ಬಿಳಿ ಬಣ್ಣದ, ಹೆಚ್ಚು ಕಡಿಮೆ ಅವನಷ್ಟೇ ದಪ್ಪಗಿರುವ ಮೊಳದುದ್ದದ ಬುಷಿ ಬಾಲದ ಚಂದುಳ್ಳಿ ಚೆಲುವನಂತಿದ್ದ ಬಲು ಮುದ್ದಾಗಿದ್ದ ನಮ್ಮ ಚಿಪ್ಪುಟ್ಟು ನಮ್ಮನೆಯ ಮುದ್ದಿನ ಮಗುವಾಗಿದ್ದ. ಚಿಪ್ಪುಟ್ಟು ಅವತ್ತು ಒಬ್ಬನೇ ಮನೆಯಲ್ಲಿದ್ದ ,ನಾವು ಹೊರಗೆ ಹೋಗುವ ಗಡಿಬಿಡಿಯಲ್ಲಿ ಐರನ್ ಬಾಕ್ಸ್ ಸ್ವಿಚ್ ಆಫ್ ಮಾಡುವುದನ್ನು ಮರೆತು ಬಿಟ್ಟೆವು. ಅದು ರೂಮ್ ಪೂರ್ತಿ ಬೆಂಕಿ ಹತ್ತಿಕೊಂಡಿತು. ಮುಂದೇನಾಯಿತು ಅಂಕಣಕಾರ್ತಿ ಕೆ.ಸಿ.ರತ್ನಶ್ರೀ ಶ್ರೀಧರ್ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣವನ್ನು ತಪ್ಪದೆ ಮುಂದೆ ಓದಿ …
ಹಿಂದಿನ ಸಂಚಿಕೆಯಲ್ಲಿ ನಮ್ಮನೆಯ ಬೆಕ್ಕು ದೊಡ್ಪುಟ್ಟು ನಾಯಿಗಳ ದಾಳಿಗೆ ಒಳಗಾಗಿಯೂ ಬದುಕಿ ಬಂದಿದ್ದ ನೆನಪುಗಳನ್ನು ಬರೆದಿದ್ದೆ. ಈ ಎಲ್ಲಾ ಘಟನೆಗಳು ಸುಮಾರು ಏಳೆಂಟು ವರ್ಷಗಳ ಹಿಂದೆ (ನಮ್ಮ ಬೆಂಗಳೂರಿನ ಮನೆಯಲ್ಲಿ) ನಡೆದಿದ್ದರೂ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಮನದಲ್ಲಿ ಅಚ್ಚೊತ್ತಿ ನಿಂತಿವೆ. ನಾವು ಎಲ್ಲಿಯೇ ಇದ್ದರೂ, ನಿರಂತರವಾಗಿ ನಾಯಿ ಬೆಕ್ಕುಗಳನ್ನು ಸಾಕುವ ನಮ್ಮ ಹವ್ಯಾಸ ಹವ್ಯಾಹತವಾಗಿ ಮುಂದುವರೆದಿದೆ. ಇಂದಿನ ಲೇಖನದಲ್ಲಿ ನಮ್ಮನೆಯ ಮುದ್ದು ಬಂಗಾರ ಚಿಕ್ಪುಟ್ಟುವಿನ ನೆನಪುಗಳನ್ನು ಮಾತ್ರ ಹಂಚಿಕೊಳ್ಳುವೆ.
ಯಾರ ಮನೆಗೋ ಬಂದವನು ನಮ್ಮನೆಗೆ ಬಂದು ಸೇರಿದ ಚಿಕ್ಪುಟ್ಟುವಿನ ಹಿನ್ನೆಲೆಯನ್ನು ಈ ಮೊದಲೇ ಬರೆದಿದ್ದೆ. ಬಿಳಿ ಬಣ್ಣದ, ಹೆಚ್ಚು ಕಡಿಮೆ ಅವನಷ್ಟೇ ದಪ್ಪಗಿರುವ ಮೊಳದುದ್ದದ ಬುಷಿ ಬಾಲದ ಚಂದುಳ್ಳಿ ಚೆಲುವನಂತಿದ್ದ ಬಲು ಮುದ್ದಾಗಿದ್ದ ನಮ್ಮ ಚಿಪ್ಪುಟ್ಟು ನಮ್ಮನೆಯ ಮುದ್ದಿನ ಮಗುವಾಗಿದ್ದ. ಅವನನ್ನು ಹೊರಗೆಲ್ಲೂ ಬಿಡುತ್ತಿರಲಿಲ್ಲ. ಅವನ ಆಟ-ಪಾಠ ಎಲ್ಲವೂ ಮನೆಯಲ್ಲಿಯೇ ನಡೆಯುತ್ತಿತ್ತು. ಬೆಳಿಗ್ಗೆ ಎದ್ದು ಮನೆಯಲ್ಲಿಯೇ ಭರದಿಂದ ಓಡುತ್ತಾ ಸುಮಾರು ಅರ್ಧ ಗಂಟೆ ರನ್ನಿಂಗ್ ಮಾಡುವುದು, ಜೋರಾಗಿ ಮೆಟ್ಟಿಲು ಹತ್ತಿ ಇಳಿಯುವುದು, ಜೋರಾಗಿ ಓಡಿಬಂದು ದಿವಾನ್ ಮೇಲೆ ಎಗರಿ ಇಳಿಯುವುದು ಮಾಡುತ್ತಿದ್ದ.
ನಮ್ಮ ಟೆರೇಸ್ ಮೇಲೆ ನೀರಿನ ಟ್ಯಾಂಕ್ ಬಳಿಗೆ ಹೋಗಲು ಕಬ್ಬಿಣದ ಏಣಿ ಹಾಕಿಸಿದ್ದೇವೆ. ಅದನ್ನು ಹತ್ತಲು ಚಿಕ್ಪುಟ್ಟುವಿಗೆ ಬರುತ್ತಿರಲಿಲ್ಲ. ಒಂದೆರಡು ದಿನ ನಮ್ಮ ಮಗ ಏಣಿ ಹತ್ತುವುದನ್ನು ಅವನಿಗೆ ಕಲಿಸಿಕೊಟ್ಟದ್ದ. ಆ ನಂತರ ದಿನವೂ ಅವನಿಗೆ ಇದು ಅಭ್ಯಾಸವಾಯಿತು. ಐದಾರು ಸಲ ಬುಡು ಬುಡು ಏಣಿ ಹತ್ತುವುದು ಇಳಿಯುವುದು ಮಾಡುತ್ತಿದ್ದ. ಹೀಗೆ ಚಿಕ್ಪುಟ್ಟುವಿಗೆ ಮನೆಯಲ್ಲಿಯೇ ಸಾಕಷ್ಟು ವ್ಯಾಯಾಮವಾಗುತ್ತಿತ್ತು.

ಫೋಟೋ ಕೃಪೆ : ಅಂತರ್ಜಾಲ
ಚಿಕ್ಪುಟ್ಟು ಇಷ್ಟಪಡದ ಮತ್ತು ಅತಿಯಾಗಿ ಭಯಪಡುವ ಒಂದು ವಿಷಯ ಅಂದ್ರೆ, ಅದು ಕಾರಿನ ಪ್ರಯಾಣ. ಅವನಿಗೆ ಕಾರಿನಲ್ಲಿ ಪಯಣಿಸುವುದು ಭಯಾನಕ ಅನುಭವ ನೀಡುತ್ತಿತ್ತು. ಅವನು ಕಾರು ಹತ್ತಲು ಇಷ್ಟಪಡುತ್ತಲೇ ಇರಲಿಲ್ಲ. ಅವನನ್ನು ಆಸ್ಪತ್ರೆಗೆ ಕರೆದೊಯುವಾಗಲೂ ಕೇವಲ 15-20 ನಿಮಿಷಗಳಲ್ಲಿ ಜೀವಭಯದಿಂದ ಅಳುತ್ತಾ ಕೂಗಿ ಕೂಗಿ ಅವನ ಧ್ವನಿ ಉಡುಗಿ ಹೋಗುತ್ತಿತ್ತು. ಕಾರಿನೊಳಗೆ ಅವನ ಉದ್ದ ಮತ್ತು ದಟ್ಟಣೆಯ ಬಿಳಿ ಮೈ ಕೂದಲನ್ನು ಸಿಕ್ಕಾಪಟ್ಟೆ ಉದುರಿಸುತ್ತಿದ್ದ.
ಅವನ ಅವಸ್ಥೆ ಕಂಡು ನಮಗೂ ಹಿಂಸೆಯಾಗುತ್ತಿತ್ತು. ಮಡಿಲಲ್ಲಿ ಮುಚ್ಚಿಟ್ಟುಕೊಂಡರೂ ಬಿಡಿಸಿಕೊಂಡು ಎದ್ದುಬಿಡುತ್ತಿದ್ದ. ರಸ್ತೆಯಲ್ಲಿನ ಟ್ರಾಫಿಕ್ ನೋಡಿ ಇನ್ನಷ್ಟು ಗಾಬರಿಕೊಂಡು ಕೂಗುತ್ತಿದ್ದ. ಪಾಪ, ಅವನಿಗೆ ಕಾರು ಪ್ರಯಾಣ ಅದೆಷ್ಟು ಘಾಸಿಗೊಳಿಸುತ್ತಿತ್ತೋ ನಾನರಿಯೆ. ಇಷ್ಟೆಲ್ಲಾ ಸಂಕಟ ಪಟ್ಟವನು ವಾಪಸ್ ಮನೆಗೆ ಬಂದ ನಂತರ ಎಲ್ಲ ಮರೆತು ಸಮಾಧಾನಿಯಾಗುತ್ತಿದ್ದ. ಹೀಗಾಗಿ, ಅವನನ್ನು ಮನೆ ಬಿಟ್ಟು ಹೊರಗಡೆ ಎಲ್ಲಿಯೂ ಕರೆದುಕೊಂಡು ಹೋಗಲು ನಮಗೆ ಸಾಧ್ಯವಾಗುತ್ತಿರಲಿಲ್ಲ.
ಚಳಿಗಾಲದಲ್ಲಿ ತುಂಬಾ ಚಳಿ ಇದ್ದಾಗ ನಾನು ಚಿಕ್ಪುಟ್ಟನಿಗೆ ಪುಟ್ಟ ಮಕ್ಕಳ ಜೀರೋ ಸೈಜ್ ಟೀ ಶರ್ಟ್ ತೊಡಿಸುತ್ತಿದ್ದೆ. ಅವನಿಗೆ ಅದು ಇಷ್ಟ ಇಲ್ಲದಿದ್ದರೂ ಸುಮ್ಮನೆ ಹಾಕಿಸಿಕೊಳ್ಳುತ್ತಿದ್ದ. ಆದರೆ, ಸಾಯಂಕಾಲ ನನ್ನ ಪತಿ ಮನೆಗೆ ಬಂದೊಡನೆ ಅವರೆದುರಿಗೆ ಟೀ ಶರ್ಟ್ ಎಳೆದಾಡುತ್ತಾ ಅದನ್ನು ಬಿಚ್ಚುವಂತೆ ಅವರ ಮುಂದೆ ತನ್ನ ಅಳಲು ತೋಡಿಕೊಳ್ಳುತ್ತಿದ್ದ. ತಕ್ಷಣವೇ ನನ್ನವರು, “ಅಯ್ಯೋ ಪಾಪ, ಅವನಿಗೆ ಬಟ್ಟೆ ಇಷ್ಟ ಇಲ್ಲದಿದ್ದರೂ ಯಾಕೆ ಬಟ್ಟೆ ಹಾಕಿದ್ದೀಯ” ಎನ್ನುತ್ತಾ ಟಿ-ಶರ್ಟ್ ಬಿಚ್ಚುತಿದ್ರು. ತಕ್ಷಣ ಅವನು ಕುಣಿದಾಡುತ್ತ ತನ್ನ ಖುಷಿಯನ್ನು ವ್ಯಕ್ತಪಡಿಸುತ್ತಿದ್ದ.
ಹೀಗೆ ಒಂದು ದಿನ ಟೀ ಶರ್ಟ್ ಹಾಕಿಕೊಂಡು ಮನೆಯಲ್ಲಿ ಮಲಗಿದ್ದವನು ಅದ್ಯಾವುದೋ ಮಾಯದಲ್ಲಿ ಮನೆಯಾಚೆ ಹೋಗಿದ್ದಾನೆ. ಮನೆಯ ಮುಂದಿನ ಗ್ರಿಲ್ ಕೆಳಗಿನ ಮೋರಿಯಲ್ಲಿ ಇಳಿದು ಆಟವಾಡುತ್ತಾ ಕುಳಿತಿದ್ದಾನೆ. ನಮ್ಮ ಮನೆಯ ಮುಂದಿನ ಪಾರ್ಕಿನಲ್ಲಿ ಆಟವಾಡಲು ಬಂದಿದ್ದ ಪುಟ್ಟ ಮಕ್ಕಳ ದಂಡು ಟೀ ಶರ್ಟ್ ಹಾಕಿಕೊಂಡು ಆಟವಾಡುತ್ತಿರುವ ಚಿಕ್ಪುಟ್ಟುವನ್ನು ಕಂಡು ಚಪ್ಪಾಳೆ ತಟ್ಟಿ ಕುಣಿದಾಡುತ್ತಿದೆ. ಅದರಲ್ಲಿ ಒಂದು ಮಗು ನಮ್ಮ ಮನೆಯ ಕಾಲಿಂಗ್ ಬೆಲ್ ಒತ್ತಿ, ಒಳಗಿದ್ದ ನನ್ನನ್ನು ಕರೆಯಿತು. ನಾನು ಹೊರಗೆ ಬಂದು ನೋಡಿದ್ರೆ ಚಿಕ್ಪುಟ್ಟು ಮೋರಿಯಲ್ಲಿ ಕೂತಿದ್ದ. ಅವನನ್ನು ಕರೆದು ಎತ್ತಿಕೊಂಡು ಒಳಗೆ ಬಂದೆ.
ನಮ್ಮ ಚಿಕ್ಪುಟ್ಟುವಿನ ಇನ್ನೊಂದು ವಿಶೇಷ ಗುಣ ಎಂದರೆ, ಮನೆಗೆ ಬಂದ ಅತಿಥಿಗಳಿಗೆ ಅತಿಥ್ಯ ನೀಡಬೇಕೆಂದು ನಮಗೆ ಆಗ್ರಹ ನೀಡುವುದು. ಸಾಮಾನ್ಯವಾಗಿ ನಮ್ಮ ಮನೆಗೆ ಬಂದ ಯಾರಿಗೇ ಆದರೂ ಕನಿಷ್ಠ ಪಕ್ಷ ಕಾಫಿ ಅಥವಾ ಟೀಯನ್ನಾದರೂ ಕೊಡುವುದು ನಮ್ಮ ರೂಢಿ. ಪೇಯದ ಜೊತೆಯಲ್ಲಿ ಒಂದಷ್ಟು ಕುರುಕಲು ಕೊಡುವುದು ಒಂದಷ್ಟು ಬೋನಸ್.
ನಮ್ಮ ಪುಟ್ಟುವಿನ ಎದುರಿನಲ್ಲಿ, ಬಂದವರಿಗೆ ಕೇವಲ ಪೇಯವನ್ನು ನೀಡಿದರೆ, ಅವನು ಗಲಾಟೆ ಮಾಡಿ ಅವರಿಗೆ ಕುರುಕಲು ನೀಡುವವರೆಗೂ ನಮ್ಮನ್ನು ಬಿಡುತ್ತಿರಲಿಲ್ಲ. ಎಷ್ಟು ಒಳ್ಳೆಯ ಗುಣ ಅವನದು ಎಂದುಕೊಂಡಿದ್ದೀರಾ? ಇದರ ಹಿಂದೆ ಅವನ ಸ್ವಾರ್ಥವೂ ಅಡಗಿದೆ. ಹೇಗೆಂದಿರಾ? ಅತಿಥಿಗಳಿಗೆ ಕೊಡಲು ಕುರುಗಲು ಡಬ್ಬಿ ತೆರೆದಾಗ ತಪ್ಪದೇ ಅವನಿಗೂ ಅದರಲ್ಲಿ ಪಾಲು ಕೊಡಬೇಕಿತ್ತು. ಅವನ ಆತಿಥ್ಯದ ಹಿಂದಿನ ನಿಜವಾದ ಮರ್ಮ ಇದು.

ಫೋಟೋ ಕೃಪೆ : ಅಂತರ್ಜಾಲ
ನನ್ನ ಪತಿ ಕೂಡ ಸ್ವಲ್ಪ ತಿಂಡಿ ಪೋತರು. ಇವರ ತಿಂಡಿಪೋತ ಕಳ್ಳತನವನ್ನು ಕಂಡುಹಿಡಿವುದರಲ್ಲಿ ಚಿಕ್ಪುಟ್ಟನ ಪೊಲೀಸ್ ಬುದ್ಧಿ ಸದಾ ಜಾಗೃತವಾಗಿರುತ್ತಿತ್ತು. ಅವರು ಚಿಕ್ಪುಟ್ಟು ಮಲಗಿ ಗಾಢ ನಿದ್ದೆಯಲ್ಲಿರುವ ಸಮಯದಲ್ಲಿ ನನಗೂ ಗೊತ್ತಾಗದಂತೆ ಮೆಲ್ಲಗೆ ಅಡುಗೆ ಕೋಣೆಗೆ ಹೋಗಿ ಕುರುಕಲು ತಿಂಡಿ ಡಬ್ಬಿ ತೆರೆವ ಮುನ್ನ ಇವರ ಕಾಲ ಬಳಿಯಲ್ಲಿ ಚಿಕ್ಪುಟ್ಟು ತೂಕಡಿಸುತ್ತ ಕುಳಿತಿರುತ್ತಿದ್ದ. ಅವನನ್ನು ನೋಡಿ ಆಗ ಚಕಿತರಾಗುವ ಸರದಿ ನನ್ನವರದು.
ಪಕ್ಷಿ ವೀಕ್ಷಣೆ ಚಿಕ್ಪುಟ್ಟುವಿನ ಅತ್ಯಂತ ಖುಷಿಯ ಹವ್ಯಾಸವಾಗಿತ್ತು. ಪ್ರತಿದಿನ ಬೆಳಗಿನ ಸಮಯದಲ್ಲಿ ನಡುಮನೆಯ ಕಿಟಕಿಯ ಬಳಿಯ ಸೋಫಾ ಮೇಲ್ತುದಿಯಲ್ಲಿ ಕುಳಿತು ಕಿಟಕಿಯ ಗಾಜಿನ ಮೂಲಕ ಕಾಣುವ ದೃಶ್ಯ ನೋಡುವುದು ಅವನಿಗೆ ಬಲು ಇಷ್ಟ. ಪಕ್ಕದ ಸೈಟಿನಲ್ಲಿ ಚಿಲಿಪಿಲಿಗುಟ್ಟುವ ಪಕ್ಷಿಗಳನ್ನು ತದೇಕಚಿತ್ತನಾಗಿ ವೀಕ್ಷಿಸುತ್ತಿದ್ದಾಗ ನಾವು ಅವನನ್ನು ಎಷ್ಟೇ ಕರೆದರೂ ತಿರುಗಿ ನೋಡುತ್ತಿರಲಿಲ್ಲ. ಸಂಪೂರ್ಣ ಅವನ ಗಮನ ಪಕ್ಷಿಗಳ ಮೇಲಿರುತ್ತಿತ್ತು. ಕೆಲವೊಮ್ಮೆ ತಾನೂ ಹಕ್ಕಿಗಳಂತೆ ಧ್ವನಿ ಹೊರಡಿಸಿ ಅವುಗಳ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದ. ಪಕ್ಷಿ ವೀಕ್ಷಣೆಗೆ ಕೂರುವ ಅವನ ಭಂಗಿ ನೋಡಲು ಬಲು ಸೊಗಸಾಗಿರುತ್ತಿತ್ತು. ದಪ್ಪ ಮತ್ತು ಉದ್ದವಾಗಿದ್ದ ಅವನ ಬಾಲ ನಿಧಾನಕ್ಕೆ ಅತ್ತಿಂದಿತ್ತ ಒಲಾಡುತಿತ್ತು.
ಹಾಗೆಯೇ ಗೋಡೆ ಮೇಲಿನ ಹಲ್ಲಿಗಳನ್ನು ನೋಡಿದಾಗಲೂ ಅವನದು ಧ್ಯಾನಸ್ಥ ಸ್ಥಿತಿ. ಕಣ್ಣು ಮಿಟುಕಿಸದೇ, ಸ್ವಲ್ಪವೂ ಆಲುಗಾಡದೇ ಸ್ಥಿರವಾಗಿ ಕೂರುತ್ತಿದ್ದ. ಹಲ್ಲಿ ಏನಾದರೂ ಗ್ರಹಚಾರ ಕೆಟ್ಟು ಗೋಡೆಯ ಕೆಳಭಾಗಕ್ಕೆ ಬಂತೆಂದರೆ ಮುಗಿಯುತು ಅದರ ಕಥೆ. ಗೋಡೆಗೆ ಎಗರಿ ಹಲ್ಲಿಯನ್ನು ಹಿಡಿದು ಸಾಯಿಸುತ್ತಿದ್ದ. ಮುಂದೆ ಅವನ ಈ ಬುದ್ದಿಯೇ ಒಂದು ದೊಡ್ಡ ಅನಾಹುತಕ್ಕೆ ಕಾರಣವಾಗಿದ್ದು ವಿಪರ್ಯಾಸ.
ನಾವು ಮನೆಯಿಂದ ಹೊರಗೆ ಹೋಗುವಾಗ ಐರನ್ ಬಾಕ್ಸ್ ಸ್ವಿಚ್ ಆಫ್ ಮಾಡುವುದನ್ನು ಮರೆತು ಹೋಗಿದ್ದಾಗ, ನಮ್ಮ ಚಿಕ್ಪುಟ್ಟು ಹಲ್ಲಿ ಹಿಡಿಯಲು ಟೇಬಲ್ ಮೇಲೆ ಎಗರಿ ನೇರ ನಿಂತಿದ್ದ ಐರನ್ ಬಾಕ್ಸ್ ಮಲಗಿಸಿದ್ದಾನೆ. ಅದರ ಬಿಸಿಯಿಂದ ಟೇಬಲ್ ಮೇಲೆ ಹಾಸಿದ್ದ ಬೆಡ್ ಸ್ಪ್ರೆಡ್ ಗೆ ಬೆಂಕಿ ಹೊತ್ತಿಕೊಂಡು ನಂತರ ಬೆಡ್ ರೂಮ್ ಪೂರ್ತಿ ಆವರಿಸಿದ ಬೆಂಕಿ ಪಕ್ಕದ ಅಟ್ಯಾಚ್ ಬಾತ್ ರೂಮ್ಗೂ ವ್ಯಾಪಿಸಿತ್ತು. ಮನೆಯಲ್ಲಿನ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾನ್ಗಳು, ವಾಷಿಂಗ್ ಮಷಿನ್, ರೂಮ್ ಹೀಟರ್, ರೂಮಿನ ಕಿಟಕಿ, ಬಾಗಿಲು, ವಾರ್ಡ್ ರೋಬ್, ಬಟ್ಟೆ ಎಲ್ಲವೂ ಅಗ್ನಿಗೆ ಅಹುತಿಯಾದವು.
ಅದೊಂದು ಭಾನುವಾರ ಬೆಳಿಗ್ಗೆ ನಮ್ಮ ಮನೆಯಿಂದ ಸುಮಾರು ನಾಲ್ಕು ಕಿ.ಮೀ.ದೂರದ ಸ್ನೇಹಿತರ ಮನೆಗೆ ಹೋಗಿದ್ದ ಸಂದರ್ಭ. ಅದೇ ತಾನೇ ಅವರ ಮನೆಯೊಳಗೆ ಕಾಲಿಡುತ್ತಿದ್ದಾಗ ನನಗೆ ಯಾರೋ ಅಪರಿಚಿತರ ಫೋನ್ ಕರೆ ಬಂತು. ಕರೆ ಸ್ವೀಕರಿಸಿದ ಕೂಡಲೇ ಅತ್ತಲಿಂದ ಆತಂಕದ ದ್ವನಿಯೊಂದು “ನೀವು ರತ್ನಶ್ರೀ ಅವರಾ?” ಎಂದಿತು. “ಹೌದು, ನೀವು ಯಾರು?” ಎಂದೆ. ಕೂಡಲೇ ಅವರು “ನೀವು ಎಲ್ಲಿದ್ದೀರಾ? ಬೇಗ ಮನೆಗೆ ಬನ್ನಿ. ನಿಮ್ಮ ಪಕ್ಕದ ಮನೆಯವರು ನಿಮ್ಮ ನಂಬರ್ ಕೊಟ್ಟರು. ನಿಮ್ಮ ಮನೆಗೆ ಬೆಂಕಿ ಬಿದ್ದಿದೆ. ಗಾಬರಿ ಆಗುವುದು ಬೇಡ. ಫೈರ್ ಇಂಜಿನ್ಗೆ ಫೋನ್ ಮಾಡಿದ್ದೇವೆ” ಎಂದದ್ದಷ್ಟೆ ನನಗೆ ಕೇಳಿಸಿದ್ದು. ನಮ್ಮ ಕಾಣ್ತುಂಬಾ ಚಿಕ್ಪುಟ್ಟುವೇ ತುಂಬಿಕೊಂಡ.
ತಕ್ಷಣವೇ ಕಾರಿನಲ್ಲಿ ಹೊರಟೆವು. ನಾವು ಮನೆ ಮುಟ್ಟುವವರೆಗಿನ ಆ ಏಳೆಂಟು ನಿಮಿಷ ನಾವು ಚಟಪಡಿಸಿದ ಆತಂಕದ ಘಳಿಗೆಯನ್ನು ವಿವರಿಸಲು ಪದಗಳಿಲ್ಲ. “ನಮ್ಮ ಚಿಕ್ಪುಟ್ಟಗೆ ಏನೂ ಆಗದಿರಲಿ ದೇವರೇ” ಎಂದು ಅಳುತ್ತಾ ಅದೆಷ್ಟು ದೇವರನ್ನು ಬೇಡಿಕೊಂಡೆನೋ ಗೊತ್ತಿಲ್ಲ. ಮನೆಗೆ ಬರುತ್ತಿದ್ದಂತೆ ಬಾಗಿಲು ಬೀಗ ತೆಗೆದ ನನ್ನವರು ಒಳಗೆ ಹೋಗದಂತೆ ತಡೆಯುತ್ತಿದ್ದವರನ್ನು ಲೆಕ್ಕಿಸದೇ “ಪುಟ್ಟು ಪುಟ್ಟು” ಎಂದು ಕೂಗುತ್ತಾ ಭರದಿಂದ ಒಳನುಗ್ಗಿದರು. ಅಲ್ಲಿದ್ದವರೆಲ್ಲ ನನ್ನನ್ನು ಒಳಗೆ ಹೋಗದಂತೆ ತಡೆದರು.
ಕೆಳಗಿನ ನಮ್ಮ ಮಲಗುವ ಕೋಣೆ ಹೊತ್ತಿ ಉರಿಯುತ್ತಿತ್ತು. ಮನೆಪೂರ್ತಿ ಹೊಗೆ ತುಂಬಿಕೊಂಡು ಏನೊಂದೂ ಕಾಣುತ್ತಿರಲಿಲ್ಲ. ಉಸಿರು ಕಟ್ಟಿದ ಅನುಭವವಾಗುತ್ತಿತ್ತು. ಕಣ್ಣಿಗೆ ಏನೂ ಗೋಚರಿಸದಿದ್ದರೂ ಅಂದಾಜಿನ ಮೇಲೆ ಓಡುತ್ತಾ ಮೆಟ್ಟಿಲು ಹತ್ತಿ ಹೋಗಿ ಮೊದಲ ಮಹಡಿಯ ಮಲಗುವ ಕೊಣೆಯ ಮೂಲೆಯಲ್ಲಿ ಹೆದರಿ ನಡುಗುತ್ತಾ ಅವಿತು ಕುಳಿತಿದ್ದ ಚಿಕ್ಪುಟ್ಟುವನ್ನು ಕ್ಷಣಮಾತ್ರದಲ್ಲಿ ಹುಡುಕಿ ಬಾಚಿ ತಬ್ಬಿಕೊಂಡ ಇವರು ಹೊರಗೆ ಓಡಿ ಬಂದು ಅವನನ್ನು ನನ್ನ ಕೈಗಿಟ್ಟರು. ಆ ಕ್ಷಣ ನಾವಿಬ್ಬರೂ ಪುಟ್ಟುವನ್ನು ತಬ್ಬಿ ಕಣ್ಣೀರಿಟ್ಟೆವು. ಪುಟ್ಟುಗೆ ಏನೂ ತೊಂದರೆಯಾಗದ್ದು ಕಂಡು ಸಮಾಧಾನದ ನಿಟ್ಟುಸಿರು ಬಿಟ್ಟೆವು. ಅಷ್ಟರಲ್ಲಿ ಫೈರ್ ಇಂಜಿನ್ ನವರು ಬಂದು ಬೆಂಕಿ ನಂದಿಸಲು ಮುಂದಾದರು.
ಮುಂದುವರೆಯುವುದು
ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೨)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೩)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೪)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೫)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೬)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೭)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೮)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೯)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧೦)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧೧)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧೨)
- ಕೆ ಸಿ ರತ್ನಶ್ರೀ ಶ್ರೀಧರ್
