‘ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ’ ಪರಿಚಯ

“ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ” ಕುರಿತು ಹೇಳುವುದಾದರೆ ಹತ್ತೂ ಸಂಪುಟಗಳೂ ಮಹತ್ವವಾಗಿದ್ದು, ಹನ್ನೆರಡನೆಯ ಶತಮಾನದ ವಚನಕಾರರಿಂದ ಹಿಡಿದು ಇಂದಿನ ಯಾವ ಸಾಹಿತಿಗಳ ಚರಿತ್ರೆ ಬೇಕಾದರೂ ಈ ಸಂಪುಟಗಳಲ್ಲಿ ದೊರೆಯುತ್ತವೆ. ಈ ಕೃತಿಯ ಬಗ್ಗೆ ಕಾದಂಬರಿಕಾರರಾದ ಡಾ. ಲಕ್ಷ್ಮಣ ಕೌಂಟೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ (ಹತ್ತು ಸಂಪುಟಗಳು)
ಲೇಖಕರು : ಡಾ. ಎಸ್.ಎಂ. ಹಿರೇಮಠ
ಹತ್ತೂ ಸಂಪುಟಗಳಿಗಾಗಿ ಸಂಪರ್ಕಿಸಿ : 94482 51600

ಡಾ. ಎಸ್.ಎಂ. ಹಿರೇಮಠ, ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ೨೫ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪಿ. ಎಚ್ಡಿ.ಗಾಗಿ ಮಾರ್ಗದರ್ಶನ ಮಾಡಿದವರು, ಇನ್ನೂ ಮಾಡುತ್ತಿರುವವರು. ಹಾಗೆಯೇ ೨೧ ಜನ ವಿದ್ಯಾರ್ಥಿಗಳಿಗೆ ಎಂ.ಫಿಲ್. ಪದವಿ ಪಡೆಯಲು ಮಾರ್ಗದರ್ಶನ ತೋರಿದವರು. ಎಲ್ಲಕ್ಕಿಂತ ಹೆಚ್ಚಾಗಿ ಸೃಜನ ಮತ್ತು ಸೃಜನೇತರ ೩೨೦ ಅಮೂಲ್ಯ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು.

ನಾವಿಬ್ಬರೂ ಒಂದೇ ತಾಲ್ಲೂಕಿನವರು (ಕಲಬುರ್ಗಿ ಜಿಲ್ಲೆ, ಆಳಂದ ತಾಲ್ಲೂಕು). ಅವರದು ನಿಂಬರ್ಗಾ, ನನ್ನದು ಅವರ ಸನಿಹದ ಹಳ್ಳಿ ಕೋರಹಳ್ಳಿ. ನಾವಿಬ್ಬರು ಕಲಬುರ್ಗಿ ಪ್ರತಿಷ್ಠಿತ ಜಾನಪದ ದೇವತೆ ಶರಣಬಸವೇಶ್ವರ ಸಂಸ್ಥಾನಕ್ಕೆ ಸೇರಿದವರು. ಆ ಸಂಸ್ಥಾನಕ್ಕೆ ನನಗಿಂತ ಅವರ ಕೊಡುಗೆಯೇ ಅತಿಹೆಚ್ಚು.

ಸುಮಾರು ಒಂದು ವರ್ಷದ ಹಿಂದೆ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ‘ಕಲಾತಪಸ್ವಿ’ಗಳನ್ನು ಕಾಣುವ ಭಾಗ್ಯ ನನಗೆ ದೊರೆಯಿತು. ಅವರು ನನಗೆ ‘ನಾನು ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಶೀರ್ಷಿಕೆ ಅಡಿ ಹತ್ತು ಸಂಪುಟಗಳಲ್ಲಿ ತರುತ್ತಿರುವೆ. ನಿಮ್ಮ ಕುರಿತು ಬರೆಯಬೇಕಿದೆ, ಮಾಹಿತಿ ಕೊಡಿ’ ಎಂದರು. ನಾನು ‘ಆಗಲಿ ಗುರುಗಳೇ’ ಎಂದೆ. ನಾನು ಸಂಸಾರದ ಜಂಜಾಟದಲ್ಲಿ ಸ್ವಯಂ ಮುಳುಗಿ ಡುಮುಕಿ ಹೊಡೆಯುತ್ತಿರುವವನು, ಅವರು ಹೇಳಿದ್ದನ್ನು ಮರೆತುಬಿಟ್ಟೆ ಅಥವಾ ‘ಅದೆಲ್ಲ ಏಕೆ ಬೇಕು’ ಎಂದು ಉಪೇಕ್ಷಿಸಿಬಿಟ್ಟೆ.

ಕಳೆದ ತಿಂಗಳು ಗುರುಗಳು ಫೋನ್ ಮಾಡಿ ‘ಎಲ್ಲಿದ್ದೀರಿ ನೀವು? ನಿಮ್ಮ ಊರಲ್ಲಿಯೇ ಇದ್ದರೂ ಹೇಳಿ; ನಾನು ಅಲ್ಲಿಗೂ ಬರುವೆ. ನಾನು ಕೇಳಿದ ಮಾಹಿತಿ ಕೊಡಲೇ ಇಲ್ಲ’ ಎಂದು ನುಡಿದು ನನ್ನನ್ನು ನಾಚಿಕೆಗೊಳ್ಳುವಂತೆ ಮಾಡಿದರು. ನಾನವರಲ್ಲಿ ಕ್ಷಮೆ ಕೇಳಿ ಕೂಡಲೇ ಮಾಹಿತಿಯನ್ನು ವ್ಯಾಟ್ಸಪ್ ಮಾಡಿದೆ. ಅವರು ಮತ್ತೆ ಮತ್ತೆ ಅಗತ್ಯವಾದ ವಿವರಗಳನ್ನು ಕೇಳಿ ಪಡೆದರು.
ಒಂದು ವಾರದ ಹಿಂದೆ ಅವರು ಫೋನ್ ಮಾಡಿ ‘ಹತ್ತೂ ಸಂಪುಟಗಳು ಬಂದಿವೆ. ನಿಮಗೆ ಒಂದು ಸಂಪುಟ ಮುಟ್ಟಿಸಬೇಕು ಎಂದರು.’ನಾನೇ ನಿಮ್ಮ ಮನೆಗೆ ಬಂದು ಅವನ್ನು ಪಡೆಯುವೆ ಗುರುಗಳೇ’ ಎಂದೆ. ಅವರು ‘ಬೇಡ ಬೇಡ, ಬಿಸಿಲು ಬಹಳ. ನನ್ನಲ್ಲಿ ರಥ(ಕಾರು)ವಿದೆ. ನಾನೇ ಬರುತ್ತೇನೆ’ ಎಂದರು. ಎರಡೂ ದಿವಸಗಳ ನಂತರ ಬಂದೂಬಿಟ್ಟರು.

ನೋಡಿ!! ಅವರು ವಯಸ್ಸಿನಲ್ಲಿ ಜ್ಞಾನದಲ್ಲಿ ವೃತ್ತಿಯಲ್ಲಿ ನನಗಿಂತ ಉನ್ನತರು. ಬರಹವೇ ತಮ್ಮ ಬದುಕಾಗಿಸಿ ತಮ್ಮನ್ನು ಕಲಾತಪಸ್ವಿ ಅನ್ನಿಸಿಕೊಂಡವರು. ನಿರಾಳ, ನಿರ್ಗರ್ವಿ. ಯಾವ ಕೋನದಿಂದ ನೋಡಿದರೂ ಅವರ ಮುಂದೆ ನಾನು ಕುಬ್ಜನಾಗಿ ಕಾಣುವೆ. ಗುರುಗಳೂ ಕಲಾತಪಸ್ವಿಗಳೂ ಆದ ಅವರಿಗೆ ಶರಣು ಶರಣಾರ್ಥಿಗಳು.

ಇನ್ನೂ “ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ” ಕುರಿತು ಹೇಳುವುದಾದರೆ ಹತ್ತೂ ಸಂಪುಟಗಳೂ ಮಹತ್ವವಾಗಿವೆ. ಹನ್ನೆರಡನೆಯ ಶತಮಾನದ ವಚನಕಾರರಿಂದ ಹಿಡಿದು ಕಟ್ಟ ಕಡೆಯವನಾದ ನನ್ನ ಕುರಿತೂ (೧೦ನೇ ಸಂಪುಟದಲ್ಲಿ ನನ್ನ ಕುರಿತು ಇದೆ); ನನಗಿಂತ ವಯೋಮಾನದಲ್ಲಿ ಕಿರಿಯರವರೆಗೂ ವಿಸ್ತಾರವಾದ ವಿವರಗಳು, ಸಕಾರಾತ್ಮಕ ವಿಮರ್ಶೆ ಅವುಗಳಲ್ಲಿ ದಾಖಲಿಸಲಾಗಿದೆ. ವೀರಶೈವ (ಲಿಂಗಾಯತವೂ) ಸಾಹಿತಿಗಳಲ್ಲಿ ಯಾರ ಚರಿತ್ರೆ ಬೇಕಾದರೂ ಈ ಸಂಪುಟಗಳಲ್ಲಿ ದೊರೆಯುತ್ತವೆ. ಇಂತಹ ಅಮೂಲ್ಯವಾದ, ಬಹಳಷ್ಟು ಸಮಯವನ್ನು ಆಪೇಕ್ಷಿಸುವ ಗ್ರಂಥಗಳನ್ನು ರಚಿಸುವುದು ಅಷ್ಟು ಸುಲಭವಲ್ಲ. ಆ ಕಾರ್ಯ ಸಾಹಿತ್ಯ ಕ್ಷೇತ್ರದ ‘ತ್ರಿವಿಕ್ರಮ’ ರಿಂದ ಮಾತ್ರ ಸಾಧ್ಯ. ಅವರ ಕಾರ್ಯಕ್ಕೆ ಅವರೇ ಸಾಟಿ. ಇಂತಹ ಮಹತ್ವದ ಕಾರ್ಯ ಮಾಡಿದ ಅವರಿಗೆ ಎಷ್ಟು ಅಭಿವಂದನೆಗಳನ್ನು ಸಲ್ಲಿಸಿದರೂ ಸಾಲದು. ಅವರಿಗೆ ಧನ್ಯವಾದ ಎಂದು ಮಾತ್ರ ಹೇಳಬಹುದು, ಆ ಪದವೂ ಅವರ ಕರ್ತೃತ್ವ ಶಕ್ತಿಗೆ ಸಮನಾಗಲಾರದು.

ಗುರುಗಳೇ, ಕಲಾತಪಸ್ವಿಗಳೆ ತಮಗೆ ಇನ್ನೊಮ್ಮೆ ಮತ್ತೊಮ್ಮೆ ಅನಂತ ಅನಂತ ನಮಸ್ಕಾರಗಳು. ನಿಮ್ಮ ಆಶೀರ್ವಾದ ಹರಕೆ ನನ್ನ ತಲೆಯ ಮೇಲಿರಲಿ.


  • ಡಾ. ಲಕ್ಷ್ಮಣ ಕೌಂಟೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW