಒಡನಾಟ ಬೆಳೆಯತ್ತಲೇ ಹೋಯಿತು.

ತಮ್ಮ ಎಂಬತ್ತರಡನೆಯ ವಯಸ್ಸಿನಲ್ಲಿಯೂ ಶ್ರೀನಿವಾಸ ದೇಸಾಯಿ (ಜನನ.1944) ಬರವಣಿಗೆ ಮತ್ತು ಅಧ್ಯಯನದಲ್ಲಿ ನಿರಂತರವಾಗಿ ನಿರತರಾಗಿದ್ದರು. ಯುವಕರೂ ನಾಚುವಂತೆ ಲವಲವಿಕೆಯಿಂದ ವಿಡಿಯೋಗಳನ್ನು ಮಾಡಿ ಯೂಟ್ಯೂಬ್ನಲ್ಲಿ ಹಾಕುತ್ತಿದ್ದರು. ಅವರ ವಿಡಿಯೋಗಳಿಗೇ ಕಾಯುವ ಒಂದು ವರ್ಗವೂ ಇತ್ತು. ವೃತ್ತಿಯಲ್ಲಿ ಅವರು ಸೂಪರಿಟೆಂಡೆಂಟ್ ಇಂಜಿನಿಯರ್ ಆಗಿದ್ದವರು. ಪ್ರಹ್ಲಾದ ನರೇಗಲ್ಲರ ನೆಚ್ಚಿನ ಶಿಷ್ಯರು. ಬೇಂದ್ರಯವರ ನಿಕಟ ಒಡನಾಟವನ್ನು ಹೊಂದಿದವರು. ಅವರ ಕನ್ನಡ ಪ್ರೀತಿಯಿಂದಲೇ ಗುಲ್ಬರ್ಗ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಸಂಘವು ಸ್ಥಾಪನೆಗೊಂಡಿತು.ಡಿ.ವಿ.ಜಿ ಅಧ್ಯಯನ ಕೇಂದ್ರವನ್ನು ಧಾರವಾಡದಲ್ಲಿ ಸ್ಥಾಪಿಸಿದ್ದರು. ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ನರೇಗಲ್ ಮಾಸ್ತರ್, ರವೀಂದ್ರ ನಾಥ ಠಾಕೂರ್ ಮತ್ತು ಬಾಳೆಕುಂದ್ರಿಯವರ ಹೆಸರಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ.

ವೃತ್ತಿಯಲ್ಲಿದ್ದಾಗ ‘ಬೇಂದ್ರೆ ಭವನ’ ಕಟ್ಟುವ ಸುಯೋಗ ಅವರಿಗೆ ಒದಗಿ ಬಂದಿತ್ತು. ಅದು ಸರ್ಕಾರದ ಅನುದಾನದ ಕೊರತೆಯಿಂದ ನಿಲ್ಲುವ ಸಂದರ್ಭ ಬಂದಾಗ ಕೈಯಿಂದ ಹಣ ಹಾಕಿ ಅದನ್ನು ಮುಗಿಸಿದವರೂ ಕೂಡ ಅವರೇ! ಬೇಂದ್ರೆಯವರ ಕುರಿತು ಅವರಿಗೆ ವಿಶೇಷ ಪ್ರೀತಿ. ಬೇಂದ್ರೆಯವರ ಕುರಿತು ಬಂದ ನೂರು ಕವಿತೆಗಳ ‘ಮುತ್ತಿನ ಮಾಲೆ’ ಸಂಕಲವನ್ನೂ ತಂದಿದ್ದಾರೆ. ‘ಕಂಡವು ಅಮೃತದ ಬಿಂದು’ ‘ವರಕವಿ ಬೇಂದ್ರೆಯವರ ಸನ್ನಿಧಿಯಲ್ಲಿ’ ಅವರ ಬೇಂದ್ರೆಯವರ ಕುರಿತ ಇತರ ಪ್ರಮುಖ ಕೃತಿಗಳು. ಬೇಂದ್ರೆಯವರಂತೆ ಕುವೆಂಪು ಅವರ ಕುರಿತೂ ಶ್ರೀನಿವಾಸ ದೇಸಾಯಿಯವರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಶ್ರೀ ರಾಮಾಯಣ ದರ್ಶನಂನ ಹಿಂದಿ ಅನುವಾದವನನ್ನು ಡಾ.ಸರೋಜಿನಿ ಮಹಿಷಿಯವರು ಮಾಡಿದ್ದರು. ಕುವೆಂಪು ಅವರಿಗೆ ಜ್ಞಾನಪೀಠ ಬಂದಾಗ ಅದನ್ನು ವಾಚಿಸಕಲಾಗಿತ್ತು ಎಂಬ ಚಾರಿತ್ರಿಕ ಸತ್ಯವನ್ನು ಅವರು ದಾಖಲಿಸದರು. ಡಾ.ಶಂಕರ ಮೊಕಾಶಿ ಪುಣೇಕರ ಅವರ ಇಂಗ್ಲೀಷ್ ಅನುವಾದ, ಸಿ.ಜಿ.ಪುರುಷೋತ್ತಮ ಅವರ ಸಂಸ್ಕೃತ ಅನುವಾದವನ್ನು ಗುರುತಿಸಿ ತೌಲನಿಕ ಅಧ್ಯಯನ ನಡೆಸಿ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ನಾನಾಫಾಲ್ಕೀವಾಲರ ಕುರಿತ ಅವರ ಕೃತಿ ಭಾರತೀಯ ವಿದ್ಯಾಭವನದಿಂದ ಪ್ರಕಟವಾಗಿದೆ. ಡಿ.ವಿ.ಜಿ, ಸರ್.ಎಂ.ವಿಯವರ ಕುರಿತು ಅವರು ಅಧ್ಯಯನಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಈವರೆಗೂ ಅವರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು ಅದರ ಹಿಂದಿನ ಅಧ್ಯಯನ ಮತ್ತು ಕನ್ನಡ ಪ್ರೀತಿ ಬಹಳ ವಿಶೇಷವಾದದ್ದು.

