ಅರಳುವ ಮುನ್ನವೇ ಕನಸುಗಳು ಕಮರದಿರಲಿ

ಮಗಳು ಸ್ಕೂಲಿನಿಂದ ಮರಳಿ ಬರುವ ಹೊತ್ತಾಯಿತು. ನಾವು ಡ್ರೈವರ್ ಗೆ ಕರೆ ಮಾಡಿದರೆ ನಮ್ಮ ರೆಗ್ಯುಲರ್ ಡ್ರೈವರ್ ಹುಷಾರಿಲ್ಲದ ಕಾರಣ ಅವನು ಅವರ ಸಂಬಂಧಿಕರನ್ನು ಕಳಿಸಿಕೊಟ್ಟಿದೀನಿ ಎಂದು ಹೇಳಿದ. ಶಾಲೆಗೆ ಫೋನ್ ಮಾಡಿದರೆ ಮಗು ಬಿಟ್ಟಾಗಿದೆ ಎನ್ನುವ ಸುದ್ದಿ. ಅದನ್ನು ಕೇಳಿದ ಕೂಡಲೇ ನಮಗೆ ಆತಂಕ ಇನ್ನೂ ಹೆಚ್ಚಾಯಿತು. ಮುಂದೇನಾಯಿತು ಲೇಖಕರಾದ ರಶ್ಮಿಪ್ರಸಾದ್ ಅವರ ಈ ನೈಜ್ಯಕತೆಯನ್ನು ತಪ್ಪದೆ ಮುಂದೆ ಓದಿ… 

ಸುಮಾರು ಮೂರು ವರ್ಷದ ಹಿಂದೆ ನಡೆದ ಘಟನೆ.

ಒಂದು ದಿನ ರಾತ್ರಿ ಊಟವಾದ ಬಳಿಕ ನನ್ನ ಯಜಮಾನರು ಪ್ರಸಾದ್ ನನಗೆ ‘ನಾಳೆ ಬೇಗ ರೆಡಿ ಆಗಮ್ಮ, ನಾಳೆ ಬೆಂಗಳೂರಿನ ಹೆಬ್ಬಾಳ್ ಬಳಿರುವ ಪ್ರತಿಷ್ಠಿತ (Aester hospital) ಗೆ ರೋಟಿನ್ ಚೆಕ್ ಅಪ್ ಗೆ ಅಪಾಯಿಂಟ್ಮೆಂಟ್ ತಗೊಂಡಿದೀನಿ. ಮಗಳನ್ನು ಶಾಲೆಗೆ ಕಳಿಸಿ ನಾವು ಹೋಗಿ ಬರೋಣ ‘ಎಂದು ಹೇಳಿದರು. ಮಗ ಆಗ ಬೆಂಗಳೂರಿನ ಹಾಸ್ಟೆಲ್ ನಲ್ಲಿ ಓದುತ್ತಿದ್ದದ್ದು. ಇವರ ಮಾತು ಯಾಕೋ ನನಗೆ ಒಪ್ಪಿಗೆಯಾಗಲಿಲ್ಲ. ಅದಕ್ಕೆ ನಾನು ‘ಮಗಳಿಗೆ ಈ ಒಂದು ದಿನ ರಜೆ ಹಾಕಿಸಿ ಕರೆದುಕೊಂಡು ಹೋಗೋಣ, ಅಕಸ್ಮಾತ್ ನಾವು ಬರುವುದು ಲೇಟ್ ಆದರೆ ಕಷ್ಟ. ಮಗಳು ಬಂದು ಕಾಯುವಂತಾಗುತ್ತದೆ. ಅದೂ ಅಲ್ಲದೇ ನಿಮ್ಮ ಅಮ್ಮ ಕೂಡ ಮನೆಯಲ್ಲಿಲ್ಲ, ಮಗಳ ಮನೆಗೆ ಹೋಗಿದ್ದಾರೆ. ಅವಳನ್ನು ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗೋಣ’ ಎಂದು ನಾನು ಎಷ್ಟು ಹೇಳಿದರೂ, ಪ್ರಸಾದ್ ‘ಬೇಗ ಬಂದ್ರಾಯ್ತು ಬಿಡಮ್ಮ, ಇಲ್ಲೇ ಹೆಬ್ಬಾಳ ತಾನೇ’ ಎಂದು ಹೇಳಿ ಹೊರಡಲು ಅನುವಾದರು. ಆ ದಿನಗಳಲ್ಲಿ ದಿನ ಶಾಲೆಗೆ ಡ್ರೈವರ್ ಕರೆದುಕೊಂಡು ಹೋಗಿ ಬರುತ್ತಿದ್ದ. ನಾವು ಹಾಸ್ಪಿಟಲ್ ಹೋಗಿ ಬರುವುದು ತಡವಾದರೆ ಎನ್ನುವುದೊಂದೇ ನನ್ನ ಆತಂಕವಾಗಿತ್ತು.

ಬೆಳಿಗ್ಗೆ ಎದ್ದ ತಕ್ಷಣ ಮಗಳನ್ನು ಶಾಲೆಗೆ ರೆಡಿ ಮಾಡಿ, ಜೊತೆಯಲ್ಲಿ ನಾನು ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಸಿದ್ಧಳಾದೆ. ಅವಳನ್ನು ಸ್ಕೂಲ್ ಗೆ ಕಳುಹಿಸಿದೆ. ನಮಗೆ ಅಪಾಯಿಂಟ್ಮೆಂಟ್ ಇದ್ದದ್ದು 11 ಗಂಟೆಯಾದ್ದರಿಂದ ನಾವು 10 ಗಂಟೆಗೆ ಮನೆಯಿಂದ ಹೊರಟೆವು. ಆಸ್ಪತ್ರೆಯನ್ನು ತಲುಪಿ ವೈದ್ಯರನ್ನು ಭೇಟಿಯಾಗಲು 12:00 ಗಂಟೆಯಾಯಿತು. ಅದಾದ ನಂತರ ಎಲ್ಲಾ ರೀತಿಯ ರೋಟೀನ್ ಚೆಕಪ್ ಗೆ ನಮ್ಮನ್ನು ಕಳುಹಿಸಿದರು. ಪುರುಷರ ವಿಭಾಗಕ್ಕೆ ಅವರು ಸ್ತ್ರೀಯರ ವಿಭಾಗಕ್ಕೆ ನನ್ನನ್ನು ಕರೆದುಕೊಂಡು ಹೋದರು. ಎಲ್ಲರೂ ನಮ್ಮಂತೆ ಹೆಲ್ತ್ ಮತ್ತು ಬಾಡಿ ಚೆಕಪ್ ಗೆ ಬಂದಿರುವ ಕಾರಣ ಜನ ಜಾಸ್ತಿಯಿದ್ದ ಕಾರಣ ಎಲ್ಲದರಲ್ಲೂ ನಾವು ಕಾದು ಕುಳಿತು ಟೆಸ್ಟ್ ಮಾಡಿಸಿಕೊಳ್ಳುವಂತಾಗಿತ್ತು. ಮಧ್ಯಾನ್ಹ ಊಟದ ಬಿಡುವು ಒಂದು ಗಂಟೆಯಿಂದ 2 ಗಂಟೆಯವರೆಗೆ. ಅದಾದ ಮೇಲೆ ಮತ್ತೆ ಟೆಸ್ಟ್ ಗಳು ಮುಂದುವರೆದವು.

ಗಂಟೆ ಮೂರಾದರೂ ನಮ್ಮ ತಪಾಸಣೆ ಮುಗಿದೇ ಇರಲಿಲ್ಲ. ನಾನು ಇವರಿಗೆ ‘ಮಗಳು ಸ್ಕೂಲಿನಿಂದ ಮರಳಿ ಬರುವ ಹೊತ್ತಾಯಿತು. ನಾವಿನ್ನು ಇಲ್ಲಿಯೇ ಇದ್ದೇವೆ. ಅವಳು ಹಠ ಮಾಡುತ್ತಾಳೆ ಎಂದು ಬರುವ ವಿಷಯ ಅವಳಿಗೂ ತಿಳಿಸದೇ ಬಂದಿದ್ದೀವಿ. ಯಾವುದಕ್ಕೂ ನಾವು ಹೊರಡೋಣ ಮತ್ತೊಂದು ದಿನ ಅಪಾಯಿಂಟ್ಮೆಂಟ್ ತೆಗೆದುಕೊಂಡು ಉಳಿದ ಟೆಸ್ಟ್ ಗಳನ್ನು ಮಾಡಿಸಿದರಾಯ್ತು ‘ಎಂದೆ. ಆದರೆ ಪ್ರಸಾದ್ ‘ಇಷ್ಟೊತ್ತಿನವರೆಗೂ ಕಾದಿದ್ದೇವೆ, ಇನ್ನೊಂದೆರಡು ಟೆಸ್ಟ್ ಬಾಕಿ ಇದೆ, ಮುಗಿಸಿಕೊಂಡು ಬೇಗ ಹೊರಡೋಣ. ಅಷ್ಟಕ್ಕೂ ಮಗಳು ಬಂದು ಹೇಗಿದ್ದರೂ ತಮ್ಮನ ಮನೆಯಲ್ಲಿ ಇರುತ್ತಾಳೆ ಸಮಾಧಾನವಾಗಿರು’ ಎಂದು ಹೇಳಿದರು. ಸಮಯ ಜಾರತ್ತಲೇ ಇತ್ತು, ನಮ್ಮ ಕೆಲಸ ಮುಗಿಯಲೇ ಇಲ್ಲ. ಕೊನೆಯಲ್ಲಿ ಸ್ಕೂಲ್ ಬಿಡುವ ಹೊತ್ತಾದರೂ ನಾವಿನ್ನು ಅಲ್ಲಿಯೇ ಇದ್ದೆವು. ಅದರ ನಡುವೆ ನಾನು ನನ್ನ ವಾರಗಿತ್ತಿ (co-sister) ಗೆ ಕರೆ ಮಾಡಿ ವಿಷಯ ತಿಳಿಸಿ ನಾವು ಬರುವವರೆಗೂ ಮಗಳು ನಿಮ್ಮ ಮನೆಯಲ್ಲಿಯೇ ಇರಲಿ ಎಂದು ಹೇಳಿದ್ದೆಯಾದರೂ ನನಗೆ ಒಳಗೊಳಗೆ ಆತಂಕ, ಭಯ, ನೋವು, ಸಂಕಟ ಇತ್ತು. ಕೊನೆಗೆ ಸ್ಕೂಲ್ ಬಿಡುವ ಸಮಯ, ನಾವು ಡ್ರೈವರ್ ಗೆ ಕರೆ ಮಾಡಿದರೆ ನಮ್ಮ ರೆಗ್ಯುಲರ್ ಡ್ರೈವರ್ ಹುಷಾರಿಲ್ಲದ ಕಾರಣ ಅವನು ಅವರ ಸಂಬಂಧಿಕರನ್ನು ಕಳಿಸಿಕೊಟ್ಟಿದೀನಿ ಎಂದು ಹೇಳಿದ (ಎಷ್ಟೇ ಆಗಲಿ ಆಳು ಮಾಡುವ ಕೆಲಸ ಹಾಳು) ಎನ್ನುವ ಮಾತು ನಿಜಾ ಎಂದುಕೊಂಡೆ. ಆ ಡ್ರೈವರ್ ಗೆ ಕರೆ ಮಾಡಿದರೆ ನಾಟ್ ರೀಚಬಲ್ ಎಂದು ಬರುತ್ತಿದೆ. ಸ್ಕೂಲ್ ಬಿಟ್ಟು ಅರ್ಧ ಘಂಟೆಯಾದರು ಮಗು ಮನೆ ತಲುಪಿಲ್ಲ. ಶಾಲೆಗೆ ಫೋನ್ ಮಾಡಿದರೆ ಮಗು ಬಿಟ್ಟಾಗಿದೆ ಎನ್ನುವ ಸುದ್ದಿ. ಅದನ್ನು ಕೇಳಿದ ಕೂಡಲೇ ನಮಗೆ ಆತಂಕ ಇನ್ನೂ ಹೆಚ್ಚಾಯಿತು. ನಾವು ಕೂಡಲೇ ಆಸ್ಪತ್ರೆಯನ್ನು ಬಿಟ್ಟು ಮನೆಗೆ ಹಿಂತುರುಗಿ ಬರಲು ಅಲ್ಲಿಂದ ಹೊರಟೆವು. ಆ ದಿನ ಇವರು ಕಾರ್ ಅನ್ನು ಅದೆಷ್ಟು ವೇಗವಾಗಿ ಓಡಿಸಿದ್ದರಿಂದ ನಮ್ಮಿಬ್ಬರಿಗೂ ಪ್ರಾಣದ ಭಯವೇ ಇಲ್ಲದ ಹಾಗೆ ಎನ್ನುವಷ್ಟು ಜೋರಾಗಿ ಓಡಿಸಿದ್ದರು.

ಫೋಟೋ ಕೃಪೆ : ಅಂತರ್ಜಾಲ

ಅಷ್ಟೊತ್ತಿಗೆ ಆಗಲೇ ಎಲ್ಲಾ ಕಡೆ ಫೋನ್ ಮಾಡಿದರೂ ಮಗು ಪತ್ತೆ ಇಲ್ಲ. ಮನೆಯ ಬಳಿ ಸುಮಾರು 20, 25 ಜನ ಡ್ರೈವರ್ ಗಳು ಹುಡುಕಿ ಬಂದಿದ್ದಾರೆ ಎಲ್ಲೂ ಮಗು ಕಾಣುತ್ತಿಲ್ಲ. ನನಗೆ ಒಂದು ನಿಮಿಷ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಭಾಸವಾಯಿತು. ಆ ಕ್ಷಣದಲ್ಲಿ ನಾನು ನನ್ನ ಸ್ಥಿಮಿತವನ್ನೇ ಕಳೆದುಕೊಂಡಂತೆ ಏರುದ್ವನಿಯಲ್ಲೇ ಇವರಿಗೆ ‘ಬೆಳಗ್ಗೆ ಹೇಳಿದ್ದೆ ಮಗುವನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗೋಣವೆಂದು ನೀವು ಕೇಳಲಿಲ್ಲ, ಈಗ ನೋಡಿ… ‘ಎಂದು ಹೇಳುವಾಗ ನನ್ನ ದುಃಖ ಒತ್ತರಿಸಿ ಬರುತ್ತಿತ್ತು. ಇವರಡೆಗೆ ತಿರುಗಿ ನಾನು ಹೇಳಿದ್ದು ಒಂದೇ ಮಾತು ‘ಮಗಳಿಗೆ ಒಂದು ಚೂರು ಏನಾದರೂ ಆದರೆ ನಾನು ಸುಮ್ಮನಿರುವುದಿಲ್ಲ ‘ಎಂದು. ಇವರ ಅಸಹಾಯಕೆ ಆತಂಕ, ದುಗುಡ, ಅಸಹನೆಯ ನಡುವಲ್ಲಿ ಕಣ್ಣುಗಳು ಕೆಂಪಾಗಿ ‘ಹಾಗೇನಾದ್ರೂ ಆದ್ರೆ ಅವನನ್ನ ನಾನು ಸುಮ್ನೆ ಬಿಡ್ತೀನಾ ‘ಎಂದು ಜೋರಾಗಿ ಹೇಳುವುದರೊಳಗೆ.. ‘ನೀವು ಯಾರನ್ನೂ ಏನು ಬೇಕಾದ್ರು ಮಾಡಬಹುದು ಆದರೆ ನನಗೆ ನನ್ನ ಮಗುವನ್ನು ಹಿಂತಿರುಗಿಸಲು ಸಾಧ್ಯವಿಲ್ಲ’ ಎಂದು ಹೇಳುವುದರೊಳಗೆ ನನ್ನ ದುಃಖ ಒತ್ತರಿಸಿ ಬಂದು ನಾನೇ ಕುಸಿಯುವಂತಾಯ್ತು.

ಅಲ್ಲಿಂದ ಅರ್ಧಗಂಟೆಯೊಳಗೆ ನಾವು ಸೀದಾ ಶಾಲೆಯ ಹತ್ತಿರ ತೆರಳಿದೆವು. ಅಲ್ಲಿನ ಸೆಕ್ಯೂರಿಟಿ ಯನ್ನು ವಿಚಾರಿಸಿದರೆ ಮಗುವನ್ನು ಕರೆದುಕೊಂಡು ಅವನು ಈ ಕಡೆ ಹೋದ’ ಎಂದು ಬೇರೆ ದಾರಿಯ ಕಡೆ ಕೈ ತೋರಿಸಿ ಹೇಳಿದ. ಆ ಕ್ಷಣ ನನ್ನೊಡಲ ಸತ್ವವೇ ಕಳೆದು ಎಲ್ಲಿಯವರೆಗೆ ಇದ್ದ ಒಂದು ಚಿಕ್ಕ ಭರವಸೆಯೂ ಸುಳ್ಳಾಗಿ ಧೈರ್ಯವೇ ಕಳೆದುಕೊಂಡೆವು.

ಸೆಕ್ಯೂರಿಟಿ ತೋರಿದ ದಾರಿಯನ್ನು ಹಿಡಿದು ಹೊರಟೆವು. ಅಷ್ಟರೊಳಗೆ ಅದೇ ಡ್ರೈವರ್ ನಿಂದ ಕಾಲ್ ಬಂತು. ಆ ಕಡೆಯಿಂದ ಮಗಳು “ಹಲೋ… ಅಮ್ಮ….” ಎನ್ನುತ್ತಿದ್ದಂತೆ ನನಗೆ ಹೋದ ಜೀವವೇ ಬಂದಂತಾಗಿತ್ತು. ಗದ್ಗದ ದ್ವನಿಯಲ್ಲೇ ‘ಪಾಪು…ಎಲ್ಲಿದ್ದೀಯಾ..’ ಎಂದು ಕೇಳುವಷ್ಟರಲ್ಲಿ ಡ್ರೈವರ್ ಹೆಂಡತಿ ಮಾತನಾಡಿ ‘ಅಕ್ಕ.. ಇವತ್ತು ಮಗುವನ್ನು ಕರೆದುಕೊಂಡು ನಾವು ದೇವಸ್ಥಾನಕ್ಕೆ ಬಂದಿದ್ದೇವೆ. ಹೇಗಿದ್ದರೂ ಕಾರ್ ಸಿಕ್ಕಿತ್ತಲ್ಲ ಹಾಗಾಗಿ ನಾನು ಹೊರಟು ಬಂದಿದ್ದೆ. ಮಗು ನಮ್ಮ ಜೊತೆಯಲ್ಲಿಯೇ ಇದೆ.ಈಗ ಕರೆದುಕೊಂಡು ಬರುತ್ತಿದ್ದೇವೆ’ ಎಂದರು . ಆ ಮಾತುಗಳನ್ನು ಕೇಳಿದ್ದರು ಕಾಯುವ ವ್ಯವಧಾನ ನಮಗಿರಲಿಲ್ಲ. ಮಗುವಿನ ಮುಖ ನೋಡುವವರೆಗೂ ನಮಗೆ ಸಮಾಧಾನವಿರಲಿಲ್ಲ. ನಾವೇ ದೇವಸ್ಥಾನದ ಬಳಿ ಹೋದೆವು. ದೇವರ ದರ್ಶನ ಮುಗಿಸಿ ದೇವರ ಸಾನಿಧ್ಯದಿಂದ ಮಗಳು ಮೆಟ್ಟಿಲಿಳಿದು ಓಡಿ ಬರುವುದನ್ನು ನೋಡಿ ದೇವರೇ ಮತ್ತೆ ದೇವತೆಯನ್ನು ನಾನು ಕಳಿಸಿದ ಎನ್ನುವಷ್ಟು ಭಾಸವಾಗಿ ನನ್ನ ಕಣ್ಣುಗಳೇ ಮಾಂಜಾಗಿ ಹನಿಗಳು ಹನಿಯತೊಡಗಿದವು. ಅವಳು ಬಂದ ಕೂಡಲೇ ಅವಳನ್ನು ಬಾಚಿ ತಪ್ಪಿ ಇನ್ನೆಂದೂ ನಿನ್ನ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎನ್ನುತ್ತಾ ‘ಮುದ್ದಾಡಿದ್ದೆ. ಇವರಿಗೆ ಇನ್ನಿಲ್ಲದ ಕೋಪ ಆ ಡ್ರೈವರ್ ನನ್ನು ಬಾಯಿಗೆ ಬಂದಂತೆ ಸಿಕ್ಕಾಪಟ್ಟೆ ಬೈದರು. ಬಹುಷಃ ಹೆಂಡತಿ ಜೊತೆಯಲ್ಲಿ ಇಲ್ಲದಿದ್ದರೆ ಅವನಿಗೆ ಸ್ಥಿತಿ ಏನಾಗುತ್ತಿತ್ತೋ ನನಗೆ ಊಹಿಸಲು ಆಗದು.

ಈ ಘಟನೆಯೇ ಕಡೆಯದು. ಎಷ್ಟೇ ಆಪ್ತರಾಗಲಿ, ಆತ್ಮೀಯರಾಗಲಿ, ಸಂಬಂಧಿಕರಾಗಲಿ, ಇಲ್ಲಿಯವರೆಗೂ ಯಾರಿಗೂ ನನ್ನ ಮಗಳ ಜವಾಬ್ದಾರಿಯನ್ನು ಒಪ್ಪಿಸಿಲ್ಲ. ಬೇರೆ ಎಲ್ಲಾ ಯಾಕೆ ಒಮ್ಮೊಮ್ಮೆ ಇವಳ ಅಪ್ಪನಿಗೂ ಒಪ್ಪಿಸುವುದಿಲ್ಲ. ಕೊನೆಗೆ ಅಮ್ಮನ ಮನೆಗೆ ಹೋದಾಗ ನನ್ನ ಅಪ್ಪಾ ಎಷ್ಟೋ ಬಾರಿ ಹೇಳಿದ್ದಾರೆ ‘ಮಕ್ಕಳನ್ನು ಸ್ವಲ್ಪ ದಿನ ಬಿಟ್ಟು ಹೋಗು,ನಾವೇ ಕರೆದುಕೊಂಡು ಬರುತ್ತೇವೆ’ ಎಂದು.ಆಗಲೂ ನಾನು ಸುತ್ತಾರಂ ಒಪ್ಪುವುದಿಲ್ಲ ನಾನೆಲ್ಲೋ ನನ್ನ ಮಕ್ಕಳು ಅಲ್ಲಿಯೇ ಎನ್ನುವ ಉತ್ತರ ನನ್ನದು.

ಒಮ್ಮೊಮ್ಮೆ ಆತ್ಮೀಯರು, ಗೆಳತಿಯರು ಅಷ್ಟೊಂದು ಮಗುವನ್ನು ಮುದ್ದಿಸಬೇಡ ತುಂಬಾ ಪಂಪರ್ಡ್ ಆಗಿ ಸಾಕಬೇಡ ಎನ್ನುತ್ತಾರೆ. ಹೇಳುವುದು ಒಳ್ಳೆಯದೇ ಆದರೂ ಇಂದಿನ ದಿನಮಾನದಲ್ಲಿ ನಡೆಯುವ ಘಟನೆಗಳನ್ನು ನೋಡಿದಾಗ ಖಂಡಿತ ನನಗೆ ಧೈರ್ಯ ಬರುವುದಿಲ್ಲ. ನಾನಲ್ಲ ನನ್ನಂತೆ ಎಲ್ಲಾ ತಾಯಂದಿರಿಗೂ ಧೈರ್ಯ ಸಾಲದು.ಇಂದಿಗೂ ಇವಳ ಡಾನ್ಸ್ ಕ್ಲಾಸ್ ಆಗಿರಬಹುದು, ಮ್ಯೂಸಿಕ್ ಕ್ಲಾಸ್ ಇರಬಹುದು, ಎಲ್ಲಿಗಾದರೂ ಸರಿ ಜೊತೆಯಲ್ಲಿ ನಾನೇ ಹೊರಡುತ್ತೇನೆ ವಿನಃ ಯಾರಿಗೂ ಒಪ್ಪಿಸಲಾರೆ.

ಕೆಲವೊಂದು ದುಷ್ಕೃತ್ಯಗಳು ದುರ್ಗಾಟನೆಗಳು ನಮ್ಮ ಸುತ್ತಲೂ ನಡೆಯುತ್ತಿರುತ್ತವೆ ಆದರೆ ಬೆಳಕಿಗೆ ಬರುವುದು ಕೇವಲ ಕೆಲವೇ ಕೆಲವು ಮಾತ್ರ.ಮಗು ಅರ್ಧ ಗಂಟೆ ಕಾಣಿಸದಿದ್ದಾಗಲೇ ಆ ನೋವು ಸಂಕಟ ಯಾತನೆ ಏನೆಂದು ನಮಗೆ ಹೇಳತ್ತೀರದಾಗಿತ್ತು. ಹೀಗಿರುವಾಗ ಕೆಲವೊಂದು ಘಟನೆಗಳು ಕಂಡಾಗ ಹೆತ್ತವರ ಒಡಲಾಳದ ನೋವು ಹೇಗಿರಬೇಡ, ಹೆತ್ತ ತಾಯಿಯ ಪಾಡೇನು, ತಾಯಿಯ ಪರಿಸ್ಥಿತಿ ಏನಾಗಿರಬೇಡ. ಅದನ್ನು ಆಕೆ ಸಯಿಸುವುದಾದರೂ ಹೇಗೆ. ಇಲ್ಲಿ ಹೆತ್ತವರ ಬೇಜಾಬ್ದಾರಿತನವೋ… ಮಗುವಿನ ದುರಂತವೋ, ರಾಕ್ಷಸರ ಅಂತ್ಯವೋ ಒಂದೂ ತಿಳಿಯುತ್ತಿಲ್ಲ ಆದರೆ ಹಸುನೀಗುತ್ತಿರುವುದು ಮಾತ್ರ ಏನೂ ಅರಿಯದ ಮುಗ್ಧಕಂದಮ್ಮಗಳು. ಇಂದು ಬೇರೆಲ್ಲೋ ಗೊತ್ತಿಲ್ಲದ ಊರಿನಲ್ಲಿ ನಮಗೆ ತಿಳಿಯದ ಜಾಗದಲ್ಲಿ.. ಆದರೆ ನಾಳೆ ನಮ್ಮ ಕಣ್ಣ ಮುಂದೆಯೇ.

ಅಪರಾಧಿ ಯಾರೆಂದು ಗೊತ್ತು?. ಅಪರಾಧ ಯಾವ ಕಾರಣಕಾಗಿ ಗೊತ್ತು? ಸಾಕ್ಷಿಗಳು ಸಾಲು ಸಾಲಾಗಿ ಎದುರಿಗೆ ಇವೆ. ಆದರೂ ಕಂಡಲ್ಲಿ ಕೊಲ್ಲುವುದಿಲ್ಲವೇಕೆ?. ಕಾನೂನು ಇನ್ನೂ ಕಣ್ಮುಚ್ಚಿ ಕುಳಿತಿರುವುದಾದರೂ ಏಕೆ?. ಕಾನೂನು ವ್ಯವಸ್ಥೆಗಳು ಬದಲಾಗುವುದಿಲ್ಲ ಏಕೆ?. ಬೇರೆ ಕಡೆ ಹೆಣ್ಣು ಮಕ್ಕಳ ಸುದ್ದಿಗೆ ಹೋದರೆ ಸಾಕು ಕಂಡಲ್ಲಿ ಗುಂಡು ಹಾರಿಸಿ ಸಾಯಿಸುವಾಗ ನಮ್ಮಲ್ಲಿ ಅದೇ ಕಾನೂನು ಜಾರಿಯಿಲ್ಲವೇಕೆ?. ಮಕ್ಕಳ ಶೋಷಣೆಯ ವಿಕೃತ ಮನಸ್ಸಿನವರ ವಿರುದ್ಧ ಕಾನೂನು ಇನ್ನೂ ಕಠಿಣ ಕ್ರಮ ತರಬೇಕಿದೆ. ಶೀಘ್ರ ಶಿಕ್ಷೆಗೆ ಒಳಪಟ್ಟು ಅಪರಾಧಗಳು ಮಾಡುವ ಮನಸ್ಥಿತಿ ಅಂತ್ಯವಾಗಲಿ ಎನ್ನುವ ಆಶಯ ಎಲ್ಲಾ ತಾಯಂದಿರದ್ದಾಗಿದೆ.

ಹಾಗಾಗಿ ದಯವಿಟ್ಟು ಹೆತ್ತವರಾದ ನಾವುಗಳು ಮಕ್ಕಳ ಬಗ್ಗೆ ಹೆಚ್ಚಿನ ಗಮನವಹಿಸಬೇಕು. ಹೆಣ್ಣು ಮಕ್ಕಳಿರುವವರೆಂದರೆ ತಂದೆ ತಾಯಿ ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕು. ಮಗಳು ಶಾಲೆಯಿಂದ ಬಂದರೆ ಶಾಲೆಯ ವಿಚಾರಗಳು ಕೇಳಿ ತಿಳಿಯಬೇಕು. ಮೊಬೈಲ್ ನಲ್ಲಿ ಎಷ್ಟೊತ್ತು ಏನು ನೋಡುತ್ತಿದ್ದಾಳೆ, ಏನು ಮಾಡುತ್ತೋದ್ದಾಳೆ ಎನ್ನುವ ಅರಿವು ನಮಗಿರಬೇಕು. ಅವಳು ಹೊರಗೆ ಹೋಗುವುದಾದರೆ ಎಲ್ಲಿಗೆ ಯಾರೊಂದಿಗೆ ಎನ್ನುವ ಸಂಪೂರ್ಣ ಮಾಹಿತಿ ಇರಬೇಕು. ಸಾಧ್ಯವಾದರೆ ಮಗಳ ಜೊತೆಯಲ್ಲಿ ಹೆತ್ತವರೇ ಹೋಗಿ ಬರುವುದು ಒಳ್ಳೆಯದು.

ಮಕ್ಕಳಿಗೂ ಯಾರು ಏನು ಹೇಳಿದರು ಏನು ಕೊಟ್ಟರೂ ತೆಗೆದುಕೊಳ್ಳಬಾರದು. ಗೊತ್ತಿಲದ ವ್ಯಕ್ತಿಯೊಡನೆ ಎಲ್ಲಿಗೂ ಹೋಗಬಾರದು. ನೋಡುವ ನೋಟ ದಲ್ಲೇ ಎಚ್ಚರಿಸುವ ವಿವೇಕ ವಿವೇಚನೆಯನ್ನು ಮನೆಯಲ್ಲಿ ಹೇಳಬೇಕು. ಎಷ್ಟೇ ಜೋಪಾನವಾಗಿ ನೋಡಿಕೊಂಡರು ಕೆಲವೊಮ್ಮೆ ಆಘಾತಗಳು ನಡೆಯುತ್ತದೆ. ಅಷ್ಟೆಲ್ಲ ಜೋಪಾನ ಮಾಡಿಯೂ ಕೈಯಲ್ಲಿರುವ ಮುತ್ತು ಜಾರುವಾಗ ಅದನ್ನು ಕಾಪಾಡುವ ಹೆಚ್ಚಿನ ಜವಾಬ್ದಾರಿ ನಮ್ಮದಲ್ಲವೇ. ಸಸಿಯಾಗಿ ನೆಟ್ಟು ದಿನ ನಿರುಣಿಸಿ ಅದು ಗಿಡವಾಗಿ ಹೂ ಬಿಟ್ಟು ನಳಿಸುವ ಮೊದಲೇ ಹೂ ಬಾಡದಂತೆ ಕಾಯುವುದು ನಮ್ಮೆಲ್ಲರ ಹೊಣೆಯಲ್ಲವೇ.


  • ರಶ್ಮಿಪ್ರಸಾದ್ (ರಾಶಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading