ಸಮುದ್ರದ ಬಣ್ಣ ಯಾಕೆ ನೀಲಿಯಾಗಿದೆ

ಸಮುದ್ರ ನೀಲಿಯಾಗಿದೆ ಅದೇ ನೀರು ಗಾಜಿನ ಲೋಟದಲ್ಲಿ ಬಂದಾಗ ನೀಲಿಯಾಗಿ ಕಾಣುತ್ತಿಲ್ಲ.ಈ ವ್ಯತ್ಯಾಸ ಯಾಕೇ ಎನ್ನುವುದು ಭಾರತೀಯ ಪ್ರಖ್ಯಾತ ಭೌತಶಾಸ್ತ್ರಜ್ಞ ಸರ್ ಸಿ. ವಿ. ರಾಮನ್ ಅವರದಾಗಿತ್ತು. ಲೇಖಕರಾದ ರಾಜಶೇಖರ ನಾಗೂರು ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ನಾವು ನೀವು ಸಮುದ್ರದಲ್ಲಿ ಹಡಗಿನ ಮೂಲಕ ಪ್ರಯಾಣಿಸುತ್ತಿದ್ದರೆ ಅಗಾದ ನೀಲಿ ಸಮುದ್ರ ನೋಡಿ ಏನೇನ್ನಬಹುದು! ವಾವ್.. ನೀಲಿ ಸಮುದ್ರ ಎಷ್ಟು ಚಂದ ಎಂದು ಉದ್ಗರಿಸಿ ಒಂದೆರಡು ಸೆಲ್ಫಿ ಕ್ಲಿಕ್ ತೆಗೆದುಕೊಂಡು ಸೋಶಿಯಲ್ ಮಿಡಿಯಾದಲ್ಲಿ ಹಾಕಿ ಮುನ್ನಡೆಯುತ್ತೇವೆ.

ಆದರೆ 1900 ರ ಸಮಯದಲ್ಲಿ ಭಾರತೀಯನೊಬ್ಬ ಲಂಡನ್ ನಿಂದ ಕಲ್ಕತ್ತಾಕ್ಕೆ ಸಮುದ್ರ ಮಾರ್ಗವಾಗಿ ಹಡಗಿನ ಮೂಲಕ ಪ್ರಯಾಣ ಮಾಡುತ್ತಿದ್ದಾಗ ಸಮುದ್ರ ನೀಲಿಯಾಗಿ ಕಾಣುತ್ತಿತ್ತು. ಅದನ್ನ ಗಮನಿಸಿ ನಮ್ಮಂತೆ “ವಾವ್” ಎಂದು ಉದ್ಗಾರ ಹಾಕಿ ಮುಂದೆ ಹೋಗಲಿಲ್ಲ. ಯಾಕೇ ಸಮುದ್ರ ನೀಲಿಯಾಗಿ ಕಾಣುತ್ತದೆ ಎಂದು ಆಳವಾಗಿ ಚಿಂತಿಸಲು ಶುರುಮಾಡಿದ. ಆಕಾಶ ನೀಲಿಯಾಗಿದೆ ಹೀಗಾಗಿ ಸಮುದ್ರವು ಆಕಾಶದ ನೀಲಿ ಬಣ್ಣವನ್ನು ಪ್ರತಿಫಲಿಸುವ ಕಾರಣ ಸಮುದ್ರವು ನೀಲಿಯಾಗಿ ಕಾಣುತ್ತದೆ ಎಂದು ಆಗಿನ ಜಗತ್ತು ಅಂದುಕೊಂಡಿತ್ತು.

ಆಗ ಆ ಭಾರತೀಯನು ಸಮುದ್ರದ ನೀರನ್ನು ಒಂದು ಗಾಜಿನ ಲೋಟದಲ್ಲಿ ತೆಗೆದುಕೊಂಡು ನೋಡಿದಾಗ ಅದು ನೀಲಿಯಾಗಿ ಕಾಣಲಿಲ್ಲ. ಮೇಲೆ ಆಕಾಶ ನೀಲಿಯಾಗಿದೆ ಆದರೂ ಗಾಜಿನ ಲೋಟದ ನೀರು ನೀಲಿಯಾಗಿ ಕಾಣುತ್ತಿಲ್ಲ.

ಸಮುದ್ರ ನೀಲಿಯಾಗಿದೆ ಅದೇ ನೀರು ಗಾಜಿನ ಲೋಟದಲ್ಲಿ ಬಂದಾಗ ನೀಲಿಯಾಗಿ ಕಾಣುತ್ತಿಲ್ಲ.

ಈ ವ್ಯತ್ಯಾಸ ಯಾಕೇ ಎನ್ನುವುದು ಈ ವ್ಯಕ್ತಿಯ ಕುತೂಹಲವಾಗಿತ್ತು. ಹೀಗಾಗಿ ತುಂಬಾ ವರ್ಷಗಳವರೆಗೆ ಬೆಳಕಿನ ಗುಣದ ಬಗ್ಗೆ ಸಂಶೋದನೆಗೆ ಮುಂದಾಗಿ ಮೇಲಿನ ಪ್ರಶ್ನೆಗೆ ಉತ್ತರ ಪಡೆದುಕೊಂಡ.

ನಮಗೆಲ್ಲ ತಿಳಿದಂತೆ ಬಿಳಿ ಬೆಳಕು ಪಟ್ಟಕದ (Prism) ಮೂಲಕ ಹಾಯ್ದು ಹೊರ ಬಂದಾಗ 7 (VIBGYOR) ವಿವಿಧ ಬಣ್ಣದ ಕಿರಣಗಳಾಗಿ ಕಾಮನಬಿಲ್ಲಿನ ಹಾಗೆ ಬೆಳಕನ್ನು ಪ್ರತ್ಯೇಕಿಸುತ್ತದೆ. ಮಳೆ ಬಂದಾಗ ಕಾಮನಬಿಲ್ಲು ಮೂಡುವುದು ಇದೇ ರೀತಿ.

ಬೆಳಕು ಪಾರದರ್ಶಕ ಪದಾರ್ಥದ (ನೀರು, ಗಾಜು) ಮೂಲಕ ಹಾಯ್ದು ಹೋದಾಗ, ಬೆಳಕಿನ ಕಿರಣವು ಪಾರದರ್ಶಕ ಪದಾರ್ಥದ ಮೇಲೆ ಬೀಳುವ ಮೊದಲು ಹೊಂದಿರುವ ಎನರ್ಜಿ ಮತ್ತು ಕಿರಣದ ಅಲೆಯ ಉದ್ದವು (wave length), ಪಾರದರ್ಶಕ ಪದಾರ್ಥದ ಮೂಲಕ ಹಾಯ್ದು ಹೋದ ನಂತರ ಹೊರಬಂದ ಬೆಳಕಿನ ಕಿರಣದಲ್ಲಿ ಆ ಮೊದಲಿನ ಎನರ್ಜಿ ಮತ್ತು ಆ ಬೆಳಕಿನ ಅಲೆಯ ಉದ್ದವು ಬದಲಾಗಿರುತ್ತದೆ ಹಾಗೆಯೇ ಬೆಳಕಿನ ಬಣ್ಣವು ಕೂಡಾ ಬದಲಾಗಿರುತ್ತದೆ. ಇಲ್ಲಿ ಬೆಳಕಿನ ಕಿರಣವು ಎನರ್ಜಿ ಯನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತದೆ ಅಥವಾ ಕಳೆದುಕೊಳ್ಳುತ್ತದೆ.

ಇದು ಭಾವನಾತ್ಮಕವಾಗಿ ಹೇಳುವುದಾದರೆ ಬೆಳಕಿನ ಕಿರಣಗಳು ಪಾರದರ್ಶಕ ಪದಾರ್ಥಗಳ ಅಣುಗಳ ಮೇಲೆ ಬಿದ್ದು ಅವುಗಳನ್ನು ಅಪ್ಪಿಕೊಂಡು ಹೊರ ಬಂದಾಗ ಅವುಗಳ ಸಂತೋಷ ಹೆಚ್ಚಾದರೂ ಆಗಿರುತ್ತೆ ಅಥವಾ ಕಡಿಮೆಯಾದರೂ ಆಗಿರುತ್ತೆ.

ನಾವು ಮಕ್ಕಳನ್ನು ಅಪ್ಪಿ ಮುದ್ದಾಡಿದಾಗ ಆಗುವ ಫೀಲ್ ಬೇರೆಯೇ, ಅಮ್ಮನನ್ನು ಅಪ್ಪಿದಾಗ ಆಗುವ ಅನುಭವ ಬೇರೆಯೇ ಹಾಗೆಯೇ ಪ್ರೀತಿಸಿದ ಸಂಗಾತಿಯನ್ನು ಅಪ್ಪಿ ನಡೆದಾಗ ನಮ್ಮೊಳಗೆ ಆಗುವ ಸಂಚಲನ ಬೇರೆಯೇ, ಇದರಂತೆ ನಮಗೆ ಆಗದ ವ್ಯಕ್ತಿಯನ್ನು ಅಪ್ಪಿದಾಗ ಆಗುವ ಫೀಲ್ ಬೇರೆಯೇ.

ಅಲ್ವಾ?

ಹಾಗೆಯೇ ಬೆಳಕು ಬೇರೆ ಬೇರೆ ಅಣುಗಳ ಮೇಲೆ ಬಿದ್ದು, ಅಪ್ಪಿಕೊಂಡು ಹೊರ ಬಂದಾಗ ಬೇರೆಯೇ ಎನರ್ಜಿಯನ್ನು ಹೊಂದಿರುತ್ತದೆ, ಬೇರೆಯೇ ಅಲೆಯ ಉದ್ದವನ್ನು ಪಡೆದುಕೊಳ್ಳುತ್ತದೆ, ಬೇರೆಯೇ ಬಣ್ಣವನ್ನು ವ್ಯಕ್ತಪಡಿಸುತ್ತದೆ. ಇದು ಹೇಗೆಂದರೆ ಹಳದಿ ಬಣ್ಣದ ಚಂಡನ್ನು ಎಸೆದಾಗ, ಅದು ಬಡಿದು ವಾಪಸ್ಸು ಆರೆಂಜ್ ಬಣ್ಣದ ಚಂಡಾಗಿ ಬಂದಂತೆ.

ಸೂರ್ಯನ ಬೆಳಕು ವಾತಾವರಣದ ದೂಳಿನ ಕಣಗಳ ಮೇಲೆ ಬಿದ್ದು ಚದುರಿದಾಗ ಆ ವಿಭಜಿಸಿದ ಬೆಳಕಿನ ಕಿರಣಗಳಲ್ಲಿ ಹೆಚ್ಚು ಚದುರದ ಕೆಂಪು ಕಿರಣಗಳು ಸೂರ್ಯನ ದಿಗಂತದ ಹತ್ತಿರ ಕೆಂಪಾಗಿ ಕಾಣುವಂತೆ ಮಾಡುತ್ತವೆ. ಹಾಗೆಯೇ ಹೆಚ್ಚು ಚದುರುವ ನೀಲಿ ಬಣ್ಣವು ಆಕಾಶಕ್ಕೆ ನೀಲಿ ಬಣ್ಣವನ್ನು ಕೊಡುತ್ತದೆ. ಅದು ಅಗಾದ ಸಮುದ್ರದ ನೀರನ್ನು ನಿಲಿಯಾಗಿ ಪ್ರತಿಫಲನವಾಗುವಂತೆ ಮಾಡಿ ನೀಲಿ ಬಣ್ಣದ ಸಮುದ್ರವನ್ನಾಗಿ ಕಾಣುವಂತೆ ಮಾಡುತ್ತದೆ. ಅದೇ ನೀರನ್ನು ಗಾಜಿನ ಲೋಟಕ್ಕೆ ಹಾಕಿದಾಗ ಬೆಳಕು ಗಾಜಿನ ಮೇಲೆ ಬಿದ್ದು ನೀರಿಗೆ ಹಾಯ್ದು ಹೊರ ಬಂದಾಗ ನೀಲಿ ಬಣ್ಣವನ್ನು ಹೊರಹಾಕುವಿದಿಲ್ಲ. ಕಾರಣ ಗಾಜಿನ ಲೋಟದ ನೀರು ನೀಲಿಯಾಗಿ ಕಾಣುವುದಿಲ್ಲ.

ಇದನ್ನೇ “ರಾಮನ್ ಎಫೆಕ್ಟ್” ಎಂದು ಕರೆದರು. ಈ ಆವಿಷ್ಕಾರಕ್ಕೆ 1930 ರಲ್ಲಿ ಭಾರತಕ್ಕೆ ಪ್ರಥಮ ವೈಜ್ಞಾನಿಕ ನೊಬೆಲ್ ಪಾರಿತೋಷಕ ಸಿಕ್ಕಿತು. ನೊಬೆಲ್ ತಂದುಕೊಟ್ಟ ಆ ವ್ಯಕ್ತಿಯೇ ಹೆಮ್ಮೆಯ ಭಾರತೀಯ ಪ್ರಖ್ಯಾತ ಭೌತಶಾಸ್ತ್ರಜ್ಞ ಸರ್ ಸಿ. ವಿ. ರಾಮನ್.

ಇನ್ನೊಂದು ವಿಶೇಷ ಏನು ಗೊತ್ತಾ “ರಾಮನ್ ಎಫೆಕ್ಟ್” ಆವಿಷ್ಕಾರ ಕಲ್ಕತ್ತದಲ್ಲಾದರೂ ರಾಮನ್ ಇದನ್ನು ಪ್ರಕಟಿಸಿದ್ದು ಬೆಂಗಳೂರಿನಲ್ಲಿ (28-2-1928). ಈ ಸುದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಪ್ರತಿವರ್ಷ ಫೆಬ್ರವರಿ 28ರಂದು ಆಚರಿಸಲಾಗುವುದು. ವಿಜ್ಞಾನವನ್ನು ಭಾವನಾತ್ಮಕವಾಗಿ ನೋಡಿದರೆ ವೈಜ್ಞಾನಿಕ ಆವಿಷ್ಕಾರಗಳನ್ನು ತಿಳಿಯುವುದು ಸುಲಭ ಎನ್ನುವುದು ನನ್ನ ಅಭಿಪ್ರಾಯ.

ರಾಮನ್ ರು 1933 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನ ಮೊದಲ ಭಾರತೀಯ ನಿರ್ದೇಶಕರಾದರು. ನಂತರ 1948 ರಲ್ಲಿ ರಾಮನ್ ಸಂಶೋಧನಾ ಸಂಸ್ಥೆ (Raman Research Institute) ಯನ್ನು ಸ್ಥಾಪಿಸಿ ಕೊನೆಯವರೆಗೂ ಸಂಶೋಧನೆಯಲ್ಲಿ ತೊಡಗಿದ್ದರು.

ಅವರು 1970 ರ ನವೆಂಬರ್ 21 ರಂದು ಬೆಂಗಳೂರಿನಲ್ಲಿ ನಿಧನರಾದರು.


  • ರಾಜಶೇಖರ ನಾಗೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW