‘ಪಂಚವಟಿ’ ಕೃತಿ ಪರಿಚಯ

‘ಪಂಚವಟಿ’ ಕೃತಿಯ ವಿಶೇಷತೆಯೆನೆಂದರೆ ಇದು ಒಬ್ಬ ಲೇಖಕ/ಲೇಖಕಿ ಕಲ್ಪನೆಯ ಫಲವಲ್ಲ. ಐವರು ಲೇಖಕಿಯರು ಮತ್ತು ಒಬ್ಬ ಲೇಖಕರು ಸೇರಿ ಈ ಕಾದಂಬರಿಯನ್ನು ರಚಿಸಿದ್ದಾರೆ.ಈ ಕೃತಿಯ ಕುರಿತು ಲೇಖಕರಾದ ಎನ್.ವಿ. ರಘುರಾಮ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಶೀರ್ಷಿಕೆ : ‘ಪಂಚವಟಿ’
ಉಪ ಶೀರ್ಷಿಕೆ : ಸಂಧ್ಯಾ ಸಾರಥ್ಯದ ಹಿನ್ನೋಟ
ಪ್ರಕಾರ: ಖೋ ಕಾದಂಬರಿ.
ಲೇಖಕಿ / ಲೇಖಕ: ಶ್ರೀಮತಿ ಟಿ.ಆರ್.ಉಷಾರಾಣಿ, ಶ್ರೀ ಎನ್. ಶಂಕರರಾವ್, ಶ್ರೀಮತಿ ಜಿ.ವಿ.ನಿರ್ಮಲ, ಶ್ರೀಮತಿ ಕೆ.ಎಸ್. ನಾಗರತ್ನ, ಶ್ರೀಮತಿ ಸ್ನೇಹ ಶಶಿಧರ್, ಶ್ರೀಮತಿ ಸಿಂಧು ಹರಿತಸ್.
ಪ್ರಕಾಶನ: ಮಹಿಮಾ ಪ್ರಕಾಶನ, ಮೈಸೂರು.
ಬೆಲೆ: ರೂ.260/-.

ಪುಸ್ತಕದ ಶೀರ್ಷಿಕೆ ಮತ್ತು ಮುಖಪುಟ ಅದರ ಒಳಹೂರಣವನ್ನು ಸೂಚಿಸುವ ಮೊದಲ ಕಿಟಕಿ. ಈ ಪುಸ್ತಕ ಕೈಗೆತ್ತಿಕೊಂಡಾಗ ‘ಪಂಚವಟಿ’ ಎಂಬ ಶೀರ್ಷಿಕೆ ರಾಮಾಯಣವನ್ನು ಜ್ಞಾಪಿಸಿದರೂ, ಮುಖಪುಟದಲ್ಲಿರುವ ನಾಲ್ವರು ಹಿರಿಯರು ಮತ್ತು ಒಬ್ಬ ಮಧ್ಯವಯಸ್ಸಿನ ಮಹಿಳೆಯ ಚಿತ್ರ ಇದು ರಾಮಾಯಣದ ಕಥೆಯಲ್ಲ ಎಂಬುದನ್ನು ಮೊದಲ ನೋಟದಲ್ಲೇ ತಿಳಿಸುತ್ತದೆ. ಅಲ್ಲಿಂದಲೇ ಕಾದಂಬರಿಯ ಕುರಿತ ಕುತೂಹಲ ಆರಂಭವಾಗುತ್ತದೆ.

‘ಪಂಚವಟಿ’ ಎಂಬ ಶೀರ್ಷಿಕೆ ಇಲ್ಲಿ ಬಹು ಅರ್ಥಗಳನ್ನು ಹೊತ್ತಿದೆ. ರಾಮಾಯಣದ ಪಂಚವಟಿಯಂತೆ ಇಲ್ಲಿ ಬರುವ ‘ಪಂಚವಟಿ’ ಎನ್ನುವ ಉದ್ಯಾನವನ ಒಂದು ಜೀವನತಾಣವೇ ಸರಿ. ಇಲ್ಲಿ ಯುದ್ಧಗಳಿಲ್ಲ, ಆದರೆ ಜೀವನದ ಹೋರಾಟಗಳಿವೆ. ಅರಣ್ಯವಿಲ್ಲ, ಮನದೊಳಗೆ ಏಕಾಂತವಿದೆ. ರಾಮ-ಸೀತೆಯರಿಲ್ಲ, ಆದರೆ ಬದುಕಿನ ಅನೇಕ ಮುಖಗಳನ್ನು ಹೊತ್ತ ಸಾಮಾನ್ಯ ಮನುಷ್ಯರಿದ್ದಾರೆ. ಅವರ ನಗು, ನೋವು, ಸ್ನೇಹ ಮತ್ತು ನೆನಪುಗಳೇ ಈ ಪಂಚವಟಿಯ ಜೀವಾಳ.

ಈ ಕೃತಿಯ ವಿಶೇಷತೆ ಎಂದರೆ ಇದು ಒಬ್ಬ ಲೇಖಕ/ಲೇಖಕಿ ಕಲ್ಪನೆಯ ಫಲವಲ್ಲ. ಐವರು ಲೇಖಕಿಯರು ಮತ್ತು ಒಬ್ಬ ಲೇಖಕರು ಸೇರಿ ಈ ಕಾದಂಬರಿಯನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ಸಮನ್ವಯ ಸಮಿತಿ ಕನ್ನಡವೇ ಸತ್ಯ ಸಮೂಹದ ಸದಸ್ಯರು ರಚಿಸಿದ “ಪಲ್ಲಟ” ಮತ್ತು “ಅದೃಶ್ಯ ಬೇರುಗಳು” ಎನ್ನುವ ಕಾದಂಬರಿಗಳು ಈ ರೀತಿಯ ಪ್ರಯೋಗ ಮಾಡಿ ಸಾಕಷ್ಟು ಯಶಸ್ವಿಯಾಗಿವೆ. ಈ ಕಾದಂಬರಿಯೂ ಒಂದೇ ಕಥೆಯೊಳಗೆ ಆರು ಲೇಖಕ/ಲೇಖಕಿಯರ ಸೃಜನಶೀಲತೆ ಸಮನ್ವಯಗೊಂಡು, ಕಥೆಯ ಏಕತೆಯನ್ನು ಉಳಿಸಿಕೊಂಡಿದೆ.

ಕಾದಂಬರಿಯ ಆರಂಭವೇ ‘ಪಂಚವಟಿ’ ಉದ್ಯಾನವನದಿಂದ ಪ್ರಾರಂಭವಾಗುತ್ತದೆ. ಪ್ರತಿದಿನ ಬೆಳಗ್ಗೆ ಸೇರುವ ಹಿರಿಯರ ಬಳಗ, ಅವರ ಹಾಸ್ಯ, ಪರಸ್ಪರ ಕಾಳಜಿ, ಜೀವನಾನುಭವಗಳು ಮತ್ತು ಆತ್ಮೀಯ ಸಂಭಾಷಣೆಗಳು ಓದುಗರನ್ನು ಸಹಜವಾಗಿಯೇ ಕಥೆಯೊಳಗೆ ಸೆಳೆದುಕೊಳ್ಳುತ್ತವೆ.

ಅಲ್ಲಿನ ಕಲ್ಲಿನ ಬೆಂಚು ಕೇವಲ ಕುಳಿತು ಕೊಳ್ಳುವ ಸ್ಥಳವಲ್ಲ. ಅದು ಕಾಲದ ಸಾಕ್ಷಿಯಾಗುತ್ತದೆ. ಅನೇಕ ಸಂಭಾಷಣೆಗಳು, ಕಣ್ಣೀರು ಮತ್ತು ನಗೆಗಳನ್ನು ತನ್ನೊಳಗೆ ಉಳಿಸಿಕೊಂಡಿರುವ ಮೌನ ಪಾತ್ರವಾಗಿ ರೂಪುಗೊಂಡಿದೆ.

ಈ ಕಾದಂಬರಿಯ ಪಾತ್ರಗಳು ಅಸಾಮಾನ್ಯ ವ್ಯಕ್ತಿಗಳಲ್ಲ. ನಮ್ಮ ಸುತ್ತಲಿನ ಬದುಕಿನಲ್ಲೇ ಕಾಣಸಿಗುವ ಸಾಮಾನ್ಯ ಜನರು. ನಿವೃತ್ತ ಬ್ಯಾಂಕಿನ ಅಧಿಕಾರಿ ಸೀತಾರಾಮ್, ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ದಿನಸಿ ವ್ಯಾಪಾರ ನಡೆಸುವ ಹರಿಪ್ರಸಾದ್, ನಿವೃತ್ತ ಇಂಜಿನೀಯರ್ ಮತ್ತು ಹಾಸ್ಯ ಪ್ರವೃತ್ತಿಯ ಕವಿ ವಿಜಯ ಭಾಸ್ಕರ್, ಪ್ರತಿಷ್ಠಿತ ಕಂಪನಿಯ ನಿವೃತ್ತ ಸಿ.ಇ.ಓ. ಭರತ್ ಭೂಷಣ್. ಅವರೆಲ್ಲರೂ ನಿವೃತ್ತಿಯಾದ ನಂತರ ಉದ್ಯಾನವನದಲ್ಲಿ ಭೇಟಿಯಾಗಿ ಸ್ನೇಹಿತರಾದವರು. ನಿವೃತ್ತರಾಗಿರುವುದರಿಂದ ಇವರಿಗೆ ಅಧಿಕಾರದಿಂದ ಆತ್ಮೀಯತೆಗೆ, ಸ್ಪರ್ಧೆಯಿಂದ ಸಹಯಾತ್ರೆಗೆ, ಸಾಧನೆಯಿಂದ ಸಮಾಧಾನಕ್ಕೆ ಸಾಗುವ ಮನಸ್ಥಿತಿಗೆ ಬರಲು ಕಷ್ಟವಾಗಲಿಲ್ಲ. ಅವರ ಜೊತೆ ಸೇರಿದವರು ಕಾಲೇಜಿನಲ್ಲಿ ಶಿಕ್ಷಕಿಯಾದ ಮತ್ತು ಸಮಾಜ ಸೇವಕಿಯೂ ಆದ ಮಧ್ಯ ವಯಸ್ಸಿನ ಮೃದಲಾ. ಪ್ರತಿಯೊಬ್ಬರಿಗೂ ತಮ್ಮದೇ ಆದ ಬದುಕಿನ ಕಥೆಯಿದೆ. ಆದರೆ ಅವರನ್ನು ಒಂದುಗೂಡಿಸುವುದು ಸ್ನೇಹಪರತೆ ಅಷ್ಟೇ.

ನಾಲ್ಕು ಜನ ಹಿರಿಯರ ಮನಸ್ಥಿತಿ ಏನು? ಈ ಹಿರಿಯರ ತಂಡಕ್ಕೆ ಮೃದಲಾ ಮೇಡಂ ಹೇಗೆ ಪರಿಚಿತರಾದರು? ಅವರ ಮನೆಯವರು ಯಾರು? ಅವರೇಕೆ ಒಬ್ಬಂಟಿಯಾಗಿ ಉದ್ಯಾನವನಕ್ಕೆ ಬರುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲು ಕಾದಂಬರಿ ಓದಬೇಕು.

ಈ ಕಥೆಯ ವ್ಯಾಪ್ತಿ ಉದ್ಯಾನವನಕ್ಕೆ ಮಾತ್ರ ಸೀಮಿತವಾಗದೇ ನೇಪಾಳದ ಮುಕ್ತಿನಾಥನವರೆಗೆ ವಿಸ್ತರಿಸುತ್ತದೆ. ಅದರ ಜೊತೆಗೆ ಅಂತರ್ಜಾತಿ ವಿವಾಹ, ಮಕ್ಕಳು ದೂರವಾಗುವುದು, ವೈದ್ಯಕೀಯ ವಿಜ್ಞಾನದಲ್ಲಿ ಕ್ರುತಕಬುದ್ಧಿ ಮತ್ತೆಯ ಉಪಯೋಗ ಹೀಗೆ ಅನೇಕ ವಿಷಯಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅವೆಲ್ಲವನ್ನು ಕಾದಂಬರಿಯಲ್ಲಿ ಓದಿದರೆ ಚೆನ್ನ.

ಇದರ ಜೊತೆಗೆ ಸಂಸಾರ ನಡೆಸಿದ ಮನೆ ಬಿಟ್ಟು ಹೊರಟಾಗ ಭಾಸ್ಕರ್ ತನ್ನ ಹೆಂಡತಿಯ ವೀಣೆಯನ್ನು ಪರಿಚಿತರಿಗೆ ಕೊಡುವ ಭಾವನಾತ್ಮಕ ಸನ್ನಿವೇಶ ಮನ ಸೆಳೆಯುತ್ತದೆ. ಅವರ ಮನಸ್ಥಿತಿಯನ್ನು ತೋರಿಸುವಂತೆ, ಅವರ ಮನೆಯೊಳಗಿನ ಲಿಫ್ಟ್ ಕೂಡ ಮೇಲುಗಡೆ/ಕೆಳಗಡೆ ಓಡಾಡುವುದನ್ನು ನೋಡಬಹುದು. ಒಂದು ಕಡೆ ಸುಮಾರು ಎರಡು ದಶಕಗಳ ಹಿಂದೆ ಕಾಲೇಜಿನಲ್ಲಿ ಅರಳಿದ ಪ್ರೇಮಕಥೆಯ ದೃಶ್ಯ ಮೂಡುತ್ತದೆ. ಇನ್ನೊಂದು ಕಡೆ ಈಗೀನ ಕಾಲದ ಲ್ಯಾಪ್ ಟಾಪಿನ ಮುಂದೆ ಅರಳುವ ಪ್ರೇಮ ಕಥೆ ತೆರೆದುಕೊಳ್ಳುತ್ತದೆ. ಇವೆರಡರ ಮಧ್ಯೆದಲ್ಲಿ ಜಪಾನಿನಲ್ಲಿ ಬೆಳೆದ ಸಕೂರಳ ಪ್ರೇಮ ಕಥೆ ಅನಾವರಣವಾಗಿದೆ. ಈ ಪ್ರೇಮ ಕಥೆಗಳಲ್ಲಿ ನಾಯಕ ಮತ್ತು ನಾಯಕಿಯರು ಯಾರು? ಅವರುಗಳ ಪ್ರೇಮಕಥೆ ಕನಸಾಗಿಯೇ ಉಳಿಯಿತೇ ಅಥವ ನನಸಾಯಿತೆ ಎಂದು ತಿಳಿಯಲು ಕಾದಂಬರಿ ಓದಬೇಕು.

ಕಾದಂಬರಿಯಲ್ಲಿ ಪೇಪರ್ ಪೊಟ್ಟಣದಲ್ಲಿ ದಿನಸಿ ಕಟ್ಟಿಕೊಡುವ ಅಂಗಡಿ ಆಧುನಿಕ ಮಾಲ್ ಆಗುವುದು ಹೊರ ಜಗತ್ತಿನ ಆಗುತ್ತಿರುವ ಬದಲಾವಣೆಯ ಸಂಕೇತವಾಗಿ ಬಂದರೆ “ಅಪ್ಪಾ, ಸಮಸ್ಯೆ ಬಂದಾಗ ಓಡಿಹೋಗೋ ಮದುವೆ ನಮಗೆ ಬೇಡ. ಜವಾಬ್ದಾರಿಯಿಂದ ಎದುರಿಸುವ ಧೈರ್ಯ ಇದ್ದುದ್ದರಿಂದಲೇ ನಿಮ್ಮ ಮುಂದೆ ನಿಂತಿದ್ದೀವೆ” ಎನ್ನುವ ಶ್ರೀನಿಧಿ ಮಾತು ಹೊಸ ಪೀಳಿಗೆಯ ವಿಶ್ವಾಸವನ್ನು ತೋರಿಸುತ್ತದೆ.

“ನಾರಿ ಹಬ್ಬಕ್ಕೆ ಖಂಡಿತಾ ನಿನಗೆ ಕೊಡಿಸಲ್ಲ ಸಾರಿ ನೋಡಿದರೆ ನಿನ್ನ ಮಾರಿ ಕೊಡಿಸಬೇಕು ಅನಿಸಲ್ಲ ಹೊಸ ಸ್ಯಾರಿ ಅಲ್ಲಿ ಕಾಯುತಿಹಳು ನನಗೆ ಷರ್ಟು ಕೊಡಿಸಲು ನನ್ನ ಪ್ಯಾರಿ
ಐ ಆಮ್ ವೇರಿ ಸಾರಿ” ಎಂದು ಭಾಸ್ಕರ್ ಉದುರಿಸಿದ ಹಾಸ್ಯದ ಆಶು ಕವನದ ಸಾಲುಗಳು ಓದುಗನ ಮನಸ್ಸಿಗೆ ಮುದ ತರುತ್ತದೆ. ಅದರ ಜೊತೆಗೆ ಅವರ ಬದುಕಿನಲ್ಲಿ ಅಡಗಿದ್ದ ದೊಡ್ಡ ಕಹಿ ಅನಾವರಣವಾಗುತ್ತದೆ. ಕಾದಂಬರಿಯ ಉದ್ದಕ್ಕೂ ಬರುವ ಇಂತಹ ಸೂಕ್ಷ್ಮತೆಗಳು ಕೃತಿಯ ಕಲಾತ್ಮಕತೆಯನ್ನು ಹೆಚ್ಚಿಸುವುದರ ಜೊತೆಗೆ ಅದರಲ್ಲಿರುವ ಸಣ್ಣಪುಟ್ಟ ನ್ಯೂನತೆಗಳನ್ನು ಗೌಣವಾಗಿಸುತ್ತವೆ.

ಕಾದಂಬರಿಯನ್ನು ಓದುವಾಗ ಮೊದಲು ಗಮನಿಸುವುದು ಕಥೆ ಹೇಳುವ ವಿಧಾನ. ‘ಪಂಚವಟಿ’ ಬದುಕಿನಂತೆ ನಡೆದು ಸಾಗುತ್ತದೆ. ಇಲ್ಲಿ ಪ್ರತಿಯೊಂದು ಅಧ್ಯಾಯವೂ ಒಂದು ಜೀವನದ ಪದರವನ್ನು ತೆರೆದು ತೋರಿಸುವ ಪ್ರಯತ್ನವಾಗಿದೆ. ಹಾಗಾಗಿ ಲೇಖಕರು ಓದುಗನನ್ನು ಪಾತ್ರಗಳೊಂದಿಗೆ ಕುಳಿತುಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ.

‘ಪಂಚವಟಿ’ ಯಲ್ಲಿ ಬರುವ ಮಾತುಕತೆಯಲ್ಲಿ ಆರೋಗ್ಯ, ಕುಟುಂಬ, ರಾಜಕೀಯ, ಹಳೆಯ ಸ್ನೇಹಿತರು, ಜೀವನದ ಸಣ್ಣ ಸಂತೋಷಗಳು ಸಹಜವಾಗಿ ಬೆರೆತು ಬರುತ್ತವೆ. ಇವುಗಳಲ್ಲಿ ಸಾಹಿತ್ಯಿಕ ಕೃತಕತೆ ಕಾಣುವುದಿಲ್ಲ. ಓದುಗನು ಒಂದು ಪುಟ ಓದಿದ ನಂತರ “ಇದು ನಮ್ಮ ಪಾರ್ಕಿನಲ್ಲಿ ಪ್ರತಿದಿನ ಕೇಳುವ ಮಾತಲ್ಲವೇ!” ಎಂದುಕೊಳ್ಳುತ್ತಾನೆ. ಈ ಸಹಜತೆಯೇ ಕಾದಂಬರಿಯ ಶಕ್ತಿ ಕೂಡ.

ಈ ಕಾದಂಬರಿಯಲ್ಲಿ ಕಾಲವನ್ನು ನೆನಪುಗಳಿಂದ ಅಳೆಯುತ್ತಾರೆ. ಆಡುವ ಒಂದು ಮಾತು ಹಳೆಯ ಘಟನೆಯನ್ನು ನೆನಪಿಸುತ್ತದೆ. ಒಬ್ಬ ಸ್ನೇಹಿತನ ಅನುಪಸ್ಥಿತಿ ಹಲವಾರು ವರ್ಷಗಳ ಸಂಬಂಧವನ್ನು ತೆರೆದಿಡುತ್ತದೆ. ಇಲ್ಲಿ ಗಡಿಯಾರ ಮುಂದೆ ಸಾಗುತ್ತದೆ. ಆದರೆ ಮನಸ್ಸು ಹಿಂದಕ್ಕೆ ಹೋಗುತ್ತದೆ. ಈ ಎರಡರ ಸಂಗಮದಲ್ಲೇ ಕಥೆ ಹುಟ್ಟುತ್ತದೆ.

‘ಪಂಚವಟಿ’ಯನ್ನು ಓದುವಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ಇದು ಘಟನೆಗಳ ಕಾದಂಬರಿಯಲ್ಲ; ಇದು ಸಂಬಂಧಗಳ ಕಾದಂಬರಿ. ಇಲ್ಲಿ ದೊಡ್ಡ ತಿರುವುಗಳು, ರೋಚಕ ಘಟನೆಗಳು ಅಥವಾ ನಾಟಕೀಯ ಘರ್ಷಣೆಗಳು ಮುಖ್ಯವಲ್ಲ. ಮುಖ್ಯವಾದುದು ಮನುಷ್ಯರು ಪರಸ್ಪರ ಹೇಗೆ ಹೊಂದಿಕೊಂಡು ಬದುಕುತ್ತಾರೆ ಎಂಬುದು.

ಹಾಗಾದರೆ ಇದೊಂದು ವೃದ್ಧಾಪ್ಯವನ್ನು ಚಿತ್ರಿಸುವ ಕಾದಂಬರಿಯೇ? ಎಂಬ ಪ್ರಶ್ನೆ ಮೂಡುವುದು ಸಹಜ. ವೃದ್ಧಾಪ್ಯ ಎಂದರೆ ಅನಾರೋಗ್ಯ, ವೃದ್ಧಾಶ್ರಮದ ವಾಸ, ಆರ್ಥಿಕ ಸಂಕಷ್ಟ, ಸಂಬಂಧಗಳು ದೂರವಾಗುವುದು ಎಂದು ಹೆಚ್ಚಾಗಿ ನಷ್ಟಗಳನ್ನೇ ಪಟ್ಟಿ ಮಾಡಿ ಚಿತ್ರಿಸಿರುವ ಅನೇಕ ಕಾದಂಬರಿಗಳು ಈಗಾಗಲೇ ಬಂದಿವೆ. ಆದರೆ ಈ ಕಾದಂಬರಿ ಅದಕ್ಕೆ ಹೊರತಾಗಿದೆ. ಈ ಕಾದಂಬರಿಯಲ್ಲಿ ತೀರ್ಪುಗಳನ್ನು ಕೊಡುವವರು ಇಲ್ಲ. ಅದರ ಬದಲಾಗಿ ತಬ್ಬಿಕೊಳ್ಳುವ ಸಂಬಂಧಗಳಿವೆ. ಹಾಗಾಗಿ ಈ ಕಾದಂಬರಿಗೆ ಓದಿಸಿಕೊಂಡು ಹೋಗುವುದಲ್ಲದೇ ಮನದಲ್ಲಿ ಉಳಿಯುತ್ತದೆ ಎಂದು ಖ್ಯಾತ ಅಂಕಣಕಾರರಾದ ಶ್ರೀಯುತ ಶಿಶಿರ್ ಹೆಗಡೆಯವರು ಮುನ್ನುಡಿಯಲ್ಲಿ ಹೇಳಿರುವುದು ಸರಿಯಾಗಿದೆ.

“ಸಂಧ್ಯಾ ಸಾರಥ್ಯದ ಹಿನ್ನೋಟ” ಎನ್ನುವ ಉಪಶೀರ್ಷಿಕೆ ಇನ್ನೊಂದು ಗಮನ ಸೆಳೆಯುವ ಅಂಶ. ಈ ಕಾದಂಬರಿಯಲ್ಲಿ ‘ಸಂಧ್ಯಾ’ ಎಂದರೆ ಬೆಳಕು ಮತ್ತು ಕತ್ತಲಿನ ನಡುವಿನ ಪರಿವರ್ತನೆಯ ಕ್ಷಣ. ಜೀವನದ ದೃಷ್ಟಿಯಿಂದ ಅದು ವೃದ್ಧಾಪ್ಯದ ಪ್ರಾರಂಭ ದಿನಗಳು. ದೈಹಿಕವಾಗಿ ಕತ್ತಲಿನಡೆಗೆ ನಡೆಯುತ್ತಿದ್ದರೂ, ಅಲ್ಲಿ ಅನುಭವಗಳ ಬೆಳಕಿದೆ. ಆ ಬೆಳಕೇ ಮುಂದಿನ ಜೀವನದ ‘ಸಾರಥ್ಯ’ಕ್ಕೆ ದಾರಿ ದೀಪವಾಗುವುದನ್ನು ಕಾದಂಬರಿಯಲ್ಲಿ ನಾವು ಕಾಣಬಹುದು.

ನಿವೃತ್ತಿಯಾದ ನಂತರ ಜೀವನದಲ್ಲಿ ಸ್ನೇಹದ ಅರ್ಥವೇನು? ಈ ಪ್ರಶ್ನೆಗೆ ಕಾದಂಬರಿ ನೇರವಾದ ಉತ್ತರ ಕೊಡುವುದಿಲ್ಲ. ಆದರೆ ಸ್ನೇಹಿತ ಅಥವಾ ಸ್ನೇಹಿತೆ ಒಂದು ದಿನ ಉದ್ಯಾನವನಕ್ಕೆ ಬರದಿದ್ದರೆ ಉಂಟಾಗುವ ಆತಂಕದ ಚಿತ್ರಣದ ಮೂಲಕ ಆ ಸ್ನೇಹ ಸಂಬಂಧದ ಆಳವನ್ನು ಮತ್ತು ಅರ್ಥವನ್ನು ತೆರೆದು ತೋರಿಸುತ್ತದೆ.

ಖ್ಯಾತ ಲೇಖಕಿ ಶ್ರೀಮತಿ ಶುಭಶ್ರೀ ಪ್ರಸಾದ್ ಬೆನ್ನುಡಿಯಲ್ಲಿ ಹೇಳಿರುವಂತೆ ಈ ಕಾದಂಬರಿಯಲ್ಲಿ ಸಾಲು, ಸಾಲು ಅನುಭವಗಳು ಸೃಷ್ಟಿಸಿದ ಬಾಳ ಚಿತ್ರ ಶಾಲೆಯ ಬೆಳ್ಳಿ ಕಟ್ಟಿನ ಸುಂದರ ಚಿತ್ರಗಳಿವೆ.

ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನದ ೨೫೦ನೇ ಸಾಹಿತ್ಯ ದಾಸೋಹದ ಸಂಭ್ರಮಹೋತ್ಸವದ ಸಂದರ್ಭದಲ್ಲಿ ಈ ಕಾದಂಬರಿ ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿದೆ. ಈ ಕಾದಂಬರಿಯು ವಿದ್ಯಾರಣ್ಯ ಕನ್ನಡ ಕೂಟದವರು ಜೂನ್ ತಿಂಗಳಲ್ಲಿ ಶಿಕಾಗೋದಲ್ಲಿ ನಡೆಸಿದ ಸಾಹಿತ್ಯೋತ್ಸವದಲ್ಲಿ ಕೂಡ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿದೆ.

ಹಾಗೆ ನೋಡಿದರೆ ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲೂ ಒಂದು ‘ಪಂಚವಟಿ’ ಇರಬೇಕು. ಅದು ಮರಗಳ ತೋಪಾಗಿರಬೇಕಿಲ್ಲ; ಮನಸ್ಸುಗಳು ನೆರಳಾಗುವ ಸ್ಥಳವಾಗಿದ್ದರೆ ಸಾಕು.


  • ಎನ್.ವಿ. ರಘುರಾಮ್ – ನಿವೃತ್ತ ಅಧೀಕ್ಷಕ ಅಭಿಯಂತರ ವಿದ್ಯುತ್,ಲೇಖಕರು, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading