ಆಲನಹಳ್ಳಿ ಗ್ರಾಮದವರಾದ ಶ್ರೀ ಕೃಷ್ಣ ಆಲನಹಳ್ಳಿ ಅವರ ೨೩೨ ಪುಟಗಳ ಲೇಖನಗಳುಳ್ಳ ‘ಸಮಗ್ರ ಕಥೆಗಳು’ ಕೃತಿಯ ಕುರಿತು ಲೇಖಕರಾದ ಓಂಕಾರ ಪಾಟೀಲ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ :ಸಮಗ್ರ ಕಥೆಗಳು
ಲೇಖಕರು :ಶ್ರೀ ಕೃಷ್ಣ ಆಲನಹಳ್ಳಿ
ಪ್ರಕಾಶಕರು : ಅಮೂಲ್ಯ ಪುಸ್ತಕ ಬೆಂಗಳೂರು,
ಪುಸ್ತಕದ ಬೆಲೆ :೨೯೫
“ಸಮಗ್ರ ಕಥೆಗಳು” ಕಥಾ ಸಂಕಲನದ ಲೇಖಕರಾದ ಶ್ರೀ ಕೃಷ್ಣ ಆಲನಹಳ್ಳಿ ಅವರು ಕನ್ನಡ ಸಾಹಿತ್ಯದ ಸಾರಸತ್ವ ಲೋಕಕ್ಕೆ ತಮ್ಮದೇಯಾದ ಕೊಡಗೆಯನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಸೊಗಡನ್ನು ಹಾಗು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಮತ್ತು ಪ್ರಕೃತಿಯ ಅಂತರಾಳವನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟ ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ಲೇಖಕರಾಗಿರುವ ಇವರ ಬಗ್ಗೆ ಪುಸ್ತಕ ಓದುವ ಮೊದಲು ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಳ್ಳೋಣ.
ಶ್ರೀ ಕೃಷ್ಣ ಅವರು ಮೈಸೂರ ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದವರು, ಕವಿ ಕಥೆಗಾರ, ಹಾಗು ಕಾದಂಬರಿಕಾರರಾಗಿ ಜನಪ್ರೀಯತೆ ಪಡೆದವರು, ಕಾಡು, ಪರಸಂಗದ ಗೆಂಡೆತಿಮ್ಮ, ಹಾಗು ಭುಜoಗಯ್ಯನ ದಶವಾತಾರ ಕಾದಂಬರಿಗಳು ಈಗಾಗಲೇ ಚಲನಚಿತ್ರಗಳಾಗಿ ರಾಷ್ಟೀಯ ಮಟ್ಟದಲ್ಲಿ ಪ್ರಶಸ್ತಿ ಮತ್ತು ಪ್ರಶಂಸೆ ಪಡೆದಿವೆ. ಅದೇ ರೀತಿ ಇವರು ಸಮೀಕ್ಷಕ ಪತ್ರಿಕೆ ಸಂಪಾದಕರಾಗಿ ಕೂಡ ಸೇವೆ ಸಲ್ಲಿಸಿರುವರು.

ಅಮೂಲ್ಯ ಪುಸ್ತಕದವರ ಪ್ರಕಾಶನದಲ್ಲಿ ಪ್ರಕಟವಾಗಿರುವ “ಸಮಗ್ರ ಕಥೆಗಳ” ಪುಸ್ತಕ ಕೃತಿಯು ತಪ್ತ, ಫಿನಿಕ್ಸ್ ಮತ್ತು ಅಪೂರ್ಣ ಕಥೆಗಳ ಭಾಗವಾಗಿ ಪ್ರಕಟವಾಗಿದ್ದು ಒಟ್ಟು ೨೩೨ ಪುಟಗಳ ಲೇಖನ ಪುಸ್ತಕ ರೂಪುಗೊಂಡಿದೆ.
ಲೇಖಕರಾದ ಶ್ರೀ ಕೃಷ್ಣ ಅವರ ಈ ಲೇಖನದಲ್ಲಿ ಗಂಡು ಹೆಣ್ಣಿನ ನಡುವಿನ ಒಂದು ವಿಶಿಷ್ಟ ಸಂಬಂಧದ ಪರಿಕಲ್ಪನೆ, ಪ್ರೀತಿ, ಪ್ರಣಯ ಒಲವು ಪ್ರೇಮ ಕಾಮ ಹಾಗು ಸಾಮಾಜಿಕದಲ್ಲಿ ನಡೆಯುವ ಪರಿಪೂರ್ಣ ಸನ್ನಿವೇಶವು ಪುಸ್ತಕ ಓದುತ್ತಾ ಹೋದರೆ ಅರ್ಥವಾಗುತ್ತದೆ.
‘ತಪ್ತ’ ಶೀರ್ಷಿಕೆಯ ಕಥೆಯಲ್ಲಿ ಕಥಾನಾಯಕ ಪ್ರಭಾಳಿಗೆ ಮದುವೆಯಾಗುವದಾಗಿ ಮಾತು ಕೊಟ್ಟು ಆಮೇಲೆ ತನ್ನ ಕೌಟುಂಬಿಕ ಸಾಮಾಜಿಕ ಕಟ್ಟುಪಾಡುಗಳಲ್ಲಿ ಬಂಧಿಯಾಗುವ ಸನ್ನಿವೇಶ ಎದುರಾಗುತ್ತದೆ. ‘ಸೀಮಂತ’ ಕಥೆಯಲ್ಲಿ ಪದ್ಮ ಮದುವೆಯಾಗಿ ಮೂರುವರುಷಗಳಾದರೂ ಮಕ್ಕಳಿಲ್ಲದ ಬಂಜೆ ಅನ್ನುವ ಪಟ್ಟದಿಂದ ಹೊರಬರುವ ಗೋಸ್ಕರ ಶ್ರೀಧರನನ್ನು ಪ್ರೀತಿಸುತ್ತಾಳೆ, ಹುತ್ತ, ಫಿನಿಕ್ಸ್, ಗಿಜಗನ ಗೂಡುವಿನಂಥ ಸೀನಿಮಿಯ ವಸ್ತುವುಳ್ಳ ಕಥೆಯವರೆಗೂ ಲೈಂಗಿಕ ಸ್ವಚ್ಛoದತೆ ಹರಿಯುವಿಕೆ ರಷ್ಯನ್ ಹೆಣ್ಣು ಕರಿಯನ ಕೈಗೆ ಸಿಕ್ಕು ಅವನಿಂದ ಸಂತ್ರಪ್ತವಾಗುವ ಸನ್ನಿವೇಶನ್ನು ಓದಿದರೆ ಲೇಖಕರು ತಮ್ಮ ಕಥೆಯಲ್ಲಿ ಪುರುಷನ ಬಯಕೆಗೆ ತಕ್ಕಂತೆ ಸ್ತ್ರೀಯರ ಪಾತ್ರ ಸೃಷ್ಟಿ ಮಾಡಿರುವಂತೆ ಭಾಸವಾಗುತ್ತದೆ.

‘ಅಂಟಿದ ನಂಟಿನ ಕೊನೆ ಬಲ್ಲವರಾರು’ ಅನ್ನುವ ಕಥೆಯಲ್ಲಿ ಶೂದ್ರ ಬ್ರಾಹ್ಮಣ ನಡುವಿನ ಭಿನ್ನ ಸಂಪ್ರದಾಯದ ವಿರುದ್ಧ ಶೂದ್ರನಾದ ಕಥಾನಾಯಕನ ಸೇಡು ಅವನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಲ್ಲಿ ಬ್ರಾಹ್ಮಣ ಕನ್ಯೆಯ ಜೊತೆ ಸಂಬಂಧ ಬೆಳೆಸಿ ತನ್ನ ಸೇಡು ತೀರಿಸಿಕೊಳ್ಳುವ ಕಥಾ ಹಂದರವನ್ನು ಹೆಣೆದಿದ್ದು ಕಾಣಬಹುದು, ‘ಮಾಮರವೋ ಮಾಪಳ್ಳಿಯೋ’ ಎಂಬ ಶೀರ್ಷಿಕೆ ಕಥೆಯಲ್ಲಿ “ಫಲ ಕೊಡುವ ಮರ ಕಡಿಯುವುದು ಒಂದೇ, ಹಸುಮಕ್ಕಳ ಕತ್ತು ಕಡಿಯುವದು ಒಂದೇ” ಅನ್ನುವ ಪದವು ಕಥಾನಾಯಕನ ಪರಿಸರ ಕಾಳಜಿಯನ್ನು ಎತ್ತಿ ತೋರಿಸು ತ್ತದೆ.
ಒಟ್ಟಾರೆಯಾಗಿ ಹೇಳುವದಾದರೆ ಶ್ರೀ ಕೃಷ್ಣ ಆಲನಹಳ್ಳಿ ಅವರ “ಸಮಗ್ರ ಕಥೆಗಳು” ಪುಸ್ತಕವು ಬದುಕಿನ ವೈಚಾರಿಕತೆಯ ಜವಾಬ್ದಾರಿ ಹೆಣ್ಣು ಗಂಡಿನ ನಡುವಿನ ಸಂಬಂಧದ ಪ್ರೀತಿ, ಪ್ರೇಮ ಕಾಮದ ಅರ್ಥಪೂರ್ಣವಾದ ರೂಪವನ್ನು ಹೊಂದಿರುವ ವಿಶಿಷ್ಟವಾದ ಕೃತಿಯನ್ನು ಓದುಗರರಿಗಾಗಿ ಕೊಡಗೆಯನ್ನು ನೀಡಿದ್ದಾರೆ ಅನ್ನಬಹುದು.
- ಓಂಕಾರ ಪಾಟೀಲ – ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ.
