1894 ಹಿನ್ಸ್ಬರ್ಗ್ ಮತ್ತು ಟ್ರೆಪಲ್ ಎಂಬಿಬ್ಬ ವಿಜ್ಞಾನಿಗಳು ಇದನ್ನು ವೈದ್ಯ ಲೋಕಕ್ಕೆ ಪ್ಯಾರಾಸೆಟಮಾಲ್ ನ್ನು ಪರಿಚಯಿಸಿದರು. 1949 ರ ವರೆಗೂ ಸಹ ಇದು ಯಾರ ಗಮನವನ್ನು ಸೆಳೆಯಲೇ ಇಲ್ಲ. ಪ್ಯಾರಾಸೆಟಮಾಲ್ ಕಥೆ, ಅದರ ಉಪಯೋಗದ ಬಗ್ಗೆ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎನ್.ಬಿ.ಶ್ರೀಧರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೊರೊನಾ ಕಾಲದ ಡೋಲೊ-650 ಎಂಬ ಮಾತ್ರೆ ಡೌಲಿನ ಡೋಲು ಈಗಲೂ ಬಾರಿಸುತ್ತಿದೆ. 2020 ರಲ್ಲಿ ಕೊರೋನಾ ಕಾಟ ಶುರುವಾಗಿನಿಂದ ಅತ್ಯಂತ ಜನಮನದಲ್ಲಿರುವುದು ಲಾಕ್ ಡೌನ್ ಮತ್ತು ಡೋಲೊ-650 ಎಂಬ ಮಾತ್ರೆ. ಜ್ವರ, ಮೈಕೈ ನೋವು, ತಲೆನೋವು ಎಲ್ಲದಕ್ಕೂ ರಾಮಬಾಣವಾಗಿದ್ದು, ಎಲ್ಲರ ಕೈಗೂ ಸಹ ಸುಲಭ ದರದಲ್ಲಿ ವೈದ್ಯರ ಚೀಟಿಯ ಅಗತ್ಯವಿಲ್ಲದೇ ದೊರಕುವ ಮಾತ್ರೆಗಳಲ್ಲಿ ಈ ಡೋಲೊ-650. ಅಷ್ಟಕ್ಕೂ ಈ ಡೊಲೊ-650 ಮಾತ್ರೆಯಲ್ಲಿರುವುದು ಪ್ಯಾರಾಸೆಟಮಾಲ್ ಅಥವಾ ಅಸಿಟೋಮೆನಫೆನ್ ಎಂಬ ಔಷಧಿ. ಈ ಔಷಧಿ ಪ್ರತಿ ಮಾತ್ರೆಯಲ್ಲಿ 650 ಮಿಲಿಗ್ರಾಮ್ ಪ್ರಮಾಣದಲ್ಲಿರುತ್ತದೆ.
ಬ್ಯುಸಿನೆಸ್ ಟುಡೇ ಪತ್ರಿಕೆಯ ವರದಿಯ ಪ್ರಕಾರ ಡೊಲೊ-650 ಮಾತ್ರೆಗಳು 350 ಕೋಟಿಯಷ್ಟು ಮಾರಾಟವಾಗಿವೆಯಂತೆ. ಪ್ರತಿ ಮಾತ್ರೆಗೆ ಸರಾಸರಿ 2 ರೂ ಅಂದರೂ ಸಹ ರೂ: 700 ಕೋಟಿ ರೂಪಾಯಿಗಳ ವ್ಯಾಪಾರವಾಗಿದೆ ಮತ್ತು ಸರಿ ಸುಮಾರು 250 ಟನ್ನಿನಷ್ಟು ಪ್ಯಾರಾಸೆಟಮಾಲ್ ಮನುಜರ ಹೊಟ್ಟೆ ಸೇರಿದೆ !. ಇನ್ನು ಇತರ ಪ್ಯಾರಾಸೆಟಮಾಲ್ ಆವೃತ್ತಿಗಳಾದ ಕ್ಯಾಲ್ಪೋಲ್, ಡೋಲೋಪಾರ್, ವಿಕ್ಸ್ ಆಕ್ಷನ್ 500 ಇತ್ಯಾದಿ ಅನೇಕ ಸಹಸ್ರ ಮಾತ್ರೆಗಳಲ್ಲಿ ಒಂದಿಲ್ಲೊಂದು ಪ್ರಮಾಣದಲ್ಲಿ ಪ್ಯಾರಾಸೆಟಮಾಲ್ ಇದ್ದೇ ಇದೆ. ಜ್ವರ, ಥಂಡಿ, ತಲೆನೋವು, ಹೊಟ್ಟೆನೋವು, ಮೈಕೈ ನೋವು, ಮುಟ್ಟಿನ ನೋವು, ಹಲ್ಲು ನೋವು, ಕಾಲು ಗಂಟುನೋವು ಇದಕ್ಕೆಲ್ಲಾ ಇದು ರಾಮಬಾಣ.

ಫೋಟೋ ಕೃಪೆ : ಅಂತರ್ಜಾಲ
ಪ್ಯಾರಾಸೆಟಮಾಲ್ ಕಥೆ
ಇದನ್ನು ಅಸೆಟಮೆನೊಫೆನ್ ಎಂತಲೂ ಕರೆಯಲ್ಪಡುತ್ತದೆ. 1894 ಹಿನ್ಸ್ಬರ್ಗ್ ಮತ್ತು ಟ್ರೆಪಲ್ ಎಂಬಿಬ್ಬ ವಿಜ್ಞಾನಿಗಳು ಇದನ್ನು ವೈದ್ಯ ಲೋಕಕ್ಕೆ ಪರಿಚಯಿಸಿದರು. ಇವರು ಇದರ ಜ್ವರ ನಿವಾರಕ ಗುಣ ಮತ್ತು ವಿಷಬಾಧೆಯನ್ನು ಕಪ್ಪೆಗಳು, ಇಲಿ,ಮೊಲ ಮತ್ತು ನಾಯಿಗಳ ಮೇಲೆ ಪ್ರಯೋಗದ ಮೂಲಕ ಕಂಡು ಹಿಡಿದರು. ಆದರೆ 1949 ರ ವರೆಗೂ ಸಹ ಇದು ಯಾರ ಗಮನವನ್ನು ಸೆಳೆಯಲೇ ಇಲ್ಲ. ಲಂಡನ್ನಿನ ಸೇಂಟ್ ಮೇರಿಸ್ ಆಸ್ಪತ್ರೆಯ ಸ್ಮಿಥ್ ಮತ್ತು ವಿಲ್ಲಿಯಮ್ಸ್ ಎಂಬ ಇಬ್ಬರು ವಿಜ್ಞಾನಿಗಳು ಅನೇಕ ವರ್ಷಗಳಿಂದ ಜ್ವರ ನಿವಾರಕವಾಗಿ ಚಾಲ್ತಿಯಲ್ಲಿದ್ದ ಅಸಿಟಾನಿಲೈಡ್ ಮತ್ತು ಫೆನಾಸಿಟಿನ್ ಎಂಬ ಔಷಧಿಗಳ ಜ್ವರ ನಿವಾರಕ ಗುಣವನ್ನು 12 ಸಾಮಾನ್ಯ ಮಹಿಳೆಯರ ಮೇಲೆ ಪ್ರಯೋಗಿಸಿ ಪತ್ತೆ ಮಾಡಿದರು. 1950 ರಷ್ಟರೊತ್ತಿಗೆ ಇದು ಅನೇಕ ಕಂಪನಿಗಳ ಗಮನ ಸೆಳೆದು ಅಸ್ಪಿರಿನ್ ಮತ್ತು ಕೆಫಿನ್ (ಚಹಾ ಮತ್ತು ಕಾಫಿಯಲ್ಲಿರುವ ಅಂಶ) ಜೊತೆ ಇದನ್ನು ಮಿಶ್ರಣ ಮಾಡಿ ಗುಳಿಗೆ ರೂಪದಲ್ಲಿ ಅಮೇರಿಕಾದಲ್ಲಿ ಮಾರಲು ಪ್ರಾರಂಭಿಸಿದವು. ಆದರೆ 1951 ರ ಅಂತ್ಯದಲ್ಲಿಯೇ ಇದು ರಕ್ತವನ್ನು ತೆಳು ಮಾಡಿ ರಕ್ತ ಸ್ರಾವ ಜಾಸ್ತಿ ಮಾಡುತ್ತದೆಂದು ಮಾರುಕಟ್ಟೆಯಿಂದ ಹಿಂಪಡೆಯಲ್ಪಟ್ಟರೂ ಸಹ ಪ್ಯಾರಾಸೆಟಮಾಲ್ ಮಾತ್ರ ಒಂದೇ ಔಷಧಿಯೆಂದು ಮಾರಲು 1955 ರಲ್ಲಿ ಅನುಮತಿ ದೊರಕಿತು. 1956 ರಲ್ಲಿ ಆಸ್ಟ್ರೆಲಿಯಾ ಮತ್ತು ಇತರ ಅನೇಕ ದೇಶದಲ್ಲಿ ಇದು ಮಹತ್ವದ ಜ್ವರ ನಿವಾರಕವಾಗಿ ಮಾರಲ್ಪಟ್ಟಿದ್ದು ಈಗ ಇತಿಹಾಸ. ನಂತರ ಇದರ ಮೇಲೆ ಸಹಸ್ರಾರು ಸಂಶೋಧನೆಗಳು ನಡೆದು ಇದು ರಾಸಾಯನಿಕವಾಗಿ ಸ್ಟಿರಾಯ್ಡ್ ಅಲ್ಲದ ನೋವು ನಿವಾರಕಗಳ ಗುಂಪಲ್ಲಿ ಸೇರಲ್ಪಟ್ಟಿತು. ಸಾಮಾನ್ಯವಾಗಿ ಈ ಗುಂಪಿಗೆ ಸೇರಿದ ನೋವುನಿವಾರಕಗಳು ಮತ್ತು ಜ್ವರ ನಿವಾರಕಗಳು ಹೊಟ್ಟೆಯಲ್ಲಿ ಅಲ್ಸರ್ ಮಾಡುವ ಅಡ್ಡ ಪರಿಣಾಮ ಹೊಂದಿದ್ದರೂ ಸಹ ಪ್ಯಾರಾಸೆಟಮಾಲ್ ಇದಕ್ಕೆ ಹೊರತಾಗಿದ್ದರೂ ಸಹ ಒಂದಿಷ್ಟು ಪಿತ್ತಜನಕಾಂಗ ತೊಂದರೆಯುಂಟು ಮಾಡುವುದು ಗೊತ್ತಾಯಿತು.
ಇದರ ಮಾರುಕಟ್ಟೆ ಜಾಸ್ತಿಯಾದಂತೆ ಜನ ಸಾಮಾನ್ಯರ ಕೈಗೂ ಸಹ ಲಭ್ಯವಾಗಿ ಪ್ರಥಮ ಬಾರಿಗೆ 1966 ರಲ್ಲಿ ಸ್ಕಾಟ್‌ಲ್ಯಾಂಡಿನಲ್ಲಿ ತೀವ್ರತರನಾದ ಪಿತ್ತಜನಕಾಂಗದ ತೊಂದರೆ ವರದಿಯಾಯಿತು. ಇಷ್ಟೊತ್ತಿಗಾಗಲೇ ಇದೇ ಗುಂಪಿಗೆ ಸೇರಿದ ಮೆಲಾಕ್ಸಿಕ್ಯಾಮ್ ಮತ್ತಿತರ ಔಷಧಿಗಳೂ ಸಹ ಮಾರುಕಟ್ಟೆ ಪ್ರವೇಶಿಸಿದವು.
ಭಾರತ ದೇಶದಲ್ಲಿ ಡೋಲೊ ಹೆಸರಿನಲ್ಲಿ ಪ್ಯಾರಸೆಟಮಾಲ್ ಮಾತ್ರೆಯನ್ನು ಬೆಂಗಳೂರು ಮೂಲದ ಮೈಕ್ರೋಲ್ಯಾಬ್ಸ್ ಕಂಪನಿ 1993ರಲ್ಲಿ ತಯಾರಿಸಲು ಪ್ರಾರಂಭಿಸಿತು. ಇಂದು ಪ್ರಪಂಚದಾದ್ಯಂತ ಅನೇಕಾನೇಕ ಕಂಪನಿಗಳು ಪ್ಯಾರಾಸೆಟಮಾಲ್ ಔಷಧವನ್ನು ಇನ್ನಿತರ ಔಷಧಗಳ ಜೊತೆ ಮಿಶ್ರ ಮಾಡಿ ಸಹಸ್ರಾರು ಕ್ರೋಸಿನ್ ತರದ ನಾನಾ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿವೆ.
ಹೇಗೆ ಕಾರ್ಯ ನಿರ್ವಹಿಸುವುದು?
ಇದನ್ನೂ ಸಹ ಸರಳವಾಗಿ ತಿಳಿದುಕೊಳ್ಳಿ. ಶರೀರದಲ್ಲಿ ಯಾವುದೇ ಜೀವಕೋಶಕ್ಕೆ ಧಕ್ಕೆಯಾದಾಗ ಅದರ ಹೊರಪೊರೆಯೊಡೆದು ಫಾಸ್ಫೋಲಿಪಿಡ್ಡುಗಳು ಉತ್ಪನ್ನವಾಗುತ್ತವೆ. ಇದನ್ನು ಸೈಕ್ಲೋಆಕ್ಸಿಜನೇಸ್ ಕಿಣ್ವಗಳು ಪ್ರೋಸ್ಟಾಗ್ಲಾಂಡಿನ್ನುಗಳೆಂಬ ರಸವಸ್ತುಗಳನ್ನಾಗಿ ಪರಿವರ್ತಿಸುತ್ತವೆ. ಇವು ಅನೇಕಾನೇಕ ನೋವುಗಳಿಗೆ, ಜ್ವರಕ್ಕೆ, ಉರಿಯೂತಕ್ಕೆ ಮೂಲ ಕಾರಣ. ಪ್ಯಾರಾಸೆಟಮಾಲ್ ಸೇರಿದಂತೆ ಬಹುತೇಕ ನೋವುನಿವಾರಕಗಳು ಸೈಕ್ಲೋಆಕ್ಸಿಜನೇಸ್ 1 ಮತ್ತು 2 ಎಂಬ ಕಿಣ್ವಗಳ ಕಾರ್ಯವನ್ನು ಪ್ರತಿಬಂಧಿಸುವುದರಿಂದ ಪ್ರೋಸ್ಟಾಗ್ಲಾಂಡಿನ್ನುಗಳು ಉತ್ಪನ್ನವಾಗುವುದೇ ಇಲ್ಲ. ಇದರಿಂದ ಜ್ವರ, ನೋವು, ಉರಿಯೂತ ಕಡಿಮೆಯಾಗಿ ಬಿಡುತ್ತದೆ. ಆದರೆ ಪ್ರೋಸ್ಟಾಗ್ಲಾಂಡಿನ್ನುಗಳು ಹೊಟ್ಟೆಯಲ್ಲಿ ಮ್ಯುಸಿನ್ ಎಂಬ ಲೋಳೆಯಂತ ವಸ್ತುವನ್ನು ಮತ್ತು ಬೈಕಾರ್ಬೋನೇಟ್ ಅಣುಗಳನ್ನು ಉತ್ಪಾದಿಸಿ ಹೊಟ್ಟೆಯ ಪದರವನ್ನು ಹೈಡ್ರೋಕ್ಲೋರಿಕ್ ಆಮ್ಲದಿಂದ ಕಾಪಾಡುತ್ತವೆ. ಇವುಗಳನ್ನು ಪ್ರತಿಬಂಧಿಸಿದಾಗ ಹೊಟ್ಟೆಯಲ್ಲಿ ಹುಣ್ಣು ಆಗುವುದು ಸಹಜ.
ಏನಿದರ ಉಪಯೋಗ?
ಜ್ವರ ನಿವಾರಕವಾಗಿ ಅತ್ಯಂತ ಬಳಕೆಯಲ್ಲಿರುವ ಔಷಧಿ ಪ್ಯಾರಸೆಟಮಾಲ್. ಇದಲ್ಲದೇ ಇದಕ್ಕಿರುವ ನೋವುನಿವಾರಕ ಗುಣ ಮತ್ತು ಒಂದಿಷ್ಟು ಪ್ರಮಾಣದ ಊತನಿವಾರಕ ಗುಣ ಇದನ್ನು ಅತ್ಯಂತ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಔಷಧವನ್ನಾಗಿ ಮಾರ್ಪಡಿಸಿತು. ಇದಕ್ಕಿರುವ ಉತ್ತಮ ಪರಿಣಾಮ ಮತ್ತು ಕಡಿಮೆ ಪ್ರಮಾಣದ ಅಡ್ಡಪರಿಣಾಮ ಇದನ್ನು ವೈದ್ಯರ ಚೀಟಿಯಿಲ್ಲದೇ ಸಿಗಬಹುದಾದ ಔಷಧಿಗಳಲ್ಲಿ ಸ್ಥಾನ ಗಿಟ್ಟಿಸಲು ಅನುವು ಮಾಡಿತು. ಕೊರೋನಾ ಕಾಲದಲ್ಲಂತೂ ಜ್ವರ, ಮೈಕೈ ನೋವು ವೈರಾಣು ಸ್ರವಿಸುವ ವಿಷದಿಂದ ಸಹಜವಾದಾಗ ಪ್ಯಾರಾಸೆಟಮಾಲ್ ಮಾತ್ರೆಗೆ ಎಲ್ಲಿಲ್ಲದ ಬೇಡಿಕೆ ಬಂದು ಡೋಲೊ 50 ನ್ನು ಸಾಮಾಜಿಕ ಜಾಲತಾಣದಲ್ಲಿಯೂ ಸಹ ಅಣಕಿಸುವ ಮಟ್ಟಕ್ಕೆ ಹೋಗಿದೆ. ಪಶುಗಳಲ್ಲಿಯೂ ಸಹ ಇದು ಬಹಳ ಸಾಮಾನ್ಯವಾಗಿ ಜ್ವರ ನಿವಾರಕವಾಗಿ ಬಳಸಲ್ಪಡುವ ಒಂದು ಔಷಧಿ.

ಫೋಟೋ ಕೃಪೆ : ಅಂತರ್ಜಾಲ
ಅಡ್ಡ ಪರಿಣಾಮಗಳೇನು?
ಯಾವುದೇ ಔಷಧಿಗೆ ಪರಿಣಾಮವಿದ್ದರೆ ಅದಕ್ಕೆ ಅಡ್ಡಪರಿಣಾಮವಿರುವುದು ಶತ: ಸಿದ್ದ. ಅಡ್ಡ ಪರಿಣಾಮವಿಲ್ಲದಿದ್ದರೆ ಅದಕ್ಕೆ ಪರಿಣಾಮವೂ ಇಲ್ಲ. ಹಾಗೇಯೇ ಪ್ಯಾರಾಸೆಟಮಾಲಿಗೂ ಸಹ ಅಡ್ಡಪರಿಣಾಮಗಳಿವೆ. 5-6 ಮಾತ್ರೆ ಒಮ್ಮೆಯೇ ಸೇವಿಸಿದಲ್ಲಿ ಅಥವಾ ನಿರಂತರವಾಗಿ ಸೇವಿಸಿದಲ್ಲಿ ಪಿತ್ತಜನಕಾಂಗ ಹಾಳಾಗಿ ಹೋಗುವುದರಲ್ಲಿ ಸಂಶಯವೇ ಇಲ್ಲ. ಕೆಲವೊಮ್ಮೆ ಮೂತ್ರಜನಕಾಂಗಕ್ಕೂ ಸಹ ತೊಂದರೆಯಾಗಬಹುದು. ರಕ್ತದಲ್ಲಿ ಬಿಳಿ ರಕ್ತಕಣಗಳು ಗಣನೀಯವಾಗಿ ಕಡಿಮೆಯಾಗಬಹುದು. ಎರಡು ತಿಂಗಳಿಗಿಂತ ಚಿಕ್ಕ ಮಕ್ಕಳಲ್ಲಿ ಇದರ ಉಪಯೋಗ ಸಲ್ಲದು. ಇದರ ಜೊತೆ ಆಲ್ಕೋಹಾಲ್ ಸೇವನೆ ವರ್ಜ್ಯ. ಸಾಮಾನ್ಯವಾಗಿ ಆಹಾರ ಸೇವನೆಯ ನಂತರ ಮಾತ್ರೆಯ ಜೊತೆ 1-2 ಲೋಟ ನೀರು ಸೇವಿಸಿದರೆ ಉತ್ತಮ. ಗರ್ಭಿಣಿ ಸ್ತ್ರೀಯರು ಸುಮ್ಮ ಸುಮ್ಮನೆ ತೆಗೆದುಕೊಳ್ಳಬಾರದು ಮತ್ತು ಅಡ್ಡಪರಿಣಾಮಗಳಾದಾಗ ತಕ್ಷಣ ವೈದ್ಯರನ್ನು ಕಾಣುವುದು ಜಾಣತನ.
ಯಾವುದೇ ಔಷಧಿಗಳು ಒಂದು ಎರಡೂ ಕಡೆ ಕೊಯ್ಯುವ ಕರಗಸ ಇದ್ದ ಹಾಗೇ. ಜಾಣ್ಮೆಯಿಂದ ವೈಜ್ಞಾನಿಕ ರೀತಿಯಲ್ಲಿ ಕ್ರಮಬದ್ಧವಾಗಿ ತಜ್ಞರ ಸಲಹೆಯ ಮೇರೆಗೆ ತೆಗೆದುಕೊಂಡರೆ ಉತ್ತಮ ಪರಿಣಾಮ ಬೀರಬಲ್ಲವು. ಇವುಗಳ ಅಡ್ಡ ಪರಿಣಾಮದ ಬಗ್ಗೆ ಪರಿಣಾಮಕ್ಕಿಂತ ಜಾಸ್ತಿ ಅಧ್ಯಯನ ಮಾಡಿರುತ್ತಾರೆ ಎಂದರೆ ತಪ್ಪಿಲ್ಲ. ಆಧುನಿಕ ವೈದ್ಯಕೀಯ ಪದ್ಧತಿಯ (ಇಂಗ್ಲಿಷ್ ) ಔಷಧಿಗಳೆಲ್ಲಾ ಅಡ್ಡಪರಿಣಾಮಕಾರಿ ಎನ್ನುವುದಕ್ಕಿಂತ ಇವುಗಳ ಅಡ್ಡ ಪರಿಣಾಮಗಳ ಬಗ್ಗೆ ಸಾಧ್ಯವಾದಷ್ಟು ಮಟ್ಟಿಗೆ ಸಾರ್ವಜನಿಕವಾಗಿ ತಿಳಿದಿದೆ ಎಂಬುದು ಮುಖ್ಯ.ಇದಕ್ಕೆ ಪ್ಯಾರಸೆಟಮಾಲ್ ಸಹ ಹೊರತಲ್ಲ. ಹಾಗೆಂದ ಮಾತ್ರಕ್ಕೆ ಗಿಡಮೂಲಿಕೆ ಮೂಲದ ಔಷಧಗಳು ಸುರಕ್ಷಿತ ಎನ್ನುವುದು ಶುದ್ಧ ತಪ್ಪು ನಂಬಿಕ್. ಅವುಗಳ ಅಡ್ಡ ಪರಿಣಾಮಗಳ ಬಗ್ಗೆ ಅಧ್ಯಯನವಾಗಿಲ್ಲ ಅಷ್ಟೆ.
- ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
