ಜಗದ್ಗುರು ಶ್ರೀ ರೇಣುಕಾಚಾರ್ಯರು ಜಯಂತಿ

ಶ್ರೀ ರೇಣುಕಾಚಾರ್ಯರು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಸ್ಥಾಪಕ ಜಗದ್ಗುರುಗಳಾಗಿದ್ದಾರೆ. ಎಲ್ಲರಿಗೂ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಶುಭಾಶಯಗಳು…

ಮಾನವ ಧರ್ಮಕ್ಕೆ ಜಯವಾಗಲೆಂದ ಧರೆಯ ಪ್ರಥಮ ಜಗದ್ಗುರು ಶ್ರೀ ರೇಣುಕಾಚಾರ್ಯರು

ಸರ್ವೇ ಮಾನುಷಾಃ ಸಮಾನಾಃ ಸಂತಿ |
ನ ಜಾತಿರ್ಭೇದೋ ನ ಚ ಕುಲ ಭೇದಃ ||”

ಜಗದ ಮನುಷ್ಯರೆಲ್ಲರೂ ಸಮಾನರು. ಜನನದಿಂದ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಜಾತಿ ಮತ್ತು ಕುಲಗಳ ಆಧಾರದ ಮೇಲೆ ಭೇದಭಾವ ಮಾಡುವುದು ಧರ್ಮವಲ್ಲವೆಂದು
“ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಘೋಷವಾಕ್ಯವನ್ನು ವಿಶ್ವಕ್ಕೆ ನೀಡಿದವರು ಮನುಕುಲಕೆ ಜಯವಾಗಲೆಂದ ಧರೆಯ ಪ್ರಪ್ರಥಮರು ಶಿವರೂಪಿ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು.

ಅಧ್ಯಾತ್ಮಿಕ ಮತ್ತು ಸಾಮಾಜಿಕ ಸಮಾನತೆಯ ಮೂಲಕ ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸುವುದು ಈ ಘೋಷವಾಕ್ಯದ ಮುಖ್ಯ ಉದ್ದೇಶವಾಗಿದೆ. ಸರ್ವ ಸಮಾನತೆಯ ಕನಸು ಕಂಡ ದ್ರಷ್ಟಾರರು ಶ್ರೀ ರೇವಣಸಿದ್ಧರು, ಅವರ ಅವತಾರದ ಮೂಲ ಉದ್ದೇಶ ಮಸುಕಾಗಿದ್ದ ವೀರಶೈವ ಧರ್ಮದ ಪುನರುತ್ಥಾನವಾಗಿದ್ದರು ಅವರು ಕಂಡ ಕನಸು ಮಾನವ ಧರ್ಮದ ಜಯವನ್ನು, ಲೋಕ ಕಲ್ಯಾಣವನ್ನು, ವಿಶ್ವ ಶಾಂತಿಯನ್ನು. ಇಂತಹ ಮಹಾನ್ ಚೇತನ, ಸಂತ, ದಾರ್ಶನಿಕ ಜಗದ್ಗುರು ಧರೆಯಲ್ಲಿ ಆವಿರ್ಭವಿಸಿದ್ದು.

ಧಾರ್ಮಿಕ ಪಂಚಾಂಗದ ಪ್ರಕಾರ, ಫಾಲ್ಗುಣ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯಂದು ಇವರು ಕಲಿಯುಗದ ಆರಂಭದಲ್ಲಿ ಆಂಧ್ರಪ್ರದೇಶದ (ಪ್ರಸ್ತುತ ತೆಲಂಗಾಣ) ಕೊಲ್ಲಿಪಾಕಿಯ ಸೋಮೇಶ್ವರ ಲಿಂಗದಿಂದ ಸ್ವಯಂ ಉದ್ಭವಿಸಿದರು. ಶಿವನ ಐದು ಮುಖಗಳಲ್ಲಿ ಒಂದಾದ ‘ಸದ್ಯೋಜಾತ’ ಮುಖದ ಅಂಶವೆಂದು ಪುರಾಣಗಳು ತಿಳಿಸುತ್ತವೆ.

(ಶ್ರೀ ರೇಣುಕಾಚಾರ್ಯರು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಸ್ಥಾಪಕ ಜಗದ್ಗುರುಗಳಾಗಿದ್ದಾರೆ.)

ಸ್ವಯಂ ಉದ್ಭವವೆಂದ್ರೆ : ಶ್ರೀ ರೇಣುಕಾಚಾರ್ಯರಂತಹ ಮಹಿಮಾ ಮಹಾಪುರುಷರು ಸಾಮಾನ್ಯ ಮಾನವರಂತೆ ತಾಯಿಯ ಗರ್ಭದಿಂದ ಜನಿಸದೆ, ದೈವಿಕ ಲಿಂಗದಿಂದ ಅಥವಾ ನೇರವಾಗಿ ದೈವಿಕ ಶಕ್ತಿಯಿಂದ ಅವತರಿಸುತ್ತಾರೆ. ಇವರನ್ನು “ಅಯೋನಿಜರು” (ಗರ್ಭವಾಸವಿಲ್ಲದೆ ಜನಿಸಿದವರು) ಎಂದೂ ಕರೆಯುತ್ತಾರೆ.

 

ಫೋಟೋ ಕೃಪೆ : ಗೂಗಲ್

ತಾತ್ವಿಕ ಅರ್ಥ: ‘ಸ್ವಯಂ’ ಎಂದರೆ ತಾನು, ‘ಉದ್ಭವ’ ಎಂದರೆ ಹುಟ್ಟು. ಅಂದರೆ ತನ್ನ ಮೂಲವನ್ನು ತಾನೇ ಹೊಂದಿರುವವರು ಅಥವಾ ಪರಮಾತ್ಮನ ನೇರ ಸ್ವರೂಪವಾಗಿ ಭೂಮಿಗೆ ಬಂದವರು. ಕೆಲವು ಬುದ್ಧಿ ಜೀವಿಗಳು ತಾಯಿ ಗರ್ಭವಿಲ್ಲದೆ ಮನುಷ್ಯ ಹೇಗೆ ಹುಟ್ಟಲು ಸಾಧ್ಯವೆಂದು ( ರೇಣುಕಾಚಾರ್ಯರು ಕೇವಲ ಕಾಲ್ಪನಿಕ ಜಗದ್ಗುರು ಅನ್ನುವವರು ಇದ್ದಾರೆ ) ವಾದಿಸುವವರಿದ್ದಾರೆ, ಅವರ ವಾದವು ಒಂದರ್ಥದಲ್ಲಿ ಸರಿಯಿದೆ, ಮಾತೃಗರ್ಭವಿಲ್ಲದೆ( ಮೊಟ್ಟೆ ಇಡುವ ಜೀವಿ ಬಿಟ್ಟು ) ಯಾವ ಜೀವಿಯು ಜನಿಸಲು ಸಾಧ್ಯವಿಲ್ಲ. ಆದರೆ ಅದು ಸಾಮಾನ್ಯ ಮನುಷ್ಯರಿಗೆ ಮಾತ್ರ, ದೈವ ಶಕ್ತಿಗೆ, ಅಥವಾ ದೈವೀ ಪುರುಷರಿಗೆ ಅನ್ವಯವಾಗುದಿಲ್ಲ, ಹರಿಹರಬ್ರಹ್ಮಾದಿಗಳು ಕೂಡಾ ಮಾತೃಗರ್ಭದಿಂದ ಜನಿಸಿದವರಲ್ಲ. ಧರೆಯೆ ಮೇಲೆ ಜನಿಸಿದ, ಮರ್ಯಾದಾ ಪುರೋಷೋತ್ತಮ ಶ್ರೀರಾಮಚಂದ್ರ ಪ್ರಭುವಿನ ಮಡದಿ, ಸೀತಾ ಮಾತೆಯು, ಮತ್ತು ಮಹಾಭಾರತದ ಧೃಷ್ಟದ್ಯುಮ್ನ ಮತ್ತು ದ್ರೌಪದಿಯು ತಾಯಿ ಒಡಲಿಂದ ಹುಟ್ಟಿದವರಲ್ಲ.ಅದಕ್ಕೆ ದೈವೀ ಶಕ್ತಿಯ ಮೂಲ ಹೂಡುಕುವದಕಿಂತ ಅವರು ನೆಟ್ಟು ಹೋದ ಜ್ಞಾನವೃಕ್ಷವನು ಬೆಳೆಸುತ್ತಾ ಹೋದರೆ ನಮ್ಮ ಕರ್ಮ ಶರೀರ ಪಾವನವಾಗುವದು.

ಶಿವಾದ್ವೈತಸಿದ್ಧಾಂತ : ಶ್ರೀ ಸಿದಾಂತ ಶಿಖಾಮಣಿ ಯಲ್ಲಿ ಪ್ರತಿಪಾದಿತವಾದ ಏಕೋತ್ತರಶತಸ್ಥಲಾತ್ಮಕವಾದ ಈ ಸಿದ್ದಾಂತವು ಮೊಟ್ಟಮೊದಲು ಶಿವನು ಪಾರ್ವತಿಗೆ ಮತ್ತು ತನ್ನ ಶಿವಗಣರಿಗೆ ಉಪದೇಶಿಸಿದ್ದನು. ಶಿವನಿಂದ ಉಪದೇಶ ಪಡೆದ ಶಿವ ಪ್ರಮುಖರಾದ ರೇಣುಕ, ದಾರುಕ, ಘಂಟಾಕರ್ಣ, ಧೇನುಕರ್ಣ, ಮತ್ತು ವಿಶ್ವಕರ್ಣ ರೆಂಬ ಗಣೇಶ್ವರರು ಭೂಲೋಕದಲ್ಲಿ ಕ್ರಮಾವಾಗಿ ಅಗಸ್ತ್ಯ, ದಧೀಚಿ, ವ್ಯಾಸ, ಸಾನಂದ, ಮತ್ತು ದೂರ್ವಾಸ ರೆಂಬ ಮಹರ್ಷಿಗಳಿಗೆ ಶಿವಾದ್ವೈತ ಸಿದ್ದಾಂತವನ್ನು ಉಪದೇಶಿಸಿರುತ್ತಾರೆ. ಈ ಶಿವಗಣರಲ್ಲೊಬ್ಬರಾದ ಶ್ರೀ ರೇಣುಕಗಣೇಶ್ವರನು ಅಗಸ್ತ್ಯ ಮಹರ್ಷಿಗೆ ಉಪದೇಶಿಸಿದ ಶಿವಾದ್ವೈತ ಸಿದ್ದಂತವನ್ನೇ ಶ್ರೀ ಶಿವಯೋಗಿ ಶಿವಾಚಾರ್ಯರು ಸಿದ್ದಾಂತ ಶಿಖಾಮಣಿಯಲ್ಲಿ ರೇಣುಕಾಗಸ್ತ್ಯರ ಸಂವಾದ ರೂಪದಲ್ಲಿ ವಿವರಿಸಿದ್ದಾರೆ. ಶ್ರೀ ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಭೋದಿಸಿದ ಸಾರವನ್ನು ಈ ಸಿದ್ದಾಂತ ಶಿಖಾಮಣಿಯು ಒಳಗೊಂಡಿದೆ. ಇದು “ರೇಣುಕಾಗಸ್ತ್ಯ ಸಂವಾದ” ರೂಪವಾಗಿದೆ.

ಶ್ರೀ ರೇಣುಕಾಚಾರ್ಯರ ಕಾಲಮಾನ :  ಜಗದ್ಗುರು ರೇಣುಕರ ನಿರ್ದಿಷ್ಟ ಕಾಲಮಾನ ಮಾಹಿತಿ ಲಭ್ಯವಾಗಿಲ್ಲವಾದರೂ, ಧಾರ್ಮಿಕ ನಂಬಿಕೆ, ವೀರಶೈವ ಸಂಪ್ರದಾಯ ಮತ್ತು ಸಿದ್ದಾಂತ ಶಿಖಾಮಣಿ ಗ್ರಂಥದ ಪ್ರಕಾರ, ರೇಣುಕಾಚಾರ್ಯರು ಯುಗಪುರುಷರು.ಇವರು ತ್ರೇತಾಯುಗದಲ್ಲಿ ಅಗಸ್ತ್ಯ ಮಹರ್ಷಿಗಳಿಗೆ ಶಿವತತ್ವ ಬೋಧನೆ ಮಾಡಿದ್ದರು ಮತ್ತು ವಿಭೀಷಣನ ಕೋರಿಕೆಯಂತೆ ಲಂಕೆಯಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸಿದರು ಎಂಬ ನಂಬಿಕೆಯಿದೆ.

ಆದರೆ ಐತಿಹಾಸಿಕ ಮತ್ತು ಸಂಶೋಧನಾ ದೃಷ್ಟಿಕೋನದ ಇತಿಹಾಸಕಾರರು ಮತ್ತು ಸಾಹಿತ್ಯ ವಿಮರ್ಶಕರು ಇವರ ಕಾಲವನ್ನು ಬೇರೆ ಬೇರೆ ರೀತಿಯಲ್ಲಿ ಗುರುತಿಸುತ್ತಾರೆ. ಹೆಚ್ಚಿನ ಸಂಶೋಧಕರು ರೇಣುಕಾಚಾರ್ಯರು (ರೇವಣಸಿದ್ಧರು) ಕ್ರಿ.ಶ. ೧೧ ಅಥವಾ ೧೨ನೇ ಶತಮಾನದಲ್ಲಿ ಜೀವಿಸಿದ್ದರು ಅಂದರೆ ಇನ್ನುಕೆಲವರು 6/7 ಎಂದು ಅಭಿಪ್ರಾಯಪಡುತ್ತಾರೆ. ಇವರು ಬಸವಣ್ಣನವರಿಗಿಂತ ಹಿರಿಯ ಸಮಕಾಲೀನರೆಂದು ಪರಿಗಣಿಸಲಾಗಿದೆ.ಇಲ್ಲಿ ಇನ್ನೊಂದು ಗಮನಿಸಿಬೇಕಾದ ಅಂಶವೆಂದರೆ ಅದ್ವೈತ ಮತದ ಸ್ಥಾಪಕರಾದ ಶ್ರೀ ಆದಿ ಶಂಕರಾಚಾರ್ಯರಿಗೆ, ವೀರಶೈವ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಆದಿ ರೇಣುಕಾಚಾರ್ಯರು ಚಂದ್ರಮೌಳೀಶ್ವರ ಲಿಂಗವನ್ನು ಪ್ರದಾನ ಮಾಡಿದ ಕಾಲಮಾನದ ಕುರಿತು, ಶೃಂಗೇರಿ ಶಾರದಾ ಪೀಠವು ಪ್ರಕಟಿಸಿರುವ “ಗುರುವಂಶಕಾವ್ಯ” ದಲ್ಲಿ ಉಲ್ಲೇಖಿಸಿರುವಂತೆ, ಈ ಪವಿತ್ರ ಘಟನೆಯು ಕ್ರಿ.ಪೂ. 8ನೇ ಶತಮಾನದಲ್ಲಿ ನಡೆದಿದೆ ಎಂದು ವಿವರಿಸಲಾಗಿದೆ.

ಜಗದ್ಗುರು ಆದಿ ರೇಣುಕಾಚಾರ್ಯರು ಆದಿ ಶಂಕರಾಚಾರ್ಯರಿಗೆ ಈ ಸ್ಪಟಿಕ ಲಿಂಗವನ್ನು ಅನುಗ್ರಹಿಸಿದರು. ಇದು ಅದ್ವೈತ ಮತ್ತು ವೀರಶೈವ ಪರಂಪರೆಗಳ ನಡುವಿನ ಸಮನ್ವಯತೆಯನ್ನು ಸೂಚಿಸುತ್ತದೆ. ಈ ಚಂದ್ರಮೌಳೀಶ್ವರ ಲಿಂಗವು ಪ್ರಸ್ತುತ ಶೃಂಗೇರಿ ಶಾರದಾ ಪೀಠದ ಪ್ರಧಾನ ಆರಾಧ್ಯ ದೈವವಾಗಿದ್ದು, ಇಂದಿಗೂ ಅಲ್ಲಿನ ಜಗದ್ಗುರುಗಳಿಂದ ತ್ರಿಕಾಲ ಪೂಜೆಗಳನ್ನು ಸ್ವೀಕರಿಸುತ್ತಿದೆ.

ಶಾಸನೋಕ್ತ ಪುರಾವೆ: ಗುಲ್ಬರ್ಗ ಜಿಲ್ಲೆಯ ಸಿರವಾಳದ ಶಾಸನಗಳಲ್ಲಿ ರೇವಣಸಿದ್ಧರ ಬಗ್ಗೆ ಉಲ್ಲೇಖವಿದ್ದು, ಅದರ ಆಧಾರದ ಮೇಲೆ ಇವರ ಕಾಲವನ್ನು ಕ್ರಿ.ಶ. ೧೧ನೇ ಶತಮಾನ ಎಂದು ಅಂದಾಜಿಸಲಾಗಿದೆ. ಸಿದ್ದಾಂತ ಶಿಖಾಮಣಿ ಕೃತಿಯನ್ನು ರಚಿಸಿದ ಶಿವಯೋಗಿ ಶಿವಾಚಾರ್ಯರ ಕಾಲಮಾನವೂ ಕೂಡ ಸುಮಾರು ೧೦-೧೧ನೇ ಶತಮಾನವೆಂದು ಹೇಳಲಾಗುತ್ತದೆ.

ಜಗದ್ಗುರು ಶ್ರೀ ರೇಣುಕಾಚಾರ್ಯರು ಲೋಕ ಕಲ್ಯಾಣಕ್ಕಾಗಿ, ಫಾಲ್ಗುಣ ಮಾಸ ಶುಕ್ಲ ಪಕ್ಷ ತ್ರಯೋದಶಿಯಂದು ಕೊಲ್ಲಿಪಾಕಿಯ ಸೋಮೇಶ್ವರ ಲಿಂಗದಿಂದ ಉದ್ಬವಿಸಿಬಂದು. ಲೋಕ ಸಂಚಾರವ ಮಾಡಿ, ಪವಿತ್ರ ವೀರಶೈವ ಧರ್ಮ ಸಂಸ್ಥಾಪನೆಯ ಮಾಡಿ, ಅಗಸ್ತ್ಯ ಮುನಿಗಳಿಗೆ ಸಿದ್ಧಾಂತ ಶಿಖಾಮಣಿಯ ಬೋಧನೆಯ ಗೈದು , ಮಲಯಾಚಲ ( ಮಲೆನಾಡು )ದ ಪುಣ್ಯಭೂಮಿ ಬಾಳೆಹೊನ್ನೂರಿನಲ್ಲಿ ರಂಭಾಪುರಿ ಪೀಠವ ಸ್ಥಾಪಿಸಿದ ನಂತರ, ತಾವು ಅವತರಿಸಿದ ಕಾರ್ಯ ಸಂಪನ್ನವಾಯಿತೆಂದು, ಯಾವ ಸೋಮೇಶ್ವರ ಲಿಂಗದಿಂದ ಆವಿರ್ಭವಿಸಿ ಬಂದಿದ್ದರೋ ಅದೇ ಲಿಂಗದಲ್ಲಿ ಅದೇ ಫಾಲ್ಗುಣ ಮಾಸದ (ಆದ್ರೆ ಪಕ್ಷ ಬೇರೆ ) ಕೃಷ್ಣ ಪಕ್ಷದ ಶುಭದಿನದಿ ಐಕ್ಯರಾದರು ಎಂದು ಹೇಳಲಾಗುತ್ತದೆ.

ಜಗದಾದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಮೂಲ, ಜನನ,ಅಸ್ಥಿತ್ವದ ಕುರಿತು ಅನಾವಶ್ಯಕವಾಗಿ ಚರ್ಚಿಸುವ ಬದಲು, ಅವರು ಉತ್ತಿ – ಬಿತ್ತಿ ಬೆಳಸಿದ ಆಚಾರ – ವಿಚಾರ ಗಳನ್ನ, ತತ್ವಾದರ್ಶಗಳನ್ನ ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕಾಗಿದೆ, ಮನುಕುಲವಿಂದು ಜಾತಿ – ಮತವೆಂಬ ಕುಲುಮೆಯ ಬೇಯುತ್ತಿದೆ, ಸಿರಿತನ – ಬಡತನದ ಬವಣೆಯಲ್ಲಿ ಬಳಲುತ್ತಿದೆ, ಸ್ವಹಿತಾಸಕ್ತಿ, ಅಧಿಕಾರದ ಲಾಲಸೆಗಾಗಿ ಮುಗ್ದಜನತೆಯ ಮಾರಣ ಹೋಮ ನಡೆಯುತ್ತಿದೆ, ಧರೆಯ ಬಲಿಷ್ಠರಿಂದ ಬಲಹೀನರ ಮೇಲೆ ಕದನ ತಾಂಡವವಾಡುತ್ತಿದೆ. ಮೂರನೇ ಮಹಾ ಯುದ್ಧದ ಕಾರ್ಮೋಡ ಕವಿದಿದೆ. ದಾನವ ಮನಸ್ಸಿನ ನರರೂಪಿ ಅಸುರರ ವಿರುದ್ಧ ಸುಜನತೆಯಲ್ಲ ಒಂದಾಗಲೇ ಬೇಕಾದ ಸಂದಿಗ್ದ ಪರಸ್ಥಿತಿಯಿದೆ, ಇನ್ನಾದರೂ ನಾವುಗಳು ಅಹಂ, ಈರ್ಷೆ, ಕುಲ,ಮತಗಳನೆಲ್ಲ ದಹಿಸಿ ನಮ್ಮದು ಮಾನವ ಧರ್ಮವೆನ್ನೋಣ,ಜಗದ್ಗುರು ಶ್ರೀ ರೇಣುಕಾಚಾರ್ಯರ “ಮಾನವ ಧರ್ಮಕ್ಕೆ ಜಯವಾಗಲಿ” ಎನ್ನುವ ಆಶಯ ಸಾಕಾರಗೊಳಿಸೋಣ ವಂದೇ ರೇಣುಕಂ.


  • ಡಾ ಮಲ್ಲಿಕಾರ್ಜುನ ಎಸ್ ಆಲಮೇಲ – ಯಡ್ರಾಮಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading