ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೩)

ಎತ್ತರ, ದಪ್ಪ ಗಾತ್ರದಲ್ಲಿ ಬಲ ಭೀಮನಂತಿದ್ದ ಗುಂಡ ಯಾರೊಂದಿಗೂ ಮಾತಾಡುತ್ತಿರಲಿಲ್ಲ. ತಾನಾಯಿತು ತನ್ನ ಪಾಡಾಯಿತು ಎಂದಿದ್ದ. ಆದರೆ ನಮಗೆ ಅವನು ಜೀವವಾಗಿದ್ದ. ನಮ್ಮೊಂದಿಗೆ ಬೆರೆತು ಹೋಗಿದ್ದ.ಗುಂಡನಿಗೆ ಮುಂದೇನಾಯಿತು ತಪ್ಪದೆ ಓದಿ ಲೇಖಕಿ ಕೆ ಸಿ ರತ್ನಶ್ರೀ ಶ್ರೀಧರ್ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…

ನಮ್ಮ ಪ್ರಾಣಿ ಪ್ರೀತಿ ಗುರುಗ್ರಾಮದ ಅಮಿಟಿ ಕ್ಯಾಂಪಸ್ನಲ್ಲಿಯೂ ಮುಂದುವರೆಯಿತು. ಅಲ್ಲಿಯೂ ಗುಂಡನಷ್ಟೇ ನಮ್ಮನ್ನು ಪ್ರೀತಿಸುವ ಒಬ್ಬನನ್ನು ಬಿಟ್ಟು ಬರುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದೇವೆ. ಮೊದಮೊದಲು ರೌಡಿಯಂತಿದ್ದವನು ಬರ ಬರುತ್ತಾ ನಮ್ಮೊಂದಿಗೆ ಬಹಳ ಅನ್ಯೋನ್ಯತೆಯನ್ನು ಬೆಳೆಸಿಕೊಂಡಿದ್ದ.

ಮೊದಲಿಗೆ ಅವನನ್ನು ಧಡಿಯ ಅಂತ ಗುರುತಿಸುತ್ತಿದ್ದೆವು. ಅವನು ಯಾವ ನಾಯಿಗಳ ಗುಂಪಿನೊಂದಿಗೂ ಗುರುತಿಸಿಕೊಳ್ಳದೇ ತಾನೊಬ್ಬನೇ ಒಂಟಿಯಾಗಿರುತ್ತಿದ್ದ. ಯಾವುದೇ ನಾಯಿಯೊಂದಿಗಾಗಲಿ, ಮನುಷ್ಯರೊಂದಿಗಾಗಲಿ ಸಖ್ಯ ಬೆಳೆಸಿಕೊಂಡಿರಲಿಲ್ಲ. ಯಾರಾದರೂ ಹತ್ತಿರ ಹೋದರೆ ಸಣ್ಣಗೆ “ಗುರ್ರ್ರ್” ಎನ್ನುತ್ತಿದ್ದ. ಹಾಗಾಗಿ ಯಾರೂ ಅವನ ಬಳಿ ಹೋಗುತ್ತಿರಲಿಲ್ಲ. ಇಡೀ ಕ್ಯಾಂಪಸ್ ನಲ್ಲಿ ಯಾರೊಂದಿಗೂ ಅವನು ಬೆರೆಯುತ್ತಿರಲಿಲ್ಲ. ಯಾರ ತಂಟೆಗೂ ಹೋಗುತ್ತಲೂ ಇರಲಿಲ್ಲ. ತನ್ನಷ್ಟಕ್ಕೆ ತಾನು ಎಲ್ಲರಿಂದ ಅಂತರ ಕಾಯ್ದುಕೊಳ್ಳುತ್ತಿದ್ದ.

ನನ್ನ ಪತಿ ಪ್ರತಿದಿನ ಅವರ ಆಫೀಸ್ಗೆ ಹೋಗುವಾಗ ಬರುವಾಗ ದಢಿಯನನ್ನು ಮಾತನಾಡಿಸುತ್ತಾ ನಿಧಾನವಾಗಿ ಕ್ರಮೇಣ ಅವನನ್ನು ಒಲಿಸಿಕೊಂಡರು. ಕರೆದರೆ ಬಾಲ ಆಡಿಸುತ್ತಾ ಹತ್ತಿರ ಬರುವಷ್ಟು ಬದಲಾದ. ಅವನ ಮೈದಡವಿ ಮಾತನಾಡಿಸಿದರೆ ಅವನೂ ಇವರ ಕಾಲಿನ ಮೇಲೆ ತಲೆ ಇಟ್ಟು ಉಜ್ಜುತ್ತಿದ್ದ. ಕೆಲವು ದಿನಗಳ ನಂತರ ನಮ್ಮೊಂದಿಗೆ ಬಿಟ್ಟಿರಲಾರದಷ್ಟು ಒಡನಾಟ ಬೆಳೆಸಿಕೊಂಡ ಅವನು ನಮ್ಮೊಂದಿಗೆ ಮಾತ್ರ ಸೌಮ್ಯ ಸ್ವಭಾವವನ್ನು ರೂಢಿಸಿಕೊಂಡು ನಮಗೆ ಮತ್ತೊಬ್ಬ ಗುಂಡನೇ ಆಗಿಬಿಟ್ಟ.

ಈ ಗುಂಡನ ಒಂದು ಒಳ್ಳೆಯ ಗುಣವೆಂದರೆ, ನಾವು ಬೇರೆ ನಾಯಿಗಳಿಗೆ ಅವನೆದುರಿನಲ್ಲಿಯೇ ಬಿಸ್ಕೆಟ್ ಕೊಡುವಾಗ ಸುಮ್ಮನೆ ದೂರದಲ್ಲಿ ನಿಂತಿರುತ್ತಿದ್ದನೇ ವಿನಹ ಬೇರೆ ನಾಯಿಗಳಿಗೆ ಬೊಗಳುವುದು ಅಥವಾ ಓಡಿಸುವುದು ಮಾಡುತ್ತಿರಲಿಲ್ಲ. ಅವನಿಗೆ ಕೊಟ್ಟಿದ್ದನ್ನು ಮಾತ್ರ ಅವನು ತಿನ್ನುತ್ತಿದ್ದ.

ಫೋಟೋ ಕೃಪೆ : ಅಂತರ್ಜಾಲ

ಕ್ಯಾಂಪಸ್ ನ ಇನ್ನೊಂದು ಮೂಲೆಯ ಕ್ಯಾಂಟೀನ್ ಪಕ್ಕದಲ್ಲಿದ್ದ ಹೆಣ್ಣು ನಾಯಿಯೊಂದರ ಮುದ್ದಾದ ಎಂಟು ಮರಿಗಳು ನಮ್ಮನ್ನು ನೋಡಿದರೆ ಸಾಕು ನಮ್ಮ ಹಿಂದೆಯೇ ಓಡಿ ಬರುತ್ತಿದ್ದವು. ಎರಡು ದಿನಗಳಿಗೊಮ್ಮೆ ಅವುಗಳಿಗೂ ಬಿಸ್ಕೆಟ್ ಕೊಡಲು ಹೋದಾಗ ಗುಂಡನೂ ಕೂಡ ನಮ್ಮೊಂದಿಗೆ ಬರುತ್ತಿದ್ದ. ಒಂದು ದಿನವೂ ಮರಿಗಳಿಗೆ ಬೊಗಳುವುದಾಗಲಿ, ಅವುಗಳಿಗೆ ಬಿಸ್ಕೆಟ್ ಕೊಡದಂತೆ ಅಡ್ಡಿಪಡಿಸುವುದಾಗಲಿ ಮಾಡಲಿಲ್ಲ.

ಗುಂಡ ಯಾರ ಮನೆಯ ಬಳಿಯೂ ಬರುತ್ತಿರಲಿಲ್ಲ. ನಮ್ಮ ಅಪಾರ್ಟ್ಮೆಂಟಿನಿಂದ ನೂರು ಮೀಟರ್ ದೂರದಲ್ಲಿದ್ದ ಕಾರ್ ಪಾರ್ಕಿಂಗ್ ಜಾಗದಲ್ಲಿ ಮಲಗುತ್ತಿದ್ದ. ನಮ್ಮ ಕಾರಿನ ಬಳಿ ಯಾರಿಗೂ ಸುಳಿಯಲು ಬಿಡುತ್ತಿರಲಿಲ್ಲ. ಎತ್ತರ, ದಪ್ಪ ಗಾತ್ರದಲ್ಲಿ ಬಲ ಭೀಮನಂತಿದ್ದ ಗುಂಡ ಒಮ್ಮೆ ನಮ್ಮ ಕಾರಿನ ಮೇಲೆ ಮಲಗಿ ಕಾರಿನ ಟಾಪ್ ಡೆಂಟಾಗಿ ಬಿಟ್ಟಿತ್ತು. ಕಾರಿಗೆ ಏನಾಯಿತೆಂದು ಆಗ ನಮಗೆ ತಿಳಿಯದಾಗಿತ್ತು. ಮಾರನೇ ದಿನ ಅವನು ಕಾರಿನ ಮೇಲೆ ಮಲಗಿರುವುದನ್ನು ನೋಡಿದಾಗ ಅದು ಇವನದೇ ಕೆಲಸ ಎಂದು ತಿಳಿಯಿತು.

ಪ್ರತಿದಿನ ಸಂಜೆ ನಾವು ಕ್ಯಾಂಪಸ್ ಒಳಗಿನ ವಿಶಾಲವಾದ ಆಟದ ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದೆವು. ಆಗ ಗುಂಡ ನಮ್ಮ ಜೊತೆಯಾಗುತ್ತಿದ್ದ. ನಾವು ಮೈದಾನಕ್ಕೆ ಹೋಗುವ ಮತ್ತು ಬರುವ ಹಾದಿಯ ಸುತ್ತಾ-ಮುತ್ತಾ ಯಾವುದೇ ವಾಹನವಾಗಲಿ, ಜನರಾಗಲಿ, ಪ್ರಾಣಿಗಳಾಗಲಿ ಸುಳಿದಾಡಲು ಬಿಡುತ್ತಿರಲಿಲ್ಲ. ನಾವು ನಡೆವ ರಸ್ತೆ ಮಾತ್ರ ಸಂಪೂರ್ಣ ಖಾಲಿ ಇರಬೇಕೆಂದು ಬಯಸುತ್ತಿದ್ದ. ಕೊನೆಗೆ ಅಳಿಲುಗಳು ದಾರಿಯಲ್ಲಿ ಆಟ ಆಡುತ್ತಿದ್ದರೂ ಅವುಗಳನ್ನೂ ಅಟ್ಟಿಸಿಕೊಂಡು ಹೋಗಿ ಓಡಿಸುತ್ತಿದ್ದ.

ನಾವು ಆಟದ ಮೈದಾನಕ್ಕೆ ಹೋದಾಗ ಅಲ್ಲಿ ನಮಗಾಗಿ ಕಾದಿರುತ್ತಿದ್ದ ಸಿಂಧಿ, ಲಂಬು ಲಟುಕ, ಕರಿಯ, ಕೆಂದ, ಹೆಸರಿಡದ ಇನ್ನೂ ಹಲವಾರು ನಾಯಿಗಳಿಗೆ ಬಿಸ್ಕೆಟ್ ಕೊಡುತ್ತಿದ್ದವು. ಅವುಗಳಿಗೆ ಕೊಟ್ಟಿದ್ದನ್ನು ಮಾತ್ರ ಅವು ತಿನ್ನುತ್ತಿದ್ದವೇ ವಿನಹ ಯಾವ ನಾಯಿಯೂ ಜಗಳವಾಡುತ್ತಿರಲಿಲ್ಲ.

ದೊಡ್ಡ ಆಟದ ಮೈದಾನದಲ್ಲಿ ನನ್ನವರೊಂದಿಗೆ ಎರಡು ಸುತ್ತು ರನ್ನಿಂಗ್ ಮಾಡುತ್ತಿದ್ದ ಗುಂಡ, ಅವರು ರೆಡಿ… ಸ್ಟಡಿ…. ಗೋ ಎಂದ ಕೂಡಲೇ ಅವರೊಟ್ಟಿಗೆ ಜೋರಾಗಿ ಓಡುತ್ತಿದ್ದ. ನಂತರ ಒಂದೆಡೆ ಮಲಗುತ್ತಿದ್ದ. ಮುಕ್ಕಾಲು ಗಂಟೆಯ ನಮ್ಮ ವಾಕಿಂಗ್ ಮುಗಿದ ಮೇಲೆ ಮತ್ತೆ ನಮ್ಮೊಂದಿಗೆ ವಾಪಸ್ ನಡೆಯುತ್ತಾ ಬಂದು, ಅವನ ಪರ್ಮನೆಂಟ್ ಜಾಗವಾದ ಕಾರ್ ಪಾರ್ಕಿಂಗ್ ಜಾಗದಲ್ಲಿ ಮಲಗುತ್ತಿದ್ದ.

ವಾಕಿಂಗ್ ಹೋಗುವ ಮತ್ತು ಬರುವ ಹಾದಿಯಲ್ಲಿ ಇನ್ನೊಂದು ತಮಾಷೆಯ ಸಂಗತಿ ನಡೆಯುತ್ತಿತ್ತು. ಕ್ಯಾಂಪಸ್ ನಲ್ಲಿರುವ ಕೆಲವು ಸೆಕ್ಯೂರಿಟಿ ಗಾರ್ಡ್ಗಳು ನಾಯಿಗಳನ್ನು ಹೆದರಿಸಿ ಓಡಿಸುತ್ತಿದ್ದರು. ಅಂತಹ ಗಾರ್ಡ್ ಗಳನ್ನು ದೂರದಿಂದಲೇ ನೋಡುವ ಗುಂಡ ರಹದಾರಿಯನ್ನು ಬಿಟ್ಟು ಅಡ್ಡ ದಾರಿಯಲ್ಲಿ ನುಸುಳಿ ಮರೆಯಾಗಿ ಸೆಕ್ಯೂರಿಟಿಯನ್ನು ದಾಟಿ ಮತ್ತೆ ರಹ ದಾರಿಗೆ ಬಂದು ನಮ್ಮ ಜೊತೆಯಾಗುತ್ತಿದ್ದ. ಒಟ್ಟಿನಲ್ಲಿ ಸೆಕ್ಯೂರಿಟಿಯ ಕಣ್ ತಪ್ಪಿಸಿ ಓಡಾಡುವುದು ಅವನಿಗೆ ಬಹಳ ಚೆನ್ನಾಗಿ ರೂಢಿಯಾಗಿತ್ತು.

ಫೋಟೋ ಕೃಪೆ : ಅಂತರ್ಜಾಲ

ನಾವು ಕ್ಯಾಂಪಸ್ಸಿನಿಂದ ಕಾರಿನಲ್ಲಿ ಹೊರಗೆ ಹೊರಟರೆ ಸಾಕು, ಕಾರ್ ಪಾರ್ಕಿಂಗ್ ನಿಂದ ಸುಮಾರು 500 ಮೀಟರ್ ದೂರ ಇರುವ ಮೇನ್ ಗೇಟ್ ವರೆಗೂ ನಮ್ಮ ಕಾರಿನ ಮುಂದೆ ಬೊಗಳುತ್ತಾ ಗುಂಡ ಕುದುರೆಯ ರೀತಿಯಲ್ಲಿ ಜೋರಾಗಿ ಓಡುತ್ತಿದ್ದ. ಒಂದು ರೀತಿ ವಿ ಐ ಪಿ ಗಳ ವಾಹನ ಅಡೆತಡೆ ಇಲ್ಲದೆ ಸರಾಗವಾಗಿ ಮುಂದೆ ಸಾಗಲು ನೆರವಾಗುವ ಬೆಂಗಾವಲು ವಾಹನದಂತೆ ಗುಂಡ ದಾರಿ ಬಿಡಿಸುತ್ತಾ ಓಡುತ್ತಿದ್ದ ದೃಶ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಗೇಟ್ ವರೆಗೂ ಒಂದೇ ಉಸುರಿಗೆ ಓಡಿ ಬಂದವನು ಗೇಟ್ ಬಳಿ ನಿಂತು ನಮ್ಮನ್ನು ಬೀಳ್ಕೊಡುತ್ತಿದ್ದ.

ಕ್ಯಾಂಪಸ್ ನಲ್ಲಿದ್ದ ಇನ್ನೊಂದು ಹೆಣ್ಣು ನಾಯಿ ಕರ್ಕಿ ಇವಳು ಮಾತ್ರ ಕ್ಯಾಂಪಸ್ ನಲ್ಲಿ ಎಲ್ಲಾ ಕಡೆ ಓಡಾಡಿಕೊಂಡಿರುತ್ತಿದ್ದಳು. ಎಷ್ಟೋ ಬಾರಿ ಮೆಟ್ಟಿಲುಗಳನ್ನು ಹತ್ತಿ ಎರಡನೆಯ ಮಹಡಿಯಲ್ಲಿದ್ದ ನಮ್ಮ ಮನೆಗೂ ಬರುತ್ತಿದ್ದಳು. ಊಟ ಹಾಕಿದರೆ ಸೊಂಟ ಬಳುಕಿಸಿ ಬಾಲ ಅಲ್ಲಾಡಿಸುತ್ತಾ ಪ್ರೀತಿ ತೋರುತ್ತಿದ್ದಳು.

ಗರ್ಭಿಣಿಯಾಗಿದ್ದ ಕರ್ಕಿ ಕ್ಯಾಂಪಸ್ ನ ಕಣಿವೆ ಜಾಗದ ದಟ್ಟ ಕಾಡಿನಂತಿರುವ ಜಾಗದಲ್ಲಿ ಮರಿ ಹಾಕಿಕೊಂಡಿದ್ದಳು. ಮರಿ ಹಾಕಿದ ಎರಡು ಮೂರು ದಿನಗಳ ಕಾಲ ಅವಳು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಅವಳಿಗೆ ಊಟ ಕೊಡಲು ಎಲ್ಲಾ ಕಡೆ ಹುಡುಕಾಡಿದೆವು. ಕಣಿವೆಯ ಪಕ್ಕದಲ್ಲಿ ನಿಂತು ನನ್ನ ಪತಿ ವಿಷಲ್ ಹಾಕಿದ ಕೂಡಲೇ ಕಣಿವೆಯ ಕೆಳಭಾಗದಿಂದ ಮೇಲೆ ಬಂದಳು. ಅವಳಿಗಾಗಿ ತೆಗೆದುಕೊಂಡು ಹೋಗಿದ್ದ ಊಟವನ್ನು ಕೊಟ್ಟೆ. ಊಟ ತಿಂದವಳೇ ಮರಿಗಳತ್ತ ಓಡಿದಳು. ಮರಿಗಳು ದೊಡ್ಡವಾಗುವವರೆಗೂ ಇದೇ ಪರಿಪಾಠ ಮುಂದುವರೆಯಿತು.

ಎರಡು ವರ್ಷಗಳ ನಂತರ ಗುರುಗ್ರಾಮದಿಂದ ಬೆಂಗಳೂರಿಗೆ ಹೊರಟು ನಿಂತ ನಾವು, ನಮ್ಮ ಕಾರು ಮತ್ತು ಮನೆಯ ಇತರೆ ವಸ್ತುಗಳನ್ನು ಸಾಗಿಸಲು ಟ್ರಾನ್ಸ್ಪೋರ್ಟ್ ಏಜೆನ್ಸಿ ಸರ್ವಿಸ್ ನವರಿಗೆ ಕೊಡುವ ಸಂದರ್ಭದಲ್ಲಿ ನಾವು ಮನೆ ಖಾಲಿ ಮಾಡುತ್ತಿರುವ ವಿಚಾರ ಗುಂಡನಿಗೆ ಅದು ಹೇಗೆ ತಿಳಿಯಿತೋ ಗೊತ್ತಿಲ್ಲ. ಎಂದೂ ನಮ್ಮ ಮನೆಯ ಬಾಗಿಲಿಗೆ ಬಾರದವನು ಎರಡು ಮಹಡಿ ಹತ್ತಿ ಮನೆ ಬಾಗಿಲಿಗೆ ಬಂದು ಚಡಪಡಿಸುತ್ತ ನೋಡುತ್ತಿದ್ದ. ಮನೆ ಸಾಮಾನುಗಳನ್ನು ಕೇಳಗಿಳಿಸುತ್ತಿದ್ದವರನ್ನು ನೋಡಿ ಬೊಗಳಲಾರಂಬಿಸಿದ.

ನಂತರ ಕೆಳಗೆ ಇಳಿದು ಬಂದು ಕಾಲಿನ ಮೇಲೆ ಬಿದ್ದು ಹೊರಳಾಡಿದ. ನಾನೂ ಅವನನ್ನು ತಬ್ಬಿಕೊಂಡು ಅತ್ತುಬಿಟ್ಟೆ. ಟ್ರಾನ್ಸ್ಪೋರ್ಟ್ ಏಜೆನ್ಸಿಯವರು ಬಂದು ನಮ್ಮ ಕಾರನ್ನು ಡ್ರೈವ್ ಮಾಡಿಕೊಂಡು ಕ್ಯಾಂಪಸ್ ಹೊರಗೆ ತೆಗೆದುಕೊಂಡು ಹೋಗಲು ಹೊರಟಾಗ ನಮ್ಮ ಗುಂಡ ರೋಷಾವೇಷದಿಂದ ಡ್ರೈವರ್ ಗೆ ಬೊಗಳುತ್ತ ಕಾರನ್ನು ಅಡ್ಡ ಹಾಕಿ ಅವನನ್ನು ಇಳಿಸಲು ನೋಡಿದ. ಕಾರು ಹೊರಟಾಗ ಜೋರಾಗಿ ಬೊಗಳುತ್ತಾ, ಜೀವದ ಹಂಗು ತೊರೆದು ಕಾರನ್ನು ಅಡ್ಡ ಹಾಕಿ ನಿಲ್ಲಿಸಲು ಜೋರಾಗಿ ಓಡತೊಡಗಿದ.

ಆತನ ಆರ್ಭಟ ನೋಡಿ ನಮಗೆ ಗಾಬರಿ. ಗುಂಡ ಎಲ್ಲಿ ಕಾರಿನ ಚಕ್ರಕ್ಕೆ ಸಿಕ್ಕುಬಿಡುತ್ತಾನೋ ಎಂಬ ಆತಂಕದಲ್ಲಿ ನಾವು ಅವನನ್ನು ಕರೆಯುತ್ತಾ, ವೇಗವಾಗಿ ಹೋಗುತ್ತಿದ್ದ ಕಾರಿನ ಹಿಂದೆ ನಾನೂ, ನನ್ನವರೂ ಓಡಿದೆವು. ಸಧ್ಯಕ್ಕೆ ಯಾವುದೇ ಅನಾಹುತವಾಗದ್ದು ಸಮಾಧಾನದ ಸಂಗತಿ. ಗುಂಡ ಕಾರು ಹೋದ ದಿಕ್ಕಿನೆಡೆ ನೋಡುತ್ತ ಬೊಗಳುತ್ತಾ ನಿಂತುಬಿಟ್ಟ. ಅವನನ್ನು ನಾವಿಬ್ಬರೂ ಸಮಾಧಾನ ಮಾಡುತ್ತಲೇ ನಾವು ಅತ್ತೆವು.

ಮಾರನೇ ದಿನ ನಾವು ಸ್ನೇಹಿತರ ಕಾರಿನಲ್ಲಿ ಕ್ಯಾಂಪಸ್ ನಿಂದ ದೆಹಲಿಯ ವಿಮಾನ ನಿಲ್ದಾಣಕ್ಕೆ ಹೊರಟಾಗ ಅಲ್ಲಿ ನಮ್ಮನ್ನೇ ನೋಡುತ್ತಾ ನಿಂತಿದ್ದ ಗುಂಡನನ್ನು ಮೈದಡವಿ ಬಿಟ್ಟುಕೊಡುವಾಗ ನಮ್ಮಿಬ್ಬರ ಕಣ್ಣಿನಲ್ಲೂ ಧಾರಾಕಾರ ನೀರು. ನಾವು ಕ್ಯಾಂಪಸ್ ಬಿಟ್ಟು ಬಂದ ಮೇಲೆ ಆತನಿಗೆ ಊಟ ಕೊಡಲು ಅನೇಕರಿಗೆ ವಿನಂತಿಸಿ ಭಾರವಾದ ಹೃದಯದಿಂದ ಹೊರಟೆವು.

ಆ ನಂತರ ಅವನ ಆರೋಗ್ಯದ ಬಗ್ಗೆ ಆಗಾಗ್ಗೆ ಅಲ್ಲಿನ ಸ್ನೇಹಿತರಿಗೆ ಫೋನ್ ಮಾಡಿ ವಿಚಾರಿಸುತ್ತಿದ್ದೆವು. ಮತ್ತೆ ಆತನ ಬಗ್ಗೆ ವಿಚಾರಿಸಿದಾಗ ವಯಸ್ಸಾದ ಪರಿಣಾಮದಿಂದ ಸ್ವಲ್ಪ ನಿಧಾನವಾಗಿ ಓಡಾಡುತ್ತಿದ್ದಾನೆ ಎಂದು ಕೇಳಿ ವ್ಯಥೆಯಾಯಿತು.

ಸಂಚಿಕೆ ಮುಂದುವರೆಯುವುದು.

ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :


  • ಕೆ.ಸಿ. ರತ್ನಶ್ರೀ ಶ್ರೀಧರ್ – ಚೆನ್ನೈ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW