‘ಚೋದ್ಯ’ ಕಥಾ ಸಂಕಲನದ ಪರಿಚಯ

ಕಥೆಗಾರ್ತಿ ಅನುಪಮಾ ಪ್ರಸಾದ್ ಅವರ ‘ಚೋದ್ಯ’ ಕಥಾ ಸಂಕಲನದಲ್ಲಿ ಸುಮಾರು ಹದಿಮೂರು ಕಥೆಗಳಿವೆ. ಈ ಕೃತಿಯ ಕುರಿತು ಮಮತಾ ಶಂಕರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಚೋದ್ಯ
ಲೇಖಕರು : ಅನುಪಮಾ ಪ್ರಸಾದ್
ಪ್ರಕಾರ : ಕಥಾಸಂಕಲನ
ಪ್ರಕಾಶನ : ಅಮೂಲ್ಯ ಪ್ರಕಾಶನ
ಬೆಲೆ :೧೮೫.೦೦

ಅತ್ಯಂತ ಸೂಕ್ಷ್ಮ ಸಂವೇದನೆ ಮತ್ತು ನುರಿತ ಕಥನ ಶೈಲಿಯಿಂದ ಹಾಗೂ ಈಗಾಗಲೇ ಸಾಹಿತ್ಯ ಲೋಕದ ಪ್ರಮುಖ ಗಟ್ಟಿ ಕಥೆಗಾರ್ತಿ ಎಂದೇ ಗುರುತಿಸಿಕೊಂಡಿರುವ ಮತ್ತು 2026 ನೇ ಸಾಲಿನ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಪ್ರಶಸ್ತಿ, ಸಂಗಂ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಮಾನವೀಯ ಮೌಲ್ಯಗಳು ಸೂಕ್ಷ್ಮ ಸಂವೇದನಾತ್ಮಕ ನಿರೂಪಣೆಗೆ ಮತ್ತು ಚೆಂದದ ಕಥನ ಶೈಲಿಗೆ ಹೆಸರಾದ ಶ್ರೀಮತಿ ಅನುಪಮಾ ಪ್ರಸಾದ್ ಅವರ ಚೋದ್ಯ ಕಥಾ ಸಂಕಲನ ನನ್ನ ಕೈ ಸೇರಿ ಹತ್ತಿರ ಹತ್ತಿರ ಒಂದು ವರ್ಷವೇ ಆಗಿದೆ. ಒಮ್ಮೆ ಓದಿ ಮುಗಿಸಿದ ನಂತರ ಬರೆಯಲಾಗದೆ ಹಾಗೆಯೇ ಉಳಿದು ಹೋಗಿ ಈಗ ಮತ್ತೆ ಅದನ್ನು ಓದಿದ ನಂತರ ಕಥೆಗಳ ಕುರಿತು ನಾಲ್ಕು ಮಾತುಗಳನ್ನು ಹೇಳದೇ ಇರಲು ಸಾಧ್ಯವೇ ಇಲ್ಲ ಎಂದು ಬರೆಯುತ್ತಿರುವೆ ಎಂದರೆ ಅತಿಶಯೋಕ್ತಿಯಲ್ಲ.

ಅತ್ಯಂತ ಕುಶಲತೆಯಿಂದ ಕತೆ ಕಟ್ಟುವ ಇವರ ಕಥಾ ವಿಧಾನ ಇವರ ನಿರೂಪಣೆ ಅಪರೂಪದಲ್ಲಿ ಅಪರೂಪ ಎನಿಸಿತು ನನಗೆ. ಪ್ರತಿಯೊಂದು ಕಥೆಯ ಆಳಕ್ಕೆ ಇಳಿದು ನೊಡಿದರೆ ಇವರು ಆ ಕಥಾ ವಸ್ತು ಕುರಿತು ಎಷ್ಟು ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿ ಬರೆಯುತ್ತಾರೆ ಎಂಬುದು ಗೋಚರವಾಗುತ್ತದೆ. ಸಂಕಲನದ ಆರಂಭದಲ್ಲಿ ಅವರೇ ಹೇಳುವಂತೆ “ಲೋಕಾಂತವೊಂದು ತೀವ್ರವಾಗಿ ತಟ್ಟುತ್ತಾ, ಹುತ್ತಗಟ್ಟುತ್ತಾ ಏಕಾಂತಕ್ಕಿಳಿದು ಬರೆಯಲು ತೊಡಗುವುದು… ನಂತರ ಅದು ಬರೆಸಿಕೊಳ್ಳುತ್ತಾ ಹೋಗುವ ಪ್ರಕ್ರಿಯೆ… ಮತ್ತೆಲ್ಲೋ ಒಂದು ಕಡೆ ಅದೇ ಕಂಡುಕೊಳ್ಳುವ ನಿಲುಗಡೆ… ಇದೆಲ್ಲಾ ಸೇರಿದಾಗ ಸಿಗುವ ಮೊತ್ತವೇ ಕಥೆಯೆಂಬ ಚೋದ್ಯ…” ಹೀಗೇ ಹೇಳಿದರೂ ಒಂದು ಧ್ಯಾನಸ್ಥ ಸ್ಥಿತಿ, ಶ್ರದ್ಧೆ, ಸಂಪೂರ್ಣ ನ್ಯಾಯ ಒದಗಿಸುವ ತಿಳುವಳಿಕೆ, ಕಥೆಗೆ ತನ್ನನ್ನೇ ಒಪ್ಪಿಸಿಕೊಳ್ಳುವ ಡೆಡಿಕೇಶನ್ ಇಲ್ಲದೇ ಇಂಥಾ ಕಥೆಗಳು ದಕ್ಕುವುದಿಲ್ಲ ಎಂಬುದು ಓದುವಾಗ ಅರಿವಿಗೆ ಬರುತ್ತದೆ ಎಂಬ ಮಾತು ಹೇಳಲೇಬೇಕು.

ಈ ಸಂಕಲನದಲ್ಲಿ ಸುಮಾರು ಹದಿಮೂರು ಕಥೆಗಳಿವೆ. ಹದಿಮೂರೂ ಕೂಡಾ ವಿಶಿಷ್ಟವಾದಂತಹ ಬೇರೆ ಬೇರೆ ವಿಷಯ ವ್ಯಾಪ್ತಿ ಉಳ್ಳಂತಹ ಕಥೆಗಳಾಗಿವೆ. ಇವರ ವಿಭಿನ್ನ ವಸ್ತುಗಳ/ವಿಷಯಗಳ ಆಯ್ಕೆ ಮತ್ತೆ ಪ್ರತಿ ವಿಷಯದಲ್ಲೂ ಅವರು ತೋರುವ ಕಥೆಯ ಒಳ ವಿವರಗಳು ಕೂಡ ಅನುಪಮಾ ಅವರ ಕಥೆಯ ವಿಶಿಷ್ಟತೆಯನ್ನು ತೋರಿಸುತ್ತದೆ ಎನ್ನಬಹುದು.

ಭಾಷೆಯಾಗಲಿ ವಿಭಿನ್ನ ವಸ್ತುಗಳ ಆಯ್ಕೆಯಾಗಲಿ ಎಲ್ಲವೂ ವಿಶಿಷ್ಟವಾದದೇ ಆಗಿವೆ ಎನ್ನಬಹುದು. ಎಲ್ಲ ಕಥೆಗಳು ಬಹಳ ಸಂವೇದನಾಶೀಲತೆಯಿಂದ ಓದಿಸಿಕೊಂಡು ಹೋಗುವುದಾದರೂ ನಾನಿಲ್ಲಿ ಕೆಲವೇ ಕಥೆಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಆದರೆ ಪ್ರತಿ ಕಥೆಯು ಕೂಡಾ ತನ್ನದೇ ಆದ ವಿಶಿಷ್ಟ ರೀತಿಯಿಂದ ವಸ್ತುವಿನ ಆಯ್ಕೆಯಿಂದ ನಿರೂಪಣೆಯಿಂದ ಅತ್ಯಂತ ಸೂಕ್ಷ್ಮವಾದ ಕಥನ ಶೈಲಿಯಿಂದ ಕಥೆ ನಮ್ಮ ಮನಸ್ಸಿನಲ್ಲಿ ಕಾಡುತ್ತಾ ಉಳಿಯುವುದಂತೂ ಖಂಡಿತಾ ನಿಜಾ.

ಸಂಕಲನದ ಮೊದಲ ಕಥೆ “ಮೊಲ್ಲೆ ಹೂ ಮಾದೇವಿ ಮೀಮಾಂಸೆ” ಕಥೆ ಹೂ ಮಾರುವ ಮಾದೇವಿಯ ಹೂ ಮನದಂತ ಮಾನವೀಯತೆಯಿಂದ ಗಮನ ಸೆಳೆಯುತ್ತದೆ. ಕರೋನ ಕಾಲದ ಸಂಕಷ್ಟಗಳಲ್ಲಿ ಜನರು ಒಬ್ಬರಿಗೊಬ್ಬರ ಮುಖ ನೋಡದಂತೆ ಮಾತಾಡದಂತೆ ಹತ್ತಿರವಿರದಂತೆ ಏನೆಲ್ಲಾ ಷರತ್ತುಗಳಿಗೆ ಒಳಪಟ್ಟು ಎಲ್ಲದಕ್ಕೂ ಮಾಸ್ಕು, ಮುಸುಕು ಹೊದ್ದು , ಮುಟ್ಟಿದರೆ ಕೈ ಮೈ ತೊಳೆದು, ಶುಚಿಯಾಗಬೇಕಾದಂತಹ ಸಂದರ್ಭ. ಸಂಪೂರ್ಣ ಮಾನವೀಯತೆಗೆ ಮುಸುಕು ಹೊದ್ದಿಸಿ ಮಲಗಿಸಿದಂತಹ ಸಮಯವದು. ಆ ಕಷ್ಟಕಾಲದಲ್ಲಿ ಹುಟ್ಟಿದ ಕಥೆ ಮಾದೇವಿಯ ಮನಸ್ಸಿನ ನಿಜ ಮಾನವೀಯತೆಯ ಅನಾವರಣಗೊಳಿಸುವ ಪರಿ ಹೃದ್ಯವಾಗಿದೆ. ಕಥೆಯ ಆರಂಭ ಮಾದೇವಿಯ ಹೂ ಮಾರುವಿಕೆಯಿಂದ ಶುರುವಾಗಿ ಕೌಟುಂಬಿಕ ನಷ್ಟ ಕಷ್ಟಗಳನ್ನು ಚಿತ್ರಿಸಿದರೂ ನಂತರ ಸೇರಿಕೊಂಡ ‘ಕರೋನ’, ಕಥೆಯ ತಿರುಳನ್ನು ಬಿಚ್ಚಿಡುವಲ್ಲಿ ಸಫಲವಾಗಿದೆ ಎನಿಸಿತು. ಶೀರ್ಷಿಕೆ ಕೂಡ ಹೊಂದಿಕೆಯಾಗಿ ಕತೆಯ ಸೂಕ್ಷ್ಮತೆಯನ್ನು ಸೂಚಿಸುತ್ತದೆ.

“ಮೋಳಜ್ಜಿಯ ಚೋದ್ಯ” ಕಥೆಯಲ್ಲಿ ಮಲೆನಾಡು ಮನೆಯ ಒಡಲಾಳಗಳನ್ನು ತೋರುತ್ತ ತನ್ನ ಸುಂದರ ಕಥಾ ಹಂದರವನ್ನು ತೆರೆದಿಡುತ್ತದೆ. ಭಾಷಾ ಸೊಗಸು ವಿಭಿನ್ನವಾದ ಬರವಣಿಗೆ ಶೈಲಿ ಕಥೆಯ ಸೊಬಗನ್ನು ಹೆಚ್ಚಿಸಿದೆ. ಮೋಳಜ್ಜಿ ತನ್ನ ಕುರೂಪದಿಂದಾಗಿ ಮದುವೆಯ ಭಾಗ್ಯವನ್ನೇ ಕಾಣದೆ ಇದ್ದಂತವಳು. ಆಕೆಗೂ ಕೂಡ ಕಂಕಣ ಭಾಗ್ಯ ಒದಗಿ ಬಂದು ಹೋದ ಮನೆಯಲ್ಲಿ ಕೆಲಸವೇ ಕೈಲಾಸ ಎಂದು ಬಾಳುವ ಬಾಳು ಅವಳದು. ಗಂಡ ಮತ್ತು ಯಾರದೇ ಪ್ರೀತಿಯನ್ನು ಪಡೆಯದ ಸದಾ ಕೆಲಸ ಮಾಡಿಕೊಂಡೇ ಬದುಕು ಸವೆಸಿದ ಈಕೆ ತಾಯಿಯಾಗಿ ಆ ಮನೆಯ ಹಿರಿಯ ತಲೆಯಾಗಿ ಕೊನೆಗೆ ಅಜ್ಜಿ ಅನಿಸಿಕೊಂಡು ಬದುಕು ಕಟ್ಟಿಕೊಂಡು ಜೀವನ ಸವೆಸಿದ್ದು ಕೂಡ ಜೋದ್ಯವೇ ಎನ್ನುವ ಕಥೆಗಾರ್ತಿಯ ಒಳದೃಷ್ಟಿಯ ಸೂಕ್ಷ್ಮತೆ ನಿಜಕ್ಕೂ ಬೆರಗು ಮೂಡಿಸುವಂಥದ್ದು.

“ಖೆಡ್ಡಾ” ಕತೆ ಒಂದು ರೀತಿಯ ಪ್ರಸ್ತುತ ಕಾರ್ಪೊರೇಟ್ ಜಗತ್ತಿನ ವಿಷವರ್ತುಲದಲ್ಲಿ ಸಿಲುಕಿದ ಇಂದಿನ ಜನಾಂಗದ ಮಾನಸಿಕ ಒತ್ತಡ ತುಮುಲಗಳನ್ನು ಅತ್ಯಂತ ಅದ್ಭುತವಾಗಿ ಚಿತ್ರಿಸುತ್ತದೆ.

“ಸ್ಯಾನಿಟರಿ ಪ್ಯಾಡ್ ” ಎಂಬ ಕಥೆಯಂತೂ ಓದಿ ಒಂದು ಕ್ಷಣ ಮೌನವಾಗಿ ಕುಳಿತುಕೊಳ್ಳುವಂತೆ ಮಾಡಿಬಿಡುತ್ತದೆ. ಇಂದಿನ ಕಾಲದಲ್ಲಿ ವಯಸ್ಸಿಗೂ ಮುಂಚೆ ಋತುಚಕ್ರ ಆರಂಭವಾಗುವ ಹುಡುಗಿಯ ಕಥೆ…ಮುಂದೆ ಸಾಗುತ್ತಾ ಅಮ್ಮನ ಅನುಪಸ್ಥಿತಿಯಲ್ಲಿ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿಯುತ ತಂದೆಯಾಗಿ ದಿವಾಕರನ ಮಾನಸಿಕ ತುಮಲಗಳು ಬಹಳ ಚೆನ್ನಾಗಿ ಚಿತ್ರಿತವಾಗಿದೆ. ಯಾವುದೋ ಗೊತ್ತಿಲ್ಲದ ಗಳಿಗೆಯಲ್ಲಿ ಆಗುವ ಅವಘಡ ಮಗಳ ಬದುಕಿನಲ್ಲಿ ಬಿರುಗಾಳಿ ಎಬ್ಬಿಸದಂತೆ ಕಾಪಾಡಲು, ಹೆಂಡತಿಗೆ ತಿಳಿಯದಂತೆ ವಿಷಯವನ್ನು ಮುಚ್ಚಿಟ್ಟು ಒಂದು ಮಟ್ಟಿಗೆ ಮಗಳ ಮುಗ್ಧತೆಯನ್ನು ಕಾಪಾಡಿದ ತಂದೆಯಾಗಿ, ಅತ್ಯಂತ ಸೂಕ್ಷ್ಮವಾದ ವಿಷಯವನ್ನು ನಿಭಾಯಿಸುವ ದಿವಾಕರನ ಚಿತ್ರ ಕಣ್ಣ ಮುಂದೆ ಬಂದು ಸದಾ ಕಾಡುತ್ತದೆ.
“ಮಥಾಯ್ ಡಾಕ್ಟ್ರುನ ಧರ್ಮ ಸಂಕಟ” ಇನ್ನೊಂದು ಬಗೆಯ ವಿಶಿಷ್ಟ ಸಂವೇದನೆಯುಳ್ಳ ಕಥೆ. ಎಲ್ಲಾ ಧರ್ಮ ಜಾತಿಗಳನ್ನು ಮೀರಿದ ಮಾನವೀಯತೆ ಎಂಬ ದೊಡ್ಡ ಧರ್ಮವನ್ನು ಎತ್ತಿ ಹಿಡಿಯುವ ಅತ್ಯಂತ ಸೂಕ್ಷ್ಮ ಸಂವೇದನೆಯ ಕಥೆ ಎಂದರೆ ತಪ್ಪಾಗಲಾರದು.

“ಕಳಚಿದ ಬೇರುಗಳು” ಕಥೆಯಲ್ಲಿ ಕಟ್ಟಿಕೊಡುವ ಚಿತ್ರಣ ಬಹಳ ಅನನ್ಯವಾದದ್ದು. ಆಳವಾಗಿ ಬೇರುಬಿಟ್ಟ ಆಲದ ಮರವನ್ನು ಶಾಂತರಾಮನ ನಂಬಿಕೆ ಮತ್ತು ಮೌಲ್ಯಗಳಿಗೆ ರೂಪಕವಾಗಿ ತೆಗೆದುಕೊಂಡು ಅದು ಕೊನೆಗೆ ಬೇರು ಸಹಿತ ಕಳಚಿ ಬೀಳುವುದನ್ನು ಪ್ರತಿಮಾತ್ಮಕವಾಗಿ ಹೇಳಿರುವುದು ನಿಜಕ್ಕೂ ಕಥೆಯ ಸೊಗಸನ್ನು ತೋರಿಸುತ್ತದೆ.

“ಪುಟ್ಟ ದೇವತೆಯ ಸ್ವಪ್ನಗಳು” “ಮುಖವಿಲ್ಲದವರು”, “ಹುಸೇನನ ಅಂಗಡಿ”, “ಜಾಡರಿಯದ ದಾರಿಯಲ್ಲಿ” “ಕಡಲು ಕಡೆದ ಚೆಂಡು” “ಕೇರಳಾಪುರದಲ್ಲೊಂದು ದಿನ” ಈ ಕಥೆಗಳು ಕೂಡ ಅಷ್ಟೇ ವಿಶಿಷ್ಟ ಶೈಲಿಯ ವಿಭಿನ್ನ ವಸ್ತುವಿನ ಅತ್ಯಂತ ಚೆಂದದ ನಿರೂಪಣೆಯ ಮನಮುಟ್ಟುವ ಕಥೆಗಳು.

ಇನ್ನು ಕುಂತ್ಯಮ್ಮಳ ಮಾರಾಪು ಕಥೆ ಬಹಳ ಭಾವನಾತ್ಮಕವಾಗಿ ಮೂಡಿ ಬಂದಿದೆ. “ಮಾರಾಪು ಎನ್ನುವುದು ಕತೆಯ ಕೊನೆಯ ಹೊತ್ತಿಗೆ ರೂಪಕವೇ ಆಗಿ ಮನುಷ್ಯರ, ಹೆಣ್ಣಿನ ಸಂಬಂಧಗಳ ಮಾರಾಪೇ ಆಗಿಬಿಡುತ್ತದೆ. ಈ ಕಥೆಯಲ್ಲಿ ನಮ್ಮನ್ನು ಆಳವಾಗಿ ತಟ್ಟುವುದು ಮನುಷ್ಯರ ನಿಜ ಸತ್ಯಗಳನ್ನು ಅವೆಷ್ಟೇ ಅಪ್ರಿಯವಾಗಿರಲಿ ಅವುಗಳನ್ನು ಎದುರಿಸುವ ಮನಸ್ಥೈರ್ಯದ ಹೆಣ್ಣಿನ ಶಕ್ತಿ, ಮಗನ, ಸೊಸೆಯ, ಅಸಡ್ಡೆ ದುರಾಸೆ ಎಲ್ಲವೂ ಸಹಜಾತಿ ಸಹಜವಾಗಿ ಕಥೆಯಲ್ಲಿ ಅತಿರೇಕವಿಲ್ಲದೆ ಹೆಣ್ಣನ್ನು, ಘನತೆಯನ್ನು ಮುಕ್ಕಾಗದಂತೆ ಕಟ್ಟಿಕೊಡುವ ಈ ಕಥೆ ಸಾಮಾಜಿಕ ಸಂದರ್ಭದಲ್ಲಿ ವ್ಯಕ್ತಿಗತ ಬದುಕಿನ ದುರ್ದಮ್ಯತೆಯಲ್ಲಿ ಯಾರು ಯಾರು ತಪ್ಪು ಎಂದು ತೀರ್ಮಾನಗಳನ್ನು ಘೋಷಿಸುವುದು ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಇದು ಕಾಣಿಸುವ ಪರಿಗೆ ಈ ಕಥೆ ಮುಖ್ಯವಾಗುತ್ತದೆ…” ಎಂದು ಖ್ಯಾತ ಬರಹಗಾರ್ತಿ ವಿಮರ್ಶಕಿ ಎಂ ಎಸ್ ಆಶಾದೇವಿಯವರು ಬರೆದಿರುವುದು ಇಡೀ ಕಥೆ ಏನೆಂದು ತೋರಿಸಿಕೊಡುತ್ತದೆ.
“ಇಲ್ಲಿನ ಹದಿಮೂರು ಕಥೆಗಳು ಓದುಗರಿಗೆ ನೀಡುವ ಅನುಭವ ಲೋಕದೃಷ್ಟಿ ಆರ್ದ್ರತೆಯ ಸ್ಪರ್ಶದಿಂದಾಗಿ ಅವರು ನಮ್ಯವಾಗಬಲ್ಲರು.. ಅರೆಚಣ ಚಿಂತಿತರಾಗಬಲ್ಲರು. ಬದುಕಿನ ಸಾರ್ಥಕತೆ ಅಥವಾ ನಿರರ್ಥಕಥೆ, ಅಸಂಗತತೆ, ಅನಿವಾರ್ಯತೆ ಅಂತಃಕರಣ ನಿಸ್ಪರಹತೆ ಗಳಂತಹ ಬುನಾದಿ ಭಾವಗಳ ಕುರಿತು ಬಹುಕಾಲ ಚಿಂತಿಸಬಲ್ಲರು” ಅಂತ ಕೇಶವ ಮಳಗಿ ಅವರು ಪುಸ್ತಕದ ಬೆನ್ನುಡಿಯಲ್ಲಿ ಬರೆದಿರುವುದು.. ಅದು ನಮ್ಮ ಮಾತು ಕೂಡಾ ಅಂತ ಸಂಕಲನ ಓದಿದ ಯಾರಿಗಾದರೂ ಅನಿಸುತ್ತದೆ.

ದಟ್ಟವಾದ ಜೀವನ ಅನುಭವ ಇಲ್ಲದೆ ಬರಿಯ ಕಲ್ಪನೆಗಳಲ್ಲಿ ಇಷ್ಟೆಲ್ಲ ಗಟ್ಟಿಯಾದ ಕಥೆಗಳು ಗರಿ ಬಿಚ್ಚಲು ಸಾಧ್ಯವಿಲ್ಲ. ಗ್ರಾಮೀಣ ,ನಗರ, ಕರಾವಳಿಯ, ಕಾರ್ಪೊರೇಟ್ ಬದುಕಿನ ಹೀಗೇ ಒಂದೊಂದೂ ವಿಭಿನ್ನ ವಸ್ತುಗಳು, ಸಂಬಂಧಗಳ ಸೂಕ್ಷ್ಮತೆ, ಹೆಣ್ಣು ಮಕ್ಕಳ ಅಂತರಂಗದ ತುಮುಲಗಳು ಎಲ್ಲವೂ ಸೂಕ್ಷ್ಮ ವಾಗಿ ಕಥೆ ಕಟ್ಟಿಸಿಕೊಳ್ಳುವಿಕೆಯಲ್ಲಿ ಅತ್ಯಂತ ಯಶಸ್ವಿಯಾಗಿವೆ. ವಿಭಿನ್ನ ಕಥಾ ವಸ್ತು, ನಿರೂಪಣೆ ಇಡೀ ಸಂಕಲನದ ಹೆಗ್ಗುರುತು. ಪ್ರತಿಯೊಂದು ಕಥೆಯಲ್ಲೂ ವಸ್ತುವಿನ ಆಯ್ಕೆ ನನಗೆ ನಿಜವಾಗಿಯೂ ಅಚ್ಚರಿ ತರಿಸಿತು. ಆ ಕಥೆ ಬೇಡುವ ಎಲ್ಲ ವಿವರಣೆಯನ್ನು ಅತ್ಯಂತ ಸಮರ್ಥವಾಗಿ ಒದಗಿಸಿರುವ ಮತ್ತು ಕಥೆ ಎಲ್ಲಿಯೂ ಜಾಳು ಎನಿಸದಂತೆ ಘಟನೆಗಳನ್ನು ಪೋಣಿಸಿದ ರೀತಿ ಬಹಳ ಸಮರ್ಥನೀಯವಾಗಿದೆ. ಹೆಣ್ಣಿನ ಮನಸ್ಸಿನ ಅಂತರಾಳ ತಾಕಲಾಟಗಳ ಅನನ್ಯ ಅನಾವರಣ ಇಲ್ಲಿಯ ಕಥೆಗಳದು. ಬಹುತೇಕ ಗಟ್ಟಿತನವಿರುವ ಹೆಣ್ಣು ಮಕ್ಕಳ ಕಥೆಗಳೇ ಇಲ್ಲಿವೆ ಅನಿಸಿದೆ. ಅದೆಷ್ಟು ಚೆನ್ನಾಗಿ ಹೆಣ್ಣು ಪಾತ್ರಗಳು ನಿಭಾಯಿಸಿವೆ ಎಂದರೆ ಅವನ್ನು ಓದಿಯೇ ತಿಳಿಯಬೇಕು. ಇವರ ಶ್ರದ್ಧೆ ಕಥೆ ಕಟ್ಟುವ ಶೈಲಿ ನಿಜಕ್ಕೂ ಬೆರಗು ಮೂಡಿಸುತ್ತದೆ….ಅಲ್ಲಲ್ಲಿ ಮಯೂರ ಮುಂತಾದ ಅನೇಕ ಪತ್ರಿಕೆಗಳಲ್ಲಿ ಇವರ ಕಥೆಗಳನ್ನು ಓದಿ ಇಷ್ಟ ಪಟ್ಟಿದ್ದೇನೆ..ಈಗ ಇಡೀ ಸಂಕಲನ ಓದಿದ ಮೇಲೆ ನಿಜಕ್ಕೂ ಖುಷಿ ಆಯಿತು. ನಮ್ಮ ನಡುವಿನ ಅತ್ಯಂತ ಸೂಕ್ಷ್ಮವಾದ ಸಂವೇದನಾಶೀಲ ಬರಹಗಾರ್ತಿ ಆದ ಅನುಪಮಾ ಪ್ರಸಾದ್ ಅವರಿಂದ ಇನ್ನೂ ಹೆಚ್ಚಿನ ಕಥೆಗಳು, “ಪಕ್ಕಿ ಹಳ್ಳದ ಹಾದಿಗುಂಟ”ದಂತಹ ಕಾದಂಬರಿಗಳು ನಮ್ಮಂತಹ ಓದುಗಾಸಕ್ತರಿಗೆ ಮತ್ತೆ ಮತ್ತೆ ಆದಷ್ಟು ಬೇಗ ದೊರಕಲಿ ಎಂದು ಆಶಿಸುತ್ತೇನೆ.


  • ಮಮತಾ ಶಂಕರ್ –  ಬೆಳಗಾವಿ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading