ಕಾಲಾಯ ತಸ್ಯೈ ನಮಃ ಅರ್ಥವೇನು?

ಕಾಲವೇನೊ ನೋಡಲು ಸಮನಾಗಿರುತ್ತದೆ. ಒಳಗಿನ ತತ್ವಗಳು ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಜೀವಿಗಳು ಮಾಡುವ ಕರ್ಮಗಳಿಗೆ ಸಮಯಾನುಸಾರ ಕಾಲವು ಉತ್ತರಿಸುತ್ತದೆ. ಲೇಖಕರಾದ ಸಂಧ್ಯಾ ಟಿ ಅವರು ಕಾಲಾಯ ತಸ್ಯೈ ನಮಃ ದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

“ಕಾಲಾಯ ತಸ್ಯೈ ನಮಃ” ಈ ಶಬ್ದವನ್ನು ತುಂಬಾ ಸರಳವಾಗಿ ಹೇಳಿ ಬಿಡುತ್ತೇವೆ. ಹೇಳಿದ ಹಾಗೆ ಗೌರವ ಕೊಡುವುದು ತುಂಬಾ ವಿರಳ. ನಿತ್ಯದಲ್ಲಿ ಒಂದು ಸಲವಾದರೂ ಕಾಲಕ್ಕೆ ನಮಸ್ಕಾರ ಹೇಳಬೇಕೆಂದು ಜ್ಞಾನಿಗಳು ತಿಳಿಸಿರುವರು. ಭಾಗವತ, ಮಹಾಭಾರತ, ಭಗವದ್ಗೀತೆ, ಕೀರ್ತನೆ, ವಚನ ಮೊದಲಾದವುಗಳಲ್ಲಿ ಕಾಲದ ಮಹಿಮೆ ತಿಳಿಸಿದ್ದಾರೆ. ಈ ಮಹಿಮೆಯನ್ನು ಬಾಹ್ಯ ಸೌಂದರ್ಯದಲ್ಲಿ ನೋಡದೆ ಅಂತರಂಗದ ಸೌಂದರ್ಯದಲ್ಲಿ ನೋಡಬೇಕಾಗಿರುವುದು ಮುಖ್ಯ.

ನಿಲ್ಲದೆ ಓಡುವ ಕಾಲದಲ್ಲಿ ಪರಮಾತ್ಮನ ಶಕ್ತಿ, ಕರುಣೆ ಅಲ್ಲದೆ ಅವನ ಅದ್ಭುತವಾದ ಮಹಿಮೆ ತುಂಬಿದೆ. ನಮಗೆ ಸಿಕ್ಕ ಸಮಯವನ್ನು ಅವಕಾಶವೆಂದು ತಿಳಿದು ಸಾಧನೆಗಾಗಿ ಉಪಯೋಗಿಸಬೇಕೆಂದು ಜ್ಞಾನಿಗಳು ತಿಳಿಸಿದ್ದಾರೆ. ಈ ಕಾಲವು ಮನಸ್ಸಿಗೆ ತುಂಬಾ ಹತ್ತಿರವಾಗಿರುವ ಸ್ನೇಹ ತುಂಬಿದ “ಸಖ” ಕಾಲವು ತುಂಬಾ ಪವಿತ್ರವಾಗಿದೆ. ಅದರಲ್ಲಿ ಅಪವಿತ್ರ ಎನ್ನುವುದು ಇಲ್ಲವೇ ಇಲ್ಲ.

ಈಗ ಕಾಲವು ಚೆನ್ನಾಗಿಲ್ಲ ಎಂದು ಅನ್ನುತ್ತೇವೆ. ಆದರೆ ಕಾಲವು ಯಾವ ದೋಷವಿಲ್ಲದೆ ಚಕ್ರದಂತೆ ತಿರುಗುತ್ತ ತನ್ನ ಕಾರ್ಯವನ್ನು ಯಶಸ್ವಿಯಾಗಿ ಮಾಡುವುದು. ಆದರೆ ಮಾನವನ ಬುದ್ಧಿ ಮತ್ತೆ ಭ್ರಮೆಯಲ್ಲಿ ಮುಳುಗಿರುತ್ತದೆ. ಕಾಲವು ಸೃಷ್ಟಿ ಸ್ಥಿತಿ ಪ್ರಳಯದಲ್ಲಿಯೂ ಯಥಾ ಸ್ಥಿತಿಯಲ್ಲಿರುತ್ತದೆ. ಅಂದ ಮೇಲೆ ಅಗೋಚರ ಶಕ್ತಿಯಾದ ಸರ್ವಸ್ವ ತಂತ್ರನಾದ ಸರ್ವೋತ್ತಮನೆ ಕಾಲ ನಿಯಾಮಕನಾಗಿದ್ದಾನೆ. ಸರ್ವದರಲ್ಲಿಯು ವ್ಯಾಪ್ತನಾಗಿದ್ದಾನೆ. ಸರ್ವರನ್ನೂ, ಸರ್ವಸ್ವವನ್ನೂ ತಾನು ಧರಿಸಿರುವನು. ಕಾಲನ ಆಧೀನದಲ್ಲಿರುವವರು ನಾವು. ಕಾಲವನ್ನು ಶುಭಕರವಾಗಿ ಆನಂದಮಯವಾಗಿ ನೋಡಬೇಕೆಂದರೆ ಸಮಯಕ್ಕೆ ಆದರಪೂರ್ವಕವಾಗಿ ಗೌರವ ಎಲ್ಲ ಇಂದ್ರಿಯಗಳ ಅಭಿಮಾನಿ ದೇವತೆಗಳಿಂದ ಶಿವ, ವಾಯು, ಬ್ರಹ್ಮ, ಪ್ರಕೃತಿಯಿಂದೊಡಗೂಡಿ ಪರಮಾತ್ಮನನ್ನು ಚಿಂತಿಸುತ್ತ ಕಾಲವೆಂಬ ಸಮಯದಲ್ಲಿ ಸುಸ್ವರವನ್ನಿಡುತ್ತ ಬೆಳಕನ್ನು ನೋಡಲು ಪ್ರಯತ್ನಿಸಿದಾಗ ಕತ್ತಲೆಯ ಸಹಾಯ ಸಿಗುವುದು. ಆಗ ಬೆಳಕು ಶುಕ್ಲ ಪಕ್ಷದಲ್ಲಿ ಚಂದ್ರನ ಬೆಳಕು ದಿನೆ ದಿನೇ ಹೆಚ್ಚುತ್ತ ಹುಣ್ಣಿಮೆ ದಿನ ಪೂರ್ಣ ಕತ್ತಲೆ ಕಳೆದು ಬೆಳಕು ಸಿಗುವದೊ ಹಾಗೆ ಅಜ್ಞಾನ ಸರಿದು ಜ್ಞಾನ ಹೆಚ್ಚುವುದು. ಕಾಲ ಕಾಲಕ್ಕೆ ನಮ್ಮ ಜೀವನದಲ್ಲಿ ಪ್ರಕೃತಿಯಿಂದ ಜನರಿಂದ ನಡೆಯುವ ವಿದ್ಯಮಾನಗಳಿಂದ ಕಲಿಯವಿಕೆಯೇ ಹೆಚ್ಚಿರುತ್ತದೆ. ಈ ಅವಕಾಶವನ್ನು ಕಾಲವೆ ನಮಗೆ ಕೊಡುವುದೆಂದು ಭಾವಿಸಿ ಎಚ್ಚೆತ್ತು ಕಾಲವನ್ನು ಹೇಗೆ ನೋಡಬೇಕು? ಏನು ಮಾಡಬೇಕು? ಏಕೆಂದರೆ ನಮಗೆ ಸಿಕ್ಕಿರುವ ಕಾಲದ ಅವಕಾಶದಲ್ಲಿ ಅರ್ಧ ಕಾಲವನ್ನು ನಿದ್ರೆಯಲ್ಲಿ ಕಳೆಯುತ್ತೇವೆ. ಉಳಿದರ್ಧ ಕಾಲದಲ್ಲಿ ಬಾಲ್ಯ, ಸಾಧನೆ ಮುಂತಾದವುಗಳು ಆಗಬೇಕು.

ನಾವು ಮಾಡಿದ ಕ್ರಿಯೆಗಳಿಗೆ ಕಾಲವೇ ಉತ್ತರಿಸುತ್ತದೆ. ಈ ನುಡಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಾವು ಮಾಡಿದ ಕ್ರಿಯೆ ನಿಂತ ನೀರಲ್ಲಿ ಕೈ ತೊಳೆದಂತಾಗುವುದು. ಕೈ ಶುದ್ಧವಾಗಬೇಕಾದರೆ ನೀರನ್ನು ನೋಡಬೇಕು, ಮನಸ್ಸನ್ನು ಶುದ್ಧ ಮಾಡಬೇಕಾದರೆ ಕಾಲವನ್ನು ತಿಳಿಯಬೇಕು. ಕಾಲಕ್ಕೆವಿರುದ್ಧವಾಗಿ ನಡೆದಲ್ಲಿ ಪ್ರಕೃತಿ ಮುನಿಸಿಕೊಳ್ಳುವುದು.ನಂತರ ಕಾಲವೆ ನಮಗೆ ವಿರುದ್ಧವಾಗುವದು.ಇದರಿಂದ ಕಾಲಕ್ಕೆ ಯಾವ ನಷ್ಟವಿಲ್ಲ. ನಮಗೆ ಕಷ್ಟ ನಷ್ಟ ಎಲ್ಲ ಅಲ್ವಾ? ಕಾಲವೇನೊ ನೋಡಲು ಸಮನಾಗಿರುತ್ತದೆ. ಒಳಗಿನ ತತ್ವಗಳು ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಜೀವಿಗಳು ಮಾಡುವ ಕರ್ಮಗಳಿಗೆ ಸಮಯಾನುಸಾರ ಕಾಲವು ಉತ್ತರಿಸುತ್ತದೆ.

ನಿನ್ನೆಯ ದಿನ, ಕಳೆದು ಹೋದ ಸಮಯ, ಅದರಿಂದ ಕಲಿತದ್ದನ್ನು ಈ ದಿನ ಉಪಯೋಗಿಸಿ ಅನುಭವಿಸುವ ಕಾಲ. ನಾಳೆಯ ದಿನಗಳ ತಪ್ಪು, ಒಪ್ಪನ್ನು ತಿದ್ದಿಕೊಂಡು ಒಳ್ಳೆಯ ಆಚರಣೆಗೆ ಕಾಲವು ಸಹಾಯ ಮಾಡುವುದು. ಹೀಗೆ ಕಾಲವು ನಮಗೆ ಕಾರಣ ಕಾರ್ಯಕ್ಕೆ ಗುರುವು ಇದ್ದಂತೆ.

ದೇವಾಲಯ ಪವಿತ್ರ ಸ್ಥಾನವಾಗಿದೆ. ಅಲ್ಲಿ ಪರಮಾತ್ಮನ ಸನ್ನಿಧಾನ ಹೆಚ್ಚು ಇರುವುದು. ಕಾರಣ ಜನರು ಒಳ್ಳೆಯದನ್ನು ಅಪೇಕ್ಷಿಸಿ ವಿವಿಧ ರೀತಿಯ ಪ್ರಾರ್ಥನೆ ಸಲ್ಲಿಸಲು ಹೋಗುವರು. ದೇವರ ದರ್ಶನಕ್ಕೆ ಒಳಗೆ ಹೋಗುವಾಗ ಪಾದರಕ್ಷೆಗಳನ್ನು ಬಿಡುವ ಸ್ಥಳದಲ್ಲಿ ಬಿಟ್ಟು ಹೋಗಬೇಕು ಅಲ್ಲವೇ ?, ಅದರಂತೆ ನಮ್ಮ ತಲೆಯಲ್ಲಿರುವ ನಾನು ಎನ್ನುವುದನ್ನು ಅಲ್ಲಿಯೇ ಬಿಟ್ಟು ಹೋದರೆ ದೇವರ ಹಾಗೂ ಕಾಲದ ಮಹಿಮೆಯಿಂದ ಚಿಕ್ಕದಾದ ಎರಡು ಪಾದಗಳು ದೊಡ್ಡದಾದ ದೇಹವನ್ನು ಹೇಗೆ ಹೊರುತ್ತವೆ?ನಮ್ಮ ಚಲನೆ ಹೇಗೆ ಸಾಧ್ಯ. ಕಾಲದ ಚಲನೆ ದೇವರ ಅಸ್ತಿತ್ವದ ರಹಸ್ಯ, ಇವುಗಳ ವಿಸ್ಮಯದ ಸೂಕ್ಷ್ಮತೆ ದೇವರ ಪ್ರತಿಮೆಯಲ್ಲಿ ಎಲ್ಲವೂ ನಿನ್ನಾಧೀನ ಎನ್ನುವ ಪ್ರಾರ್ಥನೆಯ ಜ್ಞಾನವನ್ನು ಕಾಲವು ನಮಗೆ ಕೊಡುವುದು. ಕಾಲದ ಮಹಿಮೆಯನ್ನೊಳಗೊಂಡ ಸುಕಾಲಕ್ಕೆ ನಮ್ಮ ಕೃತಜ್ಞತೆಗಳು.

ಕಾಲಾಯ ತಸ್ಯೈ ನಮಃ ನಿನಗೆ ವಂದನೆ
ನಿಲ್ಲದೆ ಬೇಸರದೆ ನಡೆಯುವ ನಿನಗೆ ವಂದನೆ

ಬಲ್ಲಿದ ಮನುಜ ನೆನಸಿಕೊ ಕಾಲದ ನಿಯಮ
ಸದ್ದಿಲ್ಲದೆ ಅರಿತು ಮಾಡು ಸತ್ಕರ್ಮ

ನಿಧಾನಿಸಿ ಸಾಧಿಸು ಸನಾತನಧರ್ಮ
ಹೇಳು ಕಾಲಾಯ ತಸ್ಯೈ ನಮಃ

ಗುಣದಿಂದ ನಡೆ ನಡೆಯಿಂದ ಬೆಳೆ
ಗಣದಿಂದ ಕಾರ್ಯ ಕಾರ್ಯದಿಂದ ಮಳೆ

ಗುಣಗಣದಿಂದ ತುಂಬಿದೆ ಕಾಲವು ನೀತಿಳಿ
ಹೇಳು ಕಾಲಾಯ ತಸ್ಯೈ ನಮಃ

ಅಂತ್ಯವಿಲ್ಲದ ಅಲೆಯಂತಿರುವ ಕಾಲ
ಸತ್ಜನರಿಗೆ ಆನಂದವೀವ ಸುಕಾಲ

ಮಾತರಿಶ್ವಾಂತರ್ಗತ ಪರಮ ಪ್ರಕಾಲ
ಹೇಳು ಕಾಲಾಯ ತಸ್ಯೈ ನಮಃ


  • ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading