ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೪)

ಚಿನ್ನುವಿನ ಬಟ್ಟಲಿಗೆ ಊಟ ಹಾಕಿ ನಾವು “ತಿನ್ನು” ಎನ್ನುವ ತನಕ ಮುಟ್ಟುತ್ತಿರಲಿಲ್ಲ. ನಮ್ಮಿಂದ ಒಪ್ಪಿಗೆ ಸಿಕ್ಕ ಮೇಲೆ ಶೇಕೆಂಡ್ ಕೊಟ್ಟ ನಂತರವೇ ಅವನು ಊಟ ಮಾಡುತ್ತಿದ್ದ. ಚಿನ್ನುವಿನೊಡನೆ ಬಾಂಧವ್ಯದ ಕುರಿತು ತಪ್ಪದೆ ಓದಿ, ಲೇಖಕಿ ಕೆ ಸಿ ರತ್ನಶ್ರೀ ಶ್ರೀಧರ್ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…

ಗುರುಗ್ರಾಮದ ಅಮಿಟಿ ಯೂನಿವರ್ಸಿಟಿಯಿಂದ ಚೆನ್ನೈನ ಹಿಂದುಸ್ತಾನ್ ಟೆಕ್ನಾಲಾಜಿಕಲ್ ಯೂನಿವರ್ಸಿಟಿಯ ಕ್ಯಾಂಪಸ್ಗೆ ನಮ್ಮ ವಾಸ್ತವ್ಯ ಬದಲಾಯಿತು. ಇಲ್ಲಿಯೂ ಕೂಡ ನಮಗೆ ನಾಯಿಗಳೊಂದಿಗಿನ ಸಖ್ಯ ಮುಂದುವರೆಯಿತು. ಕ್ಯಾಂಪಸ್ ಒಳಗಡೆ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದೆವು. ಅಲ್ಲಿ ಜಿಮ್ ಪಕ್ಕದ ಹಾಸ್ಟೆಲ್ ಬಳಿಯಲ್ಲಿ ಸುಮಾರು ಎರಡು- ಮೂರು ತಿಂಗಳ ವಯೋಮಾನದ ಐದು ಚಂದದ ಪುಟ್ಟ ಪುಟ್ಟ ನಾಯಿ ಮರಿಗಳು ಆಟ ಆಡುತ್ತಿದ್ದವು. ಅವುಗಳ ಬಳಿ ತೆರಳಿ ಮಾತನಾಡಿಸಿದೆವು. ಅವುಗಳು ಖುಷಿಯಿಂದ ಕುಣಿದಾಡುತ್ತ ನಮ್ಮ ಬಳಿಗೆ ಓಡಿಬಂದವು.

ಮಾರನೇ ದಿನದಿಂದ ಅವುಗಳಿಗೆ ಬಿಸ್ಕೆಟ್ ಅಥವಾ ಕಲಿಸಿದ ಹಾಲು ಅನ್ನ ತೆಗೆದುಕೊಂಡು ಹೋಗಲು ಶುರು ಮಾಡಿದೆವು. ನನ್ನ ಪತಿ ನಾಯಿಗಳಿಗೆ ಇಷ್ಟವಾಗುವಂತೆ ಬಾಯಿಯಲ್ಲಿ ವಿಷಲ್ ಹಾಕಿದ ಕೂಡಲೇ ಎಲ್ಲಿಯೇ ಇದ್ದರೂ ಓಡಿ ಬರುತ್ತಿದ್ದವು. ತಿಂದ ನಂತರ ಶೇಕ್ ಹ್ಯಾಂಡ್ ಕೊಡುವುದು, ಎರಡು ಕಾಲಿನಲ್ಲಿ ನಿಂತು ಮೇಲಕ್ಕೆ ಎಗರಿ ಎಗರಿ ಪ್ರೀತಿ ತೋರುವುದು, ಹಿಂದೆಯೇ ಓಡೋಡಿ ಬರುವುದು ಮಾಡುತ್ತಿದ್ದವು.

ನಮ್ಮ ಕ್ಯಾಂಪಸ್ನಲ್ಲಿ ವಾಸವಿದ್ದ ಸಿಬ್ಬಂದಿಯೊಬ್ಬರು ಅವರ ನಾಯಿ (lucky) ಯನ್ನು ನಮ್ಮ ಮನೆಯ ಮುಂದಿನ ದಾರಿಯಲ್ಲಿ ಸಾಯಂಕಾಲ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದರು. ಅವರು ಒಮ್ಮೆ ನಮ್ಮ ಮನೆಗೆ ಲಕಿಯನ್ನು ಕರೆ ತಂದಿದ್ದರು. ಅಂದಿನಿಂದ ಪ್ರತಿದಿನವೂ ವಾಕಿಂಗ್ ಹೋಗುವಾಗ ನಮ್ಮ ಮನೆಯ ಗೇಟ್ ಬಳಿ ಬರುತ್ತಿದ್ದಂತೆಯೇ ಲಕಿ ನಮ್ಮ ಮನೆಗೆ ಬರಲು ಅವರನ್ನು ಎಳೆದಾಡುತ್ತಿತ್ತು. ನಾವು ಹೊರಗಡೆ ಕಾಣಿಸಿಕೊಂಡರೆ ನಮ್ಮ ಮನೆಗೆ ಬರದೇ ಮುಂದಕ್ಕೆ ಹೆಜ್ಜೆಯನ್ನೇ ಇಡುತ್ತಿರಲಿಲ್ಲ.

ಪ್ರತಿದಿನ ಬೆಳಿಗ್ಗೆ ಆ ಪುಟ್ಟ ಮರಿಗಳಿಗಾಗಿಯಾದರೂ ನಾವು ವಾಕಿಂಗ್ ತಪ್ಪಿಸುತ್ತಿರಲಿಲ್ಲ. ನಾಯಿಗಳನ್ನು ವಿಶಿಷ್ಟ ರೀತಿಯಿಂದ ಕರೆಯುವ ನನ್ನವರ ವಿಷಲ್ ಸೌಂಡ್ ಕೇಳಿದೊಡನೆ ಒಂದನ್ನೊಂದು ತಳ್ಳಿಕೊಂಡು ಪುಟಪುಟನೆ ಓಡಿ ಬರುತ್ತಿದ್ದ ಮರಿಗಳ ಆ ದೃಶ್ಯ ಕಣ್ಣಲ್ಲಿ ಅಚ್ಚಳಿಯದೇ ಉಳಿದಿದೆ. ಸುಮಾರು ನಾಲ್ಕು ತಿಂಗಳು ಹೀಗೆಯೇ ನಡೆದಿತ್ತು. ಆ ನಾಯಿ ಮರಿಗಳು ಒಂದಷ್ಟು ಬೆಳೆದಿದ್ದವು. ಈ ನಡುವೆ ಕರೋನದ ಕಣ್ಣಾ ಮುಚ್ಚಾಲೆ ಆಟ ನಡೆದೇ ಇತ್ತು.

ಒಮ್ಮೆ ನಾವು ಬೆಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಕೋವಿಡ್ ಎರಡನೆಯ ಅಲೆ ಜೋರಾಯಿತು. ನಾವು ಚೆನ್ನೈಗೆ ವಾಪಸ್ ಬರಲು ಲಾಕ್ ಡೌನ್ ಅಡ್ಡಿಯಾಯಿತು. ಮೂರುವಾರಗಳ ಕಾಲ ನಾವು ಬೆಂಗಳೂರಿನ ನಮ್ಮ ಮನೆಯಲ್ಲಿಯೇ ಉಳಿದೆವು. ನನ್ನವರು ಬೆಂಗಳೂರಿನಿಂದಲೇ ಆನ್ಲೈನ್ ನಲ್ಲಿಯೇ ಯುನಿವರ್ಸಿಟಿಯ ಕರ್ತವ್ಯವನ್ನು ನಿಭಾಯಿಸುತ್ತಿದ್ದರು. ಈ ನಡುವೆ ಲಕಿಯನ್ನು ಸಾಕಿದ್ದವರು ಈಶಾನ್ಯ ಭಾರತದ ಕಡೆಗೆ ಹೊರಟು ಹೋಗಿದ್ದರು.

ಫೋಟೋ ಕೃಪೆ : google

18 ದಿನಗಳ ತರುವಾಯ ನಾವು ಪೊಲೀಸರ ಅನುಮತಿ ಪಡೆದು ಬೆಂಗಳೂರಿನಿಂದ ಟ್ಯಾಕ್ಸಿಯಲ್ಲಿ ಚೆನ್ನೈಗೆ ಬಂದೆವು. ಅಂದು ರಾತ್ರಿ ನಮ್ಮ ಗೇಟಿನ ಬಳಿ ಯಾವುದೋ ನಾಯಿ ಕುಳಿತಿರುವಂತೆ ಕಂಡಿತು. ಹತ್ತಿರ ಹೋಗಿ ನೋಡಿದ ಕೂಡಲೇ ಮನಸ್ಸು ಜರ್ಜರಿತವಾಯಿತು. ಮೈತುಂಬಾ ಅಲ್ಲಲ್ಲಿ ಗಾಯ ಮಾಡಿಕೊಂಡು, ಮೂಳೆ ಚಕ್ಕಳವಾಗಿದ್ದ ಲಕಿ ನಿತ್ರಾಣ ಸ್ಥಿತಿಯಲ್ಲಿತ್ತು. ಅದನ್ನು ಒಳಗೆ ಕರೆತಂದು ಊಟ ಹಾಕಿದೆವು. ತಿನ್ನಲೂ ಶಕ್ತಿ ಇರದ ಲಕಿ ಹಾಲು ಕುಡಿದು ಮಲಗಿತು. ಮಾರನೇ ದಿನ ಲಕಿಯನ್ನು ಪಶುವೈದ್ಯರ ಬಳಿಗೆ ಕರೆದೊಯ್ದು ಔಷದೋಪಚಾರ ಮಾಡಿದ ನಂತರ ನಿಧಾನವಾಗಿ ಚೇತರಿಸಿಕೊಂಡ.

ಲಕಿಯನ್ನು ಸಾಕಿದ್ದವರು ಈಶಾನ್ಯ ರಾಜ್ಯದತ್ತ ಹೊರಡುವಾಗ ನಾಯಿಯನ್ನು ಕ್ಯಾಂಪಸ್ ನಲ್ಲಿಯೇ ಬಿಟ್ಟು ಹೊರಟು ಹೋಗಿದ್ದರು. ಕೋವಿಡ್ ಕಾರಣದಿಂದ ಕ್ಯಾಂಪಸ್ ಹಾಸ್ಟೆಲ್ ಕೂಡ ಮುಚ್ಚಿತ್ತು. ಕ್ಯಾಂಪಸ್ ನಲ್ಲಿ ಒಂದಷ್ಟು ಜನ ಸೆಕ್ಯೂರಿಟಿಗಳನ್ನು ಬಿಟ್ಟರೆ ಬೇರೆ ಯಾರೂ ಇರದ ಕಾರಣ ಲಕಿಗೆ ಊಟವು ಸಿಕ್ಕಿಲ್ಲ. ಸೌಮ್ಯ ಸ್ವಭಾವದ ಲಕಿಗೆ ಬೇರೆ ನಾಯಿಗಳೂ ಕಚ್ಚಿ ಗಾಯಗೊಳಿಸಿದ್ದವು. ನಾವು ಬರುವುದು ಇನ್ನು ಒಂದೆರಡು ದಿನ ತಡವಾಗಿದ್ದರೂ ಲಕಿ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಇತ್ತು.

ಲಕಿ ಎನ್ನುವ ಹೆಸರನ್ನು ಬದಲಾಯಿಸಿದ ನಾವು ಅವನಿಗೆ ಚಿನ್ನು ಎಂದು ಹೆಸರಿಟ್ಟವು. ಕೇವಲ ಒಂದು ವಾರದಲ್ಲಿಯೇ ಅವನು ತನ್ನ ಹೆಸರು ಚಿನ್ನು ಎಂಬುದನ್ನು ನೆನಪಿಟ್ಟುಕೊಂಡ. ಚಿನ್ನು ನಮ್ಮ ಮನೆಯ ಪುಟ್ಟ ಸದಸ್ಯನೇ ಆದ. ಅಡುಗೆ ಮನೆಯೊಂದನ್ನು ಬಿಟ್ಟು ಬೇರೆ ಎಲ್ಲೆಡೆಯೂ ಅವನಿಗೆ ಮುಕ್ತ ಪ್ರವೇಶವಿತ್ತು. ಮನೆಯ ಮುಂದಿನ ವಿಶಾಲವಾದ ಹುಲ್ಲು ಹಾಸಿನ ಮೇಲೆ ಜೋರಾಗಿ ಓಡುವುದೆಂದರೆ ಅವನಿಗೆ ಬಲು ಇಷ್ಟ. ಹುಲ್ಲು ಹಾಸಿನ ಮೇಲೆ ನನ್ನ ಪತಿಯೊಂದಿಗೆ ನಾಲ್ಕೈದು ರೌಂಡ್ಸ್ ರನ್ನಿಂಗ್ ರೇಸ್ ಮಾಡುತ್ತಿದ್ದ.

ಇನ್ನೂ ಹುಡುಗು ಬುದ್ಧಿ ಇದ್ದ ಅವನು ಆಗಾಗ ಗಿಡದ ಎಲೆಗಳನ್ನು ಕೇಳುವುದು, ಅಳಿಲುಗಳು ಆಟ ಆಡುವಾಗ ಅವುಗಳನ್ನು ಅಟ್ಟಿಸಿಕೊಂಡು ಹೋಗುವುದು ಮುಂತಾದ ಚಿಕ್ಕ ಪುಟ್ಟ ತರಲೆ ಕೆಲಸ ಮಾಡುತ್ತಿದ್ದ. ಆಗ ಒಂದು ಪೆಟ್ಟು ಕೊಟ್ಟು ಹೀಗೆಲ್ಲಾ ಮಾಡಬಾರದೆಂದು ಹೇಳಿದರೆ ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದ. ಮತ್ತೆ ಆ ತಪ್ಪನ್ನೆಂದೂ ಪುನರಾವರ್ತಿಸುತ್ತಿರಲಿಲ್ಲ. ಊಟ ಹಾಕುವಾಗ ಅವನ ಬಟ್ಟಲಿಗೆ ಊಟ ಹಾಕಿದ ಮೇಲೆ ನಾವು “ತಿನ್ನು” ಎನ್ನುವ ತನಕ ಮುಟ್ಟುತ್ತಿರಲಿಲ್ಲ. ನಮ್ಮಿಂದ ಒಪ್ಪಿಗೆ ಸಿಕ್ಕ ಮೇಲೆ ಶೇಕೆಂಡ್ ಕೊಟ್ಟ ನಂತರವೇ ಅವನು ಊಟ ಮಾಡುತ್ತಿದ್ದ.

ಅವನ ಊಟದ ಮೆನುವಿನಲ್ಲಿ ತರಕಾರಿ ಪಲ್ಯ ಇರಲೇಬೇಕಿತ್ತು. ನಮ್ಮ ಮನೆಯಲ್ಲಿ ದಿನದ ಮೂರು ಹೊತ್ತಿನ ಊಟ ತಿಂಡಿಯಲ್ಲಿ ಎರಡು-ಮೂರು ಬಗೆಯ ತರಕಾರಿ ಪಲ್ಯ ಇರುವುದು ಕಡ್ಡಾಯ. ಅದನ್ನು ನೋಡಿ ಅವನೂ ಅದೇ ಅಭ್ಯಾಸ ರೂಢಿಸಿಕೊಂಡನೋ ತಿಳಿಯದು. ಒಟ್ಟಿನಲ್ಲಿ ಅನ್ನ ಸಾರಿನ ಜೊತೆ ತರಕಾರಿ ಪಲ್ಯ ಸೇರಿಸಿ ಕಲಸಿದರೆ ಮಾತ್ರ ಊಟ ಮಾಡುತ್ತಿದ್ದ. ನಮ್ಮ ಮನೆಯಲ್ಲಿ ತರಕಾರಿ ತಿನ್ನುವ ಮೊದಲ ನಾಯಿ ಇವನೊಬ್ಬನೇ ಆಗಿದ್ದ.

ಚಿನ್ನು ನಮ್ಮ ಮನೆ ಸೇರಿದ ಮೇಲೆ ಅವನಿಗೆ ಎಲ್ಲಾ ರೀತಿಯ ವ್ಯಾಕ್ಸಿನೇಷನ್ ಸಮಯಕ್ಕೆ ಸರಿಯಾಗಿ ಕೊಡಿಸುತ್ತಿದ್ದೆವು. ನಂತರ ಅವನಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿದೆವು. ಮೂರ್ನಾಲ್ಕು ದಿನದಲ್ಲಿ ಸಂಪೂರ್ಣ ಚೇತರಿಸಿಕೊಂಡ. ಐದರಿಂದ ಏಳು ದಿನಕ್ಕೊಮ್ಮೆ ಚಿನ್ನುಗೆ ಸ್ನಾನ ಮಾಡಿಸುತ್ತಿದ್ದೆ. ಕೆಲವೊಮ್ಮೆ ಬಿಡುವಿದ್ದ ಭಾನುವಾರಗಳಲ್ಲಿ ನನ್ನ ಪತಿ ಕೂಡ ಅವನಿಗೆ ಸ್ನಾನ ಮಾಡಿಸುತ್ತಿದ್ದರು.

ಮೊದಮೊದಲು ಸ್ನಾನ ಬೇಡ ಎನ್ನುತ್ತಿದ್ದವನು ನಂತರ ಸ್ನಾನಕ್ಕೆ ಕರೆದುಕೊಂಡು ಹೋದರೆ, ಹಿತ್ತಲಿನಲ್ಲಿದ್ದ ಕಲ್ಲಿನ ಕಟ್ಟೆ ಏರಿ ಕೂರುತ್ತಿದ್ದ. ಒಂದೊಂದೇ ಕೈ ಕಾಲುಗಳನ್ನು ಎತ್ತಿ ಕೊಟ್ಟು ಉಜ್ಜಿಸಿಕೊಳ್ಳುತ್ತಿದ್ದ. ಚಿನ್ನುಗೆ ಮೈಯಿಗೆ ಎಷ್ಟು ನೀರು ಹಾಕಿದರು ಖುಷಿ. ಆದರೆ ಮುಖ ತೊಳೆಯುವಾಗ ಮಾತ್ರ ತಲೆ ಕೊಡವಿ ನನಗೂ ನೀರಿನ ಪ್ರೋಕ್ಷಣೆ ಮಾಡುತ್ತಿದ್ದ. ಟವಲ್ ನಲ್ಲಿ ಮೈ ಒರೆಸಿ ಪೌಡರ್ ಹಾಕಿದರೆ ಘಮ್ ಎನ್ನುವ ಅವನ ಮೈ ಕೂದಲು ರೇಷ್ಮೆಯಷ್ಟು ಮೃದುವಾಗಿರುತ್ತಿದ್ದವು.

(ಸಂಚಿಕೆ ಮುಂದುವರೆಯುವುದು)

ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :


  • ಕೆ.ಸಿ. ರತ್ನಶ್ರೀ ಶ್ರೀಧರ್ – ಚೆನ್ನೈ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading