ಸ್ತ್ರೀಯೆಂದರೆ ಜಡವಾದುದಲ್ಲ, ಅದೊಂದು ಚೈತನ್ಯ 

ಒಡೆಯರ ಕಾಲದ ಕವಯಿತ್ರಿಯಾದ ಸಂಚಿ ಹೊನ್ನಮ್ಮನವರು ಅಂದಿನ ಕಾಲದಲ್ಲಿಯೇ ಹೆಣ್ಣಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.ಹೆಣ್ಣು ಒಂದು ಕುಟುಂಬದ, ಸಮಾಜದ, ದೇಶದ ಸಂಸ್ಕೃತಿಯಾ ಸಂಕೇತ. ಲೇಖಕರಾದ ವೀಣಾ ವೈಷ್ಣವಿ ಅವರು ಹೆಣ್ಣಿನ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಸಂಸ್ಕೃತ ಮೂಲದ ಸ್ತ್ರೀ ಎಂಬ ಅಕ್ಷರ ಬರಿ ಲಿಂಗ ಸೂಚಕವಲ್ಲ, ಅದೊಂದು ಶಕ್ತಿಯ ಸಂಕೇತ. ಇಡೀ ಬ್ರಹ್ಮಾಂಡದಲ್ಲಿರುವ ಸೃಷ್ಟಿಯ ಅನಾವರಣ. ಸ್ತ್ರೀ, ಎಲ್ಲರ ಪಾಪಗಳನ್ನು ತೊಳೆದು, ತಾನು ಮಲಿನವಾದರೂ ಮೌನವಾಗಿ ಸಾಗುವ ನದಿ. ತನ್ನ ಮೇಲಾಗುವ ಎಲ್ಲಾ ದೌರ್ಜನ್ಯವನ್ನು ಸಹಿಸಿ ಸದಾ ತಂಪೆರೆಯುವ ಪ್ರಕೃತಿ. ತನ್ನವರ ಒಳಿತಿಗಾಗಿ ಸದಾ ಉರಿಯುವ ನಂದಾ ದೀಪ. ಬಿಸಿಲ ಬೇಗೆಯಲಿ ಕುದ್ದೆದ್ದರೂ ತನ್ನವರ ಪಾಲಿನ ಸಂಜೆಯ ತಂಗಾಳಿ. ಬರಡಾದ ನೆಲದಲೂ ಹಸಿರ ಚಿಮ್ಮಿಸುವ ವರ್ಷಧಾರೆ. ತನ್ನ ಕೈ ಹಿಡಿದವನನ್ನು ಕೂಡ ಮಗುವೆಂದೆ ಭಾವಿಸಿ ಸಲಹುವಾ ಮಾತೃತ್ವ ಮತ್ತು ಅಂತಕರಣ. ಗಂಡಸಿನ ಎಲ್ಲಾ ನಿಕೃಷ್ಟತೆಗಳ ಹೊರತಾಗಿಯೂ ಪ್ರೀತಿ ಸೂಸುವ ಪ್ರೇಮಮಯಿ. ಸ್ತ್ರೀ ಎಂದರೆ ಜಡವಾದುದಲ್ಲ ಅದೊಂದು ಚೈತನ್ಯ. ಸ್ತ್ರೀ ಎಂದರೆ ಅದೊಂದು ಅವಿನಾಶ ಭಾವ. ಸ್ತ್ರೀ ಎಂದರೆ ಬದುಕಿನ ಸಂಜೀವಿನಿ. ಸ್ತ್ರೀ ಎಂದರೆ ತನ್ನವರ ಹಿತದಲ್ಲಿ ತನ್ನ ಕಾಣುವ ಅಸ್ತಿತ್ವ.

” ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ”

ಎಲ್ಲಿ ಸ್ತ್ರೀ ಯನ್ನು ಗೌರವಿಸಲಾಗುತ್ತದೋ ಅಲ್ಲಿ ದೇವತೆಗಳು ನೆಲಸುತ್ತಾರೆ ಎಂಬ ಮನುಸ್ಮೃತಿಯ ಉಕ್ತಿ ಸರ್ವಕಾಲಿಕ ಸತ್ಯವೂ ಹೌದು. ಎಲ್ಲಿ ಸ್ತ್ರೀ ಯನ್ನು ಪ್ರೀತಿ,ಆದರ, ಗೌರವದಿಂದ ಕಾಣಲಾಗುತ್ತದೋ, ಎಲ್ಲಿ ಸ್ತ್ರೀ ಸದಾ ಸುರಕ್ಷಿತಳಾಗಿರುತ್ತಾಳೊ ಆ ಕುಟುಂಬವನ್ನು ದೇವತೆಗಳು ಕೂಡ ಹರಸುತ್ತಾರೆ, ಆ ಕುಟುಂಬ ಸದಾ ಹರ್ಷಚಿತ್ತವಾಗಿಯೂ, ಏಳಿಗೆಯಿಂದಲೂ ಕೂಡಿರುತ್ತದೆ. ಪುರಾಣ, ವೇದಗಳ ಕಾಲದಿಂದಲೂ ಸ್ತ್ರೀ ಗೆ ಅವಳದೇ ಆದಂತದ ಸ್ಥಾನ ಮಾನ, ಗೌರವ ದೊರೆತಿದೆ. ದೇವತೆಗಳಲ್ಲೂ ಶಕ್ತಿಯ ಸಂಕೇತವಾಗಿ ವಿಜೃಂಬಿಸುವುದು ಸಹ ಸ್ತ್ರೀಯೆ.ಹೆಣ್ಣು ಕೇವಲ ಒಂದು ಮನೆಯ ಬೆಳಕಲ್ಲ, ಆಕೆ ಇಡೀ ಸಮಾಜದ ಬೆಳಕು. ಒಂದು ಮನೆಯಲ್ಲಿ ಆಕೆ ಬಿತ್ತುವ ಆದರ್ಶ, ಸಂಸ್ಕೃತಿ, ಸಂಸ್ಕಾರ, ವಿದ್ಯೆ, ನಡವಳಿಕೆಗಳು ಇಡೀ ಸಮಾಜವನ್ನು ನಿರ್ದೇಶಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ

ಯಾವ ಸಮಾಜದಲ್ಲಿ ಸ್ತ್ರೀ ಗೆ ದೇವತಾ ಸ್ಥಾನ ನೀಡಲಾಯಿತೋ, ಸ್ತ್ರೀಯನ್ನು ಶಕ್ತಿಯ ಪ್ರತೀಕವೆಂದು ಭಾವಿಸಲಾಯಿತೋ ಅದೇ ಸಮಾಜದ ಕಟ್ಟುಪಾಡುಗಳಲ್ಲಿ ಸ್ತ್ರೀ ನರಳಿದ್ದು ಕೂಡ ಅಷ್ಟೇ ಸತ್ಯ. ಸ್ತ್ರೀ ಯಾವಾಗಲೂ ಪುರುಷನ ಅಧೀನದಲ್ಲಿ ಇರಬೇಕು, ಪುರುಷನಿಲ್ಲದ ಬದುಕು ಆಕೆಗೆ ಸುರಕ್ಷಿತವಲ್ಲ, ಕೌಟುಂಬಿಕ, ಸಾಮಾಜಿಕ ಎಲ್ಲಾ ನೆಲೆಗಳಲ್ಲಿಯೂ ಆಕೆಯನ್ನು ಬಂಧಿಯಾಗಿಸಿ, ಸ್ತ್ರೀ ಗೆ ಯಾವ ಅಸ್ತಿತ್ವವೂ ಇಲ್ಲದಂತಹ ಬದುಕನ್ನು ಸಹ ಸ್ತ್ರೀ ಕಂಡಿದ್ದಾಳೆ. ಸ್ತ್ರೀಯರಿಗೆ ವಿದ್ಯೆಯ ಅವಶ್ಯಕತೆ ಇಲ್ಲ, ಆರ್ಥಿಕವಾಗಿ ಸ್ವವಲಂಬಿಯಾಗುವ ಅನಿವಾರ್ಯತೆ ಇಲ್ಲ, ಕೌಟುಂಬಿಕ ವಿಷಯಗಳಲ್ಲಿ ಆಕೆಯ ಮಾತು ಅನಿವಾರ್ಯವಲ್ಲ, ಕುಟುಂಬದ ನಾಲ್ಕು ಗೋಡೆಗಳ ನಡುವೆ ಅಷ್ಟೇ ಅವಳ ಬದುಕು ಎಂದು ಅವಳನ್ನು ಎಲ್ಲದರಿಂದಲೂ ವಂಚಿತಳನ್ನಾಗಿಸಿದ್ದು ಇದೆ. ಏನು ಅರಿಯದ ವಯಸ್ಸಿನಲ್ಲಿ ಬಾಲ್ಯ ವಿವಾಹದ ಸುಳಿಗೆ ಸಿಲುಕಿ, ಬಾಲ ವಿಧವೆಯರಾಗಿ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಸವೆಸಿದ ಎಷ್ಟು ಹೆಣ್ಣುಗಳ ಕಣ್ಣೀರಿದೆ. ಪತಿ ಮರಣದಿಂದ ಸತಿಯ ಜೀವನವೂ ಮುಗಿಯಿತು, ಪತಿಯೊಡನೆ ಚಿತೆ ಏರುವುದೇ ಅವಳ ಬದುಕಿನ ಸಾರ್ಥಕತೆ ಎಂದು ಸ್ತ್ರೀಯನ್ನು ಬೆಂಕಿಗೆ ದೂಡಿದ್ದೂ ಇದೆ. ಇಂದಿಗೂ ಎಷ್ಟು ಕಡೆಗಳಲ್ಲಿ ಜಾರಿಯಲ್ಲಿರುವ ಪರದಾ ಪದ್ಧತಿ ಸ್ತ್ರೀ ತನ್ನಲ್ಲಾ ಭಾವನೆಗಳ ಪ್ರತಿಬಿಂಬವಾದ ತನ್ನದೇ ಮುಖ ಯಾರಿಗೂ ತೋರದಂತೆ ತಡೆದಿದೆ. ಇಂದಿಗೂ ಕೂಡ ಒಡಲಲ್ಲಿ ಇರುವ ಭ್ರೂಣ ಹೆಣ್ಣು ಅಂತ ತಿಳಿದ ಕೂಡಲೇ ಅದನ್ನು ಹೊಸಕಿ ಹಾಕಿ ಅದರ ಬದುಕುವ ಹಕ್ಕನ್ನು ಕಸಿಯಲಾಗುತ್ತಿದ್ದೆ. ಸ್ತ್ರೀ ಕೂಡ ಕುಟುಂಬದ ಕಣ್ಣು, ಸದೃಢ ಸಮಾಜದ ಬೇರು ಅಂತ ಮರೆತಿದ್ದ ಕಾಲವೂ ಇತ್ತು.

ಅಡುಗೆ ಮನೆಯಿಂದ ಅಂತರ್ಜಾಲಕ್ಕೆ

ಕುಟುಂಬದ ನಾಲ್ಕು ಗೋಡೆಗಳ ನಡುವೆ ತನ್ನ ಅಭಿರುಚಿ, ಆಕಾಂಕ್ಷೆಗಳನೆಲ್ಲ ಬದಿಗೊತ್ತಿ, ಕೇವಲ ಗೃಹಕೃತ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಸ್ತ್ರೀಯ ಕಾರ್ಯ ಚಟುವಟಿಕೆಗಳು ಇಂದು ಆವಳ ಅಡುಗೆ ಮನೆಯಿಂದ ಅಂತರ್ಜಾಲಕ್ಕೆ ಜಿಗಿದಿದೆ. ಮನೆಯಲ್ಲಿಯೇ ಇದ್ದುಕೊಂಡು ಯಾರಿಗೂ ಹೊರೆಯಾಗದಂತೆ ಬಿಡುವಿನ ಸಮಯ ಸದುಪಯೋಗ ಪಡಿಸಿಕೊಂಡು ತನ್ನೆಲ್ಲ ಅಭಿರುಚಿ, ಕಲೆ, ಸಾಹಿತ್ಯದ ಬಗೆಗಿರುವ ಒಲವನ್ನು ಅಂತರ್ಜಾಲದ ಮೂಲಕ ಅಭಿವ್ಯಕ್ತಪಡಿಸುತಿದ್ದಾಳೆ. ಮೊಬೈಲ್ ಎನ್ನುವ ಪುಟ್ಟ ಮಾಯಾ ದೀಪ ಮಹಿಳೆಯರ ಅಭಿರುಚಿಗಳಿಗೆ ಒಂದು ದೊಡ್ಡ ವೇದಿಕೆಯನ್ನೇ ಒದಗಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ಸಂಗೀತ, ಸಾಹಿತ್ಯ, ನಳಪಾಕ, ಲಲಿತಕಲೆ, ತೋಟಗಾರಿಕೆ ಹೀಗೆ ಹತ್ತು ಹಲವಾರು ಅಂತರ್ಜಾಲದ ಗುಂಪುಗಳು ಮಹಿಳೆಯ ಸಾಧನೆಗೆ ದಾರಿ ದೀಪಾವಾಗಿವೆ.

ಸ್ತ್ರೀ ಸಾಹಿತ್ಯವೆಂದರೆ ಅಡುಗೆಮನೆ ಸಾಹಿತ್ಯ ಎಂದು ಪುರುಷರ ಗುಂಪಿನಿಂದ ಸಣ್ಣದೊಂದು ಟೀಕೆ ಕೇಳಿ ಬರುತ್ತಿದ್ದ ಕಾಲವೊಂದಿತ್ತು. ಆದರೆ ಅನೇಕ ಸ್ತ್ರೀ ಸಾಹಿತಿಗಳಿಗೆ ಬೆನ್ನು ತಟ್ಟಿ, ಪ್ರೋತ್ಸಾಹಿಸಿ ಬರೆಯುವಂತೆ ಪ್ರೆರೇಪಿಸಿ, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಲು ಅದೇ ಪುರುಷರು ಸಹ ಕಾರಣಿಭೂತರಾಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.ಕನ್ನಡದ ಮೊದಲ ವಚನಕಾರ್ತಿಯಾದ ಅಕ್ಕಮಹಾದೇವಿ ಮತ್ತು ನೀಲಾಂಬಿಕೆ, ಮುಕ್ತಾಯಕ್ಕ ಮುಂತಾದ ಶರಣೆಯರಿಗೆ ತಮ್ಮ ಅನುಭವ ಮಂಟಪದಲ್ಲಿ ಸ್ಥಾನ ನೀಡಿದ್ದು ಶ್ರೀ ಬಸವಣ್ಣ ಅವರಿಗೆ ಸ್ತ್ರೀಯರ ಬಗ್ಗೆ ಇದ್ದ ಗೌರವದ ಸೂಚಕವಾಗಿದೆ.

ಇಂದು ಅನೇಕ ಸ್ತ್ರೀಯರು ಅಂತರ್ಜಾಲದ ಮೂಲಕ ಬರೆಯುತ್ತಲೆ ತಮ್ಮ ಅಸ್ತಿತ್ವಗಳಿಸಿಕೊಂಡಿದ್ದಾರೆ. ಬರವಣಿಗೆಯಲ್ಲಿ ತಮ್ಮ ಛಾಪು ಮೂಡಿಸತೊಡಗಿದ್ದಾರೆ.
ಅನೇಕ ಕಥಾ ಸಂಕಲನ, ಕವನ ಸಂಕಲನ, ವಿಮರ್ಶೆ, ಲೇಖನಗಳು ಬಿಡುಗಡೆಯಾಗಿ ಬರವಣಿಗೆಯಲ್ಲೂ ಸ್ತ್ರೀ ಹಿಂದೆ ಬಿದ್ದಿಲ್ಲವೆಂದು ನಿರೂಪಿಸತೊಡಗಿದ್ದಾರೆ. ಕನ್ನಡ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತವಾಗಿಸಲು ತಮ್ಮ ಸೇವೆ ಮಾಡುತಿದ್ದಾರೆ.

ಸಾಧನೆಯ ದಾರಿಯಲಿ

ಸಾಧನೆ ಎಂಬುದು ಹೂವಿನ ದಾರಿಯಲ್ಲ, ಅದು ಕಠಿಣ ಪರಿಶ್ರಮದ ಫಲ. ತಮ್ಮ ಕಾಲಿಗೆ ಒತ್ತುತ್ತಿದ್ದ ಮುಳ್ಳುಗಳನ್ನು ನಿರ್ಲಕ್ಷಿಸಿ, ಒಸರುವ ರಕ್ತವನ್ನು ಗಮನಿಸದೆ ಸಾಧನೆಯ ಪರದೆಯಲ್ಲಿ ತಮ್ಮ ಹೆಸರು ಮೂಡಿಸಿರುವ ಅನೇಕ ಸ್ತ್ರೀಯರು ನಮ್ಮ ಕಣ್ಮುಂದೆ ಇದ್ದಾರೆ. ಎಲೆ ಮರೆಯ ಕಾಯಂತಿದ್ದು ತಮ್ಮ ಸಾಧನೆಯಿಂದಲೇ ಗುರುತಿಸಿಕೊಂಡು, ಭಾರತವೆಂಬ ಭವ್ಯದೇಶದ ರಾಷ್ಟ್ರಪತಿಯಾಗಿ ಅಧಿಕಾರ ಅಲಂಕರಿಸಿರುವ ಬುಡಕಟ್ಟು ಜನಾಂಗದ ಹೆಮ್ಮೆ ಶ್ರೀಮತಿ ದ್ರೌಪದಿ ಮುರ್ಮು ಅವರು ಎಲ್ಲರಿಗೂ ಒಂದು ಆದರ್ಶ.

ಎಲ್ಲಾ ಸ್ತ್ರೀಯರು ತಮ್ಮ ತಮ್ಮ ಜೀವನದಲ್ಲಿ ಒಂದಲ್ಲಾ ಒಂದು ರೀತಿ ಸಾಧಕಿಯರೇ. ತಮ್ಮ ಮನೆಯೆಂಬ ಆರಾಮ ವಲಯದಿಂದ, ಗಂಡನ ಮನೆಯೆನ್ನುವ ಹೊಸ್ತಿಲು ತುಳಿದು ಆ ಮನೆಯನ್ನು ತನ್ನದಾಗಿಸಿ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ತನ್ನ ಕುಟುಂಬವನ್ನು ಕಣ್ಣ ರೆಪ್ಪೆಯಂತೆ ಕಾಪಾಡುವ ಸ್ತ್ರೀಯರು ಒಂದು ರೀತಿಯಲ್ಲಿ ಸಾಧಕಿಯರೇ ಸರಿ. ತಮ್ಮ ವೃತ್ತಿ ಮತ್ತು ಕುಟುಂಬವನ್ನು ಸರಿದೂಗಿಸುತ್ತಾ ಮುನ್ನೆಡೆಯುವ ಸ್ತ್ರೀಯ ಮನೋಬಲ ಮೆಚ್ಚುಗೆಗೆ ಅರ್ಹವಾದುದ್ದು.

ಎಚ್ಚರವಿರಲಿ

ಇಂದು ಸ್ತ್ರೀ ತಾನು ಆಧುನಿಕ ಸಮಾಜದ ಪ್ರತಿಬಿಂಬ ಎಂಬಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುವಲ್ಲಿ ಹೆಚ್ಚು ಆಕರ್ಷಿತಳಾಗುತ್ತಿದ್ದಾಳೆ. ವಿದ್ಯೆ, ಆರ್ಥಿಕ ಸ್ವತಂತ್ರ, ಕುಟುಂಬದ ಬೆಂಬಲ ಎಲ್ಲವನ್ನು ಪಡೆದ ಸ್ತ್ರೀ ತಾನು ನಡೆವ ಹಾದಿಯನ್ನು ಒಮ್ಮೆ ಅವಲೋಕಿಸುವುದು ಅವಶ್ಯವಾಗಿದೆ. ಕುಟುಂಬ, ಕಾನೂನು, ಸಮಾಜದ ಬೆಂಬಲ ಎಲ್ಲವೂ ಇದ್ದರೂ ತನ್ನ ಸುರಕ್ಷತೆ ಮತ್ತು ಭದ್ರತೆ ಅಂತಿಮವಾಗಿ ತನ್ನ ಕೈಯಲ್ಲೇ ಇದೆ ಎಂಬುದನ್ನು ಮರೆಯುವಂತಿಲ್ಲ. ಹೆಣ್ಣು ತೋಡುವ ವಸ್ತ್ರಗಳು ಆಕೆಯ ಮೇಲಿನ ಗೌರವವನ್ನು ಹೆಚ್ಚಿಸುವಂತಿರಬೇಕು. ಹೆಣ್ಣಿನ ಗೌರವ ಮತ್ತು ಲಕ್ಷಣ ಹೆಚ್ಚಿಸುವ ಆಧುನಿಕ ತರಹದ ಉಡುಪುಗಳು ಬೇಕಾದಷ್ಟು ಇವೆ, ಆದರೆ ಆಧುನಿಕತೆಯ ಹೆಸರಲ್ಲಿ ಮೈ ಮಾಟದ ಪ್ರದರ್ಶನಕ್ಕೆ ಹೆಣ್ಣು ಮುಂದಾಗದಿರಲಿ.ತಮ್ಮ ಕುಟುಂಬ ವ್ಯವಸ್ಥೆಯನ್ನು ಹಾಳುಗೆಡವುವ, ತಮ್ಮನ್ನು ಬಲಿಪಶು ಮಾಡುವ ಯಾವುದೇ ಕ್ಷಣಿಕ ಆಕರ್ಷಣೆಗೆ ಹೆಣ್ಣು ಬಲಿಯಾಗದಿರಲಿ. ನೆನಪಿಡಿ…. ನರಕದ ಹಾದಿ ಬಣ್ಣಬಣ್ಣವಾಗಿ ಹೂ ತುಂಬಿದಂತೆ ಸುಗಮವಾಗಿರುತ್ತದೆ, ಆದರೆ ಅದರ ಅಂತಿಮ ತಾಣ ನರಕವೇ ಆಗಿರುತ್ತದೆ. ಏನೆಲ್ಲಾ ಸಂಕಷ್ಟಗಳು ಎದುರಾದರೂ ಮುನ್ನೆಡೆದು ತನ್ನವರೊಂದಿಗೆ ಸುಖ,ಸಂತೋಷವಾಗಿರುವುದು ಸ್ವರ್ಗದ ಮೆಟ್ಟಿಲು ಏರಿದಂತೆ. ಸ್ತ್ರೀ ಸದಾ ಜಾಗರುಕಳಾಗಿರುವುದು ಇಂದು ಅನಿವಾರ್ಯವೂ, ಅವಶ್ಯಕವೂ ಆಗಿದೆ.

ಸದಾ ಗೌರವಕ್ಕೆ ಪಾತ್ರಳು 

“ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು,ಕಣ್ಣು ಕಾಣದ ಗಾವಿಲರು? ” ಎಂದು ಒಡೆಯರ ಕಾಲದ ಕವಯಿತ್ರಿಯಾದ ಸಂಚಿ ಹೊನ್ನಮ್ಮನವರು ಅಂದಿನ ಕಾಲದಲ್ಲಿಯೇ ಹೆಣ್ಣಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.ಹೆಣ್ಣು ಒಂದು ಕುಟುಂಬದ, ಸಮಾಜದ, ದೇಶದ ಸಂಸ್ಕೃತಿಯಾ ಸಂಕೇತ. ಒಂದು ಕುಟುಂಬದ ನಿರ್ವಹಣೆಯಲ್ಲಿ ಹೆಣ್ಣಿನ ಜವಾಬ್ದಾರಿ ಗಮನಾರ್ಹವಾದುದು.ಹತ್ತು ಗಂಡು ಮಕ್ಕಳು ಇರುವ ಮನೆಗೂ, ಒಂದೇ ಒಂದು ಹೆಣ್ಣು ಮಗು ಇರುವ ಮನೆಗೂ ಅಜಾಗಜಂತರ ವ್ಯತ್ಯಾಸವಿದೆ. ಪುರುಷ ಮನೆ ಕಟ್ಟಿದರೆ ಅದನ್ನು ಸುಂದರ ಗೃಹವನ್ನಾಗಿ ಮಾಡುವವಳು ಹೆಣ್ಣು. ಸ್ತ್ರೀ ಎಂದೆಂದಿಗೂ ಗೌರವ, ಆದರಕ್ಕೆ ಅರ್ಹಳು. ಬೇರೆ ಮನೆಯ ಹೆಣ್ಣಿನ ಸಾಧನೆಗೆ ಮೆಚ್ಚುಗೆ ಸೂಚಿಸುವ, ಚಪ್ಪಾಳೆ ಹೊಡೆಯುವ ಜೊತೆಯಲ್ಲಿ ನಮ್ಮ ಮನೆ ಸ್ತ್ರೀಯರ ಕನಸಿಗೆ, ಅಭಿಲಾಷೆಗೆ ಪ್ರೋತ್ಸಾಹ ನೀಡೋಣ, ಅವರ ಸಾಧನೆಗೆ ಬೆಂಬಲವಾಗಿರೋಣ.

 

ವೀಣಾ ವೈಷ್ಣವಿ

ಹೆಣ್ಣು ತೋಡುವ ವಸ್ತ್ರಗಳು ಆಕೆಯ ಮೇಲಿನ ಗೌರವವನ್ನು ಹೆಚ್ಚಿಸುವಂತಿರಬೇಕು. ಹೆಣ್ಣಿನ ಗೌರವ ಮತ್ತು ಲಕ್ಷಣ ಹೆಚ್ಚಿಸುವ ಆಧುನಿಕ ತರಹದ ಉಡುಪುಗಳು ಬೇಕಾದಷ್ಟು ಇವೆ, ಆದರೆ ಆಧುನಿಕತೆಯ ಹೆಸರಲ್ಲಿ ಮೈ ಮಾಟದ ಪ್ರದರ್ಶನಕ್ಕೆ ಹೆಣ್ಣು ಮುಂದಾಗದಿರಲಿ.ತಮ್ಮ ಕುಟುಂಬ ವ್ಯವಸ್ಥೆಯನ್ನು ಹಾಳುಗೆಡವುವ, ತಮ್ಮನ್ನು ಬಲಿಪಶು ಮಾಡುವ ಯಾವುದೇ ಕ್ಷಣಿಕ ಆಕರ್ಷಣೆಗೆ ಹೆಣ್ಣು ಬಲಿಯಾಗದಿರಲಿ. ನೆನಪಿಡಿ…. ನರಕದ ಹಾದಿ ಬಣ್ಣಬಣ್ಣವಾಗಿ ಹೂ ತುಂಬಿದಂತೆ ಸುಗಮವಾಗಿರುತ್ತದೆ, ಆದರೆ ಅದರ ಅಂತಿಮ ತಾಣ ನರಕವೇ ಆಗಿರುತ್ತದೆ. ಏನೆಲ್ಲಾ ಸಂಕಷ್ಟಗಳು ಎದುರಾದರೂ ಮುನ್ನೆಡೆದು ತನ್ನವರೊಂದಿಗೆ ಸುಖ, ಸಂತೋಷವಾಗಿರುವುದು ಸ್ವರ್ಗದ ಮೆಟ್ಟಿಲು ಏರಿದಂತೆ. ಸ್ತ್ರೀ ಸದಾ ಜಾಗರುಕಳಾಗಿರುವುದು ಇಂದು ಅನಿವಾರ್ಯವೂ, ಅವಶ್ಯಕವೂ ಆಗಿದೆ.

ಸದಾ ಗೌರವಕ್ಕೆ ಪಾತ್ರಳು

“ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು,ಕಣ್ಣು ಕಾಣದ ಗಾವಿಲರು? ” ಎಂದು ಒಡೆಯರ ಕಾಲದ ಕವಯಿತ್ರಿಯಾದ ಸಂಚಿ ಹೊನ್ನಮ್ಮನವರು ಅಂದಿನ ಕಾಲದಲ್ಲಿಯೇ ಹೆಣ್ಣಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.ಹೆಣ್ಣು ಒಂದು ಕುಟುಂಬದ, ಸಮಾಜದ, ದೇಶದ ಸಂಸ್ಕೃತಿಯಾ ಸಂಕೇತ. ಒಂದು ಕುಟುಂಬದ ನಿರ್ವಹಣೆಯಲ್ಲಿ ಹೆಣ್ಣಿನ ಜವಾಬ್ದಾರಿ ಗಮನಾರ್ಹವಾದುದು.ಹತ್ತು ಗಂಡು ಮಕ್ಕಳು ಇರುವ ಮನೆಗೂ, ಒಂದೇ ಒಂದು ಹೆಣ್ಣು ಮಗು ಇರುವ ಮನೆಗೂ ಅಜಾಗಜಂತರ ವ್ಯತ್ಯಾಸವಿದೆ. ಪುರುಷ ಮನೆ ಕಟ್ಟಿದರೆ ಅದನ್ನು ಸುಂದರ ಗೃಹವನ್ನಾಗಿ ಮಾಡುವವಳು ಹೆಣ್ಣು. ಸ್ತ್ರೀ ಎಂದೆಂದಿಗೂ ಗೌರವ, ಆದರಕ್ಕೆ ಅರ್ಹಳು. ಬೇರೆ ಮನೆಯ ಹೆಣ್ಣಿನ ಸಾಧನೆಗೆ ಮೆಚ್ಚುಗೆ ಸೂಚಿಸುವ, ಚಪ್ಪಾಳೆ ಹೊಡೆಯುವ ಜೊತೆಯಲ್ಲಿ ನಮ್ಮ ಮನೆ ಸ್ತ್ರೀಯರ ಕನಸಿಗೆ, ಅಭಿಲಾಷೆಗೆ ಪ್ರೋತ್ಸಾಹ ನೀಡೋಣ, ಅವರ ಸಾಧನೆಗೆ ಬೆಂಬಲವಾಗಿರೋಣ.


  •  ವೀಣಾ ವೈಷ್ಣವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading