ಶ್ರೀಮದ್ಭಾಗವತ ಮಹಿಮೆ

ದೇಹವು ನನ್ನದಲ್ಲ, ಶಾಶ್ವತವೂ ಅಲ್ಲ. ಇದನ್ನು ತಿಳಿಯಲು ಸಾಧು ಪ್ರವರ್ತಕರಾಗದೆ ಶುದ್ಧ ಮನಸ್ಸಿನಿಂದ ಯೋಚಿಸಲು ಪ್ರಯತ್ನ ಮಾಡಿದರೆ ಮನಸ್ಸು ಶುದ್ಧವಾಗುವದು. ಕವಿ ಸಂಧ್ಯಾ ಟಿ ಅವರು ‘ಶ್ರೀಮದ್ಭಾಗವತ’ ಮಹಿಮೆಯ ಬಗ್ಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…  

ಶ್ರೀಮದ್ ಭಾಗವತದ ಮಹಿಮೆ ತುಂಬಾ ವಿಶಾಲವಾಗಿದೆ. ಅದರಲ್ಲಿ ಭಕ್ತಿಯ ರಹಸ್ಯ ಸೂಕ್ಷ್ಮವಾಗಿದೆ. ಅಷ್ಟೆ ವಿಸ್ಮಯದಿಂದ ತುಂಬಿದೆ. ನಮಗೆ ತಿಳಿದಿದೆ ಎಂದು ಮನಸ್ಸಿನಲ್ಲಿ ಯೋಚಿಸುವ ಸಮಯದಲ್ಲಿಯೆ ಬೇರೆ ಅದ್ಭುತ ಕಾರ್ಯ ನಡೆದಿರುತ್ತದೆ. ತಿಳಿಯದಿದ್ದರೂ ತಿಳಿಸಿದಂತೆ ಮಾಡಿ ಪರಮಾತ್ಮನು ನಮ್ಮನ್ನು ಕೋಲು ಕುದುರೆಯಂತೆ ಆಡಿಸುತ್ತಾನೆ. ಚಿಕ್ಕ ಮಕ್ಕಳು ಕೋಲನ್ನು ಕುದುರೆಯನ್ನಾಗಿ ಮಾಡಿ ಆಡುವಂತೆ ಆಡಿಸುತ್ತಾನೆ. ತಾನು ಮಾತ್ರ ಅಗೋಚರ. ಜೀವನವೇ ಒಂದು ಕೋಲು. ಅದರ ಮೇಲೆ ನಮ್ಮನ್ನು ಕೂಡಿಸಿ ಕಳಿಸಿದ್ದಾನೆ. ನಾವೆ ಆಡುತ್ತೇವೋ ದೇವರು ಆಡಿಸುತ್ತಾನೋ ಎನ್ನುವ ವಿಚಾರ ನಮಗೆ ಕೊಟ್ಟಿದ್ದಾನೆ. ಕೋಲು ಸಾಧನಕ್ಕೆ ಆಧಾರ. ಅದನ್ನು ನಾವು ಹಿಡಿಯುವುದು ನಡೆಸುವುದು ದೇವರ ಆಧೀನ ಎನ್ನುವುದು ಭಾಗವತ. ಮನಸ್ಸು ಎನ್ನುವ ಭೂಮಿಗೆ ಪ್ರೀತಿ ಎನ್ನುವ ಆಕಾಶತತ್ವವನ್ನು ಮೇಲ್ಛಾವಣಿ ಯನ್ನು ಮಾಡಿ ಭಕ್ತಿಯನ್ನು ಬಿತ್ತಿದರೆ ನಮ್ಮ ಕೋಲು ಕುದರೆ ನಮ್ಮನ್ನು ಸರಿ ಮಾರ್ಗದಲ್ಲಿ ಕರೆದೊಯ್ಯುತ್ತದೆ.

ನಿಜ ನೋಡಿದರೆ ಕೋಲು ನಮ್ಮದಲ್ಲ ನಾನು, ನನ್ನದು ಎಂಬ ಈ ದೇಹವು ನನ್ನದಲ್ಲ, ಶಾಶ್ವತವೂ ಅಲ್ಲ. ಇದನ್ನು ತಿಳಿಯಲು ಸಾಧು ಪ್ರವರ್ತಕರಾಗದೆ ಶುದ್ಧ ಮನಸ್ಸಿನಿಂದ ಯೋಚಿಸಲು ಪ್ರಯತ್ನ ಮಾಡಿದರೆ ಮನಸ್ಸು ಶುದ್ಧವಾಗುವದು. ಇದು ಜ್ಞಾನಿಗಳ ನುಡಿ. ದುರ್ಮತ ದುರ್ಗುಣಗಳನ್ನು ದೂರ ಸರಿಸಿ ಶ್ರೀ “ಹರಿ”ಯಲ್ಲಿ ಭಕ್ತಿ ಜ್ಞಾನ ಕೊಟ್ಟು ನನ್ನನ್ನು ಸಲಹು ಎಂದು ಕರ್ಮಸಾಕ್ಷಿಗೆ ಸಾಕ್ಷಿ ಎನಿಸಿದ, ವಾಶಿಷ್ಟರ ಪ್ರೀತಿಪಾತ್ರನಾದ ಹಾಗೂ ಶಿವಪಾರ್ವತಿಯರ ಪುತ್ರನಾದ ಗಣಪತಿಯನ್ನು ಪ್ರಾರ್ಥಿಸಿ ನಮಿಸುವೆನು.

ಫೋಟೋ ಕೃಪೆ : ಅಂತರ್ಜಾಲ

ಭಾಗವತ ಇದು ಒಂದು ಗ್ರಂಥ ಅಷ್ಟೇ ಅಲ್ಲ. ಬ್ರಹ್ಮಾಂಡದೊಳಗೆ ಹೊರಗೆ ನಡೆಯುವಂಥ ನಡೆಸುವವರು, ನಡೆಯುವವರು, ಸೂಕ್ಷ್ಮ ಸ್ಥೂಲ ಎಲ್ಲ ಕ್ರಿಯೆಗಳನ್ನೊಳಗೊಂಡ ಜೀವನದ ಸಾಧನಕೆ ಜ್ಞಾನ ದೀಪವಾಗಿದೆ.ಬ್ರಹ್ಮಗತ, ಬ್ರಹ್ಮಾಂಡಗತ ಜೀವಗತ ಹೀಗೆ ಆತ್ಮ, ಅಂತರಾತ್ಮ ಪರಮಾತ್ಮ ಈ ಮೂರು ರೂಪದಿಂದ ಭಗವಂತನು ಚೇತನಾಚೇತನಗಳಲ್ಲಿ ನೆಲೆಸಿದ್ದು ಕಾರ್ಯ ಕಾರಣನಾಗಿ ಕ್ರಿಯೆಗಳನ್ನು ಬಿಡದೆ ಮಾಡಿ ಮಾಡಿಸುತ್ತಿರುವನು.ಇದರಲ್ಲಿ ನನಗೆ ತಿಳಿದದ್ದನ್ನು ಶ್ರೀ ಹರಿವಾಯು ಗುರುಗಳ ಅನುಗ್ರಹದಿಂದ ಅಕ್ಷರಗಳಲ್ಲಿ ತಿಳಿಸಲು ಪ್ರಯತ್ನಿಸುತ್ತೇನೆ.

ಭೂಮಿಯಲ್ಲಿ “ಹರಿ”ಯುವ ಸಮುದ್ರದ ನೀರನ್ನು ಸೂರ್ಯನ ಕಿರಣಗಳು ತೆಗೆದುಕೊಂಡು ಮೋಡವಾಗುತ್ತದೆ. ನಂತರ ಗಾಳಿ ಬೀಸಿದಾಗ ಮಳೆಯಾಗುವದು. ಈ ಸರಳ ವಾಕ್ಯವು ಪ್ರಾಥಮಿಕ ಮಕ್ಕಳಿಂದ ಹಿಡಿದು ಹಿರಿಯರಿಗೆಲ್ಲ ಗೊತ್ತು. ಆದರೆ ಇದರೊಳಗಿರುವ ಸೂಕ್ಷ್ಮ, ಸ್ಥೂಲ, ಮಹತ್ವ ರಹಸ್ಯವನ್ನು ವಿಚಾರಿಸಲು ಹೋಗುವುದಿಲ್ಲ. ಇದು ಸಹಜವೆಂದು ತಳ್ಳಿಬಿಡುತ್ತೇವೆ. ಇದು ಪ್ರಕೃತಿಯ ನಿಯಮ ನಿಜ. ಈ ಕ್ರಿಯೆ ನಡೆಸುವವನು ಮಾತ್ರ ಅಗೋಚರ. ಮನುಷ್ಯನು ಎಲ್ಲವನ್ನು ನಾನು ಮಾಡಿದ್ದೇನೆ ಏನು ಬೇಕಾದರೂ ನಾನು ಮಾಡುತ್ತೇನೆ ಎಂದು ಭಾವಿಸಿದರೆ ಬೀಸಣಿಕೆಯಿಂದ ಗಾಳಿ ಬೀಸಿ ಮೋಡ ಚದುರಿಸಲು ಹೋದಂತೆ. ಆ ಗಾಳಿ ನನಗೆ ಬಡಿದು ಬರಗಾಲ ಬರುತ್ತದೆ. ಕಾರಣ ಸೃಷ್ಟಿ ಸ್ಥಿತಿ ಲಯಗಳಿಗೆ ಮಹಾಚೇತನ ಒಂದಿದೆ. ಆ ಶಕ್ತಿಯೆ ಸರ್ವೋತ್ತಮನಾದ, ಸ್ವಸ್ವತಂತ್ರನಾದ ಜ್ಞಾನಾನಂದಸ್ವರೂಪನಾದ “ಶ್ರೀ ಹರಿ”ಸರ್ವರಲ್ಲೂ ಸರ್ವತ್ರದಲ್ಲೂ ಪರಮ ಆತ್ಮನಾಗಿ ತನ್ನ ಪರಿವಾರದೊಂದಿಗೆ ನೆಲೆಸಿ ಕಾರ್ಯ ಕಾರಣನಾಗಿ ಕಾರ್ಯವನ್ನು ಮಾಡಿ ಮಾಡಿಸುವನು. ಇದು ಭಾಗವತದ ಚಿಂತನೆ. ಇದನ್ನು ಅರ್ಥೈಸಿಕೊಂಡರೆ ದೇವಮಾರ್ಗ. ಇದೆಲ್ಲ ಸುಳ್ಳು “ನಾನು”ಎಂದು ಭಾವಿಸಿದರೆ ದೈತ್ಯಮಾರ್ಗ ಹೊಂದುವರು.

ದೇವಮಾರ್ಗ ಹಿಡಿದವರು ಭಾಗವತರೆನಿಸಿಕೊಳ್ಳುವರು. ದುರ್ಮಾರ್ಗದವರು ದೈತ್ಯರೆನಿಸಿಕೊಳ್ಳುವರು. ಜ್ಞಾನಾನಂದ ದೇಹವುಳ್ಳ ಶ್ರೀ ಹರಿಯ ಕಥಾ ಮಹಿಮೆ, ಅದ್ಭುತ ಕರುಣೆ ಮತ್ತು ಅವನ ಪರಿವಾರ ಅವರೆಲ್ಲರ ಕಾರ್ಯ ತಿಳಿಸುವದು “ಶ್ರೀ ಮದ್ ಭಾಗವತ”. ಇದು ಲೌಕಿಕ ಸಾಹಿತ್ಯಕ್ಕೆ ಸಂಬಂಧಿಸಿದರೂ ವ್ಯಾಸ, ದಾಸ ಸಾಹಿತ್ಯವು ಇದರಲ್ಲಡಗಿದೆ. ಮುಂದಿನ ಸಂಚಿಕೆಯಲ್ಲಿ ನೋಡೋಣ.

ಶುಭಮಸ್ತು.

ಶ್ರೀ ಹರಿಯು ಪರಬ್ರಹ್ಮ
ಬ್ರಹ್ಮ ವಾಯು ಅಪರಬ್ರಹ್ಮ
ಶ್ರೀ ಲಕ್ಷ್ಮೀ ಜ್ಞಾನ ಸಂಪತ್ತು ಬ್ರಹ್ಮ ವಾಯು ಚೇತನ ಸಂಪತ್ತು
ಶಿವ ವಿಶಿಷ್ಟ ಮನ ಸಂಪತ್ತು
ಇಂದ್ರ ಕಾಮ ಬುದ್ಧಿಯ ಸಂಪತ್ತು
ಮಾತರಿಶ್ವಾಂತರ್ಗತ ಉತ್ತಮೋ-
ತ್ತಮ ಶ್ರೀಹರಿ ನಮೋನಮಃ.

 

ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ಪ್ರೀತ್ಯರ್ಥಮ್ ಶ್ರೀ ಕೃಷ್ಣಾರ್ಪಣ ಮಸ್ತು.


  • ಸಂಧ್ಯಾ ಟಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading