ದಾಲ್ಚಿನ್ನಿ ಮೊದಲ ಒಂದೆರಡು ವರ್ಷ ಜೋಪಾನವಾಗಿ ನೋಡಿಕೊಂಡರೆ ಮತ್ತೆ ಮುಂದಿನ ದಿನಗಳಲ್ಲಿ ಹಾಗೆ ಕುಗ್ಗದ ಮತ್ತು ಜಗ್ಗದ ಬೆಳೆ. ನೀರು ಬೇಕು ಅಂತಿಲ್ಲ. ಬೆಟ್ಟದ ಜಾಗದಲ್ಲಿ ಬೆಳೆಯಬಹುದು. ನಾಗೇಂದ್ರ ಸಾಗರ್ ಅವರ ದಾಲ್ಚಿನ್ನಿ ಬೆಳೆ ಕುರಿತು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ನಮ್ಮ ಕಡೆ ಇಡೀ ಕೃಷಿ ಜಗತ್ತೇ ಅಡಿಕೆ ಬೆಳೆಯ ಸುಳಿಯಲ್ಲಿ ಸಿಲುಕಿ ಹೊರಳಾಡುತ್ತಿರುವಾಗ ನಾವು ಕೆಲವು ಸಮಾನಾಸಕ್ತ ಸ್ನೇಹಿತರು ಇದನ್ನು ಹೊರತುಪಡಿಸಿ ಹೊಸದೇನಾದರೂ ಇದೆಯೇ ಎಂದು ಅರಸುತ್ತಾ ಹೊರಟಿದ್ದೇವೆ.
ಅಡಿಕೆ ಕೃಷಿಯೊಂದಿಗೆ ಮಿಳಿತವಾಗಿ ಮಾಡಬಹುದಾದ ಮಿಶ್ರ ಕೃಷಿಯ ಖಜಾನೆಯನ್ನು ತಡಕಾಡಿದಾಗ ನಮ್ಮ ಮಲೆನಾಡಿಗೆ ಸುಲಭವಾಗಿ ದಕ್ಕುವುದೇ ವಿವಿಧ ಸಂಬಾರು ಬೆಳೆಗಳು.. ಯಥಾ ಪ್ರಕಾರ ಕಾಳುಮೆಣಸು ಮತ್ತು ಏಲಕ್ಕಿ ಮುಂಚೂಣಿಯಲ್ಲಿ ಬರುತ್ತದೆ. ಕಾರಣಾಂತರಗಳಿಂದ ಏಲಕ್ಕಿ ಕೃಷಿಯ ಖಯಾಲಿ ಮೂಲೆ ಸೇರಿದೆ. ಸಧ್ಯದ ದಿನಮಾನಗಳಲ್ಲಿ ತನ್ನ ಸ್ಥಿರ ಧಾರಣೆಯ ಕಾರಣದಿಂದ ಯಾರ ಬಾಯಲ್ಲಿ ನೋಡಿದರೂ ಕಾಳುಮೆಣಸು ಕೃಷಿಯದ್ದೇ ಉವಾಚವಿದೆ.

ಈ ನಡುವೆ ಅಲ್ಲೊಂದು ಇಲ್ಲೊಂದು ಜಾಯಿಕಾಯಿಯ ಸಕ್ಸಸ್ ಸ್ಟೋರಿಗಳು ಮತ್ತೆ ಮತ್ತೆ ಮಾರ್ದನಿಸಿದ ಕಾರಣಕ್ಕೆ ಒಂದಷ್ಟು ಜನ ಅದರ ಹಿಂದೆಯೂ ಬಿದ್ದಿದ್ದಾರೆ. ಆದರೆ ನಾವೀಗ ದಾಲ್ಚಿನ್ನಿ ಕೃಷಿಯ ಹಿಂದೆ ಬಿದ್ದಿದ್ದೇವೆ. ದಾಲ್ಚಿನ್ನಿ ಮಲೆನಾಡು ರೈತರಿಗೆ ಹೊಸತೇನೂ ಅಲ್ಲ. ಅದರ ಕೃಷಿಯ ಗಂಧ ಗಾಳಿ ಗೊತ್ತಿಲ್ಲದೆ ಹೋದರೂ ಮನೆ ಮಟ್ಟಿಗಿರಲಿ ಎಂದು ಒಂದೆರಡು ಗಿಡ ನೆಟ್ಟು ಅದರ ಅಂದ ಚೆಂದ ಮತ್ತು ಮುಟ್ಟಿದರೆ ಬೀರುವ ಸುವಾಸನೆಗೆ ಮನಸೋತವರ ಸಂಖ್ಯೆ ದೊಡ್ಡದಿದೆ. ಸಾಲದ್ದಕ್ಕೆ ಹೇಗೆ ನೆಟ್ಟರೂ ಬದುಕುಳಿವ ಸ್ವಭಾವ ಬೇರೆ.
ಇದರೊಂದಿಗೆ ಕಾನು ಬೆಟ್ಟಗಳಲ್ಲೆಲ್ಲಾ ಬೇಕಾ ಬಿಟ್ಟಿ ಬೆಳೆಯುತ್ತಿದ್ದ ಇದರ ಸೋದರ ಸಂಬಂಧಿ ನಿಸಣಿ ಸೊಪ್ಪಿನ ಕಂಪು ಬೇರೆ. ಸೊಪ್ಪಿನ ಬೆಟ್ಟಗಳಲ್ಲಿ ನಿಸಣಿ ಮರವಿದ್ದರೆ ನಮಗೇ ತಿಳಿಯದಂತೆ ಅದನ್ನು ಸಪಾಟಾಗಿ ಕಡಿದು ನಾಮ ನಾಶ ಮಾಡುವ ವ್ಯವಸ್ಥಿತ ಜಾಲವೂ ಇದೆ. ಈ ಎಲ್ಲಾ ಅವಾಂತರಗಳ ಕಾರಣದಿಂದ ದಾಲ್ಚಿನ್ನಿಯ ಉಸಾಬರಿಯೇ ಬೇಡ ಎಂದು ದೂರವಿರುವವರ ಸಂಖ್ಯೆ ದೊಡ್ಡದು.
ಹೀಗೆ ಮಲೆನಾಡಿನ ಕೃಷಿಕರ ಮನೆ ಮನದಲ್ಲಿ ಗಟ್ಟಿಯಾಗಿ ನೆಲೆಯಿದ್ದರೂ ಉಪೇಕ್ಷೆಗೆ ಒಳಗಾಗಿರುವ ದಾಲ್ಚಿನ್ನಿಯನ್ನು ಮುನ್ನೆಲೆಗೆ ತರಲು ಹೊರಟಿರುವ ನಮ್ಮ ಆಲೋಚನೆಯ ಹಿಂದೆ ಕೆಲವು ಗಟ್ಟಿ ಕಾರಣಗಳಿವೆ. ಮೊದಲನೆಯದಾಗಿ ದಾಲ್ಚಿನ್ನಿಗೆ ಯಾವತ್ತಿಗಾದರೂ ಬೇಡಿಕೆ ಇದ್ದೇ ಇದೆ. ನಾವು ದಿನನಿತ್ಯದ ಆಹಾರದಲ್ಲಿ ಕರಿಬೇವು ಹೇಗೆ ಉಪಯೋಗಿಸುತ್ತೇವೆಯೋ ಹಾಗೆ ಈಶಾನ್ಯ ರಾಜ್ಯಗಳಲ್ಲಿ ದಾಲ್ಚಿನ್ನಿ ಬಳಸುತ್ತಾರೆ. ಉತ್ತರ ಭಾರತದ ಅಡುಗೆಗಳಲ್ಲಿ, ಗರಂ ಮಸಾಲೆ ಆಧಾರದ ಎಲ್ಲಾ ರೀತಿಯ ಅಡುಗೆಗಳಲ್ಲಿ ದಾಲ್ಚಿನ್ನಿಯ ಬಳಕೆ ಇದೆ.

ದಿನೇ ದಿನೇ ಇದರ ಬಳಕೆ ಮತ್ತು ಬೇಡಿಕೆ ಹೆಚ್ಚುತ್ತಿದೆ. ಈಗಿನ ದಿನಮಾನಗಳಲ್ಲಿ ಸಣ್ಣ ಪುಟ್ಟ ಊರುಗಳಲ್ಲಿ ಕೂಡ ಫಾಸ್ಟ್ ಫುಡ್ ಜಮಾನ ಬಂದು ಅಲ್ಲಿ ತಯಾರಿಸುವ ಧಿಡೀರ್ ಫುಡ್ಡುಗಳಲ್ಲಿ ಇದರ ಬಳಕೆ ಇದ್ದೇ ಇದೆ. ಗುಣಮಟ್ಟದ ಸಂಸ್ಕರಣೆ ಮಾಡಿದ್ದರೆ ವಿದೇಶಗಳಿಗೆ ರಫ್ತು ಮಾಡಬಹುದು. ಬಾಳಿಕೆಯ ಗುಣಧರ್ಮ ಸ್ವಭಾವತಃ ದಾಲ್ಚಿನ್ನಿ ಬೆಳೆಯಲ್ಲಿ ಹೆಚ್ಚಿದೆ. ಆಯುರ್ವೇದ ಮದ್ದುಗಳ ತಯಾರಿಕೆಯಲ್ಲಿ ಕೂಡ ದಾಲ್ಚಿನ್ನಿಯ ಬಳಕೆ ಇರುವುದರಿಂದ ಅಲ್ಲಿಯೂ ಬೇಡಿಕೆ ಇದೆ.
ಎಲ್ಲಕ್ಕಿಂತ ಹೆಚ್ಚಾಗಿ ಇದರ ಕೃಷಿ ಸುಲಭದ್ದು. ಮೊದಲ ಒಂದೆರಡು ವರ್ಷ ಜೋಪಾನವಾಗಿ ನೋಡಿಕೊಂಡರೆ ಮತ್ತೆ ಮುಂದಿನ ದಿನಗಳಲ್ಲಿ ಹಾಗೆ ಕುಗ್ಗದ ಮತ್ತು ಜಗ್ಗದ ಬೆಳೆ. ನೀರು ಬೇಕು ಅಂತಿಲ್ಲ. ಬೆಟ್ಟದ ಜಾಗದಲ್ಲಿ ಬೆಳೆಯಬಹುದು. ಅರೆ ಬರೆ ತಂಪಲಿನ ಜಾಗದಲ್ಲಿ, ಎಡೆ ಬೆಳೆಯಾಗಿ ಅಥವಾ ಇದೇ ಏಕ ಬೆಳೆಯಾಗಿಯೂ ಬೆಳೆಯಬಹುದು. ಅತ್ಯಂತ ಕಡಿಮೆ ದೇಖರೇಖೆ ಸಾಕು.. ಹಾಗಂತ ಕೊಯ್ಲಿನ ಸಂದರ್ಭದಲ್ಲಿ ನಯ ನಾಜೂಕು ಬೇಕು. ಸಂಸ್ಕರಣೆ ಸಂದರ್ಭದಲ್ಲಿ ಮುತುವರ್ಜಿ ಬೇಕು.
ನಮಗೆ ಮಲೆನಾಡಿಗರಿಗೆ ಅಡ್ವಾಂಟೇಜ್ ಎಂದರೆ ಇದಕ್ಕೆ ಮಂಗಗಳನ್ನೂ ಒಳಗೊಂಡಂತೆ ಕಾಡು ಪ್ರಾಣಿಗಳ ಹಾವಳಿ ಕಡಿಮೆ. ರೋಗ ರುಜಿನಗಳ ಬಾಧೆ ಕಡಿಮೆ. ಬಂದರೂ ಸಣ್ಣ ಪುಟ್ಟ ನಿಭಾವಣೆ ಸಾಕು.
ವಿಶೇಷವೆಂದರೆ ದಾಲ್ಚಿನ್ನಿ ಗಿಡದ ಎಲೆ, ಮೊಗ್ಗು ಮತ್ತು ಚಕ್ಕೆಗೆ ಬೇಡಿಕೆ ಇದ್ದು ಕೊಯ್ಲು ಸುಲಭದ್ದು ಆಗಿರುತ್ತದೆ. ತುಂಬಾ ಸೂಕ್ಷ್ಮದ ಕೆಲಸವೂ ಅಲ್ಲ. ದೊಡ್ಡ ಮಟ್ಟದ ಕೆಲಸಗಾರರ ಅವಶ್ಯಕತೆ ಕೂಡ ಇಲ್ಲ. ಆಯಾ ಹವಾಗುಣ ಮತ್ತು ಭೂಗುಣ ಹಾಗೂ ಪರಿಸರಕ್ಕೆ ಹೊಂದಿಕೆ ಆಗುವಂತಹ ತಳಿಯ ಆಯ್ಕೆ ಮಾಡಿಕೊಳ್ಳಬೇಕು ಅಷ್ಟೇ. ನಮ್ಮ ಮಲೆನಾಡು ಗಿಡ್ಡ ರೈತ ಉತ್ಪಾದಕ ಕಂಪನಿ ಈ ಕೃಷಿಯ ಮಟ್ಟಿಗೆ ಸಣ್ಣ ಆರಂಭ ಮಾಡುತ್ತಿದೆ. ಗುಣಮಟ್ಟದ ಸಸಿಯ ಪೂರೈಕೆಯಿಂದ ಹಿಡಿದು ಕೃಷಿಯ ಆಗು ಹೋಗುಗಳ ಮುತುವರ್ಜಿ, ಮಾಹಿತಿ.. ಕೊಯ್ಲು ಮತ್ತು ಕೊಯ್ಲೋತ್ತರ ತಿಳುವಳಿಕೆ, ಜೊತೆಗೆ ಸಮುದಾಯ ಆಧಾರಿತ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಯೋಜನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಖರೀದಿ ಮತ್ತು ಮಾರಾಟದ ಜವಾಬ್ದಾರಿ. ಗುಣಮಟ್ಟದ ಸಂಸ್ಕರಣೆ ಮಾಡಿಸಿ ವಿದೇಶ ಮಾರುಕಟ್ಟೆಗೆ ಪೂರೈಸುವ ಕೆಲಸವನ್ನೂ ಮಾಡಬೇಕು ಎಂದಿದ್ದೇವೆ.
ಇದೊಂದು ಸಣ್ಣ ಆರಂಭ. ಇದೇ ರೀತಿ ನಮ್ಮ ಮಲೆನಾಡಿಗೆ ಹೊಂದಿಕೆ ಆಗುವ ಇನ್ನಿತರ ಬೆಳೆಗಳ ಬಗ್ಗೆ ಕೂಡ ಇದೇ ರೀತಿಯ ಪ್ರಯತ್ನ ಮಾಡುವ ಅಂದಾಜೂ ಸಂಸ್ಥೆಗೆ ಇದೆ.
- ನಾಗೇಂದ್ರ ಸಾಗರ್