ಶ್ರೀನಿವಾಸ ದೇಸಾಯಿಯವರ ಪರಿಚಯದಿಂದ ನನಗಾದ ಇನ್ನೊಂದು ಲಾಭವೆಂದರೆ ‘ಶ್ರೀ ಗುರುಚರಿತ್ರೆ’ ಮಹಾಕಾವ್ಯವೆಂದು ಅದು ಮರಾಠಿಯ ಓವಿ ಛಂದಸ್ಸಿನಲ್ಲಿದೆ ಎಂದು ತಿಳಿದಿದ್ದು. ಅದನ್ನು ಕಥಾರೂಪದಲ್ಲಿ ಮಾತ್ರ ಅರಿತಿದ್ದ ನಾನು ಶ್ರೀ ದೇಸಾಯಿ ದತ್ತಮೂರ್ತಿ(ಶ್ರೀ ದೇವದತ್ತ) ಅವರು 1962ರಲ್ಲಿ 7491 ಓವಿಗಳಲ್ಲಿ ಅನುವಾದಿಸಿದ್ದನ್ನು (32000 ಸಾಲುಗಳು) ಅವರು ನನ್ನ ಗಮನಕ್ಕೆ ತಂದರು. ಬೇಂದ್ರೆಯವರೇ ಇದನ್ನು ‘ಶತಮಾನದ ಕಾರ್ಯ’ ಎಂದು ಕರೆದಿದ್ದಾರೆ ಎಂದರೆ ಇದರ ಮಹತ್ವವನ್ನು ಇನ್ನೇನು ವಿವರಿಸ ಬೇಕಾಗಿಲ್ಲ! ಇದು ಕರ್ನಾಟಕದ ಅವಧೂತ ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು, ದತ್ತ ಪರಂಪರೆಯನ್ನು ತಿಳಿದು ಕೊಳ್ಳಲು ಅತ್ಯುತ್ತಮ ಆಕರ ಗ್ರಂಥವಾಗಿದೆ ಎಂದರೆ ತಪ್ಪಾಗಲಾರದು.

ಶ್ರೀನಿವಾಸ ದೇಸಾಯಿಯವರನ್ನು ಮಂಡ್ಯದಲ್ಲಿ ನಡೆದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷವಾಗಿ ಸನ್ಮಾನಿಸಲಾಗಿತ್ತು. ಇದನ್ನು ಹೊರತು ಪಡಿಸಿದರೆ ಬೇರೆ ಯಾವ ಪುರಸ್ಕಾರಗಳೂ ಅವರಿಗೆ ದೊರೆತಿರಲಿಲ್ಲ. ಅವರು ಬಿಟ್ಟು ಹೋಗಿರುವ ಸಾರಸ್ವತ ಕೊಡುಗೆ ಮತ್ತು ಸಂಶೋಧನೆಗಳನ್ನು ನಾಡು ಸರಿಯಾಗಿ ಬಳಸಿ ಕೊಳ್ಳುವುದೇ ಅವರಿಗೆ ಸಲ್ಲಿಸ ಬಹುದಾದ ಶ್ರದ್ದಾಂಜಲಿ


  • ಎನ್.ಎಸ್.ಶ್ರೀಧರ ಮೂರ್ತಿ – ಪತ್ರಕರ್ತರು, ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading