ಹೆಣ್ಣುಮಕ್ಕಳಿಲ್ಲದ ತಾಯಂದಿರನ್ನು ನೆನೆದ ಅವ್ವ

ಮದುವೆಯಾಗಿ ಹತ್ತು ವರ್ಷವಾದರೂ ಅಮ್ಮ ನನ್ನ ಮನೆಯಲ್ಲಿ ಹತ್ತು ದಿನವೂ ಉಳಿಯುತ್ತಿರಲಿಲ್ಲ. ನಾನಾಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಆದರೆ ಮೊನ್ನೆ ಅಮ್ಮ ಗಾಡಿಯಿಂದ ಬಿದ್ದು ಹುಬ್ಬಿನೊಳಗೆ ಎರಡು‌ ಹೊಲಿಗೆ ಬಿದ್ದಾಗ ಅಮ್ಮ, ನನ್ನೊಂದಿಗೆ ಮನೆಗೆ ಬಂದಳು. ದೀಪ ಗೋನಾಳ ಅವರ ಅಮ್ಮ ಈಗ ಹೇಗಿದ್ದಾರೆ ತಪ್ಪದೆ ಮುಂದೆ ಓದಿ…

ಹೆಣ್ಣು ಹೆತ್ತ ಅಮ್ಮಂದಿರು ಅದ್ಯಾಕೆ ಮಗಳ ಮನೆಯಲ್ಲಿ ಉಳಿಯೋಕೆ ಹಿಂದೇಟು ಹಾಕ್ತಾರೊ ನನಗೆ ಎಂದಿಗೂ ಬಗೆಹರಿಯದ ಪ್ರಶ್ನೆ. ಅದರಲ್ಲೂ ಈ ಉತ್ತರ ಕರ್ನಾಟಕದ ಅಮ್ಮಂದಿರದು ಅದೇನೆನೊ ತರ್ಕಕ್ಕೆ ಸಿಗದ ರೂಲ್ಸುಗಳು. ಮಗನ ಮನೆಯಾದರೆ ಅವರು ಇಡೀ ಜೀವನ ಇರಬಹುದು; ಅದೇ ಮಗಳ ಮನೆಯಾದರೆ ಅದು ಅವರಿಗೆ ಪರಕೀಯ. ಏನೋ ಋಣಭಾರ ಹೊತ್ಕೊಂಡು ಇದ್ದೀವಿ ಅನ್ನೋತರ ಮಾಡ್ತಾರೆ. ದುಡಿಯುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾದ ಮೇಲೆ ಈ ಮನಸ್ಥಿತಿ ಅಲ್ಪಸ್ವಲ್ಪ ಕಡಿಮೆಯಾಗಿದೆ ಆದರೂ ಗ್ರಾಮೀಣ‌ ಪ್ರದೇಶದ ಅಮ್ಮಂದಿರನ್ನ ಅಪಡೇಟ್‌ ಮಾಡಿ ಮಗನ ಮನೆ ಮಗಳ ಮನೆ ಎರಡರಲ್ಲೂ ನಿಮಗೆ ಸಮಾನ ಗೌರವ ಅಧಿಕಾರ ಇದೆ ಅಂತ ಹೇಳಿ ಒಪ್ಪಿಸುವುದು ಕಷ್ಟವೇ.

ಹೀಗೆ ನನ್ನವ್ವ ಕೂಡ ಇದೇ ಸಾಲಿಗೆ ಸೇರಿದವಳೆ. ಮದುವೆಯಾಗಿ ಹತ್ತು ವರ್ಷ ಆದರೂ ಆಕೆ ನನ್ನ ಮನೆಯಲ್ಲಿ ಹತ್ತು ದಿನವೂ ಉಳಿದಿರಲಿಲ್ಲ. ನೀನೆ ಬಂದು ಹೋಗು. ನಾನ ಬಂದ್ರೆ ಆಕಳ ಹಿಂಡೋರು ಯಾರು? ರೊಟ್ಟಿ ಮಾಡೋರು ಯಾರು? ಇಂತದೇ ವಿಚಾರ, ತಾನಿಲ್ಲದಿದ್ದರೆ ಜಗತ್ತು ನಿಂತು ಹೋಗುತ್ತೆ‌ ಅನ್ನುವ ಫೀಲಲ್ಲೆ ಉಳ್ಕೊಂಡುಬಿಟ್ಲು ಅಡುಗೆ ಮನೆಗೆ ಸೀಮಿತವಾಗಿ.
ಕರೋನ ಹಾವಳಿ ಮುಗಿದು ಒಂದೆರಡು ತಿಂಗಳಾಗಿತ್ತಷ್ಟೆ ರಾತ್ರಿ ಹನ್ನೊಂದಕ್ಕೆ ತಂಗಿ ಚೈತ್ರ ಕಾಲ್ ಮಾಡಿ ಅಳೋದಕ್ಕೆ ಶುರು ಮಾಡಿದ್ಲು, ನನ್ನ ಎದೆ ಬಡಿತ ಜೋರಾಯಿತು. ಏನಾಯ್ತ ಮೊದಲ ಹೇಳು ಅಂತ ಜೋರು ಬೈದೆ. ಅವಳಿಗೆ ಹೇಳೊಕು ಆಗದಷ್ಟು ಮಾನಸಿಕವಾಗಿ ದುರ್ಬಳಳಾಗಿ ಹೋಗಿದ್ದಳು. ನಾನು ಎರಡು ನಿಮಿಷ ಸುಮ್ಮನೆ ಅವಳ ಅಳು ಕೇಳಿಸಿಕೊಂಡ ಮೇಲೆ; ಹೊಲಕ್ಕ ಹೋಗಿ ಬರುವಾಗ ಅವ್ವ ಗಾಡಿಯಿಂದ ಬಿದ್ದು ತಲೆ ಒಡೆದಿದೆ! ಆಸ್ಪತ್ರೆಗೆ ಹೋದ್ವಿ ಅಲ್ಲಿಂದ ಸೀದಾ. ಹತ್ತು ಹೊಲಿಗೆ ಹಾಕಿದಾರೆ ಎಮ್‌ ಆರ್ ಆಯ್ ಸ್ಕ್ಯಾನ್ ಮಾಡಬೇಕು ಅಂದಿದಾರೆ, ತುಂಬ ರಕ್ತ ಹೋಗಿದೆ ಅಂದಳು ನಡುನಡುವೆ ಅಳ್ತಲೇ. ಅಳುವ ಸರದಿ ಈಗ ನನ್ನದು. ಕೈಕಾಲೆಲ್ಲ ತಣ್ಣಗಾಗಿ ನಾನು ಉತ್ತರಿಸೋಕೆ ಟೈಮ್ ತಗೊಂಡೆ. ಗಾಡಿ‌ ಮೇಲೆ ಯಾಕ ಕರ್ಕೊಂಡ ಹೋದಿ, ಅಂತ ಬೈಬೇಕಾ!? ಹೀಗೆಲ್ಲ ಆದಕೂಡಲೇ ಕಾಲ್ ಮಾಡಿದ್ರೆ ಸಂಜೆನೆ ಊರಿಗೆ ಬರ್ತಿದ್ದೆ ಮೊದಲೇ ಹೇಳಬೇಕಿತ್ತಲ್ಲವಾ, ಅಂತೆಲ್ಲ ಮನಸ್ಸಲ್ಲಿ ಓಡಿದ್ರು ಅದನ್ನೆಲ್ಲ ಹೇಳದೆ, ಎಲ್ಲಿದ್ದಿ? ಅಂದೆ ಮನೆಗೆ ಕರ್ಕೊಂಡ ಬಂದಿವಿ ಮನೆಲೇ ಇದ್ದೇವೆ, ಅಂದಳು. ಕಾಕಾ ಕೂಡ ಡಾಕ್ಟರ್ ಆದ್ದರಿಂದ ಕಾಕಾನು ಏನಾಗಲ್ಲ ಔಟ್ ಆಫ್ ಡೇಂಜರ್ ಅಂದಿದ್ದ‌.

ನಾನು ಬೆಳಗಾಗೊದರೊಳಗೆ ಸಂಗಾತಿನ ಕರ್ಕೊಂಡು ಊರು ತಲುಪಿದ್ದೆ. ಅವ್ವ ದೇವರ ಕೋಣೆಯಲ್ಲಿ ನರಳ್ತಾ ಮಲಗಿದ್ದಳು. ತಲೆಗೆ ಬ್ಯಾಂಡೇಜ್ ಮಾಡಿದ್ರು. ಆ ದೇವರ ಕೋಣೆಲಿ ನಾನು ಜ್ವರ ಬಂದು ಮಲಗಿದಾಗೆಲ್ಲ ಅವ್ವ ಹತ್ತ ಹತ್ತ ನಿಮಿಷಕ್ಕೆ ಬಂದು ತಲೆಮುಟ್ಟಿ ನೋಡಿ ಹಣೆಗೆ ದೇವರ ಅಂಗಾರ ಹಚ್ಚಿ ಹೋಗ್ತಿದ್ದಳು. ಹುಬ್ಬಿನೊಳಗೆ ಎರಡು‌ ಹೊಲಿಗೆ ಬಿದ್ದಾಗ ಅದೇ ದೇವರ ಕೊಣೆಲೆ ಸಿಡಿತಿರುವ ತಲೆ‌ ಹಿಡಿದು ಮಲಗಿದ್ದ ನೆನಪಾಯ್ತು. ಆಗೆಲ್ಲ ಅವ್ವನ ಆರೈಕೆ. ಆಕೆ ದೇವರಿಗೆ ಮಾಡ್ತಿದ್ದ ನಮಸ್ಕಾರಗಳು. ಹಣೆಗೆ ಹಚ್ತಿದ್ದ ದೇವರ ಅಂಗಾರ ಎಲ್ಲ ಸಾಲಾಗಿ ನೆನಪಾದ್ವು. ಈ ಕೋಣೆನೆ ದೇವರಿಗಲ್ಲ ಅರಾಮಿಲ್ಲದವರಿಗಾಗೆ ಅಜ್ಜ ಕಟ್ಟಿಸಿದ್ದಾ ಅನ್ನಿಸಿತು. ಸಾಲಾಗಿ ಅಲ್ಲಿ ಅನಾರೋಗ್ಯದಿಂದ ಮಲಗಿ ಎದ್ದವರ ಮೊಕಗಳು ನೆನಪಾಗಿ.

ನೋವಿನಿಂದಾಗಿ ಅವ್ವ ರಾತ್ರಿಯೆಲ್ಲ ನಿದ್ದೆ ಮಾಡಿರಲಿಲ್ಲ. ಅವಳ ಪುಟ್ಟ ಹಣೆಯ ಮೇಲೆ ನೋವಿನ ಗೆರೆಗಳು ನಿಚ್ಚಳವಾಗಿ ಮೂಡಿದ್ದವು. ಕಣ್ಣುಗಳಲ್ಲಿ ಹೊಳಪೇ ಇಲ್ಲ. ಎವ್ವಾ; ಎಂದೆ, ತುಂಬಿದ ಕಂಠದಿಂದ. ಅವ್ವ ಅಲ್ಲೆ ಮೆಲ್ಲನೆ ಕಣ್ಬಿಟ್ಟು ಬಂದಿಯಾ ಅಂದಳು. ಅವಳ ದನಿಯೊಳಗಿನ ಆರ್ದ್ರತೆ ಕಂಡು ನಾನು ನಡುರಾತ್ರಿಯೇ ಯಾಕೆ ಬರಲಿಲ್ಲ ಅಂತ ಪಾಪ ಪ್ರಜ್ಞೆ ಜಾಗೃತವಾಯಿತು. ನಾನು ಎಂದೂ ಅವ್ವನ್ನ ಇಂತ ಅಸಹಾಯಕ ಸ್ಥಿತಿಯಲ್ಲಿ ಕಂಡೇ ಇಲ್ಲ. ಎಂತ ಕೆಲಸವಾದರೂ ಅವಳು ಸೀರೆ ಸೆರಗು ಸೊಂಟಕ್ಕೆ ಸಿಕ್ಕಿಸಿ ನಮ್ಮನ್ನೆಲ್ಲ ಹುರುದುಂಬಿಸಿ ಕಣಕ್ಕಿಳಿದು ಬಿಡ್ತಿದ್ದಳು. ನಾನು ಹೆಚ್ಚೇನು ವಿವರಣೆ ಬಯಸದೆ ನಡಿ ಊರಿಗೆ ಹೋಗಣ ಇಲ್ಲಿ‌ ಇರೂದು ಬ್ಯಾಡ, ಅಂದೆ. ಪ್ರತಿ ಸಲ ಧಿಕ್ಕರಿಸ್ತಿದ್ದವಳು ಈ ಸಲ ಒಂದೆ ಮಾತಿಗೆ ಹ್ಮ, ಅಂದಳು.
ಅಪ್ಪಾಜಿ ಪಡಸಾಲಿ ಕಂಬಕ್ಕೆ ಕೂತವ ಹೋಗಬೇಡ ಅಂತ ಅನ್ನಲಿಲ್ಲ. ಅವ್ವ ನರಳೋದನ್ನ ನೋಡಿದ ಅವನಿಗೆ ಮಕ್ಕಳ ಕೈಲಿ ಆರೈಕೆ ಆಗಿ ಅರಾಮಾದ್ರೆ ಸಾಕು ಅನ್ನುವ ಹಾಗಾಗಿತ್ತೇನೊ ಆದರೆ ಅವತ್ತು ಅಪ್ಪಾಜಿ ಮರ್ಜಿಯನ್ನ ಕಾಯುವಷ್ಟು ತಾಳ್ಮೆ‌ ನನಗೂ ಇರಲಿಲ್ಲ. ಬೇಡ ಅಂದಿದ್ದರ ನಾನು ಖಂಡಿತ ಕಾನೂನು ಮಾತಾಡಿಯಾದರೂ ಅವ್ವನ್ನ ಆ ಮನೆಯಿಂದಾಚೆ ಕರೆ ತರ್ದಿದ್ದೆ ಅನಿಸುತ್ತೆ ಈಗ ಕೂತು ಸಮಧಾನವಾಗಿ ಯೋಚಿಸಿದ್ರೆ. ಆದಗ್ಯೂ ಕಾಕಾ ಪರ್ಮಿಷನ್ ಕೊಡಲಿಲ್ಲ. ಹೊಲಿಗೆ ಇನ್ನು ಹಸಿ ಇವೆ, ಜರ್ನಿ ಮಾಡೋದು ಬೇಡ. ಎರಡ ದಿನ ಬಿಟ್ಟು ಕರ್ಕೊಂಡು ಹೋಗು ಅಂದ. ನಾನು ಮೆಲ್ಲಗೆ ಕರ್ಕೊಂಡ ಹೋಗ್ತೆ ಅಂತ ಹಠ ಮಾಡಿ ಅವ್ವನ್ನು ಜೊತೆಗೆ ಒಬ್ಬ ತಂಗಿಯನ್ನು ಕಾರ್ ಹತ್ತಿಡಿ ಕರೆದುಕೊಂಡು ಬಂದುಬಿಟ್ಟೆ.

ಅವ್ವ ರಾತ್ರಿಯೆಲ್ಲ ಒಂದೇ ಬದಿಗೆ ಮಲಗ್ಬೇಕಿತ್ತು. ಪ್ರತಿ‌ ದಿನ ಬ್ಯಾಂಡೇಜ್ ಚೇಂಜ್ ಮಾಡಬೇಕಿತ್ತು. ಗಟ್ಟಿ ಪದಾರ್ಥ ತಿನ್ನೋದಕ್ಕೆ ಆಗ್ತಿರಲಿಲ್ಲ. ಎದ್ದು ಕೂತರೆ ತಲೆ ಮೂರ್ಛೆ ಬರ್ತಿತ್ತು. ಮೂರು ದಿನಕ್ಕೊಮ್ಮೆ ಆಕೆಯ ತಲೆ‌ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಿ ಅವಳ ದಪ್ಪವಾದ ಉದ್ದ ಕೂದಲ ಗಂಟು ಬಿಡಿಸಿ ಬಾಚಣಿಗೆ ಉಪಯೋಗಿಸದೆ ಬೆರಳಲ್ಲೆ ನೀವಿ ಜಡೆ ಹೆಣಿಬೇಕಿತ್ತು. ಇದೆಲ್ಲ ಕೆಲಸ ತಂಗಿ ಅಮೃತಳ ಪಾಲಿಗಿತ್ತು.

ಎರಡು ಮೂರು ತಾಸಿಗೆ ತೆಳ್ಳನೆ ಗಂಜಿ ಕುಡಿದು ಔಷಧ ತಗೊಂಡು ಮಲಗೇಳ್ತಿದ್ಲು ಅವ್ವ. ಇಡೀ ಜೀವಮಾನ ರೆಸ್ಟಲೆಸ್ ಆದ ಅವಳಿಗೆ ಬದುಕು ಒಂದು ವೆಕೇಷನ್ ಬ್ರೇಕ್ ಕೊಟ್ಟಿದೆ ಅನಿಸ್ತು ನಂಗೆ. ಹೀಗಾಗದೆ ಹೋಗಿದ್ರೆ ಅವಳು ಇಂತ ಆರೈಕೆ ಮಿಸ್ ಮಾಡಿಕೊಳ್ಳತಿದ್ಲು. ಮಕ್ಕಳು ಎಷ್ಟು ಪ್ರೀತಿಸಬಲ್ಲರು ಅನ್ನುವ ಲೆಕ್ಕ ಸಿಗದೇ ಹೋಗ್ತಿತ್ತು. ಅಳಿಯ ಕೂಡ ಮಗನಾಗಬಲ್ಲ ಅನ್ನುವ ಅನುಭವ ಮಿಸ್ಸಾಗ್ತಿತ್ತೇನೊ. ಅವ್ವಗ ಒಂದು ತಿಂಗಳದೊಳಗ ಅದೆಲ್ಲ ಅಂದಾಜು ಸಿಕ್ತು. ಮಗಳ ಮನೆ ಅನ್ನುವ ಮುಜುಗರ ಮುರಿದು ಬಿತ್ತು.

ಹದಿನೈದು ಇಪ್ಪತ್ತು ದಿನ ಅವ್ವ ಮಗುವಿನಂತೆ ಮೆದುವಾಗಿ ಹೋಗಿದ್ದಳು. ನಾನು ತಂಗಿ ಅವಳನ್ನ ಮಗುವಿನ ಹಾಗೆ ನೋಡಿಕೊಂಡ ಮೇಲೆ ಒಂದಿನ ಅವ್ವ ಹೇಳಿದ್ಲು ಹೆಣ್ಣುಮಕ್ಕಳು ಇಲ್ಲದ ತಾಯಂದಿರು ಅದೆಷ್ಟ ಕಷ್ಟ ಪಡ್ತಾರೇನೊ ಅಂತ. ಅವ್ವನಿಗೆ ಪ್ರತಿ‌ ತಾಯಿಗೂ ಹೆಣ್ಣು ಮಕ್ಕಳು ಇರಬೇಕು ಅನ್ನಿಸಿಬಿಟ್ಟಿತ್ತು.


  • ದೀಪ ಗೋನಾಳ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading