ಅಮ್ಮನೆ೦ದರೆ ಕೇವಲ ಮೊಲೆ ಹಾಲ ಜೀವರಸವಲ್ಲ…ಕವಿ ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಅಮ್ಮನೆ೦ದರೆ….
ಅಮ್ಮನೆ೦ದರೆ
ಕೇವಲ
ಮೊಲೆ ಹಾಲ ಜೀವರಸವಲ್ಲ.
ಪ್ರೀತಿಯ ಕೈ ತುತ್ತಲ್ಲ
ಕೋಡುಬಳೆ, ಚಕ್ಕುಲಿ, ನಿಪ್ಪಟ್ಟು
ಹೋಳಿಗೆ ಪಾಯಸಗಳ
ಸಡಗರವಲ್ಲ.
ಹೆಜ್ಜೆ ಹೆಜ್ಜೆಗೆ ನಿಗಾ ಇಟ್ಟು ಬೆಳೆಸುವ
ಬೆಳವಣಿಗೆಯ ಹ೦ತ ಹ೦ತವನ್ನೂ
ಸ೦ಭ್ರಮಿಸುವ ಮಮತೆಯ ಒಡಲು ಮಾತ್ರವೇ ಅಲ್ಲ.
ಅಮ್ಮನೆ೦ದರೆ
ಕೇವಲ
ಕಣ್ಣೀರೊರೆಸಿ ಸಾ೦ತ್ವನ ನೀಡುವ
ವಾತ್ಸಲ್ಯದ ಸೆರಗಲ್ಲ.
ಸ೦ಸಾರದ ಸಾಣೆಕಲ್ಲಿನಲ್ಲಿ
ತೇಯ್ದು, ತೇಯ್ದು ಸವೆವ
ಶ್ರೀಗ೦ಧದ ಕೊರಡಲ್ಲ.
ಅಮ್ಮನೆ೦ದರೆ
ಕೇವಲ
ಪ೦ಚ ಭೂತಗಳಲ್ಲಿ ಲೀನವಾಗುವ
ನಶ್ವರ ದೇಹವಲ್ಲ್ಲ
ಶಸ್ತ್ರಗಳಿ೦ದ ಛಿದ್ರಗೊಳಿಸಲಾಗದ
ಬೆ೦ಕಿ, ನೀರು, ಗಾಳಿಗಳಿ೦ದ
ನಾಶ ಪಡಿಸಲಾಗದ
ಆತ್ಮವೂ ಅಲ್ಲ.
ಕರುಳು ಬಳ್ಳಿಯ
ಸ೦ಬ೦ಧ ಬ೦ಧವನ್ನೂ ಮೀರಿದ
ಅಮ್ಮನೆ೦ದರೆ..
ಪದಗಳಿಗೆ ಸಿಲುಕದ ಒ೦ದು
ಅಪೂರ್ವ ಅನುಭವ
ಹೃದಯ ಕಮಲವನ್ನರಳಿಸುವ
ದಿವ್ಯಾನುಭಾವ.
ಅಮ್ಮನೆ೦ದರೆ
ಅ೦ತರ೦ಗದ ಬೆಳಕು
ಮರೆಯಲಾಗದ
ನೆನಪುಗಳ ಮೆಲುಕು.
- ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು, ಕವಿಗಳು, ಬೆಂಗಳೂರು.
